ಗುರುವಾರ, ನವೆಂಬರ್ 14, 2013

ಚಹಾ-ಬಜ್ಜಿ

ಸಂಜೆ ತಂಪಾದ ವಾತಾವರಣ, ಜೊತೆಗೊಂದಿಷ್ಟು ತುಂತುರು ಮಳೆಹನಿ, ಕಿವಿಯಲ್ಲಿ ಬಂದು ಕಚಗುಳಿಯಿಡುವ ಸುಳಿಗಾಳಿ. ಈ ಮಳೆಗಾಲದ ಅನುಭವವೇ ಮನೋಹರ. ಇಂತಹ ವಾತಾವರಣದಲ್ಲಿ ಅನೇಕ ಉಲ್ಲಾಸಕರ ಕೆಲಸಗಳನ್ನು ಮಾಡಬಹುದು. ಕೆಲವರು ಟು-ವ್ಹೀಲರನ್ನು ಡ್ರೈವ್ ಮಾಡಿಕೊಂಡು ಊರಿಂದ ದೂರ ಹೋಗಿ ಬರುವುದು, ಇನ್ನೂ ಕೆಲವರು ಬೆಟ್ಟದ ತುದಿಯಲ್ಲಿ ಹೆಂಡತಿಯನ್ನೋ ಅಥವಾ ಪ್ರೇಯಸಿಯನ್ನೋ ಕರೆದುಕೊಂಡು ಹೋಗಿ ಏಕಾಂತವಾಗಿರುವುದು. ಇನ್ನಷ್ಟು ಜನ ಮನೆ ಮೂಲೆಯೊಂದರಲ್ಲಿದ್ದ ಸಣ್ಣ ಪಾನ್ ಶಾಪ್ ಹತ್ತಿರ ನಿಂತು ದಮ್ ಹೊಡಿಯೋದು.. ಹೀಗೆ ಹೇಳ್ತಾ ಹೋದ್ರೆ ಪಟ್ಟಿ ಅನಂತ. ಇಂತಹ ಮಳೆ ಸಂದರ್ಭ ನನಗೆ ಒದಗಿಬಂದಾಗ, ನನ್ನವೂ ಕೆಲವು ಪರಿಪಾಠಗಳಿಗೆ. ಮೊದಲನೆಯದು, ಬಿಸಿ ಬಿಸಿ ಮಿರ್ಚಿ ಬಜ್ಜಿ, ಜೊತೆಗಿಷ್ಟು ಚಹಾ (ಅಪ್ಪ ಮಾಡಿರೋದು), ಒಂದಿಷ್ಟು ಹಳೇ ಹಾಡುಗಗಳು (ಮೊ. ರಫಿ ಅಥವ ಕಿಶೋರ್ ಕುಮಾರ್). ಆಹಾ... ಇಷ್ಟಿದ್ದರೆ ಸಾಕು, ಜಗತ್ತೇ ಬೇಡ.. ನನ್ನ ಪಾಲಿಗೆ ನಾನೇ ರಾಜ, ನಾನೇ ಪ್ರಜಾ!

ಬೆಂಗಳೂರಿನಲ್ಲಿ ಇತ್ತೀಚಿನ ಕೆಲವು ವಾರಗಳಲ್ಲಿ ಇಂತಹ ಚಿಟಪಟ ಮಳೆಯ ಅನುಭವಗಳು ಸವಿಯಲು ಸಿಕ್ಕವು. ಅದರ ಜೊತೆಗೆ ಸಿಕ್ಕಿದ್ದು ಎಂದೂ ಮರೆಯಲು ಆಗದ ಕೆಲವು ಘಟನೆಗಳು, ಕೆಲವು ಜನಗಳು. ನಾನು ಬಸ್ ಇಳಿದು ಮನೆಗೆ ನಡೆದುಕೊಂಡು ಹೋಗುವ ದಾರಿ ಸುಮಾರು ಒಂದು ಕಿಲೋಮೀಟರ್. ದಾರಿಯಲ್ಲಿ ಹೋಗುವಾಗ, ನನ್ನ ಅಕ್ಕ-ಪಕ್ಕ ನಡೆಯುತ್ತಿರುವ ಸಂಭಾಷಣೆಗಳನ್ನು, ಜನರನ್ನು, ಜಗಳಗಳನ್ನು ನೋಡುತ್ತಾ ಹೋಗೋದೇ ನನ್ನ ರೂಢಿ. ಕೊನೆಗೆ ಏನೂ ಸಿಕ್ಕಿಲ್ಲ ಅಂದ್ರೂ, ಬ್ಯಾನರ್ ಗಳು, ಪೋಸ್ಟರ್ ಗಳನ್ನಾದರೂ ಓದಿಕೊಂಡು, ಅದರಲ್ಲಿರೋ ತಪ್ಪುಗಳನ್ನು ನೋಡಿ ನಕ್ಕು ಮುಂದೆ ಸಾಗುತ್ತೇನೆ. ಕೆಲವು ವಾರಗಳಿಂದ ನಾನು ಹೋಗುತ್ತಿದ್ದ ರೋಡಿನಲ್ಲಿ, ನಾ ಕಂಡ ಬದಲಾವಣೆ ಒಂದಿದೆ. ಅದು ಒಂದು ಚಿಕ್ಕ ಬಜ್ಜಿ ಅಂಗಡಿ. ಆ ಅಂಗಡಿಯ ಕಡೆಗೆ ನನ್ನ ಗಮನ ಹೋಗಿದ್ದು ಕೂಡ ಅಲ್ಲಿ ನೆರೆದಿದ್ದ ಜನರ ಗುಂಪು ನೋಡಿ.

ನೋಡಲು ಅಷ್ಟೇನೂ ದೊಡ್ಡದಲ್ಲದ ಕೈಗಾಡಿ ಅದು. ಅಲ್ಲಿ ಓರ್ವ ವೃದ್ಧ ದಂಪತಿಗಳು ಬಜ್ಜಿ ಹಾಕುತ್ತಿದ್ದರು. ಕುತೂಹಲ ಕೆರಳಿಸಿದ್ದು ಅವರ ವಯಸ್ಸೋ ಅಥವಾ ಅವರ ವರ್ಚಸ್ಸೋ ಒಂದೂ ಗೊತ್ತಿಲ್ಲ. ಅವರಿಬ್ಬರ ನಡುವೆ ಇದ್ದಂಥ ಆ ಸಾಮರಸ್ಯ ಬಹುತೇಕ ಬೇರೆಲ್ಲೂ ನಾನು ಕಂಡಿರಲಿಲ್ಲ. ಗಂಡನಾದವನು ಮೆಣಸಿನಕಾಯಿ, ಬಾಳೇಕಾಯಿ ಕತ್ತರಿಸಿ ಕೊಡುತ್ತಿದ್ದರೆ, ಅದನ್ನು ಹಿಟ್ಟಿನಲ್ಲಿ ಅದ್ದಿ ಕೊತಕೊತನೆ ಕುದಿಯುತ್ತಿರುವ ಬಾಣಲಿಯ ಎಣ್ಣೆಗೆ ಹೆಂಡತಿ ಹಾಕುತ್ತಿದ್ದಳು. ಮಾತುಗಳೇನು ಅಷ್ಟು ಕೇಳಿಬರುತ್ತಿರಲಿಲ್ಲ. ಆದರೆ ಕಣ್ಣಲ್ಲೇ ಎಲ್ಲಾ ಮಾತನಾಡಿದ್ದು ನಾನು ಗಮನಿಸಿದೆ. ಅವರು ಉಟ್ಟ ಬಟ್ಟೆ, ಅವರ ಚಪ್ಪಲಿಗಳನ್ನು ನೋಡಿದ ನನಗೆ, ಅವರ ಸ್ಥಿತಿಗತಿಗಳ ಬಗ್ಗೆ ಅನುಕಂಪ ಹುಟ್ಟಿತು. ಜೊತೆಗೆ ಅವರ ದುಡಿದು ಬದುಕುವ ಛಲದ ಗುಣಕ್ಕೆ ಶಹಬ್ಬಾಸ್ ಅನ್ನೋ ಆಸೆಯಾಯಿತು. ಅವರಿಗೆ ಕೈಯೆತ್ತಿ ಸಹಾಯ ಮಾಡುವ ಪರಿಸ್ಥಿತಿಯಲ್ಲಿ ನಾನಿಲ್ಲದಿದ್ದರೂ, ಅವರು ಮಾಡಿದ ಬಜ್ಜಿ ಕೊಳ್ಳುವುದರಿಂದ ಅವರ ವ್ಯಾಪಾರಕ್ಕೆ ಅನುಕೂಲವಾಗಬಹುದೆಂದು ಬಜ್ಜಿ ಖರೀದಿಗೆ ಮುಂದಾದೆ. ಒಂದು ಬಜ್ಜಿಗೆ ಅವರು ಚಾರ್ಜ್ ಮಾಡಿದ್ದು ಎರಡು ರೂಪಾಯಿ. ಹದಿನೈದು ಬಜ್ಜಿ ಒಂದು ಪೇಪರಿನಲ್ಲಿ ಸುತ್ತಿ ನನ್ನ ಕೈಗಿತ್ತರು. ಮುಖದಲ್ಲಿ ಅದೇನು ಮಂದಹಾಸ. ತಾವು ಮಾಡುವ ಕೆಲಸದಲ್ಲಿ ಅದೇನು ಶ್ರದ್ಧೆ. ಅದ್ಭುತ ಶ್ರಮಜೀವಿಗಳು. ಕೆಲವೇ ದಿನಗಳಲ್ಲಿ, ಅವರ ಮತ್ತು ನನ್ನ ನಡುವೆ ಹೆಸರಿಡಲಾರದ ಒಂದು ಸಂಬಂಧ ಬೆಳೆದು ನಿಂತಿತ್ತು. ಅದೇ ಹದಿನೈದು ಬಜ್ಜಿಗಳು, ಅದೇ ಮೂವತ್ತು ರೂಪಾಯಿಗಳು. ಮಳೆ ಬಂದಾಗಲೆಲ್ಲ ನಾನು ಅವರ ಅಂಗಡಿಗೆ ತಪ್ಪದೇ ಹೋಗುತ್ತಿದ್ದೆ. ಆ ದಂಪತಿಗಳ ನಡುವಿನ ಹೊಂದಾಣಿಕೆ, ಆ ಪ್ರೀತಿಯನ್ನು ನೋಡೋದೇ ಒಂಥರಾ ಖುಷಿ ನನಗೆ.

ಇದಾದ ಒಂದೆರಡು ವಾರ ನಾನು ಬೇರೆ ಊರಿಗೆ ಹೋಗಬೇಕಾಯ್ತು. ವಾಪಸ್ ಬಂದ ಮೇಲೆ ಒಂದೆರಡು ದಿನ ತುಂತುರು ಮಳೆಯ ವಾತಾವರಣವಿತ್ತು. ಆದ್ರೆ ಆ ಬಜ್ಜಿ ಅಂಗಡಿ ಮಾತ್ರ ತೆರೆದಿರಲಿಲ್ಲ. ಒಂದು ವಾರ ಬಿಟ್ಟೂ ಬಿಡದೇ ಆ ಅಂಗಡಿಯ ಹತ್ತಿರ ಅಲೆದಾಡಿದೆ. ಒಂದು ದಿನಕ್ಕಾದರೂ ಆ ಅಂಗಡಿ ತೆರೆಯಲಿಲ್ಲ. ಅವರು ಬೇರೆ ಕಡೇ ಹೋದ್ರೋ, ಅಥವ ಬಿಸಿನೆಸ್ ಲಾಸ್ ಆಯ್ತೋ ಒಂದೂ ಗೊತ್ತಾಗಲಿಲ್ಲ. ನಿಧಾನಕ್ಕೆ ಮಳೆಗಾಲವೂ ನಿಂತಿತು, ನನ್ನ ಬಜ್ಜಿಯ ವ್ಯಾಮೋಹ ಕೂಡ ಕಡಿಮೆಯಾಯಿತು.

ಹೀಗೇ ಒಂದು ದಿನ ಮನೆಗೆ ವಾಪಸಾಗುವಾಗ, ಆ ಅಂಗಡಿಯ ಬಾಗಿಲು ತೆರೆದಂತೆ ಕಾಣಿಸಿತು. ಈ ಮೊದಲೂ ನನಗೆ ಎರಡು ಮೂರು ಬಾರಿ ಈ ಥರ ಭಾಸವಾಗಿತ್ತು. ಆದರೆ ಇವತ್ತು ನಿಜವಾಗಲೂ ಆ ಅಂಗಡಿ ತೆರೆದಿತ್ತು. ಮತ್ತೆ ಮನದಲ್ಲಿ ಒಂದು ಖುಷಿ ಕಾಣಿಸಿಕೊಂಡಿತು. ಹತ್ತಿರ ಹೋದೆ. ಮತ್ತದೇ ಮಂದಹಾಸ, ಇಳಿವಯಸ್ಸಿನಲ್ಲಿಯೂ ನವದಂಪತಿಗಳಂತೆ ಕಾಣುತ್ತಿದ್ದ ಅದೇ ಜೋಡಿ. "ಏನ್ ಅಂಕಲ್, ಬಹಳ ದಿನ ಅಂಗಡಿಗೆ ಬೀಗ ಹಾಕಿದ್ರಿ, ಟೂರ್ ಏನಾದ್ರೂ ಹೋಗಿದ್ರಾ?" ಅಂದೆ. ಅದಕ್ಕೆ ಅವರು ಕೊಟ್ಟ ಉತ್ತರ ಕೇಳಿ ಮನಸ್ಸಿಗೆ ತುಂಬಾ ಸಂಕಟವಾಯಿತು. "ನಾವಿಬ್ಬರೂ ಎಲ್ಲವನ್ನೂ ಹಂಚಿಕೊಂಡು ಬಾಳಿದವರು. ಇವತ್ತು ಇಬ್ಬರೂ ಬ್ರೇನ್ ಟ್ಯೂಮರ್ ಕೂಡ ಹಂಚಿಕೊಂಡಿದ್ದೇವೆ". ಈ ಮಾತು ಹೇಳುವಾಗ ಅವರ ಮುಖದಲ್ಲಿ ಕಿಂಚಿತ್ತ್ತೂ ಬೇಸರ ಇರಲಿಲ್ಲ. ವಿಷಯ ಕೇಳಿ ಶಾಕ್ ಆಗೋದಾ ಅಥವಾ ಅವರ ನಿಲುವಿಗೆ ಉದ್ಗಾರ ವ್ಯಕ್ತಪಡಿಸೋದಾ, ಎಲ್ಲವೂ ಗೊಂದಲಮಯವಾಗಿತ್ತು.

ಆ ದಂಪತಿಗಳನ್ನು ನೋಡಿದರೆ ಅವರಿಗೆ ಅಷ್ಟು ನೋವಿದೆ ಅನ್ನೋ ಕಲ್ಪನೆ ಕೂಡ ಬಾರದು. ಕೆಲವು ತಿಂಗಳುಗಳ ಕಾಲ ಮಾತ್ರ ಅವರು ಬದುಕಿರುತ್ತಾರೆ ಅನ್ನೋ ಸತ್ಯವನ್ನ ಅವರು ನಗುವಿನೊಂದಿಗೆ ಸ್ವೀಕರಿಸಿದ್ದು ನಿಜಕ್ಕೂ ವಿಸ್ಮಯ. ಟ್ಯೂಮರ್ ಆಗಿರೋದು ತಲೆಗೆ, ಮನಸ್ಸಿಗಲ್ಲ ಅನ್ನೋದು ಅವರ ವಾದವಾಗಿತ್ತು. ತಮಗೆ ಆಗಿರುವ ನೋವನ್ನು ಬದಿಗಿಟ್ಟು, ಎಲ್ಲರ ಜೊತೆ ಹಸನ್ಮುಖಿಗಳಾಗಿದ್ದ ಅವರನ್ನು ನೋಡಿ, ಒಂದು ಕ್ಷಣ ದೇವರಿಗೂ ಅಸೂಯೆಯಾಗಿರಬಹುದು. ಇವತ್ತಿಗೂ ಆ ಅಂಗಡಿ ಅಲ್ಲೇ ಇದೆ, ಆ ದಂಪತಿಗಳು ಅಲ್ಲೇ ನಿಂತು ನನ್ನ ನೋಡಿ ನಕ್ಕು ಮಾತನಾಡಿಸುತ್ತಾರೆ. ಸಾವನ್ನೂ ಎದುರಿಸಿ ನಿಲ್ಲೋ ನಗು ಅದು. ಇದು ಸಾಧ್ಯಾನಾ..?

ಲೇಖಕರ ಕಿರುಪರಿಚಯ
ಶ್ರೀ ಅರವಿಂದ ಕುಲಕರ್ಣಿ

ಬೆಂಗಳೂರಿನ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಹಿರಿಯ ಅಭಿಯಂತರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಮೂಲತಃ ಬಾದಾಮಿಯವರು.

ನಾಟಕಗಳನ್ನು ನಿರ್ದೇಶಿಸಿ ಹೊಸ ಪ್ರಯತ್ನಗಳನ್ನು ಮಾಡುವ ಅಭಿರುಚಿಯನ್ನು ಹೊಂದಿರುವ ಇವರಿಗೆ ಸಣ್ಣ ಕಥೆ, ಕವನ ಹಾಗೂ ನಾಟಕಗಳನ್ನು ಬರೆಯುವುದು ಹವ್ಯಾಸ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ