ಶುಕ್ರವಾರ, ನವೆಂಬರ್ 1, 2013

ಮೈಸೂರು ದಸರಾ

ಕನ್ನಡ ರಾಜ್ಯೋತ್ಸವ ನಾಡಹಬ್ಬದ ಈ ಶುಭದಿನದಂದು ಪ್ರಪಂಚದಾದ್ಯಂತ ನೆಲೆಸಿರುವ ಸಮಸ್ತ ಕನ್ನಡಿಗರಿಗೆ ಹೃದಯಪೂರ್ವಕ ಶುಭಕಾಮನೆಗಳು. ಕಹಳೆ ಕಾರ್ಯಕ್ರಮದ ಪ್ರಸ್ತುತ ಆವೃತ್ತಿಗೆ ಕನ್ನಡಿಗರೆಲ್ಲರಿಂದ ದೊರೆಯುತ್ತಿರುವ ಅಭೂತಪೂರ್ವ ಪ್ರೋತ್ಸಾಹ ಹಾಗೂ ಬೆಂಬಲಕ್ಕೆ ನಾವು ಋಣಿಗಳು. ಈ ಕಾರ್ಯಕ್ರಮದ ಯಶಸ್ಸು ಹೀಗೆಯೇ ಮುಂದುವರೆಯಲು ನಿಮ್ಮೆಲ್ಲರ ನಿರಂತರ ಆಶೀರ್ವಾದಪೂರ್ವಕ ಸಹಕಾರ ಅತೀ ಅವಶ್ಯಕ; ನೀವೆಲ್ಲರೂ ಸದಾ ಕಹಳೆಯೊಟ್ಟಿಗೆ ಇರುತ್ತೀರೆಂದು ನಂಬಿದ್ದೇವೆ.

ಕೃಪೆ: YouTube

ನವಂಬರ್ 2013 ರ ಮಾಹೆಯುದ್ದಕ್ಕೂ ನಡೆಯಲಿರುವ ಈ ಕಾರ್ಯಕ್ರಮವು ನಿರ್ವಿಘ್ನವಾಗಿ ನೆರವೇರುವಂತಾಗಲಿ ಎಂದು ದೈವೀಸಂಭೂತರಾದ ಗುರುಗಳ ಪಾದಾರವಿಂದಗಳಿಗೆ ನಮಿಸಿ, ಕುಮಾರಿ ಶ್ವೇತ ಅವರಿಂದ ರಚಿತಗೊಂಡಿರುವ ಲೇಖನವನ್ನು ಪ್ರಕಟಿಸುತ್ತಾ, ಕಹಳೆಯ ಮೂರನೇ ಆವೃತ್ತಿಯನ್ನು ಕನ್ನಡಾಂಬೆಗೆ ಶ್ರದ್ಧಾಪೂರ್ವಕವಾಗಿ ಅರ್ಪಿಸುತ್ತಿದ್ದೇವೆ.

=> ಕಹಳೆ ತಂಡ.

ದೈನಂದಿನ ಬದುಕಿನ ಜಂಜಡದಿಂದ ಮುಕ್ತಿ ಹೊಂದಿ, ದೇಹಕ್ಕೆ ಮತ್ತು ಮನಸ್ಸಿಗೆ ಹೊಸ ಚೇತನ ನೀಡುವುದರಲ್ಲಿ ಭಾರತೀಯ ಹಬ್ಬಗಳು ಮಹತ್ವದ ಪಾತ್ರ ವಹಿಸುತ್ತವೆ. ಇಂದಿನ ಸಂಕೀರ್ಣ ಜಗತ್ತಿನಲ್ಲಿ ಉಂಟಾಗುವ ಅಭಿಪ್ರಾಯ ಭೇದಗಳನ್ನು, ಸಂಬಂಧಗಳ ತೊಡಕುಗಳನ್ನು ಮತ್ತು ತಪ್ಪು ಗ್ರಹಿಕೆಗಳಿಂದ ಉಂಟಾಗುವ ಸಾಂಸಾರಿಕ ಬಿರುಕುಗಳನ್ನು ಸರಿಪಡಿಸಿಕೊಳ್ಳಲು ಹಬ್ಬಗಳು ನೆರವಾಗುತ್ತವೆ. ಬಿಗುಮಾನ ಬಿಟ್ಟು ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು, ಸ್ನೇಹ-ಪ್ರೀತಿ ವ್ಯಕ್ತಪಡಿಸುವ ವಿಜಯದಶಮಿ ಹಬ್ಬವು ಮಾನವೀಯ ಅನುಕಂಪಕ್ಕೆ ಸಹಕಾರಿ. ದಸರಾ ಎಂದ ಕೂಡಲೇ ನಮ್ಮ ಕಣ್ಮುಂದೆ ನಿಲ್ಲುವುದು ಸುಂದರವಾದ ಮೈಸೂರು ನಗರ, ಮಹಾರಾಜರ ಅರಮನೆ, ವೈಭವದಿಂದ ಝಗಝಗಿಸುವ ದೀಪಾಲಂಕಾರ, ಜಗದ್ವಿಖ್ಯಾತ ಜಂಬೂಸವಾರಿ ಮೆರವಣಿಗೆ ಹಾಗೂ ಎಲ್ಲೆಲ್ಲಿ ನೋಡಿದರೂ ಕಾಣುವ ಜನಸಾಗರ. ಈ ಖ್ಯಾತಿಗೆ ಮುಖ್ಯ ಕಾರಣ ಅರಮನೆಯ ಭವ್ಯತೆ, ವಾಸ್ತುಶಿಲ್ಪ, ಕುಸುರಿ ಕೆತ್ತನೆ ಮತ್ತು ಕಲಾತ್ಮಕ ವಿನ್ಯಾಸ. ಭಾರತೀಯ ಸಂಸ್ಕೃತಿಯ ಪರಂಪರೆಯ ಬಹುತೇಕ ಎಲ್ಲ ಹಬ್ಬಗಳೂ ಕರ್ನಾಟಕದಲ್ಲಿ ಆಚರಣೆಯಲ್ಲಿವೆ. ಸಾಮಾನ್ಯವಾಗಿ ಹಬ್ಬಗಳು ವಿಜಯೋತ್ಸವದ ಸಂಕೇತವೇ ಆಗಿವೆ, ಈ ಪೈಕಿ ನವರಾತ್ರಿ ಅಥವಾ ದಸರಾ ಅತಿ ಮುಖ್ಯವಾದದ್ದು.

ಶರದೃತುವಿನ ಮೊದಲ ದೊಡ್ಡ ಹಬ್ಬವೇ ದಸರೆ. ದಸರೆಗೆ ದಶಹರ, ದಶರಾತ್ರಿ, ನವರಾತ್ರಿ, ಶರನ್ನವರಾತ್ರಿ ಎಂಬ ಹೆಸರುಗಳೂ ಉಂಟು. ಮೈಸೂರು ಪ್ರಾಂತ್ಯದಲ್ಲಿ "ರಾಜಾ ಪ್ರತ್ಯಕ್ಷ ದೇವತಾ" ಎಂದು ತಿಳಿದಿದ್ದ ಕಾರಣ, ನವರಾತ್ರಿಯ ಕಾಲದಲ್ಲಿ ಪಟ್ಟದ ಬೊಂಬೆಗಳನ್ನು ಮನೆಯಲ್ಲಿ ಕೂರಿಸಿ ಪೂಜಿಸುತ್ತಿದ್ದುದು ವಾಡಿಕೆ. ನವವಿವಾಹಿತರಿಗೆ ವರಪೂಜೆಯ ಕಾಲದಲ್ಲೇ ಪಟ್ಟದ ಬೊಂಬೆಗಳನ್ನು ನೀಡುವ ಸಂಪ್ರದಾಯವೂ ಕರ್ನಾಟಕದಲ್ಲಿದೆ. ಸಾಮಾನ್ಯವಾಗಿ ನವರಾತ್ರಿಯಲ್ಲಿ ಪಾಡ್ಯದ ದಿನವೇ ಬೊಂಬೆಗಳನ್ನು ಕೂರಿಸಿ ಪೂಜಿಸಲಾಗುತ್ತದೆ. ಹೆಣ್ಣು ಮಕ್ಕಳಿಲ್ಲದ ಕೆಲವರು ಶಾರದೆಯ ಹಬ್ಬದಂದು ತಮ್ಮ ಮನೆಗಳಲ್ಲಿ ಬೊಂಬೆ ಕೂರಿಸುತ್ತಾರೆ. ಕಾಳಿಕಾ ಪುರಾಣದಲ್ಲಿ ಹೇಳಿರುವಂತೆ ಮೈಸೂರು ಸೀಮೆಯಲ್ಲಿ ಈ ಹಬ್ಬದ ಆಚರಣೆ ನಡೆಯುತ್ತದೆ.

ಮೈಸೂರು ರಾಜ ಮನೆತನದ ಶ್ರೀಕಂಠದತ್ತ ನರಸಿಂಹರಾಜ ಒಡೆಯರು, ಆಶ್ವಯುಜ ಪಾಡ್ಯದ ದಿನ ನಸುಕಿನಲ್ಲೇ ಎದ್ದು ಮಂಗಳ ಸ್ನಾನ ಮಾಡಿ, ಪತ್ನಿಯೊಡಗೂಡಿ ತಾಯಿ ಚಾಮುಂಡೇಶ್ವರಿಯನ್ನು ಪೂಜಿಸಿ, ನವರಾತ್ರಿಯ ವ್ರತಕ್ಕಾಗಿ ಕಂಕಣ ತೊಡುತ್ತಾರೆ. ಮಹಾಗಣಪತಿ ಪೂಜೆಯೊಂದಿಗೆ ಆರಂಭವಾಗುವ ಈ ವ್ರತದಲ್ಲಿ ಅಷ್ಟದಿಕ್ಪಾಲಕರನ್ನೂ ಪೂಜಿಸಲಾಗುತ್ತದೆ. ದಸರಾ ಹಬ್ಬವನ್ನು ಲೋಕಪ್ರಿಯಗೊಳಿಸಿದ್ದೇ ಮೈಸೂರು ಒಡೆಯರು. ಇಂದೂ ಸಹ ಮೈಸೂರು ರಾಜ ಮನೆತನ ಸಾಂಪ್ರದಾಯಿಕವಾಗಿ ಹತ್ತು ದಿನಗಳ ಕಾಲ ದಸರೆ ಆಚರಿಸುತ್ತದೆ.

ಅರಮನೆಯಲ್ಲೂ ಬೊಂಬೆಗಳನ್ನು ಕೂರಿಸಲಾಗುತ್ತದೆ. ಖಾಸಗಿ ದರ್ಬಾರ್ ನಲ್ಲಿ ಮೈಸೂರು ಸಂಪ್ರದಾಯದ ಎಲ್ಲ ಆಚರಣೆಗಳನ್ನೂ ನಾವು ನೋಡಬಹುದಾಗಿದೆ. ಇದೇ ಮಾದರಿಯ ಆಚರಣೆ ಮೈಸೂರು ಕಡೆಯವರ ಹಲವು ಮನೆಯಲ್ಲೂ ವಾಡಿಕೆಗೆ ಬಂದಿದೆ. ಶಾರದೆ ಹಬ್ಬದ ದಿನ ಮನೆಯಲ್ಲಿರುವ ಓಲೆಗರಿ, ಶಾಲಾ ಪುಸ್ತಕಗಳನ್ನು ಒಪ್ಪ ಓರಣವಾಗಿ ಜೋಡಿಸಿಟ್ಟು, ಅದರ ಮೇಲೊಂದು ಕಳಶವಿಟ್ಟು ಸೀರೆ ಉಡಿಸಿ ಪೂಜಿಸಲಾಗುತ್ತದೆ. ದಶಮಿಯ ಆಚರಣೆಗೆ ಪುರಾಣಗಳ ಉಲ್ಲೇಖವೂ ಇದೆ. ದೇವತೆಗಳು ರಾಕ್ಷಸರನ್ನು ಕೊಂದ ವಿಜಯೋತ್ಸವದ ಸಂಕೇತವಾಗಿ ಈ ಹಬ್ಬ ಆಚರಿಸಲಾಗುತ್ತದೆ. ದಾನವಶಕ್ತಿಯ ದಮನ ಮಾಡಲು ಶಕ್ತಿದೇವತೆಯಾದ ಚಾಮುಂಡೇಶ್ವರಿಯು ಒಂಭತ್ತು ದಿನಗಳ ಕಾಲ ಮುಕ್ಕೋಟಿ ದೇವಾನು ದೇವತೆಗಳ ಶಕ್ತಿಯನ್ನು ಧರಿಸಿ, ಸಿಂಹವಾಹಿನಿಯಾಗಿ ಈ ನವರಾತ್ರಿಯ ಕಾಲದಲ್ಲೇ ಮಹಿಷನ ಕೊಂದಿದ್ದು. ಹೀಗಾಗಿ ಶಕ್ತಿದೇವತೆಯ ಆರಾಧನೆಗೂ ಈ ಹಬ್ಬದಲ್ಲಿ ವಿಶೇಷ ಮಹತ್ವ. ಜೊತೆಗೆ ಲಂಕೆಯ ಮೇಲೆ ದಂಡೆತ್ತಿ ಹೋದ ಶ್ರೀರಾಮ ರಾವಣನ ಸಂಹರಿಸಿ, ವಿಜಯ ಸಾಧಿಸಿದ್ದೂ ದಶಮಿಯಂದೇ. ಹೀಗಾಗಿ ಈ ಆಶ್ವೀಜದ ಹತ್ತನೇ ದಿನವನ್ನು ವಿಜಯದಶಮಿ ಎಂದೂ ಕರೆಯುತ್ತಾರೆ.

ಯುದ್ಧ ಹಾಗೂ ವಿಜಯವೇ ಈ ಹಬ್ಬದ ಸಡಗರ ಸಂಭ್ರಮಕ್ಕೆ ನಾಂದಿಯಾದ ಕಾರಣ ಬೊಂಬೆಗಳಲ್ಲಿ ಆನೆ, ಕುದುರೆ, ಪದಾದಿಯೇ ಮೊದಲಾದ ಚದುರಂಗ ಬಲವನ್ನು ಇಡುವುದೂ ಮೈಸೂರು ಕಡೆಯಲ್ಲಿ ವಾಡಿಕೆ. ಈ ಹಬ್ಬಗಳ ಸಾಲಿನಲ್ಲಿ ಶಸ್ತ್ರವಾಹನಾದಿಗಳನ್ನು ಪೂಜಿಸಲೆಂದೇ ವಿಶೇಷ ಆಚರಣೆಯಿದೆ. ಆಯುಧಪೂಜೆಯ ದಿನ ಕರ್ನಾಟಕದಲ್ಲಿ ಬಹುತೇಕ ಎಲ್ಲರೂ ಮನೆಯಲ್ಲಿರುವ ವಾಹನಗಳನ್ನು ತೊಳೆದು, ಪೂಜಿಸಿ, ಬಾಳೆಯ ಕಂದು, ಮಾವಿನಸೊಪ್ಪು ಹಾಗೂ ಹೂವಿನಿಂದ ಅಲಂಕರಿಸುತ್ತಾರೆ. ಕಾರ್ಖಾನೆ, ಅಂಗಡಿ, ಗ್ಯಾರೆಜ್‍ಗಳಲ್ಲಿ ಎಲ್ಲ ಯಂತ್ರ, ಸಲಕರಣೆಗಳನ್ನೂ ತೊಳೆದು, ಒರೆಸಿ, ಪೂಜಿಸುತ್ತಾರೆ. ಮನೆಗಳಲ್ಲಿ ಚಾಕು, ಕತ್ತರಿ ಇತ್ಯಾದಿ ಆಯುದ್ಧಗಳ್ನು ತೊಳೆದು ಬೊಂಬೆಗಳ ಪಕ್ಕದಲ್ಲೇ ಇಟ್ಟು ಪೂಜಿಸಲಾಗುತ್ತದೆ.

ರಾಮಾಯಣ ಮಹಾಭಾರತ ಕಾಲದಿಂದಲೂ ಈ ಹಬ್ಬ ಆಚರಣೆಯಲ್ಲಿತ್ತು ಎಂದು ಪುರಾಣಗಳು ಹೇಳುತ್ತವೆ. ಅಜ್ಞಾತವಾಸ ಕಾಲದಲ್ಲಿ ಬೃಹನ್ನಳೆಯ ವೇಷದಲ್ಲಿದ್ದ ಅರ್ಜುನನು ಬನ್ನಿ ಮರವನ್ನು ಪೂಜಿಸಿ ಅದರಲ್ಲಿ ಬಚ್ಚಿಟ್ಟಿದ್ದ ಆಯುಧಗಳನ್ನು ಪೂಜಿಸಿ, ಯುದ್ಧ ಮಾಡಿ ವಿಜಯ ಸಾಧಿಸಿದ. ಹೀಗಾಗಿ ವಿಜಯದಶಮಿಯ ದಿನ ಬನ್ನಿ ಮರವನ್ನು ಪೂಜಿಸುವ ಮತ್ತು ಬನ್ನಿ ಹಂಚುವ ಸಂಪ್ರದಾಯವೂ ಬೆಳೆದಿದು ಬಂದಿದೆ.

ದುರ್ಗಾಷ್ಟಮಿಯ ದಿನ ನಾಡದೇವಿ ಚಾಮುಂಡೇಶ್ವರಿಯ ಪ್ರೀತ್ಯರ್ಥ ವಿಶೇಷ ಪೂಜೆ ನಡೆಯುತ್ತದೆ. ಶರನ್ನವರಾತ್ರಿಯ ಒಂಭತ್ತೂ ದಿನ ದುರ್ಗೆಯ ಪೂಜೆ ನಡೆಯುತ್ತದೆ. ವಿಜಯದಶಮಿ ಈ ಹಬ್ಬದ ಕೊನೆಯ ದಿನ. ಅಂದು ಸೀಮೋಲ್ಲಂಘನೆ ಮಾಡಬೇಕು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಹೀಗಾಗಿ ಮೈಸೂರಿನಲ್ಲಿ ಜಂಬೂಸವಾರಿ ಆಚರಣೆಗೆ ಬಂದಿದೆ. ಅಂದು ಮೈಸೂರು ಮಹಾರಾಜರು ತಮ್ಮ ಸೈನ್ಯ ಸಹಿತವಾಗಿ ಚಿನ್ನದಂಬಾರಿಯಲ್ಲಿ ಕುಳಿತು ಬನ್ನಿ ಮಂಟಪಕ್ಕೆ ಹೋಗುತ್ತಿದ್ದರು. ಇಂದು ರಾಜರಿಲ್ಲ. ಆದರೂ ತಾಯಿ ಚಾಮುಂಡೇಶ್ವರಿಯನ್ನೇ ಅಂಬಾರಿಯಲ್ಲಿ ಕೂರಿಸಿ ಜಂಬೂಸವಾರಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಬಂಗಾರದ ಅಂಬಾರಿಯಲ್ಲಿ ಮಹಾರಾಜರ ದರ್ಶನ ನೋಡುಗರಿಗೆ ರೋಮಾಂಚನ ಉಂಟುಮಾಡುತ್ತಿತ್ತು. ಬನ್ನಿ ಪೂಜೆ ನಂತರ ಅಂಬಾರಿ ಮೆರವಣಿಗೆ ಅರಮನೆಗೆ ಹಿಂದಿರುಗುವಾಗ ವಿದ್ಯುತ್ ದೀಪಗಳ ಅಲಂಕಾರದ ಹಿನ್ನಲೆಯಲ್ಲಿ ಮೈಸೂರು ನಗರ ಕಿನ್ನರ ಲೋಕವನ್ನು ನೆನಪಿಸುವಂತೆ ಕಂಗೊಳಿಸುತ್ತಿತ್ತು. ಸೈನಿಕರ ಕವಾಯತು, ಕಾಲಾಳುಗಳ ಪಥಸಂಚಲನ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತಿದ್ದವು. ಚಾಮುಂಡಿ ಬೆಟ್ಟದ ಮೇಲೂ ಪೂಜೆ, ಉತ್ಸವ, ತೆಪ್ಪೋತ್ಸವ ನಡೆಯುತ್ತಿದ್ದವು. ಬಾಣ ಬಿರುಸು ಪ್ರದರ್ಶನ ನಡೆದು ಇಡೀ ಮೈಸೂರು ದೀಪಾಲಂಕಾರದಿಂದ ಕಂಗೊಳಿಸುತ್ತಾ ನಾಡಿನ ಎಲ್ಲ ಭಾಗಗಳಿಂದ ಪ್ರವಾಸಿಗರನ್ನೂ, ವಿದೇಶಿಯರನ್ನೂ ಆಕರ್ಷಿಸುತ್ತಾ ಬಂದಿದೆ.

ದಸರೆ ಎಂದೊಡನೆ ನಮಗೆ ನೆನಪಾಗುವುದು ಮೈಸೂರಿನ ರಾಜ ಮನೆತನದ ದರ್ಬಾರಿನ ವೈಭವ, ವಿದ್ಯುತ್ ದೀಪಗಳಿಂದ ಜಗಜಗಿಸುವ ಇಂಡೋ ಸರಸೈನಿಕ್ ವಾಸ್ತು ಶೈಲಿಯ ಬೃಹತ್ ಅರಮನೆ. ಹಳೆಯ ಕಟ್ಟಿಗೆ ಅರಮನೆ ಆಕಸ್ಮಿಕವಾಗಿ 1897 ರಲ್ಲಿ ಬೆಂಕಿಗೆ ಆಹುತಿಯಾದ ನಂತರ ಈಗಿರುವ ಬೂದು ಬಣ್ಣದ ಗ್ರಾನೈಟ್ ಶಿಲೆಯ ಭವ್ಯವಾದ ಅರಮನೆ ನಿರ್ಮಾಣವಾಯಿತು. ಚಿನ್ನದ ಮುಲಾಮಿನ ಸುಂದರ ಶಿಖರ, ಚಿನ್ನದ ಬಾವುಟ ಹೊಂದಿರುವ 145 ಅಡಿ ಎತ್ತರದ ಶಿಖರವಿದೆ. ಇಲ್ಲಿರುವ ಸಿಂಹಾಸನ ಪಾಂಡವರ ಕಾಲದ್ದೆಂದೂ, ನಂತರದ ಕಾಲಘಟ್ಟದಲ್ಲಿ ವಿಜಯನಗರ ಅರಸು ಶ್ರೀ ರಂಗರಾಯರು ಕ್ರಿ. ಶ. 1610 ರಲ್ಲಿ ಮೈಸೂರಿನ ರಾಜ ಒಡೆಯರಿಗೆ ಕೊಟ್ಟದ್ದೆಂದೂ ಉಲ್ಲೇಖವಿದೆ. ಪ್ರಭುದ್ಧಮಾನಕ್ಕೆ ಬರುತ್ತಿದ್ದ ಮೈಸೂರು ಅರಸರು ಪರಂಪರೆ ಮುಂದುವರೆಸಿದರೆಂದೂ ಚರಿತ್ರೆಯಲ್ಲಿ ಕಂಡುಬರುತ್ತದೆ. ಸ್ವಾತಂತ್ರ್ಯಾನಂತರ, ಕ್ರಮೇಣ ರಾಜ ಪರಿವಾರದ ಉತ್ಸವವಾಗಿ ಕೆಲ ಕಾಲ ನಡೆದುಬಂದಿತು. ಆನಂತರದ ವರ್ಷಗಳಲ್ಲಿ ಕನ್ನಡ ರಾಜರಾಜೇಶ್ವರಿಯ ನಾಡಹಬ್ಬವಾಗಿ ಸರ್ಕಾರ ನಡೆಸಿಕೊಂಡು ಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲಾ ಸರ್ಕಾರಿ ಉತ್ಸವಗಳಂತೆ ಈ ಉತ್ಸವವೂ ಸಹ ತನ್ನ ಆಕರ್ಷಣೆಯನ್ನು ಕಳೆದುಕೊಳ್ಳುತ್ತಿರುವುದು ಒಂದು ವಿಪರ್ಯಾಸ.

ಲೇಖಕರ ಕಿರುಪರಿಚಯ
ಕುಮಾರಿ ಶ್ವೇತ

ಮೈಸೂರಿನಲ್ಲಿ ಹುಟ್ಟಿ-ಬೆಳೆದ ಇವರು ಎಂ.ಬಿ.ಎ. ಪದವೀಧರರು. ಪ್ರಸ್ತುತ ಮೈಸೂರಿನ ಪೋಲೀಸ್ ಪಬ್ಲಿಕ್ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಬಿಡುವಿನ ವೇಳೆಯಲ್ಲಿ ಸುಮಧುರ-ಸುಶ್ರಾವ್ಯ ಚಿತ್ರಗೀತೆಗಳನ್ನು ಕೇಳುವ ಹವ್ಯಾಸವನ್ನು ಹೊಂದಿರುವ ಇವರು ಕನ್ನಡ ಭಾಷೆಯಲ್ಲಿ ಲೇಖನ ಬರೆಯುವುದರಲ್ಲಿಯೂ ಸಿದ್ಧಹಸ್ತರು.

Blog  |  Facebook  |  Twitter

2 ಕಾಮೆಂಟ್‌ಗಳು:

 1. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
  ಶ್ವೇತ ಅವರೇ ದಸರಾ ಹಬ್ಬ ಹಾಗು ಅದರ ಪ್ರಾಮುಖ್ಯತೆಯನ್ನು ಬಹಳ ಚೆನ್ನಾಗಿ ವಿವರಿಸಿದ್ದೀರಿ. ನಿಮ್ಮ ಕನ್ನಡ ಸೇವೆ ಹೀಗೆ ಮುಂದುವರೆಯಲಿ..

  ಪ್ರತ್ಯುತ್ತರಅಳಿಸಿ
 2. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

  ನಿಮ್ಮ ಲೇಖನ ಓದಿ, ದಸರಾ ಹಬ್ಬ ಕಣ್ಣ ಮುಂದೆ ಬಂದು ಹೋದ ಅನುಭವ ಆಯ್ತು. ಒಳ್ಳೆಯ ವಿಷಯವನ್ನುಆಯ್ಕೆ ಮಾಡಿದ್ದೀರಿ.

  ಇತಿಹಾಸ, ವೈಭಾವೀಯತೆಯ ಪ್ರತೀಕವಾಗಿರುವ ಈ ಲೇಖನಕ್ಕೆ ಕೊನೆಯಲ್ಲಿ ಬರೆದ ಸಾಲು ಅಷ್ಟಾಗಿ ಸೂಕ್ತವಲ್ಲ ಅನ್ನೋದು ನನ್ನ ಅನಿಸಿಕೆ.

  ಅಭಿನಂದನೆಗಳು.

  ಪ್ರತ್ಯುತ್ತರಅಳಿಸಿ