ಸೋಮವಾರ, ನವೆಂಬರ್ 4, 2013

ಮತ್ತೆ ಬಾರದ ಆ ದಿನಗಳು.....

"ಎಲ್ಲ ಮರೆತಿರುವಾಗ ಇಲ್ಲಸಲ್ಲದ ನೆವವ ಹೂಡಿ ಬರದಿರು ಮತ್ತೆ ಹಳೆಯ ನೆನಪೆ
ಕಲ್ಲಿನಂದದಿ ಬಿದ್ದು ತಿಳಿಯಾದ ಎದೆಗೂಳವ ರಾಡಿಗೊಳಿಸುವೆ ಏಕೆ ಮಧುರ ನೆನೆಪೆ....."

ನಿಜ. ನೆನಪುಗಳೇ ಹಾಗೆ. ಕೆಲವು ಮಧುರವಾದವು, ಕೆಲವು ಕಹಿಯಾದವು, ಆದರೂ ಮತ್ತೆ ಮತ್ತೆ ಬಂದು ಕಾಡುವಂತವು,
ಜೀವನದ ಕಳೆದುಹೋದ ಕ್ಷಣಗಳೆಲ್ಲವೂ ನೆನಪುಗಳೇ.....

ಅದರಲ್ಲಿಯೂ ಬಾಲ್ಯದ ದಿನಗಳ ಆ ನೆನಪುಗಳು.....

ಯಾವುದೇ ಜವಬ್ದಾರಿಯಿಲ್ಲದ, ಕೇವಲ ಕುತೂಹಲ, ಹುಡುಗಾಟದಲ್ಲಿಯೇ ಕಳೆದುಹೋಗುವ ಬಾಲ್ಯದ ಆ ದಿನಗಳು ಮತ್ತೆಂದೂ ಹಿಂದಿರುಗಿ ಬಾರವು. 34 ವಸಂತಗಳೇ ಕಳೆದುಹೋದವು, ಇಷ್ಟು ದಿನಗಳಲ್ಲಿ ಗಳಿಸಿದ್ದೆಷ್ಟೋ, ಕಳೆದುಕೊಂಡಿದ್ದೆಷ್ಟೋ ಲೆಕ್ಕಕ್ಕೆ ಸಿಗಲಾರವು.

ಆದರೆ, ಒತ್ತಡದ ಬದುಕಿನ ಈ ದಿನಗಳಲ್ಲಿ ಅಪರೂಪಕ್ಕೊಮ್ಮೆ ಸಿಗುವ ಏಕತಾನತೆಯ ನಡುವೆ ಮತ್ತೊಮ್ಮೆ ಬರಲೆಂದು ಹಂಬಲಿಸುವಂತೆ ಮಾಡುವ, ಮತ್ತೆ ಸಿಗಲಾರದೆಂದು ನಿರಾಶೆ ಹುಟ್ಟಿಸುವ, ಆಗಾಗ ಸುಳಿದು ಮುದಗೊಳಿಸುವವೇ ಬಾಲ್ಯದ ದಿನಗಳ ಆ ನೆನಪುಗಳು......

ಅಮ್ಮನ ಮಡಿಲಲ್ಲಿ ಪುಟ್ಟ ಮಗುವಾಗಿ ಪ್ರೀತಿಯ ಮಾತನಾಡುತ್ತಾ, ಹಠ ಮಾಡುತ್ತಾ, ಮತ್ತೆ ಬೈಸಿಕೊಳ್ಳುತ್ತಾ, ಮತ್ತೆ ಅದನ್ನು ಮರೆತು 'ಅಮ್ಮ ಪ್ರೀತಿ ಮಾಡು' ಎಂಬಂತೆ ಅವಳ ಹಿಂದೆ ಸುಳಿಯುತ್ತಾ 'ಮುತ್ತು' ಪಡೆದ ಆ ದಿನಗಳು, ಅಪ್ಪನ ಗಂಭೀರ ಮುಖ, ಕೆಂಗಣ್ಣ ನೋಟದ ಹಿಂದಿರುವ ಪರಿಶ್ರಮದ ಜೀವನವನ್ನು ಅರ್ಥೈಸಿಕೊಳ್ಳಲಾಗದೇ, "ಪಪ್ಪ ಯಾಕೆ ಹೀಗೆ?" ಎಂದು ಯೋಚಿಸಿದ ದಿನಗಳು.....

ಅಮ್ಮನಿಗೆ ನಾವು ನಾಲ್ವರು ಮಕ್ಕಳು, ಹಿರಿಯಕ್ಕ ಅಪರೂಪದವಳು. ಅವಳ ಮೇಲೆ ಮನೆಯಲ್ಲಿ ಎಲ್ಲರಿಗೂ ಅಕ್ಕರೆ, ನನ್ನ ಪ್ರೀತಿಯ ಅಣ್ಣ ಮನು – ಏಕಮಾತ್ರ ಕುಲಪುತ್ರ, ಹಾಗಾಗಿ ಅವನ ಮೇಲೋ ವಿಶೇಷ ಪ್ರೀತಿ. ಅದರಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದವರೆಂದರೆ ನಾನು ಮತ್ತು ಇನ್ನೊಬ್ಬಳು ಅಕ್ಕ "ಷೆಲ್ಲಿ". ಅವಳು ನನಗೆ ಅಕ್ಕನಷ್ಟೇ ಆಗಿರದೆ ಅಮ್ಮ-ಗೆಳತಿ ಎಲ್ಲ ಆಗಿದ್ದವಳು. ಮಳೆಗಾಲದ ದಿನಗಳಲ್ಲಿ ನನ್ನ ಶಾಲಾ ಪುಸ್ತಕದ ಚೀಲವನ್ನು ತಾನೇ ಹೊತ್ತು ಮಳೆಯಲ್ಲಿ ನಾನು ತೋಯದಂತೆ ಕರೆದೊಯ್ಯುತ್ತಿದ್ದ ಅವಳ ಪ್ರೀತಿಯನ್ನು ಮರೆಯಲು ಸಾಧ್ಯವೇ? ಅಣ್ಣ "ಮನು" ಅಂದು ಇಂದಿಗೂ ನನಗೆ ಆದರ್ಶ. ಹಿರಿಯಕ್ಕ ಮತ್ತು ಅಣ್ಣನ ಮೇಲೆ ಮಾತ್ರ ಪ್ರೀತಿ ತೋರಿಸುತ್ತಿದ್ದ ಅಜ್ಜಿ ಅಂದಿನ ನನ್ನ ದೊಡ್ಡ ಶತೃ. "ತಂಗಾ" ಎಂದು ಅಕ್ಕರೆಯಿಂದ ಕರೆಯುತ್ತಿದ್ದ ಅಜ್ಜನ ಬೋಳು ತಲೆಗೆ ಎಣ್ಣೆ ಹಚ್ಚುವಾಗ ಉಳಿದವರು ಹಾಸ್ಯಗೈದ ಆ ಕ್ಷಣಗಳು ಈಗಲೂ ಹಸಿಯಾಗಿವೆ.

ಇನ್ನು ಶಾಲೆಯಲ್ಲಿ ಕಳೆದ ದಿನಗಳು.... ಇಂದಿಗೂ ಅದರ ನೆನಪುಗಳು ಮಧುರ. ಗೆಳತಿಯರೊಂದಿಗೆ ಹುಣಸೆಕಾಯಿ, ತೊಳೆದ ಮಿಡಿ ಉಪ್ಪಿನಕಾಯಿ, ಶಾಲಾ ಹಿಂಭಾಗದ ಎರಡು ಗೋಡೆಗಳು ಸೇರುವ ಸ್ಥಳದಲ್ಲಿ ನಿಂತು, ಯಾರಿಗೂ ಕಾಣದಂತೆ ಕದ್ದು-ಮುಚ್ಚಿ ತಿಂದು ಎಸೆದ ಹುಣಸೆ ಬೀಜ ಗಿಡವಾಗಿ ಬೆಳೆದಾಗ ಒಳಗೊಳಗೇ ಆದ ಆನಂದ ಮರೆಯಾಲಾದೀತೇ??

ಮಹಾಸತಿ ಅನಸೂಯ ಸಿನಿಮಾ ನೋಡಿ, ಮನೆಯಲ್ಲೊಂದು ಲಿಂಗ ಪೂಜೆಯನ್ನು ಪ್ರಾರಂಭಿಸಿ ಎಲ್ಲರ ಹಾಸ್ಯಕ್ಕೆ ಗುರಿಯಾಗಿದ್ದೆ. ಪಕ್ಕದ ಮನೆಯ ಮಾವಿನ ಮರದ ಮಾವಿನಕಾಯಿ ಉದುರಿಸಿ ಅವರು ಅಟ್ಟಿಸಿಕೊಂಡು ಬಂದಾಗ ಓಡಲಾಗದೇ ಬೈಸಿಕೊಂಡು, ಪೆಚ್ಚು ಮೋರೆ ಹಾಕಿ ಮನೆಗೆ ಮರಳಿದ್ದ ನೆನಪು.... ಈ ರೀತಿಯ ನೆನಪುಗಳಿಗೆ ಕೊನೆ ಮೊದಲೆಲ್ಲಿ?...

ಅಂದು ಮಗಳಾಗಿದ್ದವಳು ಇಂದು ಮಗಳಿಗೆ ಅಮ್ಮನಾಗಿದ್ದೇನೆ. ಅವಳ ಬಾಲ್ಯದ ದಿನಗಳನ್ನು ನೋಡುವಾಗ ನನ್ನ ಬಾಲ್ಯದ ದಿನಗಳು ನೆನಪಾಗಿ ಕಾಡುತ್ತವೆ. ಎಲ್ಲಿ ಹೋದವು ಆ ದಿನಗಳು..? ಮತ್ತೆಂದೂ ಹಿಂದಿರುಗಿ ಬರಲಾರದಂತೆ..??

ಲೇಖಕರ ಕಿರುಪರಿಚಯ
ಶ್ರೀಮತಿ ಮಮತ ಭಾಗವತ್

ಕನ್ನಡ ಐಚ್ಛಿಕ ವಿಷಯವಾಗಿ ಸ್ನಾತಕೋತ್ತರ ಪದವಿ ಹೊಂದಿರುವ ಇವರು ಪ್ರಸ್ತುತ ಬೇಗೂರಿನ ಸರಕಾರಿ ಪ್ರೌಢ ಶಾಲೆಯಲ್ಲಿ ಸಹಾಯಕ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕನ್ನಡ ಲೇಖನಗಳನ್ನು ಬರೆಯುವುದು ಹಾಗೂ ಓದುವುದು ಬಿಡುವಿನ ವೇಳೆಯಲ್ಲಿನ ಇವರ ನೆಚ್ಚಿನ ಹವ್ಯಾಸಗಳು.

Blog  |  Facebook  |  Twitter

4 ಕಾಮೆಂಟ್‌ಗಳು:

 1. 'ಮಧುರ ಮಧುರವೀ ಮಂಜುಳ ಗಾನ' ಎನ್ನುವಂತೆ ಹಳೆಯ ನೆನಪುಗಳು ಅದರಲ್ಲೂ ಬಾಲ್ಯದ ನೆನಪುಗಳು ಎಂದೆಂದಿಗೂ ಮಧುರವಾಗಿರುತ್ತವೆ. ಆ ಮಧುರ ನೆನಪುಗಳ ಮುತ್ತಿನ ಮಣಿಗಳನ್ನು ಸುಂದರವಾಗಿ ಪೋಣಿಸಿ ಹಾರವನ್ನಾಗಿಸಿದ ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು.
  ಆರ್.ಬಿ.ಗುರುಬಸವರಾಜ. 9902992905

  ಪ್ರತ್ಯುತ್ತರಅಳಿಸಿ
 2. ನಿಜ, ಬಾಲ್ಯವೆಂಬುದು ಜೆನ ಬುತ್ತಿ, ಆಗಾಗ ತೋರ್ಬೆರಳ ತೀಡಿ ನೆಕ್ಕುವಾಗ ಸಿಗುವ ಸವಿಯೇ ಸವಿ :) !!

  ಪ್ರತ್ಯುತ್ತರಅಳಿಸಿ
 3. ಮಹಾಸತಿ ಅನಸೂಯ ನೋಡಿ ಲಿಂಗ ಪೂಜೆ ಮಾಡಲು ಹೊರಟ ನೆನಪೊಂದೆ ಸಾಕು ಬಾಲ್ಯದ ಸವಿ ಸವಿಯಲು... ಅತ್ಯಮೂಲ್ಯ..

  ಪ್ರತ್ಯುತ್ತರಅಳಿಸಿ
 4. ಬಾಲ್ಯದ ನೆನಪುಗಳ ಬುತ್ತಿ ಕಟ್ಟಿ ಕೊಟ್ಟ ನಿಮಗೆ ಧ್ಯನ್ಯವಾದಗಳು..

  ಪ್ರತ್ಯುತ್ತರಅಳಿಸಿ