ಶನಿವಾರ, ನವೆಂಬರ್ 9, 2013

ಡಾ|| ರಾಜ್‍ಕುಮಾರ್ – ಎಂದೂ ಮುಗಿಯದ ಅಧ್ಯಾಯ

ಆತ್ಮೀಯರೇ, ಇಂದು ನವಂಬರ್ 9, ಶಂಕರ್ ನಾಗ್ ಅವರ ಹುಟ್ಟುಹಬ್ಬ. ಶಂಕರ್ ನಾಗ್ ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ವ್ಯಕ್ತಿತ್ವ. ಜೀವಿತಾವಧಿಯಲ್ಲಿ ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ ಅನನ್ಯ ಕೊಡುಗೆಗಳನ್ನು ಮರೆಯಲು ಹೇಗೆ ಸಾಧ್ಯ? ಆದ್ದರಿಂದ, ಪ್ರತಿ ವರ್ಷ ಕಹಳೆ ಕಾರ್ಯಕ್ರಮದಲ್ಲಿ ನವಂಬರ್ 9ನೇ ತಾರೀಖಿನಂದು ಕನ್ನಡ ಚಿತ್ರರಂಗಕ್ಕೆ ಸಂಬಂಧಪಟ್ಟ ಲೇಖನವನ್ನು ಪ್ರಕಟಿಸಿ ಶಂಕರ್ ನಾಗ್ ಅವರಿಗೆ ಗೌರವ ಸೂಚಿಸುವ ಆಶಯ ನಮ್ಮದು. ಮೈಸೂರಿನವರಾದ ಡಾ. ಎಚ್. ಆರ್. ಜಗದೀಶ್ ಅವರು ರಚಿಸಿರುವ ಮೇರುನಟ ಡಾ. ರಾಜಕುಮಾರ್ ಅವರ ಕುರಿತಾದ ಲೇಖನವನ್ನು ಇಂದು ಪ್ರಕಟಿಸುವ ಮೂಲಕ ಈ ಪ್ರಯತ್ನಕ್ಕೆ ಚಾಲನೆ ನೀಡುತ್ತಿದ್ದೇವೆ.
=> ಕಹಳೆ ತಂಡ.

'ನ ಭೂತೋ ನ ಭವಿಷ್ಯತಿ'. ಕನ್ನಡ ಚಿತ್ರರಂಗದ ಮಟ್ಟಿಗೆ ಹೇಳುವುದಾದಲ್ಲಿ ಡಾ|| ರಾಜ್‍ಕುಮಾರ್ ಹೊರತಾಗಿ ಇನ್ನಾರಿಗೆ ತಾನೆ ಈ ಮಾತು ಅನ್ವಯಿಸಲು ಸಾಧ್ಯ? ದೈತ್ಯ ಪ್ರತಿಭೆ, ಅಸಾಮಾನ್ಯ ವ್ಯಕ್ತಿತ್ವಗಳ ಅಪೂರ್ವ ಸಂಗಮ ಡಾ|| ರಾಜ್‍ಕುಮಾರ್ ಕನ್ನಡನಾಡು ಕಂಡ, ಅಷ್ಟೇ ಏಕೆ ಇಡೀ ಚಿತ್ರಜಗತ್ತೇ ಕಂಡ ಅಪರೂಪದ, ಪರಿಪೂರ್ಣ ಕಲಾವಿದ ಎಂದರೆ ತಪ್ಪಾಗುವುದಿಲ್ಲ. 'ಆಡು ಮುಟ್ಟದ ಸೊಪ್ಪಿಲ್ಲ' ಎಂಬುದು ಗಾದೆ ಮಾತಾದರೆ, 'ಡಾ|| ರಾಜ್‍ಕುಮಾರ್ ಜೀವ ತುಂಬದ ಪಾತ್ರಗಳಿಲ್ಲ' ಎಂಬುದು ಚಿತ್ರ ಜಗತ್ತಿನಲ್ಲಿ ಜನಜನಿತವಾದ ಮಾತು.

ಕನ್ನಡ ಚಿತ್ರ ಪ್ರಪಂಚ ಭದ್ರ ನೆಲೆ ಕಾಣಲು ಹೆಣಗಾಡುತ್ತಿದ್ದ ಕಷ್ಟಕಾಲದಲ್ಲಿ ತಮ್ಮ ಅನುಪಮ ಪಾತ್ರಗಳ ಮೂಲಕ ಇವರು ರಜತ ಪರದೆಯ ಮೇಲೆ ಸೃಷ್ಟಿಸಿದ ಹಲವಾರು ಜನಪ್ರಿಯ, ಸಮಾಜಮುಖಿ ಚಿತ್ರಗಳು ಕನ್ನಡ ಚಿತ್ರರಂಗ ತನ್ನದೇ ಆದ ಮಾರುಕಟ್ಟೆ, ವರ್ಚಸ್ಸು ಕಂಡುಕೊಳ್ಳುವಂತೆ ಮಾಡಿದ್ದು ಇವರ ಹೆಗ್ಗಳಿಕೆ. ವೈಯಕ್ತಿಕ ಸ್ವಾರ್ಥಕ್ಕೆ ಒಲವು ತೋರದೆ, ಕೇವಲ ಕನ್ನಡದ ಉನ್ನತಿಗೆಂದೇ ತಮ್ಮ ಇಡೀ ಬದುಕನ್ನು ಮುಡಿಪಾಗಿಟ್ಟ ಇವರನ್ನು ಒಂದರ್ಥದಲ್ಲಿ ತ್ಯಾಗಜೀವಿ ಎಂದರೂ ತಪ್ಪಲ್ಲ. ಕನ್ನಡಕ್ಕೆ ಸೂಕ್ತ ಸ್ಥಾನಮಾನ ಕಲ್ಪಿಸುವ ನಿಟ್ಟಿನಲ್ಲಿ ಆರಂಭಗೊಂಡ ಗೋಕಾಕ್ ಚಳುವಳಿಗೆ ನಿಜವಾದ ವೇಗ, ಸರಿಯಾದ ದಿಕ್ಕು ತೋರಿದವರೇ ಡಾ|| ರಾಜ್‍ಕುಮಾರ್.

ತಾವು ನಿರ್ವಹಿಸುತ್ತಿದ್ದ ಪಾತ್ರಗಳಲ್ಲಿ ಇವರು ಬೆರೆತು ಹೋಗುತ್ತಿದ್ದ ರೀತಿ, ಕನ್ನಡ ಭಾಷೆಯ ಮೇಲಿನ ಇವರ ಅನನ್ಯವಾದ ಹಿಡಿತ, ವಿಶಿಷ್ಟವಾದ ಸಂಭಾಷಣಾ ಶೈಲಿ, ಮಾಧುರ್ಯ ಮತ್ತು ಸುಸ್ಪಷ್ಟವಾದ ಶಾರೀರ, ಆತ್ಮವಿಶ್ವಾಸ ತುಂಬಿದ ಪಾತ್ರ ಪೋಷಣೆ, ಅಗಾಧ ತಿಳಿವಳಿಕೆ, ಸಮಯ ಪರಿಪಾಲನೆ, ಶಿಸ್ತು, ಸರಳತೆ, ಸಜ್ಜನಿಕೆಗಳಿಗೆ ಮನಸೋಲದವರೇ ಇಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಕನ್ನಡ ತಾಯಿ, ಕನ್ನಡ ನುಡಿ, ಕನ್ನಡ ನೆಲ, ಕನ್ನಡ ಭಾಷೆ, ಕನ್ನಡದ ಜನರನ್ನು ಇವರು ಪೂಜಿಸಿ ಪ್ರೀತಿಸಿದಷ್ಟು ಗಾಢವಾಗಿ ಪ್ರಾಯಶಃ ಬೇರೆ ಯಾರೂ ಪ್ರೀತಿಸಿರಲಾರರೇನೋ ಎಂಬಂತೆ ಭಾಸವಾಗುವುದಂತೂ ನಿಜ. ಅದರಲ್ಲೂ ವಿಶೇಷವಾಗಿ ಇವರು ನಿರ್ವಹಿಸಿದ ಹಲವಾರು ಕನ್ನಡದ ರಾಜ ಮಹಾರಾಜರ, ಚಕ್ರವರ್ತಿಗಳ ಪಾತ್ರಗಳನ್ನು ನೋಡುವಾಗ ಈ ನಂಬಿಕೆ ಮತ್ತಷ್ಟು ಹೆಚ್ಚಾಗುವುದು ಸುಳ್ಳಲ್ಲ. ಪಾತ್ರವೊಂದಕ್ಕೆ ನ್ಯಾಯ ಒದಗಿಸಲು, ಅದರ ಪಾವಿತ್ರ್ಯತೆ ಕಾಪಾಡಲು ತಮ್ಮ ಬದುಕಿನ ಶೈಲಿಯನ್ನೇ ಬದಲಿಸಿಕೊಂಡ ಅನೇಕ ಉದಾಹರಣೆಗಳನ್ನು ಡಾ|| ರಾಜ್‍ಕುಮಾರ್ ಅವರ ಚಿತ್ರ ಜೀವನದಲ್ಲಿ ನಾವು ಕಾಣಬಹುದು.

ಚಿತ್ರ : ಮಯೂರ; ಕೃಪೆ : YouTube

ಅತಿ ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದ ಡಾ|| ರಾಜ್‍ಕುಮಾರ್ ಶಾಲೆಯಲ್ಲಿ ಕಲಿತಿದ್ದು ನಾಲ್ಕೇ ಅಕ್ಷರವಾದರೂ ಬದುಕಿನಿಂದ ಕಲಿತಿದ್ದು ಮಾತ್ರ ಪ್ರಪಂಚದ ಯಾವ ವಿಶ್ವವಿದ್ಯಾನಿಲಯವೂ ಕಲಿಸಲಾರದಷ್ಟು ! ಕನ್ನಡ ಭಾಷೆಯನ್ನು ಅವರಷ್ಟು ಶುದ್ಧವಾಗಿ ಮಾತಾಡುವ ಬೇರೆ ಯಾರನ್ನೂ ಕನ್ನಡಿಗರು ಪ್ರಾಯಶಃ ನೋಡಿರಲಾರರು. ರಂಗಭೂಮಿಯ ಹಿನ್ನೆಲೆಯಿಂದ ಚಿತ್ರರಂಗ ಪ್ರವೇಶಿಸಿದ ಇವರು ಅಲ್ಲಿನ ಶಿಸ್ತು, ಸಂಗೀತ ಜ್ಞಾನ, ನಟನಾ ಸಾಮಥ್ರ್ಯ ಮುಂತಾದ ಅಂಶಗಳನ್ನು ಮೈಗೂಡಿಸಿಕೊಂಡು ಕನ್ನಡದ ಅನಭಿಷಿಕ್ತ ಚಕ್ರವರ್ತಿಯಾಗಿ ಬೆಳೆದಿದ್ದುದನ್ನು ಕನ್ನಡಿಗರಾದ ನಾವೆಲ್ಲರೂ ಬೆರಗಿನಿಂದ ಕಂಡಿದ್ದೇವೆ, ಕಂಡು ಹೆಮ್ಮೆ ಪಟ್ಟಿದ್ದೇವೆ, ಮನಸಾರೆ ಕೊಂಡಾಡಿದ್ದೇವೆ ಹಾಗೂ ಅವರನ್ನು ನಮ್ಮ ಮನಸ್ಸುಗಳಲ್ಲಿ ಪ್ರೀತಿಯಿಂದ ಪ್ರತಿಷ್ಠಾಪಿಸಿದ್ದೇವೆ. ಒಬ್ಬ ಕಲಾವಿದನಿಗೆ ಬದುಕಿನಲ್ಲಿ ಇದಕ್ಕಿಂತ ದೊಡ್ಡ ಪ್ರಶಸ್ತಿ ದೊರಕುವುದು ಸಾಧ್ಯವೇ?

ಯಾವುದೇ ಪಾತ್ರವಿರಲಿ, ಅದು ಡಾ|| ರಾಜ್‍ಕುಮಾರ್ ಅವರಿಗೆ ಒಪ್ಪುವಷ್ಟು ಸೊಗಸಾಗಿ ಇನ್ನಾವುದೇ ಭಾಷೆಯ ನಟನಿಗೂ ಒಪ್ಪುತ್ತಿರಲಿಲ್ಲ. ಚಿತ್ರಗಳಲ್ಲಿ ಇವರು ನಿರ್ವಹಿಸಿದ ಅಸಂಖ್ಯಾತ ವೈವಿಧ್ಯಮಯ ಪಾತ್ರಗಳ ಪೈಕಿ ಹಲವಾರು ಪಾತ್ರಗಳು ಸಮಾಜದ ಓರೆಕೋರೆಗಳನ್ನು ತಿದ್ದುವಲ್ಲಿ ಕೂಡ ಪಾತ್ರ ವಹಿಸಿರುವುದನ್ನು ಹಾಗೂ ಶ್ರಮದ ದುಡಿಮೆಯ ಸಾರ್ಥಕ ಜೀವನಕ್ಕೆ ಸ್ಫೂರ್ತಿದಾಯಕವಾಗಿರುವುದನ್ನು ಪತ್ರಿಕೆಗಳಲ್ಲಿ ನಾವೆಲ್ಲರೂ ಆಗಾಗ ಓದಿದ್ದೇವೆ. ಇವರ ಪಾತ್ರಗಳಲ್ಲಷ್ಟೇ ಅಲ್ಲ, ಸ್ವತಃ ಇವರ ವ್ಯಕ್ತಿತ್ವದಲ್ಲಿ ಅಂತರ್ಗತವಾಗಿದ್ದ ಮಾನವೀಯ ಮೌಲ್ಯಗಳೂ ಸಹ ಬೆರೆತು ಸಾಮಾನ್ಯ ಮನುಷ್ಯನ ಬದುಕನ್ನು ಹಸನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದುದು ಗಮನಾರ್ಹ. ಒಬ್ಬ ನಿಜವಾದ ಕಲಾವಿದ ಸಮಾಜದ ಒಳಿತಿಗಾಗಿಯೂ ಹೇಗೆ ಕಾಣಿಕೆ ನೀಡಬಲ್ಲ ಎಂಬುದಕ್ಕೆ ಇದಕ್ಕಿಂತ ಒಳ್ಳೆಯ ನಿದರ್ಶನ ಬೇಕೆ?

ಭಾರತೀಯ ಚಲನಚಿತ್ರ ರಂಗದಲ್ಲಿ ಕಂಚಿನ ಕಂಠ, ಗತ್ತು ತುಂಬಿದ ಮಾತಿನ ಶೈಲಿಗೆ ಅಮಿತಾಬ್, ನಟನೆಗೆ ದಿಲೀಪ್ ಕುಮಾರ್, ವಿಶಿಷ್ಟ ಬಗೆಯ ಅಭಿನಯಕ್ಕೆ ದೇವಾನಂದ್ / ರಾಜ್‍ಕಪೂರ್, ಪೌರಾಣಿಕ ಪಾತ್ರಗಳಿಗೆ ಎನ್. ಟಿ. ರಾಮರಾವ್, ಸೊಗಸಿಗೆ ಎಂ. ಜಿ. ರಾಮಚಂದ್ರನ್, ಗಾಯನಕ್ಕೆ ಮಹಮದ್ ರಫಿ - ಹೀಗೆ ಒಂದೊಂದು ವಿಭಾಗಕ್ಕೆ ಒಬ್ಬೊಬ್ಬರು ಹೆಸರಿಸಲ್ಪಡುತ್ತಿದ್ದಾಗ ಅವರೆಲ್ಲರನ್ನೂ ಒಬ್ಬರಲ್ಲೇ ಕಾಣಬಹುದಾಗಿದ್ದರೆ ಅವರು ಡಾ|| ರಾಜ್‍ಕುಮಾರ್ ಮಾತ್ರ ಆಗಿರುತ್ತಿದ್ದರು ಎಂಬುದು ಕನ್ನಡದ ಹೆಮ್ಮೆ ಆಲ್ಲವೇ?

ಒಬ್ಬ ಚಿತ್ರ ಕಲಾವಿದನಿಗೆ ಸಂದಬಹುದಾದ ಎರಡು ಪರಮೋಚ್ಛ ಗೌರವಗಳನ್ನು - ಅಂದರೆ ನಟನೆಯಲ್ಲಿ ಜೀವನಶ್ರೇಷ್ಠ ಸಾಧನೆಗಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಮತ್ತು ಶ್ರೇಷ್ಠ ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರಪ್ರಶಸ್ತಿ - ಪಡೆದ ಭಾರತದ ಏಕೈಕ ಕಲಾವಿದರು ಡಾ|| ರಾಜ್‍ಕುಮಾರ್. ನಟನೊಬ್ಬ ಗಾಯಕನೂ ಆದ ಉದಾಹರಣೆಗಳು ಭಾರತೀಯ ಚಿತ್ರರಂಗದಲ್ಲಿ ಬಹಳಷ್ಟು ಇರಬಹುದು. ಆದರೆ ಯಾವುದೇ ಶಾಸ್ತ್ರೀಯ ಹಿನ್ನೆಲೆಯೂ ಇಲ್ಲದ ಮೇರುನಟನೊಬ್ಬ ಮೇರುಗಾಯಕನೂ ಆಗಿರುವ ಉದಾಹರಣೆ ಡಾ|| ರಾಜ್‍ಕುಮಾರ್ ಅವರೊಬ್ಬರದೇ ಎನ್ನುವಾಗ ಪ್ರತಿಯೊಬ್ಬ ಕನ್ನಡಿಗನಿಗೂ ರೋಮಾಂಚನ ಆಗದಿರಲು ಸಾಧ್ಯವೇ?

ಅವರಿಗೆ ದೊರೆತ ಮತ್ತೆರಡು ಅತ್ಯಂತ ವಿಶಿಷ್ಟ ಗೌರವಗಳೆಂದರೆ ಕರ್ನಾಟಕ ರತ್ನ ಪ್ರಶಸ್ತಿ ಮತ್ತು ಮೈಸೂರು ವಿಶ್ವವಿದ್ಯಾನಿಲಯದಿಂದ ನೀಡಲ್ಪಟ್ಟ ಗೌರವ ಡಾಕ್ಟೋರೇಟ್. 'ನಟಸಾರ್ವಭೌಮ', 'ಗಾನ ಗಂಧರ್ವ', 'ರಸಿಕರ ರಾಜ', 'ಕೆಂಟಕಿ ಕರ್ನಲ್' ಇವೇ ಮುಂತಾದ ಎಣಿಕೆಗೆ ನಿಲುಕದಷ್ಟು ಸಮ್ಮಾನಗಳು ಅವರ ಚರಿತ್ರಾರ್ಹ ಬದುಕಿನ ಕೆಲವು ಸುವರ್ಣ ಗುಚ್ಛಗಳು. ಇವೆಲ್ಲವನ್ನೂ ಮೀರಿ ಅವರಿಗೆ ದೊರೆತ ಗೌರವವೆಂದರೆ, ಅವರೇ ಆಗಾಗ ಹೇಳುತ್ತಿದ್ದಂತೆ, ಅಭಿಮಾನಿ ದೇವರುಗಳಿಂದ ಅವರಿಗೆ ದೊರೆಯುತ್ತಿದ್ದ ನಿರಂತರ ಪ್ರೀತಿ, ಅಭಿಮಾನ ಮತ್ತು ಗೌರವ.

ದುರ್ವಿಧಿ ಎಂತಹ ಮಹಾನ್ ವ್ಯಕ್ತಿಯನ್ನೂ ಕಾಡದಿರುವುದಿಲ್ಲ ! ವಿಧಿವಶಾತ್ ಕಾಡುಗಳ್ಳನ ಕೈವಶವಾದಾಗಲೂ ವಿಚಲಿತಗೊಳ್ಳದೆ ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತು ಅಂತಹ ವಿಷಮ ಪರಿಸ್ಥಿತಿಯಿಂದ ಅತ್ಯಂತ ಚಾಕಚಕ್ಯತೆಯಿಂದ ಹೊರಬರುವಲ್ಲಿ    ಡಾ|| ರಾಜ್‍ಕುಮಾರ್ ಅವರ ನೆರವಿಗೆ ಬಂದಿದ್ದು ಯೋಗಸಾಧನೆಯಿಂದಾಗಿ ಅವರು ಗಳಿಸಿದ್ದ ಅಪಾರ ಆತ್ಮಸಂಯಮ ಮತ್ತು ಕಠಿಣ ದೇಹದಂಡನೆಗಳೇ ಇರಬೇಕು. ಆದರೂ ಅಂದು ಆ ದುರ್ಘಟನೆ ನಡೆದಿರದಿದ್ದರೆ ಬಹುಶಃ ಅವರು ನಮ್ಮೊಂದಿಗೆ ಮತ್ತಷ್ಟು ಕಾಲ ಬದುಕಿರುತ್ತಿದ್ದರೇನೋ ಎಂದು ಅಸಂಖ್ಯಾತ ಕನ್ನಡಿಗರಿಗೆ ಅನಿಸಿದ್ದಂತೂ ಸತ್ಯ!

ಏನೇ ಇರಲಿ, 'ಪುನರಪಿ ಜನನಂ ಪುನರಪಿ ಮರಣಂ' ಎಂಬ ಬಹುತೇಕ ಕನ್ನಡಿಗರ ನಂಬಿಕೆ ನಿಜವಾಗುತ್ತದೆ ಎಂದಾದಲ್ಲಿ ನಮ್ಮೆಲ್ಲರ ಕಣ್ಮಣಿ ಡಾ|| ರಾಜ್‍ಕುಮಾರ್ ಅವರು ನಮ್ಮ ಕನ್ನಡ ನಾಡಿನಲ್ಲಿ ಮತ್ತೊಮ್ಮೆ ಹುಟ್ಟಿಬರಲಿ ಎಂದು ಆಶಿಸೋಣವೇ?

ಚಿತ್ರ : ಆಕಸ್ಮಿಕ; ಕೃಪೆ : YouTube

ಲೇಖಕರ ಕಿರುಪರಿಚಯ
ಡಾ. ಎಚ್. ಆರ್. ಜಗದೀಶ್

ಕರ್ನಾಟಕ ಸರ್ಕಾರದ ಪಶುಪಾಲನಾ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿರುವ ಇವರು, ಪ್ರಸ್ತುತ ಮೈಸೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉತ್ತಮ ಗಾಯಕರಾಗಿರುವ ಇವರ ಇತರೆ ನೆಚ್ಚಿನ ಹವ್ಯಾಸಗಳೆಂದರೆ ಬರಹ, ಪುಸ್ತಕ ಓದುವುದು, ಛಾಯಾಗ್ರಹಣ, ಇತ್ಯಾದಿ.

ಕನ್ನಡದ ಬಗ್ಗೆ ವಿಶೇಷ ಒಲವುಳ್ಳ ಇವರು ಆಗಾಗ ಆಕಾಶವಾಣಿಯಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ.

Blog  |  Facebook  |  Twitter

5 ಕಾಮೆಂಟ್‌ಗಳು:

 1. Hridayantaraladinda horahommida Dr.Raj ravarige Nudinamanada bhavalahariyu mahitipurnavagide. Antarangada alapadondige moodibanda ee lekhanavu kavyavada salugalugalaste anuranisuva jeevantikeya salugalagive...!!!!!

  ಪ್ರತ್ಯುತ್ತರಅಳಿಸಿ
 2. ಯಾರ ಹೋಲಿಕೆಗೂ ಸಾಟಿಯಿಲ್ಲದ ಡಾ|| ರಾಜ್ ರವರ ನೆನಪುಗಳ ಲೇಖನ ಉತ್ತಮವಾಗಿದೆ

  ಪ್ರತ್ಯುತ್ತರಅಳಿಸಿ
 3. ಅಣ್ಣಾವ್ರು ಅಂದ್ರೆ ಒಂದು ಸಮುದ್ರ ಇದ್ದ ಹಾಗೆ.ಅವ್ರ ಬಗ್ಗೆ ಬರೆಯೋಕೆ ಎಷ್ಟು ಪುಟಗಳಾದ್ರೂ ಸಾಲದು. ಒಂದೆರಡು ಪುಟಗಳಲ್ಲಿಯೇ ಆ ಅಸಮಾನ ವ್ಯಕ್ತಿ ಬಗ್ಗೆ ಚೊಕ್ಕಟವಾಗಿ ಬಹುತೇಕ ಎಲ್ಲಾ ಆಯಾಮಗಳನ್ನೊಳಗೊಂಡಂತೆ ಯಶಸ್ವಿಯಾಗಿ ಬರೆದಿರುವ ಡಾ. ಜನಗದೀಶ್ ರವರಿಗೆ ಧನ್ಯವಾದಗಳು.
  ಹಾಗೇ ವೀರ ಕನ್ನಡಿಗ ದೊರೆ ಮಯೂರನಾಗಿ ಅಣ್ಣಾವ್ರನ್ನು ಕಣ್ತುಂಬಿಕೊಳ್ಳೋದಕ್ಕೆ ಇನ್ನೊಮ್ಮೆ ಅವಕಾಶ ಮಾಡಿಕೊಟ್ಟಿದ್ದಕ್ಕೂ ವಂದನೆಗಳು.

  ಪ್ರತ್ಯುತ್ತರಅಳಿಸಿ
 4. "ರಾಜಕುಮಾರನಿಗೆ ರಾಜಕುಮಾರನೇ ಸಾಟಿ" ಎಂಬ೦ತೆ "ಅಭಿಮಾನಿ ದೇವರುಗಳಿಗೆ" ಅಣ್ಣಾವ್ರು ನೀಡಿದ ಅಪಾರ ಕಾಣಿಕೆಗಳನ್ನು ಒಂದು ಲೇಖನದಲ್ಲಿ ವಿವರಿಸುವುದು ಕಠಿನವಾದ ಕೆಲಸ. ಆದರೂ ಲೇಖಕರು ತಮ್ಮ ಪ್ರಯತ್ನದಲ್ಲಿ ಸಫಲರಾಗಿದ್ದಾರೆ. ಲೇಖನ ತುಂಬ ಚೆನ್ನಾಗಿ ಮೂಡಿಬಂದಿದೆ.ಅಣ್ಣಾವ್ರು ಸಾರಿದಂತೆ "ಮು೦ದಿನ ನನ್ನ ಜನ್ಮ ಬರೆದಿಟ್ಟನಂತೆ ಬೃಹ್ಮ ಇಲ್ಲಿಯೇ, ಇಲ್ಲಿಯೇ ಎಂದಿಗೂ ನಾನಿಲ್ಲಿಯೇ" ಎಂಬ ಭಾವನೆ ಪ್ರತಿಯೊಬ್ಬ ಕನ್ನಡಿಗನಲ್ಲಿ ಮೂಡಿ ಬರಲಿ ಎ೦ಬುವುದೇ ನನ್ನ ಆಸೆ. ಸೈಫುಲ್ಲಾ ಖಾಲಿದ್ ಸಿದ್ದಿಖಿ, ಮೈಸೂರು.

  ಪ್ರತ್ಯುತ್ತರಅಳಿಸಿ