ಗುರುವಾರ, ನವೆಂಬರ್ 28, 2013

ಬೊಂಬೆಯ ಸೀರೆ

ಒಂದು ಪ್ರಶ್ನೆ ಕೇಳ್ತೀನಿ, ಅದಕ್ಕೆ ನಿಮ್ಮಿಂದ ಪ್ರಾಮಾಣಿಕ ಉತ್ತರ ಬರಬೇಕು, ನಾನು ಖಂಡಿತವಾಗೂ ಯಾರಿಗೂ ಹೇಳಲ್ಲ. "ನೀವು ನಿಮ್ಮ ಹೆಂಡತಿಯು (ನಿಮಗೆ ಮದುವೆಯಾಗಿದ್ದಲ್ಲಿ) ಸೀರೆ ಕೊಳ್ಳಬೇಕಾದಾಗ, ಅವರು ಸೀರೆ ಆರಿಸಲು ಅವರ ಸಹಾಯಕ್ಕಾಗಿ ಅವರ ಜೊತೆಗೆ ಹೋಗುತ್ತೀರಾ?" ಉತ್ತರ ಮಾತ್ರ ಪ್ರಾಮಾಣಿಕವಾಗಿರಬೇಕು ಮಾರಾಯ್ರೆ. ನಿಮ್ಮ ಪರಿಸ್ಥಿತಿ ಹೇಗೋ ಏನೋ ಗೊತ್ತಿಲ್ಲ, ಆದರೆ ನನ್ನ ಹೆಂಡತಿಯಂತೂ, ಆಕೆ ಸೀರೆ ಕೊಳ್ಳಬೇಕಾದಾಗಲೆಲ್ಲಾ, ನಾನು ಒಲ್ಲೆನೆಂದರೂ ಬೇಡಿಕೊಂಡರೂ ಬಿಡದೆ ಕರೆದೊಯ್ಯುತ್ತಾಳೆ.

"ಇದೇನೇ ಸೀತಾ, ನನಗೆ ನನ್ನ ಪ್ಯಾಂಟಿನ ಬಟ್ಟೆ ಆರಿಸುವುದೇ ತಿಳಿಯೋದಿಲ್ಲ, ನಿನ್ನ ಸೀರೆ ಸೆಲೆಕ್ಷನ್ನಿಗೆ ನನ್ನ ಯಾಕೆ ಪೀಡಿಸ್ತೀಯಾ? ಹೇಗೂ ನಿಮ್ಮಮ್ಮನ ಮನೆ ಹತ್ತಿರಾನೆ ಇದೆ, ಅವರನ್ನ ಕರೆದುಕೊಂಡು ಹೋಗು, ಇಲ್ಲವಾದರೆ ನಿನ್ನ ತಂಗೀನ ಕರೆದುಕೊಂಡು ಹೋಗು, ಅವಳು ತುಂಬಾ ಚೆನ್ನಾಗಿ ಸೆಲೆಕ್ಷನ್ ಮಾಡ್ತಾಳೆ. ಅದೂ ಆಗದಿದ್ದರೆ, ಆ ನಿನ್ನ ಸ್ನೇಹಿತೆ ಮಿಟಕಲಾಡಿ ಮೀನಾಕ್ಷಿನಾದ್ರೂ ಕರೆದುಕೊಂಡು ಹೋಗು, ಅವಳು ಖಂಡಿತಾ ಆ ಸೀರೆ ಅಂಗಡಿ ಮಾಲಿಕನನ್ನೇ ತನ್ನ ಮಾತಿನಿಂದ ಮರುಳು ಮಾಡಿ ಬಾಯಿ ಮುಚ್ಚಿಸಿ, ನಿನಗೆ ಕಡಿಮೆ ಬೆಲೇಲೆ ಸೀರೆ ಕೊಡಿಸ್ತಾಳೆ. ಅವರನ್ನೆಲ್ಲ ಬಿಟ್ಟು ನನ್ನನ್ನ್ಯಾಕೆ ಗೋಳು ಹುಯ್ಕೊತ್ತೀಯಾ?" ಎಂದು ಅಂಗಲಾಚಿದರೂ ನನ್ನನ್ನು ಬಿಡುವುದಿಲ್ಲ. ಅದಕ್ಕೆ ನನಗೆ ತಿಳಿದಿರುವ ಕಾರಣಾನೂ ಹೇಳಿಬಿಡ್ತೀನಿ, ನನ್ನ ಹೆಂಡತಿಗೆ ಹೇಳೋಲ್ಲ ಎಂದರೆ. ಅಲ್ಲ, ಒಂದು ಸಾರಿನೋ, ಎರಡು ಸಾರಿನೋ ಆದರೆ ಅವರ್ಯಾರಾದರೂ ಬಂದಾರು, ಇವಳಿಗೆ ಕಂಪನಿ ಕೊಟ್ಟಾರು. ಈಕೆ ಸೀರೆ ಕೊಳ್ಳಬೇಕಾದಾಗಲೆಲ್ಲಾ ಈಕೆ ಹಿಂದೆ ಬರೋದಿಕ್ಕೆ, ಅವರೇನು ಈಕೆಯನ್ನು ಕಟ್ಟಿಕೊಂಡ ಗಂಡನೇ? ಅಲ್ಲದೇ ಮತ್ತೊಬ್ಬ ಹೆಂಗಸನ್ನು ಕರೆದುಕೊಂಡು ಹೋದರೆ, ಅಲ್ಲಿಗೆ ಮುಗೀತೂ ಸೀರೆ ಸೆಲೆಕ್ಷನ್ನು! ಹತ್ತು ಅಂಗಡಿ ಸುತ್ತಿದರೂ, ಈಕೆಗೆ ಒಪ್ಪಿಗೆಯಾದ ಸೀರೆಗೆ ಅವಳೇನೋ ಕೊಂಕು ಆಡಿಬಿಡುತ್ತಾಳೆ. ಅವಳು ಒಪ್ಪಿದ್ದನ್ನು ಈಕೆ ಹೇಗೆ ಒಪ್ಪಿಯಾಳು? ಅವಳ ಸೆಲೆಕ್ಷನ್ ಒಪ್ಪಿಕೊಳ್ಳೋಕೆ ಈಕೆಗೇನು ಸ್ವಂತ ಬುದ್ಧಿಯಿಲ್ಲವೇ? ಇನ್ನು ಇಬ್ಬರೂ ಒಂದೇ ಸೀರೇನ ಒಪ್ಪೋ ಮಾತು ದೂರಾನೇ ಉಳಿಯಿತು. ಹಾಗೂ ಏನಾದರೂ ದುರದೃಷ್ಟವಶಾತ್ ಇಬ್ಬರೂ ಒಪ್ಪಿದರೆ, ಇವರು ಕೇಳೋ ಬೆಲೆಗೆ ಆ ಅಂಗಡಿಯವನು ಕೊಡೋಕೆ ಒಪ್ಪಬೇಕಲ್ಲ! ಹೀಗಾಗಿ ಅರ್ಧ ದಿನವೆಲ್ಲಾ ಅಲೆದಾಡಿ. ಎರಡು ಡಜನ್ ಅಂಗಡಿ ಅಲೆದು, ಹತ್ತು ಡಜನ್ ಸೀರೆಗಳನ್ನು ನೋಡಿದರೂ ಒಂದು ಸೀರೆಯೂ ಆಯ್ಕೆಯಾಗುವುದಿಲ್ಲ. ಬೇರೆಯವರು ಬಿಟ್ಟ ಕೆಲಸ ಬಿಟ್ಟು ಈಕೆಯೊಂದಿಗೆ ಈಕೆಗೆ ಬೇಕಾದಾಗಲೆಲ್ಲಾ ಕಂಪೆನಿ ಕೊಡೋಕೆ ಅವರೇನು ಅಷ್ಟೊಂದು ಪುರುಸೊತ್ತಾಗಿರ್ತಾರಾ?

ಇಷ್ಟೆಲ್ಲಾ ತೊಂದರೆ ತಪ್ಪಿ, ಆಕೆ ಒಪ್ಪಿದ್ದಕ್ಕೆ ತಾನೂ ಗೋಣು ಆಡಿಸಿ, ಆಕೆಯ ಆಯ್ಕೆಗೆ ಮೆಚ್ಚಿಗೆ ತೋರಿಸಿ, ಆಕೆ ಚೌಕಾಶಿ ಮಾಡುವಾಗ ಎತ್ತಲೋ ನೋಡುವಂತೆ ನಟಿಸಿ, ಅವರಿಬ್ಬರೂ ಒಪ್ಪಿದ ಬೆಲೆಯನ್ನು ತೆತ್ತು, ಬಿಡಿಸಿಕೊಂಡು ಬರುವಂತಹ ಸ್ನೇಹಿತರೋ, ಬಂಧುಗಳೋ, ಗಂಡನಲ್ಲದೇ ಬೇರಾರಿದ್ದಾರು ಹೇಳಿ. ಆದುದರಿಂದ ಬಹಳಷ್ಟು ಜನ ಹೆಂಗಸರ ಗಂಡಂದಿರಂತೆ ನಾನೂ ಆಗಾಗ ಬಲಿಪಶುವಾಗುತ್ತೇನೆ.

ಒಮ್ಮೆ ಸೀತಾಳ ಸೀರೆ ಸೆಲೆಕ್ಷನ್ನಿಗೆ ಕಂಪೆನಿ ಕೊಡುವ ಸಲುವಾಗಿ ಹೋಗಿದ್ದಾಗ ಒಂದು ಅಂಗಡಿಯ ಷೋ ಕೇಸಿನಲ್ಲಿದ್ದ ಬೊಂಬೆಗೆ ಉಡಿಸಿದ್ದ ಸೀರೆ ಇವಳಿಗೆ ಬಹುವಾಗಿ ಮೆಚ್ಚಿಗೆಯಾಗಿಬಿಟ್ಟಿತ್ತು. "ನೋಡ್ರೀ, ಆ ಬೊಂಬೆಗೆ ಉಡಿಸಿರೋ ಸೀರೆ ಎಷ್ಟು ಚೆನ್ನಾಗಿದೆ, ಆ ಕಲರ್ರೂ, ಆ ಬಾರ್ಡರ್ರೂ, ಆ ಡಿಸೈನು, ಎಲ್ಲಾ ಎಷ್ಟು ಚೆನ್ನಾಗಿದೆ ಆಲ್ವಾ?" ಎಂದು ಎತ್ತಲೋ ನೋಡುತ್ತಿದ್ದ ನನ್ನನ್ನು ತಿವಿದು ಕೇಳಿದಳು. ಆಗ ನಾನೇನು ಹೇಳಬಹುದು. "ಅಮ್ಮಾ ತಾಯೀ, ಆ ಮೈಮಾಟದ, ಆ ಗೌರವರ್ಣದ ಬೊಂಬೆಗೆ ಯಾವ ಸೀರೆ ಉಡಿಸಿದರೂ ಚೆನ್ನಾಗಿ ಕಾಣಿಸುತ್ತೆ. ಅದು ಎಷ್ಟೆಂದರೂ ಬೊಂಬೆ. ಆ ಸೀರೆ ನೀನು ಉಟ್ಟರೆ ಚೆನ್ನಾಗಿರುವುದೇ ಯೋಚಿಸು. ಸೀರೆಯ ಬಣ್ಣ, ಡಿಸೈನಿಗಿಂತ ಉಡುವವರ ಬಣ್ಣ, ಮೈಮಾಟ ಮುಖ್ಯ. ಆದುದರಿಂದ ಅದು ನಿನಗೆ ಅಷ್ಟೇನೂ ಚೆನ್ನಾಗಿ ಕಾಣಿಸದು" ಎಂದು ಹೇಳೋಕ್ಕಾಗುತ್ತ್ಯೇ? ಅಲ್ಲ, ಎಲ್ಲ ಹೆಂಗಸರು ಜಯಪ್ರದ, ಹೇಮಾಮಾಲಿನಿಯರಂತೆ ಇರೋದಿಕ್ಕಾಗುತ್ತ್ಯೇ? ಅಥವಾ ಎಲ್ಲಾ ಗಂಡಸರೂ ಧರ್ಮೇಂದ್ರ, ರಾಜೇಶ ಖನ್ನಾರಂತೆ ಇರಲು ಸಾಧ್ಯವೇ? ಅಲ್ಲದೆ ಪಾಪ, ಎಲ್ಲ ಗೃಹಿಣಿಯರೂ ಅವರಂತೆ ಬಾಹ್ಯ ಸೌಂದರ್ಯಕ್ಕಾಗಿ ಕಳೆಯಲು ಅವರಲ್ಲಿ ಸಮಯವಾದರೂ ಎಲ್ಲಿ? ಗಂಡ, ಮಕ್ಕಳ ಸಂಸಾರ ತಾಪತ್ರಯದಲ್ಲಿ ಒಂದರ್ಧ ಗಂಟೆ ಸಹ ಕನ್ನಡಿ ಮುಂದೆ ಕಳೆಯಲು ಸಾಧ್ಯವಾಗುವುದಿಲ್ಲ. ಅಥವಾ ಸಿನಿಮಾ ತಾರೆಯರಂತೆ, ಮನೆಗೆಲಸ, ಅಡುಗೆ ಮಾಡಿದರೆ ತಮ್ಮ ಉಗುರಿನ ಸೌಂದರ್ಯ, ಕೇಶ ಸೌಂದರ್ಯ ಹಾಳಾಗುವುದೆಂದು ಸುಮ್ಮನೆ ಕೈಕಟ್ಟಿ ಕುಳಿತರಾದೀತೇ? ಹಾಗಾದರೆ ಗಂಡ, ಮಕ್ಕಳು ಊಟಕ್ಕೆ ಏನು ಮಾಡಬೇಕು? ಆದರೆ ನನ್ನ ವಾದ ಏನೆಂದರೆ ಕೇವಲ ಕೊಳ್ಳುವ ಸೀರೆ ಚೆನ್ನಾಗಿದ್ದರೆ ಪ್ರಯೋಜನವಿಲ್ಲ; ಆ ಸೀರೆ ಉಡುವುದರಿಂದ ಉಡುವವರ ಸೌಂದರ್ಯ ಹೆಚ್ಚುತ್ತದೆಯೇ ಎನ್ನುವುದು ಮುಖ್ಯ. ಅವರ ಮೈಬಣ್ಣ, ಆಕಾರಕ್ಕೆ ತಕ್ಕಂತೆ ಆರಿಸಿದರೆ, ಅದರಿಂದ ಅವರೂ ಚೆನ್ನಾಗಿ ಕಾಣಬಲ್ಲರು. ಗಂಡಸರೂ ಅಷ್ಟೇ, ಸಾಧಾರಣ ಮೈಬಣ್ಣವುಳ್ಳವರು ದಟ್ಟವರ್ಣದ ಉಡುಪುಗಳನ್ನು ಧರಿಸಿದರೆ ಮತ್ತಷ್ಟು ಕೆಟ್ಟದಾಗಿ ಕಾಣುತ್ತಾರೆ. ಕೋಲಿನಂತೆ ಸಣ್ಣಗೆ, ಆರಡಿಗಳಷ್ಟು ಎತ್ತರವಿದ್ದು, ಒಂಟೆಯ ಕತ್ತಿನಂತಹ ಗೋಣಿದ್ದು, ಅಂತಹವರು ಸೂಟ್ ಧರಿಸಿದರೆ ಅಥವಾ ಕುಬ್ಜಾಕಾರವಿದ್ದು, ಡೊಳ್ಳಿನಂತಹ ಬೊಜ್ಜಿದ್ದವರು ಸೂಟ್ ಧರಿಸಿದರೆ ಚೆನ್ನಾಗಿ ಕಾಣುತ್ತಾರೆಯೇ? ಖಂಡಿತ ಇಲ್ಲ. ಆದರೆ ದೇಹದ ಆಕಾರಕ್ಕೆ ತಕ್ಕಂತೆ ಉಡುಪು ಧರಿಸುವುದರಿಂದ ಕೆಟ್ಟದಾಗಿ ಕಾಣಿಸಿಕೊಳ್ಳುವುದನ್ನು ತಪ್ಪಿಸಿಬಹುದೆಂದು ನನ್ನ ವಾದ. ಒಳ್ಳೆಯ ಆಕಾರ, ವರ್ಣದವರು, ಗಂಡಸರಾಗಿರಲಿ ಅಥವಾ ಹೆಂಗಸರಾಗಿರಲಿ, ಯಾವುದೇ ರೀತಿಯ ಉಡುಪು ಧರಿಸಿದರೂ ಚೆನ್ನಾಗಿಯೇ ಕಾಣುತ್ತಾರೆ. ಅಥವಾ ಅಂಥಹವರು ಧರಿಸುವುದರಿಂದ ಆ ಉಡುಪೇ ಚೆನ್ನಾಗಿ ಕಾಣುತ್ತದೆ. ಅದಕ್ಕೆ ಅಲ್ಲವೇ ಒಳ್ಳೆಯ ದೇಹಾಕಾರ, ವರ್ಣದವರನ್ನು ತಮ್ಮ ಮಿಲ್ಲಿನ ಬಟ್ಟೆಗಳನ್ನು ಜನಪ್ರಿಯಗೊಳಿಸಲು ಬಳಸಿಕೊಳ್ಳುವುದು. ಅಯ್ಯೋ, ನೋಡಿ ಎಲ್ಲಿಂದ ಎಲ್ಲಿಗೋ ಹೋಯಿತು ವಿಷಯ. ಇರಲಿ. ಆದರೆ ಗಂಡಂದಿರ ವಾದ, ಉಪದೇಶವನ್ನು ಹೆಂಡತಿಯರು ಒಪ್ಪುವರೇ? ಅಥವಾ ಆ ಅಂಗಡಿಯಲ್ಲಿ ಆ ಬೊಂಬೆ ಚೆನ್ನಾಗಿದೆ, ಅರವಿಂದ ವದನ, ಕಮಲ ನಯನ, ಸಿಂಹಕಟಿ, ದಂತ ವರ್ಣ, ತುಂಬು ತೋಳು... ಎಂದೆಲ್ಲಾ ಆ ಬೊಂಬೆಯ ಅಂಗಾಂಗವನ್ನು ವರ್ಣಿಸಿ, ಮೇಲೆ ತಿಳಿಸಿದ ವಿಷಯವನ್ನೆಲ್ಲಾ ತಿಳಿಸಿ ಹೇಳಲಾದೀತೇ? ಅಥವಾ ಹೇಳಿ, ಹೆಂಡತಿಯಿಂದ ಮುಖ ಪ್ರಕ್ಷಾಳನ ಮಾಡಿಸಿಕೊಳ್ಳಲಾದೀತೇ? ಅದೂ ಅಂಗಡಿಯಲ್ಲಿ, ಅಷ್ಟು ಜನರ ಮುಂದೆ?

ಇದೆಲ್ಲದರಿಂದ ಪಾರಾಗಬೇಕೆಂದು "ನೋಡು ಮಾರಾಯ್ತೀ, ನಿನಗೆ ಯಾವುದು ಇಷ್ಟಾನೋ ಅದನ್ನೇ ತಗೋ, ಖಂಡಿತಾ ಅದು ನನಗೂ ಇಷ್ಟ ಆಗುತ್ತೆ. ನಾನು ಹೊರಗೇ ನಿಂತಿರ್ತೀನಿ, ಒಳಗೆ ಬಹಳ ಸೆಖೆ, ಇರೋಕಾಗೋಲ್ಲ" ಎಂದೆ. "ಒಹೋ, ಒಳಗೆ ಬಂದು ಹೆಂಡತಿಗೆ ಸಹಾಯ ಮಾಡುವುದಕ್ಕಿಂತ, ಹೊರಗೆ ನಿಂತು ಹೋಗಿ ಬರುವ ಹೆಂಗಸರ ಸೌಂದರ್ಯ ಆರಾಧಿಸಬೇಕೇನೋ? ಸುಮ್ಮನೆ ಒಳಗೆ ಬನ್ರೀ ಸಾಕು, ನಾನೊಬ್ಬಳೇ ಒಳಗೆ ಹೋಗೋದಾದರೆ ನಿಮ್ಮನ್ನ ಯಾಕೆ ಕರ್ಕೊಂಡು ಬರಬೇಕಾಗಿತ್ತು, ಬೆಕ್ಕನ್ನ ಕಂಕುಳಲ್ಲಿ ಇಟ್ಟುಕೊಂಡು ಬಂದ ಹಾಗೆ. ನಾನೊಬ್ಬಳೇ ಒಳಗೆ ಹೋದ್ರೆ ಅಂಗಡಿಯೋನಿಂದ ಹಿಡಿದು ಎಲ್ಲರೂ ಏನಂದ್ಕೋತಾರೆ? ಬನ್ನಿ, ಬನ್ನಿ, ಸಾಕು" ಎಂದು ಮುಖದಲ್ಲಿ ನೀರಿಳಿಸಿ, ಹಿಂಬಾಲಿಸುತ್ತಾನೆಂಬ ಧೈರ್ಯದಿಂದ ತಾನು ಅಂಗಡಿಯೊಳಗೆ ನಡೆದಳು. ನಂತರ ನಾನೂ ಒಳಗೆ ಹೋದೆನೆಂದು ಬೇರೆ ಹೇಳಬೇಕಾಗಿಲ್ಲ, ಅಲ್ಲವೇ?

ಸರಿ, ಒಳಗೆ ಹೋದ ಮೇಲೆ, ಅಲ್ಲಿದ್ದ ಹುಡುಗನಿಗೆ, ಸೀತಾ, ಆ ಷೋ ಕೇಸಿನಲ್ಲಿದ್ದ ಬೊಂಬೆಗೆ ಉಡಿಸಿದ್ದ ಸೀರೆಯೇ ಬೇಕೆಂದಳು. ಅಲ್ಲಿದ್ದ ಆ ಹುಡುಗ, ಅಂಗಡಿಯ ಮಾಲಿಕನ ಮಗ, ಅದೇ ರೀತಿಯ ಸೀರೆಯನ್ನೇನೋ ತಂದು ಮುಂದೆ ಹರಡಿದ. ಆದರೆ ಅವನಿಗೂ ನನಗೆ ಅನಿಸಿದಂತೆ ಅನಿಸಿರಬೇಕು. "ಮೇಡಂ, ನಿಮಗೆ ಈ ಡಾರ್ಕ್ ಕಲರ್ ಸೀರೆಗಿಂತ ಅದೇ ಡಿಸೈನು, ಬಾರ್ಡರು ಇರೋ ಲೈಟ್ ಕಲರ್ ಸೀರೆ ಚೆನ್ನಾಗಿ ಕಾಣಬಹುದು, ತೋರಿಸ್ತೀನಿ. ನೋಡಿ, ಅದು ನಿಮಗೆ ಖಂಡಿತಾ ಚೆನ್ನಾಗಿ ಕಾಣುತ್ತೆ, ಅಲ್ವೇ ಸಾರ್?" ಎಂದು ನನ್ನನ್ನು ನೋಡಿ ಕೇಳಿದ. ನನಗೆ ಮನದೊಳಗೆ "ಶಭಾಷ್, ನಾನು ಹೇಳಲಾಗದ್ದನ್ನು ನೀನಾದರೂ ಹೇಳಿದೆಯಲ್ಲಾ" ಎನಿಸಿದರೂ ಮುಂದೆ ಏನಾಗುವುದೋ ಎಂದು ಕಳವಳವಾಯಿತು. ಯಾವುದೇ ಹೆಣ್ಣಿಗೆ ಈ ಸೀರೆ ನಿಮಗೆ ಚೆನ್ನಾಗಿ ಕಾಣೋದಿಲ್ಲ ಎಂದು ಯಾರಾದರೂ ನೇರವಾಗಿ ಹೇಳಿದರೆ ಹೇಗಿರಬಹುದು? ಸರಿ, ಸೀತಾ ಕೆಣಕಿದ ಸಿಂಹಿಣಿಯಾದಳು. "ನಮಗೆ ಯಾವುದು ಚೆನ್ನಾಗಿ ಕಾಣುತ್ತೆ ಅಂತ ನಮಗೆ ಗೊತ್ತಾಗತ್ತೆ, ನೀನು ಸುಮ್ಮನೆ ನಾವು ಕೇಳಿದ ಸೀರೆ ತೋರಿಸಪ್ಪ ಸಾಕು" ಎಂದು ತರಾಟೆಗೆ ತೆಗೆದುಕೊಂಡಳು. ಅಷ್ಟರಲ್ಲಿ ಆ ಹುಡುಗನ ಅಪ್ಪನಿಗೆ, ಅಂದರೆ ಅಂಗಡಿ ಮಾಲಿಕನಿಗೆ ಸಂದರ್ಭದ ಅರಿವಾಯಿತು. ತಕ್ಷಣ ಅವನು ಮಗನ ರಕ್ಷಣೆಗೆ ಧಾವಿಸಿದ. "ಲೇ, ನೀನು ಗಲ್ಲಾ ಮೇಲೆ ಕೂತ್ಕೋ ಹೋಗು, ನಾನು ಅಮ್ಮಾವ್ರಿಗೆ ಸೀರೆ ತೋರಿಸ್ತೀನಿ," ಎಂದು ಮಗನನ್ನು ಕಳುಹಿಸಿ, ತಾನೇ ಆ ಬೊಂಬೆಗೆ ಉಡಿಸಿದ್ದ ಸೀರೆಯನ್ನೇ ಮತ್ತೆ ತೆಗೆದು ಮುಂದೆ ಹರಡಿದ. "ಅವನು ಪಡ್ಡೆಹುಡ್ಗ ತಾಯಿ, ಅವನ ಮಾತಿಗೆ ನೀವು ಬೇಜಾರಾಗ್ಬೇಡಿ, ನೀವು ಆರಿಸಿ, ಈ ಬಣ್ಣ, ಈ ಡಿಸೈನು, ಹೊಸದು ಅಮ್ಮಾ, ಇದೆ ಡಿಸೈನು, ಕಲರ್ರೂ ತುಂಬಾ ಓಡ್ತಾ ಇರೋದು. ಒಂದು ವಾರದಿಂದ ಐವತ್ತು ಸೀರೆ ಮಾರಿದ್ದೀನಿ, ಖಂಡಿತಾ ನಿಮಗೆ ಚೆನ್ನಾಗಿ ಕಾಣುತ್ತೆ, ತಗೊಂಡು ಹೋಗಿ ಅಮ್ಮಾ, ಲೇ ಮೇಲಿನ ಲೈಟುಗಳನ್ನೆಲ್ಲಾ ಹಾಕೋ, ಅಮ್ಮಾವ್ರಿಗೆ ತೋರಿಸೋಣ" ಎಂದು ಮಗ ಮಾಡಿದ ತಪ್ಪಿಗೆ ತಾನು ಕ್ಷಮೆ ಯಾಚಿಸಿದ. ಮರುಳು ಮಾಡುವ ಮಾರವಾಡಿ ಬುದ್ಧಿಗೆ ಸೀತಳು ಸ್ವಲ್ಪ ಶಾಂತಳಾದಳು.

ಸೀತಾಳಿಗೆ ಅದೇ ಸೀರೆಯನ್ನೇ ಕೊಳ್ಳಬೇಕೆಂದು ರೋಷ ಬಂದುಬಿಟ್ಟಿತ್ತು. ಆ ದಿನ ಹೆಚ್ಚು ಚೌಕಾಶಿ ಸಹ ಮಾಡದೆ, ಆ ಸೀರೆಯನ್ನು ಪ್ಯಾಕ್ ಮಾಡಿಸಿ ಕೈಲಿ ಹಿಡಿದುಕೊಂಡು ಮನೆಗೆ ಹೊರಟೇಬಿಟ್ಟಳು. ನಾನೂ ದುಡ್ಡನ್ನು ತೆತ್ತು ರಶೀದಿ ಹಿಡಿದು ಅವಳತ್ತ ಧಾವಿಸಿದೆ. ದಾರಿಯುದ್ದಕ್ಕೂ ಆ ಹುಡುಗನ ಜನ್ಮ ಜಾಲಾಡುವುದನ್ನು ಮರೆಯಲಿಲ್ಲ. ನಾನು ಹೂಂಗುಡುತ್ತಾ, ಯಾವ ಶಬ್ದವನ್ನೂ ಕಿವಿಗೆ ಹಾಕಿಕೊಳ್ಳದೇ ನಡೆದಿದ್ದೆ. ಮನೆಗೆ ಹಿಂದಿರುಗಿದಾಗ, ಮನೆಯಲ್ಲಿ ಸೀತಾಳ ತಂಗಿ ಬಂದಿದ್ದಳು, ಅವಳಿಗೆ ತೋರಿಸಿದ್ದೂ ಆಯಿತು. ಅವಳೂ ಸೀರೆ ಚೆನ್ನಾಗಿದೆ (ಇದನ್ನು ನೀನು ಉಟ್ಟರೆ ನೀನು ಚೆನ್ನಾಗಿ ಕಾಣುವೆ ಎಂದಲ್ಲ) ಎಂದು ಸರ್ಟಿಫಿಕೇಟ್ ಕೊಟ್ಟೂ ಆಯಿತು. ಆದರೆ ಸೀತಾಳ ಮಗ (ಅರ್ಥಾತ್ ನನ್ನ ಮಗನೂ ಕೂಡಾ) "ಈ ಕಲರ್ ನಿನಗೆ ಅಷ್ಟಾಗಿ ಸರಿ ಹೋಗೋಲ್ಲ ಅಮ್ಮಾ, ಸ್ವಲ್ಪ ಲೈಟ್ ಕಲರ್ ಆಗಿದ್ರೆ ಚೆನ್ನಾಗಿರ್ತಿತ್ತು" ಎಂದು ಬಿಟ್ಟ. ನಾನು ಬೇಡವೆಂದು ಸನ್ನೆ ಮಾಡುತ್ತಿದ್ದುದನ್ನು ಗಮನಿಸಲೇ ಇಲ್ಲ. "ಥೂ ಈ ಹಾಳು ಗಂಡಸರಿಗೆ ತಮ್ಮ ಮನೆಯ ಹೆಂಗಸರನ್ನ ಬಿಟ್ಟು ಉಳಿದವರೆಲ್ಲರೂ ಚೆನ್ನಾಗಿ ಕಾಣಿಸ್ತಾರೆ. ಇವನೊಬ್ಬ ಸಾಲದಾಗಿದ್ದ ಅಮ್ಮನ್ನ ಆಡಿಕೊಳ್ಳೋಕೆ, ಹೋಗೋ ಸಾಕು, ಆಮೇಲೆ, ಮುಂದೆ ನಿನ್ನ ಹೆಂಡತಿಗೂ ಹೀಗೆ ಹೇಳು, ನಿನ್ನ ಕಿವಿ ಕಿತ್ತಿಡ್ತಾಳೆ. ಕತ್ತೆ ಭಡವಾ, ಇದೇನು ಇವತ್ತು ಫ್ರೆಂಡ್ಸ್ ಜೊತೆ ವಾಕಿಂಗ್ ಹೋಗಲಿಲ್ಲವಾ, ಅಥವಾ ಚಿಕ್ಕಮ್ಮ ಬಂದಳೆಂದು ಹೋಗದೇ ಉಳಿದೆಯಾ? ಹೋಗೋ ಸಾಕು" ಎಂದು ಪ್ರೀತಿಯಿಂದ ಗದರಿದಳು.

ಮುಂದೆ ಒಂದೆರಡು ಬಾರಿ ಆ ಸೀರೆ ಉಟ್ಟ ನಂತರ ನಮ್ಮ ಹೇಳಿಕೆಗಳು (ಅದರಲ್ಲೂ ತನ್ನ ಮುದ್ದಿನ ಮಗನೂ ಅದೇ ರೀತಿ ಹೇಳಿದ ಮಾತುಗಳು ಆಕೆಯ ಮನಸ್ಸಿಗೆ ಸೇರಿ) ಆಕೆಗೂ ಸರಿ ತೋರಿದವೇನೋ! ಅದನ್ನು ವಾರ್ಡ್ ರೋಬಿನಲ್ಲಿ ಭದ್ರವಾಗಿ ಇಟ್ಟಿದ್ದಾಳೆ, ಹೆಚ್ಚು ಬಳಸುವುದಿಲ್ಲ. ಅಯ್ಯೋ ನಾನೊಬ್ಬ, ಇಷ್ಟನ್ನೆಲ್ಲಾ ನಿಮ್ಮೆದುರು ಒದರಿದ್ದೇನಲ್ಲಾ? ಆದದ್ದಾಯಿತು, ಹೀಗೆಂದು ನನ್ನ ಸೀತಾಳಿಗೆ ಮಾತ್ರ ದಯವಿಟ್ಟು ತಿಳಿಸಬೇಡಿ, ಆಯಿತಾ?

ಲೇಖಕರ ಕಿರುಪರಿಚಯ
ಶ್ರೀ ಜೆ. ಆರ್. ನರಸಿಂಹಸ್ವಾಮಿ

ಪ್ರಸ್ತುತ ನಾಗಪುರದಲ್ಲಿನ ಭಾರತೀಯ ಅಂಚೆ ಕಚೇರಿಯಲ್ಲಿ ಹಿರಿಯ ಲೆಕ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು, ಭಾಷಾಂತರ ತಜ್ಞರೂ ಕೂಡ.

ಸಮಯ ಸಿಕ್ಕಾಗಲೆಲ್ಲ ಪುಸ್ತಕ ಪ್ರಪಂಚದೊಳಗೆ ಮುಳುಗಿ ಬಿಡುವ ಇವರಿಗೆ ಓದು ಅತ್ಯಂತ ನೆಚ್ಚಿನ ಹವ್ಯಾಸ. ಇವರ ಅನೇಕ ಬರವಣಿಗೆಗಳು ಪ್ರಸಿದ್ಧ ಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ