ಗುರುವಾರ, ನವೆಂಬರ್ 7, 2013

ಕರ್ನಾಟಕದ ಹೆಮ್ಮೆಯ ಶ್ವಾನತಳಿ - ಮುಧೋಳ

ಕರ್ನಾಟಕದ ಏಕೈಕ ನಾಯಿತಳಿ 'ಮುಧೋಳ' - ಇದು ಜಗತ್ಪ್ರಸಿದ್ಧ ಶ್ವಾನ ತಳಿಯಾಗಿದೆ. ನಮ್ಮ ಸಂಸ್ಕೃತಿ, ನಮ್ಮ ಪರಂಪರೆಯ ಪ್ರತೀಕವಾದ ಈ ತಳಿಯು ನಮ್ಮೆಲ್ಲರ ಹೆಮ್ಮೆಯಾಗಿದೆ.

ಶತ್ರುಗಳ ನೆಲೆಯನ್ನು ಮತ್ತು ಚಲನವಲನಗಳನ್ನು ಪತ್ತೆಹಚ್ಚುವ, ಸಾಧನ ಸಾಮಗ್ರಿಗಳನ್ನು ಕಾಯುವ, ಅತ್ಯಂತ ವೇಗವಾಗಿ ಓಡಿ, ಬೇಟೆಯಾಡುವ ತೀಕ್ಷ್ಣಬುದ್ಧಿಯ ನಾಯಿತಳಿ ಇದಾಗಿದೆ. ಇನ್ನೂ ಒಂದು ವಿಶೇಷವೆಂದರೆ ಅತ್ಯಂತ ಕಡಿಮೆ ಆಹಾರ ಸೇವಿಸಿ, ಬಹಳ ದಿವಸ ಬದುಕುವುದರಲ್ಲಿಯೂ ಇದು ಹೆಸರುವಾಸಿಯಾಗಿದೆ. ಹೀಗಾಗಿ ಯಾವುದೇ ಹವಾಮಾನಕ್ಕೆ ಹಾಗೂ ವಾತಾವರಣಕ್ಕೆ ಮತ್ತು ಎಲ್ಲ ಸ್ತರದ ಜನರಿಗೂ ಎಲ್ಲ ತರಹದ ಕಾರ್ಯಕ್ಕೂ ಸೂಕ್ತವಾದ ನಾಯಿಯಾಗಿದೆ.

ಮುಧೋಳ ನಾಯಿ ತಳಿಯ ಇತಿಹಾಸ ಬಹಳ ಆಸಕ್ತಿದಾಯಕವಾಗಿದೆ. ಮೊಗಲರು ಭಾರತಕ್ಕೆ ಬಂದಾಗ ಯುದ್ಧದಲ್ಲಿ ಬಳಸಿಕೊಳ್ಳಲು ತಮ್ಮೊಡನೆ ಮೊಟ್ಟ ಮೊದಲನೆಯ ಬಾರಿ ಈ ನಾಯಿಗಳನ್ನು ತಂದರು ಎಂದು ಪ್ರತೀತಿ ಇದೆ. ಮುಂದೆ ಔರಂಗಜೇಬನು ದಕ್ಷಿಣ ರಾಜ್ಯಗಳನ್ನು ಆಕ್ರಮಿಸಿದಾಗ, ತನ್ನ ಅಧೀನ ರಾಜರಿಗೆ ಈ ನಾಯಿಗಳನ್ನು ಪ್ರೀತಿಯ ಕಾಣಿಕೆಯಾಗಿ ಕೊಟ್ಟಿದ್ದನೆಂದೂ ಹೇಳುತ್ತಾರೆ. ಹೀಗೆ ಕರ್ನಾಟಕಕ್ಕೆ ಬಂದ ಈ ಬೇಟೆ ನಾಯಿಗಳನ್ನು ಆಗಿನ ವಿಜಾಪೂರದ ಮುಧೋಳ ಪ್ರಾಂತ್ಯದ ರಾಜರು ಪಾಲಿಸಿ, ಪೋಷಿಸಿ, ತಳಿ ಗುಣಗಳನ್ನು ಸಂರಕ್ಷಿಸಿ, ಅಭಿವೃದ್ಧಿಪಡಿಸಿದರು. ಇವರಲ್ಲಿ ಶ್ರೀಮಂತರಾಜಾ ಮಾಲೋಜಿರಾವ ಘೋರ್ಪಡೆಯವರು ಸ್ವತಃ ಶ್ವಾನಪ್ರೇಮಿಗಳಿದ್ದು, ಈ ಬೇಟೆನಾಯಿಗಳನ್ನು ಆಸಕ್ತಿವಹಿಸಿ ಅಭಿವೃದ್ಧಿಪಡಿಸಿ 'ಮುಧೋಳ ಬೇಟೆ ನಾಯಿ' ಎಂದು ಪ್ರಸಿದ್ಧಿ ಪಡೆಯಲು ಕಾರಣೀಭೂತರಾದರು ಎಂದು ಹೇಳಬಹುದು.

ದೇಶದ ಇತರೆ ಭಾಗಗಳಲ್ಲಿ ಈ ತಳಿಗಳ ಸಂತತಿ ಕ್ಷೀಣಿಸಿದ್ದರೂ ಕರ್ನಾಟಕದ ಬಾಗಲಕೋಟೆ, ವಿಜಾಪೂರ, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಮತ್ತು ಮಹಾರಾಷ್ಟ್ರದ ಕೊಲ್ಹಾಪೂರ ಮತ್ತು ಸಾಂಗ್ಲಿ ಜಿಲ್ಲೆಯ ಕೆಲವು ಶ್ವಾನಾಸಕ್ತರಲ್ಲಿ ಕಾಣಸಿಗುತ್ತವೆ. ಇತ್ತೀಚಿಗೆ ಅಂದರೆ 1994 ರಿಂದ ಈಚೆ ಬೆಂಗಳೂರಿನ 'ಮೈಸೂರು ಕೆನೆಲ್ ಕ್ಲಬ್', ವಿಜಾಪೂರದ 'ವಿಜಾಪೂರ ಕೆನೆಲ್ ಕ್ಲಬ್' ಹಾಗೂ ರಾಷ್ಟ್ರೀಯ ಸಂಸ್ಥೆಯಾದ 'ಕೆನೆಲ್ ಕ್ಲಬ್ ಆಫ್ ಇಂಡಿಯಾ'ದವರ ಸತತ ಪ್ರಯತ್ನದಿಂದ ಅಂತರ್ ರಾಷ್ತ್ರೀಯ ಮಾನ್ಯತೆಯನ್ನು ಪಡೆದಿದೆ.

ವಿಜಾಪೂರ ಜಿಲ್ಲಾ ಪಂಚಾಯತ್, ಬಾಗಲಕೋಟೆ ಜಿಲ್ಲಾ ಪಂಚಾಯತ್ ಮತ್ತು ಕರ್ನಾಟಕ ಸರಕಾರದ ಪಶು ಸಂಗೋಪನೆ ಇಲಾಖೆಯ ನಿರಂತರ ಪ್ರೋತ್ಸಾಹದಿಂದ ಮತ್ತು ಜನಪ್ರತಿನಿಧಿಗಳ ಆಸಕ್ತಿಯಿಂದ ಇವತ್ತು ರಾಜ್ಯದ ಹೆಮ್ಮೆಯ ತಳಿಯಾಗಿ ಜನ ಮಾನಸದಲ್ಲಿ ನೆಲೆಯೂರಿದೆ. ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಮುಧೋಳದ ಸಮೀಪ 'ಮುಧೋಳ ಬೇಟೆನಾಯಿ ತಳಿ ಸಂಶೋಧನಾ ಕೇಂದ್ರ'ವನ್ನು ಸ್ಥಾಪಿಸಿ, ತಳಿ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿದೆ. ಮುಧೋಳ ನಾಯಿ ಉಳಿಸಿ ಬೆಳೆಸುವಲ್ಲಿ  ಮುಧೋಳದ ಚಂದನಶಿವ ಕುಟುಂಬದ ಅವಿರತ ಶ್ವಾನ ಪ್ರೇಮ ಹಾಗೂ ಅವರ ಮನೆತನದ ಕೊಡುಗೆ ಕೂಡ ಉಲ್ಲೇಖನೀಯವಾದದ್ದು.

ಮುಧೋಳ ಬೇಟೆನಾಯಿಗಳ ಬಾಹ್ಯ ಲಕ್ಷಣಗಳು
ಬಾಹ್ಯ ನೋಟ: ಹೊರ ನೋಟಕ್ಕೆ ಮುಧೋಳ ಬೇಟೆನಾಯಿಗಳು ಪ್ರಮಾಣಬದ್ಧವಾಗಿ, ತೆಳ್ಳಗೆ ಉದ್ದಕ್ಕೆ ಇದ್ದು, ಅತ್ಯಂತ ಬಲಿಷ್ಠವಾದ ಸ್ನಾಯುಗಳನ್ನು ಹೊಂದಿರುತ್ತವೆ. ಓಟಕ್ಕೆ ಅನುಕೂಲವಾಗುವಂತೆ ನೀಳ ಕಾಲುಗಳು ಹಾಗೂ ದೈಹಿಕ ಅಂಗರಚನೆ ಇರುತ್ತದೆ.
ತಲೆ: ದೇಹದ ಹೋಲಿಕೆಯಲ್ಲಿ ತಲೆ ಸಣ್ಣದಿದ್ದು, ಉದ್ದ ಮತ್ತು ತೆಳುವಾಗಿರುತ್ತದೆ. ಎರಡು ಕಿವಿಗಳ ಅಂತರದಲ್ಲಿ ಮಾಧ್ಯಮವಾಗಿ ಅಗಲವಾದ ತಲೆಬುರುಡೆ ಇರುತ್ತದೆ.
ಬಾಯಿ: ಉದ್ದ, ಚೂಪಾದ, ಗಟ್ಟಿಯಾದ ಒಸಡುಗಳಿಂದ ಕೂಡಿದ ಬಾಯಿ ಇದೆ.
ಕಣ್ಣು: ತೀಕ್ಷ್ಣವಿದ್ದು ಸಾಮಾನ್ಯವಾಗಿ ಕಂದು ಬಣ್ಣ ಹೊಂದಿರುತ್ತದೆ.
ಕಿವಿ: ತೆಳು ಮಧ್ಯಮ ಗಾತ್ರದ ತ್ರಿಕೋಣ ಆಕಾರವಾಗಿದ್ದು ಸ್ವಲ್ಪ ಮೇಲೆ ಇರುತ್ತದೆ.
ಕುತ್ತಿಗೆ: ಬಲಿಷ್ಠವಾದ ಸ್ನಾಯುಗಳಿಂದ ಕೂಡಿದ ಉದ್ದವಾದ ಕುತ್ತಿಗೆ ಇರುತ್ತದೆ.
ದೇಹ: ಬಲಿಷ್ಠವಾದ ಸ್ನಾಯುಗಳಿಂದ ಕೂಡಿದ್ದು, ಎದೆಯ ಮುಂಭಾಗ ಉದ್ದ ಹಾಗೂ ಆಳವಾಗಿರುತ್ತದೆ. ಎದೆಯಗೂಡು ಈ ತಳಿಯ ವೈಶಿಷ್ಠತೆಯಾಗಿದ್ದು ಅಗಲವಾಗಿರುತ್ತದೆ. ಹೊಟ್ಟೆಯ ಭಾಗ ತೆಳುವಾಗಿದ್ದು, ಬೆನ್ನಿನ ಹಿಂದಿನ ಭಾಗ ಅಗಲವಾಗಿ ಇರುತ್ತದೆ. ಬೆನ್ನಿನ ಎಲುಬುಗಳು ಅಗಲವಾಗಿದ್ದು, ಸಾಧಾರಣವಾಗಿ ಬಾಗಿರುತ್ತವೆ.
ಕಾಲು ಹಾಗೂ ಪಾದ: ಮುಂಗಾಲು ನೇರ ಹಾಗೂ ಉದ್ದವಾಗಿ ಇರುತ್ತವೆ. ಪಾದಗಳು ಉದ್ದವಾಗಿ ಇದ್ದು, ಭಾರಿ ಗಟ್ಟಿಯಾದ ತಳಪಾದ ಹೊಂದಿರುತ್ತವೆ.
ಬಾಲ: ಉದ್ದ, ನೇರವಾದ ಹಾಗೂ ಮೂಲದಲ್ಲಿ ದಪ್ಪವಾಗಿ ಇದ್ದು, ತುದಿಯ ಕಡೆಗೆ ತೆಳುವಾಗುತ್ತ ಸ್ವಲ್ಪ ಬಾಗಿರುತ್ತದೆ.
ಮೇಲುಚರ್ಮ: ಮೇಲುಚರ್ಮ ಮೃದುವಾಗಿ, ಅತಿ ಸಣ್ಣ ಕೂದಲುಗಳಿಂದ ಕೂಡಿದ್ದು ನಯವಾಗಿ ಇರುತ್ತದೆ.
ಬಣ್ಣ: ಬಿಳಿ, ಕಪ್ಪು, ಕಂದು, ಬೂದು ಹಾಗೂ ಮಿಶ್ರ ಬಣ್ಣಗಳಿರುತ್ತವೆ.
ಎತ್ತರ: ಹೆಣ್ಣು 23 ರಿಂದ 25 ಇಂಚು, ಗಂಡು 26 ರಿಂದ 28 ಇಂಚು ಇರುತ್ತದೆ.
ತೂಕ: 22 ಕೆ.ಜಿಯಿಂದ 28 ಕೆ.ಜಿಗಳವರೆಗೆ ಇರುತ್ತದೆ.
ನಿಲ್ಲುವಿಕೆ ಹಾಗೂ ಓಡುವಿಕೆ: ಈ ತಳಿಯ ಓಡುವಿಕೆಯು ಅತಿ ವೈಶಿಷ್ಠತೆಯಿಂದ ಕೂಡಿದ್ದು, ಓಡುವುದಕ್ಕಿಂತ ಹಾರುತ್ತಿರುವ ಹಾಗೆ ಕಾಣುತ್ತದೆ.

ಉಪಸಂಹಾರ: ಇತ್ತೀಚೆಗೆ  ಮುಧೋಳ ಬೇಟೆನಾಯಿ ಬಹಳಷ್ಟು ಜನರಿಗೆ ಇಷ್ಟವಾಗ್ತಾ ಇದೆ. ಆದರೆ ಅದು ಒಳ್ಳೆಯ ಸಂಗಾತಿಯಾಗಿ, ಮುದ್ದು ನಾಯಿಯಾಗಿ ಸಾಕಲು ಯೋಗ್ಯವಿದ್ದರೂ ಸಾಕುವವರು ಅದರ ಅವಶ್ಯಕತೆಯಾದ ಉತ್ತಮ ಸ್ಥಳಾವಕಾಶವುಳ್ಳ ಪರಿಸರದ ಬಗ್ಗೆ ಗಮನಹರಿಸುವುದು ಅತ್ಯವಶ್ಯ. ಬಹುಮಹಡಿ ಕಟ್ಟಡಗಳಲ್ಲಿ ವಾಸಿಸುವವರಿಗೆ ಅಷ್ಟು ಸೂಕ್ತವಲ್ಲ. ಆದರೆ ಫಾರ್ಮಹೌಸಗಳಲ್ಲಿ ಇರುವವರು, ಎಸ್ಟೇಟ್‍ಗಳಲ್ಲಿ, ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಅದರಷ್ಟು ಒಳ್ಳೆಯ ಸಂಗಾತಿ ಮತ್ತು ರಕ್ಷಣಾಕವಚ ಬೇರೆಲ್ಲೂ ಇಲ್ಲ. ಅದರ ಗ್ರಹಣ ಶಕ್ತಿಯನ್ನು  ಪರಿಶೀಲಿಸಿ, ವಿದೇಶಿ ತಳಿಗಳ ಬದಲು ಮುಧೋಳ ಬೇಟೆನಾಯಿ ತಳಿಗಳನ್ನು ಪೋಲಿಸ್ ಇಲಾಖೆ, ಗುಪ್ತಚರ ಇಲಾಖೆ ಮುಂತಾದವುಗಳಲ್ಲಿ ಉಪಯೋಗಿಸುವ ಪ್ರಯತ್ನ ಇನ್ನೂ ಹೆಚ್ಚಾಗಬೇಕಾಗಿದೆ. ದಿನೇ ದಿನೇ ಹೆಚ್ಚುತ್ತಿರುವ ಬೇಡಿಕೆಯ ಕಾರಣ ಮುಧೋಳ ಬೇಟೆನಾಯಿಗಳಿಗೆ ಇತರೆ ಉತ್ಕೃಷ್ಟವಲ್ಲದ ನಾಯಿಗಳೊಂದಿಗೆ ತಳಿ ಸಂಕರಣ ಮಾಡಿ  ಮೋಸ ಮಾಡುವ ಪ್ರಸಂಗಗಳು ಕೂಡಾ ಕಂಡು ಬರುತ್ತವೆ. ಜಗತ್ತಿನ ವಿವಿಧ ಭಾಗಗಳಲ್ಲಿ ಕಂಡು ಬರುವ ಗ್ರೇ ಹೌಂಡ್, ಅಫ್ಗನ್ ಹೌಂಡ್ ರೀತಿಯ ಅತೀ ಬೆಲೆಬಾಳುವ ತಳಿಗಳನ್ನು ಎಲ್ಲ ರೀತಿಯಲ್ಲಿ ಹೋಲುವ ಆದರೆ ಸಾಕಲು ವೆಚ್ಚದಾಯಕ ಮತ್ತು ತ್ರಾಸದಾಯಕವಲ್ಲದ, ಉತ್ತಮ ರೋಗ ನಿರೋಧಕ ಶಕ್ತಿವುಳ್ಳ ಮುಧೋಳ ಹೌಂಡ ತಳಿಯ ಉತ್ಕೃಷ್ಟ ಗುಣಗಳನ್ನು ನಾಶಪಡಿಸದೇ ನಮ್ಮ ಪರಂಪರೆಯ ಮತ್ತು ಸಾಂಸ್ಕೃತಿಕ ಸಂಪತ್ತಿನ ಪ್ರತೀಕವಾದ ಮುಧೋಳ ಬೇಟೆನಾಯಿ ತಳಿಯನ್ನು ಉಳಿಸಿ ಬೆಳೆಸುವ ಕರ್ತವ್ಯ ಕನ್ನಡ ನಾಡಿನ ಎಲ್ಲ ಶ್ವಾನ ಪ್ರೇಮಿಗಳದ್ದಾಗಿದೆ.

ಲೇಖಕರ ಕಿರುಪರಿಚಯ
ಡಾ. ಪ್ರಾಣೇಶ ಜಹಗೀರದಾರ

ವೃತ್ತಿಯಿಂದ ಇವರು ಪಶುವೈದ್ಯರಾಗಿದ್ದು, ತಮ್ಮನ್ನು ಸಮಾಜಸೇವೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಕರ್ನಾಟಕ ಸರ್ಕಾರದ ಪಶುಪಾಲನೆ ಇಲಾಖೆಯಲ್ಲಿ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಇವರು ಕಳೆದ ಎರಡು ದಶಕಗಳಿಂದ ಮುಧೋಳ ನಾಯಿತಳಿ ಅಭಿವೃದ್ಧಿ ಹಾಗೂ ಜನಪ್ರಿಯಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುತ್ತಾರೆ.

ಅಂತರ್ ರಾಷ್ತ್ರೀಯ ರೋಟರಿ ಸಂಸ್ಥೆಯ ಗವರ್ನರಾಗಿ ಕೂಡಾ ಸೇವೆ ಸಲ್ಲಿಸಿರುವ ಇವರು ಶಾಲಾ ದಿನಗಳಿಂದ ಕನ್ನಡ ನಾಡು-ನುಡಿಯ ಕುರಿತು ಅಪಾರ ಅಭಿಮಾನವುಳ್ಳವರಾಗಿದ್ದಾರೆ.

Blog  |  Facebook  |  Twitter

2 ಕಾಮೆಂಟ್‌ಗಳು:

  1. ಶ್ರೀ ಪ್ರಾಣೇಶ ಜಹಗೀರದಾರ ತಮ್ಮ ಉತ್ತಮ ಕೆಲಸಕ್ಕಾಗಿ ಅಭಿನಂದನೆಗಳು.-ಡಾ.ಪ್ರಕಾಶ ಖಾಡೆ,ಬಾಗಲಕೋಟ, 984550089

    ಪ್ರತ್ಯುತ್ತರಅಳಿಸಿ
  2. ಶ್ರೀ ಪ್ರಾಣೇಶ ಜಹಗೀರದಾರ ತಮ್ಮ ಉತ್ತಮ ಕೆಲಸಕ್ಕಾಗಿ ಅಭಿನಂದನೆಗಳು.-ಡಾ.ಪ್ರಕಾಶ ಖಾಡೆ,ಬಾಗಲಕೋಟ, 984550089

    ಪ್ರತ್ಯುತ್ತರಅಳಿಸಿ