ಶುಕ್ರವಾರ, ನವೆಂಬರ್ 30, 2012

ಕನ್ನುಡಿಯ ಕಥೆ-ವ್ಯಥೆ

ತಾಯಿ, ತಾಯ್ನೆಲ ಮತ್ತು ತಾಯ್ನುಡಿ ಎಂದರೆ ಪ್ರತಿಯೊಬ್ಬ ಮಾನವನ ಭಾವಪ್ರಪಂಚದಲ್ಲೂ ವಿಶೇಷ ಸ್ಥಾನ. ತಾಯ್ನುಡಿಯ ದೆಸೆಯಿಂದಲೇ ಮಾನವಜನಾಂಗದಲ್ಲಿ ಅನೇಕಗುಂಪುಗಳು ತಮ್ಮ ಪ್ರತ್ಯೇಕತೆ ಕಾಯ್ದುಕೊಂಡಿವೆ. ವ್ಯಾವಹಾರಿಕಜಗತ್ತಿನಲ್ಲಿ ಎಳ್ಳಷ್ಟು ಮೌಲ್ಯವಿಲ್ಲದಿದ್ದರೂ ತಮ್ಮತಮ್ಮ ತಾಯ್ನುಡಿಯನ್ನು ಮನೆಯಮಟ್ಟಿಗಾದರೂ ಬಳಕೆಮಾಡುತ್ತಿವೆ. ಒಂದೇಭಾಷೆಯಲ್ಲಿನ ಅನೇಕ ಪ್ರಾದೇಶಿಕ ಪ್ರಕಾರಗಳನ್ನು ಸಹ ಅಭಿಮಾನದಿಂದ ಬಳಕೆಮಾಡುವುದನ್ನು ನೋಡಿದ್ದೇವೆ. ಹಾಗಾಗಿಯೇ ಕನ್ನಡದಲ್ಲಿ ಮೈಸೂರುಕಡೆಯ ಕನ್ನಡ, ಧಾರವಾಡದವರ ಕನ್ನಡ, ಬೆಳಗಾವಿಯ ಕನ್ನಡ, ಕರಾವಳಿಯ ಕನ್ನಡ, ನಿಜಾಮ್ ಪ್ರಾಂತ್ಯದ ಕನ್ನಡ, ಕೋಲಾರದ ಕನ್ನಡ, ಬಳ್ಳಾರಿ-ಹೊಸಪೇಟೆಯ ಕನ್ನಡ ಹೀಗೆ ಭಾಷೆಯನ್ನು ಪ್ರತ್ಯೇಕಿಸುವ ಪರಿಪಾಠವುಂಟು. ಇನ್ನು ಬೆಂಗಳೂರಿನ ಕನ್ನಡವನ್ನಂತೂ ಕೇಳುವಂತಿಲ್ಲ, ಅದು ಮಿಸಳಭಾಜಿ. ಒಂದುಭಾಷೆಯಹುಟ್ಟು, ಬೆಳವಣಿಗೆಯ ಅಧ್ಯಯನವನ್ನು ಭಾಷಾಶಾಸ್ತ್ರವೆನ್ನುತ್ತಾರೆ. ಕನ್ನಡಭಾಷೆಯು ಸಹಸ್ರಾರುವರ್ಷಗಳಿಂದ ಜೀವಂತವಾಗಿರುವುದನ್ನು ಅರಿತರೆ ಆಗ ನಮ್ಮ ಭಾಷೆ ಎಷ್ಟು ಪುರಾತನ ಹಾಗೂ ನಾವು ಈಗ ಪ್ರಾಶಸ್ತ್ಯ ನೀಡುತ್ತಿರುವ ಇಂಗ್ಲೀಷು ಕನ್ನಡಕ್ಕಿಂತ ತೀರಾಇತ್ತೀಚಿಗೆ ಹುಟ್ಟಿದಭಾಷೆ ಎನ್ನುವುದು ಅರ್ಥವಾದೀತು. ರಾಜ್ಯೋತ್ಸವದ ನೆಪದಿಂದಲಾದರೂ ಕನ್ನಡದ ಹಿರಿಮೆಯನ್ನು ತಿಳಿಯುವ ಅವಕಾಶವೊದಗಿದೆ.

ಭಾಷೆಯೇ ಜನರನ್ನು ಒಗ್ಗೂಡಿಸುವ ಶಕ್ತಿ
ಅನೇಕಬಾರಿ ಭಾಷೆಯೇ ಸಂಬಂಧಿಸಿದ ಜನರ ಇಲ್ಲವೆ ಪ್ರದೇಶದ ನಾಮಕರಣಕ್ಕೆ ಕಾರಣವಾಗುತ್ತದೆ. ಕನ್ನಡ, ತೆಲುಗು, ತಮಿಳು, ಬೆಂಗಾಲಿ ಮುಂತಾದ ಭಾಷೆಗಳು ಆಯಾ ಪ್ರದೇಶ ಮತ್ತು ಅಲ್ಲಿ ವಾಸಿಸುವ ಜನರ ನಾಮಕರಣಕ್ಕೆ ಕರಾಣವಾಗಿವೆ. ಭಾಷೆಯೇ ಜನರನ್ನು ಒಗ್ಗೂಡಿಸುವ ಶಕ್ತಿ.  ಪುರಾಣಕಾಲದಲ್ಲಿ ಕುಂತಲ, ಮಹಿಷನಾಡು, ವನವಾಸಿ ಇತ್ಯಾದಿ ಹೆಸರುಗಳಿಂದ ಪ್ರತ್ಯೇಕವಾಗಿದ್ದ ಚಿಕ್ಕಚಿಕ್ಕ ಭಾಗಗಳನ್ನು ಒಂದುಗೂಡಿಸಿ 'ಕಾವೇರಿಯಿಂದ ಗೋದಾವರಿವರಂ ಇರ್ದ ನಾಡೆಲ್ಲಮಾ ಕನ್ನಡದೊಳ್ ಭಾವಿಸಿದ ಜನಪದಂ' ಎಂದು ಲೋಕಕ್ಕೆ ಸಾರಿಹೇಳಿದ ಕೀರ್ತಿ ಕನ್ನಡನಾಡನ್ನು ಆಳಿದ ರಾಷ್ಟ್ರಕೂಟ ದೊರೆ ಅಮೋಘವರ್ಷ ನೃಪತುಂಗನಿಗೆ (ಕ್ರಿ.ಶ. 814 - 879) ಸೇರಬೇಕು. ಮೇಲಿನ ವಾಕ್ಯವಿರುವ 'ಕವಿರಾಜಮಾರ್ಗ' ಈವರೆವಿಗೆ ದೊರೆತಿರುವ ಕನ್ನಡಭಾಷೆಯ ಕೃತಿಗಳಲ್ಲಿ  ಅತಿ ಹಳೆಯದು. ಈ ಕೃತಿಯನ್ನು ನೃಪತುಂಗ ಮಹಾರಾಜ ರಚಿಸಿರುವನೆಂದು ನಂಬಿಕೆ. ಇನ್ನೊಂದು ಹೇಳಿಕೆಯ ಪ್ರಕಾರ ಆತನ ಆಸ್ಥಾನದಲ್ಲಿದ್ದ ಕವಿ ಶ್ರೀವಿಜಯ ಇದರ ಕತೃ. ಅದೇರೀತಿ ಕದಂಬದೊರೆ ಕಾಕುತ್ಸವರ್ಮನ ಕಾಲದಲ್ಲಿ ಕ್ರಿ.ಶ. 450ರ ಸುಮಾರಿಗೆ ರಚಿಸಿರುವ ಹಲ್ಮಿಡಿ ಶಾಸನ ಕನ್ನಡಲಿಪಿ ಬಳಸಿರುವ ಮೊದಲ ಶಾಸನ. ಅಂದರೆ ಆವೇಳೆಗಾಗಲೇ ಕನ್ನಡ ಭಾಷೆಯ ಬರಹ ಆರಂಭವಾಗಿತ್ತು. ಒಂದುಭಾಷೆಯು ಮಾತಿನಿಂದ ಬರಹವಾಗಿ ಬೆಳೆಯಲು ಸಹಸ್ರಾರುವರ್ಷಗಳು ಬೇಕು. ಇದರರ್ಥ ಕನ್ನಡದ ಇತಿಹಾಸ ಐದನೆ ಶತಮಾನಕ್ಕಿಂತ ಸಹಸ್ರಾರುವರ್ಷ ಹಿಂದಿನದು.

ನಾಡು-ನುಡಿಯ ಬಗೆಗೆ ಸಂಶೋಧನೆಗೈದ ಡಾ. ಶಂ.ಬಾ. ಜೋಷಿಯವರು ಕನ್ನಡನಾಡಿನ ಎಲ್ಲೆ ದಕ್ಷಿಣದ ಉದಕಮಂಡಲದಿಂದ ಉತ್ತರಕ್ಕೆ ನರ್ಮದೆಯವರೆಗಿತ್ತು ಎಂದು ಸಾಧಿಸಿದ್ದಾರೆ. ಮಧ್ಯಪ್ರದೇಶದ ಜಬ್ಬಲಪುರದ ಬಳಿ ಸಿಗುವ ಕನ್ನಡ ಶಾಸನಗಳ ಅಧಾರ ನೀಡುತ್ತಾರೆ. ಮಾನ್ಯ ಗೋವಿಂದಪೈಯವರು ಕ್ರಿ.ಶ. ಎರಡನೆ ಶತಮಾನದಲ್ಲಿ ರಚಿತವಾದ ಗ್ರೀಕ್ ನಾಟಕವೊಂದರಲ್ಲಿ ಕರಾವಳಿಕನ್ನಡವನ್ನು ಹೋಲುವ ಕೆಲವುಶಬ್ದಗಳನ್ನು ಪತ್ತೆಹಚ್ಚಿದ್ದಾರೆ. ಕನ್ನಡಭಾಷೆಯ ಸೋದರಿಯರಾದ ತುಳು, ಬಡಗ, ಹವ್ಯಕ ಭಾಷೆಗಳು ಸಹ ಪ್ರಾಚೀನವೆ. ಆದರೆ ಅವುಗಳಿಗೆ ಲಿಪಿಯಿಲ್ಲ. ಹನ್ನೆರಡನೆ ಶತಮಾನದಹೊತ್ತಿಗೆ ಕೇಶಿರಾಜನ ಶಬ್ದಮಣಿದರ್ಪಣ ಹೆಸರಿನ ಕನ್ನಡವ್ಯಾಕರಣಗ್ರಂಥ ರಚನೆಯಾಯಿತು. ಕನ್ನಡದಮೇಲೆ ಮೊದಲಿನಿಂದಲೂ ಸಂಸ್ಕೃತ, ಪ್ರಾಕೃತ, ಮೈಸೂರುರಾಜ್ಯದ ಆಡಳಿತಭಾಷೆಯಾಗಿದ್ದ ಪರ್ಷಿಯನ್ ಮುಂತಾದುವು ದಬ್ಬಾಳಿಕೆ ನಡೆಸಿವೆ. ಆದರೆ ಜನರಬದುಕಿನಿಂದ ಕನ್ನಡ ದೂರವಾಗಿರಲಿಲ್ಲ. ಈಗ ಇಂಗ್ಲೀಷ್ ದಬ್ಬಾಳಿಕೆಯ ಸರದಿ. ನಾವು ಇಂಗ್ಲೀಷನ್ನು ಹೊಟ್ಟೆಪಾಡಿನ ನೌಕರಿಗಾಗಿ ಬಳಕೆಮಾಡಿದರೆ ಕನ್ನಡಕ್ಕೆ ಚ್ಯುತಿಯಿಲ್ಲ, ದುರಂತವೆಂದರೆ ಈಗತಾನೆ ಹುಟ್ಟಿದ ಶಿಶುವಿನೊಂದಿಗೆ ಸಹ ಇಂಗ್ಲೀಷಿನಲ್ಲಿ ಮಾತನಾಡಲಾರಂಭಿಸಿದ್ದೇವೆ. ಸಾವಿರಾರುವರ್ಷಗಳಿಂದ ಜನರನಾಲಿಗೆಯಮೇಲೆ ನಲಿಯುತ್ತಿದ್ದ ಕನ್ನಡವನ್ನು ಈಗ ಕೇವಲ ಐವತ್ತುವರ್ಷಗಳಲ್ಲಿ ನಿರ್ನಾಮ ಮಾಡುವ ಪ್ರಕ್ರಿಯೆಗೆ ನಾವುನೀವೆಲ್ಲರೂ ಕಾರಣ. ಈಗ ಎಚ್ಚೆತ್ತುಕೊಳ್ಳದಿದ್ದರೆ ಕನ್ನಡದ ಅವಸಾನಕ್ಕೆ ನಾವೇ ಹೊಣೆ.

ರಾಜಕೀಯ ಇತಿಹಾಸ
ಕನ್ನಡನಾಡಿನ ರಾಜಕೀಯ ಇತಿಹಾಸವು ಕ್ರಿಸ್ತಶಕ ಎರಡನೇಶತಮಾನದಲ್ಲಿ ದಕ್ಷಿಣದಲ್ಲಿ ಶಾತವಾಹನರ ಉದಯದೊಂದಿಗೆ ಆರಂಭವಾಗುತ್ತದೆ. ಅದಕ್ಕೂ ಹಿಂದೆ ಜನವಸತಿ ಇದ್ದಕಾರಣದಿಂದಾಗಿಯೇ ಅಶೋಕನ ಶಿಲಾಶಾಸನಗಳು ಚಿತ್ರದುರ್ಗ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ನಿರ್ಮಾಣವಾಗಿವೆ. ಉತ್ತರಭಾರತದ ಭೀಕರಬರಗಾಲದಿಂದಾಗಿ ಚಂದ್ರಗುಪ್ತಮೌರ್ಯನು ತನ್ನ ಗುರು ಭದ್ರಬಾಹುವಿನೊಂದಿಗೆ ಶ್ರವಣಬೆಳಗೊಳಕ್ಕೆ ಬಂದು ನೆಲಸಿದನೆಂದು ಐತಿಹ್ಯವಿದೆ. ನಿಜವಾದ ಕನ್ನಡ ರಾಜಕೀಯ ಇತಿಹಾಸ ನಾಲ್ಕನೇ ಶತಮಾನದಲ್ಲಿ ಕದಂಬರ ಆಳ್ವಿಕೆಯೊಂದಿಗೆ ಆರಂಭವಾಗುತ್ತದೆ. ನಂತರ ತಲಕಾಡಿನ ಗಂಗರು, ಬದಾಮಿ ಚಾಲುಕ್ಯರು, ಕಲ್ಯಾಣಿಚಾಲುಕ್ಯರು, ಮಳಖೇಡಿನ ರಾಷ್ಟ್ರಕೂಟರು, ಕಲ್ಯಾಣದ ಕಳಚೂರ್ಯರು, ದೇವಗಿರಿಯ ಯಾದವರು, ಹೊಯ್ಸಳರು, ಕೊನೆಯದಾಗಿ ವಿಜಯನಗರದ ಅರಸರು ಕನ್ನಡನಾಡಿನ ಪತಾಕೆಯನ್ನು ಬಹು ಎತ್ತರಕ್ಕೊಯ್ದರು. ಈ ಮಧ್ಯೆ ಉತ್ತರಭಾರತದ ತುತ್ತತುದಿಯವರೆಗೆ ಸಾಮ್ರಾಜ್ಯ ವಿಸ್ತರಿಸಿದ ಕೆಲವು ಅರಸು ಮನೆತನಗಳನ್ನು ನೆನೆಯುವುದು ಅಗತ್ಯ. ಚಾಲುಕ್ಯರ ಇಮ್ಮಡಿಪುಲುಕೇಶಿಯು ಹರ್ಷವರ್ಧನನ್ನು ಸೋಲಿಸಿ ನರ್ಮದೆಯನ್ನು ತನ್ನ ಸಾಮ್ರಾಜ್ಯದ ಎಲ್ಲೆಯನ್ನಾಗಿಸಿದ್ದು ಸರ್ವ ವಿದಿತ. ಅದೇರೀತಿ ರಾಷ್ಟ್ರಕೂಟ ದೊರೆ ಇಮ್ಮಡಿಕೃಷ್ಣನು ಎಲ್ಲೋರದ ಕೈಲಾಸ, ಮುಂಬಯಿಯ ಎಲೆಫಂಟಾಕೇವ್ಸ್ ನಿರ್ಮಾಣಮಾಡಿದ್ದು ಎಷ್ಟೊ ಕನ್ನಡಿಗರಿಗೆ ಗೊತ್ತಿರಲಾರದು. ಅದೇರೀತಿ ಕನ್ಹೇರಿ ಗುಹೆಗಳು ಸಹ ಕನ್ನದನಾಡಿನ ರಾಜರ ಕೊಡುಗೆ. ಇನ್ನೂ ಒಂದು ಹೆಚ್ಚು ಪ್ರಚಾರವಾಗದ ಸಂಗತಿಯೆಂದರೆ ಬೆಂಗಾಲವನ್ನಾಳಿದ ಸೇನರು, ಮಿಥಿಲೆ ಮತ್ತು ನೇಪಾಳವನ್ನಾಳಿದ ದೊರೆಗಳು ಕನ್ನಡಮೂಲದವರು ಎನ್ನುವುದು.

ಕರ್ನಾಟಕದ ಇತಿಹಾಸವನ್ನೋದುವಾಗ ಎರಡನೇ ಪುಲುಕೇಶಿ, ನೃಪತುಂಗ, ವಿಷ್ಣುವರ್ಧನ, ಕೃಷ್ಣದೇವರಾಯ ಹೀಗೆ ಕೆಲವೇ ಹೆಸರುಗಳು ಬಹುಶೃತವಾಗಿವೆ. ಆದರೆ ಕನ್ನಡಸಾಮ್ರಾಜ್ಯವನ್ನು ವಿಸ್ತರಿಸಿದ ಕದಂಬರ ಕಾಕುತ್ಸವರ್ಮ, ಚಾಲುಕ್ಯರ ಮಂಗಲೀಶ, ರಾಷ್ಟ್ರಕೂಟರ ಎರಡನೇ ಕೃಷ್ಣ, ಗಂಗರ ಶ್ರೀಪುರುಷ, ಹೊಯ್ಸಳರ ವೀರಬಲ್ಲಾಳ, ವಿಜಯನಗರದ ಇಮ್ಮಡಿದೇವರಾಯ ಮುಂತಾದ ಶ್ರೇಷ್ಠ ದೊರೆಗಳನ್ನು ನೆನೆಯುವುದು ಸಹ ಕನ್ನಡಿಗರ ಕರ್ತವ್ಯ. ರಾಜ್ಯೋತ್ಸವದ ನೆಪದಲ್ಲಾದರೂ ಇಂತಹ ಮಹನೀಯರು ನಮ್ಮ ಸ್ಮೃತಿಪಟಲದಲ್ಲಿ ಮೂಡಲಿ ಎಂದು ಹಾರೈಸೋಣ.

ಕನ್ನಡನಾಡಿನ ಅನಾಮಿಕ ಸಾಧಕರು
ಈವರೆವಿಗೂ ಕನ್ನಡ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಕೆಲವೇಕೆಲವು ರಾಜರು ಮತ್ತು ಸಾಹಿತಿಗಳನ್ನು ನೆನೆಯುವುದು ಒಂದು ಸಂಪ್ರದಾಯವಾಗಿದೆ. ಅವರಷ್ಟೇ ಕನ್ನಡದ ಕಟ್ಟಾಳುಗಳು ಎನ್ನುವ ತಪ್ಪು ಅಭಿಪ್ರಾಯವನ್ನು ನಮ್ಮ ಯುವಜನತೆ ತಳೆಯುವಂತಾಗಿದೆ. ದೇಶೀಯ ಮತ್ತು ವಿದೇಶೀಯ ಪ್ರವಾಸಿಗಳು ನಮ್ಮ ರಾಜ್ಯಕ್ಕೆ ಭೇಟಿ ನೀಡಲು ಕಾರಣವಾಗಿರುವ ಬೇಲೂರು-ಹಳೇಬೀಡು ದೇಗುಲಗಳ ಶಿಲ್ಪವೈಭವ, ಶ್ರವಣಬೆಳಗೊಳದ ಭವ್ಯ ಗೊಮ್ಮಟನ ವಿಗ್ರಹ, ಸೋಮನಾಥದೇವಾಲಯ, ಬದಾಮಿಯ ಗುಹೆಗಳು, ಪಟ್ಟದಕಲ್ಲು ಮತ್ತು ಐಹೊಳೆಯ ಶಿಲ್ಪಸಮುಚ್ಚಯ, ಮುಂತಾದ ಇಮಾರತುಗಳ ಪ್ರಖ್ಯಾತ ಶಿಲ್ಪಿ ನಾಗೋಜ, ಮಹಾಕಾಲ, ದಾಸೋಜ, ಚಾವಣ, ಮಲ್ಲಿತಮ್ಮ, ಮಸಣಿತಮ್ಮ, ಚೌಡಯ್ಯ, ಬಾಲಯ್ಯ, ಅರಿಷ್ಟನೇಮಿ ಮುಂತಾದವರನ್ನು ನೆನೆಯುವುದು ನಮ್ಮ ಕರ್ತವ್ಯವಲ್ಲವೆ?

ಯಾವಮಹಾಶಯರು ಚೀನಾ ಮತ್ತು ಫಿಲಿಫೈನ್ಸ್ ದೇಶಗಳಿಂದ ಹಿಪ್ಪುನೇರಳೆಯನ್ನು ತಂದು ಕನ್ನಡನಾಡಿನಲ್ಲಿ ರೇಷ್ಮೆ ವ್ಯವಸಾಯ ಆರಂಭಿಸಿದರೊ, ಬ್ರೆಜಿಲ್ಲಿನಿಂದ ಕಾಫಿಗಿಡ ತಂದರೊ, ಮಾರಿಷಸ್ ದ್ವೀಪದಿಂದ ವಿವಿಧತಳಿಯ ಕಬ್ಬು ತಂದು ಕರ್ನಾಟಕಕ್ಕೆ ಪರಿಚಯಿಸಿದರೊ, ನ್ಯೂಆರ್ಲಿಯನ್ಸ್, ಸೀಐಲೆಂಡ್ ಮತ್ತು ಬೋರ್ಬನ್ ಗಳಿಂದ ವಿವಿಧಜಾತಿಯ ಹತ್ತಿಯನ್ನು ಕರ್ನಾಟಕಕ್ಕೆ ಪರಿಚಯಿಸಿದರೊ ಅವರೆಲ್ಲ ನಮ್ಮ ರಾಜ್ಯೋತ್ಸವದಂದು ಸ್ಮರಣಾರ್ಹರು. ಅದೇರೀತಿ 19ನೇಶತಮಾನದಲ್ಲಿ ಆಸ್ಟೇಲಿಯಾದಿಂದ ಟಗರುಗಳನ್ನು ಮತ್ತು ಇಪ್ಪತ್ತನೆ ಶತಮಾನದಲ್ಲಿ ವಿದೇಶಿ ತಳಿಯ ಹಸು-ಹೋರಿಗಳನ್ನು ತಂದು ಕರ್ನಾಟಕದಲ್ಲಿ ಹಾಲಿನ ಹೊಳೆಹರಿಯುವಂತೆ ಮಾಡಿದವರನ್ನು ನೆನೆಯದಿರಲಾದೀತೆ.

ಕರ್ನಾಟಕವು ಅಭಿವೃದ್ಧಿ ಪಥದಲ್ಲಿ ಕಾಲಿಡಲು ಕಾರಣರಾದ ನಾಲ್ಮಡಿ ಕೃಷ್ಣರಾಜ ಒಡೆಯರು, ದಿವಾನರುಗಳಾದ ರಂಗಾಚಾರ್ಲು, ಶೇಷಾದ್ರಿ ಅಯ್ಯರ್, ವಿಶ್ವೇಶ್ವರಯ್ಯ ಮತ್ತು ಮಿರ್ಜಾ ಇಸ್ಮಾಯಿಲ್ ರನ್ನು ನೆನಪು ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಲ್ಲವೆ.

ಇದೇರೀತಿ ಕನ್ನಡನಾಡು-ನುಡಿಗೆ ಸೇವೆಸಲ್ಲಿಸಿದ ಮಹನಿಯರನ್ನೆಲ್ಲ ಗುರುತಿಸಿ ಪ್ರತಿವರ್ಷ ಕೆಲಕೆಲವರನ್ನು ಕುರಿತು ನಾಡಿನಮಕ್ಕಳಿಗೆ ಪರಿಚಯಿಸುವ ಪರಿಪಾಠ ಬೆಳೆಯಲಿ ಎನ್ನುವುದು ನನ್ನ ಹಾರೈಕೆ.

ಕೊನೆಮಾತು
ಕನ್ನಡಿಗರ ಗುಣವಿಶೇಷಗಳನ್ನು ತಿಳಿಸುವ ಕ್ರಿ.ಶ. 700ರ ತಟ್ಟುಕೋಡಿ ಶಾಸನದಲ್ಲಿ ಕಪ್ಪೆಅರೆಭಟ್ಟನೆನ್ನುವ ಪರಾಕ್ರಮಿಯನ್ನು ಕುರಿತ ಪದ್ಯವೊಂದಿದೆ. "ಸಾಧುಂಗೆ ಸಾಧು, ಮಾಧುರ್ಯಂಗೆ ಮಾಧುರ್ಯಂ, ಭಾದಿಪ್ಪಕಲಿಗೆ ಕಲಿಯುಗವಿಪರೀತನ್" ಎಂದು ಕನ್ನಡಿಗನನ್ನು ವರ್ಣಿಸಲಾಗಿದೆ. ಮೊದಲೆರಡು ಗುಣವಿಶೇಷಣಗಳು ಒಪ್ಪುವಂಥದ್ದೆ. ಆದರೆ ಇಂದಿನ ಕನ್ನಡಿಗನನ್ನು ನೋಡಿ ಕೊನೆಯಗುಣವಿಶೇಷಣದ ಬಗ್ಗೆ ನನಗೆ ಸ್ವಲ್ಪ ಅನುಮಾನ!

ಲೇಖಕರ ಕಿರುಪರಿಚಯ
ಡಾ. ಟಿ. ಎಸ್. ರಮಾನಂದ

ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ತಾಳ್ಯ ಗ್ರಾಮದವರಾದ ಇವರು ವೃತ್ತಿಯಲ್ಲಿ ಪಶುವೈದ್ಯರು. 1974 ರಿಂದ ಕರ್ನಾಟಕ ಸರ್ಕಾರದ ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ 2006 ರಲ್ಲಿ ನಿವೃತ್ತಿ ಹೊಂದಿದ್ದು, ಪ್ರಸ್ತುತ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ.

'ವೈದ್ಯರ ಶಿಕಾರಿ', 'ದಿಟನಾಗರ ಕಂಡರೆ' ಮತ್ತು 'ವೃತ್ತಿ ಪರಿಧಿ' ಇವರ ಮೂರು ಕೃತಿಗಳು. ವೃತ್ತಿಯಲ್ಲಿ ತಾವು ಗಳಿಸಿದ ಅಪಾರ ಅನುಭವಗಳನ್ನು ತಮ್ಮದೇ ಆಕರ್ಷಕ ಶೈಲಿ ಬರವಣಿಗೆಯ ಮೂಲಕ ಕೃತಿಗಳಾಗಿಸಿ, ಪಶುವೈದ್ಯರುಗಳ ವಿಶಿಷ್ಟ ಹಾಗೂ ವಿಶೇಷ ಜೀವನಾನುಭವಗಳನ್ನು ಪರಿಣಾಮಕಾರಿಯಾಗಿ ಸಮಾಜಕ್ಕೆ ತಲುಪಿಸುವಲ್ಲಿ ಇವರು ಯಶಸ್ವಿಯಾಗಿದ್ದಾರೆ.

ಮೊದಲಿನಿಂದಲೂ ತಮ್ಮ ಸಂಪೂರ್ಣ ಬೆಂಬಲದೊಂದಿಗೆ ಪ್ರೋತ್ಸಾಹಿಸುತ್ತಾ, ತಾವೂ ಸಹ ಸಕ್ರಿಯವಾಗಿ ಭಾಗವಹಿಸಿ, ಲೇಖನವನ್ನು ಒದಗಿಸುವುದರೊಂದಿಗೆ ಆಶೀರ್ವದಿಸಿ ಕಹಳೆ ಕಾರ್ಯಕ್ರಮದ ಯಶಸ್ಸಿಗೆ ಕಾರಣಕರ್ತರಾದ ಗುರು ಸಮಾನರಾದ ಇವರಿಗೆ ಕಹಳೆ ತಂಡವು ವಿನಯಪೂರ್ವಕವಾಗಿ ವಂದಿಸುತ್ತದೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ