ಶನಿವಾರ, ನವೆಂಬರ್ 10, 2012

ತಪ್ಪು - ಒಪ್ಪೋಲೆ

"ತಪ್ಪುಗಳು ತುಬ್ಬಿಕೆಗಳ ತಲೆಬಾಗಿಲುಗಳು"

ಈ ಮಾತನ್ನು ಹೇಳಿದವರು ಜೇಮ್ಸ್ ಜೊಯ್ಸ್ ಎಂಬುವವರು; ಇವರು ಅಮೇಜಾನ್ ಎನ್ನುವ ಒಂದು ಅತಿ ಪ್ರಖ್ಯಾತ ವೆಬ್-ಸೈಟನ್ನು ತಮ್ಮ ಒಂದು ಸಣ್ಣ ತಪ್ಪಿನಿಂದ 24 ಘಂಟೆಗಳ ಕಾಲ ಕೆಲಸ ಮಾಡದಂತೆ ಮಾಡಿ, ಅದರಿಂದ ಅಮೇಜಾನ್ ಕಂಪನಿಯು ಕೋಟ್ಯಂತರ ಡಾಲರ್ ಗಳ ನಷ್ಟವನ್ನು ಅನುಭವಿಸುವಂತೆ ಮಾಡಿದ ಮಹಾನುಭಾವ.

ನಮ್ಮ ತಪ್ಪುಗಳು ಈ ರೀತಿಯ ದೊಡ್ಡ ದೊಡ್ಡ ನಷ್ಟಗಳನ್ನು ಮಾಡದಿದ್ದರೂ, ಸ್ವಲ್ಪವಾದರೂ ನಷ್ಟವನ್ನು ಮಾಡೇ ಮಾಡುತ್ತವೆ. ತಪ್ಪುಗಳನ್ನು ಮಾಡದವರು ಯಾರಿದ್ದಾರೆ ಹೇಳಿ? ಆದರೆ ನಮ್ಮ ತಪ್ಪುಗಳನ್ನು ಅರಿತು, ನಮ್ಮನ್ನು ನಾವು ತಿದ್ದಿಕೊಂಡು ಪುನಃ ಅಂಥದೇ ತಪ್ಪುಗಳನ್ನು ಮಾಡದೆ ಇರುವುದೆ ಜಾಣ್ಮೆ. ನಮ್ಮ ತಪ್ಪುಗಳನ್ನು ನಮ್ಮ ಉನ್ನತಿಯ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳುವ ಕೆಲವು ವಿಧಾನಗಳನ್ನು ಇಲ್ಲಿ ಉಲ್ಲೇಖಿಸಲು ಬಯಸುತ್ತೇನೆ.

1. ನಮ್ಮ ತಪ್ಪುಗಳ ಜವಾಬ್ದಾರಿಯನ್ನು ನಾವೇ ಹೊತ್ತುಕೊಳ್ಳುವುದು
ಸಾಮಾನ್ಯವಾಗಿ ನಾವು ಪರಿಸ್ಥಿತಿಯ ಅಡಿಯಾಳುಗಳಾಗಿ ತಪ್ಪುಗಳನ್ನು ಮಾಡುತ್ತೇವೆಂದು ಭಾವಿಸಿರುತ್ತೇವೆ. ಅಥವಾ ಬೇರೆಯವರ ಕುತಂತ್ರವನ್ನೊ ಅಥವಾ 'ಇವತ್ತ್ಯಾಕೊ ದಿನಾನೇ ಸರಿಯಾಗಿಲ್ಲ' ಅಂತಾದ್ರೂ ಹೇಳಿಕೊಂಡು ನಮ್ಮ ತಪ್ಪುಗಳ ಜವಾಬ್ದಾರಿಯನ್ನು ಕಳಚುವ ಪ್ರಯತ್ನವನ್ನು ಸಹಜವಾಗಿ ಮಾಡುತ್ತೇವೆ. ನಿಜವಾಗಿಯೂ ಉತ್ತಮ ನಾಯಕರು/ಮುಂದಾಳುಗಳು (ಲೀಡರ್ಸ್) ತಮ್ಮ ತಪ್ಪುಗಳ ಜವಾಬ್ದಾರಿಯನ್ನು ತಾವೇ ಹೊತ್ತುಕೊಳ್ಳುತ್ತಾರೆ. ಅವರು ಒಂದು ನಿರ್ದಿಷ್ಟ ಹಾಗೂ ತಮ್ಮ ನಿಯಂತ್ರಣದ ಸೀಮೆಯಲ್ಲೇ ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಹಾಗಾಗಿ ಅವರುಗಳು ತಮ್ಮ ತಪ್ಪುಗಳ ಪೂರ್ಣ ಜವಾಬ್ದಾರಿಗಳನ್ನು ಹೊತ್ತುಕೊಳ್ಳುವ ಸ್ಥಿರಧೃತಿಯನ್ನು ಕ್ರಮೇಣ ಹೆಚ್ಚಿಸಿಕೊಳ್ಳುತ್ತಲೇ ಇರುತ್ತಾರೆ. ಹೀಗಾಗಿ ಅವರುಗಳು ತಪ್ಪು ಮಾಡಿದಾಗ ಅದನ್ನು ಒಪ್ಪಿಕೊಳ್ಳಲು ಹಿಂಜರಿಯುವುದಿಲ್ಲ.

2. ಕೈಲಾದರೆ ಸರಿಪಡಿಸಿ. ಇಲ್ಲವಾದಲ್ಲಿ ಕೂಡಲೇ ಮೇಲ್ವಿಚಾರಕರಿಗೆ ತಿಳಿಸಿ
ಯಾರಿಗೂ ಗೊತ್ತಾಗದಂತೆ ತಪ್ಪುಗಳನ್ನು ಸರಿಪಡಿಸುವುದೇ ಇನ್ನೊಂದು ತಪ್ಪು. ಸಾಮಾನ್ಯವಾಗಿ ತಪ್ಪುಗಳಿಗೆ ಪರೋಕ್ಷ ಪರಿಣಾಮಗಳು ಇರುತ್ತವೆ. ಕೆಲವೊಮ್ಮೆ ಆ ಪರಿಣಾಮಗಳು ಬಹಳ ಅಪಾಯಕಾರಿಗಳಾಗಿರುತ್ತವೆ. ಮೇಲ್ವಿಚಾರಕರಿಗೆ ತಿಳಿಸದೇ ಏನೂ ಆಗಿಯೇ ಇಲ್ಲವೆಂದು ನಟಿಸುವುದು ಇನ್ನಷ್ಟು ಅಪಾಯಕಾರಿ. ಟಯೋಟ ಕಂಪನಿಯ ಕಟ್ಸುವಾಕಿ ವಾಟನಾಬೆ ಹೇಳುತ್ತಾರೆ 'ಮುಚ್ಚಿಟ್ಟ ತಪ್ಪುಗಳೇ ಮುಂದೆ ಭಯಂಕರ ಅಪಾಯಗಳಾಗುವುವು'. ತಪ್ಪುಗಳು ಎಲ್ಲರಿಗೂ ಗೋಚವಾಗುವಂತೆ ಇದ್ದರೆ, ಯಾರಾದರೂ ಒಬ್ಬರು ತಲೆ ಓಡಿಸಿ ಆ ತಪ್ಪನ್ನು ಸರಿಮಾಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ತಪ್ಪು ಮಾಡಿದಾಗ ಅದನ್ನು ಘೋಷಿಸುವಂಥ ಸಹೃದಯತೆ ನಮ್ಮಲ್ಲಿ ಮೂಡಿಸಿಕೊಳ್ಳಬೇಕು.

3. ಕ್ಷಮೆಯಾಚನೆ
ತಪ್ಪಿನ ಅರಿವಾದ ಕೂಡಲೇ ಅದರಿಂದ ಬಾಧಿತರಾದ ಎಲ್ಲರ ಹತ್ತಿರ ಕ್ಷಮೆಯಾಚಿಸುವುದು ಸೂಕ್ತ. 'ಕ್ಷಮಿಸಿ, ತಪ್ಪಾಗಿಹೊಯ್ತು.' ಅನ್ನುವುದಕ್ಕೂ, 'ಛೆ, ಹೀಗಾಗಬಾರದಿತ್ತು' ಅನ್ನುವುದಕ್ಕೂ ಇರುವ ವ್ಯತ್ಯಾಸ ತಿಳಿದುಕೊಳ್ಳಬೇಕು. 'ಹೀಗೆ ಮಾಡಬಾರದಿತ್ತು', 'ಹಾಗೆ ಮಾಡಬಾರದಿತ್ತು' ಎಂದು ಹೇಳುತ್ತಾ ತಪ್ಪಿನ ಸುತ್ತ ಸುತ್ತುವರಿಯುವುದನ್ನು ಬಿಟ್ಟು, 'ತಪ್ಪಾಗಿ ಹೋಗಿದೆ, ಇದನ್ನು ಸರಿಪಡಿಸುವ ಬಗೆಯನ್ನು ವಿಮರ್ಶಿಸೋಣ' ಎಂದು ಹೇಳುವ ಮನೋಭಾವ ಬೆಳೆಸಿಕೊಳ್ಳಬೇಕು.

4. ಆಲೋಚನೆ
'ಆದ ತಪ್ಪು ಏಕೆ ಆಯಿತು? ಆದ ತಪ್ಪಿಗೆ ನಮ್ಮ ಕೊಡುಗೆಯಾದರೂ ಏನು?' – ಈ ರೀತಿಯಿಂದ ನಮ್ಮ ತನಿಖೆ ನಡೆಯಬೇಕು. ಹೊರ-ಪರಿಸ್ಥಿತಿಗಳಿಂದ ನಾವು ಏನನ್ನೂ ಕಲಿಯಲಿಕ್ಕಾಗುವುದಿಲ್ಲ. ಆದ್ದರಿಂದ ಅವುಗಳನ್ನು ಮರೆಯುವುದೇ ಲೇಸು. ಹೀಗೆ ಮಾಡುವುದರಿಂದ ತಪ್ಪಿನ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತೇವೆ. ಯಾವ ರೀತಿಯಲ್ಲಿ ಕೆಲಸಮಾಡಿದ್ದ ಪಕ್ಷದಲ್ಲಿ ಈ ತಪ್ಪು ಆಗುತ್ತಿರಲಿಲ್ಲ ಎಂದು ವಿಚಾರ ಮಾಡಬೇಕು. ಕೆಲವೊಮ್ಮೆ ತಪ್ಪಾದ ಸ್ವಲ್ಪ ಸಮಯದ ಬಳಿಕ ನಮಗೆ ತಪ್ಪನ್ನು ತಿದ್ದುವ ಅರಿವಾಗಬಹುದು.

5. ತಪ್ಪಿನ ಬೇರನ್ನು ಸಂಬೋಧಿಸಬೇಕು
ವ್ಯವಸ್ಥಾನುಸಾರವಾಗಿ ತಪ್ಪುಗಳ ಬಗ್ಗೆ ಆಲೋಚಿಸಿದಾಗ, ನಮ್ಮ ಅನುಷ್ಠಾನದಲ್ಲಿನ ಯಾವ ನಿರ್ದಿಷ್ಟ ವಿನ್ಯಾಸಗಳು ನಮ್ಮ ತಪ್ಪುಗಳ ಅಡಿಪಾಯಗಳಾಗಿರುತ್ತವೆ ಎಂಬ ಸತ್ಯ ತಿಳಿಯುತ್ತದೆ. ಒಮ್ಮೆ ಇದನ್ನು ತಿಳಿದಕೂಡಲೇ ನಮ್ಮ ಆ ವಿನ್ಯಾಸಗಳನ್ನು ಸರಿಪಡಿಸಿಕೊಳ್ಳುವ ಹಾದಿಯಲ್ಲಿ ನಡೆಯಬೇಕೆಂಬ ಇಂಗಿತ ನಮ್ಮಲ್ಲಿ ಮೂಡುತ್ತದೆ.

6. ತಿಳಿ. ತಿಳಿದದ್ದನ್ನು ತಿಳಿಸು
ಕೆಲವೊಮ್ಮೆ ನಮ್ಮ ತಪ್ಪುಗಳನ್ನು ತಿದ್ದಿಕೊಂಡ ಬಗೆಯನ್ನು ಬೇರೆಯವರಿಗೆ ತಿಳಿಸುವುದರಿಂದ ಅವರ ವೈಯಕ್ತಿಕ ಏಳಿಗೆಗೆ ನಾವು ನೆರವಾದಂತಾಗುತ್ತದೆ. ಒಂದು ತಂಡದಲ್ಲಿ ಕೆಲಸ ಮಾಡುತ್ತಿದ್ದರಂತೂ ಇದರಿಂದಾಗುವ ಉಪಯೋಗ ಅಪಾರ. ಇದರಿಂದ ಇಡಿಯ ತಂಡದ ಏಳಿಗೆ ಸಾಧ್ಯವಾಗುತ್ತದೆ. ಬೇರೆಯವರ ತಪ್ಪಿನಿಂದ ನಾವು ಹೇಗೆ ಕಲಿಯಬೇಕೋ ಹಾಗೆಯೇ, ನಾವು ನಮ್ಮ ತಪ್ಪು ಹಾಗೂ ಅದರ ತಿದ್ದುವಿಕೆಯ ಬಗ್ಗೆ ಇತರರಿಗೆ ತಿಳಿಹೇಳಿ, ನಮ್ಮ ತಪ್ಪಿನಿಂದ ಬೇರೆಯವರೂ ಕಲಿಯುವಂತಾಗಬೇಕು.

7. ಅರಿವು ಮುಖ್ಯವಲ್ಲ, ಅರಿವಿನ ಇರುವು ಮುಖ್ಯ
ಕಡೆಯದಾದರೂ ಕಡಿಮೆಯದ್ದೇನಲ್ಲ. ತಪ್ಪಿನ ಅರಿವು, ತಪ್ಪಿನ ತಿದ್ದುಪಡಿಯ ಆರಿವು ಎರಡೂ ಆಯಿತು. ಅದನ್ನು ಬೇರೆಯವರಿಗೆ ತಿಳಿಸಿದ್ದೂ ಆಯಿತು. ಆದರೆ ತಿಳಿದದ್ದು ತಲೆಯಲ್ಲಿ ಉಳಿಯದಿದ್ದರೆ ಏನು ಪ್ರಯೋಜನ? ಆದ್ದರಿಂದ ನಾವು ಅರಿತದ್ದು ನಮ್ಮ ತಲೆಯಲ್ಲಿ ಇರುವಂತೆ ಮಾಡಿಕೊಳ್ಳಬೇಕು. ನಾವು ಹಿಂದೆ ಮಾಡಿದ ತಪ್ಪುಗಳನ್ನು ಮರೆಯಬಾರದು. ಹೀಗಾದಾಗ ಮಾತ್ರ ನಮ್ಮ ವ್ಯಕ್ತಿತ್ವದ ಪೂರ್ಣ ವಿಕಸನ ಸಾಧ್ಯವಾದೀತು.

ಇದು ನನ್ನ ಸ್ವಂತ ಲೇಖನವಲ್ಲ. ಜಾನ್ ಕಡ್ದೆಲ್ ಎಂಬುವವರು the99percent.com ಎಂಬ ಅಂತರ್ಜಾಲ ತಾಣದಲ್ಲಿ ಪ್ರಕಟಿಸಿದ, ಅವರ ಸಂಶೋಧನೆಗಳ ಒಂದು ತುಣುಕು. ಕಹಳೆಯ ಓದುಗರಿಗೆ 'ವ್ಯಕ್ತಿತ್ವ-ವಿಕಸನ'ದ ಬಗ್ಗೆ ತಿಳಿಸುವ ಹಂಬಲ ಹೊತ್ತ ನಾನು, ಅವರ ಬರಹವನ್ನು ಕನ್ನಡಿ ಹಿಡಿದು ಕನ್ನಡೀಕರಿಸಿದ್ದೇನೆ. ಅವರು ಬರೆದದ್ದು ಆರು. ಆ ಆರಕ್ಕೆ ಕೊನೆಯಲ್ಲಿ ಕೂಡಿಸಿರುವ ಏಳನೆಯ ಅಂಶ ಕಹಳೆಯ ಓದುಗರಿಗೆ ನನ್ನ ವೈಯಕ್ತಿಕ ಕೊಡುಗೆ.

ಲೇಖಕರ ಕಿರುಪರಿಚಯ
ಶ್ರೀ ವಿಜಯ್ ಸಿ. ಎನ್.

ಬೆಂಗಳೂರಿನ ಮೂಲದವರಾದ ಇವರಿಗೆ ಬಾಲ್ಯದಲ್ಲಿ ಹೆಚ್ಚಿನ ಪ್ರಭಾವ ಬೀರಿದವರು ಸಂಸ್ಕೃತ ಪಂಡಿತರಾಗಿದ್ದ ಇವರ ತಾತನವರು. ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ಇವರ ಈಗಿನ ವೃತ್ತಿ ಬೆಂಗಳೂರಿನ ಸಾಫ್ಟ್-ವೇರ್ ಸಂಸ್ಥೆಯೊಂದರಲ್ಲಿ.

ಕನ್ನಡ ಭಾಷೆಯ ಬಗ್ಗೆ ಹೆಚ್ಚಿನ ಅಭಿಮಾನ ಹೊಂದಿರುವ ಇವರಿಗೆ ಸಾಹಿತ್ಯಿಕ ಜ್ಞಾನ ಹಾಗೂ ನೈಪುಣ್ಯತೆಗಳು ತಲೆತಲಾಂತರದಿಂದ ಬಂದಿರುವಂಥದ್ದು.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ