ಗುರುವಾರ, ನವೆಂಬರ್ 15, 2012

ಸಾಮಾಜಿಕ ಜಾಲತಾಣಗಳಲ್ಲಿ ಸುರಕ್ಷತೆಯ ಕೋನ

ಅಮಾಂಡಾ ಟಾಡ್ ಇನ್ನೂ ಹದಿಹರೆಯಕ್ಕೆ ಕಾಲಿಡುತ್ತಿದ್ದ ಯುವತಿ. ಆದರೆ, ಫೇ‌ಸ್ ಬುಕ್‌ನಲ್ಲಿ ಆದ ಗಂಡಾಂತರಗಳಿಂದಾಗಿ ಆಕೆಯು ಆತ್ಮಹತ್ಯೆ ಮಾಡಿಕೊಂಡ ಅನಾಹುತವಾಯಿತು. ಕಾರಣವಿಷ್ಟೆ, ಪಾಶ್ಚಾತ್ಯ ಸಂಸ್ಕೃತಿಯವಳಾಗಿದ್ದ ಆಕೆ ತನ್ನ ವೈಯುಕ್ತಿಕ ವಿಚಾರಗಳಲ್ಲಿ ಬಹಳಷ್ಟನ್ನು ಈ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಳು. ಇದರಿಂದಾಗಿ, ಆಕೆಗೆ ಹಲವು ಗೆಳೆಯರ ಪರಿಚಯವೇನೋ ಆಯಿತು ಆದರೆ, ಆಕೆ ವೆಬ್‌ಕ್ಯಾಮರಾದಲ್ಲಿಯೂ ಈ ರೀತಿ ಪರಿಚಯಗೊಂಡ ಹಲವು ಗೆಳೆಯರ ನಡುವೆ ಮಾಡುತ್ತಿದ್ದ ಮಾತುಕತೆಗಳು ಅವಳಿಗೇ ಅರಿವಿಲ್ಲದೆ, ಆಕೆಯ ಬದುಕಿಗೆ ಮುಳ್ಳಾಗತೊಡಗಿದವು. ಆಕೆಯ ಕೆಲವು ಛಾಯಾಚಿತ್ರಗಳನ್ನೇ ಬಳಸಿಕೊಂಡು, ಆಕೆಯದೇ ನಕಲೀ ಖಾತೆಯೊಂದನ್ನು ಈ ಜಾಲತಾಣದಲ್ಲೇ ಒಬ್ಬಾತ ತೆಗೆದ. ಅಲ್ಲಿ ಆಕೆಯ ಬಗ್ಗೆ ಬರೆದದ್ದು ಅತೀ ಅವಹೇಳನಕಾರಿ ಬರಹಗಳು, ಜೊತೆಗೆ ಆಗಾಗ ಫೋನಿನಲ್ಲಿಯೂ ಬೆದರಿಕೆಗಳು. ಮುಗ್ಧತೆ ಹಾಗೂ ಹರೆಯ ಇವೆರಡರ ಮಿಶ್ರಣದ ಆ ಪರಿವರ್ತನೆಯ ವಯಸ್ಸಿನಲ್ಲಿದ್ದ ಆಕೆಗೆ, ತನಗೇನು ಆಗುತ್ತಿದೆ ಎನುವುದು ತಿಳಿಯುವುದಕ್ಕೆ ಮೊದಲೇ ಇದ್ದ ಎಲ್ಲ ಸ್ನೇಹಿತರೂ ಒಬ್ಬೊಬ್ಬರಾಗಿ ದೂರಾದರು. ಹೊಸ ಶಾಲೆಯಲ್ಲಿ ದಾಖಲಾದರೂ, ಅಲ್ಲಿಯೂ ಕೆಲವರು ಗುಂಪುಗಟ್ಟಿ ಬೆದರಿಕೆ ಹಾಕಿದರು, ಇನ್ನು ಹಲವರು ಹೊಡೆಯುವುದಕ್ಕೆ ಮುಂದಾದರು. ಇವೆಲ್ಲದರಿಂದ ಬಸವಳಿದ ಆಕೆ ತನ್ನ ಎಲ್ಲ ಕತೆಯನ್ನು ಒಂದು ವಿಡಿಯೋ ಮಾಡಿ, ಅಂತರ್ಜಾಲದಲ್ಲಿ ಬಿತ್ತರಿಸಿ, ತಾನು ಆತ್ಮಹತ್ಯೆ ಮಾಡಿಕೊಂಡಳು. ಈಗ ಆಕೆಯ ಹೆತ್ತಮ್ಮ, ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳುವುದಕ್ಕೆ ಸಹಾಯಕರನ್ನು ಅರಸುತ್ತಿದ್ದಾಳೆ.

ಮೇಲೆ ಕಂಡ ಘಟನೆ ತೀರಾ ವಿಶೇಷವೇನಲ್ಲ. ಪಾಶ್ಚಾತ್ಯ ಸಂಸ್ಕೃತಿಯನ್ನು ತೀವ್ರವಾಗಿ ಅನುಕರಣೆ ಮಾಡ ಹೊರಟಿರುವ ನಮ್ಮ ಯುವಪೀಳಿಗೆಯೂ ಇಂತಹ ಆಘಾತಕಾರಿ ಪರಿಸ್ಥಿತಿಗಳಿಗೆ ಒಂದಲ್ಲಾ ಒಂದು ದಿನ ಒಳಗಾಗಬಹುದು. ತಮ್ಮ ಹದಿಹರೆಯದ ಮಗಳೋ, ಮಗನೋ ಕಂಪ್ಯೂಟರನ್ನು ಉಪಯೋಗಿಸುವುದನ್ನು ಕಂಡು ಖುಷಿಪಡುವ ಪೋಷಕರು, ಇತ್ತೀಚೆಗೆ ಸರ್ವೇಸಾಮಾನ್ಯವಾದ ಸಾಮಾಜಿಕ ಜಾಲತಾಣಗಳಲ್ಲಿ ಒದಗಬಹುದಾದ ಅಸುರಕ್ಷತೆಯ ಬಗ್ಗೆ ಗಮನಹರಿಸುವುದನ್ನು ಮರೆತಿರುತ್ತಾರೆ.

ಸಾಮಾಜಿಕ ಜಾಲತಾಣಗಳು ವಿಶಿಷ್ಟ ಅಂತರ್ಜಾಲ ಸೇವೆಯಾಗಿದ್ದು, ತನ್ನ ಮಾಧ್ಯಮದ ಮೂಲಕ ಬಳಕೆದಾರರಲ್ಲಿ ಸಾಮಾಜಿಕ ಜಾಲ ಅಥವಾ ಸಂಬಂಧಗಳನ್ನು ಬೆಸೆದು, ಅವರು ತಮ್ಮ ನಿಜ ನೀವನದ ಆಗುಹೋಗುಗಳು, ಆಸಕ್ತಿಗಳು, ಚಟುವಟಿಕೆಗಳು, ವಿಶೇಷವೆನಿಸುವ ವಿಚಾರಗಳು, ಹಲವು ಹಿನ್ನೆಲೆಗಳು, ಇತ್ಯಾದಿಗಳನ್ನು ಇತರೆ ಬಳಕೆದಾರರೊಂದಿಗೆ ಜರೂರಾಗಿ ಹಂಚಿಕೊಳ್ಳಲು ಅನುವುಮಾಡಿಕೊಡುತ್ತವೆ. Facebook, Google+ ಮತ್ತು Twitter ಪ್ರಪಂಚದಾದ್ಯಂತ ಪ್ರಸಿದ್ಧಿ ಪಡೆದಿರುವ ಸಾಮಾಜಿಕ ಜಾಲತಾಣಗಳು. Orkut, LinkedIn, hi5 ಇತರೆ ಉದಾಹರಣೆಗಳು. ಭಾರತದ ಅಂತರ್ಜಾಲ ಮಾಧ್ಯಮದಲ್ಲಿ ಕಳೆದ ದಶಕದಲ್ಲಾದ ಕ್ರಾಂತಿಯೆನ್ನಬಹುದಾದ ಪ್ರಗತಿಯಿಂದಾಗಿ ಹಾಗೂ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಇಂದು ಈ ಎಲ್ಲ ಸಾಮಾಜಿಕ ತಾಣಗಳು ವಯೋಮಿತಿಯ ಎಲ್ಲೆ ಮೀರಿ ಪ್ರತಿಯೊಬ್ಬರ ಬೆರಳ ತುದಿಗಳನ್ನು ತಲುಪಿವೆ.

ಈ ಎಲ್ಲಾ ತಾಣಗಳಲ್ಲಿಯೂ ಯಾರು ಸೇರಬಹುದು, ಯಾರು ಸೇರಬಾರದು ಎಂಬುದರ ವಯೋಮಿತಿ ಇರುತ್ತದೆ ಎಂಬುವುದನ್ನೇ ಬಹಳಷ್ಟು ಮಂದಿ ತಿಳಿದಿರುವುದಿಲ್ಲ. ನಮ್ಮವರು ತಮ್ಮವರು ಎಲ್ಲರೂ ಅಲ್ಲಿ ಸಿಗುತ್ತಾರೆಂಬ ಕಾತುರದಲ್ಲಿ, ಅಪರಿಚಿತರ ಸಹವಾಸವೂ ಆಗುವುದು ಸಾಮಾನ್ಯ. ಆದರೆ, ಈ ಅಪರಿಚಿತರ ವಿವರವನ್ನು ತಿಳಿಯದೇ, ವೈಯುಕ್ತಿಕ ವಿಚಾರಗಳನ್ನೆಲ್ಲಾ ಅವರೊಡನೆ ಹಂಚಿಕೊಂಡಿದ್ದೇ ಆದಲ್ಲಿ, ತೊಂದರೆ ಕಟ್ಟಿಟ್ಟ ಬುತ್ತಿ. ಮೇಲಿನ ಘಟನೆಯಂತೆ ದುರಂತಕ್ಕೂ ಎಡೆ ಮಾಡಿಕೊಡಬಹುದು. ಇನ್ನು ವಯಸ್ಕರೂ ಈ ರೀತಿಯ ದುರಂತಕ್ಕೆ ಒಳಗಾಗುವ ಸಾಧ್ಯತೆಗಳಿವೆ. ತಮ್ಮ ಮಧುಚಂದ್ರದಲ್ಲಿ ತೆಗೆದ ಚಿತ್ರಗಳನ್ನೋ, ಮತ್ಯಾವ ಪಾರ್ಟಿಗಳಲ್ಲಿ ತೆಗೆಸಿದ ಚಿತ್ರಗಳನ್ನೋ ಈ ತಾಣಗಳಲ್ಲಿ ಹಾಕುವಾಗ, ಅದು ಯಾರರವರೆಗೆ ಮುಟ್ಟಬಲ್ಲದು ಎಂಬುದು ಕೆಲವೊಮ್ಮೆ ಊಹಿಸಲೂ ಅಸಾಧ್ಯ. ಈ ತಾಣಗಳೇನೋ ಹಂಚಿಕೆಯ ಮಿತಿಯನ್ನು ನಿಯಂತ್ರಿಸುವ ವ್ಯವಸ್ಥೆಯನ್ನು ನೀಡಿರುತ್ತವೆ. ಆದರೆ, ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ಸುಮ್ಮನೇ ಹಂಚಿಬಿಟ್ಟಲ್ಲಿ, ಆ ಅಚಾತುರ್ಯದಿಂದ ಅನಾಹುತವಾಗಲೂಬಹುದು.

ಈ ಸಾಮಾಜಿಕ ತಾಣಗಳು ಮಾನವನ ಸಹಜ ಸಮಾಜದ ಸ್ಥಾನವನ್ನು ಸಂಪೂರ್ಣವಾಗಿ ಆಕ್ರಮಿಸಲು ಸಾಧ್ಯವಿಲ್ಲ. ಇವು ಕೇವಲ ತ್ವರಿತ, ಸಾಮಾಜಿಕ ಅನುಕೂಲ ವ್ಯವಸ್ಥೆಗಳು. ನಮಗೆ ಉಚಿತವಾಗಿ, ಒಂದು ಸಾಮಾಜಿಕ ವ್ಯವಸ್ಥೆಯನ್ನು ಕಲ್ಪಿಸಿ, ಅದರಲ್ಲಿ ನಾವುಗಳು ಉಚಿತವಾಗಿ (ಯತೇಚ್ಛವಾಗಿ) ಕೊಡುವ ಸಂಗತಿಗಳನ್ನೇ ವ್ಯವಸ್ಥಿತವಾಗಿ ಅಧರಿಸಿ, ಅವುಗಳನ್ನೇ ಬಂಡವಾಳವನ್ನಾಗಿ ಪರಿವರ್ತಿಸಿಕೊಳ್ಳುವ ಈ ತಾಣಗಳ ಬಳಕೆಯಲ್ಲಿನ ಅಸುರಕ್ಷತೆಗಳ ದೃಷ್ಟಿಕೋನವನ್ನು ನಾವು ಹೊಂದುವುದು ಅತ್ಯವಶ್ಯಕ.

ಲೇಖಕರ ಕಿರುಪರಿಚಯ
ಶ್ರೀ ರವಿಶಂಕರ್ ಹರನಾಥ್

ಮೂಲತಃ ಬೆಂಗಳೂರಿನವರಾದ ಇವರು ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ತಂತ್ರಾಂಶ ಸಂಸ್ಥೆಯೊಂದರಲ್ಲಿ ಉದ್ಯೋಗ ಹೊಂದಿರುತ್ತಾರೆ. ತಂತ್ರಜ್ಞಾನದ ಬಗೆಗೆ ಕನ್ನಡ ಭಾಷೆಯಲ್ಲಿ ಲೇಖನಗಳನ್ನು ಬರೆಯುವುದರಲ್ಲಿ ಇವರು ಸಿದ್ಧಹಸ್ತರು.

ಮುಕ್ತ, ಸ್ವತಂತ್ರ ತಂತ್ರಾಂಶಗಳು, ಹಾಗೂ ಇತರೆ ತಂತ್ರಾಂಶಗಳಲ್ಲಿ ಕನ್ನಡ ಭಾಷೆಯ ಬಳಕೆಯನ್ನು ಬೆಳೆಸಬೇಕೆಂಬ ಆಸೆ ಮತ್ತು ಧ್ಯೇಯ ಹೊಂದಿರುವ ಇವರು 'ಸಂಚಯ' ಎಂಬ ಕನ್ನಡ ಮುಕ್ತ ತಂತ್ರಾಂಶಗಳ ವಿಶಿಷ್ಟ ಹಾಗೂ ವಿಶೇಷ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ.

Blog  |  Facebook  |  Twitter

2 ಕಾಮೆಂಟ್‌ಗಳು:

  1. ಅತಿಯಾದ ತಂತ್ರಜ್ಞಾನದಿಂದ ಏನೆಲ್ಲ ಅನಾಹುತಗಳು ಸಂಭವಿಸುತ್ತಿದೆಯೆಂದು ಚೆನ್ನಾಗಿ ವಿವರಿಸಿದ್ದೀರಿ.

    ಪ್ರತ್ಯುತ್ತರಅಳಿಸಿ
  2. ಶ್ರೀ ರವಿಶಂಕರ್ ಹರನಾಥ್ ರವರ ಈ ಲೇಖನವು ಅಂತರ್ ಜಾಲದ ದಾಸಾನುದಾಸರಾಗಿ ಅದರಲ್ಲಿಯೇ ಅತೀವವಾಗಿ ಮಗ್ನರಾಗಿ ತನ್ನೆಲ್ಲ ಸ್ವಂತಿಕೆಯ ವಿಷಯಗಳನ್ನು ಹೇಳವುದು, ತನ್ನ ವಿಶೇಷ ಹಾಗೂ ಗೌಪ್ಯ ಬಾವಚಿತ್ರಗಳನ್ನು ಹಾಕುವುದು ಎಂತಹ ದುರಂತಗಳಾಗಿ ಮಾರ್ಪಡುತ್ತವೆ ಎಂಬುದ್ದಕ್ಕೆ ಇದು ಜೀವಂತ ಸಾಕ್ಷಿಯಾಗಿ ನಿಲ್ಲುತ್ತದೆ .ಇದನ್ನು ಓದಿದ ಮೇಲೆಯಾದರೂ ಎಲ್ಲರೂ ಹೆಚ್ಚೆತ್ತುಕೊಂಡು ಮುಂದುವರೆಯಲಿ ಎಂದು ಮನವಿ ಮಾಡುತ್ತೇನೆ

    ಪ್ರತ್ಯುತ್ತರಅಳಿಸಿ