ಒಂದಾನೊಂದು ಕಾಲದಲ್ಲಿ.. |
"ಕೇಳದೆ ನಿಮಗೀಗ.. ದೂರದಲ್ಲಿ ಯಾರೋ.. ಹಾಡು ಹೇಳಿದಂತೆ.."
"ಗೀತ... ಸಂಗೀತ... ಏಕೆ ಹೀಗೆ.. ದೂರವಾದೆ.. ಎಲ್ಲಿಹೋದೆ.."
ಮೇಲಿನ ಸುಮಧುರ ಗೀತೆಗಳನ್ನು ಕನ್ನಡಿಗರು ಎಂದಾದರೂ ಮರೆಯಲಾದೀತೆ? ಇಂದಿಗೂ ಗುನುಗುವ, ನಮ್ಮೆಲ್ಲರ ಮನಸ್ಸಿನಲ್ಲಿ ಸದಾ ಅಚ್ಚ-ಹಸಿರಾಗಿರುವ ಇವುಗಳು 1981 ರಲ್ಲಿ ತೆರೆಕಂಡ 'ಗೀತ' ಕನ್ನಡ ಚಲನಚಿತ್ರದ ಗೀತೆಗಳು. ಗೀತ ಚಿತ್ರದ ಯಶಸ್ಸಿನ ರೂವಾರಿ ಸಾಹಿತಿ-ನಟ-ನಿರ್ದೇಶಕ 'ಶಂಕರ್ ನಾಗ್'.
'ಶಂಕರ್ ನಾಗ್' ಎಂದೇ ಚಿರಪರಿಚಿತರಾದ ಇವರ ನಿಜವಾದ ಹೆಸರು 'ನಾಗರಕಟ್ಟೆ ಶಂಕರ್'. ಆನಂದಿ ಮತ್ತು ಸದಾನಂದ ನಾಗರಕಟ್ಟೆ ದಂಪತಿಗಳಿಗೆ ಮಗನಾಗಿ ಶಂಕರ್ ಹೊನ್ನಾವರ ತಾಲ್ಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿದ್ದು ದಿನಾಂಕ 9ನೇ ನವಂಬರ್ 1954 ರಂದು.
ವಿದ್ಯಾಭ್ಯಾಸದ ನಂತರ ಬ್ಯಾಂಕ್ ಒಂದರ ಗುಮಾಸ್ತರಾಗಿ ಮುಂಬೈ ನಗರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಮಯದಲ್ಲೇ ಅವರಿಗೆ ಮರಾಠಿ ರಂಗಭೂಮಿಯ ಗೀಳು ಅಂಟಿಕೊಂಡದ್ದು. ಹೀಗಾಗಿ ಶಂಕರ್ ಅವರ ರಂಗಭೂಮಿ ಪ್ರವೇಶವಾದದ್ದು ಮರಾಠಿ ಭಾಷೆಯ ಮೂಲಕ. ಇದೇ ಸಮಯದಲ್ಲಿ ಅಲ್ಲಿನ ಗೆಳೆಯರೊಡನೆ ಸೇರಿ ಶಂಕರ್ ಅವರು ಚಿತ್ರಕತೆ ರಚಿಸಿದ ಮರಾಠಿ ಚಲನಚಿತ್ರ '22 ಜೂನ್ 1897' ಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ದೊರಕಿತು.
ಮರಾಠಿ ರಂಗಭೂಮಿ ಹಾಗೂ ಚಿತ್ರರಂಗದಲ್ಲಿ ತಲ್ಲೀನರಾಗಿದ್ದ ಶಂಕರ್ ಅವರನ್ನು ಕನ್ನಡಕ್ಕೆ ಕರೆತಂದವರು ಶ್ರೀ ಗಿರೀಶ್ ಕಾರ್ನಾಡ್ ಅವರು, ತಮ್ಮ 'ಒಂದಾನೊಂದು ಕಾಲದಲ್ಲಿ' ಎಂಬ ಚಲನಚಿತ್ರದ ಮೂಲಕ. ಇದೇ ಚಿತ್ರದ ಅಭಿನಯಕ್ಕಾಗಿ ಶಂಕರ್ ನಾಗ್ ಅವರಿಗೆ 'ಅತ್ಯುತ್ತಮ ನಟ' ಪ್ರಶಸ್ತಿ ಲಭಿಸಿತು. ಹೀಗೆ ಯಶಸ್ಸಿನ ದಾರಿ ತುಳಿದ ಶಂಕರ್ ಮತ್ತೆ ಹಿಂತಿರುಗಿ ನೋಡಲೇಇಲ್ಲ. ಎಲ್ಲ ಕಾಲದಲ್ಲೂ ಶಂಕರ್ ಅವರೊಂದಿಗಿದ್ದದ್ದು ಕಲಾವಿದೆಯೂ ಆಗಿರುವ ಅವರ ಮಡದಿ 'ಅರುಂಧತಿ ನಾಗ್'.
ಶಂಕರ್ ನಾಗ್ ಒಟ್ಟಾರೆ ನಟಿಸಿದ್ದು 80ಕ್ಕೂ ಹೆಚ್ಚಿನ ಕನ್ನಡ ಮತ್ತು 2 ಹಿಂದಿ ಸಿನಿಮಾಗಳಲ್ಲಿ, ನಿರ್ದೇಶಿಸಿದ್ದು ಸುಮಾರು 10 ಕನ್ನಡ ಚಲನಚಿತ್ರ ಹಾಗೂ 2 ಕಿರುತೆರೆ ಧಾರವಾಹಿಗಳನ್ನು. 'ಇದು ಸಾಧ್ಯ' ಎಂಬ ಕನ್ನಡ ಚಲನಚಿತ್ರದ ಸಂಪೂರ್ಣ ಚಿತ್ರೀಕರಣವನ್ನು ಕೇವಲ 48 ಗಂಟೆಗಳಲ್ಲಿ ಮುಗಿಸಿದ ದಾಖಲೆಯಲ್ಲಿ ಶಂಕರ್ ಅವರ ಕೊಡುಗೆ ಇಲ್ಲದಿಲ್ಲ. 'ಆಟೋ ರಾಜ' ಚಿತ್ರದ ಅವರ ಅಭಿನಯವು ಇಂದಿಗೂ ಶಂಕರ್ ನಾಗ್ ಅವರಿಗೆ ಆಟೋ ಚಾಲಕರ ನೆಚ್ಚಿನ ನಾಯಕನ ಸ್ಥಾನ ಒದಗಿಸಿಕೊಟ್ಟಿದೆ. ಅಲ್ಲದೇ, ಭಾರತೀಯ ದೂರದರ್ಶನದ ಇತಿಹಾಸದಲ್ಲೇ ದಾಖಲೆ ಪ್ರಖ್ಯಾತಿ ಪಡೆದುಕೊಂಡದ್ದು ಶಂಕರ್ ಅವರು ನಿರ್ದೇಶಿಸಿದ ಕೆ. ಆರ್. ನಾರಾಯಣ್ ಅವರ 'ಮಾಲ್ಗುಡಿ ಡೇಸ್' ಕಿರುತೆರೆ ಧಾರವಾಹಿ.
ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ಕಾಲದಲ್ಲೇ ಶಂಕರ್ ಅವರು ಕರ್ನಾಟಕದ ಮೊಟ್ಟಮೊದಲ ಗಣಕೀಕೃತ ಧ್ವನಿಗ್ರಹಣ ತಂತ್ರಜ್ಞಾನ ಹೊಂದಿದ 'ಸಂಕೇತ್' ಸ್ಟೂಡಿಯೋ' ನಿರ್ಮಿಸಿದರು. ಇಷ್ಟಾದರೂ ಅವರು ಎಂದಿಗೂ ರಂಗಭೂಮಿ ಮರೆತವರಲ್ಲ; ಕಡಿಮೆ ವೆಚ್ಚದಲ್ಲಿ ನಾಟಕಗಳ ಪ್ರದರ್ಶನ ನಡೆಸಲು ರಂಗಭೂಮಿ ಕಲಾವಿದರಿಗೆ ನೆರವಾಗುವಂತೆ ನಾಟಕಮಂದಿರವೊಂದನ್ನು ನಿರ್ಮಿಸುವ ಕನಸು ಹೊತ್ತಿದ್ದರು. ಬೆಂಗಳೂರಿಗೆ ಲಂಡನ್ ಮಾದರಿಯ ಮೆಟ್ರೋ ರೈಲು ಸೇವೆ ಬೇಕೆಂಬ ಬೇಡಿಕೆಯ ಜೊತೆಗೆ ಅದರ ನೀಲಿನಕ್ಷೆಯನ್ನೂ ಸಹ ತಯಾರಿಸಿದ್ದ ಶಂಕರ್ ಅದನ್ನು ಅಂದಿನ ಮುಖ್ಯಮಂತ್ರಿ ಶ್ರೀ ರಾಮಕೃಷ್ಣ ಹೆಗ್ಡೆ ಅವರಿಗೆ ಸಲ್ಲಿಸಿದ್ದರು. ಅಂದಿನ ಅವರ ಈ ಎರಡೂ ಮಹತ್ವಾಕಾಂಕ್ಷೆ ಯೋಜನೆಗಳು ಇಂದಿಗೆ ಕ್ರಮವಾಗಿ 'ರಂಗಶಂಕರ' ಮತ್ತು 'ನಮ್ಮ ಮೆಟ್ರೋ' ರೂಪದಲ್ಲಿ ಬೆಂಗಳೂರಿನಲ್ಲಿ ಸಾಕಾರಗೊಂಡಿವೆ.
ಶಂಕರ್ ಅವರು ಬದುಕಿದ್ದು ಬಿಡುವಿಲ್ಲದ 'ಮಿಂಚಿನ ಓಟ'ದ ಬದುಕು; ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚಿನ ಸಾಧನೆ ಮಾಡಿದ ಶಂಕರ್ ನಾಗ್, 30ನೇ ಸೆಪ್ಟೆಂಬರ್ 1990 ರಂದು ರಸ್ತೆ ಅಪಘಾತದಲ್ಲಿ ಅಕಾಲಿಕ ಮರಣ ಹೊಂದಿದರು. ಶಂಕರ್ ಅವರ ಅನನ್ಯ ಸೇವೆಯನ್ನು ಸ್ವೀಕರಿಸುವ ಭಾಗ್ಯ ಕರ್ನಾಟಕ ರಾಜ್ಯ ಹಾಗೂ ಕನ್ನಡ ಚಿತ್ರರಂಗಕ್ಕೆ ಇರಲಿಲ್ಲವೇನೋ..? ಶಂಕರ್ ನಾಗ್ ಹುಟ್ಟಿದ್ದು 'ಅವಿನಾಶ್' (ಅರ್ಥ: ನಾಶವಿಲ್ಲದ) ನಕ್ಷತ್ರನಾಮದಲ್ಲಿ; ಆದ್ದರಿಂದಲೋ ಏನೋ, ಇಂದಿಗೂ ಸಹ ಅಸಂಖ್ಯಾತ ಕನ್ನಡಿಗರ ಹೃದಯ ಸಿಂಹಾಸನವನ್ನು ಅಲಂಕರಿಸಿರುವ ಶಂಕರ್ ನಾಗ್ ಅವರು ನಮ್ಮೆಲ್ಲರ ಸವಿ ನೆನಪಿನಲ್ಲಿ ಶಾಶ್ವತವಾಗಿ ಬದುಕಿದ್ದಾರೆ.
ಶಂಕರ್ ನಾಗ್ ಅವರ 59ನೇ ಹುಟ್ಟುಹಬ್ಬದ ಸಂದರ್ಭದಲ್ಲಿ, ಕಹಳೆ ಕಾರ್ಯಕ್ರಮದ ಇಂದಿನ ಈ ವಿಶೇಷ ಲೇಖನವನ್ನು ಶಂಕರ್ ನಾಗ್ ಅವರಿಗೆ ಅಭಿಮಾನಪೂರ್ವಕವಾಗಿ ಸಮರ್ಪಿಸುತ್ತಾ, ಅವರು 1988ರ ಜುಲೈನಲ್ಲಿ ಬೆಂಗಳೂರು ಆಕಾಶವಾಣಿಯ ಮೂಲಕ ನಡೆಸಿಕೊಟ್ಟಿದ್ದ ವಿಶೇಷ ಕಾರ್ಯಕ್ರಮದ ಧ್ವನಿಮುದ್ರಣದಲ್ಲಿ ಅವರ ಮನದಾಳದ ಮಾತುಗಳನ್ನು ಆಲಿಸೋಣ:
=> ಕಹಳೆ ತಂಡ.
ಶಂಕರನಾಗ್ ಒಬ್ಬ ಅದ್ಭುತ ವ್ಯಕ್ತಿ. ಅವರ ಪ್ರತಿಭೆಗೆ ಸರಿಸಾಟಿ ಅವರೇ. ಇನ್ನೂ ನೂರಾರು ವರ್ಷಗಳು ಕಳೆದರೂ ಅವರ ನೆನಪು ಅಜರಾಮರ.
ಪ್ರತ್ಯುತ್ತರಅಳಿಸಿಮೊನ್ನೆ ಅರುಂಧತಿ ಅಮ್ಮ ಸಿಕ್ಕಾಗ 'ನಾನು ಶಂಕರನಾಗ್ ಅವರ ಅಭಿಮಾನಿ' ಅಂದೆ, ನಗುಮುಖದ ಅವರು ಕೊಟ್ಟ ಉತ್ತರ 'ನಾನು ಕೂಡ'. ಬಹುತೇಕ ಎಲ್ಲ ಕನ್ನಡಿಗರೂ ಇದೆ ಮಾತು ಹೇಳ್ತಾರೇನೋ...
ಮಾಲ್ಗುಡಿ ಡೇಸ್ ಗಾಗಿ ಟಿವಿ ಮುಂದೆ ಕಾದು ಕೂರುತ್ತಿದ್ದ ದಿನಗಳು ನೆನಪಾದವು.. ಕ್ರಿಯಾಶೀಲ ವ್ಯಕ್ತಿ ಹಾಗು ಕನಸುಗಾರ ಶಂಕರ್ ನಾಗ್ ಹೆಚ್ಚು ಕಾಲ ಇರದೇ ಇದ್ದಿದ್ದು ಕನ್ನಡಕ್ಕೆ ಆದ ಬಹು ದೊಡ್ಡ ನಷ್ಟ.
ಪ್ರತ್ಯುತ್ತರಅಳಿಸಿಪ್ರಿಯ ಓದುಗರೇ ,ಆ ದಿನದ ಶಂಕರನಾಗ್ ರವರ ಸಾವಿನ ಸುದ್ದಿ ತಿಳಿದನಂತರ ಮತ್ತು ಅವರ ಸಂಕೇತ್ ಸ್ಟುಡಿಯೋದಲ್ಲಿ ಅವರ ಮೃತಶರೀರದ ಬರುವಿಕೆಗಾಗಿ ಕಾಯುತ್ತಾ , ಸಾರ್ವಜನಿಕ ಧರ್ಶನಕ್ಕೆ ಇಡಲು ಮಂಚದ ಮೇಲೆ ಬಿಳಿಹಾಸಿಗೆಯನ್ನು ಸಿದ್ದಪಡಿಸಿ ಇಟ್ಟಿದ್ದ ದ್ರುಶ್ಯ ಇನ್ನೂ ನನ್ನ ಕಣ್ಣಿಗೆ ಕಟ್ಟಿದ ಹಾಗಿದೆ .ಆಗ ಇವರು ನಿಜವಾಗಿ ಸತ್ತುಹೊಗಿರುವರೇ ಎಂಬ ಸಂಶಯ ಮನದಲ್ಲೇ ಕಾಡುತಿತ್ತು .ಹಾಗೆಯೇ ಒಮ್ಮೆ ಅವರ ಶೂಟಿಂಗ್ ಪ್ಯಾಲೇಸ್ ಮೈದಾನದಲ್ಲಿ ನಡೆಯುತ್ತಿರುವ ಬಗ್ಗೆ ಸುದ್ದಿ ತಿಳಿದು ಅಲ್ಲಿಗೆ ಹೋಗಿ ನಾವು ಅವರ ಶೂಟಿಂಗ್ ನೋಡಲು ಬಂದೆವು ಎಂದು ಅವರಿಗೆ ಪರಿಚಯವಿದ್ದ ನಮ್ಮ ಕಾಲೇಜಿನ ವೈಧ್ಯರ ಕಡೆಯವರು ಎಂದು ಹೇಳಿದಾಗ ಅವರು ಒಳಗೆ ಬನ್ನಿ ಎಂದು ಅವರ ಶೂಟಿಂಗ್ ನೋಡಲು ಅನುವು ಮಾಡಿಕೊಟ್ಟರು.ಹೀಗೆ ಅವರು ಅಂತ ಸೌಜನ್ಯ ಮೂರ್ತಿಯಾಗಿದ್ದರು.ಅಂತವರ ಸವಿ ನೆನಪು ಇಂದಿಗೂ ಎಲ್ಲರ ಮನದಲ್ಲಿ ಏಕೆ ಅಚ್ಚ ಅಳಿಯದೇ ಇಂದಿಗೂ ಉಳಿದಿದೆ ಎಂದು ಆಶ್ಚರ್ಯ ಪಡಬೇಕಾಗಿಲ್ಲ ಅಲ್ಲವೇ?
ಪ್ರತ್ಯುತ್ತರಅಳಿಸಿ