ಬುಧವಾರ, ನವೆಂಬರ್ 21, 2012

ತವರಿನ ಬಳುವಳಿ

ಅಂದು ಆಸ್ಪತ್ರೆ ಕೆಲಸ ಮುಗಿಸಿಕೊಂಡು ಮನೆಗೆ ಬರುವಾಗ ಅಕಾಲಿಕ ದಿಢೀರ್ ಮಳೆಯಿಂದಾಗಿ ಮೈ ಸಂಪೂರ್ಣ ಒದ್ದೆಯಾಗಿತ್ತು. ಮನೆ ಸೇರಿದಾಗ ಸಾಯಂಕಾಲ ಏಳರ ಸಮಯ. ಪ್ರೆಶ್ ಆಗಿ ಮಂಚಕ್ಕೊರಗಿ ಕಾಫೀ ಹೀರುತ್ತಾ ಕೂತಿದ್ದೆ. ಮಡದಿ ಅಪರೂಪಕ್ಕೆ ಪ್ರೀತಿಯಿಂದ ನನ್ನ ಯೋಗಕ್ಷೇಮ ವಿಚಾರಿಸಿ 'ಪೇಟೆಗೆ ಹೋಗಾಣಾರೀ..' ಎಂದಳು. ನನ್ನ ಜೇಬಿಗೆ ಕತ್ತರಿ ಕಾದಿದೆ ಅಂದುಕೊಂಡೆ. ನಿರೀಕ್ಷೆ ಸುಳ್ಳಾಗಲಿಲ್ಲ. 'ಹರ್ಷಾದಲ್ಲಿ ದೀಪಾಪಳಿ ಹಬ್ಬಕ್ಕೆ ಆಫರ್ಗಳಿರುತ್ತವೆ, ಕುಕ್ಕರ್ ಬೇರೆ ಕೆಟ್ಟು ಹೋಗಿದೆ. ಈ ಹಳೇದನ್ನ ಕೊಟ್ಟು ಪಕ್ಕದ ಮನೆಯವರ ತರಹ ಹೊಸ ಮಾಡೆಲ್ ಕುಕ್ಕರ್ ತರೋಣ, ಮತ್ತೆ ಜೂವೆಲ್ಲರಿ ಶಾಪ್ಗೂ ಹೋಗೋದಿದೆ' ಅಂದಳು, ಆಗಲಿ ಎಂದು ತಲೆಯಾಡಿಸಿದೆ. "ಹಾಗಾದ್ರೆ ನಾನ್ ರೆಡಿ ಆಗ್ಲಾ?" ಕೇಳಿದಳು. "ಹ್ಞೂ.." ಎಂದು ಜೇಬಿಗೆ ಕೈಹಾಕಿ ಬಜೆಟ್ ಹೊಂದಿಸಿಕೊಳ್ಳುತ್ತಿದ್ದೆ, ಫೋನ್ ರಿಂಗಾಯಿತು. ರಿಸೀವ್ ಮಾಡಿದೆ.

"ನಾನು ಕಣ್ರೀ, ಗೌರಮ್ಮನ ಗಂಡ.. ಮದ್ಯಾನ್ಹ ನೂರಾನಾಲ್ಕ ಜ್ವರಾ ಅಂತಾ ಮೂರು ಇಂಜಕ್ಷನ್ ಕೊಟ್ಟಿದ್ರಲ್ಲಾ, ಅದಕ್ಕೆ ಇನ್ನೂ ಜೋರಾಗಿದೆ, ಗಡಾ ಬರ್ಬೇಕು ಕಣ್ರೀ" ಎಂದು ಬಡಬಡಿಸಿದ. "ನೀವು ಯಾರು ಗೊತ್ತಾಗಲಿಲ್ಲ? ಯಾವ ಊರು?" ಎಂದೆ. "ನಮ್ಮ ಮನೆಯವಳ ಕೈಗೇ ಕೊಡ್ತೇನೆ" ಎನ್ನುತ್ತಾ ಹೆಂಡತಿಗೆ ಫೋನ್ ವರ್ಗಾಯಿಸಿದ. "ನಾನು ಸಾರ್ ಹೊಸಳ್ಳಿ ಗೌರಮ್ಮ. ಮೈ ತಣ್ಣಗಾಗಿದೆ, ಗೊರ ಗೊರ್ ಶಬ್ದ ಬರ್ತಾ ಇದೆ, ನನಗ್ಯಾಕೊ ಗಾಬ್ರೀಯಾಗಿದೆ. ಗಡಾ ಬರ್ತಿರಾ ಸಾರ್" ಎಂದಳು. "ಸರಿಯಮ್ಮ ನಾನು ಈಗ್ಲೇ ಬರ್ತೇನೆ" ಎಂದು ಫೋನ್ ಕಟ್ ಮಾಡಿದೆ.

ಪೇಟೆಗೆ ಹೋಗಲು ರೆಡಿಯಾಗುತ್ತಿದ್ದ ಮಡದಿಯನ್ನು ಕರೆದು, "ಒಂದು ಸೀರಿಯಸ್ ಕೇಸ್ಗೆ ಹೋಗಿ ಆದಷ್ಟು ಬೇಗ ಬರ್ತೀನಿ ಕಣೆ, ಆ ನಂತರ ಪೇಟೆಗೆ ಹೋಗೋಣ. ಬರುವಾಗ ನಾರ್ಥ ಇಂಡಿಯನ್ ಹೊಟೆಲ್ಗೆ ಹೋಗಿ ಅಲ್ಲೇ ಊಟಾ ಮಾಡಿಕೊಂಡು ಬರೋಣಾ, ಆಯ್ತಾ.." ಎಂದು ರಮಿಸಲು ಪ್ರಯತ್ನಿಸಿದೆ. ಅದಕ್ಕವಳು ಸಿಟ್ಟಿನಿಂದಲೇ "ಮಧ್ಯಾನ್ಹ ಮಾಡಿದ್ದು ಏನ್ ಮಾಡ್ತೀರಿ? ಅದೆಲ್ಲಾ ಏನೂ ಬೇಡಾ, ಆದಷ್ಟು ಬೇಗ ಬನ್ನಿ" ಎಂದಳು. ಲಗುಬಗೆಯಿಂದ ಕಿಟ್ ಹಿಡಿದು ಬೈಕ್ ಏರಿ ಹೊಸಳ್ಳಿ ಕಡೆ ಹೊರಟೆ. ದಾರಿಯಲ್ಲಿ ಗೌರಮ್ಮನ ಎಮ್ಮೆಯನ್ನು ಏನಾದರೂ ಮಾಡಿ ಉಳಿಸಲೇಬೇಕು ಎನ್ನವ ಯೋಚನೆಯಲ್ಲಿ ಎಕ್ಸಲೇಟರ್ ಜಾಸ್ತಿ ಮಾಡಿದೆ.

ಸಾಮಾನ್ಯವಾಗಿ ಮುಂಗಾರು ಮಳೆ ಪ್ರಾರಂಭದಲ್ಲಿ ಜಾನುವಾರುಗಳಿಗೆ ವಾತಾವರಣದಲ್ಲಿ ಆಗುವ ವ್ಯತ್ಯಾಸಗಳು, ಕೆಸರು, ಗುಂಡಿಗಳಲ್ಲಿರುವ ಕಲುಷಿತ ನೀರು ಸೇವನೆಯಿಂದ 'ಗಳಲೆ ರೋಗ' ಎಂಬ ಭಯಂಕರ ಸಾಂಕ್ರಾಮಿಕ ರೋಗ ಕಾಣಿಸಿಕೊಂಡು ಜಾನುವಾರಗಳನ್ನು ಬಲಿ ತೆಗೆದುಕೊಳ್ಳುತ್ತದೆ. ಈ ರೋಗ ಬರದಂತೆ  ಮೂಂಜಾಗ್ರತೆಯಾಗಿ ಲಸಿಕೆಯನ್ನು ಪ್ರತೀ ವರ್ಷ ಎಪ್ರೀಲ್–ಮೇ ತಿಂಗಳಲ್ಲಿ ಹಾಕಲಾಗುತ್ತೆ. ಆದರೆ ಕೆಲವರು ಲಸಿಕೆ ಹಾಕಿಸಿದರೆ ಜ್ವರಾ ಬರುತ್ತೆ, ಹಾಲು ಕಡಿಮೆ ಆಗುತ್ತೆ ಎನ್ನುವ ಕಾರಣಗಳಿಂದ ಲಸಿಕೆ ಹಾಕಿಸಿಕೊಳ್ಳುವುದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಈ ರೋಗ ಯಾವುದೇ ಸಮಯದಲ್ಲೂ ಸಹಾ ಕಾಣಿಸಿಕೊಂಡು ರೈತರ ಹಾಗೂ ಜಾನುವಾರು ವೈದ್ಯರ ನಿದ್ದೆ ಕೆಡಿಸುತ್ತಿದೆ. ಅತಿಯಾದ ಜ್ವರ, ಧಾರಾಕಾರವಾದ  ಜೋಲ್ಲು ಸೋರಿಕೆ, ಗಂಟಲು ಬಾವು, ರೊಗ ಕಾಣಿಸಿಕೊಂಡ ಜಾನುವಾರುಗಳು ಉಸಿರಾಟ  ತೊಂದರೆಯಿಂದ ಸಾವನ್ನಪ್ಪುತ್ತವೆ. ಈ ರೊಗ ಎಳೆ ವಯಸ್ಸಿನ ಜಾನುವಾರುಗಳನ್ನು, ವಿಶೇಷವಾಗಿ ಎಮ್ಮೆ ಜಾತಿಯನ್ನು ಹೆಚ್ಚಾಗಿ ಕಾಡುತ್ತದೆ.

ಹೊಸಳ್ಳಿ ಭಾಗದ ಅಲ್ಲಲ್ಲಿ ಈ ರೋಗ ಕಾಣಿಸಿಕೊಂಡ ಮಾಹಿತಿ ಇದ್ದುದರಿಂದ ಗೌರಮ್ಮನ ಎಮ್ಮೆಗೂ ಇದೇ ಕಾಯಿಲೆ ಇರಬಹುದೆಂದು ಊಹಿಸಿ ಮಧ್ಯಾನ್ಹ ಚಿಕಿತ್ಸೆ ನೀಡಿದ್ದೆ. ಒಂದು ವೇಳೆ ರೋಗ ಉಲ್ಬಣವಾದರೆ ಬೇಗ ತಿಳಿಸಲು ಸಹಾ ಹೇಳಿದ್ದೆ. ಅಂತೆಯೆ ಪಾ..ಪ ಗೌರಮ್ಮ ಆತಂಕದಿಂದ ಫೋನ್ ಮಾಡಿದ್ದಾಳೆ. ಅದರೆ ಗಂಟಲಿನಿಂದ ಗೊರ್ ಗೊರ್ ಶಬ್ಧ ಬಂತೆಂದರೆ ಜಾನುವಾರು ಬದುಕುಳಿಯುವುದು ಸಾಧ್ಯವೇ ಇಲ್ಲ ಎಂಬುದು ನನ್ನ ಹದಿನೇಳು ವರ್ಷದ ವೃತ್ತಿ ಬದುಕಿನ ಅನುಭವ. ಸಾವು ನಿಶ್ಚಿತವೆಂದು ತಿಳಿದಿದ್ದರೂ ಕೊನೆ ಕ್ಷಣದವರೆಗೂ ಪ್ರಯತ್ನಿಸಲೇಬೇಕಲ್ಲವೇ? ಅದು ನನ್ನ ವೃತ್ತಿ ಧರ್ಮ. ಹೀಗೆ ಯೋಚನಾ ಲಹರಿಯಲ್ಲಿ ಚಲಿಸುತ್ತಿದ್ದೆ. ಗೌರಮ್ಮನ ಮನೆ ಬಂದೇ ಬಿಟ್ಟಿತು.

ಮನೆ ಮುಂದೆ ಜನ ಜಂಗುಳಿಯಂತೆ ಸೇರಿದ್ದರು. ಒಮ್ಮೆ ದಂಗಾಗಿ ನಿಂತು ಜನರ ಮಾತುಗಳನ್ನು ಆಲಿಸಿದೆ. ಕೆಲವರು ತಮ್ಮದೇ ಆದ ಅಭಿಪ್ರಾಯ, ಸಲಹೆ ಚಿಕಿತ್ಸಾ ಕ್ರಮಗಳನ್ನು ಹೇಳುತ್ತಿದ್ದರು. ಇನ್ನೂ ಕೆಲವರು ದೇವರ ಕಾಟದಿಂದ ಹೀಗಾಗಿದೆ ಎನ್ನುತ್ತಿದ್ದರು. ಜನರ ಗುಂಪಿನಿಂದ ತೂರಿಕೊಂಡು ಕೊಟ್ಟಿಗೆಯಲ್ಲಿದ್ದ ಎಮ್ಮೆಯನ್ನು ತಲುಪಿದೆ. ಗೌರಮ್ಮ ಎಮ್ಮೆಯ ಮುಂದೆಯೇ ಕುಳಿತಿದ್ದವಳು, ನನ್ನನ್ನ ಕಂಡು ಅವಸರದಿಂದ ಎದ್ದು ನಿಂತು ಕೈ ಮುಗಿದಳು. "ಎನಾದ್ರೂ ಮಾಡಿ ನನ್ನ ಎಮ್ಮೆನಾ ಬದುಕಿಸಿ ಕೊಡಿ ಡಾಕ್ಟ್ರೆ.." ಪದೇ ಪದೇ ಕೈಮುಗಿದಳು. "ಹೆದರ್ಬೇಡಮ್ಮ ಏನೂ ಆಗಲ್ಲ, ಇಂಜಕ್ಷನ್ ಕೊಡಲು ಬೇಗ ಬಿಸಿ ನೀರು ತನ್ನಿ" ಎಂದೆ.

ಎಮ್ಮೆಯನ್ನು ಕೂಲಂಕಶವಾಗಿ ಪರೀಕ್ಷಿಸಿದೆ. "ಮೈ ತಣ್ಣಗಾಗಿದೆ ಅಲ್ವಾ ಡಾಕ್ಟ್ರೇ" ಎಂದ ಗೌರಮ್ಮನ ಗಂಡನಿಗೆ ಹೌದೆಂದು ತಲೆಯಾಡಿಸಿದೆ, ಗಂಟಲ ಬಾವು ಬಂದ ಭಾಗಕ್ಕೆ ಬರೆ ಹಾಕಲಾಗಿತ್ತು. ಬರೆ ಹಾಕಿದರೆ ಬಾವು ಹೆಚ್ಚಾಗುವುದಿಲ್ಲ ಎನ್ನುವುದು ಈ ಭಾಗದ ಜನರ ನಂಬಿಕೆ. ಎಮ್ಮೆಯ ಹಣೆಯ ಮೇಲೆ ದೇವರ ಹೆಸರಿನಲ್ಲಿ ಹಚ್ಚಿದ ವಿಭೂತಿ ರಾಜಾಜಿಸುತಿತ್ತು. ನನ್ನಿಂದ ಎಮ್ಮೆಯನ್ನು ಬದುಕಿಸಲು ಸಾಧ್ಯವಿಲ್ಲದ ಪವಾಡವನ್ನು ದೇವರಾದರೂ ಮಾಡಲಿ ಎಂದುಕೊಂಡೆ.

ಚಿಕಿತ್ಸೆ ಪೂರೈಸಿ, ಗೌರಮ್ಮನತ್ತ ನೋಡಿದೆ. ದುಃಖದಿಂದ ಕಣ್ಣುಗಳು ತುಂಬಿಕೊಂಡಿರುವುದನ್ನು ಕಂಡು 'ಅತ್ತಾರೆ ಅತ್ತು ಬಿಡು ಹೊನಲು ಬರಲಿ..' ಎನ್ನುವ ದ.ರಾ.ಬೇಂದ್ರೆ ಗೀತೆಯ ಸಾಲು ಮನಸಲ್ಲಿ ಸುಳಿಯಿತು. "ಸಾ..ರ್ ಎಲ್ಲರೂ ಎಮ್ಮೆ ಬದಕಲ್ಲ ಅಂತಾರೆ, ನಮ್ಮ ಡಾಕ್ಟರ್ ಕೈಗುಣ ಚನ್ನಾಗಿದೆ. ಬದುಕೇ ಬದುಕುತ್ತೆ ಅಂತಾ ನನ್ನ ಮನಸ್ಸು ಹೇಳುತ್ತೆ. ನನ್ನೆಮ್ಮೆ ಸಾಯಲ್ಲ ಅಲ್ವಾ ಡಾಕ್ಟ್ರೇ.." ಎಂದು ಆಶೆಯಿಂದ ನನ್ನ ಉತ್ತರವನ್ನೇ ಎದುರು ನೋಡುತ್ತಿದ್ದಳು. "ಪ್ರಯತ್ನ ಮಾಡ್ತೇನಮ್ಮ ನೋಡೋಣಾ.. ಕಾಯಿಲೆ ಉಲ್ಬಣವಾಗಿದೆ, ಸಾದ್ಯವಿರುವ ಎಲ್ಲಾ ಪ್ರಯತ್ನವನ್ನೂ ಮಾಡಿದ್ದೇನೆ, ದೇವರಿಚ್ಛೆ ಹೇಗಿದೆಯೋ ಹಾಗೆ ಆಗುತ್ತೆ" ಎಂದು ನನ್ನ ಮೇಲಿದ್ದ ಭಾರವನ್ನು ದೇವರಿಗೆ ವರ್ಗಾಯಿಸಿದೆ. "ಡಾಕ್ಟ್ರೇ ಎಷ್ಟು ದುಡ್ಡು ಖರ್ಚಾದ್ರೂ ಪರವಾಗಿಲ್ಲ ಎಮ್ಮೆ ಬದುಕಬೇಕು, ಶಿವಮೊಗ್ಗಾಕ್ಕೆ ಹೋಗಿ ಯಾವುದಾದ್ರೂ ಔಷಧಿ ತರಬೇಕಾ?" ಎಂದ ಗೌರಮ್ಮನ ಗಂಡನಿಗೆ, "ಏನು ಬೇಕಾಗಿಲ್ಲ ಎಲ್ಲಾ ಔಷಧಿ ಕೊಟ್ಟಿದ್ದೇನೆ, ನಾನು ಹೇಳಿದಷ್ಟ ಮಾತ್ರ ಮಾಡಿ. ಎಮ್ಮೆಗೆ ಹಿಂಸೆಯಾಗುವ ಯಾವುದೇ ಪ್ರಯೋಗ ಮಾಡಬೇಡಿ" ಎಂದು ಎಚ್ಚರಿಸಿದೆ. "ಆಯ್ತು ಸಾರ್ ನೀವ್ ಹೇಳ್ದಂಗೆ ಮಾಡ್ತೇವೆ" ಎಂದಳು ಗೌರಮ್ಮ.

ಗ್ರಾಮ ಪಂಚಾಯತಿ ಜವಾನನನ್ನು ಕರೆಯಿಸಿ ನಾಳೆ ಬೆಳಿಗ್ಗೆ ಗ್ರಾಮದ ಎಲ್ಲಾ ಜಾನುವಾರುಗಳಿಗೆ ಗಂಟಲು ಬೇನೆ ರೋಗದ ಲಸಿಕೆ ಹಾಕುತ್ತೇವೆ, ಅದಕ್ಕೆ ಈಗಲೇ ಡಂಗುರ ಸಾರಬೇಕು ಎಂದು ತಿಳಿಸಿ ಶಿವಮೊಗ್ಗಾಕ್ಕೆ ಹೊರಟು ನಿಂತೆ. "ನಿಲ್ಲಿ ಡಾಕ್ಟ್ರೇ..." ಎನ್ನುತ್ತಾ ಕಾಸಿನ ಕಂತೆಯನ್ನು ಕೈಗಿತ್ತು "ಇನ್ನೂ ಎಷ್ಟು ಕೊಡ್ಬೇಕು ಹೇಳಿ, ಹಾಲಿನ ದುಡ್ಡು ಬಂದ ಕೂಡ್ಲೆ ಕೊಡ್ತೀನಿ. ಒಟ್ಟು ನನ್ನೆಮ್ಮೆ ಉಳಿಬೇಕು" ಎಂದಳು ಗೌರಮ್ಮ.  "ಬೇಡಮ್ಮ ಸಾಕು, ಮೊದಲು ಎಮ್ಮೆ ಹುಷಾರಾಗಲಿ" ಎನ್ನುತ್ತಾ, ಬೈಕ್ ಹತ್ತಿದೆ.

ದಾರಿಯಲ್ಲಿ ಮತ್ತದೇ ಗುಂಗು ಆವರಿಸಿತು. ಗೌರಮ್ಮನ ಕುಟುಂಬವನ್ನು ಹಲವು ದಿನಗಳಿಂದ ಹತ್ತಿರದಿಂದ ಕಂಡಿದ್ದೇನೆ. ಕುಡುಕ ಗಂಡ, ವಯಸ್ಸಾದ ಅತ್ತೆ-ಮಾವ, ಸ್ಕೂಲಿಗೆ ಹೋಗುವ ಮಕ್ಕಳು, ಕಿತ್ತು ತಿನ್ನುವ ಬಡತನ ಇದ್ದರೂ ಸ್ವಾಭಿಮಾನದಿಂದ ಹಾಲಿನ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದ ಸಾದ್ವಿ. ಗೌರಮ್ಮನಿಗೂ ಈ ಎಮ್ಮೆಗೂ ಅವಿನಾಭಾವ ಸಂಬಂಧವಿದೆ; ಅದಕ್ಕೆ ಕಾರಣವೂ ಇದೆ. ಇದು ತವರು ಮನೆಯಿಂದ ಬಳುವಳಿಯಾಗಿ ಬಂದ ತವರಿನ ಎಮ್ಮೆ. ಮದುವೆಯಾದ ಕೆಲವೇ ದಿನಗಳಲ್ಲಿ ತಾಯಿಯನ್ನು ಕಳೆದುಕೊಂಡಿದ್ದ ಗೌರಮ್ಮ, ಎಮ್ಮೆಯಲ್ಲಿಯೇ ತಾಯಿಯನ್ನು ಕಂಡಿದ್ದಳು. ಅತ್ಯಂತ ಆರೋಗ್ಯವಾಗಿಯೇ ಇದ್ದ ಎಮ್ಮೆಗೆ ಇದ್ದಕ್ಕಿದ್ದಂತೆ ಗಂಟಲು ಬೇನೆಯೆಂಬ ಭೀಕರ ರೋಗ ಕಾಣಿಸಿಕೊಂಡಿದ್ದು, ಗೌರಮ್ಮನನ್ನು ಕಂಗೆಡಿಸಿತ್ತು.

ರಾತ್ರಿ ಮನೆ ತಲುಪಿದಾಗ ಸುಮಾರು 10 ಘಂಟೆಯಾಗಿತ್ತು. ಮೂರು ಬಾರಿ ಬೆಲ್ ಮಾಡಿದ ನಂತರ ಬಾಗಿಲು ತೆರೆದ ಮಡದಿ ಮುನಿಸಿಕೊಂಡಿರುದನ್ನು ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. "ಸಾರೀ ಕಣೇ.. ನಾಳೆ ತಪ್ಸಲ್ಲ, ಗ್ಯಾರಂಟೀ ಪೇಟೆಗೆ ಹೋಗೋಣಾ, ಆಯ್ತಾ." ಎಂದೆ. "ಕೈಕಾಲು ಮುಖಾ ತೋಳಕೊಂಡು ಬನ್ನಿ, ಊಟಕ್ಕೆ ಬಡಸ್ತೀನಿ" ಎಂದಳು. "ನನಗ್ಯಾಕೋ ಹಸಿವೆ ಇಲ್ಲಾ, ನೀನು ಊಟಾ ಮಾಡು" ಎಂದು ಒಂದು ಲೋಟಾ ನೀರು ಕುಡಿದು, ದಿವಾನಾ ಮಂಚಕ್ಕೊರಗಿದೆ. ಗೌರಮ್ಮನ ಎಮ್ಮೆಯನ್ನು ಬದುಕಿಸಲು ಇನ್ನೇನಾದ್ರೂ ಮಾಡಬಹುದಿತ್ತೇ ಎಂದು ಮನಸ್ಸು ಯೋಚಿಸುತ್ತಿತ್ತು. ನಿದ್ದೆ ಆವರಿಸಿದ್ದು ಗೊತ್ತಾಗಿದ್ದು ಬೆಳಿಗ್ಗೆ ಎಚ್ಚರವಾದಾಗಲೇ.

ಬೇಗ ರೆಡಿಯಾಗಬೇಕು, ಊರಿನ ಎಲ್ಲ ಜಾನುವಾರುಗಳಿಗೆ ಚುಚ್ಚುಮದ್ದು ನೀಡುವ ವ್ಯವಸ್ಥೆ ಮಾಡಬೇಕು ಎಂದುಕೊಳ್ಳುವಷ್ಟರಲ್ಲಿ ಪೊನ್ ರಿಂಗಾಯಿತು. ಅದು ಗೌರಮ್ಮನ ಮನೆಯ ಸಂಖ್ಯೆಯೇ ಆಗಿತ್ತು. ಗೌರಮ್ಮನ ಎಮ್ಮೆಯ ಸಾವಿನ ಸುದ್ದಿಯೇ ಇರಬೇಕೆನಿಸಿ ಫೋನ್ ಎತ್ತಲು ಮನಸ್ಸಾಗಲಿಲ್ಲ. ಒಂದು ವೇಳೆ ಎಮ್ಮೆ ಸತ್ತು ಹೋದರೆ ಗೌರಮ್ಮನನ್ನು ಸಂತೈಸುವುದು ಹೇಗೆ ಎಂದು ಯೋಚಿಸುತ್ತಿರುವಂತೆ ಫೋನ್ ರಿಂಗ್ ಕಟ್ಟಾಯಿತು. 'ಛೇ, ಫೋನ್ ರಿಸೀವ್ ಮಾಡಬೇಕಿತ್ತು' ಎಂದು ಮನಸ್ಸು ತಳಮಳಿಸಿತು. ಎನೇ ಆಗಲಿ ನಾನೇ ಕಾಲ್ ಮಾಡಿದರಾಯಿತು ಎಂದುಕೊಳ್ಳುವಷ್ಟರಲ್ಲಿ ಅದೇ ಫೋನ್ ರಿಂಗಾಯಿತು. ಅಳುಕಿನಿಂದಲೇ ರಿಸೀವ್ ಮಾಡಿದೆ, "ನಾನು ಸಾ.. ಹೊಸಳ್ಳಿ ಗೌರಮ್ಮ, ಎಮ್ಮೆ ಹುಶಾರಾಗಿ ಮೆಲುಕಾಡ್ತಾ ಇದೆ" ಎಂದಳು. ನಾನು ತಬ್ಬಿಬ್ಬಾಗಿ "ಏನೂ... ಎಮ್ಮೆ ಹುಷಾರಾಗಿದೆಯಾ?" ಅನುಮಾನದಿಂದಲೇ ಕೇಳಿದೆ. ಖುಷಿಯಿಂದ "ಹೌದು ಸಾರ್ ದೇವ್ರು ನನ್ನ ಕೈ ಬಿಡಲಿಲ್ಲ. ನನ್ನ ಪಾಲಿನ ದೇವ್ರು ಬಂದಂಗ್ ಬಂದು ನನ್ನ ಎಮ್ಮೆ ಜೀವಾ ಉಳಿಸಿದ್ರಿ" ಎಂದಳು. "ಸರಿಯಮ್ಮ, ಇವತ್ತೂ ಕೂಡಾ ಅದಕ್ಕೆ ಚಿಕಿತ್ಸೆ ಕೊಡಬೇಕಾಗುತ್ತೆ, ನಾನು ಈಗ್ಲೇ ಬರ್ತೇನೆ" ಎಂದು ಫೋನ್ ಕಟ್ ಮಾಡಿದೆ. ಮನದಲ್ಲಿ ದೇವರನ್ನು ನೆನೆದು 'ಯು ಆರ್ ಗ್ರೇಟ್' ಎಂದೆ. ಮನಸ್ಸಿಗೆ ಸಮಾಧಾನದ ಅನುಭವ.

ಬೇಗ ರೆಡಿಯಾಗಿ ಹೊಸಳ್ಳಿ ಗ್ರಾಮ ತಲುಪಿದೆ. ಗ್ರಾಮಸ್ಥರೆಲ್ಲ ತಮ್ಮ ಜಾನುವಾರುಗಳಿಗೆ ಚುಚ್ಚುಮದ್ದು ಕೊಡಿಸಲು ಕರೆದೊಯ್ಯುತ್ತಿದ್ದರು. ಲಸಿಕೆ ಹಾಕುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿತ್ತು. ಗೌರಮ್ಮನ ಎಮ್ಮೆಯನ್ನು ನೋಡಲು ಅವಳ ಮನೆ ತಲುಪಿದೆ. ನನ್ನನ್ನು ಕಂಡೊಡನೆಯೇ ಕೈಮುಗಿದಳು. ಗೌರಮ್ಮನ ಮುಖ ಅರಳಿತ್ತು. ಕೊಟ್ಟಿಗೆಯಲ್ಲಿದ್ದ ಎಮ್ಮೆ ಮೆಲುಕಾಡುತ್ತಿತ್ತು. ಜಾನುವಾರುಗಳಲ್ಲಿ ಮೆಲುಕಾಡುವುದು ಆರೋಗ್ಯದ ಲಕ್ಷಣ. ಎಮ್ಮೆಯ ಮೈ ಸವರಿದೆ. ಮೆಲುಕು ನಿಲ್ಲಿಸಿದ ಎಮ್ಮೆ ನನ್ನ ಕಡೆ ನೋಡುತ್ತಾ ನಿಂತಿತು. ಎಮ್ಮೆಯ ಕಣ್ಣುಗಳು,  ತುಂಬಿ ಬಂದ ಆ ನೋಟ ನನಗೆ ಕೃತಜ್ಞತೆ ಸಲ್ಲಿಸಿದಂತಿತ್ತು. ಮೂಕ ಪ್ರಾಣಿಯ ಕಣ್ಣುಗಳಿಂದ ಹೊರಹೊಮ್ಮಿದ ಆ ಧನ್ಯತಾ ಭಾವ ಕಂಡು ಮೂಕವಿಸ್ಮಿತನಾದೆ.

ಲೇಖಕರ ಕಿರುಪರಿಚಯ
ಡಾ. ನಾಗರಾಜ ಕೆ. ಎಂ. ಹಾನಗಲ್

ಇವರು ವೃತ್ತಿಯಲ್ಲಿ ಪಶುವೈದ್ಯರು. ಪ್ರಸ್ತುತ ಪಶುವೈದ್ಯಾಧಿಕಾರಿಯಾಗಿ ಶಿವಮೊಗ್ಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ದೇಶೀಯ ಗೋತಳಿಗಳ ಸಂರಕ್ಷಣೆ, ಸಂಶೋಧನೆ ಹಾಗೂ ಸಂವರ್ಧನೆ, ಮತ್ತು ಅಸಾಂಪ್ರದಾಯಿಕ ಜಾನುವಾರು ಆಹಾರ ಮೂಲಗಳ ಮೌಲ್ಯವರ್ಧನೆ ಇವರ ಆಸಕ್ತಿಯ ವಿಷಯಗಳು.

ದೇಶದಲ್ಲಿಯೇ ಪ್ರಥಮ ಎನ್ನಬಹುದಾದ 'ಕನ್ನಡ ಪಶುವೈದ್ಯ ಸಾಹಿತ್ಯ ಪರಿಷತ್ತು' ರಚನೆಯಲ್ಲಿ ಮುಖ್ಯ ಪಾತ್ರವಹಿಸಿ ಅದರ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿಗಳಾಗಿದ್ದಾರೆ.

ಕರ್ನಾಟಕ ಪಶುವೈದ್ಯಕೀಯ ಸಂಘ ಬೆಂಗಳೂರು ನೀಡುವ 'ಶ್ರೇಷ್ಠ ಪಶುವೈದ್ಯ ಪ್ರಶಸ್ತಿ', ಕರ್ನಾಟಕ ಸ್ವದೇಶಿ ಆಂದೋಳನ ಬೆಂಗಳೂರು ಇವರಿಂದ 'ಅತ್ಯುತ್ತಮ ಯುವ ವಿಜ್ಞಾನಿ' ಹಾಗೂ ಶ್ರೀರಾಮಚಂದ್ರಾಪುರ ಮಠ ನೀಡುವ 'ಸರ್ವಧಾರಿ ಸಮ್ಮಾನ' ಪ್ರಶಸ್ತಿಗಳಿಗೆ ಇವರು ಭಾಜನರಾಗಿದ್ದಾರೆ.

Blog  |  Facebook  |  Twitter

1 ಕಾಮೆಂಟ್‌:

  1. ಓದುತ್ತಿದ್ದಂತೆ ಮನಸ್ಸು ಭಾರವಾಯಿತು. ಎಮ್ಮೆ ಸರಿ ಹೋಯಿತೆಂದು ಓದುವ ತನಕ ನನ್ನ ಮನಸ್ಸಿಗೆ ನೆಮ್ಮದಿ ಇರಲಿಲ್ಲ. ಮನಸ್ಸಿಗೆ ನಾಟುವಂತೆ ಬರೆದಿದ್ದೀರಿ.

    ಪ್ರತ್ಯುತ್ತರಅಳಿಸಿ