ಶನಿವಾರ, ನವೆಂಬರ್ 17, 2012

ಕಾನೂನಿನಲ್ಲಿ ಪ್ರಾಣಿ-ಪಕ್ಷಿಗಳಿಗೆ ಎಷ್ಟಿದೆ ರಕ್ಷಣೆ?

ಪಶು, ಪ್ರಾಣಿ, ಪಕ್ಷಿಯಾದಿ ಸಮಸ್ತ ಜೀವಸಂಕುಲ ಹಾಗೂ ಸಸ್ಯ ಸಮೂಹ - ಇವುಗಳು ಮಾನವನ ಜೀವನಾಡಿ, ರೈತನ ಬೆನ್ನೆಲುಬು, ಸಂವೃದ್ಧ, ಸಶಕ್ತ, ಸ್ವತಂತ್ರ ಬದುಕಿನ ಜೀವಾಳ. ಸಮಸ್ತ ಮಾನವ ಕುಲದ ಆಧಾರ ಸ್ತಂಭ ಹಾಗೂ ಪರಿಸರ ಸಮತೋಲನ ಸಂಜೀವಿಗಳು.

"ಒಂದು ದೇಶದ ನೈತಿಕ ಅಭಿವೃದ್ಧಿಯನ್ನು ಆ ದೇಶವು ಪಶು-ಪ್ರಾಣಿಗಳ ಕಡೆಗೆ ತೋರುವ ನಡತೆಯಿಂದ ನಿರ್ಧರಿಸಬಹುದು" ಎಂದು ವ್ಯಾಖ್ಯಾನಿಸಿದಂತಹ ಮಹಾತ್ಮ ಗಾಂಧಿಯವರ ಮಾತೃಭೂಮಿಯಾದ ಭಾರತದಲ್ಲಿನ ಹಲವು ಕಾನೂನುಗಳು ಪ್ರಾಣಿ-ಪಕ್ಷಿಗಳಿಗೆ ನೀಡುತ್ತಿರುವ ರಕ್ಷಣೆಯ ಬಗೆಗಿನ ಸೂಕ್ಷ್ಮ ಪರಿಚಯ ಇಗೋ ಇಲ್ಲಿದೆ:

ಕರ್ನಾಟಕ ಪ್ರಾಣಿಬಲಿ ಪ್ರತಿಬಂಧ ಕಾಯ್ದೆ – 1959
ಯಾವುದೇ ಪಶುಪಕ್ಷಿಗಳನ್ನು ಬಲಿ ನೀಡುವುದು – "ಪ್ರಾಣಿಬಲಿ" ನೀಡುವುದು ಕಾನೂನು ರೀತ್ಯಾ ಅಕ್ಷಮ್ಯ ಹಾಗೂ ಶಿಕ್ಷಾರ್ಹ ಅಪರಾಧವಾಗಿದೆ. ಬಲಿ ನೀಡುವವರು, ನೆರವಾಗುವವರು, ಭಾಗವಹಿಸುವವರು ಹಾಗೂ ಪೌರೋಹಿತ್ಯ ನಡೆಸುವವರನ್ನು ವಾರೆಂಟ್ ಇಲ್ಲದೆ ಬಂಧಿಸುವ ಅಧಿಕಾರವನ್ನು ಪೋಲೀಸ್ ಅಧಿಕಾರಿಗಳು ಹೊಂದಿರುತ್ತಾರೆ.

ಪ್ರಾಣಿ ಕ್ರೂರತಾ ಪ್ರತಿಬಂಧ ಕಾಯ್ದೆ – 1960
ಯಾವುದೇ ಪ್ರಾಣಿಪಕ್ಷಿಗಳೆಡೆಗೆ ಕ್ರೌರ್ಯದಿಂದ ವರ್ತಿಸುವುದು - ಹಿಂಸಿಸುವುದು, ಬಂಧಿಸುವುದು, ಗಾಯಗೊಳಿಸುವುದು, ಹೊಡೆಯುವುದು, ಅಶಕ್ತ/ಅನಾರೋಗ್ಯ ಪ್ರಾಣಿಗಳಿಂದ ಕೆಲಸ ಮಾಡಿಸುವುದು ಮುಂತಾದ ಕೃತ್ಯಗಳು ಕಾನೂನು ರೀತ್ಯಾ ಅಕ್ಷಮ್ಯ ಹಾಗೂ ಶಿಕ್ಷಾರ್ಹ ಅಪರಾಧವಾಗಿದೆ.

ಕರ್ನಾಟಕ ಪ್ರಾಣಿ ರೋಗಗಳ (ನಿಯಂತ್ರಣ) ಕಾಯ್ದೆ – 1961
ರೋಗೋದ್ರೇಕಗಳನ್ನು ಮತ್ತು ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸುವ ಉದ್ದೇಶದಿಂದ ಸರ್ಕಾರವು ಪ್ರಕಟಣೆ ನೀಡುವುದರ ಮೂಲಕ ಪ್ರಾಣಿಗಳಿಗೆ ಲಸಿಕೆ ಹಾಕುವುದು, ಚಲನ-ವಲನ ನಿಯಂತ್ರಿಸುವುದು, ಸಂತೆ ಮತ್ತು ಜಾತ್ರೆಗಳಲ್ಲಿ ಮಾರಾಟ ನಿಷೇಧಿಸುವ ಅಧಿಕಾರ ಹೊಂದಿದೆ.

ಕರ್ನಾಟಕ ಗೋವಧೆ ಪ್ರತಿಬಂಧ ಮತ್ತು ಜಾನುವಾರು ಪರಿರಕ್ಷಣೆ ಅಧಿನಿಯಮ – 1964
ಈ ಕಾಯ್ದೆಯ ರೀತ್ಯಾ ಹಸುಗಳ, ಕರುಗಳ ಹಾಗೂ ಎಮ್ಮೆಗಳ ವಧೆಯನ್ನು ನಿಷೇಧಿಸಿದೆ. 

ವನ್ಯ ಜೀವಿ ಸಂರಕ್ಷಣಾ ಕಾಯ್ದೆ 1972
ವನ್ಯಜೀವಿಗಳ ಸಂರಕ್ಷಣೆಗೆ ಮೀಸಲಾದ ಈ ಕಾಯ್ದೆಯ ಶೆಡ್ಯೂಲ್ 1, 2 ಮತ್ತು 4 ರ ಅಡಿಯಲ್ಲಿ ಹಾವುಗಳನ್ನು ಸಂರಕ್ಷಿತ ವನ್ಯಜೀವಿಗಳೆಂದು ಘೋಷಿಸಲಾಗಿದೆ. ಹಾವುಗಳನ್ನು ಸ್ವಾಭಾವಿಕ ನೆಲೆಯಿಂದ ಹಿಡಿಯುವುದು, ತಮ್ಮ ಅಧೀನದಲ್ಲಿರಿಸಿಕೊಳ್ಳುವುದು, ಅವುಗಳನ್ನು ಆಟವಾಡಿಸುವುದು, ಭುಜದ ಸುತ್ತಾ ಹಾಕಿಕೊಳ್ಳುವುದು, ಮುಂಗುಸಿ-ಕಾಡುಬೆಕ್ಕುಗಳೊಂದಿಗೆ ಜಗಳವಾಡಿಸುವುದು, ಪೂಜೆಯ ಹೆಸರಿನಲ್ಲಿ ಅರಿಶಿಣ, ಕುಂಕುಮ, ಹಾಲೆರೆದು ಜೀವಹಾನಿ ಮಾಡುವುದೆಲ್ಲವೂ ಕಾನೂನು ರೀತ್ಯಾ ಶಿಕ್ಷಾರ್ಹ ಅಪರಾಧ.

ಜಾನುವಾರು ಸಾಗಾಣಿಕೆ ಅಧಿನಿಯಮ – 1978
ಈ ಅಧಿನಿಯಮವು ಜಾನುವಾರುಗಳ ಸಾಗಾಣಿಕೆ ಸಮಯದಲ್ಲಿ ಪಾಲಿಸಲೇಬೇಕಾದ ರೂಪರೇಖೆಗಳನ್ನು ವಿವರಿಸುತ್ತದೆ.
ಮುಖ್ಯಾಂಶಗಳು:
  1. ಸಾಗಾಣಿಕೆ ವಾಹನದಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇರಬೇಕು.
  2. ಪಶುಗಳನ್ನು ವಾಹನಕ್ಕೆ ಪ್ರಯಾಸರಹಿತವಾಗಿ ತುಂಬುವ-ಇಳಿಸುವ ವ್ಯವಸ್ಥೆ ಇರಬೇಕು.
  3. ಪಶುಗಳನ್ನು ತುಂಬುವ ಮೊದಲು ನೀರು ಮತ್ತು ಆಹಾರವನ್ನು ಸಮರ್ಪಕವಾಗಿ ಪೂರೈಸಿರಬೇಕು.
  4. ಪ್ರಯಾಣದ ಸಂದರ್ಭ ಸಾಕಷ್ಟು ನೀರು, ಆಹಾರದ ದಾಸ್ತಾನು ವಾಹನದಲ್ಲಿ ಇಟ್ಟಿರಬೇಕು.
  5. ಪ್ರತಿ ವ್ಯಾಗನ್ನಿಗೆ ಒಬ್ಬ ಸಹಾಯಕನಿರಬೇಕು.
  6. ಸಾಧ್ಯವಾದಷ್ಟು ಮಟ್ಟಿಗೆ ರಾತ್ರಿಯ ವೇಳೆಯಲ್ಲಿ ಸಾಗಾಟ ಮಾಡಿ ಬೆಳಗಿನ ವೇಳೆಯಲ್ಲಿ ಪ್ರಾಣಿಗಳನ್ನು ಕೆಳಗಿಳಿಸಿ ಆಹಾರ, ನೀರು, ವಿಶ್ರಾಂತಿ ಒದಗಿಸಬೇಕು.
  7. ಪ್ರಾಣಿಗಳು ಪ್ರಯಾಣಿಸುವಾಗ ನೆಗೆಯಬಹುದಾದ ಸಂಭವವಿಲ್ಲದಿದ್ದಲ್ಲಿ ಸಂಕೋಲೆಯಿಂದ ಬಂಧಿಸುವುದಾಗಲಿ, ಕಾಲುಗಳನ್ನು ಕಟ್ಟುವುದಾಗಲಿ ಮಾಡಬಾರದು.

ಭಾರತೀಯ ದಂಡ ಸಂಹಿತೆಯ ಕಲಂ – 428
10 ರೂಪಾಯಿಗಳು ಮತ್ತು ಅದಕ್ಕೂ ಹೆಚ್ಚಿನ ಬೆಲೆಯ ಯಾವುದೇ ಪ್ರಾಣಿಗಳನ್ನು ಕೊಲ್ಲುವುದು, ವಿಷ ನೀಡುವುದು, ಅನುಪಯುಕ್ತಗೊಳಿಸುವುದು, ಅಂಗವಿಕಲಗೊಳಿಸುವುದೇ ಮುಂತಾದ ಕೃತ್ಯಗಳನ್ನೆಸಗುವವರನ್ನು 2 ವರ್ಷಗಳ ಸಜಾ ಅಥವಾ ದಂಡ ಅಥವಾ ಎರಡೂ ಶಿಕ್ಷೆಗಳಿಗೆ ಗುರಿಪಡಿಸಬಹುದಾಗಿದೆ.

ಭಾರತೀಯ ದಂಡ ಸಂಹಿತಿಯ ಕಲಂ – 429
50 ರೂಪಾಯಿಗಳು ಮತ್ತು ಅದಕ್ಕೂ ಹೆಚ್ಚಿನ ಬೆಲೆಯ ಯಾವುದೇ ಪ್ರಾಣಿಗಳನ್ನು ಕೊಲ್ಲುವುದು, ವಿಷ ನೀಡುವುದು, ಅನುಪಯುಕ್ತಗೊಳಿಸುವುದು, ಅಂಗವಿಕಲಗೊಳಿಸುವುದೇ ಮುಂತಾದ ಕೃತ್ಯಗಳನ್ನೆಸಗುವವರನ್ನು 5 ವರ್ಷಗಳ ಸಜಾ ಅಥವಾ ದಂಡ ಅಥವಾ ಎರಡೂ ಶಿಕ್ಷೆಗಳಿಗೆ ಗುರಿಪಡಿಸಬಹುದಾಗಿದೆ.

(ಸೂಚನೆ: ಈ ಮೇಲಿನ ಎರಡೂ ಕಲಂಗಳಲ್ಲಿ "ಪ್ರಾಣಿಗಳು" ಎಂದರೆ ಮನುಷ್ಯನ ಹೊರತುಪಡಿಸಿ ಉಳಿದ ಎಲ್ಲಾ ಜೀವಜಂತುಗಳು ಎಂದು ಅರ್ಥೈಸಲಾಗಿದೆ)

ಮೇಲ್ಕಂಡ ಎಲ್ಲಾ ನಿಯಮಗಳೊಂದಿಗೆ ಪ್ರಾಣಿಗಳ ಮೇಲೆ ಪ್ರಯೋಗ ನಿಯಂತ್ರಣ ಮತ್ತು ಪರಿವೀಕ್ಷಣೆ ಕಾಯ್ದೆ ಹಾಗೂ ಇಂಡಿಯನ್ ಸ್ಟ್ಯಾಂಡರ್ಡ್ ಇನ್ಸ್ಟಿಟ್ಯೂಟಿನ ಮಾರ್ಗಸೂಚಿಗಳೂ ಸಹ ಚಾಲ್ತಿಯಲ್ಲಿವೆ.

ಬಾಲಂಗೋಚಿ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಕಾನೂನುಗಳು, ಸುಪ್ರೀಂಕೋರ್ಟ್, ಹೈಕೋರ್ಟ್ ಮುಂತಾದ ನ್ಯಾಯಾಲಯಗಳ ಆದೇಶಗಳಿದ್ದರೂ ಸಹ ಲಕ್ಷಾಂತರ ಮೂಕ, ಮುಗ್ಧ, ನಿರಪರಾಧಿ ಪಶು, ಪ್ರಾಣಿ, ಪಕ್ಷಿಯಾದಿ ಜೀವಸಂಕುಲದ ವಿರುದ್ದ ನಿರಂತರವಾಗಿ ನಡೆಯುತ್ತಿರುವ ಮಾನವನ ಅಮಾನುಷ ಕೃತ್ಯಗಳಿಗೆ ಅಂತ್ಯ ಎಲ್ಲಿ?.. ಎಂದು??.. ಯಾರಿಂದ???..

ಲೇಖಕರ ಕಿರುಪರಿಚಯ
ಡಾ. ಶಿವಕುಮಾರ್

ಮೈಸೂರು ಮೂಲದವರಾದ ಇವರು ಪಶುವೈದ್ಯಕೀಯ ವೃತ್ತಿಯನ್ನು ಅವಲಂಬಿಸಿದ್ದು, ಓದು ಬರಹಗಳೆಡೆಗೆ ಹೆಚ್ಚು ಆಸಕ್ತಿಯುಳ್ಳವರಾಗಿರುತ್ತಾರೆ. ವೃತ್ತಿಪರ ಲೇಖನಗಳು ಮತ್ತು ತಾಂತ್ರಿಕ ಪುಸ್ತಕಗಳ ಬೃಹತ್ ಸಂಗ್ರಹ ಇವರಲ್ಲಿದೆ.

ದಿನಪತ್ರಿಕೆಗಳಲ್ಲಿ ಜನಪ್ರಿಯ ಲೇಖನಗಳ ಮೂಲಕ ಸಾಮಾನ್ಯ ಜನರಲ್ಲಿ ಪಶು ಪ್ರಾಣಿಗಳೆಡೆ ಒಲವು ಮೂಡಿಸುವುದು ಇವರ ಅತಿಪ್ರಿಯವಾದ ಹವ್ಯಾಸ. ಅಲ್ಲದೇ, ಚುಟುಕಾದ ಅರ್ಥಗರ್ಭಿತವಾದ ಬರಹಗಳ ಮೂಲಕ ಜನರ ಗಮನ ಸೆಳೆಯುವಲ್ಲಿ ಇವರು ನಿರಂತರ ಪ್ರಯತ್ನ ನಡೆಸಿದ್ದಾರೆ.

Blog  |  Facebook  |  Twitter

3 ಕಾಮೆಂಟ್‌ಗಳು:

  1. ಮಾಹಿತಿಗೆ ಧನ್ಯವಾದಗಳು. ಒಂದು ಪ್ರಶ್ನೆ ಇದೆ. ದಂಡ ಸಂಹಿತೆಯ ಕಲಂ – 428 ಮತ್ತು 429ರಲ್ಲಿ, ೧೦ ರೂಪಾಯಿಗಳಿಗಿಂತ ಹೆಚ್ಚು, ೫೦ ರೂಪಾಯಿಗಿಂತ ಹೆಚ್ಚು ಬೆಲೆಯ ಪ್ರಾಣಿಗಳು ಎಂದು ಬರೆದಿದ್ದೀರಿ. ಈ ’ಬೆಲೆ’ ಹೇಗೆ ನಿರ್ಧರಿತವಾಗುತ್ತದೆ? ಯಾರು ನಿರ್ಧರಿಸುತ್ತಾರೆ? ಒಂದೆರಡು ಉದಾಹರಣೆ ಕೊಟ್ಟರೆ ಇನ್ನೂ ಒಳ್ಳೆಯದು.

    ಪ್ರತ್ಯುತ್ತರಅಳಿಸಿ
  2. ವಿಕಾಸ್ ಹೆಗಡೆ ಅವರೇ, ನಿಮ್ಮ ಉತ್ಸುಕತೆಯ ಪ್ರತಿಕ್ರಿಯೆಗೆ ಧನ್ಯವಾದಗಳು. ಈ ಬಗ್ಗೆ ನಾವು ಲೇಖಕರಾದ ಡಾ. ಶಿವಕುಮಾರ್ ಅವರೊಡನೆ ಸಂಭಾಷಿಸಿದ್ದು, ಸ್ವತಃ ಅವರೇ ನಿಮ್ಮ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರಿಸಲಿದ್ದಾರೆ.

    ಕಹಳೆ ಮಾಧ್ಯಮದಲ್ಲಿ ನಿಮ್ಮ ರಚನಾತ್ಮಕ ಪಾಲ್ಗೊಳ್ಳುವಿಕೆಗಾಗಿ ಅನಂತ ವಂದನೆಗಳು; ಇದು ನಮಗೆ ಅತ್ಯಂತ ಪ್ರೋತ್ಸಾಹದಾಯಕವೆನಿಸಿದೆ.

    ಪ್ರತ್ಯುತ್ತರಅಳಿಸಿ
  3. ಆತ್ಮೀಯ ವಿಕಾಸ್ ಹೆಗಡೆಯವರಿಗೆ ನಮಸ್ಕಾರಗಳು. ನನ್ನ ಲೇಖನದ ಬಗ್ಗೆ ಪ್ರತಿಕ್ರಯಿಸಿದ ಕುರಿತು ಬಹಳ ಸಂತೋಷವಾಯಿತು. ನೀವು ಕೇಳಿರುವಂತೆ ಭಾರತೀಯ ದಂಡ ಸಂಹಿತೆಯು 1860-62 ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು ಅನೇಕ ಬಾರಿ ಪರಿಷ್ಕರಿಸಲ್ಪಟ್ಟಿದೆಯಾದರೂ ಕಲಂ 428 ಮತ್ತು 429 ರಲ್ಲಿ ಪ್ರಾಣಿ ದೌರ್ಜನ್ಯದಡಿ ಉಲ್ಲೇಖಿಸಿರುವ ಪಶು ಪಕ್ಷಿಗಳ ಮೌಲ್ಯ ಪರಿಷ್ಕರಣೆಯಾಗಿಲ್ಲ. ಹಾಗಾಗಿ ಹಳೆಯ ದರಗಳು ಮುಂದುವರಿದಿದೆಯಾದರೂ ನಿರ್ದಿಷ್ಟ ಕೇಸುಗಳ ವಿಲೇ ಸಮಯದಲ್ಲಿ ಅವುಗಳ ಪ್ರಸ್ತುತ ಮೌಲ್ಯಕ್ಕೆ ಅನುಗುಣವಾಗಿ ಕಲಂ 428 ಮತ್ತು 429ರಲ್ಲಿ ನಿಗಧಿಪಡಿಸಲಾಗಿರುವ ದಂಡವನ್ನು ವಿಧಿಸಲಾಗುತ್ತಿದೆ.

    ಧನ್ಯವಾದಗಳು,
    ಶಿವಕುಮಾರ್

    ಪ್ರತ್ಯುತ್ತರಅಳಿಸಿ