"ಈ ಸರ್ತಿ ಆರ್ಟಿಕಲ್ ಬರೆಯೋಕೆ ಬಿಡುವೇ ಆಗ್ಲಿಲ್ಲ.. ಮುಂದಿನ ವರ್ಷ ಖಂಡಿತಾ ಕೊಡ್ತೀನಿ.." ಕಳೆದ ವರ್ಷ ಅವರನ್ನು ಭೇಟಿ ಮಾಡಿದ್ದ ಕಹಳೆ ತಂಡದೊಂದಿಗೆ ಡಾ. ಸತೀಶ್ ಶೃಂಗೇರಿ ಆಡಿಡ ಮಾತುಗಳಿವು. ಅವರ ಪ್ರವೃತ್ತಿಯೇ ಹಾಗೆ.. ಸದಾ ತಮ್ಮನ್ನು ತಾವು ವೃತ್ತಿ-ಕಲಾ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಅಂದು ಅವರನ್ನು ಭೇಟಿ ಮಾಡಿದ ನಮ್ಮ ತಂಡಕ್ಕೆ ತಮ್ಮ ಕ್ರಿಯಾಶೀಲ-ಸೃಜನಾತ್ಮಕ ವ್ಯಕ್ತಿತ್ವದಿಂದ ಹೊಸದೊಂದು ಭರವಸೆ ಮೂಡಿಸಿದ್ದರು. ಕಹಳೆ 2012 ರ ಪ್ರಸ್ತುತ ಆವೃತ್ತಿಯಲ್ಲಿ ಅವರ ಲೇಖನವೊಂದನ್ನು ಪ್ರಕಟಿಸುವ ಭಾಗ್ಯ ನಮಗಿಲ್ಲ; ಡಾ. ಸತೀಶ್ ಶೃಂಗೇರಿ ಅವರು ಇಂದಿಗೆ ಸರಿಯಾಗಿ ಎರಡು ತಿಂಗಳುಗಳ ಹಿಂದೆ ಅನಾರೋಗ್ಯದ ಕಾರಣದಿಂದ ನಮ್ಮೆಲ್ಲರನ್ನಗಲಿದರು. ಅವರ ಸಹೋದರರಾದ ಶ್ರೀ ರಘುಪತಿ ಶೃಂಗೇರಿ ಇವರು ರಚಿಸಿರುವ ಡಾ. ಸತೀಶ್ ಶೃಂಗೇರಿ ಯವರ ಬಗೆಗಿನ ಲೇಖನವನ್ನು ಪ್ರಕಟಿಸುವುದರೊಂದಿಗೆ ಅಗಲಿದ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇವೆ.
=> ಕಹಳೆ ತಂಡ.
=> ಕಹಳೆ ತಂಡ.
![]() |
ಡಾ. ಸತೀಶ್ ಶೃಂಗೇರಿ (1968 - 2012) ಕಲೆ : ಶ್ರೀ ರಘುಪತಿ ಶೃಂಗೇರಿ |
ಹುಟ್ಟಿದ್ದು - 1968ನೇ ಇಸವಿ, ಮೇ 1 ರಂದು ಶೃಂಗೇರಿಯ ಸಮೀಪದ ನೆಮ್ಮಾರು ಗ್ರಾಮದಲ್ಲಿ.
ತಾಯಿ- ಶ್ರೀಮತಿ ಯಶೋದಾ ಮತ್ತು ತಂದೆ- ಶ್ರೀ ಶೃಂಗೇಶ್ವರ ರಾವ್.
ಸತೀಶ್ ರವರು ತಮ್ಮ ವಿದ್ಯಾಭ್ಯಾಸವನ್ನು ಶೃಂಗೇರಿ ಸಮೀಪದ ಕಿಗ್ಗಾ ಶಾಲೆ ಮತ್ತು ಶೃಂಗೇರಿಯ ಜೆ.ಸಿ.ಬಿ.ಎಂ. ಕಾಲೇಜಿನಲ್ಲಿ ಪಡೆದಿದ್ದರು.
ಕೊಪ್ಪ ಮತ್ತು ಗದಗದ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಬಿ.ಎ.ಎಮ್.ಎಸ್. ವ್ಯಾಸಂಗ ಮಾಡಿ, ನಂತರ ಬೆಂಗಳೂರಿನ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಎಂ.ಡಿ. ಪೂರ್ಣಗೊಳಿಸಿದ್ದರು.
ಡಾಕ್ಟರ್ ಸತೀಶ್ ವೈದ್ಯಕೀಯ ರಂಗದಲ್ಲಿ ಮತ್ತು ವ್ಯಂಗ್ಯಚಿತ್ರ ಲೋಕದಲ್ಲಿ ಎರಡರಲ್ಲೂ ಹೆಸರು ಮಾಡಿದಂತಹ ಅಪರೂಪದ ಕಲಾವಿದ.
ಕರ್ನಾಟಕ ಕಾರ್ಟೂನಿಸ್ಟ್ ಅಸೋಸಿಯೇಷನ್ ನ ಕಾರ್ಯದರ್ಶಿಯಾಗಿದ್ದರು.
ಪ್ರತಿಭೆ, ಪರಿಶ್ರಮದ ಮೂಲಕ ಚಿತ್ರಕಲೆಯನ್ನು ಕರಗತ ಮಾಡಿಕೊಂಡಿದ್ದ ಸತೀಶ್ ಅನೇಕ ಉದಯೋನ್ಮುಖ ವ್ಯಂಗ್ಯಚಿತ್ರಕಾರರಿಗೆ ಮಾರ್ಗದರ್ಶಕರಾಗಿದ್ದರು.
ಶ್ರೀ ಕೃಷ್ಣ ಆಯುರ್ವೇದಿಕ್ ಕ್ಲಿನಿಕ್ ನಲ್ಲಿ ಹಾಗೂ ಯುನಿವಾ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಸತೀಶ್, ಮೂಡುಬಿದಿರೆಯ ಆಳ್ವಾಸ್ ಹಾಗೂ ಮಣಿಪಾಲದ ಮುನಿಯಾಲ ಆಯುರ್ವೇದಿಕ್ ಕಾಲೇಜ್ ಗಳಲ್ಲಿ ಗೌರವ ಪ್ರಾಧ್ಯಾಪಕರಾಗಿ ಕೂಡಾ ಕಾರ್ಯ ನಿರ್ವಹಿಸುತ್ತಿದ್ದರು.
ಹವ್ಯಾಸಿ ವ್ಯಂಗ್ಯಚಿತ್ರಕಾರರಾಗಿ ನಾಡಿನ ಹಲವಾರು ಹೆಸರಾಂತ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು. ಅವುಗಳಲ್ಲಿ ಪ್ರಮುಖವಾದವು- ಸುಧಾ, ಪ್ರಜಾವಾಣಿ, ಕರ್ಮವೀರ, ಸಂಯುಕ್ತ ಕರ್ನಾಟಕ, ವಿಕ್ರಮ, ಮಯೂರ, ಪ್ರಿಯಾಂಕ, ಸೂರ್ಯ... ಇತ್ಯಾದಿ.
ಇವರ 12000ಕ್ಕೂ ಹೆಚ್ಚು ವ್ಯಂಗ್ಯಚಿತ್ರಗಳು, ರೇಖಾಚಿತ್ರಗಳು ಪ್ರಕಟವಾಗಿವೆ.

ನಾಡಿನ ಹೆಸರಾಂತ ಕನ್ನಡ ದಿನಪತ್ರಿಕೆ ಸಂಯುಕ್ತ ಕರ್ನಾಟಕದಲ್ಲಿ ಕಳೆದ 10 ವರ್ಷಗಳಿಂದ ರಾಜಕೀಯ ವ್ಯಂಗ್ಯಚಿತ್ರಗಳನ್ನು ಬರೆಯುತ್ತಿದ್ದರು, ಅವರ ಇತ್ತೀಚಿನ 'ದಿನಕ್ಕೊಂದು ಗುಳಿಗೆ' ಅಂಕಣ ತುಂಬಾ ಜನಪ್ರಿಯವಾಗಿತ್ತು.
2009ರಲ್ಲಿ ನಡೆದ ಸೋನಿಯಾ ಗಾಂಧಿ ಮತ್ತು ಮನಮೋಹನ್ ಸಿಂಗ್ ರ ಅಂತರಾಷ್ಟ್ರೀಯ ಮಟ್ಟದ ವ್ಯಂಗ್ಯ ಭಾವಚಿತ್ರ ಸ್ಪರ್ಧೆಯಲ್ಲಿ ಸತೀಶ್ 50 ಸಹಸ್ರ ರೂಗಳ ದ್ವಿತೀಯ ಬಹುಮಾನ ಪಡೆದಿದ್ದರು.
ಜಾಗತೀಕರಣದ ಬಗ್ಗೆ ನಡೆದ ರಾಷ್ಟ್ರೀಯ ಮಟ್ಟದ ವ್ಯಂಗ್ಯಚಿತ್ರ ಸ್ಪರ್ಧೆಯಲ್ಲಿ ಇವರ ವ್ಯಂಗ್ಯಚಿತ್ರಕ್ಕೆ 'ಅತ್ಯುತ್ತಮ ವ್ಯಂಗ್ಯಚಿತ್ರ' ಪ್ರಶಸ್ತಿ ಲಭಿಸಿತ್ತು.
1997, 2001 ಮತ್ತು 2002ರಲ್ಲಿ ಕೊರಿಯಾದಲ್ಲಿ ನಡೆದ ವ್ಯಂಗ್ಯಚಿತ್ರ ಸ್ಪರ್ಧೆಯಲ್ಲಿ ಐದನೇ ಪ್ರಶಸ್ತಿ ಪಡೆದಿದ್ದರು.
ದೇಶದ ಹಲವಾರು ಗ್ಯಾಲರಿಗಳಲ್ಲಿ ಇವರ ವ್ಯಂಗ್ಯಚಿತ್ರಗಳು ಪ್ರದರ್ಶನಗೊಂಡಿವೆ.
ಹಲವು ವರ್ಷಗಳ ಹಿಂದೆ ನಾಗಪುರದಲ್ಲಿ ನಡೆದ ವ್ಯಂಗ್ಯಚಿತ್ರ ಕಾರ್ಯಾಗಾರದಲ್ಲಿ ನಾಡಿನಿಂದ ಭಾಗವಹಿಸುವ ಅವಕಾಶ ಇವರದಾಗಿತ್ತು. ಅಲ್ಲಿ ವ್ಯಂಗ್ಯಚಿತ್ರಗಾರರಿಗೆ ರೋಲ್ ಮಾಡೆಲ್ ಆಗಿರುವ ಶ್ರೀ ಆರ್. ಕೆ. ಲಕ್ಷ್ಮಣ್ ಅವರು ವಿಶೇಷ ಅತಿಥಿಯಾಗಿದ್ದರು. ಅವರನ್ನು ಭೇಟಿ ಮಾಡುವ ಸಂಧರ್ಭ ಸತೀಶ್ ಅವರಿಗೆ ಒದಗಿತ್ತು.
ಇತ್ತೀಚೆಗೆ ಇವರ ಮತ್ತು ನನ್ನ ವ್ಯಂಗ್ಯಚಿತ್ರಗಳ ಪ್ರದರ್ಶನ ನಗರದ ಎಂ.ಜಿ. ರಸ್ತೆಯಲ್ಲಿರುವ ಕಾರ್ಟೂನ್ ಗ್ಯಾಲೆರಿಯಲ್ಲಿ ನಡೆದಿತ್ತು. ಆ ಸಂದರ್ಭದಲ್ಲಿ ಇವರ 'ಆರ್ಟೂನ್' ಪುಸ್ತಕವನ್ನು ಪ್ರಸಿದ್ಧ ಸಾಹಿತಿ ಶ್ರೀ ಜಯಂತ್ ಕಾಯ್ಕಿಣಿಯವರು ಬಿಡುಗಡೆ ಮಾಡಿದ್ದರು.
ದಸರಾ ಮತ್ತು ಹಲವಾರು ಹಾಸ್ಯೋತ್ಸವ ಕಾರ್ಯಕ್ರಮಗಳಲ್ಲಿ ಖ್ಯಾತ ಹಾಸ್ಯ ಕಲಾವಿದರಾದ ಶ್ರೀ ಮಾಸ್ಟರ್ ಹಿರಣ್ಣಯ್ಯ, ಅ.ರಾ. ಮಿತ್ರ, ಪ್ರೊ. ಕೃಷ್ಣೇಗೌಡ, ಗಂಗಾವತಿ ಪ್ರಾಣೇಶ್, ಬೇಲೂರು ರಾಮಮೂರ್ತಿ ಮುಂತಾದವರೊಂದಿಗೆ ಭಾಗವಹಿಸಿದ್ದರು.
ಆಯುರ್ವೇದದ ಕುರಿತು ಅರಿವು ಮೂಡಿಸುವ ವ್ಯಂಗ್ಯಚಿತ್ರಗಳಿಂದ ಕೂಡಿದ ಅನೇಕ ಕಿರುಹೊತ್ತಿಗೆಗಳನ್ನು ಹೊರತಂದಿದ್ದರು.
Facebook ನಲ್ಲಂತೂ ಇವರ 'ದಿನಕ್ಕೊಂದು ಗುಳಿಗೆ' ವ್ಯಂಗ್ಯಚಿತ್ರಗಳಿಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. Facebook ನಲ್ಲಿ ಕರ್ನಾಟಕ ವ್ಯಂಗ್ಯಲೋಕ ಎಂಬ Group ಅನ್ನು ವ್ಯಂಗ್ಯಚಿತ್ರಕಾರರಿಗಾಗಿ ಮತ್ತು ಅಭಿಮಾನಿಗಳಿಗಾಗಿ ಹುಟ್ಟು ಹಾಕಿದ್ದರು.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು 27ನೇ ಸೆಪ್ಟೆಂಬರ್ 2012 ರಂದು ವಿಧಿವಶರಾದರು.
ಇನ್ನೂ ಹಲವಾರು ವರ್ಷಗಳ ಕಾಲ ವೈದ್ಯಕೀಯ ಮತ್ತು ಕಲಾ ಪ್ರಪಂಚಕ್ಕೆ ತಮ್ಮ ಸೇವೆಯನ್ನು ನೀಡಬೇಕಾಗಿದ್ದ ಸತೀಶ್ ನವ್ಮೊಡನೆ ಇಲ್ಲದಿರುವುದು ನಮ್ಮ ದೌರ್ಭಾಗ್ಯವೇ ಸರಿ. ಬಹುಮುಖ ಪ್ರತಿಭೆಯಾಗಿದ್ದ ಅವರನ್ನು ಕಳೆದುಕೊಂಡ ನಮ್ಮ ನಾಡು ಬಡವಾಗಿದೆ.
ಲೇಖಕರ ಕಿರುಪರಿಚಯ | |
![]() | ಶ್ರೀ ರಘುಪತಿ ಶೃಂಗೇರಿ ಮೂಲತಃ ಶೃಂಗೇರಿಯವರಾದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದು, ಟಿ. ಸಿ. ಎಸ್. ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಹವ್ಯಾಸಿ ವ್ಯಂಗ್ಯಚಿತ್ರಕಾರರು. ಇವರ 7000 ಕ್ಕೂ ಅಧಿಕ ಚಿತ್ರಗಳು 'ಸುಧಾ', 'ಕರ್ಮವೀರ', 'ರೀಡಿಂಗ್ ಅವರ್' ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ಕೆಲವು ವ್ಯಂಗ್ಯಚಿತ್ರಗಳಿಗೆ 6 ಅಂತರಾಷ್ಟ್ರೀಯ, 2 ರಾಷ್ಟ್ರೀಯ ಮತ್ತು ಹಲವು ರಾಜ್ಯ ವಲಯದ ಪ್ರಶಸ್ತಿಗಳು ಲಭಿಸಿವೆ. ಇದುವರೆಗೆ ಇವರ ಹಲವಾರು ಕಲಾಕೃತಿಗಳು ಪ್ರದರ್ಶನಗೊಂಡಿವೆ. Blog | Facebook | Twitter |
ಅವರು ನಮ್ಮೊಡನಿಲ್ಲ ಎಂದು ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ.
ಪ್ರತ್ಯುತ್ತರಅಳಿಸಿavaru deha nammondige illadirabahudu aadare avara chitragalu - chintanegalu nammondige ide....
ಪ್ರತ್ಯುತ್ತರಅಳಿಸಿ