ಭಾನುವಾರ, ನವೆಂಬರ್ 4, 2012

ಆಧುನಿಕ ಜೀವನದಲ್ಲಿ ಯೋಗ ಶಾಸ್ತ್ರದ ಮಹತ್ವ

ಪೀಠಿಕೆ
ತಂತ್ರಜ್ಞಾನದ ವ್ಯಾಪಕ ಬಳಕೆಯು ಇಂದಿನ ಆಧುನಿಕ ಪ್ರಪಂಚದಲ್ಲಿನ ನಮ್ಮ ಜೀವನಶೈಲಿಯನ್ನಷ್ಟೇ ಅಲ್ಲ, ಆರೋಗ್ಯದ ಮೇಲೆಯೂ ಹಲವಾರು ವ್ಯತಿರಿಕ್ತ ಪರಿಣಾಮಗಳನ್ನು ಉಂಟುಮಾಡಿದೆ ಎಂದರೆ ತಪ್ಪಾಗಲಾರದು. ಈ ದಿನದ ದೈಹಿಕ ಮತ್ತು ಮಾನಸಿಕ ಅಸಮತೋಲನಾ ಸ್ಥಿತಿಯು ಅನಾರೋಗ್ಯಕ್ಕೆ ಕಾರಣವಾಗಿದೆ ಎನ್ನುವ ವಾಸ್ತವವನ್ನು ನಾವು ಒಪ್ಪಿಕೊಳ್ಳಲೇಬೇಕು. ಹೀಗಿರುವಾಗ, ಪುರಾತನ ಭಾರತದ ಇತಿಹಾಸದಲ್ಲಿ ವ್ಯಾಖ್ಯಾನಿಸಲಾಗಿರುವ ದೇಹ, ಮನಸ್ಸು ಹಾಗೂ ಆಧ್ಯಾತ್ಮಗಳ ನಡುವೆ ಐಕ್ಯತೆಯನ್ನು ಸ್ಥಾಪಿಸುವ ಸಾಧನ 'ಯೋಗ'ದ ಕಡೆಗೆ ನಮ್ಮ ಅರಿವು ಸಹಜವಾಗಿಯೇ ಆಕರ್ಷಿತಗೊಳ್ಳುತ್ತದೆ.

ಅರ್ಥ ಮತ್ತು ಇತಿಹಾಸ
ಸಂಸ್ಕೃತದ 'ಯುಗ್' ಎಂಬ ಮೂಲಪದದಿಂದ ಬಂದಿರುವ 'ಯೋಗ' ಪದದ ಅರ್ಥ 'ಐಕ್ಯ' ಅಥವಾ 'ಸಂಯೋಜನೆ' ಎಂಬುದು. ಹಿಂದು ತತ್ವಜ್ಞಾನದಲ್ಲಿ ಹೇಳಿರುವ ಆರು ಆಸ್ತಿಕಗಳಲ್ಲಿ ಯೋಗವೂ ಒಂದು. ಇದು ಇಂದು-ನಿನ್ನೆಯದಲ್ಲ; ಸಾವಿರಾರು ವರ್ಷಗಳ ಹಿಂದಿನಿಂದಲೂ ರೂಢಿಯಲ್ಲಿರುವ ಪುರಾತನ ಪದ್ಧತಿ. ಯೋಗವು ಮೂಲತಃ ಪತಂಜಲಿ ಸೂತ್ರಗಳನ್ನು ಅವಲಂಬಿಸಿದೆಯಾದರೂ ಹಿಂದು, ಬೌದ್ಧ ಮತ್ತು ಜೈನ ಪರಂಪರೆಗಳಲ್ಲಿ ಹಲವಾರು ಯೋಗ ಸಂಪ್ರದಾಯಗಳನ್ನು ನಾವು ಕಾಣಬಹುದು. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು ಕರ್ಮ, ಭಕ್ತಿ ಮತ್ತು ಜ್ಞಾನ ಯೋಗಗಳನ್ನು ಅರ್ಜುನನಿಗೆ ಉಪದೇಶಿಸುತ್ತಾನೆ. ಸ್ವಾಮಿ ವಿವೇಕಾನಂದರಿಂದ ಮೊದಲ್ಗೊಂಡು ಇಂದಿಗೆ ಯೋಗ ಪದ್ಧತಿಯು ಅನೇಕ ಪಾಶ್ಚಾತ್ಯ ದೇಶಗಳನ್ನು ತಲುಪಿ ಸುಪ್ರಸಿದ್ಧವಾಗಿದೆ. ಆದ್ದರಿಂದ, ಯೋಗಶಾಸ್ತ್ರ ಭಾರತವು ಪ್ರಪಂಚಕ್ಕೆ ನೀಡಿದ ಅತ್ಯಮೂಲ್ಯ ಕೊಡುಗೆ ಎಂದರೆ ಅತಿಶಯೋಕ್ತಿಯಾಗಲಾರದು.

ಪತಂಜಲಿ ಯೋಗ ಸೂತ್ರಗಳು
ಇಂದಿನ ಉತ್ತರಪ್ರದೇಶ ರಾಜ್ಯ ಮೂಲದವರೆನ್ನಲಾದ ಆಚಾರ್ಯ ಪತಂಜಲಿ ಅವರು ರಚಿಸಿದ 'ಪತಂಜಲಿ ಯೋಗ ದರ್ಶನ' ಎಂಬ ಗ್ರಂಥವೇ ಮೋದಲನೆಯದು ಎನ್ನಲಾಗಿದೆ. ತಮ್ಮ ಎರಡನೆಯ ಸೂತ್ರದಲ್ಲಿ ಪತಂಜಲಿ ಮಹರ್ಷಿಗಳು 'ಯೋಗಃ ಚಿತ್ತ-ವೃತ್ತಿ ನಿರೋಧಃ' (ಯೋಗ ಎಂದರೆ ಮನಸ್ಸಿನ ಪರಿವರ್ತನೆಗಳನ್ನು ನಿಗ್ರಹಿಸುವುದು) ಎಂದು ಹೇಳುತ್ತಾರೆ. ಇವರೇ ವಿವರಿಸುವಂತೆ, ರಾಜಯೋಗದ ಮೂಲ ಸೂತ್ರವಾದ ಅಷ್ಟಾಂಗ ಯೋಗವು ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ ಎಂಬ ಎಂಟು ನಿಯಮಗಳನ್ನು ಹೊಂದಿದೆ. ಈ ಎಲ್ಲಾ ನಿಯಮಗಳನ್ನು ಕ್ರಮವಾಗಿ ಸಾಧಿಸುವಲ್ಲಿ ಯಶ್ವಸ್ವಿಯಾದಾಗ ಮಾತ್ರ ಮನಸ್ಸಿನ ಮೇಲೆ ಸಂಪೂರ್ಣ ಹಿಡಿತ ಸಾಧಿಸಲು ಸಾಧ್ಯ ಎನ್ನುತ್ತಾರೆ ಪತಂಜಲಿ ಮಹರ್ಷಿಗಳು.

ಯೋಗ ಪ್ರಕಾರಗಳು
ಮುಖ್ಯವಾಗಿ ಎಂಟು ಯೋಗ ವಿಧಗಳನ್ನು ಗುರುತಿಸಲಾಗಿದೆ.
 1. ಭಕ್ತಿ ಯೋಗ: ಭಗವಂತನನ್ನು ಕಲ್ಪಿಸಿಕೊಂಡು ಭಕ್ತಿಯಿಂದ ಧ್ಯಾನಿಸುವುದು
 2. ಕರ್ಮ ಯೋಗ: ಪ್ರತಿಯೊಂದು ಕ್ರಿಯೆಯಲ್ಲಿಯೂ ಧನಾತ್ಮಕ ಬದಲಾವಣೆಯನ್ನು ಆಚರಿಸುವುದು
 3. ಜ್ಞಾನ ಯೋಗ: ಮನಸ್ಸಿನ ಕಲ್ಮಶಗಳನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ಕಾಣುವುದು
 4. ರಾಜ ಯೋಗ: ಮನಸ್ಸು ಹಾಗೂ ಭಾವನಾಲಹರಿಯನ್ನು ಹತೋಟಿಯಲ್ಲಿಡುವುದು
 5. ಮಂತ್ರ ಯೋಗ: ಮನಸ್ಸು ಹಾಗೂ ಭಾವನೆಗಳ ಶುದ್ಧಿಗಾಗಿ ಮಂತ್ರಗಳನ್ನು ಪಠಿಸುವುದು
 6. ಲಯ ಯೋಗ: ದೇಹದ ವಿವಿಧ ಬಿಂದುಗಳಲ್ಲಿ ಅರಿವನ್ನು ಕೇಂದ್ರೀಕರಿಸುವುದು
 7. ತಂತ್ರ ಯೋಗ: ಸತ್ಯದ ಪ್ರಾಪ್ತಿಗಾಗಿ ಪ್ರಜ್ಞೆಯನ್ನು ಶೋಧಿಸುವುದು
 8. ಹಟ ಯೋಗ: ದೇಹ ಮತ್ತು ಮನಸ್ಸಿನ ಆರೋಗ್ಯಕ್ಕಾಗಿ ಆಸನಗಳನ್ನು ಅಭ್ಯಸಿಸುವುದು
ಹಟ ಯೋಗ
ಇದು ಪ್ರಸ್ತುತದಲ್ಲಿ ಪ್ರಪಂಚದಾದ್ಯಂತ ಅತ್ಯಂತ ಪ್ರಚಲಿತದಲ್ಲಿರುವ ಯೋಗ ಪ್ರಕಾರ. ಹದಿನೈದನೇ ಶತಮಾನದಲ್ಲಿ ಭಾರತದ ಯೋಗಿಗಳಾದ ಸ್ವಾತ್ಮಾರಾಮ ಋಷಿಗಳು ತಮ್ಮ 'ಹಟ ಯೋಗ ಪ್ರದೀಪಿಕ' ಗ್ರಂಥದಲ್ಲಿ ಈ ಯೋಗಾಭ್ಯಾಸದ ಬಗ್ಗೆ ಸವಿಸ್ತಾರವಾಗಿ ವಿವರಿಸಿದ್ದಾರೆ. ಆಸನ, ಸತ್ಕ್ರಿಯೆ, ಮುದ್ರೆ ಮತ್ತು ಧ್ಯಾನ ಇದರ ಪ್ರಮುಖ ಅಂಶಗಳು. ನಮ್ಮ ದೇಹ ಮತ್ತು ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಇಪ್ಪತ್ತನೇ ಶತಮಾನದಿಂದೀಚೆಗೆ ಪ್ರಮುಖವಾಗಿ ಅಭ್ಯಸಿಸಲಾಗುತ್ತಿರುವ ಯೋಗ ಪ್ರಕಾರವು ಸ್ವಾತ್ಮಾರಾಮರ ಹಟ ಯೋಗವನ್ನೇ ಹೋಲುತ್ತದೆ.

ಯೋಗಾಭ್ಯಾಸದ ಫಲಗಳು
ಕ್ರಮಬದ್ಧ ಯೋಗಾಭ್ಯಾಸವು ಅನೇಕ ಪ್ರಯೋಜನಗಳನ್ನು ಹೊಂದಿದೆ. ನಿಯತ ಯೋಗ ಅಭ್ಯಾಸದಿಂದ ಸುಖಕರ ನಿದ್ರೆ, ಹೆಚ್ಚಿನ ದೇಹಶಕ್ತಿ ಮತ್ತು ರಕ್ತ ಚಲನೆ, ಉತ್ತಮ ಏಕಾಗ್ರತೆ ಮತ್ತು ಜ್ಞಾಪಕಶಕ್ತಿ, ಸ್ನಾಯುಸೆಳೆತಗಳಿಂದ ಮುಕ್ತಿ ಪಡೆಯಬಹುದು. ಅಲ್ಲದೇ, ಆರೋಗ್ಯಕರ ಹೃದಯ, ನಿಯಂತ್ರಿತ ರಕ್ತದೊತ್ತಡ ಹಾಗೂ ಸಮಾನ ಮನಸ್ಥಿತಿ ಸಹ ನಮ್ಮದಾಗುತ್ತದೆ. ದೇಹ ಮತ್ತು ಮನಸ್ಸಿನ ಸರ್ವತೋಮುಖ ಆರೋಗ್ಯದಿಂದಾಗಿ ನಾವು ಉತ್ತಮ ಜೀವನ ನಡೆಸಲು ಅನುಕೂಲವಾಗುತ್ತದೆ.

ಈಗಾಗಲೇ ಯೋಗ ಶಾಸ್ತ್ರವು ಹಲವಾರು ರೋಗಗಳನ್ನು ಗುಣಪಡಿಸುವ ಅಥವಾ ನಿಯಂತ್ರಿಸುವ ಶಕ್ತಿ ಹೊಂದಿದೆ ಎಂದು ರುಜುವಾತಾಗಿದೆ. ಇಂದಿನ ಕಾಲಘಟ್ಟದಲ್ಲಿ ಮನುಷ್ಯರ ಜೀವಕ್ಕೆ ಸಂಚಕಾರ ತರುತ್ತಿರುವ ವ್ಯಾಧಿಗಳಲ್ಲಿ ಮುಖ್ಯವಾದ ರಕ್ತದೊತ್ತಡ, ನಿದ್ರಾಹೀನತೆ, ಬಿರುಸುತನ, ಹೃದಯ ಸ್ತಂಭನ, ಮಾನಸಿಕ ಉದ್ವೇಗ, ಮಾನಸಿಕ ಅಸ್ಥಿರತೆ ಮುಂತಾದವುಗಳಿಂದ ಮುಕ್ತಿ ಪಡೆದು, ಆರೋಗ್ಯವಂತ ಹಾಗೂ ಸುಖಕರ ಜೀವನ ಸಾಗಿಸಲು ನಾವೆಲ್ಲರೂ ಶಿಸ್ತಿನ ಯೋಗಾಭ್ಯಾಸ ನಡೆಸೋಣ.

ಲೇಖಕರ ಕಿರುಪರಿಚಯ
ಶ್ರೀ ವಿವೇಕಾನಂದ್ ವಿ.

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಇವರು, ಬಿ.ಇ. ಪದವೀಧರರು. ಪ್ರಸ್ತುತ ಬೆಂಗಳೂರಿನ ಹೆಸರಾಂತ ಐಟಿ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಬಿಡುವಿನ ವೇಳೆಯಲ್ಲಿ ಕಥೆ, ಕಾದಂಬರಿ ಓದಿವ ಹಾಗೂ ಹಳೆಯ ಸುಮಧುರ-ಸುಶ್ರಾವ್ಯ ಚಿತ್ರಗೀತೆಗಳನ್ನು ಕೇಳುವ ಹವ್ಯಾಸ ಹೊಂದಿದ್ದಾರೆ.

Blog  |  Facebook  |  Twitter

1 ಕಾಮೆಂಟ್‌:

 1. ಶ್ರೀ ವಿವೇಕಾನಂದ್ ವಿ. ರವರು ತಿಳಿಸುರುವಂತೆ ನಮ್ಮ ದಿನನಿತ್ಯದ ಕಾರ್ಯಕ್ರಮಗಲ್ಲಿ ಯೋಗಕ್ಕೆ ಸ್ವಲ್ಪ ಸಮಯವನ್ನು ಮೀಸಲಿಡುವುದರ ಮೂಲಕ ನಮ್ಮ ಮನಸ್ಥಿತಿ, ದೇಹದ ಆರೋಗ್ಯವನ್ನುಯಾವಾಗಲೂ ಸುಸ್ಥಿತಿಯಲ್ಲಿ ಕಾಪಾಡಿಕೊಳ್ಳಬಹುದು .ಇದಕ್ಕೆ ವಯಸ್ಸಿನ ತಾರತಮ್ಯವಿರುವುದಿಲ್ಲ .ಯಾವ ವಯಸ್ಸಿನವರು ಇದನ್ನು ಅಬ್ಯಾಸ ಮಾಡಬಹುದು .

  ಪ್ರತ್ಯುತ್ತರಅಳಿಸಿ