ಬುಧವಾರ, ನವೆಂಬರ್ 28, 2012

ಅವಳ ಲೋಕ

ಚಳಿಗಾಲದಲ್ಲಿ ಬೆಳಿಗ್ಗೆ ಏಳುವುದೇ ಸಾಹಸ, ಅದರಲ್ಲೂ ಬೇಗ ಏಳಬೇಕು ಎಂದರೆ ಹರಸಾಹಸ. ಚುಮು ಚುಮು ಚಳಿ, ಕಿಟಕಿಯ ಗಾಜನ್ನು ತೂರಿ ಪರದೆಗಳ ಸಂದಿಯಿಂದ ಇಣುಕಿನೋಡುವ ಭಾಸ್ಕರನ ಎಳೆಯ ಕಿರಣಗಳು. ಗಡಿಯಾರದಲ್ಲಿ ಏಳು ಗಂಟೆ ಹೊಡೆದುಕೊಂಡ ಶಬ್ದ. ಅಯ್ಯೋ.. ಏಳು ಗಂಟೆ ಆಗೇ ಬಿಡ್ತಲ್ಲ. ಇನ್ನೂ ಏಳದಿದ್ದರೆ ಅಮ್ಮನ ಸಹಸ್ರನಾಮಾವಳಿ ಕೇಳೋಕೆ ರೆಡಿ ಅಂತ ಅರ್ಥ.

ಈ ಸಂಖ್ಯೆಗೆ ಏಳು ಅಂತ ಯಾರು ನಾಮಕರಣ ಮಾಡಿದರೋ..? ಏಳು.. ಏಳು.. ಎದ್ದೇಳು ಅಂತ ಪೀಡಿಸುತ್ತಿರುತ್ತೆ. ಹೊದಿಕೆಯನ್ನು ಒದ್ದು ಮಂಚದಿಂದ ಇಳಿದು ಬಚ್ಚಲಮನೆ ಸೇರಿಕೊಂಡೆ. ಇನ್ನು ನಾನು ಹೊರಬರಲು ಕನಿಷ್ಠ ಅಂದ್ರೂ ಒಂದೂವರೆ ಘಂಟೆ ಬೇಕು. ಬುದ್ಧನಿಗೆ ಜ್ಞಾನೋದಯವಾದಂತೆ ಕಣ್ಣಲ್ಲೇ ಹಲ್ಲುಜ್ಜುತ್ತಲೇ ನಂಗೂ ಸೂರ್ಯೋದಯ ಆಗೋದು. ಹಲ್ಲುಜ್ಜುತ್ತಾ ಕನ್ನಡಿಯಲ್ಲಿ ಇಣುಕಿ ಇಣುಕಿ ಎಂದೂ ಕಾಣದ ಮುಖ ಕಂಡಂತೆ ದಿಟ್ಟಿಸಿ ನೋಡಿ, ಮೊತಿ ತಿರುಗಿಸಿ, ಕಣ್ಣು ಮಿಟುಕಿಸಿ, ತುಂಟ ನಗು ನಕ್ಕು, ಕೋತಿಯಂತೆ ಹಲ್ಲು ಕಿರಿಯುವುದರೊಂದಿಗೆ ನನ್ನ ಕೋತಿಯಾಟ ಮುಗಿಯುತ್ತೆ. ನಂತರ ಶವರ್ ಆನ್ ಮಾಡಿ ಅದರ ಕೆಳಗೆ ನಿಂತರೆ ಹರಿ ಹರ ಬ್ರಹ್ಮಾದಿಗಳು ಬಂದು ಬೇಡಿಕೊಂಡರೂ ನನ್ನನ್ನು ಹೊರ ತರಲು ಸಾಧ್ಯವಿಲ್ಲ.

"ಗಂಟೆ ಎಂಟೂವರೆ ಆಯ್ತು. ಏನೇ ಮಾಡ್ತಿದೀಯ ಬಾತ್ ರೂಂನಲ್ಲಿ? ಸ್ನಾನ ಮಾಡೋಕೆ ಇಷ್ಟು ಹೊತ್ತಾ? ನಾನಾಗಿದ್ರೆ ಇಷ್ಟರಲ್ಲಿ ಎಂಟು ಸಾರಿ ಸ್ನಾನ ಮಾಡ್ಕೊಂಡು ಬರ್ತಿದ್ದೆ.... ದಿನಾ ಇದೇ ಗೋಳಾಯ್ತಪ್ಪ. ಈ ಹುಡುಗಿಯರಿಗೆ ಯಾವಾಗ ಬುದ್ದಿ ಬರುತ್ತೋ...?" ಎಂಬ ಅಮ್ಮನ ಅಬ್ಬರದ ದನಿಗೆ ಎಚ್ಹೆತ್ತು 'ನಾನು ಯಾವುದೇ ಫಿಲಂನ ಹೀರೋಯಿನ್ ಅಲ್ಲ ಕನಸಿನ ಲೋಕದಲ್ಲಿ ತೇಲಾಡುತ್ತ ಸ್ನಾನ ಮಾಡೋಕೆ; ಕಾಲೇಜ್ಗೆ ಹೋಗ್ಬೇಕು' ಎಂದುಕೊಳ್ಳುತ್ತಾ ವಾಸ್ತವಕ್ಕೆ ಬರುತ್ತಲೇ ಅಮ್ಮನ ಸೈರನ್ ಮತ್ತೆ ಹೊಡೆದುಕೋಳ್ಳೋಕೆ ಶುರು. "ತಿಂಡಿ ಬಡಿಸಿದ್ದೀನಿ, ಆರಿಹೋಗತ್ತೆ ... ಬೇಗ ಬಾರೇ .. ಏನ್ ಹುಡುಗೀರೋ .." ಎಂಬ ಧ್ವನಿ ಕಿವಿಗಪ್ಪಳಿಸುತ್ತಲೇ ಕೂಡಲೇ ಕೈಗೆ ಸಿಕ್ಕ ಜೀನ್ಸ್ ಸಿಕ್ಕಿಸಿಕೊಂಡು; ಯಾವ ಟೀ-ಶರ್ಟ್ ಹಾಕ್ಕೊಳ್ಲಿ? ಅಥವಾ ಶಾರ್ಟ್ ಟಾಪ್ ಹಾಕ್ಕೊಳ್ಲಾ? ಅವತ್ತು ಪಿಂಕ್ ಟಾಪ್ ಹಾಕ್ಕೊಂಡು ಹೋಗಿದ್ದಾಗ ನಮ್ಮ ಕ್ಲಾಸ್ ನ ಹೊಸ ಎಂಟ್ರಿ ಆ ಕಿಶನ್ ಕಣ್ಣುಗಳು ಹೀರೋಯಿನ್ ನನ್ನು ಹೀರೋ ಹಿಂಬಾಲಿಸುವಂತೆ ನನ್ನನ್ನೇ ಹಿಂಬಾಲಿಸಿದ್ದವು ಅಲ್ವಾ? ಎಂಬುದು ನೆನಪಾಗುತ್ತಲೇ ಒಂದು ಕ್ಷಣ ಮೈಯೆಲ್ಲಾ ಪುಳಕ, ರೋಮಾಂಚನಗೊಂಡ ಅನುಭವ. ಇನ್ನೊಮ್ಮೆ ಅಮ್ಮನ ಕೂಗು ಕೇಳಿಸುತ್ತಲೇ ಕೈಗೆ ಸಿಕ್ಕ ಯಾವುದೋ ಒಂದು ಟಾಪ್ ಹಾಕ್ಕೊಂಡು ಡೈನಿಂಗ್ ಟೇಬಲ್ ಮುಂದೆ ಹಾಜರಾದೆ.

ಗಡಿಯಾರ ನೋಡಿದರೆ ಆಗಲೇ 9:15! 'ಅಯ್ಯೋ ಲೇಟಾಯ್ತು' ಎನ್ನುತ್ತಾ ತಟ್ಟೆಯಲ್ಲಿದ್ದ ತಿಂಡಿಯನ್ನು ಗಬಗಬನೆ ಮುಕ್ಕಿ 'ಅಮ್ಮಾ ಡಬ್ಬ ಬೇಡಮ್ಮ; ಕ್ಯಾಂಟೀನ್ ನಲ್ಲೇ ಏನಾದ್ರು ತಿಂದ್ಕೊತೀನಿ, ಬಾಯ್ ಅಮ್ಮಾ ..' ಎಂದು ಸ್ಕೂಟಿ ಏರಿ ಹೋರಾಟ ನಾನು ಕಾಲೇಜ್ ಕ್ಯಾಂಪಸ್ ಒಳಗೆ ಎಂಟ್ರಿ ಕೊಡೊ ಹೊತ್ತಿಗೆ ಬರೋಬ್ಬರಿ 9:30 ಗಂಟೆ.

'ಅಯ್ಯಬ್ಬಾ' ಎಂದು ನಿಟ್ಟುಸಿರು ಬಿಟ್ಟು ಕ್ಲಾಸ್ ಒಳಗೆ ಕಾಲಿಡುತ್ತಲೇ ಮುಂದಿನ ಬೆಂಚ್ ಜಂಬದಕೋಳಿ ಜಾಸ್ಮಿನ್ ಗುಂಪು ಪುಸಕ್ಕಂತ ನಕ್ಕಿತು. ನಂತರ ಉಳಿದವರ ಸರದಿ. ಒಮ್ಮೆಲೇ ಇಡೀ ಕ್ಲಾಸ್ಗೆ ಕ್ಲಾಸೇ ಕಿಸ ಕಿಸಾಂತ ನಕ್ಕ ಅನುಭವ. ಏನೂ ತಿಳಿಯದೆ ಅವಕ್ಕಾಗಿ ನನ್ನನ್ನು ನಾನೇ ನೋಡಿಕೊಂಡರೆ .... ಜೀನ್ಸ್ ಮೇಲೆ ನೈಟ್ ಟಾಪ್ ಹಾಕ್ಕೊಂಡು ಹೋಗಿದ್ದೆ!! 'ಪೆಚ್ಚಾಗಿ ನಿಂತರೆ ನನಗೆ ಅವಮಾನ ಮಾಡದೇ ಬಿಡಲ್ಲ ಇವರುಗಳು' ಎಂದುಕೊಂಡು  'ಕಾಲೇಜ್ಗೆ ಓದಲು ಬರ್ತಿರೋ ಅಥವಾ ಶೋಕಿ ಮಾಡೋಕೆ ಬರ್ತಿರೋ... ಮೈ ತುಂಬಾ ಬಟ್ಟೆ ಹಾಕ್ಕೊಂಡಿದೀನಿ ತಾನೆ? ಏನು ಹಲ್ಲು ಕಿರಿಯೋದು ಕೋತಿ ತರಹ ..." ಎಂದು ನಾನು ಘರ್ಜಿಸುವುದಕ್ಕೂ ಉಪನ್ಯಾಸಕರು ಒಳಗೆ ಬರೋದಕ್ಕೂ ಸರಿಹೋಗಿದ್ದರಿಂದ ಯಾರೂ ತುಟಿ ಪಿಟಕ್ಕೆನ್ನಲಿಲ್ಲ.

ಬ್ಯಾಗಲ್ಲಿದ್ದ ಸ್ಕಾರ್ಫ್ ತೆಗೆದು ಕತ್ತಿನ ಸುತ್ತ ಸುತ್ತಿಕೊಂಡು ಇದೇನೋ ಹೊಸ ಸ್ಟೈಲ್ ಎಂಬ ಪೋಸ್ ನಲ್ಲಿ ಕುಳಿತೆ; ಮನದಲ್ಲಿ ಮಾತ್ರ ಅಮ್ಮನ ಬಗ್ಗೆ ಕೋಪ ಉಕ್ಕಿ ಬರುತ್ತಿತ್ತು 'ಹಳ್ಳಿ ಗುಗ್ಗು, ಅಷ್ಟೂ ಗೊತ್ತಾಗಲ್ವಾ? ನೈಟ್ ಸೂಟ್ ಹಾಕ್ಕೊಂಡು ಹೊರ್ಟಿದೀಯಲ್ಲ ಅಂತ ಹೇಳ್ಬಾರ್ದಿತ್ತಾ .... ಬದಲಾಯಿಸ್ಕೊಂಡು ಬರ್ತಿದ್ದೆ. ಆಮೇಲೆ ಮನೆಗೆ ಬಂದಮೇಲೆ ಇದೆ ನೋಡು ನಿಂಗೆ' ಅಂತ ಮನಸಲ್ಲೇ ಬೆದರಿಕೆ ಹಾಕ್ತಾ ಕೂತ್ಕೊಂಡೆ. ತಕ್ಷಣ ಹಳೆಯ ಘಟನೆಯೊಂದು ನೆನಪಾಯ್ತು.

ಒಮ್ಮೆ ಅಮ್ಮ ನನ್ನ ಬಟ್ಟೆಯ ಬಗ್ಗೆ ಕಮೆಂಟ್ ಮಾಡಿದಾಗ 'ನಿನಗೇನು ಗೊತ್ತಮ್ಮಾ ಇದು ಈಗಿನ ಲೇಟೆಸ್ಟ್ ಫ್ಯಾಶನ್. ನಿನ್ನ ಕಾಲದವರಂತೆ ಲಂಗ ದಾವಣಿ ಹಾಕ್ಕೊಂಡು ಹೋದ್ರೆ ಎಲ್ಲಾ ನಗ್ತಾರೆ. ಈಗ ಏನಿದ್ರೂ ಸ್ಟೈಲಾಗಿ ಜೀನ್ಸ್-ಟಾಪ್, ಮಿಡಿ, ಸ್ಕರ್ಟ್, ಶಾರ್ಟ್ಸ್ ಅಂತ ಹಾಕ್ಕೊಂಡು ಹೋದ್ರೆ ಮಾತ್ರ ಮರ್ಯಾದೆ ಕೊಡ್ತಾರೆ. ನಾನೇನು ಹಾಕ್ಕೋಬೇಕು ಅಂತ ನನಗೆ ಗೊತ್ತಿದೆ; ನೀನು ಸುಮ್ಮನೆ ತಲೆ ತಿನ್ನಬೇಡ. ನಾನಿನ್ನೂ ಸ್ಕೂಲಿಗೆ ಹೋಗೋ ಹುಡುಗಿ ಅಲ್ಲ.... ಇನ್ ಮುಂದೆ ನೀನು ನನಗೆ ಉಪದೇಶ ಮಾಡೋಕೆ ಬರ್ಬೇಡ ....' ಎಂದು ಕೂಗಾಡಿದ್ದಕ್ಕೆ ಅಮ್ಮ ಅವಕ್ಕಾಗಿದ್ದಳು. ಇವತ್ತೂ ಕೂಡ ಇದೇನೋ ಹೊಸ ಸ್ಟೈಲ್ ಇರಬೇಕು ಅಂದುಕೊಂದಳೋ ಅಥವಾ "ಏನು ಬೇಕಾದ್ರೂ ಮಾಡ್ಕೊಳ್ಲಿ, ಹೇಳೋಕೆ ಹೋದ್ರೆ ಜಗಳಕ್ಕೇ ಬರ್ತಾಳೆ. ಹೊರ್ಗಡೆಯವರ ಹತ್ರ ಉಗಿಸ್ಕೊಂಡ್ರೇ ಬುದ್ಧಿ ಬರೋದು" ಅಂದ್ಕೊಂಡಿರಬೇಕು. ಅಯ್ಯೋ .. ದೇವರೇ ನನ್ನ ಆಬ್ಸೆಂಟ್ ಮೈಂಡ್ನಿಂದ ಎಂಥಾ ಪೇಚಾಟಕ್ಕೆ ಸಿಕ್ಕಿಹಾಕ್ಕೊಂಡೆ.

"ಇನ್ಮೇಲೆ ಬೇಗ ಎದ್ದು ಎಲ್ಲಾ ಕೆಲಸ ಸಮಯಕ್ಕೆ ಸರಿಯಾಗಿ ಮಾಡಿಕೊಳ್ಳಬೇಕು" ಎಂಬ ರೆಸಲ್ಯೂಶನ್ ನ್ಯೂ ಇಯರ್ ಗೆ ರೆಡಿ ಆಯಿತು.

ಲೇಖಕರ ಕಿರುಪರಿಚಯ
ಶ್ರೀಮತಿ ಪೂರ್ಣಿಮಾ ಸುಬ್ರಹ್ಮಣ್ಯ

ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಇವರು ಹುಟ್ಟಿ ಬೆಳೆದದ್ದು ಕುಂದಾಪುರ ತಾಲ್ಲೂಕಿನ ಕಂಬದಕೋಣೆ ಹತ್ತಿರದ ತೆಂಕಬೆಟ್ಟು ಎಂಬ ಪುಟ್ಟ ಹಳ್ಳಿಯಲ್ಲಿ. ಪದವಿ ಪೂರ್ವ ಶಿಕ್ಷಣ ಸ್ವಗ್ರಾಮದಲ್ಲಾದರೆ, ಪದವಿ ಪಡೆದಿದ್ದು ಶಾರದಾ ಕಾಲೇಜು, ಬಸ್ರೂರಿನಲ್ಲಿ.

ಗೃಹಿಣಿಯಾಗಿರುವ ಇವರು ತಮ್ಮ ಬಿಡುವಿನ ವೇಳೆಯಲ್ಲಿ ಕಥೆ ಮತ್ತು ಕವನಗಳನ್ನು ಬರೆಯುವ ಹವ್ಯಾಸವನ್ನು ಹೊಂದಿದ್ದಾರೆ.

Blog  |  Facebook  |  Twitter

1 ಕಾಮೆಂಟ್‌:

  1. ಹ್ಹ ಹ್ಹ... ಪೂರ್ಣಿಮಾ ಅವರೇ, ತುಂಬಾ ಚೆನ್ನಾಗಿದೆ ಬರಹ. 'ಎರಡು ಕನಸು' ನಲ್ಲಿ ಅಣ್ಣಾವ್ರು ಟಾವೆಲ್ ಮೇಲೆ ಕಾಲೇಜಿಗೆ ಹೋಗ್ತಾ ಇರೋ ದೃಶ್ಯ ಕಣ್ಣಿನ ಮುಂದೆ ಬಂತು..

    ಪ್ರತ್ಯುತ್ತರಅಳಿಸಿ