ಸೋಮವಾರ, ನವೆಂಬರ್ 5, 2012

ಸಂದೇಹ

ಹಾಸಿಗೆಯ ಮೇಲೆ ಮಲಗಿ ಛಾವಣಿಯನ್ನೇ ನೋಡುತ್ತಿರುವ ಸ್ಮಿತಾಳ ಕಣ್ಣುಗಳಿಗೆ ನಿದ್ದೆ ಬರುತ್ತಿಲ್ಲ. ಸಂಜೆಯಿಂದಲೇ ಅವಳ ಮನಸ್ಸಿನಲ್ಲಿ ಏನೋ ತಳಮಳ. ಅಮ್ಮನ ಮಡಿಲಲ್ಲಿ ಮಲಗುವ ಆಸೆ ಹೊತ್ತು, ಅಮ್ಮನ ರೂಮಿಗೆ ಬರುತ್ತಾಳೆ. ಈ ನಡುವೆ ಅಮ್ಮನ ಜೊತೆ ಸ್ಮಿತಾಳ ಮಾತುಗಳು ತುಂಬಾ ಕಮ್ಮಿಯಾಗಿವೆ. ಅಮ್ಮನ ಮಡಿಲಲ್ಲಿ ಮಲಗಿದರೂ ಸ್ಮಿತಾಗೆ ಇವತ್ತ್ಯಾಕೋ ನಿದ್ದೆ ಬರುತ್ತಿಲ್ಲ. ಗಂಟೆ 10 ಆದ್ರೆ ಸಾಕು ನಿದ್ರಾಲೋಕಕ್ಕೆ ಪ್ರಯಾಣ ಬೆಳೆಸುವ ಅವಳ ಕಣ್ಗಳು ಇವತ್ತು ಮಾತ್ರ ಯಾಕೋ ತೆರೆದೇ ಇವೆ. ತನ್ನ ಬಾಲ್ಯದ ಕೀಟಲೆಗಳನ್ನು, ಖುಷಿ ತಂದ ಅನೇಕ ಸವಿಘಳಿಗೆಗಳನ್ನು ಮೆಲಕು ಹಾಕುತ್ತಾಳೆ. ತಾಯಿಯ ಹತ್ರ ಏನೆಲ್ಲಾ ಮಾತಾಡಬೇಕು ಅಂತ ಬಂದಳೋ ಅವೆಲ್ಲವೂ ನಾಲಿಗೆಯ ತುದಿಯಲ್ಲೇ ಉಳಿದುಕೊಂಡಿವೆ.

"ಅಮ್ಮ, ಸಂಜೆ ಉಮಾ ಬಂದಿದ್ದಳು." ಮುಂದೆ ಮಾತು ಹೊರಡಲಿಲ್ಲ. ಪ್ರತಿಯಾಗಿ "ಏನು ವಿಷಯ?" ಅಂತ ಕೇಳಲಿ ಎಂದು ಕಾದು ಕುಳಿತಳು. ಅಮ್ಮನ ಬಾಯಿಂದ "ಹೌದಾ?" ಅನ್ನೋ ಮಾತು ಕೇಳಿ ಮಾತು ಮುಂದುವರೆಸಿದಳು. "ಸಂಜು ಬಗ್ಗೆ ಮಾತಾಡೋಕೆ ಬಂದಿದ್ದಳು". ಮಡಿಲಲ್ಲಿ ಮಲಗಿದ್ದ ಸ್ಮಿತಾಳ ತಲೆಯನ್ನು ಪಕ್ಕಕ್ಕೆ ಸರಿಸಿದ ಅವಳ ತಾಯಿ ಅಲ್ಲೇ ಕಿಟಕಿಯ ಹತ್ತಿರ ಮುಖ ತಿರುಗಿಸಿ ಆಚೆ ನೋಡುತ್ತಾ ನಿಂತರು. ಇಬ್ಬರ ನಡುವೆ ಸ್ಮಶಾನ ಮೌನ. ಯಾರ ಹೆಸರನ್ನು, ನೆನಪನ್ನು ತಮ್ಮ ಜೀವನದಲ್ಲಿ ಮತ್ತೆ ನೆನೆಯದೆ ಬಾಳುತ್ತಿದ್ದ ಸ್ಮಿತಾ ಮತ್ತು ಅವಳ ತಾಯಿಗೆ ಅದೇ ವ್ಯಕ್ತಿಯ ಹೆಸರು ಎದುರಾಗಿದ್ದು ಆಶ್ಚರ್ಯ! "ಸ್ಮಿತಾ, ಸಂಜು ಮಾಡಿರುವ ಮೋಸ ಮರೆತುಬಿಟ್ಟೆಯ? ಇವತ್ತಿನ ನಮ್ಮ ಈ ಸ್ಥಿತಿಗೆ ಅವನೇ ಕಾರಣ ಅನ್ನೋದನ್ನ ಮರೀಬೇಡ. ಅವನ ಬಗ್ಗೆ ಮಾತಾಡೋಕೂ ನನಗೆ ಅಸಹ್ಯ ಆಗುತ್ತೆ. ಆರಿರೋ ಗಾಯನ ಮತ್ತೆ ಕೆದಕಿ ನೋವು ಅನುಭವಿಸಬೇಡ. ಹೋಗಿ ಮಲಗು". ಮನಸಲ್ಲಿದ್ದ ಕೋಪ ನುಡಿಗಳಲ್ಲೂ ಕಂಡವು. ಇನ್ನು ಅಮ್ಮನ ಜೊತೆ ಮಾತಾಡೋ ಧೈರ್ಯ ಸಾಲದೇ, ನಿಧಾನಕ್ಕೆ ತನ್ನ ರೂಮಿಗೆ ಹೋದಳು.

ದಿಂಬಿಗೆ ತಲೆ ಕೊಟ್ಟ ಸ್ಮಿತಾಳಿಗೆ ನಿದ್ದೆ ಅನ್ನೋದು ಮರೀಚಿಕೆಯಾಗಿದೆ. ಅಮ್ಮ ಹೇಳಿದ ಕಟು ನುಡಿಗಳು ಕಿವಿ ಮೇಲೆ ಬಿದ್ದರೂ ಮನಸ್ಸು ಆ ಮಾತುಗಳನ್ನು ಒಪ್ಪುತ್ತಿಲ್ಲ. ಸಂಜು ತೋರಿಸಿದ ಆ ಪ್ರೀತಿ ಸ್ಮಿತಾಳನ್ನು ಮೂಕವಾಗಿಸಿದೆ. ಐದು ವರ್ಷದ ಹಿಂದೆ ನಡೆದ ಘಟನೆಗಳು ಕಣ್ಣ ಮುಂದೆ ಪದರ ಪದರವಾಗಿ ಬಿಚ್ಚಿಕೊಂಡವು. "ನಾನು ತಪ್ಪು ಮಾಡಿದೆ. ಸಂಜುವನ್ನು ದೂರಮಾಡಿ ನನಗೆ ನಾನೇ ಮೋಸ ಮಾಡಿಕೊಂಡೆ". ಮಹಾಪರಾಧ ಮಾಡಿದ ಅಪರಾಧಿ ಭಾವನೆಯಲ್ಲಿ ಸ್ಮಿತಾಳ ಮನಸ್ಸು ಒದ್ದಾಡುತ್ತಿದೆ. ತನಗೆ ತಾನೇ ಸಮಾಧಾನ ಮಾಡಿಕೊಳ್ಳುತ್ತ "ನಾನೇನೋ ಹುಚ್ಚಿ, ಆದ್ರೆ ಸಂಜು ನನ್ನ ಮನಸ್ಸು ಬದಲಿಸಬಹುದಿತ್ತು. ಅವನೂ ಮೌನವಹಿಸಿಬಿಟ್ಟ. ನಮ್ಮ ಪ್ರೀತಿಯ ನಡುವೆ ಸಂದೇಹದ ಗಾಳಿ ಬರೋಕೆ ಅವನ ಮೌನ ಮತ್ತು ನನ್ನ ದಡ್ಡತನ ಎರಡೂ ಕಾರಣ. ಎಲ್ಲರೂ ಯೌವ್ವನದಲ್ಲಿ ಮಾಡಿದ ತಪ್ಪನ್ನೆ ನಾವೂ ಮಾಡಿದ್ದೆವು. ಆದ್ರೆ ಆ ಒಂದು ಮಿಲನ ನನ್ನ ಜೀವನವನ್ನು ಹೀಗೆ ಬದಲಾಯಿಸುವುದು ಅನ್ನೋದರ ಕಲ್ಪನೆ ನನಗಿರಲಿಲ್ಲ. ಒಂದು ಕ್ಷಣದ ಆತುರತೆ ನಮ್ಮ ಜೀವನವನ್ನು ಸೂತ್ರವಿಲ್ಲದ ಗಾಳಿಪಟದ ಹಾಗೆ ಗೊತ್ತು ಗುರಿಯಿಲ್ಲದ ದಿಕ್ಕಿಗೆ ಎಳೆದೊಯ್ಯುವುದನ್ನು ನಾವಿಬ್ಬರೂ ಗಮನಿಸಲಿಲ್ಲ. ಸಂಜುವಿನ ಜೊತೆಗೆ ದೈಹಿಕ ಸಂಪರ್ಕ ಮಾಡಿದ್ದು ಒಂದೇ ಸಲವಾದರೂ, ಅದರ ನಂತರ ನಮ್ಮ ನಡುವೆ ಮೌನದ ಗಾಳಿ ಸುಳಿದಿದ್ದು ಹಲವು ಬಾರಿ. ಇಬ್ಬರಲ್ಲೂ "ಅದೇನೋ ತಪ್ಪು ಮಾಡಿದ್ದೀವಿ" ಅನ್ನೋ ಭಾವನೆ ಕಾಡುತ್ತಿತ್ತು. ಇದಾದ ಒಂದು ತಿಂಗಳಲ್ಲೇ ಭೂಮಿ ಕುಸಿದು ಹೋಗುವಂಥ ಸುದ್ದಿ ನನಗೆ ಬಂದೊದಗಿತ್ತು. ನನ್ನ ಮಡಿಲಲ್ಲಿ ಸಂಜುವಿನ ಪ್ರತಿರೂಪ ಬರುವ ಚಿಹ್ನೆ ಅದು!!

ಮುಂಜಾಗ್ರತೆ ಕ್ರಮಗಳನ್ನೆಲ್ಲ ಮೀರಿ ವಿಧಿ ನನ್ನ ಬಾಳಿಗೆ ತಿರುವು ನೀಡಿತ್ತು. ಅಲ್ಲದೇ, ಅಷ್ಟು ಬೇಗ ತಾಯಿಯ ಜವಾಬ್ದಾರಿಯನ್ನು ಹೊರಲು ನನಗೆ ಆಗುತ್ತಿರಲಿಲ್ಲ. ಮನೆಗೆ ಹೋಗಿ ಅಮ್ಮನಿಗೆ ವಿಷಯ ತಿಳಿಸಿದಾಗ ಅಮ್ಮನಿಗೆ ದೊಡ್ಡ ಆಘಾತ. ಯಾವ ತಾಯಿ ತಾನೇ ಇಂತಹ ವಿಷಯವನ್ನು ಸಹಿಸಲು ಸಾಧ್ಯ? ತಂದೆ ಇಲ್ಲದ ನನಗೆ ಎಲ್ಲ ಸವಲತ್ತುಗಳನ್ನು ಕೊಟ್ಟಿದ್ದ ನನ್ನ ತಾಯಿ ನಾನು ಇಂಥದ್ದೊಂದು ಕೃತ್ಯ ಎಸಗಿದ್ದೇನೆ ಅನ್ನೋದನ್ನ ಕೇಳಿ ಕಿಡಿಕಾರಿದ್ದರು. "ತೆಗಿಸಿಬಿಡ್ತೀನಿ" ಅನ್ನೋ ನನ್ನ ಉದ್ಧಟತನಕ್ಕೆ ಅಮ್ಮ ಕಪಾಳಕ್ಕೆ ಹೊಡೆದದ್ದು ಇನ್ನೂ ನೆನಪಿದೆ. ಸಂಜುವನ್ನು ಮನೆಗೆ ಕರೆಸಿ ಮದುವೆಯಾಗುವುದಕ್ಕೆ ಮನವಿ ಮಾಡಿದರು. ಸಂಜುವಿನ ಮನೆಯವರು ಅಂತ ಯಾರೂ ಇರಲಿಲ್ಲ. ಅನಾಥನಾಗಿ ಹುಟ್ಟಿ, ಅನಾಥನಾಗಿ ಬೆಳೆದಿದ್ದ ಅವನು. ಅವನ ಒಪ್ಪಿಗೆ ಕೂಡ ಸಿಕ್ಕಿತು.

ಅದಾದ ಒಂದು ವಾರಕ್ಕೆ ಅಮ್ಮನಿಗೆ ನಾನು ಮದುವೆಯಾಗುವುದಿಲ್ಲ ಅನ್ನೋದನ್ನ ಹೇಳಿದೆ. ಈ ಮಗುವನ್ನು ನಾನೊಬ್ಬಳೆ ಬೆಳೆಸುತ್ತೇನೆ. ನನ್ನ ಈ ನಡುವಳಿಕೆಗೆ ಅಮ್ಮನ ಹತ್ರ ಉತ್ತರ ಇರಲಿಲ್ಲ. ಏನಾಯ್ತು ಅನ್ನೋ ಅವರ ಪ್ರಶ್ನೆಗೆ ನಾನು ಕೊಟ್ಟ ಉತ್ತರ ನನ್ನ ಸಂಜುವಿನ ಸಂಬಂಧಕ್ಕೆ ಕೊನೆ ಹಾಡಿತು. ನನಗೆ ಮಾಡಿಸಿದ ಎಷ್ಟೋ ಮೆಡಿಕಲ್ ಟೆಸ್ಟ್-ಗಳಲ್ಲಿ "ಎಚ್.ಐ.ವಿ." ಕೂಡ ಒಂದು. ನನಗೆ ಆ ಮಹಾಮಾರಿ ಏಡ್ಸ್ ಇರುವ ವಿಷಯ ನನ್ನನು ಅರ್ಧ ಸಾಯಿಸಿತು. ಸಂಜುವಿನ ಜೊತೆಗಾದ ದೈಹಿಕ ಸಂಪರ್ಕ ಇಷ್ಟು ದೊಡ್ಡ ನೋವು ತರುವುದರ ಬಗ್ಗೆ ನಾನು ಯೋಚಿಸಿಯೇ ಇರಲಿಲ್ಲ.

ನನ್ನ ಜೀವನವನ್ನು ಅವನು ಸರ್ವನಾಶ ಮಾಡಿಯಾಗಿತ್ತು. ಅವನಿಗೆ ಫೋನ್ ಮಾಡಿ "ನೀನು ನನ್ನನು ಎಷ್ಟು ಪ್ರೀತಿಸ್ತಿಯ?" ಅನ್ನೋ ವ್ಯಂಗವಾದ ನನ್ನ ಪ್ರಶ್ನೆಗೆ "ನನ್ನ ಪ್ರಾಣಕ್ಕಿಂತಲೂ ಹೆಚ್ಚು. ನಿನಗೆ ನನ್ನ ಸರ್ವಸ್ವ ಕೂಡ ಕೊಡೋಕೆ ಸಿದ್ಧ" ಅಂದ. ಅವನ ಸರ್ವಸ್ವದ ಜೊತೆ ಆ ಮಾರಣಾಂತಿಕ ಕಾಯಿಲೆ ಕೂಡ ನನಗೆ ಕೊಟ್ಟಿದ್ದು ಅತಿಶಯವಲ್ಲ ಅನ್ನಿಸಿತು. ನನ್ನ ಪ್ರೀತಿಸಿದ್ದೇ ನಿಜ ಆದ್ರೆ ನನ್ನನ್ನು ಇನ್ನೆಂದು ನೋಡೋ ಪ್ರಯತ್ನ ಮಾಡಬೇಡ ಅನ್ನೋದು ನನ್ನ ಕೊನೆ ಮಾತಾಗಿತ್ತು. ಅವನ ನೆನಪು ಮರೆಮಾಚಲು ಊರು ಕೇರಿ ಬಿಟ್ಟು, ಸಂಬಂಧ ಇರದ ಯಾವುದೋ ಪ್ರದೇಶಕ್ಕೆ ಬಂದುಬಿಟ್ಟೆವು. ಅವನ ಅಗಲಿಕೆಯಲ್ಲಿ ಆದ ನೋವು ತುಂಬಾನೇ ಇತ್ತು. ಆದ್ರೆ ಅವನ ಮೇಲಿರುವ ಸಿಟ್ಟು ಅದರ ಎರಡರಷ್ಟಿತ್ತು.

ಇದೆಲ್ಲ ಆಗಿ 3 ವರ್ಷದ ಮೇಲೆ, ಇವತ್ತು ಉಮಾ - ನನ್ನ ಮತ್ತು ಸಂಜುವಿನ ಗೆಳತಿ, ನಮ್ಮ ಮನೆಗೆ ಬಂದು ಹೋದಮೇಲೆ ಅವಳ ಮಾತುಗಳನ್ನು ಪುನರವಾರ್ತಿಸಿದೆ. ಅವನು ಇನ್ನೂ ನನ್ನ ನೆನಪಲ್ಲೇ ಇರುವ ವಿಷಯ ಕೇಳಿ ಆಶ್ಚರ್ಯ ಆಯಿತು. ಈಗಲೂ ಅವನು ನನಗೋಸ್ಕರ ಕಾಯುತ್ತಿರುವ ವಿಷಯ ಕೇಳಿ ಕಣ್ಣು ತುಂಬಿ ಬಂದವು. ಆದ್ರೆ ಉಮಾ ಹೇಳಿದ ಕೊನೆಯ ಮಾತು ಕೇಳಿ ನನ್ನ ಮೇಲೆ ನನಗೆ ಅಸಹ್ಯ ಮೂಡಿತು. "ಅವನಿಗೆ ಏಡ್ಸ್ ಕಾಯಿಲೆ ಇರಲ್ಲಿಲ್ಲ" ಅನ್ನೋ ಸತ್ಯ ಅದು. ನನಗೆ ಮಾರಣಾಂತಿಕ ಕಾಯಿಲೆ ಬಂದಿದ್ದು ಅವನಿಂದಲೇ ಅನ್ನೋ ನನ್ನ ಸಂದೇಹಕ್ಕೆ ನನ್ನ ಜೀವನ ಹಾಳಾಗಿತ್ತು. ಆದ್ರೆ ಇವತ್ತು ನನ್ನ ಸ್ಥಿತಿ ಗೊತ್ತಿದ್ದೂ ಅವನು ನನ್ನನು ತನ್ನ ಜೀವನಕ್ಕೆ ಸೇರಿಸಿಕೊಳ್ಳಲು ಹಂಬಲಿಸುತ್ತಿದ್ದಾನೆ!!

ಸ್ಮಿತಾಳ ತಾಯಿಯ ಕೂಗು ಅವಳನ್ನು ಎಚ್ಚರಿಸಿತು. "ಸ್ಮಿತಾ ಹೊರಗೆ ಬಾ, ಬೇಗ ಬಾ". ಕಣ್ಣು ಒರೆಸಿಕೊಂಡು ಆಚೆ ಬಂದು ನೋಡಿದರೆ, ಸಂಜು ಎದುರಿಗೆ ನಿಂತಿದ್ದಾನೆ. ಸ್ಮಿತಾ ಒಂದು ಹೆಜ್ಜೆ ಹಿಂದೆ ಹೋದಾಗ, ಸಂಜು ಹತ್ತಿರ ಬಂದು ನಿಲ್ಲುವನು. ಏನೋ ಹೇಳಬೇಕು ಅಂತ ಸ್ಮಿತಾ "ಅದು.. ಸಂಜು.." ಅಷ್ಟರಲ್ಲಿ ಅವಳ ಬಾಯಿ ಮುಚ್ಚಿ.. "ನನಗೆಲ್ಲ ಗೊತ್ತು... ನೀನೇನು ಹೇಳಬೇಡ... ನನ್ನ ಮಾಡುವೆ ಆಗ್ತಿಯ?"...

ಸೂಚನೆ: ಏಡ್ಸ್ ಕಾಯಿಲೆಗೂ ಮದ್ದಿದೆ, ಆದ್ರೆ "ಸಂಶಯ" ಅನ್ನೋ ಮಾರಿಗೆ?

ಲೇಖಕರ ಕಿರುಪರಿಚಯ
ಶ್ರೀ ಅರವಿಂದ ಕುಲಕರ್ಣಿ

ಮೂಲತಃ ಬಾದಾಮಿ ತಾಲ್ಲೂಕು, ನೀಲಗುಂದ ಗ್ರಾಮದವರಾದ ಇವರು ಬೆಂಗಳೂರಿನ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಹಿರಿಯ ಅಭಿಯಂತರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಚಿಕ್ಕ ಕಥೆ, ಕವನ ಹಾಗೂ ನಾಟಕಗಳನ್ನು ಬರೆಯುವುದು ಇವರ ಹವ್ಯಾಸ; ಇವರ ಬರಹಗಳು ಜೀವನ, ಮಾನವೀಯ ಮೌಲ್ಯಗಳು, ಸಮಾಜದ ಆಗು ಹೋಗುಗಳ ಕುರಿತ ದರ್ಪಣ. ಹಾಗೆಯೇ ನಾಟಕಗಳನ್ನು ನಿರ್ದೇಶಿಸಿ ಹೊಸ ಪ್ರಯತ್ನಗಳನ್ನು ಮಾಡುವ ಅಭಿರುಚಿಯನ್ನೂ ಹೊಂದಿದ್ದಾರೆ.

ಕೆಲಸದ ಒತ್ತಡದಿಂದ ಹೊರಬರಲು ಹಾಗೂ ಮನಸ್ಸನ್ನು ಕೇಂದ್ರೀಕರಿಸಲು ಬರವಣಿಗೆ ನನಗೆ ಸಹಾಯವಾಗಿದೆ ಎನ್ನುವ ಇವರು, ಬರೆದ ಎಲ್ಲ ಬರಹಗಳನ್ನು ಮಿತ್ರರೊಂದಿಗೆ ಹಂಚಿಕೊಂಡು, ಕಲೆಯ ಜೊತೆಯಲ್ಲಿ ವೈಯಕ್ತಿಕ ಬೆಳವಣಿಗೆಯನ್ನು ಪಡೆಯುವುದೇ ಧ್ಯೇಯವಾಗಿಸಿಕೊಂಡಿದ್ದಾರೆ.

Blog  |  Facebook  |  Twitter

5 ಕಾಮೆಂಟ್‌ಗಳು:

  1. ಅದ್ಭುತ !! ಕಥೆಗೆ ಕೊನೆಯಲ್ಲಿ ಒಳ್ಳೆಯ ತಿರುವು.. ಅರವಿಂದ ಎಂಥಹ ಕಥೆಯನ್ನೂ ರಸವತ್ತಾಗಿ ಹೇಳುವುದುರಲ್ಲಿ ನಿಸ್ಸೀಮರು ಎಂಬುದರಲ್ಲಿ ಸಂಶಯವಿಲ್ಲ..

    ಪ್ರತ್ಯುತ್ತರಅಳಿಸಿ
  2. ಧನ್ಯವಾದಗಳು ಗುರುರಾಜ. ನಿಮ್ಮಂಥ ಮಿತ್ರರ ಪ್ರೀತಿಯೇ ನನ್ನ ಪ್ರಯತ್ನಗಳಿಗೆ ಮೂಲ ಸ್ಪೂರ್ತಿ. ಲೇಖನ ಓದಿದ್ದಕ್ಕೆ ಧನ್ಯವಾದ.

    ಪ್ರತ್ಯುತ್ತರಅಳಿಸಿ
  3. ಶೆಟ್ರೇ ಧನ್ಯವಾದಗಳು. ನೀವೂ ಬರೆದು ಕಳುಹಿಸಿ ನಮ್ಮ ಕಹಳೆ ತಂಡಕ್ಕೆ

    ಪ್ರತ್ಯುತ್ತರಅಳಿಸಿ
  4. ಶ್ರೀ ಅರವಿಂದ ಕುಲಕರ್ಣಿ ರವರೇ,
    ಕತೆ ತುಂಬಾ ಚೆನ್ನಾಗಿದೆ

    ಪ್ರತ್ಯುತ್ತರಅಳಿಸಿ