ಮಂಗಳವಾರ, ನವೆಂಬರ್ 13, 2012

ನಾ ಕಂಡ ದೀಪಾವಳಿ

ದೀಪಾವಳಿ ಹಬ್ಬವು ನಮ್ಮ ದೇಶಾದ್ಯಂತ ಆಚರಿಸಲ್ಪಡುವ ಪ್ರಮುಖ ಹಬ್ಬಗಳಲ್ಲಿ ಒಂದು. ಸಾಮಾನ್ಯವಾಗಿ ಅಕ್ಟೋಬರ್ ಅಥವಾ ನವಂಬರ್ ತಿಂಗಳಿನಲ್ಲಿ ಆಮಾವಾಸ್ಯೆಯ ದಿನದಂದು ದೀಪಾವಳಿ ಆಚರಿಸಲಾಗುವುದು. ಅಮಾವಾಸ್ಯೆಯ ಹಿಂದಿನ ದಿನ ಶ್ರೀ ಕೃಷ್ಣನು ನರಕಾಸುರನನ್ನು ಸಂಹರಿಸಿದನೆಂದು ಹೇಳಲಾಗುತ್ತದೆ. ಬಲಿ ಚಕ್ರವರ್ತಿಯ ತ್ಯಾಗವನ್ನು ಅಮಾವಾಸ್ಯೆಯ ಮರುದಿನ ಬಲಿಪಾಡ್ಯಮಿ ಎಂದು ಗುರುತಿಸಲಾಗುತ್ತಿದೆ. ಶ್ರೀ ರಾಮನು ರಾವಣನನ್ನು ಗೆದ್ದು, ಸೀತೆ ಮತ್ತು ಲಕ್ಷ್ಮಣರ ಜೊತೆಗೆ ಅಯೋಧ್ಯೆಗೆ ಮರಳಿದ ಹಿನ್ನೆಲೆಯಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತದೆಂಬ ನಂಬಿಕೆಯಿದೆ. ಅಲ್ಲದೇ, ಸಿಖ್ಖರ 6ನೇ ಧರ್ಮಗುರು ಹರಗೋಬಿಂದ್ ಸಿಂಗ್ ಗ್ವಾಲಿಯರ್ ಕೋಟೆಯಲ್ಲಿ ಬಂಧಿತರಾಗಿದ್ದ 52 ರಾಜರನ್ನು ಬಿಡಿಸಿ ತಂದ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತಿದೆಯೆಂಬ ಉಲ್ಲೇಖವೂ ಇತಿಹಾಸದಲ್ಲಿ ಇದೆ. ಉತ್ತರ ಭಾರತದಲ್ಲಿ ಅತ್ಯಂತ ವಿಜೃಂಭಣೆಯಿಂದ ದೀಪಾವಳಿಯನ್ನು 5 ದಿನಗಳವರೆಗೂ ಆಚರಿಸಿದರೆ, ದಕ್ಷಿಣ ಭರತದಲ್ಲಿ 3 ದಿನಗಳವರೆಗೂ ದೀಪಾವಳಿಯನ್ನು ಆಚರಿಸುತ್ತಾರೆ.

ಎಲ್ಲರಿಗೂ ಹೊಸಬಟ್ಟೆಗಳು
ಬಾಲ್ಯದಲ್ಲಿ ಕಳೆದ ದೀಪಾವಳಿ ಹಬ್ಬದ ದಿನಗಳನ್ನು ಎಂದೆಂದಿಗೂ ನಾನು ಮರೆಯಲು ಸಾಧ್ಯವಿಲ್ಲ. ದೀಪಾವಳಿ ಬರುವ ತಿಂಗಳ ಮುಂಚೆಯೇ ಹೊಸ ಬಟ್ಟೆಗಳನ್ನು ನಮ್ಮ ತಂದೆಯವರು ಮತ್ತು ಅಣ್ಣ-ಭಾವಂದಿರು ತಂದುಕೊಡುತ್ತಿದ್ದರು. ತಂದ ಹೊಸ ಬಟ್ಟೆಗಳನ್ನು ನಮಗೆ ಇಷ್ಟವಾದ ದರ್ಜಿಯಲ್ಲಿ ಹೊಲೆಯಿಸುವುದೇ ಒಂದು ಸಾಹಸ! ಪ್ರತಿ ಎರಡು-ಮೂರು ದಿನಕ್ಕೊಮ್ಮೆ ದರ್ಜಿಯಲ್ಲಿಗೆ ಹೋಗಿ ನಮ್ಮ ಬಟ್ಟೆಗಳು ತಯಾರಾಗಿವೆಯೆ ಎಂದು ನೋಡುತ್ತಿದ್ದೆವು; ಹೊಸ ಬಟ್ಟೆಗಳನ್ನು ಹಾಕಿಕೊಳ್ಳದೇ ಇದ್ದರೆ ನಮಗೆ ಸಂತೋಷವೇ ಇರುತ್ತಿರಲಿಲ್ಲ. ಹೇಗೋ, ಹಬ್ಬಕ್ಕೆ ಮುಂಚೆಯೇ ಹೊಸ ಬಟ್ಟೆಗಳನ್ನು ದರ್ಜಿಯನ್ನು ಪುಸಲಾಯಿಸಿ ಪಡೆದುಕೊಳ್ಳುತ್ತಿದ್ದೆವು. ನಮಗೆ ಹೊಸ ಬಟ್ಟೆಯಾದರೆ, ಮನೆಯನ್ನೆಲ್ಲಾ ಸುಣ್ಣದಿಂದ ಉಂಗಳಿಸುತ್ತಿದ್ದರು (ಗೋಡೆಗಳಿಗೆ ಸುಣ್ಣ ಬಳಿಯುವುದಕ್ಕೆ ಉಂಗಳಿಸುವುದು ಎನ್ನುತ್ತಾರೆ). ಹೀಗಾಗಿ ನಾವು ಹೊಸ ಹೊಸ ಬಟ್ಟೆಯುಟ್ಟು, ಮನೆಯೆಲ್ಲಾ ಬಿಳಿ ಬಣ್ಣದಿಂದ ಸಿಂಗಾರಗೊಂಡು ಹಬ್ಬವನ್ನು ಬರಮಾಡಿಕೊಳ್ಳುತ್ತಿದ್ದೆವು.

ರುಚಿ ರುಚಿ ಕಜ್ಜಾಯ
ದೀಪಾವಳಿಗೆ ನಮ್ಮೂರಿನಲ್ಲಿ ತಯಾರಿಸುತ್ತಿದ್ದ ಸಿಹಿತಿಂಡಿ - ಕಜ್ಜಾಯ. ಅವರವರ ಮನೆಯಲ್ಲಿರುವ ಸದಸ್ಯರ ಹಾಗೂ ನೆಂಟರಿಷ್ಟರ ಸಂಖ್ಯೆಗನುಸಾರ ಸುಮಾರು 15-20 ಸೇರು ಅಕ್ಕಿಯನ್ನು ನೀರಿನಲ್ಲಿ ನೆನೆಯಿಸಿ, ರಾತ್ರಿ ಊಟದ ನಂತರ ಒರಳಿನಲ್ಲಿ ಹಾಕಿ ಒನಕೆಯಿಂದ ಕುಟ್ಟುತ್ತಿರುವಾಗ ಬರುತ್ತಿದ್ದ 'ದಗ್ ದಗ್' ಎಂಬ ಸದ್ದು ಇಂದಿಗೂ ನೆನಪಿದೆ! ಈ ಕಜ್ಜಾಯ ತಯಾರಿಸುವುದು ಎಲ್ಲರಿಗೂ ಬಾರದ ಒಂದು 'ಕಲೆ' ಎಂದೇ ಹೇಳಬಹುದು; ಪಾಕ ಸರಿಯಾಗಿರದಿದ್ದರೆ ಕಜ್ಜಾಯಗಳು ತುಂಬಾ ತೆಳ್ಳಗೆ ಅಥವಾ ಗಟ್ಟಿಯಾಗಿರುತ್ತಿದ್ದವು. ಆದ್ದರಿಂದ, ಪಾಕಪ್ರವೀಣರಾದ ಕೆಲವರನ್ನು ಕರೆಯಿಸಿ, ಅವರಿಂದ ಕಜ್ಜಾಯ ಪಾಕ ತೆಗೆಸುತ್ತಿದ್ದುದು ವಾಡಿಕೆ. ಹಬ್ಬಕ್ಕೆ ತಯಾರಿಸಿದ ಕಜ್ಜಾಯವನ್ನು 2-3 ತಿಂಗಳುಗಳವರೆಗೂ ಮನೆಗೆ ಬರುವ ನೆಂಟರಿಗಷ್ಟೇ ಅಲ್ಲ, ನಮಗೂ ಸಹ ಆಗಾಗ ಸಂಜೆಯ ಹೊತ್ತಿನಲ್ಲಿ ಶಾಲೆಯಿಂದ ಬಂದ ಮೇಲೆ ತಿನ್ನಲು ಕೊಡುತ್ತಿದ್ದರು.

ಗೌರಮ್ಮನಿಗೆ ನೋಮು
ಗೌರಮ್ಮನ ಪೂಜೆ ಈ ಹಬ್ಬದ ವಿಶೇಷ; ಇದಕ್ಕಾಗಿ ಗೌರಮ್ಮನನ್ನು ಊರ ದೇವಸ್ಥಾನ ಅಥವಾ ಎಲೆ ತೋಟಗಳಲ್ಲಿ ಕೂಡಿಸುತ್ತಿದ್ದರು. ಅವರವರ ಮನೆಯಲ್ಲಿ ತಯಾರಿಸಿದ ಕಜ್ಜಾಯಗಳನ್ನು ಒಂದು ಬೇಸಿನ್ನಿನಲ್ಲಿ ಗೌರಮ್ಮನ ಮುಂದೆ ಇರಿಸಿ, ನೋಮು ಮಾಡುವುದು ವಾಡಿಕೆಯಾಗಿತ್ತು. ನೋಮುದಾರ, ಮುಡಿ, ಗೆಜ್ಜೆಗಳನ್ನು ಸಂತೆಯಿಂದ ವಾರಕ್ಕೆ ಮುಂಚೆಯೇ ತಂದು, ನೋಮುದಾರಕ್ಕೆ ಬೆಳ್ಳಿಯಿಂದ ಮಾಡಿಸಿದ ಗೆಜ್ಜೆ-ಬುಗುಡಿಗಳನ್ನು ಸೇರಿಸಿ ಹಬ್ಬದ ದಿನದಂದು ಗೌರಮ್ಮನ ಪೂಜೆಯಲ್ಲಿರಿಸಿ ನಂತರ ಕೈಗಳಿಗೆ ಕಟ್ಟಿಕೊಳ್ಳುತ್ತಿದ್ದೆವು. ಹೊಸದಾಗಿ ಮದುವೆಯಾದ ಅಳಿಯಂದಿರನ್ನು ಮಾವನವರು ಮನೆಗೆ ಕರೆಯಿಸಿ, ಹೊಸ ಬಟ್ಟೆ, ಸಿಹಿತಿಂಡಿ ಇತ್ಯಾದಿಗಳನ್ನು ಕೊಡಿಸಿ ಸತ್ಕರಿಸುತ್ತಿದ್ದರು; ಮನೆಯ ಗಂಡುಮಕ್ಕಳಿಗೆ ನೋಮುದಾರ ಕೊಟ್ಟರೆ ಅವರು ಮುಂಬರುವ ವರ್ಷದಿಂದ ಅವರ ಮನೆಯಲ್ಲಿಯೇ ದೀಪಾವಳಿಯನ್ನು ಆಚರಿಸಿಕೊಳ್ಳಬಹುದೆಂಬ ನಂಬಿಕೆಯಿತ್ತು.

ಪಟ ಪಟ ಪಟಾಕಿ
ದೀಪಾವಳಿ ಹಬ್ಬದ ವಿಶೇಷತೆ, ನಮ್ಮೆಲ್ಲರ ಪಂಚಪ್ರಾಣವಾಗಿದ್ದ ಪಟಾಕಿಗಳು! ದೀಪಾವಳಿಗೆ ಪಟಾಕಿಗಳನ್ನು ಸುಡದಿದ್ದರೆ ನಮಗೆ ಹಬ್ಬದ ಸಡಗರವೇ ಇರುತ್ತಿರಲಿಲ್ಲ. ನಮ್ಮೂರಿನಲ್ಲಿ ಅವರವರ ಅಂತಸ್ತಿಗೆ ತಕ್ಕಂತೆ ಹಣ ಖರ್ಚುಮಾಡಿ ಪಟಾಕಿಗಳನ್ನು ಖರೀದಿಸಿ ಮಕ್ಕಳಿಂದ ಹೊಡೆಸಿ ಸಂತೋಷಪಡುತ್ತಿದ್ದರು. ನಾವು ಹುಡುಗರಾಗಿದ್ದಾಗ ಮನೆಗೆ ಬರುವ ನೆಂಟರಿಗೆಲ್ಲಾ ಪಟಾಕಿಗಳನ್ನು ಕೊಡಿಸುವಂತೆ ದುಂಬಾಲುಬೀಳುತ್ತಿದ್ದೆವು. ಇಂದಿಗೂ ಪಟಾಕಿಗಳು ಮಕ್ಕಳಿಗೆ ಅತ್ಯಂತ ಮೋಜಿನ ಆಟಿಕೆಗಳಾಗಿಯೇ ಉಳಿದಿವೆ; ಮಕ್ಕಳನ್ನು ಪಟಾಕಿಗಳಿಂದ ದೂರವಿಡುವುದು ಅಸಾಧ್ಯವೆಂದೇ ಹೇಳಬಹುದು. ಪಟಾಕಿಗಳನ್ನು ಸುಡುವುದರಿಂದ ಪರಿಸರ ಮಾಲಿನ್ಯ ಉಂಟಾಗಿ, ಶ್ವಾಸಕೋಶದ ತೊಂದರೆ ಉಂಟಾಗುತ್ತದೆ. ಆದ್ದರಿಂದ, ನಾವು ಆದಷ್ಟೂ ಪಟಕಿಗಳನ್ನು ಸುಡದೆಯೇ ಹಬ್ಬವನ್ನು ಸಾಂಪ್ರದಾಯಿಕವಾಗಿ, ಅರ್ಥಪೂರ್ಣವಾಗಿ ಆಚರಿಸುವ ಪ್ರಯತ್ನ ಮಾಡಬೇಕು.

ಪಟಾಕಿ ಹಚ್ಚುವವರಿಗೆ ಕೆಲವು ಕಿವಿಮಾತುಗಳು
  1. ಪಟಾಕಿಗಳನ್ನು ಆದಷ್ಟೂ ಕಡಿಮೆ ಮಾಡಿ; ಮಕ್ಕಳು ಪಟಾಕಿ ಹಚ್ಚುವಾಗ ಹಿರಿಯರು ಜೊತೆಗಿದ್ದು ಸೂಕ್ತ ಮಾರ್ಗದರ್ಶನ ನೀಡಬೇಕು.
  2. ಪಟಾಕಿ ಸುಡುವ ಮಕ್ಕಳಿಗೆ ಪ್ಯಾಂಟ್ ಮತ್ತು ಚಪ್ಪಲಿಯ ಅಥವಾ ಶೂಗಳನ್ನು ಹಾಕಿಸಬೇಕು.
  3. ಭೂಚಕ್ರ, ಹೂಕುಂಡ ಮತ್ತು ಸುರ್-ಸುರ್ ಬತ್ತಿಗಳನ್ನು ಉದ್ದನೆಯ ಕಂಬಿಗೆ ಸಿಕ್ಕಿಸಿ ದೂರದಲ್ಲೆ ನಿಂತು ಹಚ್ಚಬೇಕು.
  4. ಠುಸ್ಸಾದ ಅಥವಾ ಡ್ಯಾಮೇಜ್ ಆಗಿರುವ ಪಟಾಕಿಗಳನ್ನು ಮತ್ತೆ ಸುಡುವ ಪ್ರಯತ್ನ ಮಾಡಬಾರದು.
  5. ಕೈಯಿಂದ ಹಿಡಿದು ಯಾವುದೇ ಪಟಾಕಿಯನ್ನು ಸುಡುವ ಪ್ರಯತ್ನ ಸಲ್ಲದು.
  6. ಆಕಾಶಕ್ಕೆ ಚಿಮ್ಮುವ ರಾಕೆಟ್ ಮುಂತಾದ ಪಟಾಕಿಗಳನ್ನು ಮನೆಯ ಮಾಳಿಗೆಯಿಂದ ಸುಡುವುದು.
  7. ಪಟಾಕಿಗಳನ್ನು ಹೊಡೆದ ನಂತರ ಚೆನ್ನಾಗಿ ಕೈ-ಕಾಲುಗಳನ್ನು ತೊಳೆದುಕೊಳ್ಳಬೇಕು.
ಮೇಲಿನ ಕೆಲವು ಸಲಹೆಗಳನ್ನು ಮಕ್ಕಳಿಗೆ ತಿಳಿಹೇಳಿ, ಸುರಕ್ಷಿತ ಮತ್ತು ಸಂತೋಷವಾಗಿ ಈ ದೀಪಾವಳಿ ಹಬ್ಬವನ್ನು ಆಚರಿಸಿ. ದೀಪಗಳ ಈ ಹಬ್ಬವು ನಮ್ಮೆಲ್ಲರ ಮನೆ-ಮನಗಳನ್ನು ಬೆಳಗಲಿ, ಬಾಳನ್ನು ಹಸನಾಗಿಸಲಿ; ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.

ಲೇಖಕರ ಕಿರುಪರಿಚಯ
ಡಾ. ಕೆ. ಎಂ. ಚೆನ್ನಕೇಶವಮೂರ್ತಿ

ಮೂಲತಃ ಹೊಸಕೋಟೆ ತಾಲ್ಲೂಕಿನವರಾದ ಇವರು ಹಲವಾರು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ತಮ್ಮ ಹಳ್ಳಿಯಲ್ಲಿಯೇ ಮುಗಿಸಿದ ನಂತರ ಬೆಂಗಳೂರಿನಲ್ಲಿ ಕಾಲೇಜು ಶಿಕ್ಷಣ ಮತ್ತು ಪಶುವೈದ್ಯಕೀಯ ಪದವಿಯನ್ನು ಪಡೆದಿದ್ದಾರೆ.

ಕರ್ನಾಟಕ ಸರ್ಕಾರದ ಪಶುಪಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು, ಪ್ರಸ್ತುತ ಹೆಬ್ಬಾಳದಲ್ಲಿರುವ ದೊಡ್ಡರೋಗ ನಿವಾರಣಾ ಯೋಜನೆಯಲ್ಲಿ ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ನಮ್ಮ ದೇಸಿ ಸಂಸ್ಕೃತಿಯ ಬಗ್ಗೆ ಅತ್ಯಂತ ಅಭಿಮಾನ ಹೊಂದಿರುವ ಇವರು, ಅದನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡಲು ಹೆಮ್ಮೆಪಡುತ್ತಾರೆ. ಕನ್ನಡ-ಕರ್ನಾಟಕದ ಬಗ್ಗೆ ಬಹಳ ಗೌರವವನ್ನು ಇವರು ಹೊಂದಿದ್ದಾರೆ.

Blog  |  Facebook  |  Twitter

1 ಕಾಮೆಂಟ್‌:

  1. ಬಹಳ ಸಮಯೋಚಿತವಾಗಿ ಮೂಡಿ ಬಂದಿದೆ. ಇದರಲ್ಲಿರುವ ಎಷ್ಟೋ ವಿಷಯ ತಿಳಿದಿರಲಿಲ್ಲ. ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ