ಗುರುವಾರ, ನವೆಂಬರ್ 8, 2012

ಗ್ರಾಮೀಣ ಆಟಗಳ ಕಿರು ನೆನಪು

"ಬಾಲ್ಯದ ನೆನಪುಗಳು ಅದೆಷ್ಟು ಚೆನ್ನ! ಆ ದಿನಗಳು ನಮಗೆ ಮತ್ತೊಮ್ಮೆ ಹಿಂದಿರುಗಬಾರದೆ?" - ಇದು ನಮ್ಮೆಲ್ಲರಲ್ಲಿ ಸಹಜವಾಗಿ ಕೇಳಿ ಬರುವ ಮಾತುಗಳು. ಬಾಲ್ಯದ ದಿನಗಳು ಅದೇಕೆ ಅಷ್ಟೊಂದು ಚೆಂದ??

ಆಲೋಚಿಸಿದ್ದಲ್ಲಿ ಅರಿವಾಗಿದ್ದು, ಕಿನ್ನರ ಆಟೋಟ ಪ್ರಪಂಚ! ನಿಜ.. ಮಕ್ಕಳ ಆಟ ಹಾಗೂ ಆಟದಿಂದ ಪಾಠ ಅವರ ಸಂತಸವನ್ನು ಹೆಚ್ಚಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಇಂದಿನ ಮಕ್ಕಳಲ್ಲಿ ಆಟವೆಂದರೆ ಕ್ರಿಕೆಟ್, ಫುಟ್ಬಾಲ್, ಟೆನ್ನಿಸ್, ಹೆಚ್ಚಾಗಿ ವೀಡಿಯೊ ಗೇಮ್ಸ್, ಹೀಗೆ ಇನ್ನಿತರೇ ಕೆಲವಷ್ಟಕ್ಕೆ ಮಾತ್ರ ಸೀಮಿತವಾಗಿಬಿಟ್ಟಿದೆ!

ಒಮ್ಮೆ, ನಾವು ಹಾಗೂ ನಮಗೆ ತಿಳಿದಂತೆ ನಮ್ಮ ಹಿರಿಯರು ಆಡುತಿದ್ದ ಆಟಗಳ ಪಟ್ಟಿಯನ್ನು  ಮಾಡೋಣವೇ?

ಚೌಕಾ-ಬಾರಾ, ಅಳ್ಳಿ-ಗುಳ್ಳಿ ಮನೆ, ಕುಂಟೆಬಿಲ್ಲೆ, ಲಗೋರಿ, ಮರಕೋತಿ ಆಟ, ಗೋಲಿ, ನದಿ-ದಡ, ಗಿಲ್ಲಿ-ದಾಂಡು, ಕಬಡ್ಡಿ, ಜೂಟಾಟ, ಬುಗುರಿ, ಕೆಸರು ಗದ್ದೆ ಓಟ........

ಅಬ್ಬಾ!! ಪಟ್ಟಿ ಬೆಳೆಯುತ್ತಲೇ ಹೋಗುತ್ತಿದೆ. ಕೇವಲ ನಮ್ಮ ರಾಜ್ಯದಲ್ಲೇ ಇಷ್ಟೊಂದು ವೈವಿಧ್ಯ ಗ್ರಾಮೀಣ ಆಟಗಳಿದ್ದರೆ, ಇನ್ನು ಇಡೀ ಭಾರತದಲ್ಲಿ?? ಇವೆಲ್ಲವೂ ಟೀವಿ, ಗಣಕಯಂತ್ರ, ಇಲೆಕ್ಟ್ರಾನಿಕ್ ಸಲಕರಣೆಗಳು ಹಾಗೂ ಇನ್ನಿತರೇ ವೀಡಿಯೊ ಗೇಮ್ಸ್ ನಮ್ಮನ್ನು ಆವರಿಸುವುದಕ್ಕೂ ಮುನ್ನ ಆಡುತಿದ್ದ ಆಟಗಳು. ಈ ಆಟಗಳ ಉದ್ದೇಶ ಕೇವಲ ಗೆಲುವು ಹೊಂದುವುದು ಮಾತ್ರವಲ್ಲ, ಎಲ್ಲರೂ ಒಟ್ಟಾಗಿ ಕೂಡಿ ಆಡಿ ನಲಿಯುವುದಾಗಿತ್ತು.

ಗ್ರಾಮೀಣ ಕ್ರೀಡೆಗಳ ವಿಶಿಷ್ಟ-ವೈಶಿಷ್ಟ್ಯ ಅಪಾರ, ಹಾಗಾಗಿ ಈ ನನ್ನ ಬರವಣಿಗೆ ಗ್ರಾಮೀಣ ಆಟಗಳಿಗೆ ಸಮರ್ಪಣೆ. ಇವು ಹಲವಾರು ಪ್ರಾಕಾರಗಳಲ್ಲಿದ್ದು, ಈ ಬರವಣಿಗೆಯ ಮೂಲಕ ಕೆಲವೊಂದನ್ನ ನೆನಪಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ.


ಅಳ್ಳಿ-ಗುಳ್ಳಿ ಮನೆ
ಪ್ರತಿಯೊಬ್ಬರ ಮನೆಯಲ್ಲೂ ಖಡಾಖಂಡಿತವಾಗಿ ಇದ್ದಂತಹ ಆಟಿಕೆ. ಇದನ್ನು ಸಾಮಾನ್ಯವಾಗಿ ಮರದಿಂದ ತಯಾರಿಸಿರುತ್ತಾರೆ, ಕೆಲವರಲ್ಲಿ ಕಬ್ಬಿಣದ ಅಳ್ಳಿ-ಗುಳ್ಳಿ ಮನೆ ಸಹ ಇತ್ತು. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಆಡುತಿದ್ದ ಆಟ. ಎರಡು ಸಾಲುಗಳಿಂದ ಕೂಡಿದ್ದು, ಒಂದೊಂದು ಸಾಲಲ್ಲೂ 7 ಗುಳಿಗಳಿರುತ್ತವೆ. ಒಂದು ಮಣೆಯಲ್ಲಿ ಇಬ್ಬರು ಆಡಬಹುದು, ಹುಣಸೆ ಬೀಜಗಳು ಬೇಕಾಗುತ್ತವೆ. ಮೊದಲಿಗೆ ಪ್ರತಿ ಗುಳಿಯಲ್ಲೂ ಐದೈದು ಬೀಜಗಳನ್ನು ತುಂಬಿಸಲಾಗುತ್ತದೆ. ಇಬ್ಬರೂ ಆಟಗಾರರಿಗೆ ಒಂದೊಂದು ಸಾಲು ಸೀಮಿತ. ತಮ್ಮ ಸಾಲಿಗೆ ಸೇರಿದ ಯಾವುದಾದರೊಂದು ಗುಳಿಯಿಂದ ಹುಣಸೆ ಬೀಜಗಳನ್ನು ಬಾಚಿ, ಒಂದೊಂದಾಗಿ ಮುಂದಿನ ಗುಳಿಗಳಲ್ಲಿ ಹಾಕುತ್ತಾರೆ. ಕೈಲಿದ್ದ ಬೀಜಗಳು ಖಾಲಿಯಾದಲ್ಲಿ ತದನಂತರದ ಗುಳಿಯಿಂದ ಮತ್ತೆ ಬೀಜಗಳನ್ನು ತೆಗೆದು, ಒಂದೊಂದಾಗಿ ಮುಂದಿನ ಗುಳಿಗಳಿಗೆ ಹಂಚಲಾಗುತ್ತದೆ. ಒಂದೊಮ್ಮೆ ಕೊನೆಯ ಬೀಜ ಹಾಕಿದ ಗುಳಿಯ ನಂತರದ ಗುಳಿ ಖಾಲಿ ಇದ್ದಲ್ಲಿ, ತದನಂತರದ ಗುಳಿ ಹಾಗೂ ಅದರ ಅಭಿಮುಖದಲ್ಲಿರುವ ಗುಳಿಯಲ್ಲಿರುವ ಬೀಜಗಳಷ್ಟನ್ನೂ ಆ ಆಟಗಾರನು ಆಕ್ರಮಿಸುತ್ತಾನೆ. ಎಲ್ಲಾ ಬೀಜಗಳೂ ಖಾಲಿಯಾಗುವ ತನಕ ಇಬ್ಬರೂ ಸರತಿಯ ಪ್ರಕಾರ ಆಡತಕ್ಕದ್ದು. ಕೊನೆಗೆ ಹೆಚ್ಚು ಹುಣಸೆ ಬೀಜಗಳನ್ನ ಹೊಂದಿದವರಿಗೆ ಜಯ.

ಅನುಕೂಲಗಳು:
1. ಮೊದಲಿಗೆ, ಮಕ್ಕಳಲ್ಲಿ ಲೆಕ್ಕದ ಪಾಠ.
2. ಕೈ ಹಾಗೂ ಬೆರಳುಗಳಿಗೆ ಒಳ್ಳೆಯ ಆಕ್ಯುಪಂಕ್ಚರ್ ದೊರೆಯುತ್ತದೆ.
3. ಆಲೋಚನಾ ಶಕ್ತಿ ಹಾಗೂ ಮುಂದಾಲೋಚನೆ ವೃದ್ಧಿಸುತ್ತದೆ.
4. ಹಿರಿಯರಿಗೆ ಒಳ್ಳೆಯ ಕಾಲಕಳೆಯುವ ಆಟ.


ಚೌಕಾಭಾರ
ಬಹಳ ಪುರಾತನ ಕಾಲದಿಂದಲೂ ಪ್ರಖ್ಯಾತವಾಗಿದ್ದಂತಹ ಆಟ. ಮಹಾಭಾರತದ ಕುರುಕ್ಷೇತ್ರ ಯುದ್ಧಕ್ಕೆ ಈ ಆಟ ಒಂದು ರೀತಿ ಕಾರಣಕರ್ತವಾಗಿದ್ದು ಎಲ್ಲರಿಗೂ ತಿಳಿದೇ ಇದೆ. 5X5 ಅಥವಾ 7X7 ಚೌಕಗಳಿಂದ ಕೂಡಿ, ನಾಲ್ಕು ಮನೆಗಳನ್ನು ಹೊಂದಿದ್ದು, ಗರಿಷ್ಟ 4 ಮಂದಿ ಆಡಬಹುದಾದಂತಹ ಆಟ. ಕವಡೆ ಅಥವಾ ದಾಳ ಮತ್ತು ನಡೆಸಲು ಕಾಯಿಗಳು ಬೇಕಾಗುತ್ತವೆ. ಕವಡೆ ಹಾಕಿ ಅದರಲ್ಲಿ ಬಂದ ಅಂಕಿಯಷ್ಟು ಚೌಕಗನ್ನು ಕಾಯಿಯಿಂದ ದಾಟಲಾಗುತ್ತದೆ.

ಕಾಯಿಗಳ ಚಲನೆ ಮೊದಲಿಗೆ ಹೊರ ಚೌಕಗಳಿಂದ ಶುರು ಮಾಡಿ ನಂತರ ಒಳ ಚೌಕಕ್ಕೆ ತಂದು ಮಧ್ಯದ ಚೌಕಕ್ಕೆ ಸಾಗಿಸಬೇಕು. ಹಾಗೆ ಮನೆಯಿಂದ ಮಧ್ಯದ ಚೌಕಕ್ಕೆ ಸೇರಿಸಿದಲ್ಲಿ ಆ ಕಾಯಿ ಹಣ್ಣಾಗುತ್ತದೆ. ದಾಳ ಅಥವಾ ಕವಡೆ ಹಾಕಿದಾಗ  1, 5, 6, 8 ಅಂಕಿ ಬಿದ್ದಲ್ಲಿ ಆಟಗಾರನಿಗೆ ಮತ್ತೊಮ್ಮೆ ದಾಳ ಹಾಕುವ ಅವಕಾಶ ದೊರಕುತ್ತದೆ. ಯಾವುದೇ ಆಟಗಾರ ತನ್ನ ಕಾಯಿ ನಡೆಸುವಾಗ ಅಲ್ಲಿ ಮತ್ತೊಬ್ಬನ ಕಾಯಿ ಇದ್ದಲ್ಲಿ, ಎದುರಾಳಿಯ ಕಾಯನ್ನು ಪುನಃ ಮೊದಲಿನ ಸ್ಥಿತಿಗೆ (ಮನೆ) ತಲುಪಿಸಿ, ಇನ್ನೊಮ್ಮೆ ದಾಳ ಹಾಕುವ ಸದಾವಕಾಶ ಪಡೆದುಕೊಳ್ಳುತ್ತಾನೆ . ಹೀಗೆ ಯಾರು ಮೊದಲು ತನ್ನ ಎಲ್ಲಾ ಕಾಯಿಗಳನ್ನು ಹಣ್ಣಾಗಿಸುತ್ತಾರೋ, ಅವರಿಗೆ ಗೆಲುವು!

ಅನುಕೂಲಗಳು:
1. ಲೆಕ್ಕಾಚಾರದ ಕಲಿಕೆ.
2. ಮುಂದಾಲೋಚನೆಯ ಶಕ್ತಿ ವೃದ್ಧಿಸುವುದು.
3. ಕೂಡಿ ಆಡುವ ಹೊಂದಾಣಿಕೆ.
4. ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ.


ಲಗೋರಿ
ಲಗೋರಿ ಮೂಲತಃ ಕರ್ನಾಟಕದಲ್ಲಿ ಆರಂಭವಾದ ಆಟ. ಹಳ್ಳಿಯ ಹೈಕಳಿಗೆ ಅಚ್ಚು ಮೆಚ್ಚು. ನಾನೂ ಸಹ ಹುಡುಗರೊಂದಿಗೆ ಸಮಾನವಾಗಿ ಆಡುತ್ತಿದ್ದೆ! ಇದರಲ್ಲಿ 2 ಗುಂಪುಗಳಿದ್ದು, ಎರಡೂ ಗುಂಪಿನಲ್ಲಿ ಒಬ್ಬ ನಾಯಕ ನೇಮಕವಾಗಿರುತ್ತಾನೆ. ಮೊದಲಿಗೆ 7 ಕಲ್ಲುಗಳನ್ನು ಒಂದರಮೇಲೊಂದು ಜೋಡಿಸಿರುತ್ತಾರೆ. ಒಂದು ಪಂಕ್ತಿಯಿಂದ ಒಬ್ಬ ಆಟಗಾರ ಚೆಂಡನ್ನು ಕಲ್ಲಿಗೆ ಗುರಿಯಿಟ್ಟು  ಹೊಡೆಯುವ ಮೂಲಕ ಕಲ್ಲುಗಳನ್ನು ಬೀಳಿಸುತ್ತಾನೆ. ಮತ್ತೊಂದು ಗುಂಪಿನ ಸದಸ್ಯರು ಚೆಲ್ಲಾಪಿಲ್ಲಿಯಾದ ಕಲ್ಲುಗಳನ್ನು ಪುನಃ ಒಂದರಮೆಲೊಂದನ್ನು ಜೋಡಿಸತಕ್ಕದ್ದು. ಹೀಗೆ ಜೋಡಿಸುವಾಗ ಮೊದಲಿನ ಗುಂಪಿನವರು ಚಂಡಿನಿಂದ ಎದುರಾಳಿಯ ಆಟಗಾರರಿಗೆ ಹೊಡೆಯುತ್ತಾರೆ, ಯಾರಿಗೆ ಚಂಡು ತಾಕುತ್ತದೋ ಅವರು ಆಟದಿಂದ ಹೊರಗೆ. ಎಲ್ಲಾ ಕಲ್ಲುಗಳನ್ನ ಜೋಡಿಸಿದಲ್ಲಿ ಆ ಗುಂಪಿಗೆ ಜಯ, ಇಲ್ಲವಾದಲ್ಲಿ ವಿರುದ್ಧದ ಗುಂಪಿಗೆ ಗೆಲುವು.

ಅನುಕೂಲಗಳು:
1. ನಾಯಕ ನೇತೃತ್ವ ರೂಡಿಸಿಕೊಳ್ಳುವುದು.
2. ಉತ್ತಮ ದೈಹಿಕ ವ್ಯಾಯಾಮ.
3. ಚೆಂಡಿನ ಎಸೆತದಿಂದ ಗುರಿಗಾರಿಕೆ.
4. ಗುಂಪಿನಲ್ಲಿ ತೋರಿಸುವ ಪರಸ್ಪರ ಹೊಂದಾಣಿಕೆ.
5. ಎದುರಾಳಿಯನ್ನು ಕಕ್ಕಾಬಿಕ್ಕಿಗೊಳಗಾಗಿಸುವ ಚಾಕಚಕ್ಯತೆ.


ಕುಂಟೆಬಿಲ್ಲೆ
ನನಗೆ ಬಹಳ ಪ್ರಿಯವಾದದ್ದು. ಬಹುತೇಕ ಎಲ್ಲ ಹುಡುಗಿಯರ ನೆಚ್ಚಿನ ಆಟ. ನೆಲದ ಮೇಲೆ 6 ಅಥವಾ 8 ಚೌಕಗಳನ್ನು ಬರೆಯತಕ್ಕದ್ದು. ಹಲವಾರು ಶೈಲಿಯಲ್ಲಿ ಬರೆಯಬಹುದು. ಚಪ್ಪಟ್ಟೆಯಾದ ಕಲ್ಲನ್ನು (ಪಚ್ಚೆ) ಮೊದಲಿನ ಚೌಕಕ್ಕೆ ಸರಿಯಾಗಿ ಗುರಿಯಿಟ್ಟು ಎಸೆದು, ನಂತರ ಒಂದು ಕಾಲಲ್ಲಿ ಕುಂಟುತ್ತಾ ಎಲ್ಲಾ ಚೌಕಗಳನ್ನು ಬಳಸಿ ಬರಬೇಕು. ಹೀಗೆ ಕುಂಟುವಾಗ ಎರಡೂ ಕಾಲು ಬಿಟ್ಟಲ್ಲಿ ಅಥವಾ ಯಾವುದಾದರು ಗೆರೆ ತುಳಿದಲ್ಲಿ, ಮತ್ತೊಬ್ಬ ಆಟಗಾರ್ತಿಗೆ ಆಟ ಬಿಟ್ಟುಕೊಡಬೇಕು. ಹೀಗೆ ಒಂದರ ನಂತರ ಮತ್ತೊಂದಾಗಿ ಎಲ್ಲಾ ಚೌಕಗಳಿಗೆ ಯಾರು ಮೊದಲು ಕಲ್ಲು ಎಸೆದು ಸಫಲವಾಗಿ ಮುಗಿಸುತ್ತಾರೋ ಅವರು ಗೆದ್ದಂತೆ.

ಅನುಕೂಲಗಳು:
1. ಮಕ್ಕಳಲ್ಲಿ ದೇಹದ ಸಮತೋಲನ ಹೆಚ್ಚುತ್ತದೆ.
2. ಕಾಲುಗಳಿಗೆ ರಕ್ತಸಂಚಾರ ವೃದ್ಧಿಸಿ ಸದೃಢವಾಗುತ್ತವೆ.
3. ಗುರಿಯಿಡುವ ಕಲೆ.


ಮೇಲ್ಕಂಡಂತೆ ಗ್ರಾಮೀಣ ಆಟಗಳ ಪ್ರಾಕಾರಗಳು ಹಲವಾರು. ಆದರೆ, ಈ ಗ್ರಾಮೀಣ ಆಟಗಳು ನಮಗೇನು ಕಲಿಸುತ್ತವೆ?
 1. ನಮ್ಮ ಪುರಾತನ ಇತಿಹಾಸ ಹಾಗೂ ಸಂಸ್ಕೃತಿಯ ಅರಿವು.
 2. ಸೋಲು-ಗೆಲುವನ್ನ ಸಮಾನವಾಗಿ ಸ್ವೀಕರಿಸುವ ಮನೋಭಾವ.
 3. ಪರಿಸರ ಸ್ನೇಹ.
 4. ಎಲ್ಲಾ ವರ್ಗದವರೂ ಮೇಲು-ಕೀಳು ಎಂಬ ಸಂಕುಚಿತ ಮನೋಭಾವವಿಲ್ಲದೆ ಆಡುವ ಪರಿ.
 5. ಹಿರಿಯರು ಹಾಗೂ ಕಿರಿಯರು ಒಟ್ಟಿಗೆ ಕೂಡಿ ಆಡುವ ಅವಕಾಶ ಒದಗಿಸುತ್ತದೆ.
 6. ಆಟದಿಂದ ಪಾಠ, ಸಾಮಾನ್ಯ ಜ್ಞಾನದ ಬೆಳವಣಿಗೆ.

ಹೀಗೆ ಗ್ರಾಮೀಣ ಆಟಗಳ ವಿಶಿಷ್ಟತೆಗಳು ಅನೇಕ. ಹಾಗಾಗಿ ನಾವು ಕಲಿತ ಕ್ರೀಡೆ, ಆಟಗಳನ್ನು ನಮ್ಮ ಮುಂದಿನ ಪೀಳಿಗೆಗೆ ಸಹ ಬಳುವಳಿಯಾಗಿ ಕಲಿಸೋಣ. ಅವಸಾನದ ಅಂಚಿನಲ್ಲಿರುವ ನಮ್ಮ ಆಟಗಳನ್ನು ಉಳಿಸಿ ಬೆಳೆಸೋಣ!

ಲೇಖಕರ ಕಿರುಪರಿಚಯ
ಶ್ರೀಮತಿ ಎಂ. ಕೆ. ರೇಖಾ ವಿಜೇಂದ್ರ

ಇವರು ಬೆಂಗಳೂರಿನ ನಿವಾಸಿ, ಸಾಪ್ಟ್-ವೇರ್ ಕಂಪನಿಯೊಂದರಲ್ಲಿ ಲೀಡ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಗೀತ-ನೃತ್ಯದಲ್ಲಿ ಆಸಕ್ತಿ, ಕನ್ನಡ ಭಾಷೆ ಮತ್ತು ಕರ್ನಾಟಕದ ಬಗ್ಗೆ ಗೌರವ ಹಾಗೂ ಪ್ರೀತಿಯನ್ನು ಹೊಂದಿದ್ದಾರೆ.

ಇಡೀ ಪ್ರಪಂಚದ ನೈಸರ್ಗಿಕ ಸೌಂದರ್ಯವನ್ನು ತಮ್ಮ ಕಣ್ಣುಗಳಲ್ಲಿ ಸೆರೆಹಿಡಿಯುವ ಹೆಬ್ಬಯಕೆ ಇವರದು!

ಕನ್ನಡ ಬರವಣಿಗೆಗೆ ಇನ್ನೂ ಹೊಸಬಳು ಎಂದು ಹೇಳಿಕೊಳ್ಳುವ ಇವರು, ನಾವೆಲ್ಲರೂ ನಮ್ಮ ಕನ್ನಡತನವನ್ನ ಉಳಿಸಿ, ಕನ್ನಡ ಭಾಷೆಯ ಬಗ್ಗೆ ಜನಜಾಗೃತಿ ಮೂಡಿಸಲು ಪ್ರಯತ್ನಿಸೋಣ ಎಂಬ ಸಂದೇಶವನ್ನು ಸಾರುತ್ತಾರೆ.

Blog  |  Facebook  |  Twitter

6 ಕಾಮೆಂಟ್‌ಗಳು:

 1. बार बार आती है मुझको मधुर याद बचपन तेरी.....
  ಅದ್ಭುತ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದೀರಿ. ಇತ್ತೀಚಿನ ದಿನಗಳಲ್ಲಿ ಮಹಾನಗರಗಳಿಗಷ್ಟೇ ಅಲ್ಲದೆ ಹಳ್ಳಿಗಳಲ್ಲೂ ಈ ಆಟಗಳು ಮರೆಯಾಗುತ್ತಿರುವುದು ವಿಷಾದನೀಯ.
  ಕೊಬ್ಬರಿ ಬುಗುರಿ, ಮರದ ಬುಗುರಿ, ಜೋಕಾಲಿ, ಬಳೆಚೂರು ಆಟ ಕೂಡ ಉತ್ತರಕರ್ನಾಟಕದಲ್ಲಿ ಪ್ರಸಿದ್ಧ ಆಟಗಳು.

  ಧನ್ಯವಾದಗಳು,
  ಅರವಿಂದ

  ಪ್ರತ್ಯುತ್ತರಅಳಿಸಿ
 2. ತುಂಬಾ ಚೆನ್ನಾಗಿ ಬರೆದಿದ್ದೀರಿ. ಪದಗಳ ಚಾಣಾಕ್ಷ ಪ್ರಯೋಗ ಮತ್ತು ವಿಷಯ ವಸ್ತು ಎರಡೂ ಚೆನ್ನಾಗಿ ಮಿಳಿತಗೊಂಡಿದೆ. ಹೀಗೆ ಬರೆಯುತ್ತಿರಿ.

  ಪ್ರತ್ಯುತ್ತರಅಳಿಸಿ
 3. ಶ್ರೀಮತಿ ಎಂ. ಕೆ. ರೇಖಾ ವಿಜೇಂದ್ರರವರು ವಿವರಿಸಿರುವ ಹಳ್ಳಿಯಲ್ಲಿ ಸಾಮಾನ್ಯವಾಗಿ ಬಿಡುವಿನ ಸಮಯದಲ್ಲಿ ಆಡುತ್ತಿದ್ದ ಆಗಿನ ಕಾಲದ ಆಟಗಳನ್ನು ಬಹಳ ಸರಳವಾಗಿ ಚೆನ್ನಾಗಿ ವಿವರಿಸಿ ಹೇಳಿದ್ದಾರೆ .ಇವುಗಳೆಲ್ಲವನ್ನೂ ನನ್ನ ಬಾಲ್ಯದ ಡಿನಗಳಲ್ಲಿ ಆಡಿ ನಲಿದಿದ್ದೇವೆ !.ಇವುಗಳನ್ನು ಓದಿದಾಗ ಈಗಲೂ ಆಡಬೇಕೆನ್ನುವ ಅಂಬಲ ಉಂಟಾಗುತ್ತದೆ.

  ಪ್ರತ್ಯುತ್ತರಅಳಿಸಿ
 4. ತಮ್ಮೆಲರಿಗೂ ನನ್ನ ಧನ್ಯವಾದಗಳು :)
  ನಿಮ್ಮ ಕ್ರಿಯಾತ್ಮಕ ಪ್ರತ್ಯುತ್ತರ ನನಗೆ ಪ್ರೇರಣೆಯಾಗಿದೆ . ನಾನು ಸಹ ಕನ್ನಡದಲ್ಲಿ ಲೇಖನ ಬರಯಲು ಪ್ರಯತ್ನಿಸಬಲ್ಲೆ ಎಂಬ ವಿಶ್ವಾಸ ಮೂಡಿಸಿದೆ :))

  ಪ್ರತ್ಯುತ್ತರಅಳಿಸಿ
 5. ಉಪಯುಕ್ತ ಮಾಹಿತಿಯನ್ನು ಸುಂದರವಾದ ಭಾಷೆಯಲ್ಲಿ ತಿಳಿಸಿದ ನಿಮಗೆ ಧನ್ಯವಾದ ಗಳು

  ಪ್ರತ್ಯುತ್ತರಅಳಿಸಿ
 6. ಅಭಿನಂದನೆಗಳು..
  ನಿಮ್ಮ ಲೇಖನ ತುಂಬಾ ಚೆನ್ನಾಗಿ ಮೂಡಿಬಂದಿದೆ.

  ಪ್ರತ್ಯುತ್ತರಅಳಿಸಿ