ಬೊಂಬೆ ಹಬ್ಬ (ಚಿತ್ರ : ಶ್ರೀ ನಟೇಶ್ ಲಕ್ಷ್ಮಣ್ ರಾವ್) |
ರೀ.. ನಿಮ್ಮ ಮನೇಲಿ ಬೊಂಬೆ ಕೂಡ್ಸಿದ್ದೀರಾ!!?.. ಎಂದು ಬೊಬ್ಬೆ ಹೊಡೆಯುತ್ತಾ ಸ್ನೇಹಿತರೊಡನೆ ಮನೆ ಮನೆಗೆ ತಿರುಗಾಡಿ, ಸಿಹಿ ತಿಂಡಿ ತಿನಿಸುಗಳನ್ನು ಸಂಗ್ರಹಿಸಿ ತಿನ್ನುವ ಹಾಗೊಂದು ಒಂಭತ್ತು ದಿನಗಳು, ಮನೆಯಲ್ಲಿ ಹಬ್ಬಗಳ ಸಾಲು, ಆವರಣದಲ್ಲಿ ಬೊಂಬೆಗಳ ಸಾಲು, ರಾಗಿ ಪೈರು, ಸಂಜೆಯ ವೇಳೆಗೆ ದೀಪಗಳ ಸಾಲು! ಹೌದು, ನಾನು ಬೊಂಬೆಗಳ ಹಬ್ಬದ ಬಗ್ಗೇನೇ ಬರಿತಾ ಇರೋದು. ನೀವು ದಕ್ಷಿಣಕನ್ನಡದಲ್ಲಿ ಹುಟ್ಟಿ, ಬೆಳೆದು ಹೀಗೊಂದು ನಶಿಸಿಹೋಗುತ್ತಿರುವ ಸಂಪ್ರದಾಯದ ಬಗ್ಗೆ ತಿಳಿದಿಲ್ಲವೆಂದರೆ ಬಹುಶಃ ನಿಮ್ಮ ಬಾಲ್ಯವು ಗಣಕಯಂತ್ರಕ್ಕೆ ಸೀಮಿತಗೊಂಡು ಅಂತರ್ಜಾಲ ಎಂಬ ಮಹಾ ಜಾಲದಲ್ಲಿ ಸಿಲುಕಿ ಮರೀಚಿಕೆಯ ಬೆನ್ನಟ್ಟಿ, ಗಣಕಯಂತ್ರಕ್ಕೆ ಶರಣಾಗಿ ಅಂತರ್ಜಾಲವೊಂದೇ ಮನೋರಂಜನೆಯ ಮೂಲಾಧಾರವಾಗಿರಬೇಕೆಂದು ಊಹಿಸಲು ವಿಷಾದಿಸುತ್ತೇನೆ.
ಬೊಂಬೆ ಹಬ್ಬ ಅಥವಾ ಗೊಂಬೆ ಹಬ್ಬವು, ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ದಸರಾ/ನವರಾತ್ರಿಯ ಸಮಯದಲ್ಲಿ ಆಚರಿಸುವ ಒಂದು ಹಬ್ಬ. ಈ ಬೊಂಬೆ ಹಬ್ಬವು ಪ್ರಮುಖವಾಗಿ ಬೊಂಬೆಗಳನ್ನು ದೇವರೆಂದು ಆರಾಧಿಸುವ ಹಬ್ಬವಾಗಿದ್ದು, ಹಿಂದೂ ಸಂಸ್ಕೃತಿಯನ್ನು ವರ್ಗಾಯಿಸುವ ಮತ್ತು ಬೆಳಕಿಗೆ ತರುವ ಒಂದು ಮಾಧ್ಯಮವಾಗಿದೆ. ಬಹುಶಃ ಬೊಂಬೆ ಹಬ್ಬವು ಸಂಸ್ಕೃತಿ ಹಾಗೂ ಕರಕುಶಲತೆಯ ಸಂಗಮವಾಗಿರುವ ಏಕೈಕ ಹಬ್ಬ ಎಂದರೆ ತಪ್ಪಾಗದು. ಬೊಂಬೆ ಹಬ್ಬವನ್ನು ನವರಾತ್ರಿಯ ಒಂಭತ್ತು ದಿನಗಳೂ ಆಚರಿಸುವುದು ಸಂಪ್ರದಾಯ. ವಿಧವಿಧವಾದ, ಅಲಂಕರಿಸಿದ ಬೊಂಬೆಗಳನ್ನು ಅಚ್ಚುಕಟ್ಟಾಗಿ, ಮೆಟ್ಟಿಲು ಮಣೆಗಳ ಮೇಲೆ ಜೋಡಿಸಿಟ್ಟು ಆರಾಧಿಸುವುದು ವಾಡಿಕೆ.
ಪಟ್ಟದ ಬೊಂಬೆಗಳು (ಚಿತ್ರ : ಶ್ರೀ ನಟೇಶ್ ಲಕ್ಷ್ಮಣ್ ರಾವ್) |
ಬೊಂಬೆಗಳಲ್ಲಿ ಪಟ್ಟದ ಬೊಂಬೆಗಳಿಗೆ ಪ್ರಾಮುಖ್ಯತೆಯನ್ನು ನೀಡಲಾಗಿದ್ದು, ಕನಿಷ್ಠ ಪಕ್ಷ ಒಂದು ಜೊತೆಯಾದರೂ ಇರಬೇಕೆಂಬ ಸಂಪ್ರದಾಯವಿದೆ. ಹಾಗೆಂದಾಕ್ಷಣ, ಬೊಂಬೆಗಳನ್ನು ಕೂಡಿಸುವುದಕ್ಕೆ ನಿಯಮಗಳು ಹಲವು ಎಂದಲ್ಲ; ಇದು ಸಹಜವಾಗಿ, ಸುಲಭವಾಗಿ ಆಚರಿಸುವಂತಹ ಒಂದು ಹಬ್ಬ. ಮನೆಯಲ್ಲಿ ಪುಟ್ಟ ಮಕ್ಕಳು ಆಡುವ ಅಮ್ಮ ಆಟದ ಬೊಂಬೆಗಳಿಂದ ಹಿಡಿದು ಮಹಾಭಾರತದ ದೃಶ್ಯಗಳ ತನಕ ಯಾವುದೇ ರೀತಿಯ ಬೊಂಬೆಗಳನ್ನು ಪ್ರದರ್ಶಿಸಿ ಆರಾಧಿಸಬಹುದು. ವಿಷ್ಣುವಿನ ದಶಾವತಾರ, ಕೃಷ್ಣನ ಗೀತೋಪದೇಶ ಮತ್ತು ಮಹಾಭಾರತದ ಯುದ್ಧದ ದೃಶ್ಯಗಳು ಪ್ರಮುಖವಾದವು.
ಬೊಂಬೆ ಹಬ್ಬವು ನನ್ನ ಒಂದು ಅಚ್ಚು-ಮೆಚ್ಚಿನ ಹಬ್ಬವಾಗಿತ್ತು. ಹಬ್ಬಕ್ಕೆ ಒಂದು ವಾರ ಮುಂಚಿತವಾಗಿಯೇ ರಾಗಿಯ ಪೈರು ಸಿದ್ಧಪಡಿಸಿ, ಹಬ್ಬದ ಹಿಂದಿನ ದಿನ ರಾಗಿಯ ಪೈರಿನ ಉದ್ಯಾನವನವನ್ನು ನಿರ್ಮಿಸುತ್ತಿದ್ದೆವು. ಪಟ್ಟದ ಬೊಂಬೆಗಳಿಗೆ ಸೀರೆ, ಪಂಚೆಗಳನ್ನು ನಾಜೂಕಾಗಿ ಉಡಿಸುವುದು ಎಂದರೆ ನಮ್ಮ ಅಮ್ಮನಿಗೆ ಎಲ್ಲಿಲ್ಲದ ಆಸಕ್ತಿ. ತಗಡಿನ ಡಬ್ಬಗಳ ಮೇಲೆ ಮಣೆಗಳನ್ನು ಮೆಟ್ಟಿಲುಗಳಂತೆ ಜೋಡಿಸಿ, ಅದರ ಮೇಲೆ ಬಿಳಿಯ ಹೊಸವಸ್ತ್ರವನ್ನು ಹೊದಿಸಿ, ಬೊಂಬೆಗಳನ್ನು ದೃಶ್ಯಗಳನುಸಾರ ಕೂಡಿಸುವುದರೊಳಗೆ ಮುಂಜಾವು ಹರಿದಿರುತ್ತಿತ್ತು. ಮನೆಯಲ್ಲಿ ಸುಮಾರು ಹತ್ತು ಜೊತೆ ಪಟ್ಟದ ಬೊಂಬೆಗಳಿದ್ದರೂ, ನಾನು ತಿರುಪತಿಗೆ ಹೋದಾಗಲೆಲ್ಲ "ಒಂದು ಜೊತೆ ಪಟ್ಟದ ಬೊಂಬೆ ತಗೊಂಡು ಬಾರೋ.." ಎಂದು ಅಮ್ಮ ಹೇಳುತ್ತಾರೆ.
ನಾನು ಮತ್ತು ನನ್ನ ಅಕ್ಕ, ಸಂಜೆಯ ವೇಳೆಗೆ ಒಂದು ಸಣ್ಣ ಡಬ್ಬ ಹವಣಿಸಿಕೊಂಡು, ಸ್ನೇಹಿತರೊಂದಿಗೆ ಅಕ್ಕ-ಪಕ್ಕದ ಮನೆಗಳಿಗೆ ಹೋಗಿ "ರೀ.. ನಿಮ್ಮ ಮನೇಲಿ ಬೊಂಬೆ ಕೂಡ್ಸಿದ್ದೀರಾ.." ಎಂದು ಕೂಗುತ್ತಿದ್ದ ಮಜವನ್ನು ವರ್ಣಿಸಲು ಅಸಾಧ್ಯ. ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು, ಕಜ್ಜಾಯ ಹೀಗೆ ಬಗೆಬಗೆಯ ತಿಂಡಿಗಳನ್ನು ತಯಾರಿಸಿ, ಬೊಂಬೆ ನೋಡಲೆಂದು ಬಂದ ಮಕ್ಕಳಿಗೆ ಬೊಂಬೆ ಬಾಗಿಣ ಕೊಡುವುದು ಒಂದು ವಾಡಿಕೆಯಾಗಿತ್ತು. ಈ ರೀತಿ ಹಲವು ಮನೆಗಳಿಗೆ ಹೋಗಿ ಸಂಗ್ರಹಿಸಿದ ವಿಧವಿಧವಾದ ಬಾಗಿಣವನ್ನು ಒಟ್ಟಿಗೆ ಕೂತು ತಿನ್ನುತ್ತಿದ್ದೆವು.
ಈಗ್ಗೆ, ಸುಮಾರು ಒಂದು ದಶಕದಿಂದ ಈ ಹಬ್ಬಗಳು ಕಣ್ಮರೆಯಾಗುತ್ತಿವೆ. ಬೊಂಬೆಗಳ ಹಬ್ಬವೇ ಅಪರೂಪ ಎಂದರೆ, ಮಕ್ಕಳು ಬೊಂಬೆ ಬಾಗಿಣಕ್ಕೆ ಬರುವ ಮಾತು ದೂರವೇ ಉಳಿಯಿತು. ಆದರೂ, ಕೆಲವೊಂದು ಸಂಪ್ರದಾಯಿಕ ಕುಟುಂಬಗಳು ಈ ಹಬ್ಬವನ್ನು ಬಿಡದೇ ನಡೆಸಿಕೊಂಡು ಬಂದಿರುವುದು ಶ್ಲಾಘನೀಯ. ದಿನದ ಮೂರನೇ ಒಂದು ಭಾಗ ದೂರದರ್ಶನಕ್ಕೋ ಅಥವಾ ಗಣಕಯಂತ್ರಕ್ಕೋ ಮಾರುಹೋಗುತ್ತಿರುವ ಮಕ್ಕಳಿಗೆ ಈ ಹಬ್ಬಗಳ ಬಗ್ಗೆ ಅರಿವು ಮೂಡಿಸುವುದು ಅಗತ್ಯ ಎನಿಸುತ್ತದೆ. ಈ ರೀತಿಯ ವಾಡಿಕೆಗಳು, ಸಂಪ್ರದಾಯಗಳು ಎಲ್ಲಾದರೂ ಕಂಡುಬಂದಲ್ಲಿ, ಮಕ್ಕಳನ್ನು ಕರೆದೊಯ್ಯುವುದರಿಂದಲಾದರೂ ನಮ್ಮ ಮುಂದಿನ ಪೀಳಿಗೆಗೆ ಈ ಹಬ್ಬಗಳ ಬಗ್ಗೆ ಅರಿವು ಮೂಡುವುದೇನೋ! ಎಂದು ಆಶಿಸುತ್ತೇನೆ.
ನನ್ನ ಮನದಲ್ಲಿ ಮೂಡಿದ ಆಲೋಚನೆಗಳನ್ನು ಹಂಚಿಕೊಳ್ಳುವ ಅವಕಾಶ ಮಾಡಿಕೊಟ್ಟಿರುವ ಕಹಳೆ ತಂಡಕ್ಕೆ ಧನ್ಯವಾದಗಳು.
ಲೇಖಕರ ಕಿರುಪರಿಚಯ | |
ಶ್ರೀ ನಟೇಶ್ ಲಕ್ಷ್ಮಣ್ ರಾವ್ ಮೂಲತಃ ಬೆಂಗಳೂರಿನವರಾದ ಇವರು ಓದಿ, ಬೆಳೆದದ್ದೂ ಸಹ ಬೆಂಗಳೂರಿನಲ್ಲಿಯೇ. ವೃತ್ತಿಯಲ್ಲಿ ಇಂಜಿನಿಯರ್ ಅಗಿರುವ ಇವರು ತಮ್ಮನ್ನು ತಾವು ಒಬ್ಬ 'ಸಾಮಾನ್ಯ ಕನ್ನಡಿಗ' ಎಂದು ಗುರುತಿಸಿಕೊಳ್ಳಲು ಇಚ್ಛಿಸುತ್ತಾರೆ. ತಮ್ಮ ಮನದಾಳದಿಂದ ಮೂಡಿಬರುವ ಭಾವನೆಗಳಿಗೆ ಪದಗಳಲ್ಲಿ ಜೀವ ತುಂಬಿ, ನಾಜೂಕಾಗಿ ಪೋಣಿಸಿ ಅತ್ಯಂತ ಸುಂದರ ಬರಹಗಳನ್ನು ರಚಿಸುವಲ್ಲಿ ಇವರು ನಿಸ್ಸೀಮರು. Blog | Facebook | Twitter |
ಬೊಂಬೆ ಹಬ್ಬದ ಬಗ್ಗೆ ಬಹಳ ಚೆನ್ನಾಗಿ ವಿವರಿಸಿದ್ದಿದೀರಿ. ಛಾಯಾಚಿತ್ರಗಳು ಕಣ್ಣಿಗೆ ಕಟ್ಟುವಂತಿವೆ.
ಪ್ರತ್ಯುತ್ತರಅಳಿಸಿದನ್ಯವಾದಗಳು
ಪ್ರತ್ಯುತ್ತರಅಳಿಸಿ