ಶುಕ್ರವಾರ, ನವೆಂಬರ್ 16, 2012

ಕನ್ನಡ ನಾಡಿನ ಸ್ವಾಭಿಮಾನಿ ಕಿಡಿ - ಸಂಗೊಳ್ಳಿ ರಾಯಣ್ಣ

ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರನ್ನು ಬ್ರಿಟೀಷ್ ಸರ್ಕಾರ ಗಲ್ಲಿಗೇರಿಸಿದ್ದು 1931 ರಲ್ಲಿ; ಇದಕ್ಕೆ ಸರಿಯಾಗಿ ನೂರು ವರ್ಷಗಳ ಹಿಂದೆಯೇ ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿತ್ತು. "ಸತ್ತ ನಂತರ ಇದೇ ನಾಡಿನಲ್ಲಿ ಹುಟ್ಟಿ, ಬ್ರಿಟೀಷರ ವಿರುದ್ಧ ಹೊರಾಡುವುದು ನನ್ನ ಅಂತಿಮ ಆಸೆ.." ಎಂದು ರಾಯಣ್ಣ ಹೇಳಿಕೊಂಡಿದ್ದ. ರಾಯಣ್ಣ ಬ್ರಿಟೀಷರ ವಿರುದ್ದ ಮೊದಲು ಬಂಡೆದ್ದ ಕಿತ್ತೂರು ಹೋರಾಟಗಾರರ ಪ್ರತಿನಿಧಿ. ಸ್ವಾಭಿಮಾನದ, ನಾಡಪ್ರೇಮದ ಹೋರಾಟಕ್ಕೆ ರಾಯಣ್ಣನಿಗೆ ರಾಯಣ್ಣನೇ ಸಾಟಿ. ಆರು ಕೋಟಿ ಕನ್ನಡಿಗರು ಹೆಮ್ಮಯಿಂದ ಅಭಿಮಾನ ಪಡುವ ಆದರ್ಶ ನಾಯಕ ಸಂಗೊಳ್ಳಿ ರಾಯಣ್ಣ.

ರಾಯಣ್ಣ ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನಲ್ಲಿರುವ ಗಣೇಶವಾಡಿ ಗ್ರಾಮದಲ್ಲಿ. ಇದು ರಾಯಣ್ಣನ ತಾಯಿ ಕೆಂಚವ್ವನ ತವರೂರು. ಸಂಗೊಳ್ಳಿಯ ಓಲೇಕಾರ ದೊಡ್ಡ ಭರಮಪ್ಪ ರಾಯಣ್ಣನ ತಂದೆ, ಈತನ ತಾತ ರಾಘಪ್ಪ ವೀರಪ್ಪ ದೇಸಾಯಿ, 'ಸಾವಿರ ಒಂಟೆ ಸರದಾರ' ಎಂದೇ ಬಿರುದಾಂಕಿತರಾದವರು. ಸಹಜವಾಗಿಯೇ ರಾಯಣ್ಣನಲ್ಲೂ ಶೌರ್ಯ, ಸಾಹಸೀ ಪ್ರವೃತ್ತಿ ರಕ್ತಗತವಾಗಿಯೇ ಹರಿದು ಬಂದವು.

ಬ್ರಿಟೀಷ್ ಸಾಮ್ರಾಜ್ಯಶಾಹಿ ವಿರುದ್ಧ ದಂಗೆ ಎದ್ದಿದ ಕಿತ್ತೂರಿನಲ್ಲಿ 'ಬ್ರಿಟೀಷರೆ.. ನಾಡು ಬಿಟ್ಟು ತೊಲಗಿ' ಎಂಬ ರಣ ಘೋಷಣೆ ಅನುರಣವ ತುಂಬಿಕೊಂಡಿತ್ತು. ಚೆನ್ನಮ್ಮನ ಬೆನ್ನ ಹಿಂದೆ ಕೆಚ್ಚೆದೆಯ ಕಲಿಗಳ ಪಡೆಯೇ ಸಮರಕ್ಕೆ ಸಜ್ಜುಗೊಂಡಿತ್ತು. ಆಗಿನ್ನೂ ರಾಯಣ್ಣನಿಗೆ 29 ರ ಹರೆಯ. ಮನೆಗೊಬ್ಬನಂತೆ ಐದು ಸಹಸ್ರಕ್ಕೂ ಮಿಗಿಲಾದ ಕೆಚ್ಚೆದೆಯ ಕಲಿಗಳು ಸಮರ ಸೇನೆಯಲ್ಲಿ ಸಂಗಮಗೊಂಡು ಕತ್ತಿ ಹಿಡಿಯುತ್ತಿದ್ದರು. ಈ ವೀರಸೈನಿಕರಲ್ಲಿ ರಾಯಣ್ಣನೂ ಒಬ್ಬ. ಈತ ಯೋಧ ಮಾತ್ರ ಆಗಿರದೆ ರೈತನೂ ಆಗಿದ್ದ; ಸಂಗೊಳ್ಳಿ ಎಂಬ ಗ್ರಾಮದ ಕಾವಲುಗಾರನೂ ಹೌದು.

ಕಿತ್ತೂರು ಶ್ರೀಮಂತವಾಗಿತ್ತು. ಇಲ್ಲಿ ‍ದವಸಧಾನ್ಯ ಸೇರಿದಂತೆ ಪ್ರತಿಯೊಂದೂ ಸಮೃದ್ಧವಾಗಿದ್ದವು. ಸಹಜವಾಗಿಯೇ ಬ್ರಿಟೀಷರ ಕಣ್ಣು ಇತ್ತ ನೆಟ್ಟಿತ್ತು. ಕಪ್ಪ ಕೊಡಿರೆಂಬ ಆಜ್ಞೆಯೂ ಹೊರಡಿಸಿತ್ತು. ಪ್ರತಿಯಾಗಿ ಚೆನ್ನಮ್ಮ ಹೆಬ್ಬುಲಿಯಂತೆ ಆರ್ಭಟಿಸಿ ಸಮರದ ಎಚ್ಚರಿಕೆ ಗಂಟೆ ಬಾರಿಸಿದಳು. ಬ್ರಿಟೀಷ್ ಅಧಿಕಾರಿ ದಂಡಿನೊಂದಿಗೆ ಕಿತ್ತೊರಿನ ಮೇಲೆ ದಾಳಿಯಿಟ್ಟ ಪರಂಗಿಗಳ ದೌರ್ಜನ್ಯಕ್ಕೆ ಸೆಡ್ಡು ಹೊಡೆದು ಸಮರ ನಡೆಸಿದ ಕಿತ್ತೊರಿನ ಕಲಿ ರಾಯಣ್ಣ, ಬ್ರಿಟೀಷ್ ಅಧಿಕಾರಿಯನ್ನು ಬಲಿತೆಗೆದುಕೊಂಡು ಸಾಹಸಿಯಾಗಿ ಹೊರಹೊಮ್ಮಿದ. ವಿಜಯದ ಪತಾಕೆ ಹಾರಿಸಿದ.

ಆದರೆ ಬ್ರಿಟೀಷರು ಇಷ್ಟಕ್ಕೆ ಸುಮ್ಮನಾಗಲಿಲ್ಲ,  ಮತ್ತೊಮ್ಮೆ ದಂಡೆತ್ತಿ ಬಂದರು. ತಮ್ಮ ಕುತಂತ್ರ ನೀತಿಯಿಂದಾಗಿ, ನಾಡದ್ರೋಹಿಗಳ ಸಹಾಯದಿಂದಾಗಿ ಜಯ ಸಾಧಿಸಿ ಸೈನಿಕರನ್ನೆಲ್ಲಾ ಬಂಧಿಸಿ ಧಾರವಾಡದ ಸೆರೆಮೆನೆಗೆ ತಳ್ಳಿದರು. ಆಗ 1826 ರ  ಸಮಯ, ಕಿತ್ತೂರು ರಾಣಿ ಚೆನ್ನಮ್ಮ ಬೈಲಹೊಂಗಲದಲ್ಲಿ ಸೆರೆಯಾದಳು. ಬ್ರಿಟೀಷರು ಬಂಧಿತ ಕಿತ್ತೂರಿನ ಸೈನಿಕರನ್ನೆಲ್ಲ ಸಾರ್ವತ್ರಿಕ ಕ್ಷಮೆ ನೀಡಿ ಬಂಧಮುಕ್ತಗೊಳಿಸಿ ಎಚ್ಚರಿಕೆಯ ಸಂದೇಶವನ್ನು ನೀಡಿದ್ದರು. ಸ್ವಗ್ರಾಮಕ್ಕೆ ಮರಳಿದ ರಾಯಣ್ಣ ನಾಡಿನ ಜನರ ಮೇಲೆ ಪರಂಗಿಗಳ ದೌರ್ಜನ್ಯ ಕಂಡು ಕುಂದುಹೋಗುತ್ತಿದ್ದ. ಬಡಜನರ ಮೇಲೆ ಭೂಕಂದಾಯ ಹೇರಿ ಅಮಾನವೀಯವಾಗಿ ವಸೂಲಿ ಮಾಡುತ್ತಿದ್ದ ಬ್ರಿಟೀಷರ ದಬ್ಬಾಳಿಕೆ, ಭೂಕಬಳಿಕೆ, ಜಮೀನ್ದಾರಿಕೆಯ ಅಮಲು, ಜನತೆಯನ್ನು ಹಣಿಯಲು ರೂಪಿಸುತ್ತಿದ್ದ ಷಡ್ಯಂತ್ರಗಳು ರಾಯಣ್ಣನೊಳಗಿದ್ದ ಹೋರಾಟಗಾರ, ಕ್ರಾಂತಿಕಾರಿಯನ್ನು ಬಡಿದೆಬ್ಬಿಸಿ ಹೋರಾಟದ ಅಖಾಡಕ್ಕೆ ಇಳಿಯಲು ಪ್ರೇರೇಪಿಸಿದವು.

ಬೈಲಹೊಂಗಲದಲ್ಲಿ ಸೆರೆಯಾಗಿದ್ದ ರಾಣಿ ಚೆನ್ನಮ್ಮನನ್ನು ಸಂತನಂತೆ ವೇಷ ಮರೆಸಿಕೊಂಡು ಹೋಗಿ ಮಾತುಕತೆ ನಡೆಸಿದ ಮೇಲಂತೂ ನಾಡಿನ ದುರ್ಗತಿ, ಪರಂಗಿಗಳ ದಬ್ಬಾಳಿಕೆ ಮತ್ತು ಚೆನ್ನಮ್ಮನ ಕೆಚ್ಚುತನದ ಅರಿವಾಗಿ ರಾಯಣ್ಣನಲ್ಲಿ ಹೋರಾಡುವ ಕಿಚ್ಚು ಹತ್ತಿಕೊಂಡಿತು. ಕಿತ್ತೂರನ್ನು  ಆವರಿಸಿಕೊಂಡಿದ್ದ ಸಾಮ್ರಜ್ಯಶಾಹಿಗಳನ್ನು ಅಳಿಸಿ, ಜನಪರ ಆಡಳಿತ ಸ್ಥಾಪಿಸಲು ಪಣ ತೊಟ್ಟು ಕಂಕಣಬದ್ಧನಾದ. ರಾಣಿ ಚೆನ್ನಮನನ್ನು ಬಂಧಮುಕ್ತಗೊಳಿಸಿ ಸ್ವತಂತ್ರ ಸ್ವಾಭಿಮಾನದ ಪತಾಕೆ ಹಾರಿಸಲು ರಣ ಕಹಳೆ ಮೊಳಗಿಸಿದ. ಸರ್ಕಾರಿ ಕಛೇರಿಗೆ ಬೆಂಕಿ ಹಚ್ಚುವ ಮೂಲಕ ಹೋರಾಟದ ಮೊದಲ ಕಿಡಿ ಹಾರಿಸಿದ ರಾಯಣ್ಣನೊಂದಿಗೆ ಆಗ ನೂರೇ ನೂರು ಜನರ ಸ್ವಾಭಿಮಾನಿ ಪಡೆಯಿತ್ತು. ಬರಬರುತ್ತಾ ರಾಯಣ್ಣನ ಪಡೆ ದೊಡ್ಡದಾಗುತ್ತಾ ಹೋಯಿತು. ಬಡವರು, ನೊಂದವರು, ಸ್ವಾಭಿಮಾನಿಗಳು, ಸ್ವಾತಂತ್ರ್ಯ ಅಪೇಕ್ಷಿಗಳು ರಾಯಣ್ಣನ ಜೊತೆಗೂಡಿದರು.

ಸಾಮಾನ್ಯ ಜನರಲ್ಲೂ ರಾಯಣ್ಣ ಸ್ವಾತಂತ್ರ್ಯದ ಕಿಚ್ಚು ಹಚ್ಚಿಸಿದ, ಸ್ವಾಭಿಮಾನದ ದೀಪ ಬೆಳಗಿಸಿದ, ಶಸ್ತ್ರ ಸಜ್ಜಿತರನ್ನಾಗಿಸಿ ಹೋರಾಟದ ರಣಭೂಮಿಗೆ ಧುಮುಕಿದ ಅಪ್ಪಟ ನಾಡಪ್ರೇಮಿ ರಾಯಣ್ಣ. ಬೆಳಗಾವಿ, ಧಾರವಾಡ, ಉತ್ತರಕನ್ನಡ ಜಿಲ್ಲೆಗಳನ್ನು ಒಳಗೊಂಡಿದ್ದ ಕಿತ್ತೊರಿನ ವಿಮುಕ್ತಿಗೆ ರಾಯಣ್ಣ ದೊಡ್ಡದೊಂದು ಸಂಘರ್ಷವನ್ನೇ ನಡೆಸಿದ. ಅಷ್ಟೇ ಅಲ್ಲ, ಬಡಜನರ, ದೀನ ದಲಿತರ ಪರವಾಗಿ ನಿಂತು, ಕುಟಿಲ ನೀತಿಗಳಿಂದ ಜನತೆಯನ್ನು ಹಿಂಸಿಸುತ್ತಿದ್ದ ಬ್ರಿಟೀಷರನ್ನು ಕಾಲ ಕಾಲಕ್ಕೆ ಸದೆಬಡಿಯುತ್ತಲೇ ಬಂದ.

ಹೋರಾಟದ ಹೆಸರಿನಲ್ಲಿ ಎಂದೂ ರಾಯಣ್ಣ ಶೋಷಣೆ ಮಾಡುವುದನ್ನು ಸಹಿಸುತ್ತಿರಲಿಲ್ಲ, ಎಂದಿಗೂ ಕೊಳ್ಳೆಹೊಡೆಯಲಿಲ್ಲ. ಸರ್ಕಾರಿ ಚಾಕರಿಯನ್ನು ಧಿಕ್ಕರಿಸಿ, ಹೋರಾಟಕ್ಕೆ ಅಣಿಯಾದ. ತನ್ನಂತೆಯೇ ವೀರ ಯುವ ಪಡೆಯನ್ನು ಹುರಿಗೊಳಿಸಿದ. ಶಿಸ್ತಿನ ಚೌಕಟ್ಟು ವಿಧಿಸಿದ. ನಾನಾ ಯುದ್ಧತಂತ್ರಗಳನ್ನು ಪರಿಚಯಿಸಿದ. ನಿಜ ಅರ್ಥದಲ್ಲಿ ಓರ್ವ ಸಮರ್ಥ ಜನನಾಯಕನಾಗಿ ರಾಯಣ್ಣ ಹೊರಹೊಮ್ಮಿದ.

ಹೋರಾಟದ ಸಂಧರ್ಭದಲ್ಲೇ ರಾಣಿ ಚೆನ್ನಮ ಅಸುನೀಗಿದಳು. ಮತ್ತದೇ ಸಂತನ ವೇಷ ತೊಟ್ಟು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಸ್ವಾತಂತ್ರ್ಯ ಪ್ರಾಪ್ತಿಯ ದೀಕ್ಷೆ ತೊಟ್ಟ ರಾಯಣ್ಣ ರಾಜನಿಷ್ಠೆ ಮಾತ್ರವಲ್ಲದೆ ಪ್ರಜಾನಿಷ್ಠನಾಗಿ, ಧ್ಯೇಯನಿಷ್ಠನಾಗಿ ಕನ್ನಡ ನಾಡಿನ ಸ್ಪೂರ್ತಿಯ ಸೆಲೆಯಾಗಿದ್ದ.

ಸಹಜವಾಗಿಯೇ ಪರಂಗಿಗಳು ರಾಯಣ್ಣನನ್ನು ಸೆದೆಬಡಿಯಲು ಮುಂದಾದರು. ಇನ್ನಿಲ್ಲದ ಹರಸಾಹಸ ನಡೆಸಿದರು. ಆದರೆ ಸಾಮಾನ್ಯ ಜನರು ಯಾರೂ ಇದಕ್ಕೆ ಬಗ್ಗದೆ ರಾಯಣ್ಣನ ಬೆನ್ನ ಹಿಂದೆ ನಿಂತು ಹೋರಾಟಕ್ಕೆ ಇಂಬು ನೀಡುತ್ತಿದ್ದರು. ಇದು ರಾಯಣ್ಣನಿಗಿದ್ದ ಜನಾನುರಾಗದ ಧ್ಯೋತಕ.

ಆದರೆ, ಕಾಲ ಕಳೆದಂತೆ ದುಷ್ಟಬುದ್ಧಿಗಳು ತಮ್ಮ ಚಾಲಾಕು ತೋರಿಸತೊಡಗಿದರು. ಪರಂಗಿಗಳ ಆಮಿಷಕ್ಕೆ ಬಲಿಯಾಗಿ ನಾಡದ್ರೋಹವೆಸಗಲು ಮುಂದಾದರು. ಹೆಜ್ಜೆಗೆ ಹೆಜ್ಜೆ ಹಾಕುವುದಾಗಿ ಹೇಳಿ ಯುದ್ಧದ ಸಂದರ್ಭದಲ್ಲಿ ಪಲಾಯನಗೈದು ರಾಯಣ್ಣನ ಬಂಧನಕ್ಕೆ ಕಾರಣಕರ್ತರಾದರು. ರಾಯಣ್ಣನೊಂದಿಗೆ ಈತನ ಧೀರ ಪಡೆಯ ವೀರರೂ ಸೆರೆಸಿಕ್ಕರು.

ಕಡೆಯ ವಿಚಾರಣೆಯ ನಾಟಕ ನೆಡೆದು 1831 ರ ಜನವರಿ 26 ರಂದು ರಾಯಣ್ಣನನ್ನು ಆತನ ಆಸೆಯಂತೆಯೇ ನಂದಗಡದಲ್ಲಿ ನೇಣಿಗೇರಿಸಲಾಯಿತು. ಇವನೊಂದಿಗೆ ಅಪಾರ ಧೀರರುಗಳೂ ನೇಣಿಗೆ ಕೊರಳೊಡ್ಡಿದರು. ಆಗಸ್ಟ್ 15 ರಾಯಣ್ಣ ಹುಟ್ಟಿದ ದಿನವಾದರೆ, ಜನವರಿ 26 ರಾಯಣ್ಣ ಗಲ್ಲಿಗೇರಿದ ದಿನ. 119 ವರ್ಷಗಳ ಬಳಿಕ ಅದೇ ದಿನದಂದು ಭಾರತ ಗಣರಾಜ್ಯವಾಯಿತು, ಬ್ರಿಟೀಷರು ಭಾರತ ಬಿಟ್ಟು ತೊಲಗಿದ್ದು ಅಗಸ್ಟ್ 15; ರಾಯಣ್ಣನ ಜನ್ಮದಿನವೂ ಅದೇ. ಇದು ನಿಜಕ್ಕೂ ಕಾಕತಾಳೀಯ!

ಸಂಗೊಳ್ಳಿ ರಾಯಣ್ಣನ ಬಲಿದಾನವಾಗಿ ಸರಿಯಾಗಿ 181 ವರ್ಷಗಳೇ ಸಂದಿವೆ. ರಾಯಣ್ಣನ ಕೆಚ್ಚೆದೆಯ ಹೋರಾಟ, ಸ್ವಾಭಿಮಾನ,  ಸಂಘಟನೆ, ಆದರ್ಶ ಇವೆಲ್ಲವೂ ಇಂದಿನ ಕನ್ನಡಿಗರಿಗೆ ಅಕ್ಷರಶಃ ಸ್ಪೂರ್ತಿದಾಯಕವಾದುವು.

|| ಜೈ ಕರ್ನಾಟಕ  || ಜೈ ಭುವನೇಶ್ವರಿ ||

ಲೇಖಕರ ಕಿರುಪರಿಚಯ
ಶ್ರೀ ಸಂದೇಶ್ ತೆಕ್ಕಟ್ಟೆ

ಇವರು ಹುಟ್ಟಿದ್ದು ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ತೆಕ್ಕಟ್ಟೆ ಎಂಬಲ್ಲಿ. ಪ್ರಸ್ತುತ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಮೇಲ್ವಿಚಾರಕರಾಗಿ ವೃತ್ತಿ ನಿರ್ವಹಿಸುತ್ತಿದ್ದಾರೆ.

ಯಕ್ಷಗಾನ ನೋಡುವುದು, ಸಂಗೀತ ಕೇಳುವುದು, ಕನ್ನಡ ಲೇಖನಗಳನ್ನು ಓದುವುದು ಹಾಗೂ ಬರೆಯುವುದು ಇವರ ಹವ್ಯಾಸಗಳು. ಅಲ್ಲದೇ, ಇವರು ಕ್ರಿಕೆಟ್ ಕ್ರೀಡೆಯ ಕಟ್ಟಾ ಅಭಿಮಾನಿ ಕೂಡ.

Blog  |  Facebook  |  Twitter

2 ಕಾಮೆಂಟ್‌ಗಳು:

  1. ಲೇಖನ ಬಹಳ ಚೆನ್ನಾಗಿ ಬಂದಿದೆ. ಎಷ್ಟೋ ವಿಷಯ ತಿಳಿದಿರಲಿಲ್ಲ. ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  2. ಶ್ರೀ ಸಂದೇಶ್ ತೆಕ್ಕಟ್ಟೆ ಇವರ ಲೇಖನದ ಹೀರೊ ಸಂಗೊಳ್ಳಿ ರಾಯಣ್ಣ ಆಗಿನಕಾಲದಲ್ಲಿ ಬ್ರಿಟೀಷರ ವಿರುದ್ದ ಹೋರಾಡಿದ ಒಬ್ಬ ಕ್ರಾಂತಿಕಾರಿ ಸ್ವಾಭಿಮಾನದ ದೇಶಭಕ್ತಿಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ ?ಇದನ್ನು ದರ್ಶನ್ ರವರ ಕ್ರಾಂತಿವೀರಸಂಗೊಳ್ಳಿ ರಾಯಣ್ಣನ ಚಿತ್ರನೋಡಿ ದೃದಪಡಿಸಿ ಕೊಳ್ಳಬಹುದು .

    ಪ್ರತ್ಯುತ್ತರಅಳಿಸಿ