ಮಂಗಳವಾರ, ನವೆಂಬರ್ 6, 2012

ಕವಿ ಮನೋವ್ಯಾಪಾರ

ಕವಿಯ ಮನೋವ್ಯಾಪಾರ ಹೀಗೇ ಎಂದು ಹೇಳಲು ಬಾರದು. ಎಲ್ಲರದೂ ಒಂದು ದಿಕ್ಕಾದರೆ ಕವಿಯದೇ ಬೇರೊಂದು ದಿಕ್ಕು. ಅದೇ ಸಾಮಾನ್ಯರಿಗೂ ಹಾಗೂ ಕವಿಹೃದಯಕ್ಕೂ ಇರುವ ವ್ಯತ್ಯಾಸ. ಒಂದೇ ಗಾಳಿ, ನೀರು, ಭೂಮಿ, ರಕ್ತದ ಬಣ್ಣವೊಂದೇ ಆದರೂ ಮನಸ್ಸಿನ ವ್ಯಾಪಾರ ಮಾತ್ರ ಬೇರೆಬೇರೆ. ಅದನ್ನು ಪ್ರತಿಭೆ ಎನ್ನುವುದೋ ಅಥವಾ ಮತ್ತೇನೆನ್ನುವುದೋ ಹೇಳಲು ಬಾರದು. ಎಲ್ಲರೂ ನೋಡುವುದು ತಮ್ಮ ಮೂಗಿನ ನೇರಕ್ಕೇ ಆದರೂ ನೋಡುಗನ ಗಮನ ಎಲ್ಲಿ ಕೇಂದ್ರೀಕೃತವಾಗಿದೆ ಎನ್ನುವುದೇ ಮುಖ್ಯ. ಕವಿ ಹೇಳುತ್ತಾನೆ:

ಯಾವಾಗಲೂ ಅಷ್ಟೇ ಗುರುವೇ!
ನಮ್ಮ ಮೂಗಿನ ನೇರಕ್ಕೇ ನಾವು ಹೆರವರನ್ನೋದುವುದು.
ತಕ ಪಕ ಕುಣಿದ ನವಿಲ ನೋಡಿ ನೋಡಿ ನಿಶ್ಚಿತ ಗಟ್ಟಿ ದನಿಯಲ್ಲಿ ಹದ್ದೇ ಎನ್ನುವುದು!!

- ಎಚ್ಚೆಸ್ವಿ, 'ಪ್ರಾಪ್ತಿ', ವೈದೇಹಿ ಮತ್ತು ಇತರ ಕವಿತೆಗಳು.

ಮನದಲ್ಲಿ ಅನೇಕಾನೇಕ ವಿಚಾರ ವಿನಿಮಯ, ಮಂಥನ ಎಲ್ಲರಲ್ಲಿಯೂ ನಡೆಯುವುದು ಸರ್ವೇಸಾಮಾನ್ಯ. ಸಾಮಾನ್ಯ ವಿಚಾರಗಳೂ ಕವಿಮನದಲ್ಲಿ ಹೆಚ್ಚು ಪ್ರಶ್ನೆಗಳ ಬಿರುಗಾಳಿ ಬೀಸಿ ಅದು ಚಂಡಮಾರುತವಾಗಿ ಮಳೆ ಧರೆಗಿಳಿಯುವಂತೆ ಭಾವನೆಗಳ ಘರ್ಷಣೆಯಿಂದ ಕವಿತೆಗಳ ಸೃಷ್ಟಿ ಕವಿ ಹೃದಯದಲ್ಲಿ ಆಗುವುದು. ಅದೇ ಜನ ಸಾಮಾನ್ಯರಲ್ಲಿ ಕಾಡು ಹರಟೆಗೆ ದಾರಿ ಮಾಡಿಕೊಡುತ್ತದೆ ಅಷ್ಟೇ! ಕವಿ ತನ್ನೊಳಗಿನ ಆ ಮನೋವ್ಯಾಪಾರವನ್ನೇ ಪ್ರಶ್ನಿಸಿಕೊಳ್ಳುತ್ತಾನೆ, ಆದರೆ ಜನಸಾಮಾನ್ಯರು ಹಾಗೆ ಮಾಡಿಯಾರೇ?

ಹೇಗೆ ಬರುವುದೀ ಮನಕೆ
ಒಂದು ವಿಚಾರ ಕಲ್ಪನೆ ಪ್ರೇರಣೆ?
ಯಾರು ಕಲಿಸುವರು ಅದನು-ಅದಕ್ಕೆ
ಕಾರಣ ನ್ಯಾಯ ಏನಿದೆ?


ಕವಿ ಮುಂದೆ ಅದನ್ನೇ ಹೇಳುತ್ತಾ...

ಕಪಿಯೋ ಕುದುರೆಯೋ ಜಿಂಕೆಯೋ ಮನದೊಳು
ನುಗ್ಗುವ ಅತಿಥಿ ಅದಾರೋ!
ಬಂತೋ ಒಳಗೆ ಅದೇ ಸಾರಥಿ
ಎಲ್ಲಿಗೊಯ್ಯುವುದೋ ಏನೋ?

- ಎಲ್. ಎಸ್. ಎಲ್., 'ಹೇಗೆ ಬರುವುದೀ ಮನಕೆ?', ಸಂವೇದನೆ.

ಪಕ್ಕದ ಮನೆಯಲ್ಲೋ ಅಥವಾ ಇನ್ನೆಲ್ಲೋ ಯಾರಾದಾರೂ ಅಳುವ ಸದ್ದು ನಮ್ಮ ಕಿವಿಗೆ ಬಿದ್ದರೆ ತುಂಬಾ ಕಿರಿಕಿರಿಯಾಗುವುದು ಮನಕ್ಕೆ. ಅದಕ್ಕೆ ಹೇಗೆ ಸ್ಪಂದಿಸಬೇಕು ಎಂದು ತಿಳಿಯಲಾರದೆ ಅಲ್ಲಿಂದ ತಪ್ಪಿಸಿಕೊಂಡು ಹೋಗುವುದಕ್ಕೆ ಮೊದಲ ಆದ್ಯತೆ, ಮೊದಲ ಮಂತ್ರ; ಅದಕ್ಕೆ ಹೂಡುವೆವು ಕಾರ್ಯತಂತ್ರ. ಆದರೆ ಕವಿಗೆ ಅದೇ ಒಳಗಿನ ಪ್ರೇರಣೆ ಒಂದು ಕವಿತೆಗೆ! ಕವಿಯ ಹೃದಯ ನೋವೋ-ನಲಿವೋ ಎಲ್ಲಕ್ಕೂ ಸ್ಪಂದಿಸುವುದು ವಿಶೇಷವಾಗಿ. ಹಾಗೂ, ಅದಕ್ಕೆ ಸಂವೇದಿಯಾಗಿ ಮನವು ತೊಳಲಾಡಿ ಭಾವನೆಯೇ ಹೊರಹೊಮ್ಮಿ ಕವಿತೆಯಾಗಿ ಹೊರಬರುವುದು ಒಂದು ವಿಶೇಷ ಪ್ರಕ್ರಿಯೆ. ಆದರೆ ಜನಸಾಮಾನ್ಯರ ಮನೋವ್ಯಾಪಾರ ಇಂತಹ ಸನ್ನಿವೇಶಗಳಲ್ಲಿ ಹೀಗೆಯೇ ಎಂದು ಹೇಳಿಬಿಡಬಹುದು - ಒಂದೋ ಅಲ್ಲಿಂದ ಕಾಲುಕೀಳುವುದು, ಇಲ್ಲ ಹೆಂಗರುಳುಳ್ಳವರು ಕೊಂಚ ಸಮಾಧಾನದ ಮಾತುಗಳನ್ನಾಡಿ ಹೊರಡಬಹುದು. ಇವೆಲ್ಲಾ ಸಾಮಾನ್ಯರ ಗುಣಲಕ್ಷಣಗಳೇ ಆದರೆ ಕವಿಯ ಮನಸ್ಥಿತಿ ಆ ಕ್ಷಣದಲ್ಲಿ ಜನಸಾಮಾನ್ಯರಂತೆ ವರ್ತಿಸಿದರೂ ಆಂತರ್ಯದಲ್ಲಿ ಆಗುವ ಪ್ರಕ್ರಿಯೆಯೇ ಬೇರೆ ರೀತಿಯದು. ಕವಿಯ ಕವಿತೆಗಳ ಒಳಹೊಕ್ಕು ನೋಡಿದಾಗ ಅವರ ಮನೋವ್ಯಾಪಾರದ ವ್ಯಾಪ್ತಿಯ ಅರಿವಾಗುತ್ತದೆ.

ಒಬ್ಬ ಹುಡುಗ ತನ್ನ ಜೀವನ ಸಂಗಾತಿಯನ್ನು ಹುಡುಕಲು ತನ್ನ ಮನದಲ್ಲಿ ಮನದನ್ನೆಯ ಬಗ್ಗೆ ಅನೇಕಾನೇಕ ಲೆಕ್ಕಾಚಾರಗಳನ್ನು ಹಾಕಿಕೊಂಡಿರುತ್ತಾನೆ. ಹತ್ತು-ಹಲವು ಹುಡುಗಿಯರ ದರ್ಶನ ಮಾಡಿದ ನಂತರವೂ ತನ್ನ ಮನದಲ್ಲಿ ಭಾವನೆಗಳು ಗರಿಗೆದರಲಿಲ್ಲವೆಂದರೆ ಆ ಹುಡುಗಿ ತನ್ನ ಜೀವನ ಸಂಗಾತಿಯಾಗಲಾರಳು ಎಂಬ ನಿರ್ಧಾರಕ್ಕೆ ಅವನು ಬಂದಿರುತ್ತಾನೆ. ಮನಕ್ಕೊಪ್ಪಿದರೆ ಮನದನ್ನೆಯನ್ನಾಗಿ ಸ್ವೀಕರಿಸಿ ದಾಂಪತ್ಯ ಜೀವನ ಸಡೆಸುತ್ತಾನೆ. ಪ್ರಥಮ ನೋಟದಲ್ಲಿ ಪ್ರೀತಿಯು ಅಂಕುರಿಸುತ್ತೆ ಅನ್ನುವ ನಂಬಿಕೆ ಕೆಲವರದು; ಅದು ಎಷ್ಟು ನಿಜವೋ? ಅಥವಾ ಸುಳ್ಳೋ? ತಿಳಿದಿಲ್ಲ. ಆದರೆ ಕವಿಯ ಮನೋವ್ಯಾಪಾರ ಬೇರೆಯದೇ ರೀತಿಯಲ್ಲಿ ವ್ಯವಹರಿಸುತ್ತದೆ. ಕವಿಯು ತನ್ನ ಮನದನ್ನೆಯ ಪ್ರಥಮ ನೋಟದಲ್ಲಿ ಆದ ಮನೋಚಿಂತನೆಯನ್ನು ಹೀಗೆ ಚಿತ್ರಿಸಿದ್ದಾನೆ:

ಅಂದು ತನಕ ಬಂಧಿಸಿದ್ದ
ನನ್ನ ಮನದ ಬಾಗಿಲು,
ಒಂದೇ ಸಲಕೆ ತೆರೆದುಹೋಯ್ತು
ಅವಳು ಒಳಗೆ ಹೊಕ್ಕಳು!!

ಎಷ್ಟು ಮಂದಿ ಕನ್ಯೆಯರನು
ಹಿಂದೆ ನೋಡಲಿಲ್ಲವೊ,
ಇಷ್ಟು ಬೇಗನಿಲ್ಲಿ ಮನಸು
ಹಿತವನೆಂತು ಪಡೆಯಿತು?

- ಪ್ರೊ. ತಿ.ನಂ.ಶ್ರೀ., 'ಪ್ರಥಮ ದರ್ಶನ', ಒಲುಮೆ.

ಮಿನುಗುವ ನಕ್ಷತ್ರ, ನಗು, ಚೆಲುವೆ, ಮಳೆ, ತೊರೆ, ನದಿ, ತಂಗಾಳಿ, ಬಿಸಿಲು, ನೋವು, ನಲಿವು, ಕಷ್ಟ, ನಷ್ಟ, ಚಿತ್ರ, ಶಿಲ್ಪ... ಇತ್ಯಾದಿ ಎಲ್ಲವೂ ಜೀವನ ವ್ಯಾಪಾರದ ವಸ್ತುಗಳೇ. ಸಾಮಾನ್ಯ ಜನರ ಮನೋವ್ಯಾಪಾರ ಒಂದು ರೀತಿಯದ್ದಾದರೆ ಕವಿಯ ಮನೋವ್ಯಾಪಾರವೇ ಒಂದು ವಿಭಿನ್ನ ರೀತಿ.

ಹೀಗೆ ಒಮ್ಮೆ ಚಿತ್ರಕಾರನ ವರ್ಣಚಿತ್ರ ಪ್ರದರ್ಶನ ನೋಡಲು ಹೋಗಿದ್ದೆ, ಅವರ ಕೃತಿಗಳೋ ಅದ್ಭುತ. ಅವು ಎಷ್ಟು ಅರ್ಥವಾಯಿತೋ ನನ್ನ ಮನಕ್ಕೆ ನಾನರಿಯೇ! ಜನ ಸಾಮಾನ್ಯರ ಸ್ಥಿತಿಯೇ ಹಾಗೆ. ಅದೊಂದು ಅದ್ಭುತ ವರ್ಣಚಿತ್ರ, ಬರೆದವನು ಪ್ರಖ್ಯಾತ ಕಲಾವಿದ ಲಿಯನಾರ್ಡೋ ಡ. ವಿಂಚಿ. ಸ್ತ್ರೀಯೋರ್ವಳು ಕುರಿಮರಿಯನ್ನು ಎದೆಗೊತ್ತಿ ಹಿಡಿದು ಮತ್ತೆಲ್ಲೋ ನೋಡುತ್ತಿರುವ ವರ್ಣಚಿತ್ರವದು. ನಮ್ಮಂತಹ ಸಾಮಾನ್ಯರಿಗೆ ಅದು ಬಣ್ಣಗಳನ್ನು ತುಂಬಿದ ಒಂದು ಚಿತ್ರವಾದರೆ, ಕವಿಗೆ ಅದೇ ಒಂದು ಕಾವ್ಯದ ವಸ್ತುವಾಗುತ್ತದೆ. ಕವಿ ಅದನ್ನು ಹೀಗೆ ಹೇಳುತ್ತಾನೆ:

ನೋಡುತ್ತಿದ್ದೇನೆ ಹೆಣ್ಣೇ ಕಣ್ಣಲ್ಲಿ ಕಣ್ಣಿಟ್ಟು ನಿನ್ನೇ
ಎನ್ನುವಂತೆ ನಿನ್ನ ಹೊರತು ಜಗತ್ತೇ ಒಂದು ಸೊನ್ನೆ,
ನೀನೂ ಅಷ್ಟೆ ಎಷ್ಟು ಹಚ್ಚಿಕೊಂಡು ನೋಡುತ್ತಿದ್ದೀ ನೋಡುತ್ತಿರೋದ
ನ್ನೆ..
- ಎಚ್ಚೆಸ್ವಿ

ಕವಿಯ ಮನಸ್ಸು ಹೀಗೇ ಎನ್ನಲು ಬಾರದು. ಮನೋವ್ಯಾಪಾರ ಎಲ್ಲರಲ್ಲಿ ನಡೆದರೂ, ಕವಿ/ಕಲಾವಿದರಲ್ಲಿ ನಡೆಯುವ ಮನೋವ್ಯಾಪಾರ ಅನನ್ಯವಾದುದು. ಅದನ್ನೇ 'ರವಿ ಕಾಣದ್ದನ್ನು ಕವಿ ಕಂಡ' ಎನ್ನುವುದು. ಅಂತಹ ಅಂತಃದೃಷ್ಟಿ ನಮ್ಮಲ್ಲಿಯೂ ಬರಲಿ, ನಮ್ಮಲ್ಲಿ ನಡೆಯುವ ಮನೋವ್ಯಾಪಾರವೂ ಅನನ್ಯವಾಗಲಿ ಎಂಬ ಆಶಯದೊಂದಿಗೆ ಕನ್ನಡ ರಾಜ್ಯೋತ್ಸವವನ್ನು ಒಂದು ವಿಭಿನ್ನ ದೃಷ್ಟಿಕೋನದಿಂದ ಆಚರಿಸೋಣ.

- ಕನ್ನಡ ರಾಜ್ಯೋತ್ಸವದ ಶುಭಾಶಯಗಳು -

ಲೇಖಕರ ಕಿರುಪರಿಚಯ
ಶ್ರೀ ನಾಗೇಂದ್ರ ಕುಮಾರ್ ಕೆ. ಎಸ್.

ಮೂಲತಃ ಗೌರೀಬಿದನೂರಿನವರಾದ ಇವರು, ಸದ್ಯಕ್ಕೆ ಬೆಂಗಳೂರಿನ ಆಟೋಮೊಬೈಲ್ ಕಂಪನಿಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕನ್ನಡಿಗ ಎಂದು ಹೇಳಿಕೊಳ್ಳಲು ಹೆಮ್ಮೆಪಡುವ ನಾಗೇಂದ್ರ ಅವರಿಗೆ ಕನ್ನಡ ಭಾಷೆಯ ಬಗ್ಗೆ ಅಪಾರ ಅಭಿಮಾನವಿದೆ.

ಓದಿದ್ದು ಇಂಜಿನಿಯರಿಂಗ್ ಆದರೂ ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಸ್ವಪ್ರೇರಣೆಯಿಂದ ಅಭ್ಯಾಸ ಮಾಡಿದ್ದಾರೆ. ಕಥೆ, ಕವನ ಹಾಗೂ ಲೇಖನಗಳನ್ನು ಬರೆಯುವ ಹವ್ಯಾಸ ಹೊಂದಿದ್ದು, ತಮ್ಮ ಕವಿತೆಗಳ ಸಂಗ್ರಹ ಪುಸ್ತಕವೊಂದನ್ನು ತರುವ ಕನಸು ಹೊತ್ತಿದ್ದಾರೆ.

ಕನ್ನಡದ ಎಲ್ಲಾ ಕವಿಗಳನ್ನೂ ಇಷ್ಟಪಡುವ ಇವರು, ಮನಸ್ಸಿನ ಭಾವನೆಗಳನ್ನು ಹೊರಹಾಕಲು ಅವರದೇ ಕನ್ನಡದ ಬ್ಲಾಗ್ ನಲ್ಲಿ ಬರೆಯುತ್ತಿರುತ್ತಾರೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ