ಶನಿವಾರ, ನವೆಂಬರ್ 24, 2012

ಮಾತಿನಿಂ ಸರ್ವಸಂಪದವು

ಪ್ರಾಣಿ ಜಗತ್ತಿನಿಂದ ತಾನು ಪ್ರತ್ಯೇಕ ಎಂದು ತೋರಿಸುವ ಒಂದು ಪ್ರಮುಖ ಮನುಷ್ಯಲಕ್ಷಣವೆಂದರೆ "ಮಾತು". ತನ್ನ ಮುಪ್ಪೊದಗದ, ಹರಿತವಾದ ನಾಲಿಗೆಯಿಂದ ಮನುಷ್ಯ ಶತ್ರುಗಳನ್ನು, ಮಿತ್ರರನ್ನು ಸೃಷ್ಟಿಸಿಕೊಳ್ಳುತ್ತಾನೆ. ಮಾತಿನಿಂದಲೇ ಮನೆಯನ್ನೂ ಕಟ್ಟಬಹುದು, ಮಸಣವನ್ನೂ ನಿರ್ಮಿಸಬಹುದು. ಅಂತಹ ಸಶಕ್ತವಾದ ಮಾತನ್ನು ಹೇಗೆ ತನ್ನ ವಿವೇಕ ವಿವೇಚನೆಗಳಿಂದ ಮನುಷ್ಯ ಬಳಸಬೇಕೆಂದು ನಮ್ಮ ಕನ್ನಡ ಸಾಹಿತ್ಯದ ಹಿರಿಯ ವಚನಕಾರರು, ದಾಸರು, ಕವಿಗಳು ತಮ್ಮ ಕೃತಿಗಳಲ್ಲಿ ಉದಾಹರಿಸಿದ್ದಾರೆ.

ಅಲ್ಲಮ್ಮಪ್ರಭುಗಳು "ಮಾತೆಂಬುದು ಜ್ಯೋತಿರ್ಲಿಂಗ" ವೆಂದು ಮಾತನ್ನು ಆ ಭಗವಂತನಿಗೇ ಹೋಲಿಸಿದ್ದಾರೆ. ಮಾತನ್ನು ಬಹಳ ಭಯಭಕ್ತಿ ಗೌರವಾದರಗಳಿಂದ ಆಡಬೇಕೆಂದು ತಿಳಿಸಿದ್ದಾರೆ.

ಬಸವಣ್ಣನವರು ಮನುಷ್ಯನಿಗೆ ಬೇರೆಲ್ಲ ಜಪ-ತಪಗಳಿಗಿಂತಲೂ ಮೃದುವಚನವೇ ಶ್ರೇಷ್ಠವೆಂದು ಹೀಗೆ ಅರುಹಿದ್ದಾರೆ –
"ಮೃದು ವಚನವೇ ಸಕಲ ಜಪಂಗಳಯ್ಯ
ಮೃದು ವಚನವೇ ಸಕಲ ತಪಂಗಳಯ್ಯ"

'ಮಾತೇ ಮುತ್ತು, ಮಾತೇ ಮೃತ್ಯು' ಎಂಬಂತೆ ಸ್ವರ್ಗ–ನರಕಗಳನ್ನು ನಮ್ಮ ಮಾತಿನಿದಲೇ ಸೃಷ್ಟಿಸಬಹುದೆಂದು ಹೀಗೆ ಉದಾಹರಿಸಿದ್ದಾರೆ –
"ಅಯ್ಯ ಎಂದರೆ ಸ್ವರ್ಗ / ಎಲವೊ ಎಂದರೆ ನರಕ"
"ಸತ್ಯವ ನುಡಿಯುವುದೇ ದೇವಲೋಕ / ಮಿಥ್ಯವ ನುಡಿಯುವುದೇ ಮರ್ತ್ಯಲೋಕ"
"ಹುಸಿಯ ನುಡಿಯಲು ಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ"

"ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು"

ಮಾತು ಮುತ್ತಿನ ಹಾರದಂತೆ ಸರಳ, ಸುಂದರ, ಶುಭ್ರವಾಗಿದ್ದು, ಮಾಣಿಕ್ಯ ದೀಪ್ತಿಯಂತೆ ದಾರಿದೀಪವಾಗಿದ್ದು, ಸ್ಪಟಿಕದಂತೆ ಸುಸ್ಪಷ್ಟವಾದಾಗ ಮಾತ್ರ ಭಗವಂತನು ಮೆಚ್ಚಿ ತಲೆದೂಗುತ್ತಾನೆಂದು ಬಸವಣ್ಣನವರು ನುಡಿದಿದ್ದಾರೆ.

"ಏನು ಬಂದಿರಿ ಹದುಳಿದ್ದೀರಿ ಎಂದರೆ ನಿಮ್ಮೈಸಿರಿ ಹಾರಿಹೋಹುದೇ, ಕುಳ್ಳಿರೆಂದರೆ ನೆಲ ಕುಳಿಹೋಹುದೆ?" ಎಂಬ ಬಸವಣ್ಣನವರ ಈ ಪ್ರಶ್ನೆಗಳಲ್ಲಿ ಸಾಮಾನ್ಯ ದೈನಂದಿನ ವ್ಯವಹಾರದಲ್ಲಿಯೂ ಮಾತಿನ ನಯವಿರಬೇಕೆಂಬ ಸೂಚನೆಯಿದೆ.

'ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು' ಎಂಬುದನ್ನು ಪ್ರತಿಯೊಬ್ಬರೂ ಅರಿತು 'ಮಾತಿಗಿಂತಲೂ ಕೃತಿ ಲೇಸು' ಎಂಬಂತೆ ಈ ಕೆಳಕಂಡಂತೆ ಬಾಳಬೇಕು.
"ಆಡದೇ ಮಾಡುವವನು ರೂಢಿಯೊಳಗುತ್ತಮನು
ಆಡಿ ಮಾಡುವವನು ಮಧ್ಯಮನಧಮ ತಾ
ನಾಡಿ ಮಾಡದವನು ಸರ್ವಜ್ಞ!!"

"ನಕ್ಕು ನಗಿಸುವ ನುಡಿ ಲೇಸು" ಎಂದ ಸರ್ವಜ್ಞ
"ರಸಿಕನಾಡಿದ ಮಾತು ಶಶಿಯುದಿಸಿ ಬಂದಂತೆ
ರಸಿಕನಲ್ಲದವನ ಬರಿಮಾತು ಕಿವಿಯೊಳು ಕೂರ್ದಸಿ ಬಡಿದಂತೆ ಸರ್ವಜ್ಞ!!"
ಎಂದು ರಸಿಕನ ಮಾತಿಗೂ, ಅರಸಿಕನ ನುಡಿಗೂ ವ್ಯತ್ಯಾಸವನ್ನರುಹಿದ್ದಾನೆ ಸರ್ವಜ್ಞ.

"ಮಾತು ಬಲ್ಲಾತಂಗೆ ಯಾತವು ಸುರಿದಂತೆ
ಮಾತಾಡಲರಿಯದಾತಂಗೆ ಬರಿಯಾತ
ನೇತಾಡಿದಂತೆ ಸರ್ವಜ್ಞ!!"
ಎಂದು ಮಾತಿನಲ್ಲಿ ರಸಿಕತೆಯಿರಬೇಕು, ಕೇಳುವವರಿಗಾನಂದವನ್ನುಂಟು ಮಾಡಬೇಕು, ಇಲ್ಲವಾದರೆ ಮಾತು ಕರ್ಣಕಠೊರವೆನಿಸುತ್ತದೆ. 'ಬಾಯಿ ಬಿಟ್ಟರೆ ಬಣ್ಣಗೇಡು' ಎಂಬಂತಹ ಮಾತುಗಳು 'ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು' ಎಂಬಂತಾಗುತ್ತದೆ.

"ಮಾತಿನಾ ಮಾಲೆಯೂ ತೂತಾದ ಮಡಕೆಯೂ
ಹಾತೆಯ ಹುಲ್ಲ ಸರವೆ ಇವು ನಾಲ್ಕು
ಏತಕ್ಕೂ ಬೇಡ ಸರ್ವಜ್ಞ!!"
ಎಂದು ತನ್ನ ತ್ರಿಪದಿಯ ಮೂಲಕ ಮಾತಿನಲ್ಲಿ ಅಡಕವಿರಬೇಕು, ಹುರುಳಿರಬೇಕು, ಇಲ್ಲದಿದ್ದರೆ ಮಾತು ನಿಷ್ಪ್ರಯೋಜಕವೆಂದು ಸರ್ವಜ್ಞ ಅಭಿಮತ ವ್ಯಕ್ತಪಡಿಸಿದ್ದಾರೆ.

'ಹತ್ತು ಕಟ್ಟುವಲ್ಲಿ ಒಂದು ಮುತ್ತು ಕಟ್ಟು' ಎಂಬಂತೆ 'ಮಾತು ಬಲ್ಲವನಿಗೆ ಜಗಳವಿಲ್ಲ'. ಇದನ್ನು ಅರಿಯದವರ ಮಾತು ಹೇಗೆ ಸತ್ವ ಕಳೆದುಕೊಳ್ಳುತ್ತದೆ ಎಂದು ಕೆಳಗಿನ ತ್ರಿಪದಿಯಲ್ಲಿ ಸರ್ವಜ್ಞ ಹೀಗೆ ಹೇಳಿದ್ದಾರೆ:
"ಉದ್ದುರುಟು ಮಾತಾಡಿ ಇದ್ದುದನು ಹೋಗಾಡೆ
ಉದ್ದನ ಮರದ ತುದಿಗೇರಿ ಕೈಜಾರಿ
ಬಿದ್ದು ಸತ್ತಂತೆ ಸರ್ವಜ್ಞ!!"
ಮಾತಿನಲ್ಲಿ ವಿನಯ ವಿವೇಕಗಳಿದ್ದರೆ ಸೊಗಸು, ಇಲ್ಲದಿದ್ದರೆ ಅಪಾರ ನಷ್ಟ.

"ಕುಲವ ನಾಲಿಗೆಯರುಹಿತು" ಎಂದು ಕವಿ ರಾಘವಾಂಕ ಹರಿಶ್ಚಂದ್ರ ಕಾವ್ಯದಲ್ಲಿ ಹೇಳಿದ್ದಾನೆ. ಹರಿದಾಸರು "ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ" ಎಂದು ನಾಲಿಗೆಯನ್ನು ಜರೆದಿದ್ದಾರೆ. ಎಲುಬಿಲ್ಲದ ಒಂದು ನಾಲಿಗೆ, ಒಂದು ಅಪಶಬ್ದವನ್ನಾಡಿದರೂ ಮೂವತ್ತೆರಡು ಸದೃಢ ಹಲ್ಲುಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ತಾಯಿಯೂ ಕೂಡ ತನ್ನ ಮಗುವನ್ನು "ಮಾತಿನಲಿ ಚೂಡಾಮಣಿಯಾಗು" ಎಂದು ಹಾರೈಸುತ್ತಾಳೆಂoಬುದನ್ನು ಜನಪದ ತ್ರಿಪದಿಯಲ್ಲಿ ಕಾಣಬಹುದು.

"ಬಲ್ಲೆನೆಂಬುವ ಮಾತು ಎಲ್ಲವೂ ಹುಸಿ ಕಣೋ
ಬಲ್ಲರೆ ಬಲ್ಲೆನೆನಬೇಡ ಸುಮ್ಮನಿರ
ಬಲ್ಲವನೆ ಬಲ್ಲ ಸರ್ವಜ್ಞ"
ಎಂಬ ಸರ್ವಜ್ಞನ ಮಾತಿನಂತೆ 'ಮಾತು ಬೆಳ್ಳಿ ಮೌನ ಬಂಗಾರ' ಎಂಬುದನ್ನರಿಯಬೇಕು.

ಮೃದು, ಮಧುರ ಹಿತನುಡಿಗಳನ್ನು ಆಡಬೇಕೆಂದು ಕವಿ ಚೆನ್ನವೀರ ಕಣವಿಯವರು
"ನಾವು ಆಡುವ ಮಾತು ಹೀಗಿರಲಿ ಗೆಳೆಯ - - -
ಹಸಿರು ಹುಲ್ಲು ಮಕಮಲ್ಲಿನಲ್ಲಿ ಪಾರಿಜಾತವು ಹೂವು ಸರಿಸಿದಂತೆ"
ಎಂದು ಮಾತಿನ ರೀತಿ ನೀತಿಯನ್ನು ಸೂಕ್ಷ್ಮವಾಗಿ, ಮನೋಜ್ಞವಾಗಿ ತಿಳಿಸಿದ್ದಾರೆ.

"ಮಾತಿನಿಂ ನಗೆ ನುತಿಯು, ಮಾತಿನಿಂ ಹಗೆ ಕೊಲೆಯೂ
ಮಾತಿನಿಂ ಸರ್ವಸಂಪದವು, ಲೋಕಕೆ
ಮಾತೇ ಮಾಣಿಕ್ಯ ಸರ್ವಜ್ಞ!!"
ಎಂಬಂತೆ ಮಾತನ್ನು ಹಣದಂತೆ ಲೆಕ್ಕಾಚಾರವಾಗಿ ಖರ್ಚುಮಾಡಬೇಕು. ಅನವಶ್ಯ ಮಾತುಗಳು ದುಂದುವೆಚ್ಚದಂತೆ. ಏನೂ ಪ್ರಯೋಜನವಿಲ್ಲ. ಇನ್ನೊಮ್ಮೆ ಮಾತನಾಡುವ ಮುನ್ನ ಯೋಚಿಸಿ ಮಾತನಾಡುವುದನ್ನು ರೂಡಿಸಿಕೊಳ್ಳೋಣ. ಡಿ.ವಿ.ಜಿ. ಯವರ ಈ ಕೆಳಗಿನ ಕಗ್ಗದ ಸಾಲುಗಳನ್ನು ಎಂದೆಂದಿಗೂ ನೆನೆಯೋಣ –

"ಇಳೆಯಿಂದ ಮೊಳಕೆಯೊಗೆ ಎಂದು ತಮಟೆಗಳಿಲ್ಲ!
ಫಲಮಾಗುವಂದು ತುತ್ತೂರಿ ದನಿಯಿಲ್ಲ!!
ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ!
ಹೊಲಿ ನಿನ್ನ ತುಟಿಗಳನ್ನು ಮಂಕುತಿಮ್ಮ!!

(ಹದುಳ = ಕ್ಷೇಮ; ಕೂರ್ದಸಿ = ಹರಿತವಾದ ಕತ್ತಿ; ಯಾತ = ಏತ; ನುತಿ = ಸ್ತುತಿ, ಹೊಗಳಿಕೆ)

ಲೇಖಕರ ಕಿರುಪರಿಚಯ
ಶ್ರೀಮತಿ ರೇವತಿ ವಿ.

ಬೆಂಗಳೂರಿನ ಮೂಲದವರಾದ ಇವರು ಕನ್ನಡ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಪ್ರಸ್ತುತ ಆಚಾರ್ಯ ಪಾಠ ಶಾಲೆ ಕಾಲೇಜಿನ ಕನ್ನಡ ವಿಭಾಗದಲ್ಲಿ ಉಪನ್ಯಾಸಕಿಯಾಗಿದ್ದಾರೆ.

ಬಿಡುವಿನ ವೇಳೆಯಲ್ಲಿ ಇವರು ಸಾಹಿತ್ಯ ಕೃತಿಗಳನ್ನು ಓದುವ, ಪುಸ್ತಕಗಳನ್ನು ಓದುವ ಮತ್ತು ಸಂಗೀತ ಆಲಿಸುವ ಹವ್ಯಾಸಗಳನ್ನು ಹೊಂದಿದ್ದಾರೆ.

Blog  |  Facebook  |  Twitter

1 ಕಾಮೆಂಟ್‌: