ಶೀರ್ಷಿಕೆ: ಬೆಳಕು ತಂದ ಬಾಲಕ
ಲೇಖಕರು: ತ. ರಾ. ಸು. (ತಳುಕು ರಾಮಸ್ವಾಮಯ್ಯ ಸುಬ್ಬರಾಯ)
ಪ್ರಕಾಶಕರು: ಹೇಮಂತ ಸಾಹಿತ್ಯ, ಹತ್ತನೇ 'ಎ' ಮುಖ್ಯರಸ್ತೆ, ರಾಜಾಜಿನಗರ, ಬೆಂಗಳೂರು.
ಪ್ರಧಮ ಮುದ್ರಣ: 1961
ಪುಸ್ತಕ ಕುರಿತು: 'ಬೆಳಕು ತಂದ ಬಾಲಕ' ಭಾರತೀಯ ಉಪನಿಷತ್ ಸಾಹಿತ್ಯದಲ್ಲಿ ಅತ್ಯಂತ ಪ್ರಖ್ಯಾತವಾದ ಕಠೋಪನಿಷತ್ತಿನಲ್ಲಿ ಬರುವ ನಚಿಕೇತೋಪಾಖ್ಯಾನವನ್ನು ಮೂಲವಾಗಿಟ್ಟುಕೊಂಡು ರಚಿತವಾದ ಕಾದಂಬರಿ. ನಚಿಕೇತನ ಕಥೆ, ಅದನ್ನು ಓದಿದ ದಿನದಿಂದಲೂ ಬಹು ವಿಚಿತ್ರವಾಗಿ ನನ್ನ ಹೃದಯವನ್ನು ಆಕರ್ಷಿಸಿ, ಬಹುದಿನಗಳಿಂದಲೂ ಅದನ್ನು ವಸ್ತುವನ್ನಾಗಿಟ್ಟುಕೊಂಡು ಕಾದಂಬರಿಯನ್ನು ರಚಿಸಬೇಕೆಂಬ ಹಂಬಲ ನನ್ನ ಹೃದಯದಲ್ಲಿ ಮನೆ ಮಾಡಿಕೊಂಡಿತ್ತು. ಕಠೋಪನಿಷತ್ತಿನಲ್ಲಿ ದೊರೆಯುವ ಕಥಾವಸ್ತು ಅತ್ಯಂತ ಅಲ್ಪ; ಕೇವಲ ನಾಲ್ಕಾರು ಶ್ಲೋಕಗಳಲ್ಲಿ, ಮಿಂಚಿನ ವೇಗದಲ್ಲಿ, ಅಷ್ಟೇ ಮಟ್ಟಿಗೆ ಕಣ್ಣು ಕೋರೈಸುವಂತೆ, ನಚಿಕೇತನ ಕಥೆ ಆರಂಭವಾಗಿ ಮುಕ್ತಾಯವಾಗುತ್ತದೆ. ಕಥೆ ಅಷ್ಟು ಅಲ್ಪವಾದರೂ, ಅದು ಸಾರುವ ಸಂದೇಶ, ಜೀವನಕ್ಕೆ ನೀಡುವ ಬೆಳಕು ಸಾಗರದಷ್ಟು ವಿಸ್ತಾರವಾದುದ್ದು; ಭಾರತೀಯ ತತ್ತ್ವಶಾಸ್ತ್ರದ ಆಳವಾದ ಅಭ್ಯಾಸ, ನಿಕಟವಾದ ಅರಿವು ಇಲ್ಲದಿದ್ದವರಿಗೆ ಸುಲಭವಾಗಿ ಅರ್ಥವಾಗದಂಥದ್ದು. ಈ ಕೃತಿರಚನೆಗೆ ಬೇಕಾದ ಈ ಅರ್ಹತೆಯ ಅರಿವು ನನಗಿದ್ದಂತೆಯೇ, ಆ ಅರ್ಹತೆ ನನ್ನಲ್ಲಿ ಎಳ್ಳಷ್ಟೂ ಇಲ್ಲವೆಂಬ ಅರಿವೂ ನನ್ನಲ್ಲಿದ್ದಿತು. ಕಠೋಪನಿಷತ್ತಿನಲ್ಲೇ ಅಲ್ಲದೆ, ಋಗ್ವೇದ, ಛಾಂದೋಗ್ಯ, ಬೃಹದಾರಣ್ಯಕ ಉಪನಿಷತ್ತುಗಳು, ಮಹಾಭಾರತಗಳಲ್ಲಿ ದೊರೆಯುವ ವಸ್ತುಗಳನ್ನು ಅಳವಡಿಸಿಕೊಂಡು ಈ ಕಾದಂಬರಿಯನ್ನು ರಚಿಸಿದ್ದೇನೆ. ಈ ಕಾದಂಬರಿ, ಇದನ್ನು ನಾನು ಬರೆಯುತ್ತಿರುವಾಗ ನನಗೆ ನೀಡಿದ ಸಂತೋಷವನ್ನೇ, ಓದುಗರಿಗೂ ವಾಚನ ಸಮಯದಲ್ಲಿ ನೀಡಿದರೆ ಕೃತಾರ್ಥ. - ತ.ರಾ.ಸು.
ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.
=> ಕಹಳೆ ತಂಡ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ