ಸೋಮವಾರ, ನವೆಂಬರ್ 21, 2016

ಹೋರಾಟದ ಹಾದಿ - ಡಾ. ಎಚ್. ನರಸಿಂಹಯ್ಯ

ಹೋರಾಟದ ಹಾದಿ - ಡಾ. ಎಚ್. ನರಸಿಂಹಯ್ಯ

ಶೀರ್ಷಿಕೆ: ಹೋರಾಟದ ಹಾದಿ
ಲೇಖಕರು: ಡಾ. ಎಚ್. ನರಸಿಂಹಯ್ಯ
ಪ್ರಕಾಶಕರು: ಕರ್ನಾಟಕ ಸರ್ಕಾರದ ಪರವಾಗಿ ಆಯುಕ್ತರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು. 
ಪ್ರಧಮ ಮುದ್ರಣ: 2006


ಪುಸ್ತಕ ಕುರಿತು: ಕೆಲವು ವರ್ಷಗಳಿಂದ ನನ್ನ ಆತ್ಮೀಯ ಸ್ನೇಹಿತರು ನನ್ನ ಆತ್ಮ ಕಥೆಯನ್ನು ಬರೆಯಬೇಕೆಂದು ಸೂಚಿಸಿದರು. ನಾನು ಒಂದಲ್ಲ ಒಂದು ಸಬೂಬು ಹೇಳಿಕೊಂಡು ಅವರ ಸಲಹೆಗೆ ಅಷ್ಟಾಗಿ ಗಮನ ಕೊಡಲಿಲ್ಲ. ಕೊನೆಗೆ ಸಲಹೆ ಒತ್ತಾಯವಾಯಿತು. ಆಗ ನಾನು ನನ್ನ ಆತ್ಮ ಕಥೆಯ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಲೇ ಬೇಕಾಯಿತು. ನಾನು ದಿನಚರಿಯನ್ನು ಇಟ್ಟಿಲ್ಲ. ಒಂದು ಫೋಟೋ ಕೂಡ ನನ್ನಲ್ಲಿ ಇಲ್ಲ. ನನ್ನ ಆತ್ಮ ಕಥೆಯನ್ನು ಬರೆಯುವ ಮಟ್ಟದ ವ್ಯಕ್ತಿಯಾಗಬಹುದೆಂದು ನಾನು ಕನಸಿನಲ್ಲಿಯೂ ಯೋಚಿಸಿರಲಿಲ್ಲ. ಆತ್ಮಕಥೆ ಆತ್ಮ ಪ್ರಶಂಸೆಯಾಗಬಾರದು. ಇದನ್ನು ನಾನು ಬಹು ಎಚ್ಚರಿಕೆಯಿಂದ ಗಮನದಲ್ಲಿಟ್ಟುಕೊಂಡು ವಸ್ತುನಿಷ್ಠವಾಗಿ ಬರೆದಿದ್ದೇನೆ. ನಾನು ದಿನಚರಿ ಇಡದೇ ಇದ್ದರೂ ನನ್ನ ಜೀವನದಲ್ಲಿ ಎದ್ದು ಕಾಣುವ ಘಟನೆಗಳನ್ನು ನನ್ನ ಸ್ನೇಹಿತರಿಗೆ ಅವಕಾಶ ಸಿಕ್ಕಿದಾಗಲೆಲ್ಲಾ ಹೇಳುತ್ತಿದ್ದೆ, ಹೀಗೆ ಪದೇ ಪದೇ ಹೇಳಿ ಕೆಲವಂತೂ ಬಾಯಿಪಾಠದ ಹಂತಕ್ಕೆ ಮುಟ್ಟಿದ್ದವು. ಆದುದರಿಂದ ನಾನು ಸರಾಗವಾಗಿ ಈ ಪುಸ್ತಕವನ್ನು ಬರೆಯಲು ಸಹಾಯವಾಯಿತು. ಕಡು ಬಡತನದಲ್ಲಿ ಹುಟ್ಟಿ ಬಸ್ ಚಾರ್ಜಿಗೆ ದುಡ್ಡಿಲ್ಲದೆ ನಮ್ಮೂರಿನಿಂದ 53 ಮೈಲಿ ದೂರದಲ್ಲಿರುವ ಬೆಂಗಳೂರಿಗೆ ಒಂದು ಸಲ ನಡೆದುಕೊಂಡು ಬಂದೆ. ಅಂತಹವನು ಯಾವ ಜಾತಿ, ರಾಜಕೀಯ ಮತ್ತು ಹಣದ ಬೆಂಬಲವೂ ಇಲ್ಲದೆ ಇಂತಹ ಒಂದು ಪುಸ್ತಕವನ್ನು ಬರೆಯುವ ಹಂತಕ್ಕೆ ಮುಟ್ಟಿರುವುದೇ ಒಂದು ಪರಮಾಶ್ಚರ್ಯ. ನನ್ನ ಜೀವನಕ್ಕೆ ತಿರುವು ಕೊಟ್ಟ ಕೆಲವು ಘಟನೆಗಳು ನಡೆದಿವೆ. ಅವು ಆಕಸ್ಮಿಕವೋ ಅಥವಾ ಇನ್ನೇನೋ ನಾನು ಹೇಳಲಾರೆ. ನನ್ನ ಜೀವನವೆಲ್ಲಾ ಹೋರಾಟವೇ ಆಯಿತು. ನಾನು ಜೀವನದಲ್ಲಿ ಒಂಟಿ. ಹೋರಾಟದಲ್ಲಿಯೂ ಬಹುತೇಕ ಒಂಟಿಯೇ. ನನ್ನ ಈ ಪುಸ್ತಕಕ್ಕೆ ನಾಮಕರಣ ಮಾಡಲು ಹಲವರ ಸಹಾಯವನ್ನು ಕೇಳಿದೆ. ಅದಕ್ಕೆ ಏನೇ ಹೆಸರಾಗಲಿ 'ಹೋರಾಟ' ಎನ್ನುವ ಪದ ಆ ಹೆಸರಿನ ಒಂದು ಭಾಗವಾಗಬೇಕು ಎಂಬ ನನ್ನ ದೃಢ ನಿಶ್ಚಯವನ್ನು ತಿಳಿಸಿದ್ದೆ. ಪ್ರಸಿದ್ಧ ಸಾಹಿತಿಗಳೂ, ಕವಿಗಳೂ ಆದ ಡಾ|| ಜಿ. ಎಸ್. ಶಿವರುದ್ರಪ್ಪನವರು ಅದಕ್ಕೆ 'ಹಾದಿ' ಕೂಡಿಸಿ 'ಹೋರಾಟದ ಹಾದಿ' ಯಾಗಿ ಮಾಡಿದರು. ನನ್ನ ಜೀವನ ಒಂದು ಪುಸ್ತಕ ರೂಪವಾಗಿ ಪ್ರಕಟವಾಗಿರುವುದು ಸಹಜವಾಗಿಯೇ ನನಗೆ ಸಂತೋಷವನ್ನು ಕೊಟ್ಟಿದೆ. ಈ ಪುಸ್ತಕವನ್ನು ಓದಿದವರಿಗೆ ಒಂದಲ್ಲಾ ಒಂದು ವಿಧದಲ್ಲಿ ಉಪಯೋಗವಾದರೆ ನಾನು ಈ ಪುಸ್ತಕ ಬರೆದಿದ್ದಕ್ಕೆ ಸಾರ್ಥಕವಾಗುತ್ತದೆ. - ಎಚ್. ನರಸಿಂಹಯ್ಯ.



ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ