ಶೀರ್ಷಿಕೆ: ಗೃಹಭಂಗ
ಲೇಖಕರು: ಎಸ್. ಎಲ್. ಭೈರಪ್ಪ
ಪ್ರಕಾಶಕರು: ಸಾಹಿತ್ಯ ಭಂಡಾರದ ಪ್ರಕಾಶನ, ಬಳೇಪೇಟೆ, ಬೆಂಗಳೂರು.
ಪ್ರಧಮ ಮುದ್ರಣ: 1970
ಪುಸ್ತಕ ಕುರಿತು: ಈ ಕಾದಂಬರಿ ಯಾವ ಸಮಸ್ಯೆಯನ್ನೂ ಕುರಿತದ್ದಲ್ಲ-ವಸ್ತುನಿಷ್ಠವಾಗಿ ಜೀವನವನ್ನು ಕಾಣಿಸುವ ಪ್ರಯತ್ನ. ಜೀವನವೆಂಬುದು ಯಾರೊಬ್ಬನ ಅನುಭವ ಅಥವಾ ಬೌದ್ಧಿಕ ಹಿಡಿತದ ಸಮಗ್ರತೆಗೆ ಸಿಕ್ಕದಷ್ಟು ವಿಶಾಲವಾದದ್ದು; ಜಟಿಲವಾದದ್ದು. ಆದುದರಿಂದ ಈ ಕಾದಂಬರಿಯು ನಿಮಗೆ ಕಾಣಿಸಲು ಪ್ರಯತ್ನಿಸಿರುವ ಜೀವನದ ಕಾಲ ಪರಿಧಿಗಳ ಅಂದಾಜನ್ನು ಹೇಳುವುದು ಅಗತ್ಯ. ಸಾವಿರದ ಒಂಭೈನೂರ ಇಪ್ಪತ್ತರ ನಂತರ ಪ್ರಾರಂಭವಾಗುವ ಇದರ ವಸ್ತು, ನಲವತ್ತನಾಲ್ಕು ನಲವತ್ತೈದರ ಸುಮಾರಿಗೆ ಮುಗಿಯುತ್ತದೆ. ತಿಪಟೂರು ಚನ್ನರಾಯಪಟ್ಟಣ ತಾಲ್ಲೂಕುಗಳನ್ನೊಳಗೊಳ್ಳುವ ಭಾಗದ ಪ್ರಾದೇಶಿಕ ಹಿನ್ನೆಲೆ. ಭಾಷೆಯೂ ಅದರದೇ. ಆದರೆ, 'ಇದೊಂದು ಪ್ರಾದೇಶಿಕ ಕಾದಂಬರಿ' ಎಂಬ ಆತುರದ ಕ್ಲಾಸ್ ರೂಮು ಬುದ್ಧಿಯ ವರ್ಗೀಕರಣ ಮಾಡಬಾರದು. ಕಥೆ ನಡೆಯುವುದಕ್ಕೆ ಒಂದು ಭೌಗೋಳಿಕ ಜಾಗಬೇಕು. ನಾನು ಈ ಜಾಗವನ್ನು ಆಯ್ದುಕೊಂಡಿರುವ ಕಾರಣ, ನನಗೆ ಅದು ಹೆಚ್ಚು ಪರಿಚಿತವಾಗಿರುವುದು ಮಾತ್ರ. ಈ ಕಾದಂಬರಿ ನಿಮ್ಮನ್ನು ನಾಗಾಲೋಟ ಓಡಿಸಿಕೊಂಡು ಹೋಗದಿರಬಹುದು. ಆದರೆ ಜೀವನವನ್ನು ನಿರ್ವಿಕಾರ ದೃಷ್ಟಿಯಿಂದ ನೋಡಬಲ್ಲವರ, ಸಾಕಷ್ಟು ಕಷ್ಟಸುಖಗಳನ್ನು ಕಂಡವರ, ತಕ್ಕಮಟ್ಟಿಗಾದರೂ ಹಳ್ಳಿಗಳನ್ನು ತಿಳಿದಿರುವವರ ಅಂತರಂಗವನ್ನು ತಟ್ಟುತ್ತದೆಂಬುದು ನನಗೆ ಗೊತ್ತಿದೆ. ನಡೆಯುವವನು ತನ್ನ ಸುತ್ತನ್ನು ನೋಡುವಷ್ಟು ಸ್ಪಷ್ಟವಾಗಿ ಓಟಹೊಡೆಯುವವನು ನೋಡಲಾರ. ಗೃಹಭಂಗ ಎಂಬುದು ಕೃತಿಯ ಕೇಂದ್ರಕಲ್ಪನೆಯಲ್ಲ. ಮೇಲೆ ಹೇಳಿದ ಅವಧಿಯಲ್ಲಿ ನಡೆಯಬಹುದಾದ ಜೀವನಚಿತ್ರಣದ ಪ್ರಯತ್ನವೇ ಇದರ ದೃಷ್ಟಿ. ಇಲ್ಲಿ ಮನೆ ಒಡೆಯುವುದು, ಮುರಿಯುವುದು ಮಾತ್ರವಲ್ಲ; ಪ್ಲೇಗು, ಕಜ್ಜಿ, ಬರ, ಮೊದಲಾಗಿ ಇನ್ನೂ ಎಷ್ಟೋ ಸಂಗತಿಗಳು, ವಿವಿಧ ರೀತಿಯ ಪಾತ್ರಗಳು ಬರುತ್ತವೆ. ಇವು ಮೂಡಿ ನಡೆದಂತೆ ಒಂದು ಜೀವನದೃಷ್ಟಿಯು ಹಿನ್ನೆಲೆಯಲ್ಲಿ ಮಸುಕು ಮಸುಕಾಗಿ ಕಾಣಬಹುದು. ಇವೆಲ್ಲವನ್ನೂ ಸಮಗ್ರವಾಗಿ ಧ್ವನಿಸುವ ಹೆಸರು ನನಗೆ ತಿಳಿಯಲಿಲ್ಲ. ಹೆಸರಿಡದೆ ಪ್ರಕಟವಾಗುವುದು ಸಾಧ್ಯವಿಲ್ಲ. ಪ್ರಕಟಣೆಯ ಘಟ್ಟದಲ್ಲಿ ಯಾವುದೋ ಒಂದನ್ನು ಇಡಲೇಬೇಕೆಂದು ಹಟಹಿಡಿದಾಗ, 'ಗೃಹಭಂಗ' ಎಂದು ಮನಸ್ಸಿಗೆ ಬಂತು, ಇಟ್ಟಿದ್ದೇನೆ. - ಎಸ್. ಎಲ್. ಭೈರಪ್ಪ.
ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.
=> ಕಹಳೆ ತಂಡ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ