"ಹಾವಿನ ದ್ವೇಷ, ಹನ್ನೆರಡು ವರುಷ, ನನ್ನ ರೋಷ, ನೂರು ವರುಷ" - ಇದು ಜನಪ್ರಿಯ ಕನ್ನಡ ಚಲನಚಿತ್ರ ನಾಗರ ಹಾವು ಚಿತ್ರದ ಸದಾ ಹಸಿರಾಗಿರುವ ಹಾಡು. ಇದು ನಿಜವೇ? ಉತ್ತರ ಹುಡುಕ ಹೊರಟರೆ ನೂರಾರು ಪ್ರಶ್ನೆಗಳೇ ಎದುರಾಗುತ್ತವೆ. ಸಾಮಾನ್ಯವಾಗಿ ಹಾವುಗಳು ದ್ವೇಷವನ್ನಿರಿಸಿಕೊಳ್ಳುವುದು ಅಸಾಧ್ಯವಾದ ಸಂಗತಿ. ಏಕೆಂದರೆ, ಇವುಗಳ ಮೆದುಳು ಪೂರ್ಣವಾಗಿ ಬೆಳವಣಿಗೆಯಾಗಿರುವುದಿಲ್ಲ. ಎಲ್ಲಾ ಹಾವುಗಳ ಆಯಸ್ಸೇ ಹನ್ನೆರಡು ವರ್ಷ ದಾಟುವುದಿಲ್ಲ. ಅಲ್ಲದೇ, ಹಾವುಗಳು ಚಲನೆಯಲ್ಲಿರುವ ವಸ್ತುಗಳನ್ನು ಮಾತ್ರ ಗುರುತಿಸಬಲ್ಲವು. ಪುಂಗಿಯ ನಾದಕ್ಕೆ ಅವು ತಲೆದೂಗುವುದಿಲ್ಲ, ಬದಲಾಗಿ ಪುಂಗಿಯ ಚಲನೆಗೆ ತಕ್ಕಂತೆ ತಲೆ ಆಡಿಸುತ್ತವೆ. ಹಾವುಗಳು ಹಾಲು ಕುಡಿಯುವುದೂ ಸಹ ಸುಳ್ಳಿನ ಕಂತೆ. ಶೀತ ರಕ್ತದ ಪ್ರಾಣಿಗಳಿಗೆ ಇವುಗಳ ಆಹಾರವಾದ ಇಲಿ, ಕಪ್ಪೆಗಳ ಶರೀರದಲ್ಲಿರುವ ನೀರಿನ ಅಂಶವೇ ಸಾಕು.
ಜಾನುವರುಗಳಲ್ಲಿ ಹಾವಿನ ಕಡಿತ ಸಾಮಾನ್ಯವಾದರೂ ಸಹ ಬಹಳಷ್ಟು ಸಂದರ್ಭಗಳಲ್ಲಿ ಇದು ಪತ್ತೆಯಾಗದೆ ಹೋಗುವುದೇ ಜಾಸ್ತಿ. ಏಕೆಂದರೆ, ನಾಗರಹಾವು ಮತ್ತು ಇನ್ನಿತರೇ ವಿಷಸರ್ಪಗಳ ಕಡಿತದಿಂದ ಸಾವು ಕೂಡಲೇ ಸಂಭವಿಸುವುದರಿಂದ ಚಿಕಿತ್ಸೆಗೆ ಮುನ್ನವೇ ಜಾನುವಾರು ಸಾವನ್ನಪ್ಪುತ್ತದೆ. ನಾಯಿಗಳಲ್ಲಿ ಮತ್ತು ಕುದುರೆಗಳಲ್ಲಿ ಹಾವಿನ ವಿಷಬಾಧೆ ಬಹಳ ತೀವ್ರವಾಗಿ ಇರುತ್ತದೆ. ನಾಯಿಗಳು ಕುತೂಹಲದಿಂದ ಹಾವುಗಳನ್ನು ಬೆನ್ನಟ್ಟಿದಾಗ, ಅವುಗಳ ಮೂತಿಯ ಮೇಲೆ ಹಾವಿನ ಕಡಿತವಾಗಬಹುದು. ಜಾನುವಾರುಗಳಾದರೆ, ಅವು ಮೇಯುವಾಗ ಮುಖ ಅಥವಾ ತುಳಿದರೆ ಕಾಲುಗಳ ಮೇಲೆ ಕಡಿತವುಂಟಾಗುತ್ತದೆ. ಶೇಕಡಾ 80 ರಷ್ಟು ಹಾವುಗಳು ವಿಷದ ಹಾವುಗಳಲ್ಲ. ಸುಮಾರು 3500 ರೀತಿಯ ಹಾವುಗಳಿದ್ದರೂ ಸಹ ಅವುಗಳಲ್ಲಿ ಕೇವಲ 400 ಹಾವುಗಳು ಮಾತ್ರ ವಿಷಕಾರಿ. ಆದರೆ, ಮನುಷ್ಯರಲ್ಲಿ ಇವುಗಳ ಕಡಿತದಿಂದಾಗುವ ಹೆದರಿಕೆಯಿಂದ ಹೃದಯಸ್ಥಂಬನವಾಗಿ ಸಾವು ಸಂಭವಿಸುತ್ತದೆ. ಅತ್ಯಂತ ವಿಷಕಾರಿ ಹಾವುಗಳಲ್ಲಿ ನಾಗರಹಾವು, ಕಾಳಿಂಗಸರ್ಪ, ಮಿಡನಾಗರ, ಕೊಳಕು ಮಂಡಲ ಇತ್ಯಾದಿಗಳು ಸೇರಿವೆ.
ಹಾವಿನ ವಿಷದಲ್ಲಿ ವಿವಿಧ ರೀತಿಯ ಕಿಣ್ವಗಳು, ಪ್ರೋಟೀನ್ ಮತ್ತಿತರ ಮಿಶ್ರಣವೇ ಇರುತ್ತದೆ. ಕೆಲವು ಹಾವುಗಳ ವಿಷದಲ್ಲಿ ಶರೀರದಲ್ಲಿ ನಂಜು ತುಂಬಿ, ಆ ಭಾಗ ಕೊಳೆಯುವಂತೆ ಮಾಡುವ ವಿಶೇಷ ವಸ್ತುಗಳು ಇರುತ್ತವೆ. ಇವು ಕೊಳಕು ಮಂಡಲ ಮತ್ತಿತರ ರೀತಿಯ ಹಾವುಗಳಲ್ಲಿ ಸಾಮಾನ್ಯ. ಹಾವುಗಳು ಕಡಿದಾಗ, ಸಾಮಾನ್ಯವಾಗಿ ಮೂರು ರೀತಿಯ ಪರಿಣಾಮಗಳಿಂದ ಜಾನುವಾರುಗಳು ಸಾವನ್ನಪ್ಪುತ್ತವೆ. ಮೊದಲನೆಯದು ಹೃದಯಸ್ಥಂಬನ; ಎರಡನೆಯದಾಗಿ ನರಮಂಡಲದ ಮೇಲಿನ ಪರಿಣಾಮ ಮತ್ತು ಮೂರನೆಯದಾಗಿ ರಕ್ತ ಕಣಗಳ ಒಡೆಯುವಿಕೆ. ಹಾವು ಕಡಿದಾಗ ಅವುಗಳ ಕಡಿತದ ಸ್ಥಳದಲ್ಲಿ ಹಲ್ಲುಗುರುತು ಆಗುತ್ತದೆ ಎನ್ನುತ್ತಾರೆ. ಆದರೆ, ಜಾನುವಾರುಗಳ ಕಾಲುಗಳ ಮೇಲೆ ಕಡಿತವುಂಟಾದಾಗ ಅಲ್ಲಿ ಹಲ್ಲನ ಗುರುತು ಅಥವಾ ರಕ್ತಸ್ರಾವ ಕಾಣಿಸದು.
ಹಾವಿನ ವಿಷಬಾಧೆ ವಿವಿಧ ಅಂಶಗಳನ್ನು ಅವಲಂಬಿಸಿದೆ. ಹಾವು ಕಡಿತದ ಸ್ಥಳದಲ್ಲಿ ಇರುವ ವಿಷದ ಅಂಶ, ಪ್ರಾಣಿಯ ಗಾತ್ರ, ಕಡಿದ ಹಾವಿನ ಜಾತಿ, ಕಡಿತದ ಜಾಗ, ಕಡಿತಕ್ಕೊಳಗಾದ ಜಾನುವಾರು ಇತ್ಯಾದಿ. ಒಂದೇ ಹಾವು ಹಲವಾರು ಜಾನುವಾರುಗಳನ್ನು ಕಡಿಯುವ ಸಾಧ್ಯತೆ ಇದ್ದಾಗ, ಮೊದಲು ಕಡಿತಕ್ಕೊಳಗಾದ ಜಾನುವಾರಿನಲ್ಲಿ ಬಹಳ ವಿಷವು ಒಳಸೇರುವುದರಿಂದ ಅದರಲ್ಲಿ ವಿಷಭಾಧೆ ಸಹಜವಾಗಿಯೇ ಜಾಸ್ತಿ. ನಂತರ ಕಡಿತಕ್ಕೆ ಒಳಗಾಗುವ ಜಾನುವಾರುಗಳಲ್ಲಿ ವಿಷದ ಪ್ರಮಾಣ ಕಡಿಮೆಯಾಗುತ್ತಾ ಹೋಗುವುದರಿಂದ ಅವುಗಳಿಗೆ ಪ್ರಾಣಾಪಾಯ ಕಡಿಮೆ. ಶರೀರ ತೂಕ ಜಾಸ್ತಿ ಇರುವ ಪ್ರಾಣಿಗಳಾದ ದನ ಮತ್ತು ಎಮ್ಮೆಗಳಲ್ಲಿ ವಿಷಬಾಧೆ ಉಂಟಾಗಲು ವಿಷದ ಪ್ರಮಾಣ ಜಾಸ್ತಿಯಾಗಿ ಶರೀರಕ್ಕೆ ಸೇರಬೇಕು. ಯಾವ ಜಾತಿಯ ಹಾವು ಕಚ್ಚಿದೆ ಎನ್ನುವುದೂ ಬಹಳ ಮುಖ್ಯ, ಏಕೆಂದರೆ ನಾಗರಹಾವು ಮತ್ತು ಕಾಳಿಂಗಸರ್ಪದ ಕಡಿತದಲ್ಲಿ ಸಾವು ಕೂಡಲೇ ಸಂಭವಿಸುತ್ತದೆ.
ಹಾವು ಕಡಿತದ ಲಕ್ಷಣಗಳು ಜಾನುವಾರುವಿನಲ್ಲಿ ಕೆಲವು ನಿಮಿಷಗಳಿಂದ ಪ್ರಾರಂಭವಾಗಿ ಕೆಲವು ಘಂಟೆಗಳವರೆಗೆ ಇರಬಹುದು. ಕಡಿತದ ಸ್ಥಳದಲ್ಲಿ ತೀವ್ರವಾದ ಉರಿಯೂತವಿರಬಹುದು. ರಕ್ತ ಹೆಪ್ಪುಗಟ್ಟುವಿಕೆಯ ತೊಂದರೆಯಿಂದ ಕಡಿದ ಸ್ಥಳದಿಂದ ರಕ್ತ ಸೋರುತ್ತ ಇರಬಹುದು. ಕೆಲವು ಜಾನುವಾರುಗಳಲ್ಲಿ ಹಲ್ಲು ಕಡಿಯುವುದು, ಜೊಲ್ಲು ಸುರಿಸುವುದು, ಉಸಿರಾಟದ ತೊಂದರೆ ಮತ್ತು ಒದ್ದಾಡುವಿಕೆಯ ಲಕ್ಷಣಗಳು ಕಾಣಿಸಬಹುದು. ಆದರೆ, ಬಹಳಷ್ಟು ಜಾನುವಾರುಗಳು ತೀವ್ರತರವಾದ ವಿಷಸರ್ಪದ ಕಡಿತಕ್ಕೆ ಒಳಗಾದರೆ ಯಾವುದೇ ವಿಷಬಾಧೆಯ ಲಕ್ಷಣಗಳನ್ನೂ ತೋರಿಸದೆ ತೀರಿಕೊಳ್ಳಬಹುದು. ನರಮಂಡಲದ ಉದ್ರೇಕಕ್ಕೆ ಒಳಗಾದ ಜಾನುವಾರುಗಳು ಪಾರ್ಶ್ವವಾಯು ಪೀಡೆಯಿಂದ ಬಳಲಬಹುದು. ಕಣ್ಣು ಗುಡ್ಡೆಗಳ ತಿರುಗಿಸುವಿಕೆ, ಹೊಟ್ಟೆ ಉಬ್ಬರ, ನಡೆದಾಡಲು ತೊಂದರೆ ಮತ್ತು ಕುರುಡುತನ ಇತ್ಯಾದಿ ಲಕ್ಷಣಗಳೂ ಸಹ ಕಾಣಿಸಬಹುದು. ತಿಂದ ವಸ್ತುಗಳನ್ನು ವಾಂತಿ ಮಾಡಿಕೊಳ್ಳುವಿಕೆಯೂ ಸಹ ಬಹಳ ಸಾಮಾನ್ಯ.
ಜಾನುವಾರುಗಳಲ್ಲಿ ಹಾವು ಕಡಿತವನ್ನು ಪತ್ತೆಹಚ್ಚುವುದು ಅಷ್ಟು ಸುಲಭದ ಕೆಲಸವಲ್ಲ. ಕೆಲವು ಸಂದರ್ಭಗಳಲ್ಲಿ ಹಾವಿನ ಪೊರೆ ಅಥವಾ ರೈತರೇ ಹಾವನ್ನು ಸಾಯಿಸಿ ತಂದಾಗ ಮಾತ್ರ ನಿಖರವಾಗಿ ಇಂತಹ ಹಾವಿನ ವಿಷಬಾಧೆ ಎಂದು ಹೇಳಬಹುದು. ಇದಲ್ಲದೇ ಕಡಿತದ ಗುರುತು, ರಕ್ತ ಒಸರುವಿಕೆ ಮತ್ತು ಕಡಿತದ ಸ್ಥಳದಲ್ಲಿನ ತೀವ್ರವಾದ ಊತವೂ ಸಹ ವಿಷಬಾಧೆಯ ಪತ್ತೆಗೆ ಸಹಕರಿಸಬಲ್ಲವು. ಅಲ್ಲದೇ ಇಂತಹದೇ ವಿಷಬಾಧೆಯ ಲಕ್ಷಣಗಳನ್ನು ಉಂಟುಮಾಡುವ ವಿವಿಧ ಕಾಯಿಲೆಗಳಾದ ಚಪ್ಪೆ ರೋಗ, ನರಡಿ ರೋಗ, ಉಣ್ಣೆ ರೋಗ ಹಾಗೂ ಇತರೆ ವಿಷ ಸೇವನೆ ಇತ್ಯಾದಿಗಳನ್ನು ಗಮನದಲ್ಲಿಟ್ಟು ರೋಗ ಪತ್ತೆಹಚ್ಚಬೇಕಾಗುತ್ತದೆ.
ಜಾನುವಾರುಗಳಲ್ಲಿ ಹಾವು ಕಡಿತ ಉಂಟಾಗಿದೆ ಎಂದು ತಿಳಿದಾಗ ನಾವು ಅನುಸರಿಸಬೇಕಾದ ಕ್ರಮಗಳು:
- ಹಾವು ಕಡಿತ ಎಂದು ಗೊತ್ತಾದರೆ, ಗಾಬರಿಗೊಳ್ಳದೆ ಪ್ರಥಮ ಚಿಕಿತ್ಸಾ ಕ್ರಮವನ್ನು ಅನುಸರಿಸಬೇಕು. ಜಾನುವಾರಿಗೆ ಯಾವುದೇ ಉದ್ರೇಕವಾಗದಂತೆ ಪ್ರಶಾಂತವಾಗಿರಿಸಲು ಪ್ರಯತ್ನಿಸಬೇಕು.
- ಹಾವು ಕಾಲಿಗೆ ಕಚ್ಚಿದ್ದ ಪಕ್ಷದಲ್ಲಿ, ವಿಷವು ಶರೀರಕ್ಕೆ ಸೇರದಂತೆ ಕಚ್ಚಿದ ಸ್ಥಳದಿಂದ 2-4 ಇಂಚು ಮೇಲೆ ಬಿಗಿಯಾಗಿ ಕಟ್ಟು ಹಾಕಬೇಕು. ಆದರೆ, ಕೊಳಕು ಮಂಡಲ ಅಥವಾ ಇನ್ಯಾವುದೇ ಕೊಳೆಯುವಿಕೆಯನ್ನುಂಟುಮಾಡುವ ಹಾವುಗಳ ಕಡಿತದಲ್ಲಿ ಈ ಕ್ರಮವನ್ನು ಅನುಸರಿಸಬಾರದು. ಇದರಿಂದ ಕೊಳೆಯುವಿಕೆ ಹೆಚ್ಚಾಗುವ ಸಂಭವ ಜಾಸ್ತಿ ಇರುತ್ತದೆ.
- ಹಾವು ಕಡಿದ ಜಾಗವನ್ನು ಸೋಪು ಹಚ್ಚಿ ಚೆನ್ನಾಗಿ ತೊಳೆಯಬೇಕು ಮತ್ತು ಮನೆಯಲ್ಲಿ ಲಭ್ಯವಿರುವ ನಂಜುನಿವಾರಕ ಮುಲಾಮನ್ನು ಹಚ್ಚಬೇಕು.
- ಹಾವು ಕಚ್ಚಿದ ಸ್ಥಳದಲ್ಲಿ ಅರಿಶಿನ ಮತ್ತು ಲೋಳೆಸರದ ಸಮಪ್ರಮಾಣದ ಮಿಶ್ರಣ ಮಾಡಿ ಹಚ್ಚಬೇಕು.
- ತಜ್ಞ ಪಶುವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಬೇಕು. ತಜ್ಞ ಪಶುವೈದ್ಯರು ಹಾವು ಕಡಿತಕ್ಕೆ, ಕಡಿದ ಹಾವನ್ನು ಗಮನಿಸಿ ಸೂಕ್ತ ನಂಜುನಿವಾರಕ ಔಷಧಿ, ನೋವು ನಿವಾರಕಗಳು, ರಕ್ತ ಹೆಪ್ಪುಗಟ್ಟದಿರಲು ಸೂಕ್ತ ಚುಚ್ಚುಮದ್ದು ಇತ್ಯಾದಿಗಳನ್ನು ಬಳಸಿ ಜೀವರಕ್ಷಣೆಗೆ ಪ್ರಯತ್ನಿಸುತ್ತಾರೆ.
- ಮನುಷ್ಯರ ಚಿಕಿತ್ಸೆಗೆ ಬಳಸಬಹುದಾದ ವಿವಿಧ ಹಾವುಗಳ ವಿಷಪ್ರತಿನಿರೋಧಕ ಚುಚ್ಚುಮದ್ದನ್ನೂ ಸಹ ಎಚ್ಚರದಿಂದ ಬಳಸಬೇಕಾಗುತ್ತದೆ. ಏಕೆಂದರೆ ಇವು ಪ್ರಾಣಿಗಳಲ್ಲಿ ಅಲರ್ಜಿಯನ್ನುಂಟುಮಾಡುವ ಸಂಭವಗಳು ಇರುತ್ತವೆ.
ಒಟ್ಟಿನಲ್ಲಿ ಹೇಳಬೇಕೆಂದರೆ, ರೈತರು ತಮ್ಮ ಜಾನುವಾರುಗಳನ್ನು ಮೇಯಲು ಬಿಡುವ ಸ್ಥಳದಲ್ಲಿ ಹಾವುಗಳ ವಾಸಸ್ಥಾನವಾದ ಬಿಲಗಳು, ಹುಲ್ಲುಗಾವಲುಗಳು, ಇಲಿಗಳ ವಾಸಸ್ಥಾನ ಇತ್ಯಾದಿಗಳು ಇಲ್ಲವೆಂದು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ. ಮತ್ತು ಜಾನುವಾರುಗಳು ಹಾವು ಕಡಿತಕ್ಕೆ ಒಳಗಾದಾಗ ಧೈರ್ಯಗೆಡದೇ ಪ್ರಥಮಚಿಕಿತ್ಸಾ ಕ್ರಮಗಳನ್ನು ಅನುಸರಿಸಿದರೆ ಹಾವು ಕಡಿತಕ್ಕೆ ಒಳಗಾದ ಜಾನುವಾರುಗಳ ಪ್ರಾಣ ಕಾಪಾಡಿಕೊಳ್ಳಬಹುದು.
ಲೇಖಕರ ಕಿರುಪರಿಚಯ | |
ಡಾ|| ಏನ್. ಬಿ. ಶ್ರೀಧರ್, ಎಂ. ವಿ. ಎಸ್. ಸಿ., (ಪಿ. ಹೆಚ್. ಡಿ.), ಸಹಾಯಕ ಪ್ರಾಧ್ಯಾಪಕರು, ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ, ಬೆಂಗಳೂರು-24. ಇವರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಲ್ಲೂಕಿನವರಾಗಿದ್ದು, ರೈತ ಕುಟುಂಬಕ್ಕೆ ಸೇರಿದವರಾಗಿರುತ್ತಾರೆ. ಕರ್ನಾಟಕ ಸರ್ಕಾರದ ಪಶುಪಾಲನಾ ಇಲಾಖೆಯಲ್ಲಿ ಪಶುವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವಾಗಲೇ ಇವರು ಸಂಶೋಧನೆಯ ಬಗ್ಗೆ ಹೆಚ್ಚಿನ ಒಲವು ತೋರಿ, ಹಲವಾರು ರೈತಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತಾಳಗುಪ್ಪದ ಪಶುಚಿಕಿತ್ಸಾಲಯವನ್ನು ಮಾದರಿ ಪಶುಚಿಕಿತ್ಸಾಲಯವನ್ನಾಗಿ ಮಾರ್ಪಡಿಸಿರುತ್ತಾರೆ. ಸುಮಾರು 100 ಕ್ಕೂ ಹೆಚ್ಚು ಕನ್ನಡ ವೈಜ್ಞಾನಿಕ ಲೇಖನಗಳನ್ನು, 4 ಕನ್ನಡ ಪುಸ್ತಕಗಳನ್ನು ಬರೆದಿರುವ ಇವರಿಗೆ ಒಲಿದು ಬಂದ ಪ್ರಶಸ್ತಿಗಳು ಹಲವು. ಮಲೆನಾಡಿನ ಜಾನುವಾರುಗಳ ನಿಗೂಢ ಕಾಯಿಲೆಗಳು ಇತ್ಯಾದಿ ಹತ್ತು ಹಲವು ಯೋಜನೆಗಳ ಪ್ರಧಾನ ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಾ ಜಾನುವಾರುಗಳ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. Blog | Facebook | Twitter |
ಇದು ಸಾಕು ಪ್ರಾಣಿಗಳನ್ನು ಹೊಂದಿರುವಂತವರಿಗೆ ಒಂದು ಒಳ್ಳೆಯ ಮಾಹಿತಿಯ, ಮಾರ್ಗಧರ್ಶಕವಾದ ಉಪಯುಕ್ತವಾದ ಲೇಖನ .ಇದನ್ನು ಬರೆದು ,ಹಾವಿನ ಕಡಿತದ ಬಗ್ಗೆ ಬೆಳಕು ಚೆಲ್ಲಿದ ಡಾ|| ಏನ್. ಬಿ. ಶ್ರೀಧರ್
ಪ್ರತ್ಯುತ್ತರಅಳಿಸಿಇವರನ್ನು ಅಭಿನಂದಿಸಲೇ ಬೇಕು .
ಉಪಯುಕ್ತ ಬರವಣಿಗೆ.. ಸ್ಥೂಲವಾಗಿ ವಿವರಿಸಿದ್ದಕ್ಕೆ ಧನ್ಯವಾದಗಳು.. ಫೋಟೋ ಭಯಾನಕವಾಗಿದೆ..
ಪ್ರತ್ಯುತ್ತರಅಳಿಸಿಅತ್ಯಂತ ಕ್ಲಿಷ್ಟಕರವಾದ ವಸ್ತು-ವಿಷಯವೊಂದನ್ನು ಸರಳ ಹಾಗೂ ಸಹಜವಾದ ಭಾಷಾಬಳಕೆಯ ಮೂಲಕ ಪ್ರಭಾವಕಾರಿಯಾಗಿ ನಿರೂಪಿಸಿರುವ ನಿಮಗೆ ಧನ್ಯವಾದಗಳು ಸರ್.
ಪ್ರತ್ಯುತ್ತರಅಳಿಸಿ