ಮಂಗಳವಾರ, ನವೆಂಬರ್ 22, 2011

ರುಚಿ ರುಚಿಯಾದ ಮಂಡಕ್ಕಿ-ಮೆಣಸಿನಕಾಯಿ....

ಮಂಡಕ್ಕಿ-ಮೆಣಸಿನಕಾಯಿ
ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಸರ್ವೇಸಾಮಾನ್ಯವಾದ ಸಂಜೆಯ (ಕೆಲವೊಮ್ಮೆ ಬೆಳಗಿನ) ಉಪಹಾರದ ಒಂದು ಜನಪ್ರಿಯ ಜೋಡಿ ವಿಶೇಷ ಮಂಡಕ್ಕಿ-ಮೆಣಸಿನಕಾಯಿ ಅಥವಾ ಮಂಡಕ್ಕಿ ಉಸಲಿ + ಮೆಣಸಿನಕಾಯಿ ಬೋಂಡ. ಅಂದರೆ, ಪುರಿ ಒಗ್ಗರಣೆ + ಮೆಣಸಿನಕಾಯಿ ಬಜ್ಜಿ. ಪುರಿಯನ್ನು ಆ ಭಾಗದಲ್ಲಿ ಮಂಡಕ್ಕಿ ಎನ್ನುತ್ತಾರೆ. ಆದರೆ, ಬೆಂಗಳೂರಿನ ಕಡೆಯ ಪುರಿಗೂ ದಾವಣಗೆರೆ ಕಡೆಯ ಮಂಡಕ್ಕಿಗೂ ಸ್ವಲ್ಪ ವ್ಯತ್ಯಾಸವಿದೆ. ಇಲ್ಲಿನ ಪುರಿ ಹೆಚ್ಚು ಟೊಳ್ಳಿಲ್ಲದೆ ಸ್ವಲ್ಪ ಗಟ್ಟಿಯಾಗಿರುತ್ತದೆ. ಅಲ್ಲಿನ ಮಂಡಕ್ಕಿ ಹೆಚ್ಚು ಟೊಳ್ಳಾಗಿದ್ದು, ಲಘುವಾಗಿರುತ್ತದೆ. ಈ ಉಸಲಿಗೆ ಆ ಕಡೆಯ ಮಂಡಕ್ಕಿಯೇ ಸೂಕ್ತ. ಇದು ಬೆಂಗಳೂರಿನಲ್ಲೂ ಕೆಲವು ಕಡೆ ಲಭ್ಯ.

ಮಂಡಕ್ಕಿ ಉಸಲಿಗೆ ಬೇಕಾಗುವ ಪದಾರ್ಥಗಳು:
 1. ಮಂಡಕ್ಕಿ (ಒಬ್ಬರಿಗೆ ಸುಮಾರು ಒಂದು ಲೀಟರ್ ನಷ್ಟು)
 2. ಸಣ್ಣಗೆ ಕತ್ತರಿಸಿದ 2-3 ಈರುಳ್ಳಿ
 3. ಕತ್ತರಿಸಿದ  3-4 ಹಸಿರು ಮೆಣಸಿನಕಾಯಿ
 4. ಸ್ವಲ್ಪ ತೆಂಗಿನ ತುರಿ
 5. ಸ್ವಲ್ಪ ಕೊತ್ತಂಬರಿ ಸೊಪ್ಪು, ಕರಿಬೇವಿನ ಎಸಳುಗಳು
 6. ಒಗ್ಗರಣೆಗೆ ಸಾಸಿವೆ, ಕಡ್ಲೆ ಬೇಳೆ, ಉದ್ದಿನ ಬೇಳೆ
 7. ಸ್ವಲ್ಪ ಅರಿಶಿನ ಪುಡಿ, ಉಪ್ಪು, ಶುದ್ಧ ಎಣ್ಣೆ

ತಯಾರಿಸುವ ವಿಧಾನ: (ಚಿತ್ರಾನ್ನ ಅಥವಾ ಅವಲಕ್ಕಿ ಒಗ್ಗರಣೆಯಂತೆಯೇ ಸರಳ)
 • ಮಂಡಕ್ಕಿಯನ್ನು ಸುಮಾರು ಅರ್ಧ ಬಕೆಟ್ ನೀರಿನಲ್ಲಿ 2-3 ನಿಮಿಷ ಕೈಆಡುತ್ತಾ ನೆನೆಸಿ, ಲಘುವಾಗಿ ಹಿಂಡಿ ತೆಗೆದಿರಿಸಿಕೊಳ್ಳಬೇಕು (ಇದರಿಂದ ಮಂಡಕ್ಕಿ ಮೃದುವಾಗುವುದರ ಜೊತೆಗೆ ಸ್ವಚ್ಚಗೊಳ್ಳುತ್ತದೆ)
 • ಬಾಣಲೆಯಲ್ಲಿ ಕಾದ ಎಣ್ಣೆಗೆ, ಜ್ವಾಲೆಯನ್ನು ಸ್ವಲ್ಪ ಸಣ್ಣಗೆ ಮಾಡಿ ಸಾಸಿವೆ ಹಾಕಿ ಸಿಡಿಸಿ, ಕಡ್ಲೆ ಬೇಳೆ, ಉದ್ದಿನ ಬೇಳೆ ಸೇರಿಸಿ ಅವು ಹೊಂಬಣ್ಣಕ್ಕೆ ತಿರುಗಿದಾಗ ಹಸಿರು ಮೆಣಸಿನಕಾಯಿ ಚೂರುಗಳು, ಕರಿಬೇವಿನ ಎಸಳುಗಳನ್ನು ಹಾಕಿ ಮಿಶ್ರ ಮಾಡುತ್ತಾ ಮಾಗಿಸಬೇಕು
 • ಈರುಳ್ಳಿ ಚೂರುಗಳನ್ನು ಹಾಕಿ ಸ್ವಲ್ಪ ಕೆಂಪಾಗುವವರೆಗೆ ಬೇಯಿಸಬೇಕು
 • ಒಗ್ಗರಣೆ ಪೂರ್ಣವಾಗಿ ಬೆಂದ ನಂತರ, ಒಲೆ ಆರಿಸಿ ಕೊಡಲೇ ಒಂದೆರಡು ಚಿಟಿಕೆ ಅರಿಶಿನಪುಡಿ ಬೆರಸಿ ಮಿಶ್ರ ಮಾಡಿ ಇರಿಸಿಕೊಳ್ಳಬೇಕು
 • ನೆನೆಸಿ ತೆಗೆದಿರಿಸಿದ್ದ ಮಂಡಕ್ಕಿಗೆ ಅಗತ್ಯ ಪ್ರಮಾಣದ ಉಪ್ಪು ಬೆರಸಿ ತಯಾರಾಗಿರುವ ಒಗ್ಗರಣೆಯನ್ನು ಸೇರಿಸಿ ಕೈಯಿಂದ ಚೆನ್ನಾಗಿ ಮಿಶ್ರಣ ಮಾಡಬೇಕು
 • ಕೊತ್ತಂಬರಿ ಸೊಪ್ಪಿನ ಚೂರುಗಳು, ತೆಂಗಿನ ತುರಿ ಸೇರಿಸಿ ಮತ್ತೆ ಬಿಸಿ ಮಾಡಿದರೆ ರುಚಿ ರುಚಿಯಾದ ಮಂಡಕ್ಕಿ ಉಸಲಿ ಸವಿಯಲು ತಯಾರು


ಮೆಣಸಿನಕಾಯಿ ಬೋಂಡಾಕ್ಕೆ ಬೇಕಾಗುವ ಪದಾರ್ಥಗಳು:
 1. ಖಾರ ಕಡಿಮೆ ಇರುವ ಬೋಂಡಾದ ಮೆಣಸಿನಕಾಯಿಗಳು
 2. ಕಡ್ಲೆ ಹಿಟ್ಟು (10-12 ಮೆಣಸಿನಕಾಯಿಗಳಿಗೆ 100-150 ಗ್ರಾಂ ಹಿಟ್ಟು ಬೇಕಾಗುತ್ತದೆ)
 3. ಸ್ವಲ್ಪ ಅಕ್ಕಿ ಹಿಟ್ಟು
 4. ಸ್ವಲ್ಪ ಜೀರಿಗೆ, ಸ್ವಲ್ಪ ಓಮ (ಅಜ್ವಾನ)
 5. ಉಪ್ಪು, ಅಡಿಗೆ ಸೋಡಾ ಪುಡಿ, ಶುದ್ಧ ಎಣ್ಣೆ
(ಗಮನಿಸಿ: ಕಡ್ಲೆ ಹಿಟ್ಟು ಉತ್ತಮ ಗುಣಮಟ್ಟದ್ದಾಗಿರಬೇಕು. ಅದರಲ್ಲಿ ಕೆಲವೊಮ್ಮೆ ಮೆಕ್ಕೆ ಜೋಳದ ಹಿಟ್ಟು ಕಲಬೆರಿಕೆಯಾಗಿರುತ್ತದೆ. ಅಂತಹ ಹಿಟ್ಟಿನಿಂದ ತಯಾರಿಸಿದ ಪದಾರ್ಥಗಳು ಒರಟಾಗಿರುವುದಲ್ಲದೇ ರುಚಿ ಕಡಿಮೆ)

ತಯಾರಿಸುವ ವಿಧಾನ:
 • ಹಸಿಮೆಣಸಿನಕಾಯಿಗಳನ್ನು ನೀರಿನಲ್ಲಿ ಸ್ವಚ್ಚ ಮಾಡಿಕೊಂಡು, ಹತ್ತಿ ಬಟ್ಟೆಯ ಮೇಲೆ ಹರಡಿ, ನೀರಿನ ಅಂಶ ಪೂರ್ಣವಾಗಿ ಹೋಗುವಂತೆ ವರೆಸಬೇಕು
 • ಸೂಜಿ ಅಥವಾ ಪಿನ್ನಿನಿಂದ ಅವುಗಳ ಮಧ್ಯದ ಸ್ವಲ್ಪ ಭಾಗ ಸೀಳಿ, ಒಳಗಿನ ಬೀಜಗಳನ್ನು ಸಾಧ್ಯವಾದಷ್ಟೂ ಉದುರಿಸಿ ತೆಗೆಯಬೇಕು
 • ಜರಡಿ ಮಾಡಿದ ಕಡ್ಲೆ ಹಿಟ್ಟಿಗೆ ಸುಮಾರು ಹತ್ತನೇ ಒಂದು ಭಾಗದಷ್ಟು ಅಕ್ಕಿ ಹಿಟ್ಟು ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು, ಒಂದೊಂದು ಚಮಚೆಯಷ್ಟು ಜೀರಿಗೆ, ಓಮ ಬೆರಸಬೇಕು
 • ಈ ಮಿಶ್ರಣಕ್ಕೆ 2-3 ಚಮಚಗಳಷ್ಟು ಚೆನ್ನಾಗಿ ಕಾಯಿಸಿರುವ ಎಣ್ಣೆಯನ್ನು ಹಾಕಿ ನೀರು ಸೇರಿಸುತ್ತಾ ಕಲಸಿ (ಮಿಶ್ರಣವು ಸುಮಾರು ಇಡ್ಲಿ ಹಿಟ್ಟಿನ ಹದಕ್ಕೆ ಇರಬೇಕು) ಸುಮಾರು 10-15 ನಿಮಿಷ ಹಾಗೆಯೇ ಇಡಬೇಕು (ಗಮನಿಸಿ: ಅಕ್ಕಿ ಹಿಟ್ಟು, ಕಾಯಿಸಿದ ಎಣ್ಣೆ ಸೇರಿಸುವುದರಿಂದ ಬೋಂಡಾ ಗರಿಗರಿಯಾಗಿರುತ್ತವೆ)
 • ಬಾಣಲೆಯಲ್ಲಿ ಚೆನ್ನಾಗಿ ಕಾದ ಎಣ್ಣೆಗೆ, ಜ್ವಾಲೆ ಸ್ವಲ್ಪ ಕಡಿಮೆ ಮಾಡಿಕೊಂಡು, ಒಂದೊಂದಾಗಿ ಹಸಿಮೆಣಸಿನಕಾಯಿಗಳನ್ನು ಹಿಟ್ಟಿನಲ್ಲಿ ಅದ್ದಿ ತೆಗೆದು ಎಣ್ಣೆಯಲ್ಲಿ ಹಾಕಿ ಹೊಂಬಣ್ಣ ಬರುವವರೆಗೆ ಕರಿಯಬೇಕು

(ಗಮನಿಸಿ: ಮೆಣಸಿನಕಾಯಿಗಳನ್ನು ಹಿಟ್ಟಿನಲ್ಲಿ ಅದ್ದಿ ತೆಗೆಯುವಾಗ, ಸೀಳಿರುವ ಭಾಗವನ್ನು ಮೇಲ್ಮುಖವಾಗಿರುವಂತೆ ಹಿಡಿದು, ಬಟ್ಟಲಿನ ಕಂಠಕ್ಕೆ ತಾಗಿಸುತ್ತಾ ಹೊರತೆಗೆದರೆ ಒಂದು ಮಗ್ಗುಲಿನ ಹಿಟ್ಟು ಇಲ್ಲವಾಗಿ, ಮೆಣಸಿನಕಾಯಿಗಳು ಎಣ್ಣೆಯ ನೇರ ಸಂಪರ್ಕಕ್ಕೆ ಬಂದು ಚೆನ್ನಾಗಿ ಬೇಯುವುದರ ಜೊತೆಗೆ ಆಕರ್ಷಕವಾಗಿಯೂ ಕಾಣುತ್ತವೆ)

ಮೆಣಸಿನಕಾಯಿ ಬೋಂಡಾ ಬಿಸಿಬಿಸಿಯಾಗಿರುವಾಗಲೇ ತಿನ್ನಲು ಚೆಂದ. ಬಿಸಿ ಬಿಸಿ ಮಂಡಕ್ಕಿ-ಮೆಣಸಿನಕಾಯಿ ಜೋಡಿ ಸೋನೆ ಮಳೆಯ ಅಥವಾ ಚಳಿಗಾಲದ ಸಂಜೆಗಳನ್ನು ಸುಂದರಗೊಳಿಸುವುದರಲ್ಲಿ ಅನುಮಾನವೇ ಇಲ್ಲ. ಪ್ರಯತ್ನಿಸಿ ನೋಡಿ....

ಲೇಖಕರ ಕಿರುಪರಿಚಯ
ಶ್ರೀಮತಿ ಬಿ. ಎಂ. ಚಂದ್ರವದನ

ಮೂಲತಃ ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲ್ಲೂಕಿನವರಾದ ಇವರು, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಗೃಹಿಣಿ.

ಅಪಾರ ದೈವಭಕ್ತಿ ಹೊಂದಿರುವ ಇವರು ಭಾವಗೀತೆಗಳು ಮತ್ತು ಹಳೆಯ ಕನ್ನಡ ಚಿತ್ರಗೀತೆಗಳನ್ನು ಕೇಳುವ ಹವ್ಯಾಸ ಹೊಂದಿದ್ದು, ವಿವಿಧ ಬಗೆಯ ಅಡಿಗೆ-ತಿಂಡಿಗಳನ್ನು ತಯಾರಿಸುವಲ್ಲಿ ಸಿದ್ಧಹಸ್ತರು.

Blog  |  Facebook  |  Twitter

3 ಕಾಮೆಂಟ್‌ಗಳು:

 1. ಆಹಾ ನೋಡಿದರೆ ಬಾಯಲ್ಲಿ ನೀರೂರುವಂತೆ ಬರೆದಿರುವ/ಕ್ಲಿಕ್ಕಿಸಿರುವ ನಿಮಗೆ ಧನ್ಯವಾದಗಳು. ತಯಾರಿಸುವ ವಿಧಾನ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು..

  ಪ್ರತ್ಯುತ್ತರಅಳಿಸಿ
 2. ಪಾವ್-ಭಾಜಿ, ಪಿಜಾ-ಬರ್ಗರ್ ಗಳ ಲೋಕದಲ್ಲಿ ದೇಸೀ ತಿಂಡಿಯ ಸವಿನೆನಪು ಹಾಗೂ ಸವಿರುಚಿಯ ಅನುಭವ ಮಾಡಿಸಿಕೊಟ್ಟ ನಿಮಗೆ ಅನಂತಾನಂತ ವಂದನೆಗಳು.

  ಪ್ರತ್ಯುತ್ತರಅಳಿಸಿ
 3. ಇದನ್ನು ನೋಡಿದಾಗ ನನ್ನ ನಾಲಿಗೆ ಚಪಲಕ್ಕೆ ತುತ್ತಾಗಿ , ಮತ್ತೆ ಮತ್ತೆ ದಿನವೂ ತಿನ್ನುವ ಆಸೆಯಾಗುತ್ತಿದೆ .ಅಷ್ಟು ಚೆನ್ನಾಗಿ ಮಾಡಿ ತೋರಿಸಿ, ವಿವರಿಸಿದ್ದಾರೆ .

  ಪ್ರತ್ಯುತ್ತರಅಳಿಸಿ