ಭಾನುವಾರ, ನವೆಂಬರ್ 27, 2011

ನಮ್ಮೂರ ಸಿಡಿ ಹಬ್ಬ

ಊರ ಹಬ್ಬ ಅಥವಾ ಜಾತ್ರೆ ಎಂದರೆ ನಮ್ಮ ಕಣ್ಣ ಮುಂದೆ ಸರಿಯುವುದು ಜನ ತುಂಬಿದ ಊರು, ಸಡಗರ ಸಂಭ್ರಮದ ಬೀದಿಗಳು, ಗ್ರಾಮದೇವತೆ, ಆ ಪ್ರದೇಶಕ್ಕೆ ಸೀಮಿತವಾದ ವಿಶಿಷ್ಟ ಆಚರಣೆಗಳು, ಸಂಪ್ರದಾಯಗಳು. ಇಂದಿಗೂ ನಗರದಲ್ಲಿ ಹುಟ್ಟಿ ಬೆಳೆದವರಿಗೆ ಜಾತ್ರೆಗಳದ್ದು ಅಪರಿಚಿತ ಅನುಭವ. ಹಳ್ಳಿಯ ಹಿನ್ನಲೆಯ ನಗರವಾಸಿಗಳಿಗೆ ನೆನಪುಗಳ ಮೆರವಣಿಗೆಗೊಂದು ಮತ್ತೊಂದು ಅವಕಾಶ.

ಬೃಹದಾಕಾರದ ದೀಪಾಲಂಕಾರ

ಇಲ್ಲೊಂದು ಊರು; ನಾನು ಓದಿ, ಬೆಳೆದ ಊರು, ಹೆಸರು - ಮಳವಳ್ಳಿ. ಸಕ್ಕರೆಯ ನಾಡು ಮಂಡ್ಯ ಜಿಲ್ಲೆಗೆ ಸೇರಿದ್ದು. ಬೆಂಗಳೂರಿನಿಂದ ಸುಮಾರು 104 ಕಿ.ಮಿ. ದೂರದಲ್ಲಿದೆ. 'ಸಿಡಿ ಹಬ್ಬ' ಇಲ್ಲಿಯ ಊರ ಹಬ್ಬ, 'ಸಿಡಿ ಜಾತ್ರೆ' ಅಂತಲೂ ಪ್ರಸಿದ್ಧ. ಪ್ರತಿ ವರ್ಷ ಜನವರಿಯ ಕೊನೆಯ ಅಥವಾ ಫೆಬ್ರವರಿಯ ಮೊದಲ ಹುಣ್ಣಿಮೆಗೆ ಬರುವ ಶುಕ್ರವಾರ ಹಾಗೂ ಶನಿವಾರದಂದು ಸಿಡಿ ಹಬ್ಬವನ್ನು ಆಚರಿಸುತ್ತಾರೆ. ಹಬ್ಬದ ಆಚರಣೆಗಳ ಉಸ್ತುವಾರಿ ಒಂದು ಪಂಗಡ ಅಥವಾ ಒಂದು ಜನಾಂಗಕ್ಕೆ ಸೇರಿದ್ದಲ್ಲ ಎಂಬುದು ಇಲ್ಲಿಯ ವಿಶೇಷತೆ. ಹಿಂದಿನ ಕಾಲದಿಂದಲೂ ಎಲ್ಲಾ ಕೋಮಿನವರು ಒಂದೊಂದು ಜವಾಬ್ದಾರಿ ಹೊತ್ತು, ಸೌಹಾರ್ದತೆಯಿಂದ ಹಬ್ಬ ಆಚರಿಸುತ್ತಾರೆ.

ಸಿಡಿ ಹಬ್ಬ

ಇಲ್ಲಿಯ ಗ್ರಾಮದೇವತೆ, ದಂಡಿನ ಮಾರಮ್ಮ. ಹಿಂದಿನ ಕಾಲದಲ್ಲಿ ರಾಜರು ದಂಡೆತ್ತಿ ಹೋಗುವ ಮುನ್ನ ಈ ದೇವತೆಯ ಆಶೀರ್ವಾದ ಪಡೆದು ಹೋಗುತ್ತಿದ್ದರು. ಆದ್ದರಿಂದ ಈ ದೇವಿಗೆ ದಂಡಿನ ಮಾರಮ್ಮ ಎಂಬ ಹೆಸರು ಪ್ರಾಪ್ತಿಯಾಯಿತೆನ್ನುತ್ತಾರೆ ಇಲ್ಲಿಯ ಸ್ಥಳೀಯರು. ಗ್ರಾಮಕ್ಕೆ ಯಾವುದೇ ರೀತಿಯ ಮಾರಕಗಳು ಬಾರದಿರಲಿ ಹಾಗೂ ಗ್ರಾಮಸ್ಥರು ಸುಭಿಕ್ಷವಾಗಿರಲೆಂದು ಸಿಡಿ ಹಬ್ಬವನ್ನು ಊರಿನ ಜನರು ಶ್ರದ್ಧೆಯಿಂದ ಆಚರಿಸುತ್ತಾರೆ. ಭಕ್ತಿ ಪೂರ್ವಕ ಹಬ್ಬದ ಆಚರಣೆಯಿಂದ ಸುಖ-ಶಾಂತಿ ಲಭಿಸುತ್ತದೆ ಮತ್ತು ತಮ್ಮ ಕೋರಿಕೆಗಳು ಈಡೇರುತ್ತವೆ ಎಂಬುದು ಇಲ್ಲಿಯ ಭಕ್ತರ ನಂಬಿಕೆ.

ದಂಡಿನ ಮಾರಮ್ಮ

ಹಬ್ಬದ ವಾರದ ಹಿಂದಿನ ಶುಕ್ರವಾರ ಮತ್ತು ಮಂಗಳವಾರದಂದು ದಂಡಿನ ಮಾರಮ್ಮ ದೇವಿಗೆ ಅದ್ದೂರಿ ಪೂಜೆ ಸಲ್ಲಿಸುವುದರ ಮೂಲಕ ಸಿಡಿ ಹಬ್ಬ ಪ್ರಾರಂಭವಾಗುತ್ತದೆ. ಶುಕ್ರವಾರದ ಸಂಜೆ ಸಿಡಿರಣ್ಣ ಅಲಂಕೃತಗೊಳ್ಳುವ ಸಮಯ. ಸುಮಾರು 44 ಅಡಿ ಉದ್ದದ ತವಸದ ಮರದ ಕಂಬಕ್ಕೆ ಮನುಷ್ಯನ ಕಂಚಿನ ಪ್ರತಿಮೆಯನ್ನು ನೇತು ಹಾಕಿ, ಬಲೂನು, ಹೂಗಳಿಂದ ಸಿಂಗರಿಸಿದ ರಥಕ್ಕೆ ಸಿಡಿರಣ್ಣ ಎಂದು ಹೆಸರು. ಮೆರವಣಿಗೆಗೆ ಹೊರಟ ಸಿಡಿರಣ್ಣನಿಗೆ ಬಾಳೆ ಹಣ್ಣು, ಜವನವನ್ನು ಎಸೆಯುವುದು ಪದ್ಧತಿ. ಬಹಳ ಹಿಂದಿನ ದಿನಗಳಲ್ಲಿ ಕಂಚಿನ ಪ್ರತಿಮೆಯ ಬದಲು ಮನುಷ್ಯನನ್ನು ನೇತು ಹಾಕುವ ಪ್ರತೀತಿಯಿತ್ತು. ಕಾಲ ಕ್ರಮೇಣ ಮನುಷ್ಯನನ್ನು ಕಂಬಕ್ಕೆ ನೇತು ಹಾಕುವ ಆಚರಣೆ ಹಿಂಸೆಯ ಸಂಕೇತವೆನಿಸಿ, ಕಂಚಿನ ಪ್ರತಿಮೆಯನ್ನು ಕಟ್ಟುವ ಪದ್ಧತಿ ಶುರುವಾಯಿತು.

ಸಿಡಿರಣ್ಣ ರಥ

ಹಬ್ಬದಲ್ಲಿ ಸಿಡಿರಣ್ಣನ ಜೊತೆಗೆ ಅಣ್ಣೂರು ತಿಬ್ಬಾದೇವಿ ಹಾಗೂ ತೊರೆ ಬೊಮ್ಮನಹಳ್ಳಿ ಪಟ್ಟಲದಮ್ಮ ದೇವಿಗಳ ಉತ್ಸವ ಮೂರ್ತಿಗಳು ಕೂಡ ಮೆರವಣಿಗೆಗೆ ಸಜ್ಜಾಗುತ್ತವೆ. ಅಲಂಕೃತಗೊಂಡ ಎಲ್ಲಾ ರಥಗಳು ರಾತ್ರಿಯೆಲ್ಲಾ ಊರಿನ ವಿವಿಧ ಬೀದಿಗಳಲ್ಲಿ ಮೆರವಣಿಗೆ ಹೊರಟು, ಬೆಳಗಿನ ಜಾವದ ಹೊತ್ತಿಗೆ ಪಟ್ಟಲದಮ್ಮನ ದೇಗುಲ ಸೇರುತ್ತದೆ. ಜನಪದ ಕಲಾ ತಂಡಗಳು, ಕೋಲಾಟಗಳು, ತಂಬಿಟ್ಟು ಆರತಿ ಹೊತ್ತ ಹೆಂಗಸರು ಹಾಗೂ ಮತ್ತಿತರ ಮನರಂಜನೆ ನೀಡುವ ತಂಡಗಳು ಮೆರವಣಿಗೆಯ ಜೊತೆಯಾಗುತ್ತಾರೆ. ಉತ್ಸವ ಮೂರ್ತಿಗಳ ಪೂಜೆಯ ನಂತರ, ಪೂಜಾರಿಯಿಂದ ಬೆಂಕಿ ಕೊಂಡ ಹಾಯಿಸುತ್ತಾರೆ. ತದ ನಂತರ ನೂರಾರು ಭಕ್ತರು ತಮ್ಮ ಹರಕೆಯ ನಿಮಿತ್ತ ಇಲ್ಲಿ ಬೆಂಕಿ ಕೊಂಡ ಹಾಯುತ್ತಾರೆ ಹಾಗೂ ಪ್ರಾಣಿಗಳನ್ನು ಬಲಿ ನೀಡಿ ಪೂಜೆ ಸಲ್ಲಿಸುತ್ತಾರೆ.

ತಿಬ್ಬಾ ದೇವಿ

ಜಾತ್ರೆಗಳ ಮತ್ತೊಂದು ವಿಶೇಷತೆ ಅಂಗಡಿಗಳು. ಕಡ್ಲೆಪುರಿ, ಬತಾಸು, ಕಡ್ಲೆಕಾಯಿ, ಬಲೂನು, ಬೊಂಬೆಗಳು, ಮಿಠಾಯಿಗಳು ಎಲ್ಲವೂ ಲಭ್ಯ. ಖರೀದಿಗಂತೂ ತುಂಬಾ ಆಯ್ಕೆಗಳು ಇರುತ್ತವೆ. ಅದರಲ್ಲೂ ಮಕ್ಕಳಿಗಂತೂ ವಿವಿಧ ಆಟಿಕೆಗಳು ಲಭ್ಯ. ದಿನವಿಡೀ ಜಾತ್ರೆಯ ಸಡಗರ ಸಂಭ್ರಮ ಊರಲೆಲ್ಲಾ ಕಂಡು ಬರುತ್ತದೆ.

ಸಂಭ್ರಮದ ಜಾತ್ರೆಗೆ ನೀವೂ ಮರೆಯದೇ ಬರುತ್ತೀರಲ್ಲ..?? ನೆನಪುಗಳ ಮೆರವಣಿಗೆಗೆ ಸಜ್ಜಾಗುತ್ತೀರಲ್ಲ..?? ನಿಮಗೆಲ್ಲರಿಗೂ ಹಬ್ಬದ ಪ್ರೀತಿಪೂರ್ವಕ ಆಮಂತ್ರಣ...

ಲೇಖಕರ ಕಿರುಪರಿಚಯ
ಶ್ರೀಮತಿ ಪವಿತ್ರ ಹೆಚ್.

ಸಾಫ್ಟ್ ವೇರ್  ಪ್ರಪಂಚದ ಮಾಹಿತಿ ಸುರಕ್ಷೆಯ ಬಗ್ಗೆ ರಿಸರ್ಚ್ ಸ್ಪೆಷಲಿಸ್ಟ್ ಆಗಿರುವ ಇವರು, ಪರಿಸರ ಪ್ರೇಮಿ. ಕಂಪ್ಯೂಟರ್ ಸೈನ್ಸ್ ನಲ್ಲಿ ಸ್ನಾತಕೋತ್ತರ ಪದವಿಯ ಜೊತೆಗೆ ವೈದ್ಯಕೀಯ ನ್ಯಾಯಶಾಸ್ತ್ರ (Forensic Science) ದಲ್ಲಿ ಬಳಸುವ ಬರವಣಿಗೆಯ ವಿಶ್ಲೇಷಣೆ (Handwriting Analysis) ಯಲ್ಲಿಯೂ ಪದವಿಯನ್ನು ಹೊಂದಿದ್ದಾರೆ.

ಇವರು ಪ್ರಕೃತಿಯ ಸಹಜ ಸೌಂದರ್ಯವನ್ನು ಕ್ಯಾಮೆರಾದ ಕಣ್ಣಿನಿಂದ ಸೆರೆಹಿಡಿಯುವ ಉದಯೋನ್ಮುಕ ಛಾಯಾಗ್ರಾಹಕಿ ಎಂಬುದಕ್ಕೆ ಮೇಲಿನ ಛಾಯಾಚಿತ್ರಗಳೇ ಸಾಕ್ಷಿ.

Blog  |  Facebook  |  Twitter

6 ಕಾಮೆಂಟ್‌ಗಳು:

 1. ಇಂದಿನ ನಮ್ಮೂರಾ ಸಿಡಿ ಹಬ್ಬದ ಲೇಖಕಿ ಯಾದ ಶ್ರೀಮತಿ ಪವಿತ್ರ ಹೆಚ್ ರವರು ತಮ್ಮ ಊರಿನ ಜಾತ್ರೆ ಯನ್ನು ನಮ್ಮೆಲ್ಲರ ಕಣ್ಣಿಗೆ ಕಟ್ಟುವಂತೆ ,ಕಣ್ಣುಮುಂದೆ ನೋಡಿದಂತೆ ಸ್ವಾರಸ್ಯಕರವಾಗಿ ವಿವರಿಸಿದ್ದಾರೆ .ನಾನು ನೋಡಿದಂತೆ ಎಲ್ಲಾ ಜಾತ್ರೆಗಳಲ್ಲಿ ಸಿಡಿ ,ಹಾಗೂ ಸಿಡಿರಣ್ಣ ಇರುವುದಿಲ್ಲ .ಇದುಕೆಲವು ಪ್ರಧೇಶಗಳಿಗೆ ಮಾತ್ರ ಸಿಮಿತವಾಗಿರುತ್ತದೆ .ಇವರ ಜಾತ್ರೆ ಯ ಸನ್ನಿವೇಶ ಸಂಭ್ರಮ ಆಚರಣೆಗಳನ್ನು ಚನ್ನಾಗಿ ವರ್ಣಿಸಿದ್ದಾರೆ ...

  ಪ್ರತ್ಯುತ್ತರಅಳಿಸಿ
 2. ಡಾ.ಮೂರ್ತಿಯವರೆ, ಲೇಖನದ ಮೆಚ್ಚುಗೆಯ ನುಡಿಗಳಿಗೆ ನನ್ನ ವಂದನೆಗಳು.

  ಪ್ರತ್ಯುತ್ತರಅಳಿಸಿ
 3. ಪವಿತ್ರ ಅವರೇ ಮಳವಳ್ಳಿ ಐತಿಹಾಸಿಕ ಸಿಡಿ ಹಬ್ಬದ ಬಗ್ಗೆ ಒಳ್ಳೆಯ ಚಿತ್ರ ಲೇಖನ ಪ್ರಕಟಿಸಿ ನನ್ನನ್ನು ಬಾಲ್ಯಕ್ಕೆ ಕರೆದುಕೊಂಡು ಹೋದಿರಿ. ಹೌದು ಸಿದಿಹಬ್ಬ ಹಿಂದಿನ ದಿಂದ ದಂಡಿನ ಮಾರಮ್ಮನಿಗೆ ತಂಬಿಟ್ಟು ಬಾಗಿನ ತೆಗೆದುಕೊಂಡು ಅಕ್ಕ ಪಕ್ಕದ ಗ್ರಾಮಗಳ ಹೆಣ್ಣುಮಕ್ಕಳು ತಲೆಯ ಮೇಲೆ ಹೊತ್ತುಕೊಂಡು ಕೈಯಲ್ಲಿ ಹಿಡಿದುಕೊಳ್ಳದೇ ಸಂತಸದಿಂದ ಸಾಗುತ್ತಿದ್ದ ದೃಶ್ಯ ಕಣ್ಣಿಗೆ ಬರುತ್ತದೆ.ಅಲ್ಲಿ ಒಬ್ಬರು ವಯಸ್ಸಾದ ಅಜ್ಜ ಅಂಗಡಿ ಹಾಕಿಕೊಂಡು ಪೂಜೆ ಹಾಗು ವ್ಯಾಪಾರ ಮಾಡುತ್ತಿದ್ದದ್ದು ದಂಡಿನ ಮಾರಮ್ಮ ದೇವಾಲಯದ ದೃಶ್ಯ ಕಣ್ಣಿಗೆ ಕಟ್ಟಿದಂತಿದೆ. ಇನ್ನು ಸುಲ್ತಾನ್ ರಸ್ತೆಯಲ್ಲಿನ ಪತ್ತಳದಮ್ಮ ದೇವಾಲಯದ ಬಳಿ ರಾತ್ರಿಎಲ್ಲಾ ಸಿಡಿಯ ಸಡಗರ ಕಂಡಿದ್ದೇನೆ.ನಂತರದ ದಿನಗಳಲ್ಲಿ ಸಿಡಿಹಬ್ಬ ಕೋಮು ಗಲಬೆ ಕಾರಣ ನಿಂತಿದ್ದು ಮತ್ತೆ ಎಲ್ಲರ ಮನೊಲಿಕೆ ನಂತರ ಶುರುವಾಗಿದೆ.ಆದರೂ ಸಿಡಿ ಹಬ್ಬದ ಬಗ್ಗೆ ಒಳ್ಳೆಯ ಲೇಖನ ಬರೆದು ನನ್ನನ್ನು ಮಳವಳ್ಳಿಯ ಲೋಕಕ್ಕೆ ಕರೆದೊಯ್ದ ನಿಮಗೆಕ್ ಥ್ಯಾಂಕ್ಸ್. ಮಳವಳ್ಳಿ ಸುತ್ತ ಮುತ್ತ ಬಹಳಷ್ಟು ಪ್ರದೇಶಗಳ ಪರಿಚಯ ನಿಮ್ಮಿಂದ ಆಗಲಿ. ನಿಮ್ಮೂರಿನ ತೂಗಾಡುವ ಸೇತುವೆ, ಅಲ್ಲಿರುವ ಗ್ರಾಮದೇವತೆಯ ತೆರೆದ ಸ್ತಳ, ಶಿಂಷಾ ಜಲಪಾತ, ಅಲ್ಲಿರುವ ಸುಂದರ ಪ್ರವಾಸಿ ಬಂಗಲೆ, ಅಲ್ಲಿರುವ ಅಬ್ಬಿಸ್ ರೆಸಾರ್ಟ್ ,ಧನಗೂರಿನ ಮುಪ್ಪಿನ ಷಡಕ್ಷರ ದೇವ , ದಬ್ಬಳ್ಳಿ ಸುತ್ತಮುತ್ತ , ನೆಟ್ಕಲ್ ಕೆರೆ, ಕುಂದೂರ್ ಬೆಟ್ಟ ಇವುಗಳ ಬಗ್ಗೆ ಬಹುಷಃ ನೀವು ಕಂಡಿರುವ , ಕೇಳಿರುವ , ಮಾಹಿತಿಯನ್ನು ಎಲ್ಲರಿಗೂ ಪರಿಚಯಿಸಿ. ಅವುಗಳನ್ನು ಓದಲು ನಾನೂ ಕಾತರದಿಂದ ಕಾಯುತ್ತಿದ್ದೇನೆ. ನಿಮಗೆ ಧನ್ಯವಾದಗಳು.
  ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

  ಪ್ರತ್ಯುತ್ತರಅಳಿಸಿ
 4. ಬಾಲು ಅವರೆ, ನಿಮ್ಮ ಮೆಚ್ಚಿಗೆ ಹಾಗು ಹಲವಾರು ವೈಶಿಷ್ತವಿರುವ ಸ್ಠಳಗಳ ಪಟ್ಟಿಗೆ ಧನ್ಯವಾದಗಳು. ನನಗೆ ತಿಳಿದಿರುವ ವಿಚಾರಗಳನ್ನು ಖಂಡಿತ ನಿಮ್ಮೊಂದಿಗೆ ಹಂಚಿಕೊಳ್ಳುವೆ.

  ಪ್ರತ್ಯುತ್ತರಅಳಿಸಿ
 5. ಸಿಡಿಹಬ್ಬದ ಸಡಗರವನ್ನು ನಮ್ಮ ಕಣ್ಣಿಗೆ ಕಟ್ಟುವಂತೆ ಅತ್ಯುತ್ತಮ ಛಾಯಾಚಿತ್ರಗಳೊಂದಿಗೆ ನಿರೂಪಿಸಿದ್ದೀರಿ. ಮುಂದಿನ ಸಿಡಿಹಬ್ಬಕ್ಕೆ ನಾವೆಲ್ಲರೂ ನಿಮ್ಮೂರಿಗೆ ಹಾಜರಾಗುತ್ತೇವೆ..

  ಪ್ರತ್ಯುತ್ತರಅಳಿಸಿ
 6. ಸಿಡಿಹಬ್ಬದ ಬಗ್ಗೆ ತಿಳಿಸಿದಕ್ಕೆ ಧನ್ಯವಾದಗಳು

  ಪ್ರತ್ಯುತ್ತರಅಳಿಸಿ