ಗುರುವಾರ, ನವೆಂಬರ್ 3, 2011

ಬೇಂದ್ರೆ ಮಾಸ್ತರ್

ವಿಶ್ವಮಾತೆಯ ಗರ್ಭಕಮಲಜಾತಪರಾಗಪರಮಾಣುಕೀರ್ತಿ ನಾನು
ಭೂಮಿತಾಯಿಯ ಮಯ್ಯ ಹಿಡಿ-ಮಣ್ಣ ಗುಡಿಗಟ್ಟಿ ನಿಂತಂಥ ಮೂರ್ತಿ ನಾನು
ಭರತಮಾತೆಯ ಕೋಟಿ ಕಾರ್ತಿಕೊತ್ಸವದಲ್ಲಿ ಮಿನುಗುತಿಹ ಜ್ಯೋತಿ ನಾನು
ಕನ್ನಡದ ತಾಯಿ ತಾವರೆಯ ಪರಿಮಳ ಉಂಡು ಬೀಸುತಿಹ ಗಾಳಿ ನಾನು
ನನ್ನ ತಾಯಿಯ ಹಾಲು-ನೆತ್ತರವ ಕುಡಿದಂಥ ಜೀವಂತ ಮಮತೆ ನಾನು
ಈ ಐದಿದಯರೇ ಪಂಚಪ್ರಾಣಗಳಾಗಿ ಈ ಜೀವ ದೇಹನಿಹನು
ಹೃದಯಾವಿಂದದಲ್ ಇರುವ ನಾರಾಯಣನೆ ತಾನಾಗಿ ದತ್ತ ನರನು
ವಿಶ್ವದೊಳನುಡಿಯಾಗಿ ಕನ್ನಡಿಸುತಿಹನಿಲ್ಲಿ ಅಂಬಿಕಾತನಯನಿವನು
ಇಂಥವನು ನಾನು. ಇವನು ಕವಿ
- ಅಂಬಿಕಾತನಯದತ್ತ

ಬೇಂದ್ರೆಯವರ ಪೂರ್ಣ ನಾಮಧೇಯ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಎಂದು. ಅವರ ಕವನಗಳ ಅರ್ಥ-ವಿಸ್ತಾರವನ್ನರಿಯದವರು ಅವರಿಗೆ ಕೊಟ್ಟ ಬಿರುದು: Mystic Poet (ನಿಗೂಢ ಕವಿ) ಎಂದು. ಬೇಂದ್ರೆಯವರು, Mystic Poet ಎಂದು ಹೆಸರು ಪಡೆದಂಥ ಒಬ್ಬ ಅಪೂರ್ವ ಕವಿ. ಇನ್ನೊಂದು ವಿಧದಿಂದ ನೋಡುವುದಾದರೆ, ಆ ಹೆಸರಿನಿಂದ ಕರೆಯಿಸಿಕೊಳ್ಳಲು ಅರ್ಹರಾದ ಕವಿ, ಭಾರತದಲ್ಲಿ  ಪ್ರಾಯಶಃ ಅವರೊಬ್ಬರೇ. ಏಕೆಂದರೆ, ಶೇಖಡಾ ೯೯ ಮಂದಿಗೆ ಅವರ ಕವನಗಳು ಅರ್ಥವಾಗುವುದಿಲ್ಲ. ಕನ್ನಡದ ಓರ್ವ ಕವಿ ಅವರಿಗೆ 'ನಿಮ್ಮ ಕವನಗಳು ತುಂಬಾ ಶಾಸ್ತ್ರ್ರೀಯವಾಗಿರುತ್ತವೆ, ಯಾರಿಗೂ ಅರ್ಥವಾಗದ ವೈದಿಕ ಭಾಷೆಯಲ್ಲಿ ಕವನಗಳನ್ನು ರಚಿಸಿ Mystic Poet ಎಂದು ಹೆಸರು ಪಡೆದಿದ್ದೀರಿ. ನಿಮ್ಮ ಕವನಗಳನ್ನು ಬಹಿಷ್ಕರಿಸಬೇಕು' ಎಂದು ಹೇಳಿದರಂತೆ. ಆಗ ಬೇಂದ್ರೆಯವರು 'ನಾನು ವೈದಿಕ ಸಂಪ್ರದಾಯವಿರುವ ಬ್ರಾಹ್ಮಣರ ಮನೆಯಲ್ಲಿ ಹುಟ್ಟಿದ್ದೇನೆ. ಹಾಗಾಗಿ ಸಂಸ್ಕೃತ ಹಾಗೂ ವೈದಿಕ ಭಾಷೆ ನನ್ನ ಕವನಗಳಲ್ಲಿ ಸಹಜವಾಗಿ ಬರುತ್ತವೆ. ನಾನೇನೂ ದೇವರಲ್ಲಿ ನನ್ನನ್ನು ಬ್ರಾಹ್ಮಣರ ಮನೆಯಲ್ಲೇ ಹುಟ್ಟಿಸು ಅಂತ ಕೇಳಿಕೊಂಡಿರಲಿಲ್ಲ; ಆದರೆ ಬ್ರಾಹ್ಮಣರ ಮನೆಯಲ್ಲಿ ಹುಟ್ಟಿರುವುದರಿಂದ ನನಗೆ ಪಶ್ಚಾತ್ತಾಪವೇನೂ ಇಲ್ಲ. ನೀವು ಹೇಳಿದಿರಿ ನನ್ನ ಕವನಗಳು ಯಾರಿಗೂ ಅರ್ಥ ಆಗುವುದಿಲ್ಲ ಎಂದು. ನಾನು ಯಾರಿಗಾಗಿಯೂ ನನ್ನ ಕವನಗಳನ್ನು ಬರೆಯುವುದಿಲ್ಲ ಹಾಗೂ ನಾನು ಯಾರಿಗೂ ನನ್ನ ಕವನಗಳನ್ನು ಅರ್ಥಮಾಡಿಕೊಳ್ಳಿ ಎಂದು ಕೇಳಿಕೊಂಡಿಲ್ಲ. ನನ್ನ ಕವನಗಳನ್ನು ಬಹಿಷ್ಕಾರ ಹಾಕುವ ಅಧಿಕಾರವೂ ಯಾರಿಗೂ ಇಲ್ಲ’ ಎಂದರಂತೆ. ಇಂಥಹ ಉತ್ತರ ಬೇಂದ್ರೆಯವರು ಮಾತ್ರ ಕೊಡಲು ಸಾಧ್ಯ.

ಒಮ್ಮೆ, ಉದಯವಾಣಿ ಪತ್ರಿಕೆಯ ಸಂಪಾದಕರಾಗಿದ್ದ ಗೋವಿಂದಾಚಾರ್ಯ ಬನ್ನಂಜೆ ಅವರು ಬೇಂದ್ರೆಯವರನ್ನು 'ನಿಮ್ಮ ಕವನಗಳು ನಮ್ಮ ಪತ್ರಿಕೆಯಲ್ಲಿ ಪ್ರಕಟವಾಗುತ್ತಿವೆ. ಆದರೆ ಬಹಳ ಮಂದಿಗೆ ಅವು ಅರ್ಥವಾಗುತ್ತಿಲ್ಲ, ಆದ್ದರಿಂದ ತಾವು ಅವುಗಳ ಅರ್ಥವನ್ನು ವಿವರಿಸಿದರೆ ನಮ್ಮ ಓದುಗರಿಗೆ ಉಪಯೋಗವಾಗುತ್ತದೆ' ಎಂದು ಕೇಳಿದರಂತೆ. ಆಗ ಬೇಂದ್ರೆ ಕೊಟ್ಟ ಉತ್ತರವನ್ನು ಬನ್ನಂಜೆಯವರು ಇಂದಿಗೂ ನೆನಪಿಸಿಕೊಳ್ಳುತ್ತಾರೆ - 'ಆ ಕವನಗಳನ್ನು ಬೇಂದ್ರೆ ಬರೆದದ್ದಲ್ಲ. ಅಂಬಿಕಾತನಯದತ್ತ ಬರೆದ. ಬರೆದು ಸತ್ತ. ಅದರ ಅರ್ಥ ನನಗೂ ಗೊತ್ತಿಲ್ಲ. ನಿಮಗೆ ಗೊತ್ತಾದರೆ ನನಗೂ ಹೇಳಿ. ನಾನು ನನ್ನ ಅನುಭವದ ಹಿನ್ನೆಲೆಯಲ್ಲಿ ಕವನಗಳನ್ನು ಬರೆದಿರುತ್ತೇನೆ, ಅದನ್ನು ನೀವು ನಿಮ್ಮ ಅನುಭವದ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳುತ್ತೀರಿ. ಆದ್ದರಿಂದ ನಿಮಗೆ ಏನೇನು ಅರ್ಥಗಳು ಹೊಳೆಯುತ್ತವೆಯೋ ಅವೆಲ್ಲಾ ನನ್ನ ಕವನದ ಅರ್ಥಗಳು'. ಇದನ್ನೇ  ಪ್ರಾಯಶಃ ಅವರು ಹೇಳಿದ್ದು:
"ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತ"
ಎಂದು. ಇನ್ನೊಂದೆಡೆ ಹೇಳಿದ್ದಾರೆ:
"ಅಲ್ಲೋ ಮೌನದ ಸೆರಗಿನಲಿ ಅಂತರಂಗದ ಬೆರಗಿನಲಿ ಶಬ್ದದ ಅರ್ಥದ ಸದ್ಭಾವದ ಹೆರಿಗೆ"

ಕವನ ಅಂದರೆ ನಮ್ಮ ಅಂತರಂಗದ ಮೌನದಿಂದ ಹುಟ್ಟಿದ ಮಾತು. ಶಬ್ದ ಮತ್ತು ಅದರ ಅರ್ಥ ಇವೆರಡರ ಮಧ್ಯದಲ್ಲಿ ಇರುವ ಮೌನವೇ ಕಾವ್ಯ. ಅದು ತಿಳಿಯಬೇಕಾದ್ದನ್ನು ಹೊಳೆಯಿಸುತ್ತದೆ ಎಂದು ಅಂಬಿಕಾತನಯದತ್ತರ ಅನಿಸಿಕೆ. ತಿಳಿದುಕೊಳ್ಳುವುದು ಮತ್ತು ಹೊಳೆಯಿಸಿಕೊಳ್ಳುವುದು - ಇವೆರಡರ ಅರ್ಥ ವ್ಯತ್ಯಾಸ ಗೊತ್ತಿಲ್ಲದಿರುವವರಿಗೆ ಇದು ವ್ಯರ್ಥ. ಅವರ ಕವನಗಳಿಗೆ ನಿಘಂಟುಗಳನ್ನು ನೋಡಿ ಅರ್ಥ ಮಾಡುವುದೇ ಒಂದು ದೊಡ್ಡ ದಡ್ಡತನ.

ಬೇಂದ್ರೆಯವರು ಗೋವಿಂದಾಚಾರ್ಯರಿಗೆ ಕೊಟ್ಟ ಉತ್ತರದಿಂದ ನಮಗೆ ಒಂದು ವಿಷಯ ಅರ್ಥವಾಗುತ್ತದೆ - ಅಂಬಿಕಾತನಯದತ್ತ ಎಂಬುದು ಬೇಂದ್ರೆಯವರ ಕಾವ್ಯನಾಮವಷ್ಟೇ ಅಲ್ಲ. ಅದನ್ನು ಅವರು ಅವರ ಸ್ಫೂರ್ತಿಗೆ ಕೊಟ್ಟುಕೊಂಡ ಹೆಸರು. ಕವನ ಬರೆಯುವ ಸ್ಪೂರ್ತಿ ಬಂದಾಗ ಬೇಂದ್ರೆ ‘ಅಂಬಿಕಾತನಯದತ್ತ’ ಆಗಿಬಿಡುತ್ತಿದ್ದರು. ಅವರ ಕೃತಿಗಳು, ಒಂದೋ ಎರಡೋ ಪುಸ್ತಕಗಳನ್ನು ಓದಿ, ನಿಘಂಟು-ಕೋಶಗಳಿಂದ ಪದಗಳನ್ನು ಹೆಕ್ಕಿ ಹಚ್ಚಿದ ಪದ-ಪುಂಜಗಳಲ್ಲ. ಅಂಬಿಕಾತನಯದತ್ತರು ಆಡಿದ ಮಾತೆಲ್ಲ ಕವನಗಳಾದವು. ಅವರ ಒಂದೊಂದು ಕವನವೂ ಅವರ ಅಪಾರವಾದ ಜ್ಞಾನಸಾಗರದ ಸಾರಗಳು. ಗಣಿತ, ವಿಜ್ಞಾನ, ಇತಿಹಾಸ, ವೇದ-ಪುರಾಣಗಳು ಇವೆಲ್ಲವನ್ನೂ ಹೆಣೆದು ಹಣಿದ ನುಡಿಹನಿಗಳು. ಜ್ಞಾನಪೀಠ ಪ್ರಶಸ್ತಿ ಪಡೆದ ನಾಕುತಂತಿ ಕವನ ಸಂಕಲನ ಪ್ರಾಯಶಃ ಶೇಖಡಾ ೯೯ ಮಂದಿಗೆ ಅರ್ಥವಾಗಿಲ್ಲ, ಎಷ್ಟು ಸಾರಿ ಓದಿದರೂ ಅರ್ಥವಾಗುವುದಿಲ್ಲ (ನನ್ನನ್ನೂ ಸೇರಿಸಿಕೊಂಡು). ಅಂಥಹ ಕವನಗಳನ್ನು ಲೀಲಾಜಾಲವಾಗಿ ಬರೆದ ಪ್ರೌಢಿಮೆಯೇ ಅಂಬಿಕಾತನಯದತ್ತ. ಶರಪಂಜರ ಚಲನಚಿತ್ರದ ‘ಉತ್ತರಧ್ರುವದಿಂ ದಕ್ಷಿಣ ಧ್ರುವಕೂ’ ಎಂಬ ಹಾಡು ಬಹಳ ಜನಪ್ರಿಯ. ಅದನ್ನು ಬರೆದದ್ದು ಅಂಬಿಕಾತನಯದತ್ತ. ಆ ಹಾಡಿನಲ್ಲಿ ಅಂಬಿಕಾತನಯದತ್ತರು ಬಿನ್ನವಿಸಿದ್ದು ಭೂಮಿಯ ಗುರುತ್ವಾಕರ್ಷಣೆಯನ್ನು. ಆದರೆ ಚಲನಚಿತ್ರದಲ್ಲಿ, ಆ ಹಾಡನ್ನು, ಪ್ರೇಮಿಗಳು ಮರಗಳನ್ನು ಸುತ್ತುವಂತೆ ಚಿತ್ರೀಕರಿಸಿರುವ ನಮ್ಮ ಚಿತ್ರರಂಗದ ಮೇಧಾವಿಗಳಿಗೆ ನಾನು ಈ ಲೇಖನದಲ್ಲಿ ಕೆಟ್ಟ ವಿಶೇಷಣಗಳನ್ನು ಹಾಕಲು ಇಷ್ಟಪಡುವುದಿಲ್ಲ. ಆ ಹಾಡಿನ ಬಗ್ಗೆ ಬೇಂದ್ರೆಯವರ ಮೊಮ್ಮಗ ಒಂದು ವೆಬ್ ಸೈಟ್ ನಲ್ಲಿ ವಿವರಿಸುರುವುದನ್ನು ಯಾರು ಬೇಕಾದರೂ ಓದಿ ತಿಳಿಯಬಹುದು.

ಅಂಬಿಕಾತನಯದತ್ತ ತನ್ನ ಕವನಗಳಲ್ಲಿ ಬಹಳ ಶ್ಲೇಶಗಳನ್ನು ಬಳಸಿರುತ್ತಾರೆ. ಒಂದು ಪದಕ್ಕೆ ಎರಡೆರಡು ಅರ್ಥಗಳು. ಅವರ ಒಂದು ಕವನಸಂಕಲನದ ಹೆಸರು 'ಬಾಹತ್ತರ' ಎಂದು. ಅದನ್ನು ಅವರ ಎಪ್ಪತ್ತೆರಡನೆ ವಯಸ್ಸಿನಲ್ಲಿ ಬರೆದದ್ದು. ಮರಾಠಿಯಲ್ಲಿ ಬಾಹತ್ತರ ಅಂದರೆ ಎಪ್ಪತ್ತೆರಡು, ಕನ್ನಡದಲ್ಲಿ ಓದಿದಾಗ ‘ಹತ್ತಿರ ಬಾ’ ಆಗುತ್ತದೆ. ಹೀಗೆ, 'ನೋಡು' ಎಂಬ ಕವನ: ಕನ್ನಡದ 'ನೋಡು' ಮಾತ್ರ ಅಲ್ಲ ಆಂಗ್ಲದ know ಮತ್ತು do. ಅಂದರೆ ತಿಳಿದು ಮಾಡು. ಹೀಗೆ ಬೇರೆ ಬೇರೆ ಭಾಷೆಗಳ ಅರ್ಥ-ವಿಶೇಷಗಳನ್ನು ಕನ್ನಡದ ಪದಗಳಲ್ಲಿ ಅಳವಡಿಸುವ ಜ್ಞಾನದ ಆಳದ ಜಾಣ್ಮೆ ಬೇಂದ್ರೆಯವರದ್ದಾಗಿತ್ತು. ಇದೇ ಹಿನ್ನಲೆಯಲ್ಲಿ ನಡೆದುಬಂದ ಕವನ ಸಂಕಲನವೇ ನಾಕು ತಂತಿ. ಕನ್ನಡ-ಸಾಹಿತ್ಯ-ಕಿರೀಟವನ್ನು ಎರಡನೆಯ ಜ್ಞಾನಪೀಠ ಪ್ರಶಸ್ತಿ ಎಂಬ ಮಣಿರತ್ನದಿಂದ ಅಲಂಕರಿಸಿದ ಕೃತಿ ಸಂಕಲನ. ಆ ನಾಕು ತಂತಿಯ ಒಂದು ತುಣುಕನ್ನು ಇಲ್ಲಿ ಯಥಾ ಮತಿ ಅನುವಾದಿಸುವ ಚಪಲ.

(ಇದು ನಾನು ಬೇರೆಯವರಿಂದ ಕೇಳಿ ತಿಳಿದ ವಿಷಯ. ನಾನೆ ಸ್ವತಃ ಅರ್ಥಮಾಡಿಕೊಳ್ಳುವ ಜಾಣ್ಮೆಯಾಗಲಿ ಪಾಂಡಿತ್ಯವಾಗಲಿ ನನ್ನಲ್ಲಿಲ್ಲ)

"ನೀನು ನಾನು ಆನು ತಾನು ನಾಕೇ ನಾಕು ತಂತಿ"

ನಿನ್ನನ್ನು ಬೇರೆಯವರು ಹೇಗೆ ತಿಳಿದಿದ್ದಾರೋ ಅದು 'ನೀನು'. ನಿನ್ನನ್ನು ನೀನೆ ಏನೆಂದು ತಿಳಿದಿರುವೆಯೋ ಅದು 'ನಾನು'. ಎರಡೂ ನಿಜವಾಗಿರಬಹುದು, ಎರಡೂ ಸುಳ್ಳೂ ಆಗಿರಬಹುದು. ನಿನ್ನ ಬಗ್ಗೆ ಬೇರೆಯವರು ತಪ್ಪು ತಿಳಿದಿರಬಹುದು. ನಿನ್ನ ಬಗ್ಗೆ ನೀನೂ ತಪ್ಪು ತಿಳಿದುಕೊಂಡಿರಬಹುದು. ಆದರೆ ನೀನು ನಿಜವಾಗಿಯೂ ಏನು ಆಗಿದ್ದೀಯೋ ಅದೇ 'ಆನು'. ನಾನು, ನೀನು ಮತ್ತು ಆನು ಇವುಗಳು ಒಂದು ಸೀಮಿತವಾದ ವ್ಯಕ್ತಿತ್ವ. ಎಲ್ಲ ಕಡೆಗೂ ತಾನೇ ತಾನಾಗಿ ಇರುವ ಒಂದು ಸತ್ಯವಿದೆ, ಅದೇ 'ತಾನು'. ಈ 'ತಾನು' ಎಲ್ಲರಲ್ಲಿಯೂ ಇರುವುದು. ಅದೇ ದೇವರು. ಇವೇ ನಮ್ಮ ವ್ಯಕ್ತಿತ್ವದ ನಾಲ್ಕು ಮುಖಗಳು. 

ಈ ರೀತಿಯಾಗಿ ಅರ್ಥಗಳ ಕುಂಬಳಕಾಯನ್ನು ತಮ್ಮ ಕಾವ್ಯವೆಂಬ ಸಾಸಿವೆಯಲ್ಲಿ ತೂರಿಸುವ ವಾಕ್ಚಾತುರ್ಯ ಕೇವಲ ಬೇಂದ್ರೆಯವರ ಪಾಲಿಗೆ ಸೇರಿದ್ದು; ಅರ್ಥಾತ್ ಅಂಬಿಕಾತನಯದತ್ತರ ಪಾಲಿಗೆ ಸೇರಿದ್ದು.

‘soap ಹಚ್ಕೊಳೋ ತಲೆ ಬಾಚ್ಕೋಳೋ’ ಅಂತ ಬರೆಯೋ ಈ ಕಾಲದಲ್ಲಿ ಬೇಂದ್ರೆಯವರಂಥಹ ವಿಶೇಷ ಚೇತನದ ಬಗ್ಗೆ ಒಂದು ಬರಹ ಬರೆಯುವ ಅವಕಾಶ ಮಾಡಿಕೊಟ್ಟದ್ದಕ್ಕೆ ಕನ್ನಡ ಕಹಳೆ ತಂಡಕ್ಕೆ ನನ್ನ ವಿಶೇಷ ನಮಸ್ಕಾರಗಳನ್ನು ನಿವೇದಿಸುತ್ತಾ, ಕನ್ನಡ ಕಹಳೆ ವಿಶ್ವದಾದ್ಯಂತ ಹರಡುವಂತೆ ಆಗಲಿ ಎಂದು ಹಾರೈಸುತ್ತಾ, ನನ್ನ ಬಾಲ ಭಾಷೆಯ ಈ ಲೇಖನವನ್ನು ಮುಗಿಸುತ್ತೇನೆ.

(ಈ ನನ್ನ ಮೊಟ್ಟ-ಮೊದಲ ಕನ್ನಡ ಲೇಖನದಲ್ಲಿ ಏನಾದರೂ ತಪ್ಪಿದ್ದರೆ ದಯವಿಟ್ಟು ನನ್ನ ಗಮನಕ್ಕೆ ತಂದು ನನ್ನನ್ನು ತಿದ್ದಬೇಕಾಗಿ ಸವಿನಯ ಪ್ರಾರ್ಥನೆ)

ಅಭಿವಂದನೆಗಳು ಹಾಗೂ ಅಭಿನಂದನೆಗಳು.

ಲೇಖಕರ ಕಿರುಪರಿಚಯ
ಶ್ರೀ ವಿಜಯ್ ಚಿಂತಾಮಣಿ.

ಕಲಿಯೊಕೆ ಕೋಟಿ ಭಾಷೆ ನುಡಿಯೋಕೆ ಒಂದೇ ಭಾಷೆ ಅಂತ ನಂಬಿ, ಮೂರ್ನಾಲ್ಕು ಭಾಷೆಗಳನ್ನ ಕಲಿತು, ಕನ್ನಡವನ್ನೇ ನುಡಿಯೋ ಬೆಂಗಳೂರಿನ ಅತಿ ವಿರಳ ಕನ್ನಡಿಗರಲ್ಲಿ ನಾನೂ ಒಬ್ಬ.

ಸಂಸ್ಕೃತ ಪಂಡಿತರಾದ ತಾತ ಹಾಗೂ ಮರಾಠಿ ಮಾತಾಡ್ತಾ ಇದ್ದ ಅಜ್ಜಿ - ಇವರ ಅಸಾಮಾನ್ಯ ನೇತೃತ್ವದಲ್ಲಿ ಬೆಳೆದ ಸಾಮಾನ್ಯ ಪ್ರಜೆ. ಮಲ್ಲೇಶ್ವರದ ಕೆ. ಸಿ. ಜನರಲ್ ಆಸ್ಪತ್ರೆಯಲ್ಲಿ ಹುಟ್ಟಿ, ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಬೆಳೆದು, ಬೆಂಗಳೂರಿನ ಸಾಫ್ಟ್-ವೇರ್ ಸಮುದ್ರದಲ್ಲಿ ಈಜುತ್ತಿರುವ ಕಿರಿ-ಮೀನು ನಾನು.

ಸಾಕು ಇಷ್ಟೇ. ಬಿಟ್ಟ್ರೆ ಹಿಂಗೆ ಕುಯ್ಯ್ಕೊತಾನೆ ಇರ್ರ್ತೀನಿ.

Blog  |  Facebook  |  Twitter

2 ಕಾಮೆಂಟ್‌ಗಳು:

  1. ಉತ್ತಮ ಅಭಿರುಚಿಯಿಂದ ಕೂಡಿರುವ ಲೇಖನ.. ಕಹಳೆಗೆ ಬೇಂದ್ರೆ ಮಾಸ್ತರರಿಂದ ಕಳೆ ಬಂತು..

    ಪ್ರತ್ಯುತ್ತರಅಳಿಸಿ
  2. ಈ ಬರವಣಿಗೆಯ ಭಾಷಾ ಪ್ರೌಢಿಮೆಯನ್ನು ನೋಡಿದರೆ, 'ಇದು ನಿಮ್ಮ ಮೊದಲ ಲೇಖನವೇ ಹೌದೆ?!!' ಎಂದು ಆಶ್ಚರ್ಯವಾಗುತ್ತದೆ. ಇನ್ನೂ ಹೆಚ್ಚು ಹೆಚ್ಚು ಲೇಖನಗಳನ್ನು ಕನ್ನಡದಲ್ಲಿ ಬರೆಯುವ ಸಾವಕಾಶ, ಅವಕಾಶ ಮಾಡಿಕೊಳ್ಳಿ ಎಂಬುದೇ ನಿಮ್ಮಲ್ಲಿ ನನ್ನ ಸವಿನಯ ಕೋರಿಕೆ.

    ಪ್ರತ್ಯುತ್ತರಅಳಿಸಿ