ಛಾಯಾಚಿತ್ರ ಕೃಪೆ : ಆಯುರ್ ವಿಜ್
ಆಯುರ್ವೇದ ಒಂದು ಪ್ರಾಚೀನ ವೈದ್ಯ ಪದ್ಧತಿ. ಈ ವೈದ್ಯ ಶಾಸ್ತ್ರದಲ್ಲಿ ಅರೋಗ್ಯ ಸಂರಕ್ಷಣೆ ಹಾಗೂ ರೋಗ ಪೀಡಿತರಿಗೆ ವಿವಿಧ ಸೂಕ್ತ ಚಿಕಿತ್ಸೆಗಳನ್ನು ಹೇಳಲಾಗಿದೆ. ಚಿಕಿತ್ಸೆಯು ಆಹಾರ, ವಿಹಾರ, ಪಥ್ಯ, ಅಪಥ್ಯ ಮತ್ತು ಔಷಧಗಳನ್ನು ಒಳಗೊಂಡಿದೆ.
ಮನುಷ್ಯನ ದೇಹವು ದೋಷ (ವಾತ, ಪಿತ್ತ, ಕಫ), ಧಾತು (ರಸ, ರಕ್ತ, ಮಾಂಸ, ಮೇಧ, ಅಸ್ತಿ, ಮಜ್ಜ, ಶುಕ್ರ) ಮತ್ತು ಮಲ (ಸ್ವೇದ, ಮಲ, ಮೂತ್ರ) ಗಳಿಂದ ನಿರ್ಮಿತವಾಗಿದೆ. ದೋಷವು ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಪಂಚಮಹಾಭೂತಗಳಿಂದ ನಿರ್ಮಿತವಾಗಿರುತ್ತದೆ. ಎಲ್ಲಿಯವರೆಗೆ ಈ ಎಲ್ಲಾ ಪಂಚಮಹಾಭೂತಗಳು ತಮ್ಮ ತಮ್ಮ ಕಾರ್ಯವನ್ನು ಪರಸ್ಪರ ಹೊಂದಾಣಿಕೆಯಿಂದ ಮಾಡುತ್ತಿರುತ್ತವೋ ಅಲ್ಲಿಯವರೆಗೆ ದೇಹದ ಸ್ವಾಸ್ಥ್ಯವೂ ಸಮರ್ಪಕವಾಗಿರುತ್ತದೆ. ಇದರಲ್ಲಿನ ಯಾವುದೇ ಏರುಪೇರು ದೇಹವನ್ನು ರೋಗಪೀಡಿತವಾಗಿಸುತ್ತದೆ.
ಆಯುರ್ವೇದದಲ್ಲಿ ಚಿಕಿತ್ಸೆಗೆ ಮುನ್ನ ವ್ಯಕ್ತಿಯ ದೇಹ ಪ್ರಕೃತಿಯನ್ನು ತಿಳಿದುಕೊಂಡು, ಅದಕ್ಕನುಗುಣವಾಗಿ ಚಿಕಿತ್ಸೆ ನೀಡುವುದು ಪದ್ಧತಿ. ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ದೇಹ ಪ್ರಕೃತಿಯನ್ನು ಹೊಂದಿರುತ್ತಾನೆ. ತನ್ನ ದೇಹ ಪ್ರಕೃತಿಯನ್ನು ತಿಳಿದುಕೊಂಡ ವ್ಯಕ್ತಿಯು ಅದಕ್ಕನುಗುಣವಾಗಿ ಜೀವನಶೈಲಿ ರೂಪಿಸಿಕೊಂಡು ಪಾಲಿಸಿದಲ್ಲಿ, ಆರೋಗ್ಯಕರ ಜೀವನ ನಡೆಸಬಹುದಾಗಿದೆ. ಈ ನಿಟ್ಟಿನಲ್ಲಿ ನಮ್ಮ ದೇಹ ಪ್ರಕೃತಿಯನ್ನು ಪರೀಕ್ಷಿಸಿ ಅರಿತುಕೊಳ್ಳುವಲ್ಲಿ ಸಹಾಯಕವಾಗುವ ಪಟ್ಟಿಯನ್ನು ಇಲ್ಲಿ ನೀಡಲು ಬಯಸುತ್ತೇನೆ.
ವಿಷಯ | ವಾತ ಪ್ರಕೃತಿ | ಪಿತ್ತ ಪ್ರಕೃತಿ | ಕಫ ಪ್ರಕೃತಿ |
ದೇಹ ಚಟುವಟಿಕೆ | ಬೇಗ ಪ್ರಾರಂಭ, ಅಸ್ಥಿರ, ಅತ್ಯಧಿಕ ಚಟುವಟಿಕೆ | ಮಧ್ಯಮ ಪ್ರಾರಂಭ, ಸಂದರ್ಭದಕ್ಕೆ ತಕ್ಕಂತೆ ಒಳ್ಳೆಯ ಅನ್ವೇಷಕ, ವಿಚಾರಕ | ನಿಧಾನ ಪ್ರಾರಂಭ, ಸ್ಥಿರವಾದ ಗಂಭೀರ ವೈಭವವುಳ್ಳ ಚಟುವಟಿಕೆ |
ಶರೀರ ತೂಕ | ಹೆಚ್ಚೂ ಇಲ್ಲ; ಕಡಿಮೆಯೂ ಇಲ್ಲ | ಮಧ್ಯಮ ತೂಕ, ಹೆಚ್ಚು-ಕಡಿಮೆ ಅಗುತ್ತದೆ | ಅಧಿಕ ತೂಕ, ತಕ್ಷಣ ತೂಕ ಹೆಚ್ಚುತ್ತದೆ |
ದೇಹ ಶಕ್ತಿ | ದುರ್ಬಲ | ಮಧ್ಯಮ ಬಲ | ಬಲಯುಕ್ತ |
ಚರ್ಮ | ಒಣಗಿದ, ಒರಟಾದ, ತೆಳ್ಳನೆಯ, ತಣ್ಣಗಿನ, ಬಿರಿದ ಚರ್ಮ | ಮೃದು, ಬೇಗನೆ ಸುಕ್ಕಾಗುವ, ಗುಳ್ಳೆ ಮೊಡವೆ ಇರುವ, ಗುಲಾಬಿವರ್ಣ | ಮೃದು, ತಕ್ಷಣ ಸುಕ್ಕಾಗುವ, ದಪ್ಪ, ಬಿಳಿಯ ಹೊಳಪಾದ ಚರ್ಮ |
ಕಣ್ಣು | ಚಿಕ್ಕ ಕಣ್ಣು, ರೆಪ್ಪೆಯಲ್ಲಿ ಕಡಿಮೆ ಕೂದಲು | ಮಧ್ಯಮ, ಕೆಂಪು ಬಣ್ಣದ ಕಣ್ಣು | ದೊಡ್ಡ, ಆಕರ್ಷಕ ಸುಂದರ ಕಣ್ಣು |
ಹಲ್ಲುಗಳು | ಬಿರುಕುಳ್ಳ, ಏರುಪೇರಾದ, ಮಸುಕು ಬಿಳಿಯ ಬಣ್ಣ | ಮಧ್ಯಮ ಗಾತ್ರ, ಹಳದಿ ಬಣ್ಣದ ಹಲ್ಲು | ಗಟ್ಟಿಯಾದ, ಬಿಳಿಯ ದೊಡ್ಡ ಹಲ್ಲು |
ರೋಮ | ಕಡಿಮೆ | ಕಂದು ಬಣ್ಣ, ವಿರಳ | ಕಪ್ಪು ಬಣ್ಣ, ಅಧಿಕ |
ತಲೆ ಕೂದಲು | ತೆಳ್ಳಗಿನ, ಒರಟಾದ, ಒಣಗಿದ, ನೇರ, ಮಸುಕಾದ ಕಂದು ಬಣ್ಣ | ಸ್ವಲ್ಪ ಗುಂಗುರು, ಮಧ್ಯಮ ಪ್ರಮಾಣದ ತೆಳ್ಳಗಿನ ಕೂದಲು. ಬೋಳಾಗುವ ಸಾಧ್ಯತೆ | ಅಧಿಕ ಪ್ರಮಾಣದ ದಪ್ಪ, ಕಪ್ಪನೆಯ, ಉದ್ದವಾದ ಹೊಳೆಯುವ ಕೂದಲು |
ನಾಲಿಗೆ | ಅಧಿಕ ಬಣ್ಣದ ಕಲೆಗಳು | ತಾಮ್ರವರ್ಣ, ತೆಳು | ಕೆಂಪು ಬಣ್ಣ |
ಉಗುರು | ಬಿರುಸಾದ, ಒಣಗಿದ, ಚಿಕ್ಕ, ತೆಳ್ಳನೆಯ ಉಗುರು. ಕಡಿಮೆ ಬೆಳವಣಿಗೆ | ಸ್ವಲ್ಪ ಹೊಳಪು, ತಾಮ್ರವರ್ಣ | ಬಲವಾದ, ದಪ್ಪ, ಉದ್ದನೆಯ ಬಿಳಿಯ ಉಗುರು |
ಕೈಗಳು | ಚಿಕ್ಕ, ತೆಳುವಾದ, ಒಣಗಿದ, ತಣ್ಣನೆಯ ಒರಟಾದ ಕೈಗಳು | ಬಿಸಿಯಾದ, ಮಧ್ಯಮ ಗಾತ್ರದ ಗುಲಾಬಿ ಬಣ್ಣದ ಕೈಗಳು | ಉದ್ದವಾದ, ದಪ್ಪನೆಯ, ದೊಡ್ಡ ಕೈಗಳು |
ಕಾಲುಗಳು | ತೆಳುವಾದ, ಒಣಗಿದ, ಒರಟಾದ, ಬಿರುಸು ಕಾಲುಗಳು | ಮಧ್ಯಮ ಗಾತ್ರದ, ಮೃದು ಕೆಂಪು ಬಣ್ಣದ ಕಾಲುಗಳು | ದೊಡ್ಡ ಗಾತ್ರದ ಕಾಲುಗಳು |
ಹಸಿವು ತಡೆಯುವ ಸಾಮರ್ಥ್ಯ | ಕೆಲವೊಮ್ಮೆ ಹೆಚ್ಚು, ಕೆಹವೊಮ್ಮೆ ಕಡಿಮೆ | ಕಡಿಮೆ | ಅತೀ ಹೆಚ್ಚು |
ಬಾಯಾರಿಕೆ | ಏರುಪೇರು, ಕಡಿಮೆ ಪ್ರಮಾಣದ ನೀರು ಸೇವನೆ | ಅತೀ ಬಾಯಾರಿಕೆ, ಅತೀ ನೀರು ಸೇವನೆ | ಕಡಿಮೆ ಬಾಯಾರಿಕೆ, ಕಡಿಮೆ ನೀರು ಸೇವನೆ |
ನಿದ್ರೆ | ಭಂಗವುಳ್ಳ, ಕಡಿಮೆ ನಿದ್ರೆ | ಉತ್ತಮ ನಿದ್ರೆ, ಎದ್ದ ನಂತ ಮತ್ತೆ ನಿದ್ರೆ ಬರುವುದಿಲ್ಲ | ಅಧಿಕ, ಗಾಢವಾದ ನಿದ್ರೆ |
ಕನಸು | ನಿರಾಶಾದಾಯಕ, ಹಾರುವುದು, ನೆಗೆಯುವುದು, ಬೆಟ್ಟವನ್ನು ಏರುವುದು, ಮರಳುಗಾಡು, ಒಣಗಿದ ಭೂಮಿ | ಆಶಾದಾಯಕ, ಹಿಂಸಾತ್ಮಕ, ಘರ್ಷಣೆ, ಸಾಹಸ | ಆಶಾದಾಯಕ, ಸರೋವರ, ಹಂಸ, ಮೋಡ, ನೀರು, ಸುಖದಾಯಕ |
ಧ್ವನಿ | ಒರಟಾದ, ನಿಧಾನ, ದುರ್ಬಲ ಸ್ವರ | ಸ್ಪಷ್ಟ, ತೀಕ್ಷ್ಣ, ಎತ್ತರದ ಸ್ವರ | ಮಧುರ, ಆಳವಾದ, ಸ್ಪಷ್ಟ, ಕಡಿಮೆ ಸ್ವರ |
ಮಾತು | ಪದ ನುಂಗುವಿಕೆ, ಅಧಿಕ ವೇಗ, ಅಧಿಕ ಮಾತು | ತೀಕ್ಷ್ಣ, ನೇರ, ಒರಟು, ಚರ್ಚೆಯುಕ್ತ, ಮಧ್ಯಮ ಪ್ರಮಾಣ | ನಿಧಾನ, ಮಾರ್ದನಿ, ಸ್ಪಷ್ಟವಾದ ಮಾತು |
ಆಹಾರ ರಸಗಳನ್ನು ಇಷ್ಟಪಡುವುದು | ಸಿಹಿ, ಉಪ್ಪು, ಹುಳಿ | ಸಿಹಿ, ಕಹಿ, ಒಗರು | ಖಾರ, ಒಗರು, ಕಹಿ |
ಮನಸ್ಸು | ವಿಶ್ರಾಂತಿ ಇರದ, ಚಂಚಲ ಮನಸ್ಸು | ಚಟುವಟಿಕೆಯುಳ್ಳ, ಸಮಂಜಸ ಬಲವುಳ್ಳ ಮನಸ್ಸು | ಶಾಂತ, ಸ್ಥಿರ ಚಟುವಟಿಕೆಯುಳ್ಳ ಮನಸ್ಸು |
ಗ್ರಹಣ ಶಕ್ತಿ | ಅತಿವೇಗ, ನೆನಪಿನ ಶಕ್ತಿ ಕೆಲವು ದಿನ ಮಾತ್ರ ಇರುತ್ತದೆ | ಮಧ್ಯಮ ಗ್ರಹಣೆ, ಹೆಚ್ಚು ದಿನ ನೆನಪಿನಲ್ಲಿ ಉಳಿಯುತ್ತದೆ | ನಿಧಾನಗ್ರಾಹ್ಯ, ಗ್ರಹಿಸಿದ ವಿಷಯ ಮರೆಯುವುದೇ ಇಲ್ಲ |
ಲೇಖಕರ ಕಿರುಪರಿಚಯ | |
ಡಾ|| ಚಂದ್ರಕಲಾ ಸಿ. ಆಯುರ್ವೇದ ವೈದ್ಯ ಪಧ್ಧತಿಯ ದ್ರವ್ಯಗುಣ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ ಇವರು, ಪ್ರಸ್ತುತ ಕರ್ನಾಟಕ ಸರ್ಕಾರದ ಆಯುಶ್ ಇಲಾಖೆಯಲ್ಲಿ ವೈದ್ಯಾಧಿಕಾರಿಯಾಗಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. Blog | Facebook | Twitter |
ತುಂಬ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರ.. ಧನ್ಯವಾದಗಳು..
ಪ್ರತ್ಯುತ್ತರಅಳಿಸಿಆಯುರ್ವೇದದ ಪ್ರಕಾರ ದೇಹ ಪ್ರಕೃತಿಯ 21 ವಿವಿದ ವಿಷಯಗಳ ಬಗ್ಗೆ ಬಹಳ ಸೊಗಸಾಗಿ ವಾತ ಪಿತ್ತ ಕಪಗಳಲ್ಲಿನ ಗೋಚರಿಸುವ ಚಿನ್ಹೆಗಳನ್ನು ಹೋಲಿಕೆಗಳೊಂದಿಗೆ ಸರಳವಾದ ಪಟ್ಟಿಯೊಂದಿಗೆ ಓದುಗರ ಮನಮುಟ್ಟುವಂತೆ ಬರೆದಿದ್ದಾರೆ.ಅವರಿಂದ ಇಂತಹ ಆರೋಗ್ಯಕ್ಕೆ ಸಂಬಂದಿಸಿದ ಇನ್ನು ಲೇಖನಗಳು ಮುಂದೆ ಬರಲಿ ಎಂದು ಆಹ್ವಾನಿಸುತ್ತೇನೆ !!!?..
ಪ್ರತ್ಯುತ್ತರಅಳಿಸಿಆರೋಗ್ಯವೇ ಭಾಗ್ಯ - ಈ ನಿಟ್ಟಿನಲ್ಲಿ ನಿಮ್ಮ ಲೇಖನವು ಬಹಳ ಉಪಯುಕ್ತವಾಗಿದೆ.
ಪ್ರತ್ಯುತ್ತರಅಳಿಸಿ