ಭಾಷೆ ಎಂದಕೂಡಲೇ ನಮಗೆಲ್ಲ ಭಾಸವಾಗುವುದು ಭಾಷೆಯೊಳಗಿನ ಭಾವನೆಗಳು. ಏಕೆಂದರೆ, ನಮ್ಮ ದೇಶ ರೂಪುಗೊಂಡಿರುವುದು ಭಾಷಾವಾರು ಪ್ರಾಂತ್ಯಗಳಿಂದ. ಪ್ರಾದೇಶಿಕವಾಗಿ ನಾವು ಆಡುವ ಭಾಷೆಯನ್ನಾಧರಿಸಿ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಅಸ್ಸಾಂ ಎಂಬಿತ್ಯಾದಿ ರಾಜ್ಯಗಳಾಗಿ ರೂಪುಗೊಂಡಿವೆ. ಆದ್ದರಿಂದ ರಾಜ್ಯಗಳ ಅಸ್ತಿತ್ವದ ಮೂಲ - ಭಾಷೆ. ಹೀಗಾಗಿ ಭಾಷೆಯೆಂದರೆ ರಾಜ್ಯ, ರಾಜ್ಯವೆಂದರೆ ಭಾಷೆ. ಇದರಿಂದಾಗಿ ಭಾಷೆಯು ನಮ್ಮ ಭಾವನೆಗಳನ್ನು ಕೆರಳಿಸುವ ಮತ್ತು ಅರಳಿಸುವ ಸಾಮರ್ಥ್ಯವನ್ನು ಹೊಂದಿದೆ.
ಭಾಷೆಯು ಕೇವಲ ನಾವು ಆಡುವ ಮಾತುಗಳಲ್ಲ, ಅದು ಒಂದು ಜನಾಂಗದ ಇತಿಹಾಸವನ್ನು ತಿಳಿಸುತ್ತದೆ. ಪ್ರಪಂಚದಲ್ಲಿ ಮೂರು ಸಾವಿರಕ್ಕೂ ಅಧಿಕ ಭಾಷೆಗಳಿವೆ ಎಂದು ಅಂದಾಜಿಸಲಾಗಿದೆ. ಇವುಗಳಲ್ಲಿ ಕೆಲವೇ ಭಾಷೆಗಳಿಗೆ ಮಾತ್ರ ತನ್ನದೇ ಆದ ಲಿಪಿ ಹಾಗೂ ನೂರಾರು ವರ್ಷಗಳ ಇತಿಹಾಸವಿದೆ. ಈ ಸಾಲಿನಲ್ಲಿ ನಿಲ್ಲುವ ಅಗ್ರಗಣ್ಯ ಭಾಷೆಗಳಲ್ಲಿ ಕನ್ನಡವೂ ಕೂಡ ಒಂದು. ಕನ್ನಡ ಭಾಷೆಯು ಈ ಸ್ಥಾನಕ್ಕೇರಲು ಹಲವಾರು ದಾರ್ಶನಿಕರ ಶ್ರಮ-ಬಲಿದಾನವನ್ನು ನಾವು ಇಲ್ಲಿ ಸ್ಮರಿಸಬಹುದು.
ಭಾಷೆಯ ಬಗ್ಗೆ ಸಾಕು, ಈಗ ಕನ್ನಡ ಭಾಷೆಯ ಬಗ್ಗೆ ನಮ್ಮಗಳ ಮನೋಭಾವ ಹಾಗೂ ವರ್ತನೆಯ ಬಗ್ಗೆ ಒಂದಿಷ್ಟು ದೃಷ್ಟಿ ಹರಿಸೋಣ. ಜಾಗತೀಕರಣದ ನಂತರ ದೇಶಗಳು ಬೆಳೆದವು, ರಾಜ್ಯಗಳು ಬೆಳೆದವು, ಆದರೆ ಇದರ ಜೊತೆ-ಜೊತೆಗೆ ಕನ್ನಡ ಭಾಷೆಯು ಬೆಳೆಯಲಿಲ್ಲವೆಂದು ಹೇಳಲು ತುಂಬಾ ನೋವಾಗುತ್ತದೆ. ಏಕೆಂದರೆ, ಪ್ರತಿಷ್ಠೆಗೋಸ್ಕರ, ನಾನು ಇತರರಿಗಿಂತ ಭಿನ್ನ - ಮೇಧಾವಿ ಎಂದು ತೋರಿಸಿಕೊಳ್ಳುವ ಚಪಲದಿಂದ ಬಹುತೇಕ ಮಂದಿ ಬೇಕೆಂತಲೇ ಇತರೆ ಭಾಷೆಯಲ್ಲಿ, ಅದರಲ್ಲೂ ಇಂಗ್ಲಿಷಿನಲ್ಲಿ ಮಾತನಾಡಲು ಪ್ರಯತ್ನಿಸುತ್ತಾರೆ. ಇವರ ದೃಷ್ಟಿಯಲ್ಲಿ ಕನ್ನಡದಲ್ಲಿ ಮಾತನಾಡುವುದೆಂದರೆ, ಕನ್ನಡದಲ್ಲಿ ವ್ಯವಹರಿಸುವುದೆಂದರೆ ಕೀಳರಿಮೆ ಮತ್ತು ಅವಮಾನದ
ಸಂಗತಿಯಿದ್ದಂತೆ. ಈ ರೀತಿಯ ಮನೋಪ್ರವೃತ್ತಿಯು ಅಂಟುಜಾಡ್ಯದಂತೆ. ಒಬ್ಬರಿಂದ ಎಲ್ಲರಿಗೂ ಹರಡಿ, ಇಷ್ಟವಿಲ್ಲದಿದ್ದರೂ ಕೆಲವು ಸನ್ನಿವೇಶಗಳಲ್ಲಿ ಗೊತ್ತಿರುವ ಅಲ್ಪ-ಸ್ವಲ್ಪ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುವವರ ಸಂಖ್ಯೆ ದಿನೇ-ದಿನೇ ಹೆಚ್ಚಾಗುತ್ತಿದೆ.
ಈ ಮೂರ್ಖತನದವರಿಗೆ ನಾವು ವಾಸಿಸುತ್ತಿರುವ ನೆಲ ಕನ್ನಡ, ತಿನ್ನುತ್ತಿರುವ ಅನ್ನ ಕನ್ನಡ, ನನ್ನ ರಕ್ಷಕ ಕನ್ನಡವೆಂಬ ಘೋರ ಸತ್ಯ ತಿಳಿದಿಲ್ಲ. ನಮ್ಮ ಪೂರ್ವಜರು ಕಟ್ಟಿ ಬಳಸಿ-ಬೆಳೆಸಿದ್ದರಿಂದ ಈ ರಾಜ್ಯವು ಕನ್ನಡವಾಯಿತು, ಕರ್ನಾಟಕವಾಯಿತು. ನಮ್ಮವರ (ಪೂರ್ವಜರ) ಪರಿಶ್ರಮದಿಂದ ನಾವು ಇಂದು, ಈ ಆಧುನಿಕ ಜೀವನವನ್ನು ಅನುಭವಿಸುತ್ತಿದ್ದೇವೆಂಬ ಅರಿವು ಇವರುಗಳಿಗಿಲ್ಲ. ಇದೇ ವರ್ತನೆ ಮುಂದುವರೆದರೆ, ನಾವು ಕನ್ನಡದಲ್ಲಿ ಪತ್ರ ಬರೆದರೆ ನಮ್ಮ ಮುಂದಿನ ಪೀಳಿಗೆಯು ಈ ಪತ್ರವನ್ನು ಓದಲಾಗದಿರಬಹುದು.
ಕೆಲವು ವಸ್ತುಗಳನ್ನು ಹೆಚ್ಚಾಗಿ ಉಪಯೋಗಿಸಿದಾಗ ಮಾತ್ರ ಹೆಚ್ಚು ಕಾಲ ಬಾಳಿಕೆ ಬರುತ್ತವೆ. ಅದೇರೀತಿ ಭಾಷೆಯೂ ಕೂಡ. ನಾವು ಹೆಚ್ಚು-ಹೆಚ್ಚು ಬಳಸಿದಷ್ಟೂ ಅದು ಬೆಳೆಯುತ್ತದೆ ಮತ್ತು ಮುಂದಿನ ಪೀಳಿಗೆಗೆ ಸಾಗುತ್ತದೆ. ಆದರೆ, ನಾವೇನು ಮಾಡುತ್ತಿದ್ದೇವೆ? ಕನ್ನಡದಲ್ಲಿ ಮಾತನಾಡಲು, ವ್ಯವಹರಿಸಲು ಹಿಂಜರಿಯುತ್ತೇವೆ. ನಮಗೆ ಕಾವೇರಿ ನಿರು ಬೇಕು - ಕನ್ನಡ ಬೇಕಿಲ್ಲ; ಕರ್ನಾಟಕದ ಕಾಲೇಜಿನಲ್ಲಿ ಸೀಟು ಬೇಕು - ಕನ್ನಡ ಬೇಕಿಲ್ಲ; ಬಿ. ಡಿ. ಎ. ಸೈಟು ಬೇಕು - ಕನ್ನಡ ಬೇಕಿಲ್ಲ. ಈ ರೀತಿ ನಮಗೆ ಕನ್ನಡ-ಕರ್ನಾಟಕದಿಂದ ಪಡೆದುಕೊಳ್ಳುವ ಆಸೆಯಿದೆಯೇ ವಿನಃ ಕನ್ನಡವನ್ನು ಕಟ್ಟಿ-ಬೆಳೆಸುವ ಮನಸ್ಸಿಲ್ಲ. ಹೀಗಾದರೆ ಭಾಷೆಯು ಬೆಳೆಯುವುದೇ ಹೇಗೆ?
ವಿಶ್ವ ವಿದ್ಯಮಾನವನ್ನು ಗಮನಿಸುವುದಾದರೆ, ಫ್ರಾನ್ಸ್ ದೇಶವು ಫ್ರೆಂಚ್ ಭಾಷೆಯ ರಕ್ಷಣೆಗಾಗಿ ಇನ್ನುಮುಂದೆ ಆಡಳಿತ ಭಾಷೆ ಮತ್ತು ವ್ಯವಹಾರಿಕ ಭಾಷೆ ಫ್ರೆಂಚ್ ಆಗಿರಬೇಕೆಂದು ಕಾಯ್ದೆಯೊಂದನ್ನು ಜಾರಿಗೆ ತಂದಿದೆ. ಅದೇ ರೀತಿ ಅಂತರ ರಾಷ್ಟ್ರೀಯ ಸಂಘಟನೆಯೊಂದು ತೆಲುಗು ಭಾಷೆಯು ಇನ್ನು ಕೆಲವೇ ವರ್ಷಗಳಲ್ಲಿ ಅಂತರ ರಾಷ್ಟ್ರೀಯ ಭಾಷೆಯಾಗುತ್ತದೆಂದು ಭವಿಷ್ಯ ನುಡಿದಿದೆ. ಇವರಿಗೆ ಇದೆಲ್ಲ ಹೇಗೆ ಸಾಧ್ಯವಾಯಿತು? ಹೇಗೆಂದರೆ ಇವರು ತಮ್ಮ ಭಾಷೆಯನ್ನು ಬಳಸಿ-ಬೆಳೆಸಿ ರಕ್ಷಿಸಿರುವುದರಿಂದ. ಆದರೆ, ಕನ್ನಡಿಗರಾದ ನಾವೇಕೆ ಹೀಗೆ?
ನಾವುಗಳು ಒಂದು ಸೈಟನ್ನು (ನಿವೇಶನ) ಕೊಂಡರೆ, ಅದಕ್ಕೆ ತಕ್ಷಣ ತಂತಿ-ಬೇಲಿಯನ್ನು ಹಾಕುತ್ತೇವೆ. ಮನೆಯನ್ನು ಕಟ್ಟಿದರೆ, ಸುತ್ತಲೂ ಕಾಂಪೌಂಡ್ ಗೋಡೆ ನಿರ್ಮಿಸುತ್ತೇವೆ. ಮನೆಗೊಂದು ಟಿ. ವಿ. ಕೊಂಡರೆ, ಅದಕ್ಕೊಂದು ಸ್ಟೆಬಿಲೈಸರ್ ಅಳವಡಿಸುತ್ತೇವೆ. ನಮ್ಮ ವಸ್ತುಗಳ ರಕ್ಷಣೆಗಾಗಿ ನಾವು ಇಷ್ಟೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತೇವೆ. ಆದರೆ, ನಮ್ಮ ಮಾತೃಭಾಷೆಯಾದ ಕನ್ನಡದ ಬಗ್ಗೆ, ಇದರ ರಕ್ಷಣೆಯ ಬಗ್ಗೆ ನಾವು ಹೀಗೇಕೆ ಮಾಡುತ್ತಿಲ್ಲ?
ಆದ್ದರಿಂದ, ಇನ್ನಾದರೂ ಈ ತಿರಸ್ಕಾರ ಮನೋಭಾವ ಸಾಕು. ಕನ್ನಡ ಭಾಷೆಯನ್ನು ನಮ್ಮ ಮನೆಯ ಆಸ್ತಿಯಂತೆಯೇ ತಿಳಿಯೋಣ. ಕನ್ನಡದಲ್ಲಿ ಮಾತನಾಡಲು, ವ್ಯವಹರಿಸಲು ಹಿಂಜರಿಕೆ ಬೇಡ; ಕನ್ನಡದಲ್ಲಿ ಮಾತನಾಡಿದರೆ ಅದು ಅಭಿಮಾನವೇ ಹೊರೆತು ಅಪಮಾನವಲ್ಲವೆಂಬುದು ತಿಳಿದಿರಲಿ.
ಹಾಗಾದರೆ ಕನ್ನಡ ಭಾಷೆ, ನಾಡು-ನುಡಿಯ ರಕ್ಷಣೆಗಾಗಿ ನಾವೇನು ಮಾಡಬೇಕು? ಉಪಾಯ ತುಂಬಾ ಸುಲಭ. ಅದೇನೆಂದರೆ......
ತಾತ್ಸಾರ ಬಿಡಿ - ಕನ್ನಡ ಮಾತಾಡಿ..!!!!
ಲೇಖಕರ ಕಿರುಪರಿಚಯ | |
ಶ್ರೀ ಶಿವಕುಮಾರ ಬಿ. ಎಸ್. ಹೆಸರು ಶಿವಕುಮಾರ ಬಿ. ಎಸ್., ಬೆಂಗಳೂರಿನ ಸರ್ಕಾರಿ ಪದವಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಸರ್ಕಾರಿ ಕಾಲೇಜಿನಲ್ಲಿನ ಭೋದನಾ ಗುಣಮಟ್ಟ ಹಾಗೂ ವಿದ್ಯಾರ್ಥಿಗಳ ಜ್ಞಾನವನ್ನು ಪ್ರಸಿಧ್ಧ ಖಾಸಗಿ ಕಾಲೇಜುಗಳಲ್ಲಿರುವಂತೆ ಸರಿಸಮನಾಗಿ ಹೆಚ್ಚಿಸುವುದೇ ನನ್ನ ಗುರಿ. Blog | Facebook | Twitter |
ತಾತ್ಸಾರವನ್ನು ನಿಜವಾಗಿಯೂ ಎಲ್ಲಾ ಕನ್ನಡಿಗರೂ ಬಿಡಬೇಕೆಂದು ,ಎದೆ ಮೇಲೆ ಕೈ ಇಟ್ಟು ಶಪಥ ಮಾಡಬೇಕು .ಇದು ಒಂದು ಅರ್ಥಪೂರ್ಣವಾದ ಲೇಖನ ,ಪ್ರತಿಯೊಬ್ಬ ಕನ್ನಡಿಗನೂ ಒಮ್ಮೆ ಇಂಗ್ಲಿಷ್ನಲ್ಲಿ ಮಾತನಾಡುವ ಮೊದಲು ಅದರ ಅವಶ್ಯಕತೆಯಿದ್ದಲ್ಲಿ ಮಾತ್ರ ಉಪಯೋಗಿಸಿ ಕೇವಲ ತೋರಿಕೆಗಾಗಿ ಅದರ ಉಪಯೋಗ ಬಿಡಬೇಕು .ಅದನ್ನು ಮಾತನಾಡುವುದು ಪ್ರತಿಷ್ಠೆ ಎಂದು ತಿಳಿಯದೆ ಸರಳವಾದ ತಿಳಿಗನ್ನಡವನ್ನು ಇನ್ನುಮುಂದಾದರೂ ಕರ್ನಾಟಕದ ಎಲ್ಲಾ ಕನ್ನಡಿಗರೂ ಸರ್ವ ಕಾಲದಲ್ಲಿ ಆಚರಣೆಗೆ ತರುವರೆಂದು ಈ ಕನ್ನಡ ರಾಜ್ಯೋತ್ಸವದ ಶುಭ ಸಮಯದಲ್ಲಿ ಆಶಿಸೋಣ .
ಪ್ರತ್ಯುತ್ತರಅಳಿಸಿ"ಕೆಲವು ವಸ್ತುಗಳನ್ನು ಹೆಚ್ಚಾಗಿ ಉಪಯೋಗಿಸಿದಾಗ ಮಾತ್ರ ಹೆಚ್ಚು ಕಾಲ ಬಾಳಿಕೆ ಬರುತ್ತವೆ. ಅದೇರೀತಿ ಭಾಷೆಯೂ ಕೂಡ. " - ಈ ಸಾಲುಗಳು ಬಹಳ ಅರ್ಥಪೂರ್ಣವಾಗಿವೆ.. ಬಹಳಷ್ಟು ಜನ ಕನ್ನಡ ಬಂದರೂ ಶೋಕಿಗಾಗಿ ಆಂಗ್ಲ ಮಾತಾಡುವುದನ್ನು ನೋಡಿದಾಗ ಮನಸ್ಸು ಮರುಗುತ್ತದೆ..
ಪ್ರತ್ಯುತ್ತರಅಳಿಸಿತುಂಬು ಹೃದಯದ ಶುಬಾಶಯಗಳು ಕಾರಣ ಪ್ರಸ್ತುತ ವಾಸ್ತವದ ವಿಷಯವನ್ನು ಚೆನ್ನಾಗಿ ಪ್ರಸ್ತಾಪಿಸಿದ್ದಿರಿ. ಇದೆ ವಿಷಯವು ನಮ್ಮ ದೇಶದಿಂದ ಪ್ರತಿಬಾ ಪಲಾಯನ ಮಾಡುವವರಿಗೂ ಅನ್ವಯಿಸುತ್ತದೆ ಎಂಬುದು ನನ್ನ ವಯಕ್ತಿಕ ಅಬಿಪ್ರಾಯ.
ಪ್ರತ್ಯುತ್ತರಅಳಿಸಿನಾನು ನನ್ನ ಮನೆ, ಗ್ರಾಮ, ಊರು, ಜಿಲ್ಲೆ, ರಾಜ್ಯ, ದೇಶ ಸರ್ವ ಕಾಲಕ್ಕೂ ಅನ್ವಯಿಸುತ್ತದೆ. ಅಬಿವೃದ್ದಿ ಅಡಿಪಾಯದಿಂದ ಮಾತ್ರ ಸದ್ಯ.
ನನ್ನ ನನ್ನತನವ ನಾ ಪ್ರಿತಿಸದೆ ಮತ್ತಿನ್ಯಾರು ಪ್ರಿತಿಸುವರು?
ಕನ್ನಡ ನಾಡು-ನುಡಿಯ ಉಳಿವು ಹಾಗೂ ಬೆಳವಣಿಗೆಗಾಗಿ ಪ್ರತಿಯೊಬ್ಬ ಕನ್ನಡಿಗರೂ ಕಂಕಣಬದ್ಧರಾಗಿ 'ಶ್ರಮಿಸಬೇಕಾಗಿದೆ' ಎಂಬ ವಾಸ್ತವ ಕಟು-ಸತ್ಯವನ್ನು ಮನಮುಟ್ಟುವಂತೆ ತಿಳಿಸಿಕೊಟ್ಟಿದ್ದಿರಿ.
ಪ್ರತ್ಯುತ್ತರಅಳಿಸಿನನ್ನ ಪುಟ್ಟ ಲೇಖನಕ್ಕೆ ತಮ್ಮ ಅಮೂಲ್ಯ ಅನಿಸಿಕೆಗಳನ್ನು ವ್ಯಕ್ತಪಡಿಸಿ ಪ್ರೋತ್ಸಾಹಿಸಿದಕ್ಕೆ ತಮ್ಮೆಲ್ಲರಿಗೂ ಅನಂತ ಧನ್ಯವಾದಗಳು.
ಪ್ರತ್ಯುತ್ತರಅಳಿಸಿ