ಗುರುವಾರ, ನವೆಂಬರ್ 30, 2017

ಪ್ರಸಿದ್ಧ ವಚನಕಾರರು

ನವಂಬರ್ 2017ರ ಮಾಹೆಯುದ್ದಕ್ಕೂ ನಡೆದ ಕಹಳೆ ಏಳನೇ ಆವೃತ್ತಿಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ನಮ್ಮೊಡನೆ ಎಂದಿನಂತೆ ಸಹಕರಿಸಿದ ಎಲ್ಲ ಸಹೃದಯೀ ಓದುಗರಿಗೂ, ಬರೆಹಗಳನ್ನು ಪ್ರಸ್ತುತಿಪಡಿಸಿದ ಓಬಳಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಎಲ್ಲ ಮಕ್ಕಳಿಗೂ, ಮಕ್ಕಳನ್ನು ಬರೆಯಲು ಪ್ರೋತ್ಸಾಹಿಸಿದ ಎಲ್ಲ ಶಿಕ್ಷಕರಿಗೂ; ಪ್ರಮುಖವಾಗಿ ಶಾಲಾ ಪ್ರಾಂಶುಪಾಲರಿಗೂ ಮತ್ತು ಪ್ರತ್ಯಕ್ಷ-ಪರೋಕ್ಷವಾಗಿ ಕಹಳೆಯ ಯಶಸ್ಸಿಗೆ ಕಾರಣಕರ್ತರಾದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ವಂದನೆಗಳು; ನೀವೆಲ್ಲರೂ ಸದಾ ಕಹಳೆಯೊಟ್ಟಿಗೆ ಇರುತ್ತೀರೆಂದು ನಾವು ನಂಬಿದ್ದೇವೆ.


ಅಲ್ಲಮಪ್ರಭು
ಚಿತ್ರ ಕೃಪೆ : Google
ಅಲ್ಲಮಪ್ರಭು: ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವಿಯಲ್ಲಿ ಜನನ. 12ನೇ ಶತಮಾನದ ಧಾರ್ಮಿಕ ಮಹಾತ್ಮರಲ್ಲಿ ಪ್ರಮುಖ ವ್ಯಕ್ತಿ. ಶರಣ ಮಾರ್ಗಕ್ಕೆ ಗುರು ಎನಿಸಿದ, ಅನುಭವ ಮಂಟಪದ ಅಧ್ಯಕ್ಷ, ಶೂನ್ಯ ಸಿಂಹಾಸನದ ದೊರೆ. ಡಾಂಬಿಕತೆ, ಅಂಧ ಶ್ರದ್ಧೆ, ಅಜ್ಞಾನ, ಅಸತ್ಯ, ವಿಕಾಶತೆಗಳ ವಿರೋಧಿ. ಜ್ಞಾನ ವೈರಾಗ್ಯದ ಗಣಿ ಅಲ್ಲಮ ತನ್ನ ವಚನಗಳನ್ನು "ಗುಹೇಶ್ವರ" ಎಂಬ ಅಂಕಿತದಿಂದ ರಚಿಸಿದ್ದಾರೆ. ಮಹಾ ವ್ಯಕ್ತಿತ್ವದ ಅಲ್ಲಮನನ್ನು ಕುರಿತು ಹರಿಹರ ಕವಿಯು ಪ್ರಭು ದೇವರ ರಗಳೆ, ಚಾಮರಸ ಕವಿಯು ಪ್ರಭುಲಿಂಗಲೀಲೆ ಕೃತಿಗಳನ್ನು ರಚಿಸಿದ್ದಾರೆ.


ಜೇಡರದಾಸಿಮಯ್ಯ
ಚಿತ್ರ ಕೃಪೆ : Google
ಜೇಡರದಾಸಿಮಯ್ಯ: 11ನೇ ಶತಮಾನದ ಉತ್ತರಾರ್ಧ ಹಾಗೂ 12ನೇ ಶತಮಾನದ ಪೂರ್ವಾರ್ಧದಲ್ಲಿದ್ದ ಹಿರಿಯ ಶಿವಶರಣ ಹಾಗೂ ವಚನಕಾರ. ಸುರಪುರ ತಾಲ್ಲೂಕು ಮನಸೂರು ಜನ್ಮಸ್ಥಳ. ರಾಮನಾಥ ಈತನ ಆರಾಧ್ಯದೈವ. ನೇಯ್ಗೆಯು ಕಾಯಕ. ಈತನ ಸುಮಾರು 142 ವಚನಗಳು ದೊರೆತಿವೆ. "ರಾಮನಾಥ" ಎಂಬುದು ದಾಸಿಮಯ್ಯನ ವಚನಗಳ ಅಂಕಿತ. ಇವನ ವಚನಗಳಲ್ಲಿ ಭಕ್ತಿಯ ಮೇಲ್ಮೈ, ನಿಷ್ಠುರವಾದ ಸ್ವಚ್ಛ ವಾಕ್ಯರಚನೆ, ಆಳವಾದ ಅರ್ಥಭಾವ ಧ್ವನಿ, ಮಾರ್ಮಿಕವಾದ ಸಂಕ್ಷಿಪ್ತ ಶೈಲಿ ಇತ್ಯಾದಿ ಗುಣಗಳು ಎದ್ದು ಕಾಣುತ್ತದೆ.


ಚೆನ್ನಬಸವಣ್ಣ
ಚಿತ್ರ ಕೃಪೆ : Google
ಚೆನ್ನಬಸವಣ್ಣ: ಬಸವಣ್ಣನ ಸೋದರಳಿಯ ಶಿವಶರಣ ವಚನಕಾರ. ಪಟ್‌ಸ್ಥಲ ವಚನಕಾರ. ಕರಣ ಹಸಿವಿಗೆ ಮಿಶ್ರಾರ್ಪಣ ಮಂತ್ರಘೋಷ, ಕಾಲಜ್ಞಾನ ಕೃತಿಗಳಲ್ಲಿವೆ. ಅನೇಕ ವಚನಗಳನ್ನು ರಚಿಸಿದ್ದಾರೆ. ನೈಜವಾದ ನಿರೂಪಣೆಗೆ ಪ್ರಸಿದ್ಧನಾಗಿದ್ದಾನೆ. ಪಾದರಸದಂತಹ ಈತನ ಪ್ರತಿಭೆ, ಈತನ ವಚನಗಳಲ್ಲಿನ ಆತ್ಮಪ್ರತ್ಯಯ, ಸ್ಪಷ್ಟೋಕ್ತಿ ಮೆಚ್ಚುವಂಥದ್ದು.


ಅಕ್ಕಮಹಾದೇವಿ
ಚಿತ್ರ ಕೃಪೆ : Google
ಅಕ್ಕಮಹಾದೇವಿ: ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಉಡುತಡಿಯಲ್ಲಿ ಜನನ. ಕನ್ನಡ ಸಾಹಿತ್ಯದ ಮೊದಲ ಕವಿಯಿತ್ರಿ ಮತ್ತು ವಚನಗಾರ್ತಿ ಹಾಗೂ ಮಹಿಳೆಯರ ಪ್ರತಿನಿಧಿಯಾಗಿ ಅಭಿವ್ಯಕ್ತಿಯಲ್ಲಿ ಪುರುಷ ಪ್ರಧಾನ ಸಮಾಜಚನ್ನು ಪ್ರತಿಭಟಿಸಿದವಳು. ಸಾಮಾಜಿಕ ಬದಲಾವಣೆಗೆ ಶ್ರಮಿಸಿದವಳು. "ಚನ್ನಮಲ್ಲಿಕಾರ್ಜುನ" ಎಂಬುದು ಈಕೆಯ ವಚನಗಳ ಅಂಕಿತ. "ಯೋಗಾಂಗತ್ರಿವಿಧಿ" ಅಕ್ಕಮಾಹಾದೇವಿಯ ಪ್ರಮುಖ ಕೃತಿ. ರಾಜ ಪ್ರಭುತ್ವ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಧಿಕ್ಕರಿಸಿ ನಿಂತ ಅಕ್ಕನ ವಚನಗಳು ಕನ್ನಡದ ಸ್ತ್ರೀ ಸಂವೇದನಾ ಅಭಿವ್ಯಕ್ತಿಯ ದಾಖಲೆಯಾಗಿವೆ.


ಬಸವಣ್ಣ
ಚಿತ್ರ ಕೃಪೆ : Google
ಬಸವಣ್ಣ: 12ನೇ ಶತಮಾನದ ಶರಣ, ಪ್ರಮುಖ ಪ್ರಸಿದ್ಧ ವಚನಕಾರ. ಸಮಾಜ ಸುಧಾರಕ. ಅಂದು ಕರ್ನಾಟಕದಲ್ಲಿ ನಡೆದ ಸಾಮಾಜಿಕ ಮತ್ತು ಧಾರ್ಮಿಕ ಮಹಾಕ್ರಾಂತಿಯ ನೇತಾರ. ಬಿಜಾಪುರ ಜಿಲ್ಲೆಯ ಬಾಗೇವಾಡಿ ಇವರ ಜನ್ಮ ಸ್ಥಳ. ಕವಿ ಹೃದಯದ ಇವರು ವಚನಕಾರರಾಗಿದ್ದರು. ಇವರ 100ಕ್ಕೂ ಹೆಚ್ಚು ವಚನಗಳು ದೊರೆತಿವೆ. "ಕೂಡಲ ಸಂಗಮದೇವ" ಎಂಬುದು ಇವರ ವಚನಗಳ ಅಂಕಿತ


( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ
ಕುಮಾರಿ. ಕಾವ್ಯ, ಆರ್.

8ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

Blog  |  Facebook  |  Twitter

2 ಕಾಮೆಂಟ್‌ಗಳು: