ಮಂಗಳವಾರ, ನವೆಂಬರ್ 14, 2017

ಕನ್ನಡದಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ದಿಗ್ಗಜರು

 1. ಕುವೆಂಪು: ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯಲ್ಲಿ 1904 ಡಿಸೆಂಬರ್ 29 ರಂದು ಜನಿಸಿದರು. ತಂದೆ ವೆಂಕಟಪ್ಪ, ತಾಯಿ ಸೀತಮ್ಮ. ಕುವೆಂಪು ಕನ್ನಡದಲ್ಲಿ ಕವನ, ಕಥೆ, ನಾಟಕ, ಕಾದಂಬರಿ, ವಿಮರ್ಶೆ ಈ ಎಲ್ಲದರಲ್ಲಿ 60 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವರ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯಕ್ಕೆ 1955 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು 1967 ರಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿಗಳು ದೊರೆತಿವೆ. ಕನ್ನಡದ ಮಹೋನ್ನತ ಕವಿ ಕುವೆಂಪುರವರಿಗೆ ಹಲವಾರು ಗೌರವ ಡಾಕ್ಟರೇಟ್ ಪದವಿಗಳು ಹಾಗೂ ಭಾರತ ಸರ್ಕಾರದ ಪದ್ಮಭೂ಼ಷಣ ಪ್ರಶಸ್ತಿ ಲಭಿಸಿವೆ. ಮರಣ: 10/11/1994. ಕೃತಿಗಳು: ಕಾನೂರು ಸುಬ್ಬಮ್ಮ, ಶ್ರೀ ರಾಮಾಯಣ ದರ್ಶನಂ, ಕಿಂದರಿ ಜೋಗಿ, ಬೆರಳ್ ಗೆ ಕೊರಳ್, ನವಿಲು.
2. ದ. ರಾ. ಬೇಂದ್ರೆ: ದತ್ತಾತ್ರೇಯ ರಾಮಚಂದ್ರ ಬೇಂದ್ರೆ 1896ನೇ ಜನವರಿ 31ರಂದು ಧಾರವಾಡದ ಸಾಧನಕೇರಿಯಲ್ಲಿ ಜನಿಸಿದರು. ತಂದೆ ರಾಮಚಂದ್ರ ಭಟ್ಟ, ತಾಯಿ ಅಂಬಿಕೆ. ಹೈಸ್ಕೂಲು, ಕಾಲೇಜುಗಳಲ್ಲಿ ಅಧ್ಯಾಪಕರಾಗಿದ್ದ ಅವರು ಅಂಬಿಕಾತನಯದತ್ತ ಎಂಬ ಕಾವ್ಯನಾಮದಲ್ಲಿ ಕೃತಿಗಳ ರಚನೆ ಮಾಡಿದರು. ಬೇಂದ್ರೆಯವರ ಅರಳು ಮರಳು ಕವನ ಸಂಕಲನಕ್ಕೆ 1958ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ 1973ರಲ್ಲಿ ನಾಕುತಂತಿ ಕವನಸಂಕಲನಕ್ಕೆ ಭಾರತೀಯ ಜ್ಞಾನಪೀಠ ಪ್ರಶಸ್ತಿ ದೊರೆತಿವೆ. ಬೇಂದ್ರೆಯವರು ಅದಮ್ಯ ದೇಶಭಕ್ತರು. ಅರವಿಂದ ದರ್ಶನದಲ್ಲಿ ಆಸಕ್ತರು. ಒಳ್ಳೆಯ ಗದ್ಯ ಲೇಖಕರು. ಮರಾಠಿಯಲ್ಲಿ ಕೃತಿ ರಚನೆ ಮಾಡಿದ್ದಾರೆ. ಬೇಂದ್ರೆಯವರಿಗೆ ಗೌರವ ಡಾಕ್ಟರೇಟ್ ಪದವಿ ಹಾಗೂ ಪದ್ಮಶ್ರೀ ಪ್ರಶಸ್ತಿ ದೊರೆತಿವೆ. ಮರಣ: 26/10/1981. ಕೃತಿಗಳು: ನಾದಲೀಲೆ, ನಾಕುತಂತಿ, ಅರಳು ಮರಳು, ಗರಿ, ಕೃಷ್ಣ ಕುಮಾರಿ, ಸಾಯೋ ಆಟ.
3. ಶಿವರಾಮ ಕಾರಂತ: ಅರಬ್ಬಿ ಸಮುದ್ರದ ಕರಾವಳಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕೋಟದಲ್ಲಿ ಕಾರಂತರು 1902 ಅಕ್ಟೋಬರ್ 10 ರಂದು ಜನಿಸಿದರು. ಅಸಹಕಾರ ಚಳುವಳಿ, ಪತ್ರಿಕಾ ಪ್ರಪಂಚ, ಕಥೆ, ಕಾದಂಬರಿ, ಗೀತನಾಟಕ, ಶಿಶುಸಾಹಿತ್ಯ, ವಿಜ್ಞಾನ ಸಾಹಿತ್ಯ, ನಿಘಂಟು, ಚಿತ್ರಾಕಾರ, ನಟನೆ, ನರ್ತನ, ಸಿನಿಮಾ, ಯಕ್ಷಗಾನ ಹೀಗೆ ಕಾರಂತರು ಪಳಗಿಸಿಕೊಂಡದ್ದು ವೈವಿಧ್ಯಮಯವಾದದ್ದು. ಕಾರಂತರು ಕೇವಲ ಒಬ್ಬ ವ್ಯಕ್ತಿಯಲ್ಲ, ಒಂದು ಸಂಸ್ಥೆ ಎನ್ನುವುದು ಅತಿಶಯೋಕ್ತಿಯಲ್ಲ. ಕಾರಂತರಿಗೆ ಮೈಸೂರು, ಕರ್ನಾಟಕ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ನೀಡಿ ಗೌರವಿಸಿವೆ. ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿ ಹಾಗೂ 1977 ರಲ್ಲಿ ಮೂಕಜ್ಜಿಯ ಕನಸುಗಳು ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.
4. ಮಾಸ್ತಿ ವೆಂಕಟೇಶ್ ಅಯ್ಯಂಗಾರ್: ಮಾಸ್ತಿಯವರು ಕನ್ನಡ ನಾಡಿನ ಅಮೂಲ್ಯ ಆಸ್ತಿ. ಶ್ರೀನಿವಾಸ ಎಂಬುದು ಅವರ ಕಾವ್ಯನಾಮ. ಅವರು ಕೋಲಾರ ಜಿಲ್ಲೆಯ ಮಾಸ್ತಿ ಎಂಬಲ್ಲಿ 1891 ಜೂನ್ 6 ರಂದು ಜನಿಸಿದರು. ಆಗಿನ ಮೈಸೂರು ಸಿವಿಲ್ ಸೇವಾ ಇಲಾಖೆಯಲ್ಲಿ ವಿವಿಧ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಮಾಸ್ತಿಯವರು ತಮ್ಮ ಸಾಹಿತ್ಯದ ಅಭಿವ್ಯಕ್ತಿಗೆ ಪ್ರಧಾನವಾಗಿ ಆರಿಸಿಕೊಂಡ ಮಾಧ್ಯಮ ಸಣ್ಣ ಕಥೆ. ಮಾಸ್ತಿಯವರು ನೂರಾರು ಸಣ್ಣ ಕಥೆಗಳನ್ನು ಬರೆದು, ಹಲವು ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ. ಮಾಸ್ತಿಯವರ ಚಿಕವೀರ ರಾಜೇಂದ್ರ ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಮರಣ: 06/06/1986. ಕೃತಿಗಳು: ಚಿಕವೀರ ರಾಜೆಂದ್ರ, ರಂಗನ ಮದುವೆ, ಕೆಲವು ಸಣ್ಣ ಕಥೆಗಳು, ಸುಬ್ಬಣ್ಣ, ಚನ್ನಬಸಪ್ಪ ನಾಯಕ.
5. ವಿ. ಕೃ. ಗೋಕಾಕ್: 1909 ಆಗಸ್ಟ್ 9 ರಂದು ಧಾರವಾಡ ಜಿಲ್ಲೆಯ ಸವಣೂರಿನಲ್ಲಿ ವಿನಾಯಕ ಕೃಷ್ಣ ಗೋಕಾಕರು ಜನಿಸಿದರು. ಇವರ ಮೊದಲ ಸಾಹಿತ್ಯ ಕೃತಿ ಇಜ್ಜೋಡು. ಇವರ ಕಾವ್ಯನಾಮ ವಿನಾಯಕ. ಇವರು ಕವಿ, ವಿಮರ್ಶಕ, ಕಾದಂಬರಿಕಾರ, ಪ್ರಬಂಧಕಾರ, ನಾಟಕಕಾರ. ಪ್ರಾಧ್ಯಾಪಕರಾಗಿ, ಪ್ರಿನ್ಸಿಪಾಲರಾಗಿ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಶಿಕ್ಷಣ ಕ್ಷೇತ್ರಕ್ಕೆ ದೀರ್ಘಕಾಲ ಸೇವೆ ಸಲ್ಲಿಸಿದ ಗೋಕಾಕ್ ರವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ 1990 ರಲ್ಲಿ ಜ್ಞಾನಪೀಠ ಪ್ರಶಸ್ತಿ ದೊರಕಿದೆ. ಮರಣ: 28/04/1992. ಕೃತಿಗಳು: ಕಲೋಪಸಕ, ತ್ರಿವಿಕ್ರಮ, ಆಕಾಶಗಂಗೆ, ಸಮುದ್ರ ಗೀತೆಗಳು, ಕಾಶ್ಮೀರ, ಇಜ್ಜೋಡು, ಸಮರಸವೇ ಜೀವನ, ಜನನಾಯಕ.
6. ಗಿರೀಶ್ ಕಾರ್ನಾಡ್: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಮೇಳಿಗೆಯಲ್ಲಿ 1938 ಮೇ 19ರಂದು ಜನನ. ಇವರ ನಾಟಕಗಳು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಪ್ರಸಿದ್ಧಿ ಪಡೆದಿವೆ. ಸ್ವತಃ ಚಿತ್ರ ನಿರ್ದೇಶಕರಾಗಿ ಚಿತ್ರಿಸಿರುವ ಇವರ ಚಿತ್ರಗಳಿಗೆ ಭಾರತ ಸರ್ಕಾರದ ರಜತ ಕಮಲ ಪ್ರಶಸ್ತಿ ದೊರೆತಿದೆ. ಯಯಾತಿ, ತಲೆದಂಡ ನಾಟಕಗಳಿಗೆ ಕೇಂದ್ರ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ. ಗೌರವ ಡಾಕ್ಟರೇಟ್ ಪದವಿ, ರಾಜ್ಯೋತ್ಸವ ಪ್ರಶಸ್ತಿ ಹಾಗೂ ಇವರ ಸಮಗ್ರ ಸಾಹಿತ್ಯಕ್ಕೆ 1998ರಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಕೃತಿಗಳು: ಹಯವದನ, ಯಯಾತಿ, ಹಿಟ್ಟಿನ ಹುಂಜ, ತುಘಲಕ್, ತಲೆದಂಡ, ನಾಗಮಂಡಲ, ಅಗ್ನಿ ಮತ್ತು ಮಳೆ.
7. ಯು. ಆರ್. ಅನಂತಮೂರ್ತಿ: ಮಹಾರಾಷ್ರದ ಮಾಥೇರಾನದಲ್ಲಿ 1932 ಡಿಸೆಂಬರ್ 20 ರಂದು ಜನನ. ಸಣ್ಣಕಥೆ, ಕಾದಂಬರಿ, ಪ್ರಬಂಧ, ವಿಮರ್ಶೆಯಲ್ಲಿ ಪ್ರಸಿದ್ಧಿ ಪಡೆದಿರುವ ವರು ಕೇರಳದ ಕೊಟ್ಟಾಯಂನ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಉಪ ಕುಲಪತಿಯಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಹಾಗೂ ಅವರ ಸಮಗ್ರ ಸಾಹಿತ್ಯಕ್ಕೆ 1998ರಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ದಿರೆತಿವೆ. ಇವರು ಆಗಸ್ಟ್ 22 2014 ರಂದು ನಿಧನರಾದರು. ಕೃತಿಗಳು: ಆಕಾಶ ಮತ್ತು ಬೆಕ್ಕು, ಸಂಸಾರ, ಭಾರತೀಪುರ, ಅವಸ್ಥೆ, ಭವ ದಿವ್ಯ, ಘಟಶ್ರಾಧ, ಸಮಕ್ಷಮ, ಪ್ರಜ್ಞೆ ಮತ್ತು ಪರಿಸರ.
8. ಚಂದ್ರಶೇಖರ ಕಂಬಾರ: ಜನ್ಮ 1937 ಜನವರಿ 2 ರಂದು, ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ. ತಂದೆ ಬಸವಣ್ಣೆಪ್ಪ ಆರ್ ಕಂಬಾರ, ತಾಯಿ ಚನ್ನಮ್ಮ. ಮನೆತನದ ವೃತ್ತಿ ಕಮ್ಮಾರಿಕೆ. ಪ್ರಾಥಮಿಕ ವಿದ್ಯಾಭ್ಯಾಸ ಘೋಡಗೇರಿಯಲ್ಲಿ, ಪ್ರೌಢಶಾಲಾ ವಿದ್ಯಾಭ್ಯಾಸ ಗೋಕಾಕದಲ್ಲಿ, ಕಾಲೇಜು ಶಿಕ್ಷಣ ಬೆಳಗಾವಿಯಲ್ಲಿ ಮುಂದುವರೆಯಿತು. ಚಂದ್ರಶೇಖರ ಕಂಬಾರರು ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಗಣನೀಯ. 22 ನಾಟಕಗಳು, 8 ಕವನ ಸಂಕಲನಗಳು, 3 ಕಾದಂಬರಿಗಳು ಮತ್ತು ಜನಪದ, ರಂಗಭೂಮಿ, ಶಿಕ್ಷಣ ಮತ್ತು ಸಾಹಿತ್ಯಕ್ಕೆ ಸಂಬಂಧಪಟ್ಟಂತೆ 12 ಸಂಶೋಧನಾ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಕೃತಿಗಳು: ಋಷ್ಯರಂಗ, ಜೋಕುಮಾರ ಸ್ವಾಮಿ.

(ಚಿತ್ರಗಳ ಸಂಗ್ರಹ : ಮಾಸ್ಟರ್. ರೋಹಿತ್, ಎಸ್.)

( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ
ಮಾಸ್ಟರ್. ರೋಹಿತ್, ಎಸ್.

7ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ