ಬುಧವಾರ, ನವೆಂಬರ್ 29, 2017

ಬುದ್ಧಿವಂತ ಬೀರಬಲ್

ಅಕ್ಬರನ ಆಸ್ಥಾನಕ್ಕೆ ಒಮ್ಮೆ ವಿದೇಶಿ ದೂತನೊಬ್ಬ ಬಂದು ತನ್ನ ಅರಸರ ಓಲೆಯನ್ನು ಚಕ್ರವರ್ತಿಗೆ ನೀಡಿದನು. ಅದರಲ್ಲಿ "ಚಕ್ರವರ್ತಿಗಳೇ, ತಮ್ಮ ಆಸ್ಥಾನದಲ್ಲಿ ಬಹಳ ಜನ ಮಹಾನ್ ಪಂಡಿತರಿದ್ದಾರೆ ಎಂಬ ವಿಷಯ ನಮ್ಮ ದೇಶವರೆಗೂ ಹರಡಿದೆ. ಆವರ ಪಾಂಡಿತ್ಯವನ್ನು ಒಂದು ಗಡಿಗೆಯಲ್ಲಿ ತುಂಬಿ ಕಳುಹಿಸಿದರೆ ನಾವೂ ಅದನ್ನು ನೋಡಬಹುದು" ಎಂದು ಬರೆದಿತ್ತು. ಈ ಸಮಸ್ಯೆಯಿಂದ ಚಿಂತಿತನಾದ ಅಕ್ಬರನು ಅದನ್ನು ಉಪಸ್ಥಿತರಿದ್ದ ಎಲ್ಲ ಆಸ್ಥಾನ ಪಂಡಿತರ ಮುಂದೆ ಇರಿಸಿದ. ಗಡಿಗೆಯಲ್ಲಿ ಪಾಂಡಿತ್ಯವನ್ನು ತುಂಬುವುದು ಹೇಗೆ? ಎಂಬುದು ಎಲ್ಲರಿಗೂ ಬಗೆಹರಿಸಲಾಗದ ಕಗ್ಗಂಟಾಯಿತು.

ತಮ್ಮ ಅರಸರನ್ನು ಅವಮಾನಿಸುವ ವಿದೇಶಿ ಅರಸನ ಸಂಚನ್ನು ಅರ್ಥ ಮಾಡಿಕೊಂಡ ಬೀರಬಲ್ಲನು ಈ ಸಮಸ್ಯೆಗೆ ಉತ್ತರಿಸಲು ತನಗೆ ಎರಡು ತಿಂಗಳು ಕಾಲಾವಾವಕಾಶ ಬೇಕೆಂದು ಕೇಳಿ ದೂತನಿಂದ ಅಷ್ಟು ಸಮಯ ಪಡೆದನು. ಆ ದಿನವೇ ಅವನು ತನ್ನ ಮನೆಯ ಹಿತ್ತಲಲ್ಲಿ ಕುಂಬಳ ಬೀಜವನ್ನು ನೆಟ್ಟು ನೀರು ಹಾಕಿ ಬೆಳೆಸಿದನು. ಕುಂಬಳ ಗಿಡ ಹೂಬಿಟ್ಟು ಹೀಚಾದಾಗ ಅದನ್ನು ಗಡಿಗೆಯೊಳಗಿಟ್ಟು ಗಿಡವನ್ನು ಚೆನ್ನಾಗಿ ಆರೈಕೆ ಮಾಡಿದನು. ಕುಂಬಳಕಾಯಿಯು ಗಡಿಗೆಯ ಒಳಗೇ ಬೆಳೆದು ದೊಡ್ಡದಾಯಿತು.


ಎರಡು ತಿಂಗಳ ನಂತರ ಆ ದೂತ ಬಂದಾಗ, ಗಡಿಗೆ ಸಹಿತ ಕುಂಬಳಕಾಯಿಯನ್ನು ಗಿಡದಿಂದ ಬೇರ್ಪಡಿಸಿ ಆಸ್ಥಾನಕ್ಕೆ ತಂದು, ಪಾಂಡಿತ್ಯವನ್ನು ಗಡಿಗೆಯಲ್ಲಿ ತುಂಬಿ ತಂದಿರುವೆನು, ನಿಮ್ಮ ದೇಶದ ಅರಸರಿಗೆ ನಮ್ಮ ಅರಸರು ಇದನ್ನು ಕಾಣಿಕೆಯಾಗಿ ನೀಡುತ್ತಿರುವರು. ಅವರಿಗೆ ತಲುಪಿಸಿ. ಎಂದು ಆ ದೂತನಿಗೆ ಅದನ್ನು ಒಪ್ಪಿಸಿದನು. ಉಪಾಯ ಮಾಡಿ ಮತ್ತೊಮ್ಮೆ ತನ್ನ ಬುದ್ಧಿವಂತಿಕೆಯಿಂದ ದೇಶದ ಮಾನ ಉಳಿಸಿದ ಬೀರಬಲ್ಲನನ್ನು ಅಕ್ಬರ್ ಚಕ್ರವರ್ತಿ ಸಭೆಯಲ್ಲಿ ತುಂಬಾ ಕೊಂಡಾಡಿ ಹೇರಳ ಧನಕನಕ ನೀಡಿ ಸನ್ಮಾನಿಸಿದನು.

( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ
ಕುಮಾರಿ. ಸುಚಿತ್ರ

7ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ