ಬುಧವಾರ, ನವೆಂಬರ್ 1, 2017

ಕನ್ನಡ ರಾಜ್ಯೋತ್ಸವದ ಬಗ್ಗೆ ಪ್ರಬಂಧ

ಕನ್ನಡ ರಾಜ್ಯೋತ್ಸವ ನಾಡಹಬ್ಬದ ಈ ಶುಭದಿನದಂದು ಸಮಸ್ತ ಕನ್ನಡಿಗರಿಗೆ ಹೃದಯಪೂರ್ವಕ ಶುಭಾಶಯಗಳು.

ಕೃಪೆ : YouTube

ನವಂಬರ್ 2017ರ ಮಾಹೆಯಲ್ಲಿ ನಡೆಯಲಿರುವ ಕಹಳೆ-2017 ಕಾರ್ಯಕ್ರಮವು ನಿರ್ವಿಘ್ನವಾಗಿ ನೆರವೇರುವಂತಾಗಲಿ ಎಂದು ದೈವೀಸಂಭೂತರಾದ ಗುರುಗಳ ಪಾದಾರವಿಂದಗಳಿಗೆ ನಮಿಸಿ, ಕಹಳೆಯ ಏಳನೇ ಆವೃತ್ತಿಯನ್ನು ಸಮಸ್ತ ಕನ್ನಡಿಗರ ಪರವಾಗಿ ಮಾತೃಸ್ವರೂಪಿಯಾದ ಕನ್ನಡಾಂಬೆಗೆ ಶ್ರದ್ಧಾಪೂರ್ವಕವಾಗಿ ಅರ್ಪಿಸುತ್ತಿದ್ದೇವೆ.
ಪ್ರಸ್ತುತ ಕಾರ್ಯಕ್ರಮದ ವಿಶೇಷ - ನಮ್ಮ ಹೆಮ್ಮೆಯ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಅವ್ಯಕ್ತ ಪ್ರತಿಭೆಗಳಿಂದ ವಿರಚಿತ ಲೇಖನಗಳ ಪ್ರಕಟಣೆ. ಇಂತಹ ವಿಶಿಷ್ಟ ಆವೃತ್ತಿಯು ಕಹಳೆಯ ಪುಟಗಳಲ್ಲಿ ದಾಖಲಾಗುತ್ತಿರುವುದು ಸಂಭ್ರಮ; ಈ ನಿಷ್ಕಲ್ಮಶ ಪದಪುಂಜಗಳಿಂದ ನಿರ್ಮಿತ ಲೇಖನ ಮಾಲೆಯನ್ನು ಓದಿಕೊಳ್ಳುವುದೇ ಚೆಂದ. ಬನ್ನಿ, ಇಂತಹುದೊಂದು ಇತಿಹಾಸಕ್ಕೆ ಕಹಳೆಯೊಂದಿಗೆ ಸಾಕ್ಷಿಯಾಗೋಣ..

ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವವನ್ನು ಪ್ರತಿ ವರ್ಷದ ನವೆಂಬರ್ 1 ರಂದು ಆಚರಿಸಲಾಗುತ್ತದೆ. ಮೈಸೂರು ರಾಜ್ಯವು (ಈಗಿನ ಕರ್ನಾಟಕ) 1956ರ ನವೆಂಬರ್ 1 ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ. ರಾಜ್ಯೋತ್ಸದ ದಿನವನ್ನು ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ರಜಾದಿನವೆಂದು ಪಟ್ಟಿ ಮಾಡಲಾಗಿದೆ ಮತ್ತು ವಿಶ್ವದಾದ್ಯಂತ ಕನ್ನಡಿಗರು ಇದನ್ನು ಆಚರಿಸುತ್ತಾರೆ. ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾವ್‍ರವರು ಕರ್ನಾಟಕದ ಏಕೀಕರಣದ ಚಳುವಳಿಯನ್ನು 1905ರಲ್ಲಿ ಪ್ರಾರಂಭಿಸಿದರು. 1950ರಲ್ಲಿ ಭಾರತವು ಗಣರಾಜ್ಯವಾದ ನಂತರ ಭಾರತದ ವಿವಿಧ ಪ್ರಾಂತ್ಯಗಳು, ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರೂಪುಗೊಂಡವು. ಈ ಹಿಂದೆ ರಾಜರ ಆಳ್ವಿಕೆಯಲ್ಲಿ ದಕ್ಷಿಣ ಭಾರತದಲ್ಲಿ ಹಲವಾರು ಸಂಸ್ಥಾನಗಳನ್ನು ಒಳಗೊಂಡಂತೆ ರಾಜ್ಯಗಳು ರೂಪುಗೊಂಡಿದ್ದವು. ಕನ್ನಡ ಮಾತನಾಡುವ ಪ್ರಾಂತ್ಯಗಳು ಸೇರಿ ಮೈಸೂರು ರಾಜ್ಯವು ಉದಯವಾಯಿತು. 1956ರ ಮದ್ರಾಸ್. ಮುಂಬೈ ಹೈದರಾಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯವು ಉದಯವಾಯಿತು ಹಾಗೂ ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆಯ ಮೈಸೂರು ಎಂಬುದಾಗಿ ಹೊಸದಾಗಿ ರೂಪುಗೊಂಡ ಮೈಸೂರು ರಾಜ್ಯವನ್ನು ಮೂರು ಪ್ರದೇಶಗಳಲ್ಲಿ ಗುರುತಿಸಲಾಯಿತು.

ನವೆಂಬರ್ 1 ಕನ್ನಡ ರಾಜ್ಯೋತ್ಸವ. ನಮ್ಮ ರಾಜ್ಯದೆಲ್ಲೆಡೆ ನವೆಂಬರ್ 1 ನ್ನು ಕನ್ನಡ ದಿನವನ್ನಾಗಿ ಆಚರಿಸುತ್ತೇವೆ. ನಮ್ಮ ನಾಡು ಕನ್ನಡ ನಾಡು. ಕರ್ನಾಟಕವು ತನ್ನದೇ ಆದ ಹಿರಿಮೆ ಗರಿಮೆ ಮತ್ತು ಪರಂಪರೆಯುಳ್ಳ ಭಾರತದ ರಾಜ್ಯಗಳಲ್ಲಿ ಒಂದಾಗಿದೆ. ಪ್ರಕೃತಿ ಸೌಂದರ್ಯ, ವನ್ಯ ಜೀವಿಗಳ ಸಮೃದ್ಧಿ ಹಾಗೂ ವಿಶ್ವ ಪರಂಪರೆಯ ಸಾಲಿನಲ್ಲಿ ಪ್ರಸಿದ್ಧಿಪಡೆದ ಕೀರ್ತಿ ನಮ್ಮ ಕರ್ನಾಟಕ ರಾಜ್ಯಕ್ಕಿದೆ.

ಕರ್ನಾಟಕ ಎಂಬ ಹೆಸರಿನ ಹಿನ್ನೆಲೆ: ಕರ್ನಾಟಕ ಎಂಬ ಹೆಸರು ಪ್ರಾಚೀನ ಕಾಲದಿಂದಲೂ ಬಂದಿದೆ. ಇದನ್ನು ಕರುನಾಡು (ಕರ್ + ನಾಡು) ಎಂದರೆ ಕಪ್ಪು ಮಣ್ಣಿನ ನಾಡು ಎಂದು ಕರೆಯುತ್ತಿದ್ದರು. ಮೈಸೂರು ಅರಸರ ಒಡೆತನದಲ್ಲಿದ್ದ ದಕ್ಷಿಣದ 9 ಜಿಲ್ಲೆಗಳನ್ನೊಳಗೊಂಡು 1958 ರಲ್ಲಿ ಮೈಸೂರು ರಾಜ್ಯವು ಉದಯವಾಯಿತು. ಅನಂತರ ಭಾಷಾ ಪ್ರಾಂತ್ಯಗಳಾಗಿ ವಿಂಗಡಿಸುವಾಗ ಮುಂಬಯಿ, ಹೈದರಾಬಾದ, ಮದ್ರಾಸ್ ಹಾಗೂ ಕೊಡಗು ಪ್ರಾಂತ್ಯಗಳಲ್ಲಿ ಹಂಚಿಹೋಗಿದ್ದ ಕನ್ನಡ ಭಾಷೆ ಮಾತನಾಡುವ ಜನರ ಪ್ರದೇಶಗಳನ್ನು ಒಟ್ಟಾಗಿ ಸೇರಿಸಿದ್ದರಿಂದ 1956 ನವೆಂಬರ್ 1 ರಂದು ವಿಶಾಲ ಮೈಸೂರು ರಾಜ್ಯವು ಅಸ್ತಿತ್ವಕ್ಕೆ ಬಂದಿತು. ಇದರ ಸವಿನೆನಪಿಗಾಗಿ ನವೆಂಬರ್ ತಿಂಗಳಲ್ಲಿ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಕನ್ನಡಿಗರ ಅಭಿಲಾಷೆಯಂತೆ 1973 ನವೆಂಬರ್ 1 ರಂದು ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು.

ಈ ಮೇಲಿನ ಎಲ್ಲಾ ನಿದರ್ಶನಗಳು ನಮ್ಮ ಕನ್ನಡ ಭಾಷೆ ಬೆಳೆದು ಬಂದ ಹಾದಿ ಹಾಗೂ ಅದರ ಹಿರಿಮೆಯನ್ನು ನೆನಪಿಸುತ್ತವೆ. ಹೀಗೆ ನಮ್ಮ ಕನ್ನಡ ಭಾಷೆ, ನಾಡು, ಸಂಸ್ಕೃತಿ, ಸಾಹಿತ್ಯದ ಬಗ್ಗೆ ಎಷ್ಟು ಬರೆದರೂ, ಎಷ್ಟು ಹೊಗಳಿದರೂ ಸಾಲದು. ಇಂತಹ ನಾಡಿನಲ್ಲಿ ಜನ್ಮವೆತ್ತ ನಾವೆಲ್ಲರೂ ಪುಣ್ಯವಂತರು.

( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ
ಮಾಸ್ಟರ್. ಶಿವಕುಮಾರ್, ಹೆಚ್.

8ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

Blog  |  Facebook  |  Twitter

7 ಕಾಮೆಂಟ್‌ಗಳು: