ಶುಕ್ರವಾರ, ನವೆಂಬರ್ 9, 2018

ಕಾಗೆ ಮತ್ತು ಹಾವು

ಚಿತ್ರ ಕೃಪೆ : ಗೂಗಲ್

ಒಂದಾನೊಂದು ಕಾಲದಲ್ಲಿ ಒಂದು ಆಲದ ಮರದ ಮೇಲೆ ಜೋಡಿ ಕಾಗೆಗಳು ಇದ್ದವು. ಆಶ್ರಯಕ್ಕಾಗಿ ಹುಡುಕುತ್ತಿದ್ದ ದೊಡ್ಡ ಹಾವು ಅದೇ ಮರದ ಕೆಳಗೆ ಬಂದು ಅಲ್ಲಿನ ಬಿಲದಲ್ಲಿ ಸೇರಿಕೊಂಡಿತ್ತು. ತಮ್ಮ ನೆರೆಯವನಾಗಿ ಈ ಹಾವು ಬಂದು ಸೇರಿಕೊಂಡಿದ್ದಕ್ಕೆ ಕಾಗೆಗಳಿಗೆ ತುಂಬಾ ಆತಂಕವಾಯಿತು. ಈ ವಿಷಯವನ್ನು ಕಾಗೆಗಳು ಸ್ನೇಹಿತರ ಜೊತೆ ಚರ್ಚಿಸಿದವು. ಎಲ್ಲರ ಮಕ್ಕಳನ್ನು ಈ ದುಷ್ಟ ಹಾವು ತಿನ್ನಬಹುದು, ಆದ್ದರಿಂದ ಹುಷಾರಾಗಿ ಇರಬೇಕು ಎಂದು ಎಚ್ಚರಿಸಿದವು. ನನ್ನ ಎಲ್ಲಾ ಮಕ್ಕಳನ್ನು ಈ ಹಾವು ತಿಂದುಹಾಕಿದರೆ, ನಾನು ಹೇಗೆ ತಾನೆ ಮೊಟ್ಟೆ ಇಟ್ಟು ಮರಿ ಮಾಡುವುದು? ನಾವು ಬೇರೊಂದು ಜಾಗದಲ್ಲಿ ಗೂಡು ಮಾಡೋಣ ಎಂದು ಹೆಣ್ಣು ಕಾಗೆ ದುಃಖದಿಂದ ಹೇಳಿತು. ಅದಕ್ಕೆ ಗಂಡು ಕಾಗೆ ಸಂತೈಸಿ, ನಾವು ಜಾಗವನ್ನು ಬಿಡೋದು ಬೇಡ, ಹೇಗಾದರೂ ಮಾಡಿ ಹಾವನ್ನು ಆಚೆಗೆ ಹಾಕೋಣ ಎಂದು ಹೇಳಿತು.

ಸ್ವಲ್ಪ ದಿನಗಳ ನಂತರ ಹೆಣ್ಣು ಕಾಗೆ ಮೂರು ಮೊಟ್ಟೆಗಳನ್ನು ಇಟ್ಟಿತು. ನಂತರ ಮೂರು ಪುಟ್ಟ ಪುಟ್ಟ ಮರಿಗಳು ಆಚೆಗೆ ಬಂದವು. ಆ ಮರಿ ಕಾಗೆಗಳ ಸದ್ದನ್ನು ಕೇಳಿದ ಹಾವಿಗೆ ತುಂಬಾ ಸಂತೋಷವಾಯಿತು. ಒಂದು ದಿನ ದೊಡ್ಡ ಕಾಗೆಗಳು ಆಚೆ ಹೋಗಿದ್ದಾಗ, ದುರಾಸೆಯಿಂದ ಹಾವು ನಿಧಾನವಾಗಿ ಕಾಗೆಗಳ ಗೂಡಿಗೆ ಬಂದು ಮೂರು ಮರಿಗಳನ್ನು ತಿಂದುಹಾಕಿತು. ದೊಡ್ಡ ಕಾಗೆಗಳು ವಾಪಸ್ಸು ಬಂದಾಗ ಗೂಡು ಖಾಲಿಯಾಗಿರೋದು ನೋಡಿ ಹೆಣ್ಣು ಕಾಗೆ ಜೋರಾಗಿ ಅಳಲಾರಂಭಿಸಿತು. ಆ ಹಾವಿಗೆ ನಾನು ಪಾಠ ಕಲಿಸುತ್ತೇನೆ ಎಂದು ಗಂಡು ಕಾಗೆ ಹೇಳಿತು.

ಕೆಲವು ದಿನಗಳ ನಂತರ ಮತ್ತೆ ಹೆಣ್ಣು ಕಾಗೆ ಮೊಟ್ಟೆಗಳನ್ನು ಇಟ್ಟಿತು. ಮರಿ ಕಾಗೆಗಳನ್ನು ರಕ್ಷಿಸಲು ಗಂಡು ಕಾಗೆಯು ನರಿಯ ಸಲಹೆಯನ್ನು ಕೇಳಿತು. ಕಾಗೆ ಹೇಳಿದ ಕಥೆಯನ್ನು ಕೇಳಿದ ನರಿಯು ಉಪಾಯವನ್ನು ಸೂಚಿಸಿತು. ನದಿಯ ಬಂಡೆಯ ಬಳಿ ಹಾರಿ ಹೋಗು, ಅಲ್ಲಿ ಒಬ್ಬಳು ರಾಣಿ ಸ್ನಾನ ಮಾಡುತ್ತಿರುತ್ತಾಳೆ. ಅವಳ ವಜ್ರದ ಹಾರವನ್ನು ಎತ್ತಿಕೊಂಡು ಬಂದು ಹಾವಿನ ಬಿಲದಲ್ಲಿ ಹಾಕು. ಇದರಿಂದ ಹಾವಿಗೆ ತಕ್ಕ ಶಾಸ್ತಿಯಾಗುತ್ತದೆ ಎಂದು ಉಪಾಯ ಹೇಳಿಕೊಟ್ಟಿತು.

ಕಾಗೆ ಹಾಗೇ ಮಾಡಿತು. ಅದನ್ನು ನೋಡಿದ ಸೈನಿಕರು ಹಾರವನ್ನು ಹೊರಕ್ಕೆ ತೆಗೆಯಲು ಹೋದರು. ಆಗ ಬಿಲದಲ್ಲಿದ್ದ ಹಾವು ಬುಸ್ ಬುಸ್ ಎಂದು ಹೊರಕ್ಕೆ ಬಂದಿತು. ಸೈನಿಕರು ತಂದಿದ್ದ ಆಯುಧಗಳನ್ನು ನೋಡಿದ ಹಾವು ಹೆದರಿಕೊಂಡು ಆ ಜಾಗ ಬಿಟ್ಟು ಮತ್ತೆ ಎಂದೂ ಬರುವುದಿಲ್ಲ ಎಂದು ಓಡಿಹೋಯಿತು. ದುಷ್ಟ ಹಾವನ್ನು ಹೊರಕ್ಕೆ ಹಾಕಿದ್ದಕ್ಕೆ ಕಾಗೆಗಳು ತುಂಬಾ ಸಂತೋಷಪಟ್ಟವು.

ಸೂಕ್ಷ್ಮ ಆಲೋಚನೆ ಮತ್ತು ಚತುರ ಯೋಜನೆ ಅಪಾಯದ ಸಮಯದಲ್ಲಿ ನಮ್ಮನ್ನು ರಕ್ಷಿಸುತ್ತದೆ.

ವಿದ್ಯಾರ್ಥಿ ಕಿರುಪರಿಚಯ
ಕುಮಾರಿ. ಪ್ರೀತಿ

4ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

1 ಕಾಮೆಂಟ್‌: