ಬುಧವಾರ, ನವೆಂಬರ್ 14, 2012

ಜ್ಞಾನ ಜ್ಯೋತಿ ಬೆಳಗಿರಿ.. ಸಾಕ್ಷರತೆಯ ಸಾರಿರಿ..

ಇಂದು ದೀಪಾವಳಿ ಹಬ್ಬ! ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು.

ಯಾವುದೇ ಹಬ್ಬದಲ್ಲಿ ನಮ್ಮ ಪೂರ್ವಜರು ಆಚರಣೆಗೆ ತಂದಿರುವ ಬಹುಶಃ ಎಲ್ಲ ಸಂಪ್ರದಾಯಗಳು ವ್ಯಕ್ತಿಗೆ, ಸಮಾಜಕ್ಕೆ, ತನ್ಮೂಲಕ ಮನುಕುಲಕ್ಕೆ ಒಳಿತನ್ನು ತರುವಂತಹ ಸಂದೇಶವನ್ನು ಸಾರುವಂತೆ ತೋರುತ್ತವೆ. ದೀಪಾವಳಿ ಹಬ್ಬದ ಆಚರಣೆಯಲ್ಲಿ ನಾವು ಸಂಪ್ರದಾಯವೆಂಬಂತೆ ಅನುಸರಿಸಿಕೊಂಡು ಬರುತ್ತಿರುವ ದೀಪಗಳನ್ನು ಬೆಳಗಿಸುವ ಪದ್ಧತಿಯ ಹಿಂದಿನ ಮಹತ್ವ ಏನಿರಬಹುದೆಂದು ನಾವು ಅವಲೋಕಿಸುವ ಪ್ರಯತ್ನ ಮಾಡೋಣ.

ಕಲೆ : ಶ್ರೀ ಸು. ವಿ. ಮೂರ್ತಿ

"ದೀಪದ ಮಗ್ಗುಲಲ್ಲಿ ಕತ್ತಲು" ಎಂಬುದು ಸಾಮಾನ್ಯವಾಗಿ ಬಳಕೆಯಲ್ಲಿರುವ ನಾನ್ಣುಡಿ. ಇದು ನಿಜವೂ ಹೌದು.. ನಾವು ಸೂಕ್ಷ್ಮವಾಗಿ ಗಮನಿಸಿದರೆ, ಯಾವುದೇ ಜ್ಯೋತಿಯ ಸುತ್ತಲ ಮಗ್ಗುಲಿನಲ್ಲಿ ಸಹಜವಾಗಿ ಕತ್ತಲೆಯು ಆವರಿಸಿರುತ್ತದೆ. ಯಾವುದೇ ಪ್ರಯತ್ನದಿಂದ ದೀಪವು ತನ್ನ ಸುತ್ತಲೂ ಆವರಿಸಿರುವ ಕತ್ತಲನ್ನು ತಾನು ತಾನಾಗಿಯೇ ಹೋಗಲಾಡಿಸಿಕೊಳ್ಳಲು ಸಾಧ್ಯವಾಗದು. ಆದರೆ, ಈ ದೀಪವು ತನ್ನಲ್ಲಿರುವ ಉಜ್ವಲ ಜ್ಯೋತಿಯಿಂದ ಇನ್ನೊಂದು ದೀಪವನ್ನು ಬೆಳಗಿಸಿದರೆ, ಆ ದೀಪವು ಬೆಳಗುತ್ತಾ ಪಸರಿಸುವ ಬೆಳಕಿನಿಂದ ತನ್ನನ್ನು ಸುತ್ತುವರೆದ ಕತ್ತಲೆಯು ಮಾಯವಾಗುತ್ತದೆ. ಹೀಗೆ ಒದೊಂದಾಗಿ ಹಲವಾರು ಸಾಲು ದೀಪಗಳನ್ನು ಬೆಳಗಿಸಿದಲ್ಲಿ ಎಲ್ಲೆಲ್ಲಿಯೂ ಪ್ರಜ್ವಲ ಜ್ಯೋತಿಯ ಬೆಳಕು ಆವರಿಸಿ ಕತ್ತಲೆಯನ್ನು ಸಂಪೂರ್ಣವಾಗಿ ಇಲ್ಲವಾಗಿಸುವುದು ಸಾಧ್ಯವಾಗುತ್ತದೆ.

ಜ್ಯೋತಿಯು ಅಕ್ಷರವನ್ನು ಪ್ರತಿನಿಧಿಸಿದರೆ, ಕತ್ತಲೆಯು ಅನಕ್ಷರತೆಯ ಪ್ರತೀಕವೆನ್ನಬಹುದು; ಜ್ಯೋತಿಯಿಂದ ಬರುವ ಬೆಳಕು ಜ್ಞಾನವೆನ್ನಬಹುದಾದರೆ, ಸುತ್ತಲೂ ಆವರಿಸುವ ಕತ್ತಲೆಯು ಅಜ್ಞಾನವೆನ್ನಬಹುದಲ್ಲವೇ? ಮೇಲೆ ಪ್ರಸ್ತಾಪಿಸಿದ ದೀಪ-ಜ್ಯೋತಿಗಳ ತರ್ಕವನ್ನೇ ಅಕ್ಷರತೆ, ಜ್ಞಾನ ಮತ್ತು ಮನುಕುಲಕ್ಕೆ ಹೋಲಿಸಿ ಹೇಳುವುದಾದರೆ, ಒಬ್ಬ ವ್ಯಕ್ತಿಯು ಸಂಪಾದಿಸಿಕೊಂಡಿರುವ ಜ್ಞಾನವನ್ನು ಇತರರಿಗೆ ಮುಕ್ತವಾಗಿ ಹಂಚಿಕೊಂಡಾಗ ಮಾತ್ರ ಅಜ್ಞಾನ/ಅನಕ್ಷರತೆಯನ್ನು ನಮ್ಮ ಸಮಾಜದಿಂದ ಸಂಪೂರ್ಣವಾಗಿ ಹೋಗಲಾಡಿಸಬಹುದು ಎಂದಾಗುವುದಲ್ಲವೇ?

ಇಂದಿನ ನಮ್ಮ ಸಮಾಜದಲ್ಲಿ ಪ್ರತಿಯೊಬ್ಬರೂ ಸಹ ಪ್ರಾಪಂಚಿಕ ಸಂಪತ್ತನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿರುವಂತೆ ಭಾಸವಾಗುತ್ತದೆ. ತಮಗೆ ಮಾತ್ರವಲ್ಲ, ತಮ್ಮ ಮಕ್ಕಳು, ಅವರ ಮಕ್ಕಳು, ಅವರ ಮಕ್ಕಳೆಲ್ಲರೂ ಕುಳಿತು ತಿನ್ನುವಷ್ಟು ಸಂಪತ್ತನ್ನು ಗಳಿಸುವ ಮಹದಾಸೆಯನ್ನು ಇಂದು ಅನೇಕರಲ್ಲಿ ಕಾಣುತ್ತೇವೆ. ಇದು ವಾಸ್ತವದಲ್ಲಿ ಅಸಾಧ್ಯವಾದರೂ, ಸಾಧ್ಯವಾಗಿಸುವ ಎಲ್ಲಾ ಪ್ರಯತ್ನ ಮಾಡುತ್ತಾ ಭ್ರಷ್ಟಾಚಾರವೆಂಬ ಪಿಡುಗನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ನಮ್ಮ ಮುಂದಿನ ಪೀಳಿಗೆಯವರಿಗೆ ನಾವು ತೋರಿಸಿಕೊಡುತ್ತಿರುವ ಈ ದಾರಿ ಸನ್ಮಾರ್ಗವೇ? ಎಂಬ ಪ್ರಶ್ನೆಯನ್ನು ನಾವು ಇಂದು ಉತ್ತರಿಸುವ ಸ್ಥಿತಿಯಲ್ಲಿಲ್ಲ.

ಹೀಗೆ ಅಪಾರ ಸಂಪತ್ತನ್ನು ಭ್ರಷ್ಟಮಾರ್ಗದಲ್ಲಿ ಸಂಪಾದಿಸಿ ಶೇಖರಿಸುವ ಬದಲಾಗಿ, ನಾವು ಕಷ್ಟಪಟ್ಟು ಕಲಿತಿರುವ ಕೆಲವೇ ಅಕ್ಷರಗಳು ಮತ್ತು ಜ್ಞಾನವನ್ನು ಮಕ್ಕಳೊಂದಿಗೆ ಅಥವಾ ಇತರರೊಂದಿಗೆ ಹಂಚಿಕೊಳ್ಳುವ ಅಗತ್ಯವಿದೆ ಎನಿಸುತ್ತದೆ. ಹೀಗೆ ಮಾಡಿದಾಗ ಮಾತ್ರ ಅಕ್ಷರ-ಜ್ಞಾನವು ಪಸರಿಸುವುದಲ್ಲದೇ, ಭ್ರಷ್ಟಾಚಾರ-ಅಜ್ಞಾನವೆಂಬ ಕತ್ತಲೆಯೂ ದೂರವಾಗುವುದು. ದೀಪಾವಳಿಯಂದು ಸಾಲು ಸಾಲು ದೀಪಗಳನ್ನು ಸಾಂಕೇತಿಕವಾಗಿ ಬೆಳಗಿಸುವ ಹಿಂದಿರಬಹುದಾದ ಅಂತರಾರ್ಥವೂ ಸಹ ಇದೇ ಆಗಿರಬಹುದಲ್ಲವೇ??

ಕಲೆ : ಶ್ರೀ ಸು. ವಿ. ಮೂರ್ತಿ

ಇಂದಿನ ದೀಪಾವಳಿಯಂದು ನಾವು ಅನಕ್ಷರತೆ-ಭ್ರಷ್ಟಾಚಾರದ ಕತ್ತಲೆಯನ್ನು ತೊಲಗಿಸಿ, ನಮ್ಮ ಮುಂದಿನ ಪೀಳಿಗೆಯವರಿಗೆ ಅಕ್ಷರ-ಜ್ಞಾನದ ಬೆಳಕನ್ನು ಹೊತ್ತಿಸಿ ಯಶಸ್ಸಿನ ದಾರಿದೀಪವಾಗಿಸುವ ಪ್ರಾಮಾಣಿಕ ಪ್ರಯತ್ನ ಮಾಡೋಣ; ಹೀಗೆ ಮಾಡಿದಾಗ ಮಾತ್ರ ಇಂದಿನ ಮಕ್ಕಳ ದಿನಾಚರಣೆಗೆ ಒಂದು ಪರಿಪೂರ್ಣತೆಯ ಸತ್ಯಾರ್ಥ ಒದಗಿಸಿದಂತಾಗುತ್ತದೆ.

ಲೇಖಕರ ಕಿರುಪರಿಚಯ
ಶ್ರೀ ಸು. ವಿ. ಮೂರ್ತಿ

ಇವರು ಹವ್ಯಾಸಿ ಕಲಾವಿದರು ಹಾಗೂ ಖ್ಯಾತ ವ್ಯಂಗ್ಯಚಿತ್ರಕಾರರು. ಹೋಟೆಲ್ ಉದ್ಯಮದಲ್ಲಿದ್ದುಕೊಂಡು ಬಹಳಷ್ಟು ಕಲಾ ಸೇವೆ ಮಾಡಿದ್ದಾರೆ. ಬಸವನಗುಡಿಯ ವಿದ್ಯಾರ್ಥಿ ಭವನ ಹೋಟೆಲಿನ ಗೋಡೆಯ ಸುತ್ತಮುತ್ತಲೂ ರಾರಾಜಿಸುತ್ತಿರುವ ಕನ್ನಡದ ಕಣ್ಮಣಿಗಳ ಚಿತ್ರಪಟಗಳು ಇವರ ಪ್ರತಿಭೆಗೆ ಸಾಕ್ಷಿ.

ಮಕ್ಕಳಿಗಾಗಿ ಹಲವಾರು "ನೋಡಿ ಕಲಿ - ಮಾಡಿ ನಲಿ" ಮಾದರಿಯಲ್ಲಿ ಚಿತ್ರಗಳನ್ನು ರಚಿಸಿದ್ದಾರೆ. ಕಹಳೆಯಲ್ಲಿ ದೀಪಾವಳಿ ಹಾಗೂ ಮಕ್ಕಳ ದಿನಾಚರಣೆಯ ಪ್ರಯುಕ್ತ ತಮ್ಮ ಕಲಾತ್ಮಕ ಲೇಖನವನ್ನು ಒದಗಿಸಿದ್ದಾರೆ.

ಪ್ರಾರಂಭದಿಂದ ಕಹಳೆ ಕಾರ್ಯಕ್ರಮಕ್ಕೆ ಇವರು ನೀಡುತ್ತಿರುವ ಪ್ರೋತ್ಸಾಹಪೂರ್ವಕ ಸಹಕಾರಕ್ಕೆ ಕಹಳೆ ತಂಡವು ಅನಂತ ವಂದನೆಗಳನ್ನು ಈ ಮೂಲಕ ಅರ್ಪಿಸುತ್ತದೆ.

Blog  |  Facebook  |  Twitter

2 ಕಾಮೆಂಟ್‌ಗಳು:

  1. ಸರಳ, ಸುಂದರ ಮತ್ತು ಸತ್ಯವಾದ ನುಡಿಗಳನ್ನು ಹೇಳಿದ್ದೀರಿ. ಬರಹ ಚೆನ್ನಾಗಿದೆ.

    ಪ್ರತ್ಯುತ್ತರಅಳಿಸಿ
  2. ಶ್ರೀ ಸು. ವಿ. ಮೂರ್ತಿ ರವರ ಲೇಖನವು ದೇಶದ ಅನಕ್ಷರಸ್ಥ ಮಕ್ಕಳ ಕತ್ತಲ ಮನದಲ್ಲಿ ಈ ಮಕ್ಕಳ ದಿನಾಚರಣೆಯ ದಿನದಲ್ಲಿ ಅಕ್ಷರವೆಂಬ ಬೆಳಕಿನ ದೀಪವನ್ನು ಬೆಳಗಿಸಿ ಅವರ ಬಾಳನ್ನು ನಂದನವನವನ್ನಾಗಿಸಲಿ ಎಂದು ಆರೈಸುತ್ತೇನೆ

    ಪ್ರತ್ಯುತ್ತರಅಳಿಸಿ