ಗುರುವಾರ, ನವೆಂಬರ್ 1, 2012

ಗುರು ವಂದನೆ

ಕನ್ನಡ ರಾಜ್ಯೋತ್ಸವ ನಾಡಹಬ್ಬದ ಈ ಶುಭದಿನದಂದು ಕರ್ನಾಟಕ ಹಾಗೂ ದೇಶ-ವಿದೇಶದೆಲ್ಲೆಡೆ ನೆಲೆಸಿರುವ ಸಮಸ್ತ ಕನ್ನಡಿಗರಿಗೆ ಹೃದಯಪೂರ್ವಕ ಶುಭಕಾಮನೆಗಳು.


ಕೃಪೆ: YouTube

ಕಹಳೆ ಕಾರ್ಯಕ್ರಮದ ಎರಡನೆಯ ಆವೃತ್ತಿಗೆ ನಿಮ್ಮೆಲ್ಲರಿಂದ ದೊರೆಯುತ್ತಿರುವ ಅಭೂತಪೂರ್ವ ಪ್ರೋತ್ಸಾಹ ಹಾಗೂ ಬೆಂಬಲಕ್ಕೆ ನಾವು ಚಿರಋಣಿಗಳು. ಕಳೆದ ವರ್ಷ ನಮ್ಮಗಳ ಮನದಾಳದ ಮೂಲೆಯಲ್ಲೆಲ್ಲೋ ಅರಳಿದ ಕಹಳೆಯು ಇಂದಿಗೆ ಅನೇಕ ಕನ್ನಡಿಗರನ್ನು ತಲುಪಿ, ಮನೆ-ಮನಗಳ ಮಾತಾಗಿದೆ. ಈ ಕಾರ್ಯಕ್ರಮದ ಯಶಸ್ಸು ಹೀಗೆಯೇ ಮುಂದುವರೆಯಲು ನಿಮ್ಮೆಲ್ಲರ ನಿರಂತರ ಆಶೀರ್ವಾದಪೂರ್ವಕ ಸಹಕಾರ ಅತೀ ಅವಶ್ಯಕ; ಕನ್ನಡಿಗರೆಲ್ಲರೂ ಸದಾ ಕಹಳೆಯೊಟ್ಟಿಗೆ ಇರುತ್ತೀರೆಂದು ನಂಬಿದ್ದೇವೆ.

ನವಂಬರ್ 2012 ರ ಮಾಹೆಯುದ್ದಕ್ಕೂ ನಡೆಯಲಿರುವ ಈ ಕಾರ್ಯಕ್ರಮವು ನಿರ್ವಿಘ್ನವಾಗಿ ನೆರವೇರುವಂತಾಗಲಿ ಎಂದು ದೈವೀಭೂತರಾದ ಗುರುಗಳಿಗೆ ವಂದಿಸಿ, ಡಾ. ವಿ. ವಿ. ಕುಮಾರ್ ಅವರಿಂದ ರಚಿತಗೊಂಡಿರುವ ಪ್ರಾರ್ಥನಾ ಲೇಖನ ಪ್ರಕಟಿಸುತ್ತಾ, ಕಹಳೆಯ ಎರಡನೇ ಆವೃತ್ತಿಯನ್ನು ಕನ್ನಡಾಂಬೆಗೆ ಶ್ರದ್ಧಾಪೂರ್ವಕವಾಗಿ ಅರ್ಪಿಸುತ್ತಿದ್ದೇವೆ.

=> ಕಹಳೆ ತಂಡ.

ಭಾರತ ಎಂದರೆ ಭಾ-ಬ್ರಹ್ಮ ಸ್ವರೂಪದಲ್ಲಿ; ರತ-ರಮಿಸುವವನು, 'ಬ್ರಹ್ಮ ಸ್ವರೂಪದಲ್ಲಿ ರಮಿಸುವವನೇ ಭಾರತೀಯ' ಎಂಬ ಮಹತ್ವ ಅರ್ಥವುಳ್ಳ ದೇಶದ ಪ್ರಜೆಗಳಾಗಿದ್ದರೂ ಭ್ರಮೆಯ ಹೆಮ್ಮೆಯಿಂದ ಬೀಗುತ್ತಿದ್ದ ನಮಗೆ, ಭಗವದ್ಗೀತೆಯ ಉಗಮ ಸ್ಥಳವಾಗಿದ್ದರೂ, ಅಂತರಾರ್ಥ ತತ್ವ ಅರಿಯದಿದ್ದ ನಮಗೆ, ಚಂಚಲತೆಯಿಂದ ಸ್ಥಿರತೆ ಹೊಂದುವ ಮಾರ್ಗದ ಅರಿವು ಮೂಡಿಸಿ, ಅಧ್ಯಾತ್ಮದ ಬೀಜ ಬಿತ್ತಿ, ಸ್ಥಿತಪ್ರಜ್ಞರಾಗಿ ಸತ್ಪ್ರಜೆಗಳಾಗುವ ಮಾರ್ಗ ತೋರಿ ಹೃದಯಾಂತರಾಳಕ್ಕೆ ಆತ್ಮಚೇತನ ಸಿಂಚನ ಮಾಡಿದ ಸದ್ಗುರುವಿಗೆ ನಮೋ ನಮಃ.

ಜೀವಾತ್ಮನೇ ಸತ್ಯ ಎಂಬ ಭ್ರಮೆಯ ಸಾಗರದಲ್ಲಿ, ಕಲ್ಪಿತ ಆನಂದದ ಹಡಗಿನಲ್ಲಿ, ಅಜ್ಞಾನದ ಮೆರುಗಿನಿಂದ, ಮಾಯೆಯ ಮುಸುಕಿನಲ್ಲಿ, ಇದುವೇ ಜೀವನ ಎಂದು ಆನಂದೋನ್ಮಾದರಾಗಿ ವಿಹರಿಸುತ್ತಿದ್ದ ನಮಗೆ, ಆತ್ಮವೇ ಸತ್ಯ ಎಂಬ ಆತ್ಮಸತ್ಯವ ಭೋಧಿಸಿ, ನಮ್ಮ ಮೂಲ ಸ್ವರೂಪವೇ ಸತ್-ಚಿತ್ ಆನಂದ ಎಂದು ಸ್ಥಿರಪಡಿಸಿದ ಸದ್ಗುರುವಿಗೆ ನಮೋ ನಮಃ.

'-ನೀನು -ನಾನು = +ಭಕ್ತಿ' ಎಂದು ಸುಲಭ ಸೂತ್ರದಿಂದ ಭಕ್ತಿಯನ್ನು ನಿರೂಪಿಸಿ ಅರಿವು ಮೂಡಿಸಿದ, ಸತ್ವ, ರಜೋ, ತಮೋ ಎಂಬ ಗುಣ ತ್ರಯಗಳ ಅರ್ಥ ಅರ್ಥೈಸಿ ಸತ್-ಗುಣದಿಂದ ಮೋಕ್ಷ ಹೊಂದಲು ಸನ್ಮಾರ್ಗ ತೋರಿಸಿದ, ಒಂದೇ ಬ್ರಹ್ಮ ಅಜ್ಞಾನದಿಂದಾಗಿ ಜೀವ, ಮಾಯೆಯಿಂದಾಗಿ ಈಶ್ವರನಾಗಿ ಇರುವಾಗ, ಶುದ್ಧ ಅಂತಃಕರಣದ ಸದ್ಗುರುವಾಗಿ ಅಜ್ಞಾನವನ್ನು ನಾಶಪಡಿಸುವ ಉಪದೇಶ ನೀಡಿ, ಅಜ್ಞಾನ ಕಳೆದುಹಾಕಿ, ಜೀವನೂ ಇಲ್ಲ, ಈಶ್ವರನೂ ಇಲ್ಲ, ಹಾಗಾದರೆ ನಾನು ಯಾರು? ಎಂದು ಅರಿಯಲು ಎಚ್ಚರ ಮೂಡಿಸಿ, ಜೀವ-ಈಶ್ವರ ಭೇದ ಛೇದಿಸಿ, ನಾನೇ ಸಚ್ಚಿದಾನಂದ ಆತ್ಮ ಎಂಬ ಪರಬ್ರಹ್ಮ ಪರಮ ತತ್ವವನ್ನು ಸ್ಥಿರಪಡಿಸಿ, ಸ್ಥಿತಪ್ರಜ್ಞನನ್ನಾಗಿಸಿದ ಸದ್ಗುರುವಿಗೆ ನಮೋ ನಮಃ.

ಒಬ್ಬೊಬ್ಬರೂ ಒಂದೊಂದು ರೀತಿಯ ಅನಾಥರು. ಜ್ಞಾನ ಲಭ್ಯವಿಲ್ಲದೆ ಅನಾಥರು, ಪಾಲಕರಿಲ್ಲದೆ ಅನಾಥರು, ಸಮೃದ್ಧಿ ಸಿದ್ಧಿಗೆ ಸದ್ಗುರು ಅನುಗ್ರಹವಿಲ್ಲದೆ ಅನಾಥರು, ಆರ್ಥಿಕ ಅನಾಥರು, ಇಂತಹ ಅನೇಕಾನೇಕ ಅನಾಥರಿಗೆ ಅನಾಥ ಬಂಧುವಾಗಿ, ಅನಾಥ ರಕ್ಷಕನಾಗಿ, ಅನಾಥ ಸೇವೆಯ ಪರಮೋಚ್ಚ ತತ್ವದ ಅರಿವನ್ನು ಮೂಡಿಸಿದ ಸದ್ಗುರುವಿಗೆ ನಮೋ ನಮಃ.

ಲೇಖಕರ ಕಿರುಪರಿಚಯ
ಡಾ. ವಿ. ವಿ. ಕುಮಾರ್

1975 ರಲ್ಲಿ ಪಶುವೈದ್ಯಕೀಯ ಪದವಿ, 1993 ರಲ್ಲಿ ಏಷ್ಯಾದಲ್ಲಿನ ಏಕೈಕ ಸಂಸ್ಥೆಯಾದ ಇನ್ಸ್ಟಿಟ್ಯೂಟ್ ಆಫ್ ರೂರಲ್ ಮೆನೇಜ್ಮೆಂಟ್, ಆನಂದ್ ನಿಂದ ಉನ್ನತಾಭ್ಯಾಸ ಪದೆದ ಇವರು ವೃತ್ತಿಯಲ್ಲಿ ಸುದೀರ್ಘ ಅನುಭವವನ್ನು ಹೊಂದಿದ್ದಾರೆ. ಪ್ರಸ್ತುತ ತರಬೇತಿ ಕೇಂದ್ರ, ಕರ್ನಾಟಕ ಸಹಕಾರಿ ಹಾಲು ಮಹಾ ಮಂಡಳಿ, ಮೈಸೂರು ಇಲ್ಲಿ ಜಂಟಿ ನಿರ್ದೇಶಕರು ಮತ್ತು ನಂದಿನಿ ಮಾರಾಟ ಡಿಪೋ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

1969, ನವಂಬರ್ 1ರ ಕನ್ನಡ ರಾಜ್ಯೋತ್ಸವದಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಅಂದಿನ ರಾಷ್ಟ್ರಪತಿ ಶ್ರೀ ವಿ.ವಿ. ಗಿರಿಯವರಿಂದ 'ಪ್ರೆಸಿಡೆಂಟ್ ಸ್ಕೌಟ್' ಪ್ರಶಸ್ತಿಯನ್ನು ಶ್ರೀಯುತರು ಸ್ವೀಕರಿಸಿದ್ದಾರೆ.

Blog  |  Facebook  |  Twitter

3 ಕಾಮೆಂಟ್‌ಗಳು:

  1. "ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ". ಗುರುವಂದನೆಯೊಂದಿಗೆ ಆರಂಭಗೊಂಡ ಬರಹಗಳ ಸರಮಾಲೆ ನಿರಂತರ ಮುಂದುವರಿಯಲಿ.

    ಕನ್ನಡಕ್ಕೆ ಜಯವಾಗಲಿ. ಕಹಳೆ ತಂಡಕ್ಕೆ ಜಯವಾಗಲಿ

    ಅರವಿಂದ ಕುಲಕರ್ಣಿ

    ಪ್ರತ್ಯುತ್ತರಅಳಿಸಿ
  2. ಲೇಖನ ಚೆನ್ನಾಗಿದೆ.
    ಕಹಳೆ ತಂಡದ ಪ್ರಯತ್ನ ಕನ್ನಡಿಗರಿಗೆ ಮುಟ್ಟಲಿ.
    ಜಯ ಕನ್ನಡ ಮಾತೆ.

    ಪ್ರತ್ಯುತ್ತರಅಳಿಸಿ
  3. ಪ್ರಿಯ ಡಾ. ವಿ. ವಿ. ಕುಮಾರ್ ರವರೇ ನಿಮ್ಮ ಲೇಖನದಲ್ಲಿರುವ ಸದ್ಗುರು ಸದ್ಗುಣ ಸದ್ಭಕ್ತಿ ಸದ್ಭಾವನೆ ಸದ್ವರ್ತನೆ ಎಲ್ಲವುಗಳ ಪ್ರಸ್ತುತ ವಿವರಣೆ ಪ್ರಶಂಸನೀಯವಾಗಿದೆ .ನಿಮಗೆ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ