ಶುಕ್ರವಾರ, ನವೆಂಬರ್ 30, 2012

ಕನ್ನುಡಿಯ ಕಥೆ-ವ್ಯಥೆ

ತಾಯಿ, ತಾಯ್ನೆಲ ಮತ್ತು ತಾಯ್ನುಡಿ ಎಂದರೆ ಪ್ರತಿಯೊಬ್ಬ ಮಾನವನ ಭಾವಪ್ರಪಂಚದಲ್ಲೂ ವಿಶೇಷ ಸ್ಥಾನ. ತಾಯ್ನುಡಿಯ ದೆಸೆಯಿಂದಲೇ ಮಾನವಜನಾಂಗದಲ್ಲಿ ಅನೇಕಗುಂಪುಗಳು ತಮ್ಮ ಪ್ರತ್ಯೇಕತೆ ಕಾಯ್ದುಕೊಂಡಿವೆ. ವ್ಯಾವಹಾರಿಕಜಗತ್ತಿನಲ್ಲಿ ಎಳ್ಳಷ್ಟು ಮೌಲ್ಯವಿಲ್ಲದಿದ್ದರೂ ತಮ್ಮತಮ್ಮ ತಾಯ್ನುಡಿಯನ್ನು ಮನೆಯಮಟ್ಟಿಗಾದರೂ ಬಳಕೆಮಾಡುತ್ತಿವೆ. ಒಂದೇಭಾಷೆಯಲ್ಲಿನ ಅನೇಕ ಪ್ರಾದೇಶಿಕ ಪ್ರಕಾರಗಳನ್ನು ಸಹ ಅಭಿಮಾನದಿಂದ ಬಳಕೆಮಾಡುವುದನ್ನು ನೋಡಿದ್ದೇವೆ. ಹಾಗಾಗಿಯೇ ಕನ್ನಡದಲ್ಲಿ ಮೈಸೂರುಕಡೆಯ ಕನ್ನಡ, ಧಾರವಾಡದವರ ಕನ್ನಡ, ಬೆಳಗಾವಿಯ ಕನ್ನಡ, ಕರಾವಳಿಯ ಕನ್ನಡ, ನಿಜಾಮ್ ಪ್ರಾಂತ್ಯದ ಕನ್ನಡ, ಕೋಲಾರದ ಕನ್ನಡ, ಬಳ್ಳಾರಿ-ಹೊಸಪೇಟೆಯ ಕನ್ನಡ ಹೀಗೆ ಭಾಷೆಯನ್ನು ಪ್ರತ್ಯೇಕಿಸುವ ಪರಿಪಾಠವುಂಟು. ಇನ್ನು ಬೆಂಗಳೂರಿನ ಕನ್ನಡವನ್ನಂತೂ ಕೇಳುವಂತಿಲ್ಲ, ಅದು ಮಿಸಳಭಾಜಿ. ಒಂದುಭಾಷೆಯಹುಟ್ಟು, ಬೆಳವಣಿಗೆಯ ಅಧ್ಯಯನವನ್ನು ಭಾಷಾಶಾಸ್ತ್ರವೆನ್ನುತ್ತಾರೆ. ಕನ್ನಡಭಾಷೆಯು ಸಹಸ್ರಾರುವರ್ಷಗಳಿಂದ ಜೀವಂತವಾಗಿರುವುದನ್ನು ಅರಿತರೆ ಆಗ ನಮ್ಮ ಭಾಷೆ ಎಷ್ಟು ಪುರಾತನ ಹಾಗೂ ನಾವು ಈಗ ಪ್ರಾಶಸ್ತ್ಯ ನೀಡುತ್ತಿರುವ ಇಂಗ್ಲೀಷು ಕನ್ನಡಕ್ಕಿಂತ ತೀರಾಇತ್ತೀಚಿಗೆ ಹುಟ್ಟಿದಭಾಷೆ ಎನ್ನುವುದು ಅರ್ಥವಾದೀತು. ರಾಜ್ಯೋತ್ಸವದ ನೆಪದಿಂದಲಾದರೂ ಕನ್ನಡದ ಹಿರಿಮೆಯನ್ನು ತಿಳಿಯುವ ಅವಕಾಶವೊದಗಿದೆ.

ಭಾಷೆಯೇ ಜನರನ್ನು ಒಗ್ಗೂಡಿಸುವ ಶಕ್ತಿ
ಅನೇಕಬಾರಿ ಭಾಷೆಯೇ ಸಂಬಂಧಿಸಿದ ಜನರ ಇಲ್ಲವೆ ಪ್ರದೇಶದ ನಾಮಕರಣಕ್ಕೆ ಕಾರಣವಾಗುತ್ತದೆ. ಕನ್ನಡ, ತೆಲುಗು, ತಮಿಳು, ಬೆಂಗಾಲಿ ಮುಂತಾದ ಭಾಷೆಗಳು ಆಯಾ ಪ್ರದೇಶ ಮತ್ತು ಅಲ್ಲಿ ವಾಸಿಸುವ ಜನರ ನಾಮಕರಣಕ್ಕೆ ಕರಾಣವಾಗಿವೆ. ಭಾಷೆಯೇ ಜನರನ್ನು ಒಗ್ಗೂಡಿಸುವ ಶಕ್ತಿ.  ಪುರಾಣಕಾಲದಲ್ಲಿ ಕುಂತಲ, ಮಹಿಷನಾಡು, ವನವಾಸಿ ಇತ್ಯಾದಿ ಹೆಸರುಗಳಿಂದ ಪ್ರತ್ಯೇಕವಾಗಿದ್ದ ಚಿಕ್ಕಚಿಕ್ಕ ಭಾಗಗಳನ್ನು ಒಂದುಗೂಡಿಸಿ 'ಕಾವೇರಿಯಿಂದ ಗೋದಾವರಿವರಂ ಇರ್ದ ನಾಡೆಲ್ಲಮಾ ಕನ್ನಡದೊಳ್ ಭಾವಿಸಿದ ಜನಪದಂ' ಎಂದು ಲೋಕಕ್ಕೆ ಸಾರಿಹೇಳಿದ ಕೀರ್ತಿ ಕನ್ನಡನಾಡನ್ನು ಆಳಿದ ರಾಷ್ಟ್ರಕೂಟ ದೊರೆ ಅಮೋಘವರ್ಷ ನೃಪತುಂಗನಿಗೆ (ಕ್ರಿ.ಶ. 814 - 879) ಸೇರಬೇಕು. ಮೇಲಿನ ವಾಕ್ಯವಿರುವ 'ಕವಿರಾಜಮಾರ್ಗ' ಈವರೆವಿಗೆ ದೊರೆತಿರುವ ಕನ್ನಡಭಾಷೆಯ ಕೃತಿಗಳಲ್ಲಿ  ಅತಿ ಹಳೆಯದು. ಈ ಕೃತಿಯನ್ನು ನೃಪತುಂಗ ಮಹಾರಾಜ ರಚಿಸಿರುವನೆಂದು ನಂಬಿಕೆ. ಇನ್ನೊಂದು ಹೇಳಿಕೆಯ ಪ್ರಕಾರ ಆತನ ಆಸ್ಥಾನದಲ್ಲಿದ್ದ ಕವಿ ಶ್ರೀವಿಜಯ ಇದರ ಕತೃ. ಅದೇರೀತಿ ಕದಂಬದೊರೆ ಕಾಕುತ್ಸವರ್ಮನ ಕಾಲದಲ್ಲಿ ಕ್ರಿ.ಶ. 450ರ ಸುಮಾರಿಗೆ ರಚಿಸಿರುವ ಹಲ್ಮಿಡಿ ಶಾಸನ ಕನ್ನಡಲಿಪಿ ಬಳಸಿರುವ ಮೊದಲ ಶಾಸನ. ಅಂದರೆ ಆವೇಳೆಗಾಗಲೇ ಕನ್ನಡ ಭಾಷೆಯ ಬರಹ ಆರಂಭವಾಗಿತ್ತು. ಒಂದುಭಾಷೆಯು ಮಾತಿನಿಂದ ಬರಹವಾಗಿ ಬೆಳೆಯಲು ಸಹಸ್ರಾರುವರ್ಷಗಳು ಬೇಕು. ಇದರರ್ಥ ಕನ್ನಡದ ಇತಿಹಾಸ ಐದನೆ ಶತಮಾನಕ್ಕಿಂತ ಸಹಸ್ರಾರುವರ್ಷ ಹಿಂದಿನದು.

ನಾಡು-ನುಡಿಯ ಬಗೆಗೆ ಸಂಶೋಧನೆಗೈದ ಡಾ. ಶಂ.ಬಾ. ಜೋಷಿಯವರು ಕನ್ನಡನಾಡಿನ ಎಲ್ಲೆ ದಕ್ಷಿಣದ ಉದಕಮಂಡಲದಿಂದ ಉತ್ತರಕ್ಕೆ ನರ್ಮದೆಯವರೆಗಿತ್ತು ಎಂದು ಸಾಧಿಸಿದ್ದಾರೆ. ಮಧ್ಯಪ್ರದೇಶದ ಜಬ್ಬಲಪುರದ ಬಳಿ ಸಿಗುವ ಕನ್ನಡ ಶಾಸನಗಳ ಅಧಾರ ನೀಡುತ್ತಾರೆ. ಮಾನ್ಯ ಗೋವಿಂದಪೈಯವರು ಕ್ರಿ.ಶ. ಎರಡನೆ ಶತಮಾನದಲ್ಲಿ ರಚಿತವಾದ ಗ್ರೀಕ್ ನಾಟಕವೊಂದರಲ್ಲಿ ಕರಾವಳಿಕನ್ನಡವನ್ನು ಹೋಲುವ ಕೆಲವುಶಬ್ದಗಳನ್ನು ಪತ್ತೆಹಚ್ಚಿದ್ದಾರೆ. ಕನ್ನಡಭಾಷೆಯ ಸೋದರಿಯರಾದ ತುಳು, ಬಡಗ, ಹವ್ಯಕ ಭಾಷೆಗಳು ಸಹ ಪ್ರಾಚೀನವೆ. ಆದರೆ ಅವುಗಳಿಗೆ ಲಿಪಿಯಿಲ್ಲ. ಹನ್ನೆರಡನೆ ಶತಮಾನದಹೊತ್ತಿಗೆ ಕೇಶಿರಾಜನ ಶಬ್ದಮಣಿದರ್ಪಣ ಹೆಸರಿನ ಕನ್ನಡವ್ಯಾಕರಣಗ್ರಂಥ ರಚನೆಯಾಯಿತು. ಕನ್ನಡದಮೇಲೆ ಮೊದಲಿನಿಂದಲೂ ಸಂಸ್ಕೃತ, ಪ್ರಾಕೃತ, ಮೈಸೂರುರಾಜ್ಯದ ಆಡಳಿತಭಾಷೆಯಾಗಿದ್ದ ಪರ್ಷಿಯನ್ ಮುಂತಾದುವು ದಬ್ಬಾಳಿಕೆ ನಡೆಸಿವೆ. ಆದರೆ ಜನರಬದುಕಿನಿಂದ ಕನ್ನಡ ದೂರವಾಗಿರಲಿಲ್ಲ. ಈಗ ಇಂಗ್ಲೀಷ್ ದಬ್ಬಾಳಿಕೆಯ ಸರದಿ. ನಾವು ಇಂಗ್ಲೀಷನ್ನು ಹೊಟ್ಟೆಪಾಡಿನ ನೌಕರಿಗಾಗಿ ಬಳಕೆಮಾಡಿದರೆ ಕನ್ನಡಕ್ಕೆ ಚ್ಯುತಿಯಿಲ್ಲ, ದುರಂತವೆಂದರೆ ಈಗತಾನೆ ಹುಟ್ಟಿದ ಶಿಶುವಿನೊಂದಿಗೆ ಸಹ ಇಂಗ್ಲೀಷಿನಲ್ಲಿ ಮಾತನಾಡಲಾರಂಭಿಸಿದ್ದೇವೆ. ಸಾವಿರಾರುವರ್ಷಗಳಿಂದ ಜನರನಾಲಿಗೆಯಮೇಲೆ ನಲಿಯುತ್ತಿದ್ದ ಕನ್ನಡವನ್ನು ಈಗ ಕೇವಲ ಐವತ್ತುವರ್ಷಗಳಲ್ಲಿ ನಿರ್ನಾಮ ಮಾಡುವ ಪ್ರಕ್ರಿಯೆಗೆ ನಾವುನೀವೆಲ್ಲರೂ ಕಾರಣ. ಈಗ ಎಚ್ಚೆತ್ತುಕೊಳ್ಳದಿದ್ದರೆ ಕನ್ನಡದ ಅವಸಾನಕ್ಕೆ ನಾವೇ ಹೊಣೆ.

ರಾಜಕೀಯ ಇತಿಹಾಸ
ಕನ್ನಡನಾಡಿನ ರಾಜಕೀಯ ಇತಿಹಾಸವು ಕ್ರಿಸ್ತಶಕ ಎರಡನೇಶತಮಾನದಲ್ಲಿ ದಕ್ಷಿಣದಲ್ಲಿ ಶಾತವಾಹನರ ಉದಯದೊಂದಿಗೆ ಆರಂಭವಾಗುತ್ತದೆ. ಅದಕ್ಕೂ ಹಿಂದೆ ಜನವಸತಿ ಇದ್ದಕಾರಣದಿಂದಾಗಿಯೇ ಅಶೋಕನ ಶಿಲಾಶಾಸನಗಳು ಚಿತ್ರದುರ್ಗ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ನಿರ್ಮಾಣವಾಗಿವೆ. ಉತ್ತರಭಾರತದ ಭೀಕರಬರಗಾಲದಿಂದಾಗಿ ಚಂದ್ರಗುಪ್ತಮೌರ್ಯನು ತನ್ನ ಗುರು ಭದ್ರಬಾಹುವಿನೊಂದಿಗೆ ಶ್ರವಣಬೆಳಗೊಳಕ್ಕೆ ಬಂದು ನೆಲಸಿದನೆಂದು ಐತಿಹ್ಯವಿದೆ. ನಿಜವಾದ ಕನ್ನಡ ರಾಜಕೀಯ ಇತಿಹಾಸ ನಾಲ್ಕನೇ ಶತಮಾನದಲ್ಲಿ ಕದಂಬರ ಆಳ್ವಿಕೆಯೊಂದಿಗೆ ಆರಂಭವಾಗುತ್ತದೆ. ನಂತರ ತಲಕಾಡಿನ ಗಂಗರು, ಬದಾಮಿ ಚಾಲುಕ್ಯರು, ಕಲ್ಯಾಣಿಚಾಲುಕ್ಯರು, ಮಳಖೇಡಿನ ರಾಷ್ಟ್ರಕೂಟರು, ಕಲ್ಯಾಣದ ಕಳಚೂರ್ಯರು, ದೇವಗಿರಿಯ ಯಾದವರು, ಹೊಯ್ಸಳರು, ಕೊನೆಯದಾಗಿ ವಿಜಯನಗರದ ಅರಸರು ಕನ್ನಡನಾಡಿನ ಪತಾಕೆಯನ್ನು ಬಹು ಎತ್ತರಕ್ಕೊಯ್ದರು. ಈ ಮಧ್ಯೆ ಉತ್ತರಭಾರತದ ತುತ್ತತುದಿಯವರೆಗೆ ಸಾಮ್ರಾಜ್ಯ ವಿಸ್ತರಿಸಿದ ಕೆಲವು ಅರಸು ಮನೆತನಗಳನ್ನು ನೆನೆಯುವುದು ಅಗತ್ಯ. ಚಾಲುಕ್ಯರ ಇಮ್ಮಡಿಪುಲುಕೇಶಿಯು ಹರ್ಷವರ್ಧನನ್ನು ಸೋಲಿಸಿ ನರ್ಮದೆಯನ್ನು ತನ್ನ ಸಾಮ್ರಾಜ್ಯದ ಎಲ್ಲೆಯನ್ನಾಗಿಸಿದ್ದು ಸರ್ವ ವಿದಿತ. ಅದೇರೀತಿ ರಾಷ್ಟ್ರಕೂಟ ದೊರೆ ಇಮ್ಮಡಿಕೃಷ್ಣನು ಎಲ್ಲೋರದ ಕೈಲಾಸ, ಮುಂಬಯಿಯ ಎಲೆಫಂಟಾಕೇವ್ಸ್ ನಿರ್ಮಾಣಮಾಡಿದ್ದು ಎಷ್ಟೊ ಕನ್ನಡಿಗರಿಗೆ ಗೊತ್ತಿರಲಾರದು. ಅದೇರೀತಿ ಕನ್ಹೇರಿ ಗುಹೆಗಳು ಸಹ ಕನ್ನದನಾಡಿನ ರಾಜರ ಕೊಡುಗೆ. ಇನ್ನೂ ಒಂದು ಹೆಚ್ಚು ಪ್ರಚಾರವಾಗದ ಸಂಗತಿಯೆಂದರೆ ಬೆಂಗಾಲವನ್ನಾಳಿದ ಸೇನರು, ಮಿಥಿಲೆ ಮತ್ತು ನೇಪಾಳವನ್ನಾಳಿದ ದೊರೆಗಳು ಕನ್ನಡಮೂಲದವರು ಎನ್ನುವುದು.

ಕರ್ನಾಟಕದ ಇತಿಹಾಸವನ್ನೋದುವಾಗ ಎರಡನೇ ಪುಲುಕೇಶಿ, ನೃಪತುಂಗ, ವಿಷ್ಣುವರ್ಧನ, ಕೃಷ್ಣದೇವರಾಯ ಹೀಗೆ ಕೆಲವೇ ಹೆಸರುಗಳು ಬಹುಶೃತವಾಗಿವೆ. ಆದರೆ ಕನ್ನಡಸಾಮ್ರಾಜ್ಯವನ್ನು ವಿಸ್ತರಿಸಿದ ಕದಂಬರ ಕಾಕುತ್ಸವರ್ಮ, ಚಾಲುಕ್ಯರ ಮಂಗಲೀಶ, ರಾಷ್ಟ್ರಕೂಟರ ಎರಡನೇ ಕೃಷ್ಣ, ಗಂಗರ ಶ್ರೀಪುರುಷ, ಹೊಯ್ಸಳರ ವೀರಬಲ್ಲಾಳ, ವಿಜಯನಗರದ ಇಮ್ಮಡಿದೇವರಾಯ ಮುಂತಾದ ಶ್ರೇಷ್ಠ ದೊರೆಗಳನ್ನು ನೆನೆಯುವುದು ಸಹ ಕನ್ನಡಿಗರ ಕರ್ತವ್ಯ. ರಾಜ್ಯೋತ್ಸವದ ನೆಪದಲ್ಲಾದರೂ ಇಂತಹ ಮಹನೀಯರು ನಮ್ಮ ಸ್ಮೃತಿಪಟಲದಲ್ಲಿ ಮೂಡಲಿ ಎಂದು ಹಾರೈಸೋಣ.

ಕನ್ನಡನಾಡಿನ ಅನಾಮಿಕ ಸಾಧಕರು
ಈವರೆವಿಗೂ ಕನ್ನಡ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಕೆಲವೇಕೆಲವು ರಾಜರು ಮತ್ತು ಸಾಹಿತಿಗಳನ್ನು ನೆನೆಯುವುದು ಒಂದು ಸಂಪ್ರದಾಯವಾಗಿದೆ. ಅವರಷ್ಟೇ ಕನ್ನಡದ ಕಟ್ಟಾಳುಗಳು ಎನ್ನುವ ತಪ್ಪು ಅಭಿಪ್ರಾಯವನ್ನು ನಮ್ಮ ಯುವಜನತೆ ತಳೆಯುವಂತಾಗಿದೆ. ದೇಶೀಯ ಮತ್ತು ವಿದೇಶೀಯ ಪ್ರವಾಸಿಗಳು ನಮ್ಮ ರಾಜ್ಯಕ್ಕೆ ಭೇಟಿ ನೀಡಲು ಕಾರಣವಾಗಿರುವ ಬೇಲೂರು-ಹಳೇಬೀಡು ದೇಗುಲಗಳ ಶಿಲ್ಪವೈಭವ, ಶ್ರವಣಬೆಳಗೊಳದ ಭವ್ಯ ಗೊಮ್ಮಟನ ವಿಗ್ರಹ, ಸೋಮನಾಥದೇವಾಲಯ, ಬದಾಮಿಯ ಗುಹೆಗಳು, ಪಟ್ಟದಕಲ್ಲು ಮತ್ತು ಐಹೊಳೆಯ ಶಿಲ್ಪಸಮುಚ್ಚಯ, ಮುಂತಾದ ಇಮಾರತುಗಳ ಪ್ರಖ್ಯಾತ ಶಿಲ್ಪಿ ನಾಗೋಜ, ಮಹಾಕಾಲ, ದಾಸೋಜ, ಚಾವಣ, ಮಲ್ಲಿತಮ್ಮ, ಮಸಣಿತಮ್ಮ, ಚೌಡಯ್ಯ, ಬಾಲಯ್ಯ, ಅರಿಷ್ಟನೇಮಿ ಮುಂತಾದವರನ್ನು ನೆನೆಯುವುದು ನಮ್ಮ ಕರ್ತವ್ಯವಲ್ಲವೆ?

ಯಾವಮಹಾಶಯರು ಚೀನಾ ಮತ್ತು ಫಿಲಿಫೈನ್ಸ್ ದೇಶಗಳಿಂದ ಹಿಪ್ಪುನೇರಳೆಯನ್ನು ತಂದು ಕನ್ನಡನಾಡಿನಲ್ಲಿ ರೇಷ್ಮೆ ವ್ಯವಸಾಯ ಆರಂಭಿಸಿದರೊ, ಬ್ರೆಜಿಲ್ಲಿನಿಂದ ಕಾಫಿಗಿಡ ತಂದರೊ, ಮಾರಿಷಸ್ ದ್ವೀಪದಿಂದ ವಿವಿಧತಳಿಯ ಕಬ್ಬು ತಂದು ಕರ್ನಾಟಕಕ್ಕೆ ಪರಿಚಯಿಸಿದರೊ, ನ್ಯೂಆರ್ಲಿಯನ್ಸ್, ಸೀಐಲೆಂಡ್ ಮತ್ತು ಬೋರ್ಬನ್ ಗಳಿಂದ ವಿವಿಧಜಾತಿಯ ಹತ್ತಿಯನ್ನು ಕರ್ನಾಟಕಕ್ಕೆ ಪರಿಚಯಿಸಿದರೊ ಅವರೆಲ್ಲ ನಮ್ಮ ರಾಜ್ಯೋತ್ಸವದಂದು ಸ್ಮರಣಾರ್ಹರು. ಅದೇರೀತಿ 19ನೇಶತಮಾನದಲ್ಲಿ ಆಸ್ಟೇಲಿಯಾದಿಂದ ಟಗರುಗಳನ್ನು ಮತ್ತು ಇಪ್ಪತ್ತನೆ ಶತಮಾನದಲ್ಲಿ ವಿದೇಶಿ ತಳಿಯ ಹಸು-ಹೋರಿಗಳನ್ನು ತಂದು ಕರ್ನಾಟಕದಲ್ಲಿ ಹಾಲಿನ ಹೊಳೆಹರಿಯುವಂತೆ ಮಾಡಿದವರನ್ನು ನೆನೆಯದಿರಲಾದೀತೆ.

ಕರ್ನಾಟಕವು ಅಭಿವೃದ್ಧಿ ಪಥದಲ್ಲಿ ಕಾಲಿಡಲು ಕಾರಣರಾದ ನಾಲ್ಮಡಿ ಕೃಷ್ಣರಾಜ ಒಡೆಯರು, ದಿವಾನರುಗಳಾದ ರಂಗಾಚಾರ್ಲು, ಶೇಷಾದ್ರಿ ಅಯ್ಯರ್, ವಿಶ್ವೇಶ್ವರಯ್ಯ ಮತ್ತು ಮಿರ್ಜಾ ಇಸ್ಮಾಯಿಲ್ ರನ್ನು ನೆನಪು ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಲ್ಲವೆ.

ಇದೇರೀತಿ ಕನ್ನಡನಾಡು-ನುಡಿಗೆ ಸೇವೆಸಲ್ಲಿಸಿದ ಮಹನಿಯರನ್ನೆಲ್ಲ ಗುರುತಿಸಿ ಪ್ರತಿವರ್ಷ ಕೆಲಕೆಲವರನ್ನು ಕುರಿತು ನಾಡಿನಮಕ್ಕಳಿಗೆ ಪರಿಚಯಿಸುವ ಪರಿಪಾಠ ಬೆಳೆಯಲಿ ಎನ್ನುವುದು ನನ್ನ ಹಾರೈಕೆ.

ಕೊನೆಮಾತು
ಕನ್ನಡಿಗರ ಗುಣವಿಶೇಷಗಳನ್ನು ತಿಳಿಸುವ ಕ್ರಿ.ಶ. 700ರ ತಟ್ಟುಕೋಡಿ ಶಾಸನದಲ್ಲಿ ಕಪ್ಪೆಅರೆಭಟ್ಟನೆನ್ನುವ ಪರಾಕ್ರಮಿಯನ್ನು ಕುರಿತ ಪದ್ಯವೊಂದಿದೆ. "ಸಾಧುಂಗೆ ಸಾಧು, ಮಾಧುರ್ಯಂಗೆ ಮಾಧುರ್ಯಂ, ಭಾದಿಪ್ಪಕಲಿಗೆ ಕಲಿಯುಗವಿಪರೀತನ್" ಎಂದು ಕನ್ನಡಿಗನನ್ನು ವರ್ಣಿಸಲಾಗಿದೆ. ಮೊದಲೆರಡು ಗುಣವಿಶೇಷಣಗಳು ಒಪ್ಪುವಂಥದ್ದೆ. ಆದರೆ ಇಂದಿನ ಕನ್ನಡಿಗನನ್ನು ನೋಡಿ ಕೊನೆಯಗುಣವಿಶೇಷಣದ ಬಗ್ಗೆ ನನಗೆ ಸ್ವಲ್ಪ ಅನುಮಾನ!

ಲೇಖಕರ ಕಿರುಪರಿಚಯ
ಡಾ. ಟಿ. ಎಸ್. ರಮಾನಂದ

ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ತಾಳ್ಯ ಗ್ರಾಮದವರಾದ ಇವರು ವೃತ್ತಿಯಲ್ಲಿ ಪಶುವೈದ್ಯರು. 1974 ರಿಂದ ಕರ್ನಾಟಕ ಸರ್ಕಾರದ ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ 2006 ರಲ್ಲಿ ನಿವೃತ್ತಿ ಹೊಂದಿದ್ದು, ಪ್ರಸ್ತುತ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ.

'ವೈದ್ಯರ ಶಿಕಾರಿ', 'ದಿಟನಾಗರ ಕಂಡರೆ' ಮತ್ತು 'ವೃತ್ತಿ ಪರಿಧಿ' ಇವರ ಮೂರು ಕೃತಿಗಳು. ವೃತ್ತಿಯಲ್ಲಿ ತಾವು ಗಳಿಸಿದ ಅಪಾರ ಅನುಭವಗಳನ್ನು ತಮ್ಮದೇ ಆಕರ್ಷಕ ಶೈಲಿ ಬರವಣಿಗೆಯ ಮೂಲಕ ಕೃತಿಗಳಾಗಿಸಿ, ಪಶುವೈದ್ಯರುಗಳ ವಿಶಿಷ್ಟ ಹಾಗೂ ವಿಶೇಷ ಜೀವನಾನುಭವಗಳನ್ನು ಪರಿಣಾಮಕಾರಿಯಾಗಿ ಸಮಾಜಕ್ಕೆ ತಲುಪಿಸುವಲ್ಲಿ ಇವರು ಯಶಸ್ವಿಯಾಗಿದ್ದಾರೆ.

ಮೊದಲಿನಿಂದಲೂ ತಮ್ಮ ಸಂಪೂರ್ಣ ಬೆಂಬಲದೊಂದಿಗೆ ಪ್ರೋತ್ಸಾಹಿಸುತ್ತಾ, ತಾವೂ ಸಹ ಸಕ್ರಿಯವಾಗಿ ಭಾಗವಹಿಸಿ, ಲೇಖನವನ್ನು ಒದಗಿಸುವುದರೊಂದಿಗೆ ಆಶೀರ್ವದಿಸಿ ಕಹಳೆ ಕಾರ್ಯಕ್ರಮದ ಯಶಸ್ಸಿಗೆ ಕಾರಣಕರ್ತರಾದ ಗುರು ಸಮಾನರಾದ ಇವರಿಗೆ ಕಹಳೆ ತಂಡವು ವಿನಯಪೂರ್ವಕವಾಗಿ ವಂದಿಸುತ್ತದೆ.

Blog  |  Facebook  |  Twitter

ಗುರುವಾರ, ನವೆಂಬರ್ 29, 2012

ಚಿಗುರೊಡೆದ ಪ್ರೀತಿ

ಪ್ರೀತಿ ಯಾರಿಗೆ ಆಗಲ್ಲ ಹೇಳಿ? ಆಟ ಆಡೋ ಚಿಕ್ಕ ಮಗು ಇಂದ ಹಿಡಿದು ಹಣ್ಣು ಹಣ್ಣು ಮುದುಕರಿಗೂ ಬರುತ್ತೆ. ಪ್ರೀತಿ ಬಂದಮೇಲೆ ಎಷ್ಟು ಮಂದಿ ಅದನ್ನ ಉಳಿಸಿ ಮುಂದುವರೆಸುತ್ತಾರೆ ಅನ್ನೋದು ಮುಖ್ಯ. ಇವತ್ತಿನ ದಿನಗಳಲ್ಲಿ ಪ್ರೀತಿ ಅನ್ನೋದು ಸ್ಟೇಟಸ್ ತೋರಿಸುವ ಬಗೆ ಆಗಿದೆ ನೋಡಿ. ಪ್ರೀತಿ ಅಂತ ಹೆಸರು ಕೇಳಿದರೆ ಏನೋ ಒಂದು ಮನದಲ್ಲಿ ಖುಷಿ ಆಗುತ್ತೆ ಅಲ್ವಾ? ಹೌದು, ಪ್ರೀತಿ ಅಂದ್ರೇನೆ ಹಾಗೆ. ಅದನ್ನ ಮನಸಾರೆ ಪ್ರೀತಿ ಮಾಡೋರನ್ನ ಕೇಳಿ.. ಹೇಳ್ತಾರೆ ಅದರ ಅನುಭವ ಏನು ಅಂತ.

ನಾನು ನನ್ನ ಸ್ನೇಹಿತರ ಒಂದು ಪ್ರೀತಿ ಕಥೆ ಹೇಳ್ತೀನಿ, ಏಕೆ ಪ್ರೀತಿ ಕಥೆ ಅಂತ ನೀವು ಕೇಳಬಹುದು? ಕಥೆ  ಕೇಳಿ ಆಮೇಲೆ ನಿಮಗೆ ಅರ್ಥ ಆಗುತ್ತೆ ಯಾಕೆ ಹೇಳ್ದೆ ಈ ಕಥೆ ಅಂತ. ಈಗಿನ ಕಾಲದಲ್ಲಿ ಹುಡುಗಿ ಸ್ವಲ್ಪ ತೆಳ್ಳಗೆ, ಬೆಳ್ಳಗೆ ಇದ್ರೆ ಆ ಹುಡುಗಿನ ನೋಡಿ ಈ ಹುಡುಗಿ ನನ್ನವಳು ಅಂತ ಹೇಳ್ಕೊಳೋವಂತ ಜನರೇ ಹೆಚ್ಚು, ಅಂತದ್ರಲ್ಲಿ ಈ ನನ್ನ ಸ್ನೇಹಿತನ ಒಂದು ಪ್ರೀತಿ ಕಥೆ ಸ್ವಲ್ಪ ಡಿಫ್ಫ್ರೆಂಟ್ ಅನ್ನಿಸ್ತು. ನನ್ನ ಸ್ನೇಹಿತ ಸ್ವರೂಪ್ ಅಂತ ತುಂಬಾ ಒಳ್ಳೆ ಮನೆತನ, ಒಳ್ಳೆ ಗುಣ, ನೋಡೋಕು ಚೆನ್ನಾಗಿದ್ದ ಹುಡುಗ. ಅವನು ಒಂದು ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡ್ತಿದ್ದ. ಅದೇ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಶ್ರುತಿ ಅನ್ನೊ ಹುಡುಗಿ ಮೇಲೆ ತುಂಬಾ ಪ್ರೀತಿ ಇಟ್ಟಿಕೊಂಡಿದ್ದ. ಶ್ರುತಿ ತುಂಬಾ ಸೌಮ್ಯ ಗುಣದವಳು, ತುಂಬಾ ಸೌಂದರ್ಯವಂತೆ. ಹಾಲಲ್ಲಿ ಕೈತೊಳೆದು ಮುಟ್ಬೆಕು ಅಂತ ಅಂತಾರಲ್ಲ... ಹಾಗೆ.

ಹುಡುಗ ತನ್ನ ಪ್ರೀತಿ ಹೇಳ್ಕೊಳ್ಳೋಕೆ ಎಷ್ಟು ಒದ್ದಾಡ್ತಾನೆ ಅಲ್ವಾ.. ಹಾಗೆ ಇವನ ಕೇಸ್ ಅಲ್ಲೂ ಆಯ್ತು. ಪ್ರತೀ ದಿನ ತನ್ನ ಪ್ರೀತಿ ಹೇಳ್ಬೇಕು ಅಂತ ಆಫೀಸಿಗೆ ಬರ್ತಿದ್ದ, ಆದ್ರೆ ಅವಳನ್ನು ನೋಡಿ ಮಂಕಾಗ್ತಿದ್ದ. ಏನ್ ಮಾಡೋದು ಅಂತನೂ ಗೊತ್ತಾಗ್ತಿರ್ಲಿಲ್ಲ. ಹೀಗೆ ದಿನಗಳು ಸಾಗಿದವು; ಇಂಗ್ಲಿಷಲ್ಲಿ THE D DAY ಅಂತಾರಲ್ಲ ಹಾಗೆ ಇವನಿಗೂ ಆ ದಿನ ಬಂತು, ಅವತ್ತು ಅವ್ನು ಧೈರ್ಯ ಮಾಡಿ ಆಕೆಗೆ ಹೇಳ್ಬೇಕು ಅಂತ ಅಂದುಕೊಂಡಿದ್ದ. ಅವತ್ತು 24 ಡಿಸೆಂಬರ್, ಆಫೀಸ್ನಲ್ಲಿ ಕ್ರಿಸಮಸ್ ಪಾರ್ಟಿ ಟೈಮ್...  ಎಲ್ಲರೂ ತುಂಬಾ ಒಳ್ಳೆ ಒಳ್ಳೆ ಡ್ರೆಸ್ ಹಾಕಿಕೊಂಡು ಬಂದಿದ್ರು, ಶ್ರುತಿ ಕೂಡಾ. ಸ್ವರೂಪ್ ಅದನ್ನ ನೋಡಿ ತನ್ನ ಮನಸೇ ಕಳೆದುಕೊಂಡುಬಿಟ್ಟ.

ಮಧ್ಯರಾತ್ರಿ ಸರಿ ಸುಮಾರು 2:30 ಆಗಿರಬೇಕು, ತಮ್ಮ 15 ನಿಮಷ ಬ್ರೇಕ್ ತಗೊಂಡು ಇಬ್ರು ಕೆಫೆಟೆರಿಯಾಗೆ ಬಂದಿದ್ರು. ಸ್ವರೂಪ್ ಶ್ರುತಿ ಹತ್ರ ಬಂದು ಪ್ರಪೋಸ್ ಮಾಡಿದ, ಶ್ರುತಿಗೆ ತಾನು ಏನ್ ಹೇಳ್ಬೇಕು ಅಂತ ಗೊತ್ತಾಗದೆ ಸುಮ್ನೆ ಕೂತಿದ್ದಳು. ಈಗಿನ ಕಾಲದಲ್ಲಿ ಎಲ್ಲಾ ಹುಡುಗ್ರು ಪ್ರೊಪೋಸ್ ಮಾಡುವಾಗ ಸಹಜವಾಗಿ ಹೇಳ್ತಾರೆ "ನಿನ್ನ ಜೊತೆ ಇದ್ರೆ ನಾನು ಸಂತೋಷವಾಗಿ ಇರ್ತಿನಿ" ಅಂತ.. ಆದ್ರೆ ಸ್ವರೂಪ್ ಹೇಳಿದ್ದು ಡಿಫ್ಫ್ರೆಂಟ್ ಆಗಿತ್ತು - "ನಿನ್ನ ಸಂತೋಷಕ್ಕೆ ನಾನು ಕಾರಣ ಆಗ್ತೀನಿ. ನಂಗೆ ಒಂದು ಅವಕಾಶ ಕೊಡ್ತೀಯಾ?" ಅಂತ ಕೇಳಿದ್ದ. ಶ್ರುತಿಗೆ ಒಂದು ಕಡೆ ಭಯ, ಇನ್ನೊಂದು ಕಡೆ ಸಹಜವಾದ ನಾಚಿಕೆ; ಏನ್ ಹೇಳ್ಬೇಕು ಅಂತ ಗೊತ್ತಾಗ್ಲಿಲ್ಲ.

ಶ್ರುತಿ ಎರಡು ದಿನ ಆಫೀಸಿಗೆ ಬರಲಿಲ್ಲ! ಸ್ವರೂಪ್ ಗೆ ತುಂಬಾ ಗಾಬರಿ, ಶ್ರುತಿ ಫೋನ್ ನಂಬರ್ ಕೂಡಾ ಇರ್ಲಿಲ್ಲ ಫೋನ್ ಮಾಡಿ ಏನಾಯಿತು ಅಂತ ಕೇಳೋಕೆ. ಮೂರನೆ ದಿನ ಒಂದು ಅಪರಿಚಿತ ನಂಬರ್ನಿಂದ ಮೆಸೇಜ್ ಬರುತ್ತೆ ಸ್ವರೂಪ್ ಮೊಬೈಲಿಗೆ "I Love You too" (ಐ ಲವ್ ಯು ಟೂ) ಅಂತ. ಎಷ್ಟು ಶಕ್ತಿ ಇದೆ ಅಲ್ವಾ ಈ 3 ಪದಗಳಲ್ಲಿ, ಪ್ರೀತಿಯಲ್ಲಿ ಬಿದ್ದವರಿಗೆ ಗೊತ್ತು ಅಂತೀರಾ??!!!! ಸ್ವರೂಪ್ ಗೆ ಒಂದು ಮರೆಯಲಾಗದ ದಿನ, ಅಲ್ಲಿಂದ ಚಿಗುರೊಡೆಯಿತು ನೋಡಿ ಪ್ರೀತಿ. ವಸಂತ ಕಾಲಕ್ಕೆ ಮಾವು ಹೇಗೆ ಚಿಗುರೊಡೆಯುತ್ತೋ ಹಾಗೆ. ತುಂಬಾ ಖುಷಿ ಆಗಿತ್ತು ಇಬ್ಬರಿಗೂ, ಇಬ್ಬರ ಬಾಂಧವ್ಯ ಹಾಗೂ ಪ್ರೀತಿ ಗಾಢವಾಗಿ ಬೆಳೆಯುತ್ತಾ ಹೋಯಿತು.

ಪ್ರೀತಿಯ ಮೊದಮೊದಲ ದಿನಗಳು ಎಷ್ಟು ಚೆನ್ನ ಅಲ್ವಾ? ಲಕ್ಷಗಟ್ಟಲೆ ಎಸ್.ಎಮ್.ಎಸ್., ಫೋನ್ಕಾಲುಗಳು, ಕಾಫಿಡೇ ಮೀಟಿಂಗ್ ಗಳು, ಕದ್ದು ಮುಚ್ಚಿ ಮೀಟ್ ಮಾಡೋವಾಗ ಅದರಲ್ಲಿ ಇರೋ ಭಯ ಜೊತೆಗೆ ಮನಸಲ್ಲಿ ಎಲ್ಲೊ ಒಂದು ಕಡೆ ಕಾಣುವ ಆ ತುಡಿತ, ಸಿನಿಮಾಗಳಿಗೆ ಹೋಗೋದು, ಪ್ರತಿಯೊಂದು ಬರ್ತ್ ಡೇಗಳಿಗೆ ಮದ್ಯ ರಾತ್ರಿ 12 ಗಂಟೆಗೆ ಹೋಗಿ ಸರ್ಪ್ರೈಸ್ ಕೊಡೋದು, ದೇವಸ್ಥಾನಕ್ಕೆ ಹೋಗೋದು, ಅಲ್ಲಿ ಕೊಟ್ಟ ಪ್ರಸಾದನ ಹಂಚಿಕೊಂಡು ತಿನ್ನೋದು. ಪ್ರೀತಿಯ ದಿನಗಳಲ್ಲಿ ತಮ್ಮ ಭವಿಷ್ಯದ ಕನಸುಗಳಿಂದ ಅವರ ಮುಖದಲ್ಲಿ ಬರುವ ಮುಗುಳ್ನಗೆ ಎಷ್ಟು ಚೆನ್ನ ಅಲ್ವಾ? ಕೈ ಕೈ ಹಿಡಿದು ಮೊದಲ ಸಾರಿ ರೋಡ್ ಕ್ರಾಸ್ ಮಾಡಿದ್ದು, ಒಂದೇ ಗ್ಲಾಸ್ ಜ್ಯೂಸ್ ಅನ್ನು ಎರಡು ಸ್ಟ್ರಾ ನಲ್ಲಿ ಕುಡಿದಿದ್ದು, ಹಾಗೆ ಇನ್ನು ಸಣ್ಣ ಸಣ್ಣ ಸಂತೋಷಕ್ಕೆ ಇವರಿಬ್ಬರು ಸಾಕ್ಷಿ ಆದರು. "Happiness comes in small packages" ಅಂದ ಹಾಗೆ.

ತುಂಬಾ ದಿನಗಳ ಕಾಲ ಇವರಿಬ್ಬರ ಪ್ರೀತಿ ನಡೀತು. ಇಬ್ಬರ ಮನೆಯಲ್ಲೂ ಏನೂ ಅಭ್ಯಂತರ ಇರಲಿಲ್ಲ ಇವರ ಪ್ರೀತಿಗೆ. ತುಂಬಾ ಪ್ರೋತ್ಸಾಹ ಕೊಟ್ಟಿದ್ದರು. ಇದಕ್ಕಿಂತಾ ಏನು ಬೇಕು ಅಲ್ವಾ ಒಂದು ಪ್ರೀತಿಸುವ ಜೋಡಿಗಳಿಗೆ. ಒಬ್ಬರನ್ನ ಒಬ್ಬರು ತುಂಬಾ ಪ್ರೀತಿಸ್ತಾ ಇದ್ರು. ಇವರಿಬ್ಬರನ್ನ ಕಂಡು ಜನ ಹೀಗೆ ಪ್ರೀತಿಸಬೇಕು ನಾನು ಅಂತ ಹೇಳ್ಕೊಂಡಿದ್ದ ಉದಾಹರಣೆ ಹಲವಾರು ಇದೆ. ಒಮ್ಮೊಮ್ಮೆ ದೇವರಿಗೆ ತುಂಬಾ ಅಸೂಯೆ ಆಗುತ್ತೋ ಏನೋ ಅನಿಸುತ್ತೆ... ಪ್ರೀತಿ ಅನ್ನೋದು ಒಬ್ಬೋಬರ ಬಾಳಲ್ಲೂ ಒನ್ನೊಂದು ಅನುಭವ ಕೊಡುತ್ತೆ. ಹೀಗೆ ಇವರಿಬ್ಬರ ಬಾಳಲ್ಲೂ ಒಂದು ಕೆಟ್ಟ ಅನುಭವ ಆಯಿತು.

ಅಕ್ಟೋಬರ್ 2002, ಒಂದು ಕರಾಳ ದಿನ ಅವರ ಪ್ರೀತಿಗೆ. ಸ್ವರೂಪ್ ರೋಡ್ ಆಕ್ಸಿಡೆಂಟ್ ನಲ್ಲಿ ತೀರಿಕೊಂಡಿದ್ದ. ಆ ವಿಷ್ಯನ ಕೇಳಿ ಶ್ರುತಿ ತುಂಬಾ ಜರ್ಜರಿತಳಾದಳು. ಅವನನ್ನ ನೋಡೋಕೆ ಆಸ್ಪತ್ರೆಗೆ ಬಂದಿದ್ದಳು, ಆದ್ರೆ ಸ್ವರೂಪನ ತಂದೆ ತಾಯಿ ಹಾಗೂ ಶ್ರುತಿ ತಂದೆ ತಾಯಿ ಶ್ರುತಿಗೆ ಸ್ವರೂಪನ ನೋಡೋಕೆ ಬಿಡಲಿಲ್ಲ. ಅಷ್ಟೊಂದು ಭೀಕರವಾಗಿ ಇತ್ತು ಸ್ವರೂಪ್ ನ ಪರಿಸ್ಥಿತಿ. ಇವತ್ತಿನವರೆಗೂ ಶ್ರುತಿ ಆ ಶಾಕ್ ನಿಂದ ಹೊರಬಂದಿಲ್ಲ. ಪ್ರೀತಿ ಕೆಲವರಿಗೆ ವರವಾದರೆ, ಕೆಲವರಿಗೆ ಶಾಪ. ಅವರಿಬ್ಬರ ಚಿಗುರೊಡೆದ ಪ್ರೀತಿಗೆ ಯಾರ ಕಣ್ಣು ಬಿತ್ತೋ?? ಹೊಸಕಿ ಹೋಯಿತು ಆ ಪ್ರೀತಿ! ಇವತ್ತು ಆಕೆಯ ಪರಿಸ್ಥಿತಿ ತುಂಬಾ ಶೋಚನೀಯ. ತಂದೆ-ತಾಯಿ, ಬಂಧು-ಮಿತ್ರರು ಹಾಗೂ ಬೇರೆ ಯಾರೂ ಅವಳಿಗೆ ಬೇಡ. ಮತ್ತೆ ಬರ್ತಾನಾ ಸ್ವರೂಪ್ ಅವಳ ಬಾಳಲ್ಲಿ ಇನ್ನೊಬರ ಮುಖಾಂತರ..??

ಈ ಕಥೆ ಯಾಕೆ ಹೇಳ್ದೆ ಅಂದ್ರೆ, ನಿಜವಾದ ಪ್ರೀತಿ ಜೀವನದಲ್ಲಿ ಒಂದೇ ಸಾರಿ ಆಗೋದು. ಅದನ್ನ ಉಳಿಸಿ ಜಯಿಸೋ ಎದೆಗಾರಿಕೆ ಇರ್ಬೇಕು. ಸುಮ್ನೆ ಒಬ್ರನ್ನ ಪ್ರೀತಿ ಮಾಡಿ ನಾಳೆ ಇನ್ನೊಬ್ರನ್ನ ಮದ್ವೆ ಆಗೋದು ಸರಿ ಅಲ್ಲ. ಹುಡುಗ ಅಥವಾ ಹುಡುಗಿ ಮನಸಿಗೆ ಎಷ್ಟು ಘಾಸಿ ಆಗುತ್ತೆ. ಸ್ನೇಹಿತರೇ, ಪ್ರೀತಿ ಮಾಡುವ ಮೊದಲು ಸ್ವಲ್ಪ ಯೋಚಿಸಿ. ಪ್ರೀತಿ ಮುಖ್ಯ ಜೀವನದಲ್ಲಿ, ಆದ್ರೆ ಅದು ನಮಗೆ ಮುಳ್ಳಾಗಬಾರದು ಅಲ್ವಾ? ಈ ಕಥೆಯನ್ನು ಓದಿದ ಎಲ್ಲ ಸ್ನೇಹಿತರಿಗೂ ಅವರ ಜೀವನದಲ್ಲಿ ಹೊಸ ಪ್ರೀತಿ ಚಿಗುರೊಡೆಯಲಿ ಅಂತ ಹಾರೈಸ್ತೀನಿ.. ಈಗಾಗಲೇ ಚಿಗುರೊಡೆದಿದ್ದರೆ, ದಯವಿಟ್ಟು ಆ ಪ್ರೀತಿನ ಪೋಷಿಸಿ ಮತ್ತು ಬೆಳೆಸಿ.

ಲೇಖಕರ ಕಿರುಪರಿಚಯ
ಶ್ರೀ ಪ್ರದೀಪ್ ಆಚಾರ್

ಬೆಂಗಳೂರಿನಲ್ಲಿನ ಖಾಸಗಿ ಸಂಸ್ಥೆಯೊಂದರಲ್ಲಿ ಇವರು ಸಿಸ್ಟಂ ಎಂಜಿನಿಯರ್ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಓದುವುದು, ಸಂಗೀತ ಆಲಿಸುವುದು, ಛಾಯಾಚಿತ್ರ ತೆಗೆಯುವುದು ಮತ್ತು ಚಾರಣಕ್ಕೆ ಹೋಗುವುದು ಇವರ ನೆಚ್ಚಿನ ಹವ್ಯಾಸಗಳು.

Blog  |  Facebook  |  Twitter

ಬುಧವಾರ, ನವೆಂಬರ್ 28, 2012

ಅವಳ ಲೋಕ

ಚಳಿಗಾಲದಲ್ಲಿ ಬೆಳಿಗ್ಗೆ ಏಳುವುದೇ ಸಾಹಸ, ಅದರಲ್ಲೂ ಬೇಗ ಏಳಬೇಕು ಎಂದರೆ ಹರಸಾಹಸ. ಚುಮು ಚುಮು ಚಳಿ, ಕಿಟಕಿಯ ಗಾಜನ್ನು ತೂರಿ ಪರದೆಗಳ ಸಂದಿಯಿಂದ ಇಣುಕಿನೋಡುವ ಭಾಸ್ಕರನ ಎಳೆಯ ಕಿರಣಗಳು. ಗಡಿಯಾರದಲ್ಲಿ ಏಳು ಗಂಟೆ ಹೊಡೆದುಕೊಂಡ ಶಬ್ದ. ಅಯ್ಯೋ.. ಏಳು ಗಂಟೆ ಆಗೇ ಬಿಡ್ತಲ್ಲ. ಇನ್ನೂ ಏಳದಿದ್ದರೆ ಅಮ್ಮನ ಸಹಸ್ರನಾಮಾವಳಿ ಕೇಳೋಕೆ ರೆಡಿ ಅಂತ ಅರ್ಥ.

ಈ ಸಂಖ್ಯೆಗೆ ಏಳು ಅಂತ ಯಾರು ನಾಮಕರಣ ಮಾಡಿದರೋ..? ಏಳು.. ಏಳು.. ಎದ್ದೇಳು ಅಂತ ಪೀಡಿಸುತ್ತಿರುತ್ತೆ. ಹೊದಿಕೆಯನ್ನು ಒದ್ದು ಮಂಚದಿಂದ ಇಳಿದು ಬಚ್ಚಲಮನೆ ಸೇರಿಕೊಂಡೆ. ಇನ್ನು ನಾನು ಹೊರಬರಲು ಕನಿಷ್ಠ ಅಂದ್ರೂ ಒಂದೂವರೆ ಘಂಟೆ ಬೇಕು. ಬುದ್ಧನಿಗೆ ಜ್ಞಾನೋದಯವಾದಂತೆ ಕಣ್ಣಲ್ಲೇ ಹಲ್ಲುಜ್ಜುತ್ತಲೇ ನಂಗೂ ಸೂರ್ಯೋದಯ ಆಗೋದು. ಹಲ್ಲುಜ್ಜುತ್ತಾ ಕನ್ನಡಿಯಲ್ಲಿ ಇಣುಕಿ ಇಣುಕಿ ಎಂದೂ ಕಾಣದ ಮುಖ ಕಂಡಂತೆ ದಿಟ್ಟಿಸಿ ನೋಡಿ, ಮೊತಿ ತಿರುಗಿಸಿ, ಕಣ್ಣು ಮಿಟುಕಿಸಿ, ತುಂಟ ನಗು ನಕ್ಕು, ಕೋತಿಯಂತೆ ಹಲ್ಲು ಕಿರಿಯುವುದರೊಂದಿಗೆ ನನ್ನ ಕೋತಿಯಾಟ ಮುಗಿಯುತ್ತೆ. ನಂತರ ಶವರ್ ಆನ್ ಮಾಡಿ ಅದರ ಕೆಳಗೆ ನಿಂತರೆ ಹರಿ ಹರ ಬ್ರಹ್ಮಾದಿಗಳು ಬಂದು ಬೇಡಿಕೊಂಡರೂ ನನ್ನನ್ನು ಹೊರ ತರಲು ಸಾಧ್ಯವಿಲ್ಲ.

"ಗಂಟೆ ಎಂಟೂವರೆ ಆಯ್ತು. ಏನೇ ಮಾಡ್ತಿದೀಯ ಬಾತ್ ರೂಂನಲ್ಲಿ? ಸ್ನಾನ ಮಾಡೋಕೆ ಇಷ್ಟು ಹೊತ್ತಾ? ನಾನಾಗಿದ್ರೆ ಇಷ್ಟರಲ್ಲಿ ಎಂಟು ಸಾರಿ ಸ್ನಾನ ಮಾಡ್ಕೊಂಡು ಬರ್ತಿದ್ದೆ.... ದಿನಾ ಇದೇ ಗೋಳಾಯ್ತಪ್ಪ. ಈ ಹುಡುಗಿಯರಿಗೆ ಯಾವಾಗ ಬುದ್ದಿ ಬರುತ್ತೋ...?" ಎಂಬ ಅಮ್ಮನ ಅಬ್ಬರದ ದನಿಗೆ ಎಚ್ಹೆತ್ತು 'ನಾನು ಯಾವುದೇ ಫಿಲಂನ ಹೀರೋಯಿನ್ ಅಲ್ಲ ಕನಸಿನ ಲೋಕದಲ್ಲಿ ತೇಲಾಡುತ್ತ ಸ್ನಾನ ಮಾಡೋಕೆ; ಕಾಲೇಜ್ಗೆ ಹೋಗ್ಬೇಕು' ಎಂದುಕೊಳ್ಳುತ್ತಾ ವಾಸ್ತವಕ್ಕೆ ಬರುತ್ತಲೇ ಅಮ್ಮನ ಸೈರನ್ ಮತ್ತೆ ಹೊಡೆದುಕೋಳ್ಳೋಕೆ ಶುರು. "ತಿಂಡಿ ಬಡಿಸಿದ್ದೀನಿ, ಆರಿಹೋಗತ್ತೆ ... ಬೇಗ ಬಾರೇ .. ಏನ್ ಹುಡುಗೀರೋ .." ಎಂಬ ಧ್ವನಿ ಕಿವಿಗಪ್ಪಳಿಸುತ್ತಲೇ ಕೂಡಲೇ ಕೈಗೆ ಸಿಕ್ಕ ಜೀನ್ಸ್ ಸಿಕ್ಕಿಸಿಕೊಂಡು; ಯಾವ ಟೀ-ಶರ್ಟ್ ಹಾಕ್ಕೊಳ್ಲಿ? ಅಥವಾ ಶಾರ್ಟ್ ಟಾಪ್ ಹಾಕ್ಕೊಳ್ಲಾ? ಅವತ್ತು ಪಿಂಕ್ ಟಾಪ್ ಹಾಕ್ಕೊಂಡು ಹೋಗಿದ್ದಾಗ ನಮ್ಮ ಕ್ಲಾಸ್ ನ ಹೊಸ ಎಂಟ್ರಿ ಆ ಕಿಶನ್ ಕಣ್ಣುಗಳು ಹೀರೋಯಿನ್ ನನ್ನು ಹೀರೋ ಹಿಂಬಾಲಿಸುವಂತೆ ನನ್ನನ್ನೇ ಹಿಂಬಾಲಿಸಿದ್ದವು ಅಲ್ವಾ? ಎಂಬುದು ನೆನಪಾಗುತ್ತಲೇ ಒಂದು ಕ್ಷಣ ಮೈಯೆಲ್ಲಾ ಪುಳಕ, ರೋಮಾಂಚನಗೊಂಡ ಅನುಭವ. ಇನ್ನೊಮ್ಮೆ ಅಮ್ಮನ ಕೂಗು ಕೇಳಿಸುತ್ತಲೇ ಕೈಗೆ ಸಿಕ್ಕ ಯಾವುದೋ ಒಂದು ಟಾಪ್ ಹಾಕ್ಕೊಂಡು ಡೈನಿಂಗ್ ಟೇಬಲ್ ಮುಂದೆ ಹಾಜರಾದೆ.

ಗಡಿಯಾರ ನೋಡಿದರೆ ಆಗಲೇ 9:15! 'ಅಯ್ಯೋ ಲೇಟಾಯ್ತು' ಎನ್ನುತ್ತಾ ತಟ್ಟೆಯಲ್ಲಿದ್ದ ತಿಂಡಿಯನ್ನು ಗಬಗಬನೆ ಮುಕ್ಕಿ 'ಅಮ್ಮಾ ಡಬ್ಬ ಬೇಡಮ್ಮ; ಕ್ಯಾಂಟೀನ್ ನಲ್ಲೇ ಏನಾದ್ರು ತಿಂದ್ಕೊತೀನಿ, ಬಾಯ್ ಅಮ್ಮಾ ..' ಎಂದು ಸ್ಕೂಟಿ ಏರಿ ಹೋರಾಟ ನಾನು ಕಾಲೇಜ್ ಕ್ಯಾಂಪಸ್ ಒಳಗೆ ಎಂಟ್ರಿ ಕೊಡೊ ಹೊತ್ತಿಗೆ ಬರೋಬ್ಬರಿ 9:30 ಗಂಟೆ.

'ಅಯ್ಯಬ್ಬಾ' ಎಂದು ನಿಟ್ಟುಸಿರು ಬಿಟ್ಟು ಕ್ಲಾಸ್ ಒಳಗೆ ಕಾಲಿಡುತ್ತಲೇ ಮುಂದಿನ ಬೆಂಚ್ ಜಂಬದಕೋಳಿ ಜಾಸ್ಮಿನ್ ಗುಂಪು ಪುಸಕ್ಕಂತ ನಕ್ಕಿತು. ನಂತರ ಉಳಿದವರ ಸರದಿ. ಒಮ್ಮೆಲೇ ಇಡೀ ಕ್ಲಾಸ್ಗೆ ಕ್ಲಾಸೇ ಕಿಸ ಕಿಸಾಂತ ನಕ್ಕ ಅನುಭವ. ಏನೂ ತಿಳಿಯದೆ ಅವಕ್ಕಾಗಿ ನನ್ನನ್ನು ನಾನೇ ನೋಡಿಕೊಂಡರೆ .... ಜೀನ್ಸ್ ಮೇಲೆ ನೈಟ್ ಟಾಪ್ ಹಾಕ್ಕೊಂಡು ಹೋಗಿದ್ದೆ!! 'ಪೆಚ್ಚಾಗಿ ನಿಂತರೆ ನನಗೆ ಅವಮಾನ ಮಾಡದೇ ಬಿಡಲ್ಲ ಇವರುಗಳು' ಎಂದುಕೊಂಡು  'ಕಾಲೇಜ್ಗೆ ಓದಲು ಬರ್ತಿರೋ ಅಥವಾ ಶೋಕಿ ಮಾಡೋಕೆ ಬರ್ತಿರೋ... ಮೈ ತುಂಬಾ ಬಟ್ಟೆ ಹಾಕ್ಕೊಂಡಿದೀನಿ ತಾನೆ? ಏನು ಹಲ್ಲು ಕಿರಿಯೋದು ಕೋತಿ ತರಹ ..." ಎಂದು ನಾನು ಘರ್ಜಿಸುವುದಕ್ಕೂ ಉಪನ್ಯಾಸಕರು ಒಳಗೆ ಬರೋದಕ್ಕೂ ಸರಿಹೋಗಿದ್ದರಿಂದ ಯಾರೂ ತುಟಿ ಪಿಟಕ್ಕೆನ್ನಲಿಲ್ಲ.

ಬ್ಯಾಗಲ್ಲಿದ್ದ ಸ್ಕಾರ್ಫ್ ತೆಗೆದು ಕತ್ತಿನ ಸುತ್ತ ಸುತ್ತಿಕೊಂಡು ಇದೇನೋ ಹೊಸ ಸ್ಟೈಲ್ ಎಂಬ ಪೋಸ್ ನಲ್ಲಿ ಕುಳಿತೆ; ಮನದಲ್ಲಿ ಮಾತ್ರ ಅಮ್ಮನ ಬಗ್ಗೆ ಕೋಪ ಉಕ್ಕಿ ಬರುತ್ತಿತ್ತು 'ಹಳ್ಳಿ ಗುಗ್ಗು, ಅಷ್ಟೂ ಗೊತ್ತಾಗಲ್ವಾ? ನೈಟ್ ಸೂಟ್ ಹಾಕ್ಕೊಂಡು ಹೊರ್ಟಿದೀಯಲ್ಲ ಅಂತ ಹೇಳ್ಬಾರ್ದಿತ್ತಾ .... ಬದಲಾಯಿಸ್ಕೊಂಡು ಬರ್ತಿದ್ದೆ. ಆಮೇಲೆ ಮನೆಗೆ ಬಂದಮೇಲೆ ಇದೆ ನೋಡು ನಿಂಗೆ' ಅಂತ ಮನಸಲ್ಲೇ ಬೆದರಿಕೆ ಹಾಕ್ತಾ ಕೂತ್ಕೊಂಡೆ. ತಕ್ಷಣ ಹಳೆಯ ಘಟನೆಯೊಂದು ನೆನಪಾಯ್ತು.

ಒಮ್ಮೆ ಅಮ್ಮ ನನ್ನ ಬಟ್ಟೆಯ ಬಗ್ಗೆ ಕಮೆಂಟ್ ಮಾಡಿದಾಗ 'ನಿನಗೇನು ಗೊತ್ತಮ್ಮಾ ಇದು ಈಗಿನ ಲೇಟೆಸ್ಟ್ ಫ್ಯಾಶನ್. ನಿನ್ನ ಕಾಲದವರಂತೆ ಲಂಗ ದಾವಣಿ ಹಾಕ್ಕೊಂಡು ಹೋದ್ರೆ ಎಲ್ಲಾ ನಗ್ತಾರೆ. ಈಗ ಏನಿದ್ರೂ ಸ್ಟೈಲಾಗಿ ಜೀನ್ಸ್-ಟಾಪ್, ಮಿಡಿ, ಸ್ಕರ್ಟ್, ಶಾರ್ಟ್ಸ್ ಅಂತ ಹಾಕ್ಕೊಂಡು ಹೋದ್ರೆ ಮಾತ್ರ ಮರ್ಯಾದೆ ಕೊಡ್ತಾರೆ. ನಾನೇನು ಹಾಕ್ಕೋಬೇಕು ಅಂತ ನನಗೆ ಗೊತ್ತಿದೆ; ನೀನು ಸುಮ್ಮನೆ ತಲೆ ತಿನ್ನಬೇಡ. ನಾನಿನ್ನೂ ಸ್ಕೂಲಿಗೆ ಹೋಗೋ ಹುಡುಗಿ ಅಲ್ಲ.... ಇನ್ ಮುಂದೆ ನೀನು ನನಗೆ ಉಪದೇಶ ಮಾಡೋಕೆ ಬರ್ಬೇಡ ....' ಎಂದು ಕೂಗಾಡಿದ್ದಕ್ಕೆ ಅಮ್ಮ ಅವಕ್ಕಾಗಿದ್ದಳು. ಇವತ್ತೂ ಕೂಡ ಇದೇನೋ ಹೊಸ ಸ್ಟೈಲ್ ಇರಬೇಕು ಅಂದುಕೊಂದಳೋ ಅಥವಾ "ಏನು ಬೇಕಾದ್ರೂ ಮಾಡ್ಕೊಳ್ಲಿ, ಹೇಳೋಕೆ ಹೋದ್ರೆ ಜಗಳಕ್ಕೇ ಬರ್ತಾಳೆ. ಹೊರ್ಗಡೆಯವರ ಹತ್ರ ಉಗಿಸ್ಕೊಂಡ್ರೇ ಬುದ್ಧಿ ಬರೋದು" ಅಂದ್ಕೊಂಡಿರಬೇಕು. ಅಯ್ಯೋ .. ದೇವರೇ ನನ್ನ ಆಬ್ಸೆಂಟ್ ಮೈಂಡ್ನಿಂದ ಎಂಥಾ ಪೇಚಾಟಕ್ಕೆ ಸಿಕ್ಕಿಹಾಕ್ಕೊಂಡೆ.

"ಇನ್ಮೇಲೆ ಬೇಗ ಎದ್ದು ಎಲ್ಲಾ ಕೆಲಸ ಸಮಯಕ್ಕೆ ಸರಿಯಾಗಿ ಮಾಡಿಕೊಳ್ಳಬೇಕು" ಎಂಬ ರೆಸಲ್ಯೂಶನ್ ನ್ಯೂ ಇಯರ್ ಗೆ ರೆಡಿ ಆಯಿತು.

ಲೇಖಕರ ಕಿರುಪರಿಚಯ
ಶ್ರೀಮತಿ ಪೂರ್ಣಿಮಾ ಸುಬ್ರಹ್ಮಣ್ಯ

ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಇವರು ಹುಟ್ಟಿ ಬೆಳೆದದ್ದು ಕುಂದಾಪುರ ತಾಲ್ಲೂಕಿನ ಕಂಬದಕೋಣೆ ಹತ್ತಿರದ ತೆಂಕಬೆಟ್ಟು ಎಂಬ ಪುಟ್ಟ ಹಳ್ಳಿಯಲ್ಲಿ. ಪದವಿ ಪೂರ್ವ ಶಿಕ್ಷಣ ಸ್ವಗ್ರಾಮದಲ್ಲಾದರೆ, ಪದವಿ ಪಡೆದಿದ್ದು ಶಾರದಾ ಕಾಲೇಜು, ಬಸ್ರೂರಿನಲ್ಲಿ.

ಗೃಹಿಣಿಯಾಗಿರುವ ಇವರು ತಮ್ಮ ಬಿಡುವಿನ ವೇಳೆಯಲ್ಲಿ ಕಥೆ ಮತ್ತು ಕವನಗಳನ್ನು ಬರೆಯುವ ಹವ್ಯಾಸವನ್ನು ಹೊಂದಿದ್ದಾರೆ.

Blog  |  Facebook  |  Twitter

ಮಂಗಳವಾರ, ನವೆಂಬರ್ 27, 2012

ಅಗಲಿದ ರೇಖಾ ಚಿಕಿತ್ಸಕ - ಡಾ. ಸತೀಶ್ ಶೃಂಗೇರಿ

"ಈ ಸರ್ತಿ ಆರ್ಟಿಕಲ್ ಬರೆಯೋಕೆ ಬಿಡುವೇ ಆಗ್ಲಿಲ್ಲ.. ಮುಂದಿನ ವರ್ಷ ಖಂಡಿತಾ ಕೊಡ್ತೀನಿ.." ಕಳೆದ ವರ್ಷ ಅವರನ್ನು ಭೇಟಿ ಮಾಡಿದ್ದ ಕಹಳೆ ತಂಡದೊಂದಿಗೆ ಡಾ. ಸತೀಶ್ ಶೃಂಗೇರಿ ಆಡಿಡ ಮಾತುಗಳಿವು. ಅವರ ಪ್ರವೃತ್ತಿಯೇ ಹಾಗೆ.. ಸದಾ ತಮ್ಮನ್ನು ತಾವು ವೃತ್ತಿ-ಕಲಾ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಅಂದು ಅವರನ್ನು ಭೇಟಿ ಮಾಡಿದ ನಮ್ಮ ತಂಡಕ್ಕೆ ತಮ್ಮ ಕ್ರಿಯಾಶೀಲ-ಸೃಜನಾತ್ಮಕ ವ್ಯಕ್ತಿತ್ವದಿಂದ ಹೊಸದೊಂದು ಭರವಸೆ ಮೂಡಿಸಿದ್ದರು. ಕಹಳೆ 2012 ರ ಪ್ರಸ್ತುತ ಆವೃತ್ತಿಯಲ್ಲಿ ಅವರ ಲೇಖನವೊಂದನ್ನು ಪ್ರಕಟಿಸುವ ಭಾಗ್ಯ ನಮಗಿಲ್ಲ; ಡಾ. ಸತೀಶ್ ಶೃಂಗೇರಿ ಅವರು ಇಂದಿಗೆ ಸರಿಯಾಗಿ ಎರಡು ತಿಂಗಳುಗಳ ಹಿಂದೆ ಅನಾರೋಗ್ಯದ ಕಾರಣದಿಂದ ನಮ್ಮೆಲ್ಲರನ್ನಗಲಿದರು. ಅವರ ಸಹೋದರರಾದ ಶ್ರೀ ರಘುಪತಿ ಶೃಂಗೇರಿ ಇವರು ರಚಿಸಿರುವ ಡಾ. ಸತೀಶ್ ಶೃಂಗೇರಿ ಯವರ ಬಗೆಗಿನ ಲೇಖನವನ್ನು ಪ್ರಕಟಿಸುವುದರೊಂದಿಗೆ ಅಗಲಿದ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇವೆ.

=> ಕಹಳೆ ತಂಡ.


ಡಾ. ಸತೀಶ್ ಶೃಂಗೇರಿ (1968 - 2012)
ಕಲೆ : ಶ್ರೀ ರಘುಪತಿ ಶೃಂಗೇರಿ

ಹುಟ್ಟಿದ್ದು - 1968ನೇ ಇಸವಿ, ಮೇ 1 ರಂದು ಶೃಂಗೇರಿಯ ಸಮೀಪದ ನೆಮ್ಮಾರು ಗ್ರಾಮದಲ್ಲಿ.

ತಾಯಿ- ಶ್ರೀಮತಿ ಯಶೋದಾ ಮತ್ತು ತಂದೆ- ಶ್ರೀ ಶೃಂಗೇಶ್ವರ ರಾವ್.

ಸತೀಶ್ ರವರು ತಮ್ಮ ವಿದ್ಯಾಭ್ಯಾಸವನ್ನು ಶೃಂಗೇರಿ ಸಮೀಪದ ಕಿಗ್ಗಾ ಶಾಲೆ ಮತ್ತು ಶೃಂಗೇರಿಯ ಜೆ.ಸಿ.ಬಿ.ಎಂ. ಕಾಲೇಜಿನಲ್ಲಿ ಪಡೆದಿದ್ದರು.

ಕೊಪ್ಪ ಮತ್ತು ಗದಗದ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಬಿ.ಎ.ಎಮ್.ಎಸ್. ವ್ಯಾಸಂಗ ಮಾಡಿ, ನಂತರ ಬೆಂಗಳೂರಿನ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಎಂ.ಡಿ. ಪೂರ್ಣಗೊಳಿಸಿದ್ದರು.

ಡಾಕ್ಟರ್ ಸತೀಶ್ ವೈದ್ಯಕೀಯ ರಂಗದಲ್ಲಿ ಮತ್ತು ವ್ಯಂಗ್ಯಚಿತ್ರ ಲೋಕದಲ್ಲಿ ಎರಡರಲ್ಲೂ ಹೆಸರು ಮಾಡಿದಂತಹ ಅಪರೂಪದ ಕಲಾವಿದ.

ಕರ್ನಾಟಕ ಕಾರ್ಟೂನಿಸ್ಟ್ ಅಸೋಸಿಯೇಷನ್ ನ ಕಾರ್ಯದರ್ಶಿಯಾಗಿದ್ದರು.

ಪ್ರತಿಭೆ, ಪರಿಶ್ರಮದ ಮೂಲಕ ಚಿತ್ರಕಲೆಯನ್ನು ಕರಗತ ಮಾಡಿಕೊಂಡಿದ್ದ ಸತೀಶ್ ಅನೇಕ ಉದಯೋನ್ಮುಖ ವ್ಯಂಗ್ಯಚಿತ್ರಕಾರರಿಗೆ ಮಾರ್ಗದರ್ಶಕರಾಗಿದ್ದರು.

ಶ್ರೀ ಕೃಷ್ಣ ಆಯುರ್ವೇದಿಕ್ ಕ್ಲಿನಿಕ್ ನಲ್ಲಿ ಹಾಗೂ ಯುನಿವಾ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಸತೀಶ್, ಮೂಡುಬಿದಿರೆಯ ಆಳ್ವಾಸ್ ಹಾಗೂ ಮಣಿಪಾಲದ ಮುನಿಯಾಲ ಆಯುರ್ವೇದಿಕ್ ಕಾಲೇಜ್ ಗಳಲ್ಲಿ ಗೌರವ ಪ್ರಾಧ್ಯಾಪಕರಾಗಿ ಕೂಡಾ ಕಾರ್ಯ ನಿರ್ವಹಿಸುತ್ತಿದ್ದರು.

ಹವ್ಯಾಸಿ ವ್ಯಂಗ್ಯಚಿತ್ರಕಾರರಾಗಿ ನಾಡಿನ ಹಲವಾರು ಹೆಸರಾಂತ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು. ಅವುಗಳಲ್ಲಿ ಪ್ರಮುಖವಾದವು- ಸುಧಾ, ಪ್ರಜಾವಾಣಿ, ಕರ್ಮವೀರ, ಸಂಯುಕ್ತ ಕರ್ನಾಟಕ, ವಿಕ್ರಮ, ಮಯೂರ, ಪ್ರಿಯಾಂಕ, ಸೂರ್ಯ... ಇತ್ಯಾದಿ.

ಇವರ 12000ಕ್ಕೂ ಹೆಚ್ಚು ವ್ಯಂಗ್ಯಚಿತ್ರಗಳು, ರೇಖಾಚಿತ್ರಗಳು ಪ್ರಕಟವಾಗಿವೆ.


ನಾಡಿನ ಹೆಸರಾಂತ ಕನ್ನಡ ದಿನಪತ್ರಿಕೆ ಸಂಯುಕ್ತ ಕರ್ನಾಟಕದಲ್ಲಿ ಕಳೆದ 10 ವರ್ಷಗಳಿಂದ ರಾಜಕೀಯ ವ್ಯಂಗ್ಯಚಿತ್ರಗಳನ್ನು ಬರೆಯುತ್ತಿದ್ದರು, ಅವರ ಇತ್ತೀಚಿನ 'ದಿನಕ್ಕೊಂದು ಗುಳಿಗೆ' ಅಂಕಣ ತುಂಬಾ ಜನಪ್ರಿಯವಾಗಿತ್ತು.

2009ರಲ್ಲಿ ನಡೆದ ಸೋನಿಯಾ ಗಾಂಧಿ ಮತ್ತು ಮನಮೋಹನ್ ಸಿಂಗ್ ರ ಅಂತರಾಷ್ಟ್ರೀಯ ಮಟ್ಟದ ವ್ಯಂಗ್ಯ ಭಾವಚಿತ್ರ ಸ್ಪರ್ಧೆಯಲ್ಲಿ ಸತೀಶ್ 50 ಸಹಸ್ರ ರೂಗಳ ದ್ವಿತೀಯ ಬಹುಮಾನ ಪಡೆದಿದ್ದರು.

ಜಾಗತೀಕರಣದ ಬಗ್ಗೆ ನಡೆದ ರಾಷ್ಟ್ರೀಯ ಮಟ್ಟದ ವ್ಯಂಗ್ಯಚಿತ್ರ ಸ್ಪರ್ಧೆಯಲ್ಲಿ ಇವರ ವ್ಯಂಗ್ಯಚಿತ್ರಕ್ಕೆ 'ಅತ್ಯುತ್ತಮ ವ್ಯಂಗ್ಯಚಿತ್ರ' ಪ್ರಶಸ್ತಿ ಲಭಿಸಿತ್ತು.

1997, 2001 ಮತ್ತು 2002ರಲ್ಲಿ ಕೊರಿಯಾದಲ್ಲಿ ನಡೆದ ವ್ಯಂಗ್ಯಚಿತ್ರ ಸ್ಪರ್ಧೆಯಲ್ಲಿ ಐದನೇ ಪ್ರಶಸ್ತಿ ಪಡೆದಿದ್ದರು.

ದೇಶದ ಹಲವಾರು ಗ್ಯಾಲರಿಗಳಲ್ಲಿ ಇವರ ವ್ಯಂಗ್ಯಚಿತ್ರಗಳು ಪ್ರದರ್ಶನಗೊಂಡಿವೆ.

ಹಲವು ವರ್ಷಗಳ ಹಿಂದೆ ನಾಗಪುರದಲ್ಲಿ ನಡೆದ ವ್ಯಂಗ್ಯಚಿತ್ರ ಕಾರ್ಯಾಗಾರದಲ್ಲಿ ನಾಡಿನಿಂದ ಭಾಗವಹಿಸುವ ಅವಕಾಶ ಇವರದಾಗಿತ್ತು. ಅಲ್ಲಿ ವ್ಯಂಗ್ಯಚಿತ್ರಗಾರರಿಗೆ ರೋಲ್ ಮಾಡೆಲ್ ಆಗಿರುವ ಶ್ರೀ ಆರ್. ಕೆ. ಲಕ್ಷ್ಮಣ್ ಅವರು ವಿಶೇಷ ಅತಿಥಿಯಾಗಿದ್ದರು. ಅವರನ್ನು ಭೇಟಿ ಮಾಡುವ ಸಂಧರ್ಭ ಸತೀಶ್ ಅವರಿಗೆ ಒದಗಿತ್ತು.

ಇತ್ತೀಚೆಗೆ ಇವರ ಮತ್ತು ನನ್ನ ವ್ಯಂಗ್ಯಚಿತ್ರಗಳ ಪ್ರದರ್ಶನ ನಗರದ ಎಂ.ಜಿ. ರಸ್ತೆಯಲ್ಲಿರುವ ಕಾರ್ಟೂನ್ ಗ್ಯಾಲೆರಿಯಲ್ಲಿ ನಡೆದಿತ್ತು. ಆ ಸಂದರ್ಭದಲ್ಲಿ ಇವರ 'ಆರ್ಟೂನ್' ಪುಸ್ತಕವನ್ನು ಪ್ರಸಿದ್ಧ ಸಾಹಿತಿ ಶ್ರೀ ಜಯಂತ್ ಕಾಯ್ಕಿಣಿಯವರು ಬಿಡುಗಡೆ ಮಾಡಿದ್ದರು.

ದಸರಾ ಮತ್ತು ಹಲವಾರು ಹಾಸ್ಯೋತ್ಸವ ಕಾರ್ಯಕ್ರಮಗಳಲ್ಲಿ ಖ್ಯಾತ ಹಾಸ್ಯ ಕಲಾವಿದರಾದ ಶ್ರೀ ಮಾಸ್ಟರ್ ಹಿರಣ್ಣಯ್ಯ, ಅ.ರಾ. ಮಿತ್ರ,  ಪ್ರೊ. ಕೃಷ್ಣೇಗೌಡ, ಗಂಗಾವತಿ ಪ್ರಾಣೇಶ್, ಬೇಲೂರು ರಾಮಮೂರ್ತಿ ಮುಂತಾದವರೊಂದಿಗೆ ಭಾಗವಹಿಸಿದ್ದರು.

ಆಯುರ್ವೇದದ ಕುರಿತು ಅರಿವು ಮೂಡಿಸುವ ವ್ಯಂಗ್ಯಚಿತ್ರಗಳಿಂದ ಕೂಡಿದ ಅನೇಕ ಕಿರುಹೊತ್ತಿಗೆಗಳನ್ನು ಹೊರತಂದಿದ್ದರು.

Facebook ನಲ್ಲಂತೂ ಇವರ 'ದಿನಕ್ಕೊಂದು ಗುಳಿಗೆ' ವ್ಯಂಗ್ಯಚಿತ್ರಗಳಿಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. Facebook ನಲ್ಲಿ ಕರ್ನಾಟಕ ವ್ಯಂಗ್ಯಲೋಕ ಎಂಬ Group ಅನ್ನು ವ್ಯಂಗ್ಯಚಿತ್ರಕಾರರಿಗಾಗಿ ಮತ್ತು ಅಭಿಮಾನಿಗಳಿಗಾಗಿ ಹುಟ್ಟು ಹಾಕಿದ್ದರು.

ಅನಾರೋಗ್ಯದಿಂದ ಬಳಲುತ್ತಿದ್ದ ಅವರು 27ನೇ ಸೆಪ್ಟೆಂಬರ್ 2012 ರಂದು ವಿಧಿವಶರಾದರು.

ಇನ್ನೂ ಹಲವಾರು ವರ್ಷಗಳ ಕಾಲ ವೈದ್ಯಕೀಯ ಮತ್ತು ಕಲಾ ಪ್ರಪಂಚಕ್ಕೆ ತಮ್ಮ ಸೇವೆಯನ್ನು ನೀಡಬೇಕಾಗಿದ್ದ ಸತೀಶ್ ನವ್ಮೊಡನೆ ಇಲ್ಲದಿರುವುದು ನಮ್ಮ ದೌರ್ಭಾಗ್ಯವೇ ಸರಿ. ಬಹುಮುಖ ಪ್ರತಿಭೆಯಾಗಿದ್ದ ಅವರನ್ನು ಕಳೆದುಕೊಂಡ ನಮ್ಮ ನಾಡು ಬಡವಾಗಿದೆ.

ಲೇಖಕರ ಕಿರುಪರಿಚಯ
ಶ್ರೀ ರಘುಪತಿ ಶೃಂಗೇರಿ

ಮೂಲತಃ ಶೃಂಗೇರಿಯವರಾದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದು, ಟಿ. ಸಿ. ಎಸ್. ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಹವ್ಯಾಸಿ ವ್ಯಂಗ್ಯಚಿತ್ರಕಾರರು. ಇವರ 7000 ಕ್ಕೂ ಅಧಿಕ ಚಿತ್ರಗಳು 'ಸುಧಾ', 'ಕರ್ಮವೀರ', 'ರೀಡಿಂಗ್ ಅವರ್' ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಇವರ ಕೆಲವು ವ್ಯಂಗ್ಯಚಿತ್ರಗಳಿಗೆ 6 ಅಂತರಾಷ್ಟ್ರೀಯ, 2 ರಾಷ್ಟ್ರೀಯ ಮತ್ತು ಹಲವು ರಾಜ್ಯ ವಲಯದ ಪ್ರಶಸ್ತಿಗಳು ಲಭಿಸಿವೆ. ಇದುವರೆಗೆ ಇವರ ಹಲವಾರು ಕಲಾಕೃತಿಗಳು ಪ್ರದರ್ಶನಗೊಂಡಿವೆ.

Blog  |  Facebook  |  Twitter

ಸೋಮವಾರ, ನವೆಂಬರ್ 26, 2012

ನಾಯಿ ಕಡಿತ – ತಿಳಿದಿರಬೇಕಾದ ಸಂಗತಿಗಳು

ಇತ್ತೀಚಿಗೆ ಬೆಂಗಳೂರಿನಲ್ಲಿ ಬೀದಿನಾಯಿಗಳು ಹೆಚ್ಚಾಗಿವೆ. ನಾಯಿ ಕಡಿತದಿಂದ, ಅಕಸ್ಮಾತ್ ಆ ನಾಯಿ ರೇಬಿಸ್/ಹುಚ್ಚುನಾಯಿರೋಗ ಪೀಡಿತವಾಗಿದ್ದರೆ ನಮಗೂ ಗುಣಪಡಿಸಲಾಗದ ಮತ್ತು ಖಚಿತವಾಗಿ ಸಾವನ್ನು ಉಂಟುಮಾಡುವ ಈ ವೈರಸ್ ರೋಗ ಬರುವ ಸಾಧ್ಯತೆಯಿದೆ. ಆದ್ದರಿಂದ ನಾಯಿಕಡಿತವನ್ನು ತಪ್ಪಿಸುವುದರ ಬಗ್ಗೆ ಹಾಗೂ ಅಕಸ್ಮಾತ್ ಕಚ್ಚಿದಾಗ ಅನುಸರಿಸಬೇಕಾದ ಕ್ರಮಗಳ/ಪ್ರಥಮ ಚಿಕಿತ್ಸೆಯ ಬಗ್ಗೆ ಎಲ್ಲರೂ ತಿಳಿದಿರುವುದು ಅಗತ್ಯ.

ನಾಯಿಕಡಿತವನ್ನು ತಪ್ಪಿಸುವುದು
ನಾಯಿಗಳ ಬಗ್ಗೆ ವಿಶೇಷ ಪ್ರೀತಿ ಮತ್ತು ಕುತೂಹಲ ಹೊಂದಿರುವ ಮಕ್ಕಳಿಗೆ ಈ ಬಗ್ಗೆ ಅರಿವು ಮೂಡಿಸುವುದು ಬಹಳ ಮುಖ್ಯ.
  1. ಅಪರಿಚಿತ ನಾಯಿಯನ್ನು ಸಮೀಪಿಸುವುದಾಗಲೀ, ಅದನ್ನು ಮುಟ್ಟುವುದಾಗಲೀ ಅಥವಾ ಆಹಾರ ನೀಡಲು ಪ್ರತ್ನಿಸುವುದಾಗಲೀ ಮಾಡಬಾರದು. (ಅಗತ್ಯವಿದ್ದರೆ ಅದರ ಮಾಲೀಕರ ಸಮಕ್ಷಮದಲ್ಲಿ ಅವರ ಮಾರ್ಗದರ್ಶನದಲ್ಲಿ ಮುಂದುವರೆಯಬಹುದು)
  2. ಪರಿಚಿತ ನಾಯಿಯೇ ಆಗಲಿ, ಅದನ್ನು ರೇಗಿಸಿಯಾಗಲೀ ಅಥವಾ ಕೀಟಲೆ ಮಾಡಿಯಾಗಲೀ ಕಚ್ಚಲು ಪ್ರೇರೇಪಿಸಬಾರದು.
  3. ಮಲಗಿ ನಿದ್ರಿಸುತ್ತಿರುವ/ಆಹಾರ ಸೇವಿಸುತ್ತಿರುವ/ಮರಿಗಳೊಂದಿಗೆ ಇರುವ/ಪರಸ್ಪರ ಕಚ್ಚಾಡುತ್ತಿರುವ ನಾಯಿಗಳಿಂದ ದೂರವಿರಬೇಕು.
  4. ದಾರಿಯಲ್ಲಿ ಎದುರಾಗುವ ಅಥವಾ ಹಾದಿಬದಿಯಲ್ಲಿದ್ದು ನಮ್ಮ ಕಡೆ ಬೊಗಳುತ್ತಿರುವ ನಾಯಿಯಿಂದ ಸಾಕಷ್ಟು ಅಂತರ ಕಾಯ್ದುಕೊಂಡು ಅದನ್ನು ಹೆಚ್ಚಾಗಿ ಗಮನಿಸದವರಂತೆ ನಿಧಾನವಾಗಿ ಹಾದುಹೋಗಬೇಕು.
    1. ನೆನಪಿಡಿ:
    • ನಮ್ಮ ಕಡೆ ತೀಕ್ಷ್ಣವಾಗಿ ನೋಡುತ್ತಿರುವ ಅಥವಾ ಬೊಗಳುತ್ತಿರುವ ನಾಯಿಯನ್ನು ಕಣ್ಣಲ್ಲಿ ಕಣ್ಣಿಟ್ಟು ನೇರವಾಗಿ ನೋಡಬಾರದು.
    • ಓಡಲಾರಂಭಿಸುವ/ಓಡುತ್ತಿರುವ ಅಥವಾ ವೇಗವಾಗಿ ವಾಹನದಲ್ಲಿ ಚಲಿಸುತ್ತಿರುವ ವ್ಯಕ್ತಿಗಳನ್ನು ಅಟ್ಟಿಸಿಕೊಂಡು ಹೋಗುವುದು ಬಹುತೇಕ ನಾಯಿಗಳ ಗುಣ.
    • ನಾಯಿ ನಮ್ಮ ಕಡೆ ಗಮನವಿರಿಸಿ ಬೊಗಳಲಾರಂಭಿಸಿದಾಗ, ಕೂಡಲೇ ತಿರುಗಿ ಅದಕ್ಕೆ ಬೆನ್ನು ತೋರಿಸಿ ವೇಗವಾಗಿ ದೂರ ಹೋಗಲು ಪ್ರಯತ್ನಿಸುವ ಬದಲು, ಅದರ ಕಡೆ ಹೆಚ್ಚು ಗಮನ ಕೊಡದವರಂತೆ ನಟಿಸುತ್ತಾ, ಕೆಲವು ಕ್ಷಣಗಳು ದೃಢವಾಗಿ ಇರುವಲ್ಲೇ ನಿಂತಿದ್ದು, ನಂತರ ಪೂರ್ತಿ ಹಿಂದಕ್ಕೆ ತಿರುಗುವ ಬದಲು, ಪಕ್ಕಕ್ಕೆ ಮಾತ್ರ ತಿರುಗಿ ನಿಧಾನವಾಗಿ ದೂರ ಸರಿಯಬೇಕು.
  5. ನಾಯಿ ನಮ್ಮ ಮೇಲೆ ಆಕ್ರಮಣ ನಡೆಸುವ ಸೂಚನೆ ಕಂಡಾಗ, ಅವಕಾಶವಿದ್ದರೆ ನಮ್ಮ ಮತ್ತು ಅದರ ನಡುವೆ ಮರವಾಗಲೀ, ಕಲ್ಲು ಬೆಂಚಾಗಲೀ, ವಿದ್ಯುತ್ ಕಂಬವಾಗಲೀ ಇತ್ಯಾದಿ ಯಾವುದಾದರೊಂದು ಇರುವಂತೆ ನೋಡಿಕೊಳ್ಳಲು ಪ್ರಯತ್ನಿಸಬೇಕು.
  6. ಅದು ಹತ್ತಿರ ಬರುವ ಸೂಚನೆ ಕಂಡಾಗ ನೆಲಕ್ಕೆ ಬಾಗಿ ಕಲ್ಲು ಎತ್ತಿಕೊಂಡು ಅದರ ಕಡೆಗೆ ಎಸೆಯಬಹುದು ಅಥವಾ ಆ ರೀತಿ ನಟಿಸಬಹುದು. ಹಾಗೂ ಕೈಯಲ್ಲಿರುವ ಯಾವುದದರೂ ವಸ್ತುವಿನಿಂದ ಹೊಡೆಯುವಂತೆ ತೋರಿಸಬಹುದು.
  7. ಕಚ್ಚಲು ಹತ್ತಿರ ಬಂದೇಬಿಟ್ಟಿತು ಎಂದಾದಾಗ ನಮ್ಮ ಮತ್ತು ಅದರ ನಡುವೆ ಪುಸ್ತಕವನ್ನಾಗಲೀ, ವ್ಯಾನಿಟಿ ಬ್ಯಾಗನ್ನಾಗಲೀ, ಕೈಚೀಲವನ್ನಾಗಲೀ, ಕೊಡೆಯನ್ನಾಗಲೀ ಇತ್ಯಾದಿ ನಮ್ಮ ಬಳಿ ಇರುವ ಯಾವುದಾದರೂ ಒಂದು ವಸ್ತುವನ್ನು ಅಡ್ಡವಾಗಿ ಒಡ್ಡಿ ಆ ವಸ್ತುವನ್ನು ಕಚ್ಚುವಂತೆ ಮಾಡಲು ಪ್ರಯತ್ನಿಸಬೇಕು.
  8. ನೆನಪಿಡಿ: 'ಬೊಗಳುವ ನಾಯಿ ಕಚ್ಚುವುದಿಲ್ಲ' ಎಂಬ ಗಾದೆಯೂ ಸುಳ್ಳಾಗುವ ಸಾಧ್ಯತೆ ಇದೆ.
  9. ಅಕಸ್ಮಾತ್ ನಾಯಿ/ನಾಯಿಗಳು ಆಕ್ರಮಣ ಮಾಡಿದಾಗ ಕಡಿತ ಅನಿವಾರ್ಯವೆಂದಾದರೆ, ದೇಹವನ್ನು ಚಂಡಿನಂತೆ ಮಾಡಿಕೊಂಡು ಮುಖ, ತಲೆ, ಕಿವಿ ಮತ್ತು ಕುತ್ತಿಗೆಗಳನ್ನು ಕೈಕಾಲುಗಳ ನಡುವೆ ಹುದುಗಿಸಿಕೊಂಡು ಕನಿಷ್ಠ ಆ ಭಾಗಗಳನ್ನು ಕಡಿತದಿಂದ ರಕ್ಷಿಸಿಕೊಳ್ಳಬೇಕು.
    • ಏಕೆಂದರೆ ನಾಯಿ ಕಚ್ಚಿದ ಭಾಗವು ಮೆದುಳಿನಿಂದ ಇರುವ ದೂರ, ರೋಗ ಎಷ್ಟು ದಿನಗಳಲ್ಲಿ ಕಾಣಿಸಿಕೊಳ್ಳಬಹುದು ಎಂಬುದನ್ನು ನಿರ್ಧರಿಸುತ್ತದೆ. ಕಡಿತಕ್ಕೊಳಗಾದ ಭಾಗ ಮೆದುಳಿಗೆ ಹತ್ತಿರವಿದ್ದಷ್ಟೂ ರೋಗ ಬೇಗ ಕಾಣಿಸಿಕೊಳ್ಳುತ್ತದೆ, ದೂರವಿದ್ದಷ್ಟೂ ಅದು ನಿಧಾನವಾಗುತ್ತದೆ, ನಿಧಾನವಾದಷ್ಟೂ ತೆಗೆದುಕೊಳ್ಳುವ ಲಸಿಕೆ ರಕ್ಷಣೆ ನೀಡಲು ಸಮಯ ದೊರಕುತ್ತದೆ.
  10. ಎಲ್ಲ ಸಾಕು ನಾಯಿಗಳಿಗೆ ನಿಯಮಿತವಾಗಿ ವರ್ಷಕ್ಕೊಮ್ಮೆ ರೇಬಿಸ್ ರೋಗ ನಿರೋಧಕ ಲಸಿಕೆ ತಪ್ಪದೇ ಹಾಕಿಸಬೇಕು.

ನಾಯಿ ಕಚ್ಚಿದಾಗ ಕೂಡಲೇ ಅನುಸರಿಸಬೇಕಾದ ಕ್ರಮಗಳು ಮತ್ತು ಪ್ರಥಮ ಚಿಕಿತ್ಸೆ
ಮೊಟ್ಟಮೊದಲನೆಯದಾಗಿ ನೆನಪಿಡಬೇಕಾದ ವಿಷಯವೆಂದರೆ, ಮಕ್ಕಳು ನಾಯಿಯಿಂದ ಕಚ್ಚಿಸಿಕೊಂಡಾಗ ದೊಡ್ಡವರಿಗೆ ತಿಳಿಸಿದರೆ 'ನಾಯಿಯ ತಂಟೆಗೇಕೆ ಹೋಗಿದ್ದೆ?' ಎಂದು ಶಿಕ್ಷಿಸಬಹುದೆಂಬ ಭಯದಿಂದ ಅದನ್ನು ಹೇಳದೇ ಇರುವ ಸಾದ್ಯತೆ ಇರುತ್ತದೆ ಎಂಬುದು. ಯಾವುದೇ ಕಾರಣಕ್ಕೂ ನಾಯಿ ಕಡಿತವನ್ನು ಮುಚ್ಚಿಡುವುದಾಗಲೀ, ನಿರ್ಲಕ್ಷಿಸುವುದಾಗಲೀ ಮಾಡಬಾರದೆಂಬ ಮಾಹಿತಿ ಎಲ್ಲರಿಗೂ, ಅದರಲ್ಲೂ ಮುಖ್ಯವಾಗಿ ಮಕ್ಕಳಿಗೆ ತಿಳಿದಿರುವುದು ತುಂಬಾ ಅಗತ್ಯ.

ಗಮನಿಸಿ: ಹುಚ್ಚುನಾಯಿಯ ಜೊಲ್ಲಿನಲ್ಲಿರಬಹುದಾದ ರೇಬಿಸ್ ವೈರಸ್ ಗಳು ದೇಹದ ಒಳಹೋಗಿ ನರವ್ಯೂಹ ಸೇರಿದ ನಂತರ ಎಷ್ಟು ಬಲಿಷ್ಠವೋ, ಹೊರಗೆ ಅಥವಾ ನರವ್ಯೂಹ ಸೇರುವ ವೊದಲು ಅಷ್ಟೇ ಶಕ್ತಿಹೀನ. ಆಗ ಅವುಗಳನ್ನು ನಾಶಪಡಿಸುವುದು ಸುಲಭ. ಆದ್ದರಿಂದ ನಾಯಿ ಕಡಿತದ ಕೂಡಲೇ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಕಾರ್ಯೋನ್ಮುಖರಾಗಬೇಕು.
  1. ಕಚ್ಚಿದ ಗಾಯವನ್ನು ಯಾವುದೇ ಸೋಪು ಮತ್ತು ಯಥೇಚ್ಛ ನೀರು ಬಳಸಿ ಕನಿಷ್ಠ ಹತ್ತು ಸಲ ಒತ್ತಡದೊಂದಿಗೆ ತಿಕ್ಕಿ ತಿಕ್ಕಿ ತೊಳೆಯಬೇಕು. ನಲ್ಲಿಯಿಂದ ರಭಸವಾಗಿ ಬೀಳುತ್ತಿರುವ ನೀರಾದರೆ ಒಳ್ಳೆಯದು. ಅದು ಲಭ್ಯವಿಲ್ಲದಿದ್ದರೆ ನೀರನ್ನು ಎತ್ತರದಿಂದ ಹಾಕುತ್ತಾ ತೊಳೆಯಬಹುದು. ಸೋಪು ಯಾವುದಾದರೂ ಆಗಬಹುದು. ಸಿಕ್ಕಿದರೆ ಡಿಟರ್ಜೆಂಟ್ ಕೇಕ್ (ಬಟ್ಟೆ ಸೋಪು) ಅಥವಾ ಕಾರ್ಬಾಲಿಕ್ ಸೋಪು (ಲೈಫ್ ಬಾಯ್ ಇತ್ಯಾದಿ) ಇನ್ನೂ ಉತ್ತಮ.
    • ಹೀಗೆ ತೊಳೆಯುವುದರಿಂದ ಗಾಯ ದೊಡ್ಡದಾಗಬಹುದು ಅಥವಾ ರಕ್ತಸ್ರಾವ ಹೆಚ್ಚಾಗಬಹುದು ಎಂದು ಚಿಂತಿಸುವ ಅಗತ್ಯವಿಲ್ಲ. ವೈದ್ಯರು ನಂತರ ಅವುಗಳನ್ನು ಸುಲಭವಾಗಿ ಗುಣಪಡಿಸಬಲ್ಲರು.
  2. ಹೀಗೆ ತೊಳೆದಾದ ಮೇಲೆ ಲಭ್ಯವಿದ್ದರೆ ಡೆಟಾಲ್, ಸಾವಲಾನ್, ಟಿಂಚರ್ ಅಯೋಡಿನ್ ಇತ್ಯಾದಿ ಯಾವುದಾದರೂ ನಂಜುನಿರೋಧಕ ದ್ರಾವಣ ಲೇಪಿಸಬಹುದು.
  3. ಗಾಯ ದೊಡ್ಡದಾಗಿದ್ದರೆ ಅಥವಾ ರಕ್ತಸ್ರಾವ ಹೆಚ್ಚಾಗಿದ್ದರೆ ಬ್ಯಾಂಡೇಜ್ ಬಟ್ಟೆ ಅಥವಾ ಶುದ್ಧ ಬಟ್ಟೆಯ ಪಟ್ಟಿಯನ್ನು ಸ್ವಲ್ಪ ಒತ್ತಡದೊಂದಿಗೆ ಕಟ್ಟಬಹುದು.
  4. ನಂತರ ಸಾಧ್ಯವಾದಷ್ಟೂ ಬೇಗ ವೈದ್ಯರನ್ನು ಸಂಪರ್ಕಿಸಬೇಕು.
    (ಸಾಮಾನ್ಯವಾಗಿ ನಾಯಿಕಡಿತದ ಗಾಯಗಳಿಗೆ ಹೊಲಿಗೆ ಹಾಕುವುದಿಲ್ಲ. ಕಾರಣ, ಅಲ್ಲಿ ರೇಬಿಸ್ ವೈರಸ್ ಗಳಿದ್ದರೆ ಸೂಜಿಯೊಂದಿಗೆ ಅವು ಇನ್ನೂ ಆಳಕ್ಕೆ ಹೋಗುವ ಸಾಧ್ಯತೆಯಿದೆ)
  5. ಕಚ್ಚಿದ ನಾಯಿಯ ಬಗ್ಗೆ ಸೂಕ್ತ ಮಾಹಿತಿ ಪಡೆದು ವೈದ್ಯರು, ಗಾಯವನ್ನೂ ಪರಿಶೀಲಿಸಿ ರೇಬಿಸ್ ಲಸಿಕೆ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ.
    • ನಿಯಮಿತವಾಗಿ ರೇಬಿಸ್ ಲಸಿಕೆ ನೀಡಲ್ಪಟ್ಟಿರುವ ಸಾಕುನಾಯಿಯಾಗಿದ್ದರೆ, ಅಪಾಯದ ಸಾಧ್ಯತೆ ತುಂಬಾ ಕಡಿಮೆ. ಸಾಮಾನ್ಯವಾಗಿ ಕಚ್ಚಿದ ನಾಯಿಯನ್ನು ಹತ್ತು ದಿನಗಳು ಗಮನಿಸಲು ವೈದ್ಯರು ತಿಳಿಸುತ್ತಾರೆ. ಆ ಹತ್ತು ದಿನಗಳು ನಾಯಿ ಆರೋಗ್ಯವಾಗಿದ್ದರೆ ಅದು ರೇಬಿಸ್ ಪೀಡಿತವಲ್ಲವೆಂದು ನಿರ್ಧರಿಸಬಹುದು. ಒಂದು ವೇಳೆ ಕಚ್ಚಿದ ನಾಯಿ ಗಮನಿಸಲು ಸಿಕ್ಕುವುದಿಲ್ಲವಾದರೆ, ಲಸಿಕೆ ಪಡೆಯುವುದು ಕ್ಷೇಮ.
    • ರೇಬಿಸ್ ರೋಗದಿಂದ ನರಳುತ್ತಿರುವ ನಾಯಿ ಸಾಮಾನ್ಯಕ್ಕಿಂತ ತುಂಬಾ ಹೆಚ್ಚಿನ ಚಟುವಟಿಕೆ ತೋರಿಸುತ್ತಾ, ಬಾಯಿಯಿಂದ ದಾರದಂತೆ ಸೋರುತ್ತಿರುವ ಜೊಲ್ಲಿನೊಂದಿಗೆ ಭಯಂಕರವಾಗಿ ಕಾಣುವುದರ ಜೊತೆಗೆ, ಸಿಟ್ಟಿನಿಂದ ಕಂಡ ಕಂಡ ಸಜೀವ-ನಿರ್ಜೀವ ವಸ್ತುಗಳನ್ನು ಕಚ್ಚುತ್ತಾ ಒಂದೇ ಸಮನೆ ಗುರಿಯಿಲ್ಲದೇ ಓಡುತ್ತಾ ಸಾಗುತ್ತಿರಬಹುದು ಅಥವಾ ಮಂಕಾಗಿ ಜೊಲ್ಲು ಸೋರಿಸುತ್ತಾ ಮೂಲೆಯಲ್ಲಿ ಕುಳಿತಿರಬಹುದು, ಪಾರ್ಶ್ವವಾಯು ಪೀಡಿತವಾಗಿರಬಹುದು. ಆದರೆ ಈ ಲಕ್ಷಣಗಳು ಇಲ್ಲದ ನಾಯಿ ರೇಬಿಸ್ ನಿಂದ ಮುಕ್ತ ಎಂದು ಪೂರ್ಣವಾಗಿ ನಂಬುವಂತಿಲ್ಲ. ಏಕೆಂದರೆ ರೇಬಿಸ್ ರೋಗವೇ ಅಂಥಾದ್ದು. ಎಷ್ಟೋ ಸಲ ಪ್ರಾಣಿಗಳಲ್ಲಿ ಅದರ ಲಕ್ಷಣಗಳು ನಮ್ಮನ್ನು ದಾರಿ ತಪ್ಪಿಸಬಲ್ಲವು.
  6. ಲಸಿಕೆ ಪ್ರಾರಂಭಿಸಿದರೆ ನಿಯಮಿತವಾಗಿ ವೈದ್ಯರು ತಿಳಿಸುವ ದಿನಾಂಕಗಳಂದು ತಪ್ಪದೇ ಲಸಿಕೆ ಹಾಕಿಸಿಕೊಂಡು ಅದರ ಸರಣಿಯನ್ನು ಪೂರೈಸಬೇಕು.
  7. ಬಟ್ಟೆಗಳ ಮೇಲೆ ನಾಯಿ ಕಡಿತ ಉಂಟಾಗಿದ್ದರೂ ಅಥವಾ ಕಚ್ಚಿದ ಸ್ಥಳದಲ್ಲಿ ಗಾಯ ಕಾಣಿಸದೇ ಬರೀ ಹಲ್ಲುಗಳು ನೆಟ್ಟಂತೆ ಕಾಣುತ್ತಿದ್ದರೂ ಅಲಕ್ಷ್ಯ ಮಾಡದೇ ಕ್ರಮ ವಹಿಸಬೇಕು.
  8. ನಾಯಿಗಳಿಂದ ನೆಕ್ಕಿಸಿಕೊಳ್ಳುವುದೂ ಕೂಡ ಅಪಾಯಕಾರಿಯಾಗಬಲ್ಲದು. ಏಕೆಂದರೆ ನೆಕ್ಕಿದ ಸ್ಥಳದಲ್ಲಿ ಬರಿಯ ಕಣ್ಣಿಗೆ ಕಾಣದ, ನಮ್ಮ ಅರಿವಿಗೇ ಬಾರದಂತೆ ಉಂಟಾಗಿರುವ ಸೂಕ್ಷ್ಮ ಗಾಯಗಳಿರುವ ಸಾಧ್ಯತೆಯಿದ್ದು, ಅವುಗಳ ಮೂಲಕ ವೈರಸ್ ಗಳು ದೇಹವನ್ನು ಪ್ರವೇಶಿಸುವ ಸಾಧ್ಯತೆಯಿರುತ್ತದೆ.

ಲೇಖಕರ ಕಿರುಪರಿಚಯ
ಡಾ. ಸೀಮಾ ಕಶ್ಯಪ್

ಮೂಲತಃ ಉತ್ತರ ಭಾರತದವರಾದ ಇವರು, ಬೆಂಗಳೂರಿನ ಪಶುವೈದ್ಯಕೀಯ ಮಹಾವಿದ್ಯಾಲಯದಿಂದ ರೋಗಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಪ್ರಸ್ತುತ ಕರ್ನಾಟಕ ಸರ್ಕಾರದ ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಪಶುವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಹಿಂದಿ ಮಾತೃಭಾಷೆಯಾದರೂ, ಕನ್ನಡ ಭಾಷೆಯಲ್ಲಿ ಬರೆಯಲು-ಓದಲು ಕಲಿತಿರುವ ಇವರು ತಮ್ಮ ಸಹೋದ್ಯೋಗಿಗಳ ಸಹಾಯದಿಂದ ಈ ಲೇಖನವನ್ನು ಕನ್ನಡದಲ್ಲಿ ರಚಿಸಿದ್ದಾರೆ.

Blog  |  Facebook  |  Twitter

ಭಾನುವಾರ, ನವೆಂಬರ್ 25, 2012

ಕವನಗಳ ಸಂಗ್ರಹ

ಬಾ ತಾಯೆ ಕಾವೇರಿ!!!

ಕನ್ನಡತಿಯೊಬ್ಬಳು ಕಾದಿಹಳು, ಹೊತ್ತು
ಖಾಲಿ ಬಿಂದಿಗೆಯ ಬಿಸಿಲಲ್ಲಿ ನಿಂತು
ನೀರೊಡನೆ ಹೋಗದಿದ್ದರೆ ಇಲ್ಲ ಅಡುಗೆ
ಅತ್ತೆಯ ಬೈಗಳದ ಪೀಕಲಾಟ
ಬಳ್ಳಿಯಂತಿಹಳೀಕೆ ಎಷ್ಟೆಂದು ಕಾಯ್ವಳು
ಇನ್ನೆಷ್ಟು ಸಹಿಸಿಯಾಳು ಬಿಸಿಲಿನಾಟ

ಬಂದವಳು ಬಂದಂತೆ ಹಿಂದಿರುಗಿದ್ದೇಕೆ?
ಊಟಕ್ಕೆ ಕೂತವನು ಕಾಯಬೇಕೇ?
ನುಂಗಿದ ಮುದ್ದೆಯ ತುತ್ತು ಕಚ್ಚಿಕೊಂಡಿದೆ ಕೊರಳ
ಧಾವಿಸಿ ಬಾ ಬಿಕ್ಕಳಿಕೆಯ ದೂರಾಗಿಸೋಕೆ

ಅಗೋ ಪಾಪ ವೃದ್ಧರೊಬ್ಬರ ಒಂಟಿ ಪಾಡು
ಹೊರಡದ ನಾಲಿಗೆಯ ದಾಹವನು ನೋಡು
ಮೆಟ್ಟಿ ಬಾ ಬಂಡೆಗಳ ತುಂಡು ತುಂಡಾಗಿಸಿ
ನೀನಾಗು ಕಾಲುವೆ, ಅಮೃತದ ಜಾಡು

ನೋಡಲ್ಲಿ ಹಸಿರು ಮುನಿದಿದೆ ಕೆಂಪಾಗುತ
ಬೇರುಗಳು ಕಾಲ್ಕಿತ್ತಿವೆ ಒಣಗಿ ಬಳಲುತ
ನಿನ್ನ ಘಮದ ನಿರೀಕ್ಷೆಯಲ್ಲಿದೆ ಮಣ್ಣ ಮೂಗು
ಹುಸಿಯಾದರೂ ಸರಿಯೇ ಬಾ ಬಸಿದು ಹೋಗು!!

ಮೊಗ್ಗಿನ ಮುಚ್ಚು ಪರದೆಯೊಳಗೆ ಸಿಕ್ಕಿ
ಜಾರದ ಕಂಬನಿಯೊಡನೆ ಒಳಗೆ ಬಿಕ್ಕಿ
ಮೌನದ ದನಿಯಲ್ಲಿ ಕೈಲಾದ ಪರಿಮಳ
ಸೂಸಿದೆ ನೋಡು ಬಡಪಾಯಿ ಹೂವು
ನೀ ಚಿಮ್ಮಿ ಜಿಗಿದು, ಸಿಂಪಡಿಸು ಹಾಗೆ
ಜೀವಕೆ ನೆರಳು ಕೊಟ್ಟು ಕೊನೆ ಗಳಿಗೆ
ಹೊತ್ತಾರ ಹೋಗು, ಉಳಿಸಾರ ಹೋಗು
ಸಂಪೂರ್ಣ ಉಡುಪಾಗು ಅಪೂರ್ಣತೆಗಳಿಗೆ

ಬರಡು ಹಾಳೆಯ ಮೇಲೆ ಗೀಚಿದ ಪದಗಳು
ಎಂದಾದರು ಉಳಿಯುವುದು ತಾನೇ ಹಾಗೆ
ನೀನೊಮ್ಮೆ ನೆರೆಯಾಗಿ ಎಲ್ಲವನು ಅಳಿಸು
ಆಗುವೆನು ಮತ್ತೊಂದು ಸೃಷ್ಟಿಗೆ ಯತ್ನ
ನೀನಿಟ್ಟ ಪರಿಚಯಕೆ ಎಲ್ಲವೂ ಅದ್ಭುತ
ನೀ ಸೋಕಿ ಹೋದ ದಾರಿಗಳೇ ಧನ್ಯ
ನಿನ್ನರಸಿ ನಾನಿಟ್ಟ ಜೋಡಿಕೆಯ ಪದಮಾಲೆ
ನಿನ್ನ ಮಹಿಮೆಗೆ ಮಣಿದು ತುಂಡಾದ ರತ್ನ......

- ರತ್ನಸುತ
ಲೇಖಕರ ಕಿರುಪರಿಚಯ
ಶ್ರೀ ಭರತ್ ವೆಂಕಟಸ್ವಾಮಿ

ಮೂಲತಃ ಬೆಂಗಳೂರಿನ ಮಂಚಪನಹಳ್ಳಿ ಎಂಬ ಗ್ರಾಮದವರಾದ ಇವರದು ರೈತ ಕುಟುಂಬ. ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು, ಸದ್ಯ ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇವರು ಕನ್ನಡ ನಾಡು-ನುಡಿಯ ಸೇವೆಯಲ್ಲಿ ಸಕ್ರಿಯವಾಗಿ ಭಾಗಿಯಾಗಲು ಉದ್ದೇಶಿಸಿರುವ ಹೆಮ್ಮೆಯ ಕನ್ನಡಿಗ. ಸಾಹಿತ್ಯ ಓದುವುದು ಮತ್ತು ಕವನಗಳನ್ನು ಬರೆಯುವುದು ಇವರ ನೆಚ್ಚಿನ ಹವ್ಯಾಸ.

Blog  |  Facebook  |  Twitter



ಕನ್ನಡ-ಕವನ

ನಿಮ್ಮೆಲ್ಲರ ಕವನ
ಮುಟ್ಟಿತು ನನ್ನ ಮನ..

ನೀವೆಲ್ಲ ಎಷ್ಟು ಚೆನ್ನಾಗಿ ಬರೆಯುತ್ತೀರ
ಇದಲ್ಲವೇ ದೇವರು ಕೊಟ್ಟ ವರ...

ನಿಮ್ಮಷ್ಟು ಚಂದ ಬರೆಯಲಾರೆ ನಾನು
ಆದರೂ ಪ್ರಯತ್ನ ಪಡುವುದರಲ್ಲಿ ತಪ್ಪೇನು

ಇನ್ನು ಏರಬೇಕಿದೆ ಸಾಕಷ್ಟು ಮೆಟ್ಟಿಲುಗಳು
ನನ್ನ ಜೊತೆ ಇರಲಿ ನಿಮ್ಮ ಸಲಹೆ-ಸಹಕಾರಗಳು

ನಿಮ್ಮ ಪ್ರೋತ್ಸಾಹಕ್ಕೆ ನಾನು ಚಿರಋಣಿ
ನನ್ನ ಬರವಣಿಗೆಗೆ ನೀವೆ ಧಣಿ..

- ಶಿಶಿರ್ ಅಂಗಡಿ
ಲೇಖಕರ ಕಿರುಪರಿಚಯ
ಶ್ರೀ ಶಿಶಿರ್ ಅಂಗಡಿ

ಕರಾವಳಿ ಪ್ರದೇಶದವರಾದ ಇವರು ಹುಟ್ಟಿ ಬೆಳೆದಿದ್ದು ಸಿರ್ಸಿಯಲ್ಲಿ. ಪ್ರಸ್ತುತ ಧಾರವಾಡದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಕನ್ನಡ ಕೃತಿ-ಕಾವ್ಯಗಳನ್ನು ಓದುವ ಹವ್ಯಾಸವಿರುವ ಇವರು ತಮ್ಮ ಜೀವನಕ್ಕೆ ಹತ್ತಿರವೆನಿಸುವುದರ ಬಗ್ಗೆ ತಮ್ಮ ಬ್ಲಾಗ್ ನಲ್ಲಿ ಬರೆಯುತ್ತಿರುತ್ತಾರೆ.

Blog  |  Facebook  |  Twitter

ಶನಿವಾರ, ನವೆಂಬರ್ 24, 2012

ಮಾತಿನಿಂ ಸರ್ವಸಂಪದವು

ಪ್ರಾಣಿ ಜಗತ್ತಿನಿಂದ ತಾನು ಪ್ರತ್ಯೇಕ ಎಂದು ತೋರಿಸುವ ಒಂದು ಪ್ರಮುಖ ಮನುಷ್ಯಲಕ್ಷಣವೆಂದರೆ "ಮಾತು". ತನ್ನ ಮುಪ್ಪೊದಗದ, ಹರಿತವಾದ ನಾಲಿಗೆಯಿಂದ ಮನುಷ್ಯ ಶತ್ರುಗಳನ್ನು, ಮಿತ್ರರನ್ನು ಸೃಷ್ಟಿಸಿಕೊಳ್ಳುತ್ತಾನೆ. ಮಾತಿನಿಂದಲೇ ಮನೆಯನ್ನೂ ಕಟ್ಟಬಹುದು, ಮಸಣವನ್ನೂ ನಿರ್ಮಿಸಬಹುದು. ಅಂತಹ ಸಶಕ್ತವಾದ ಮಾತನ್ನು ಹೇಗೆ ತನ್ನ ವಿವೇಕ ವಿವೇಚನೆಗಳಿಂದ ಮನುಷ್ಯ ಬಳಸಬೇಕೆಂದು ನಮ್ಮ ಕನ್ನಡ ಸಾಹಿತ್ಯದ ಹಿರಿಯ ವಚನಕಾರರು, ದಾಸರು, ಕವಿಗಳು ತಮ್ಮ ಕೃತಿಗಳಲ್ಲಿ ಉದಾಹರಿಸಿದ್ದಾರೆ.

ಅಲ್ಲಮ್ಮಪ್ರಭುಗಳು "ಮಾತೆಂಬುದು ಜ್ಯೋತಿರ್ಲಿಂಗ" ವೆಂದು ಮಾತನ್ನು ಆ ಭಗವಂತನಿಗೇ ಹೋಲಿಸಿದ್ದಾರೆ. ಮಾತನ್ನು ಬಹಳ ಭಯಭಕ್ತಿ ಗೌರವಾದರಗಳಿಂದ ಆಡಬೇಕೆಂದು ತಿಳಿಸಿದ್ದಾರೆ.

ಬಸವಣ್ಣನವರು ಮನುಷ್ಯನಿಗೆ ಬೇರೆಲ್ಲ ಜಪ-ತಪಗಳಿಗಿಂತಲೂ ಮೃದುವಚನವೇ ಶ್ರೇಷ್ಠವೆಂದು ಹೀಗೆ ಅರುಹಿದ್ದಾರೆ –
"ಮೃದು ವಚನವೇ ಸಕಲ ಜಪಂಗಳಯ್ಯ
ಮೃದು ವಚನವೇ ಸಕಲ ತಪಂಗಳಯ್ಯ"

'ಮಾತೇ ಮುತ್ತು, ಮಾತೇ ಮೃತ್ಯು' ಎಂಬಂತೆ ಸ್ವರ್ಗ–ನರಕಗಳನ್ನು ನಮ್ಮ ಮಾತಿನಿದಲೇ ಸೃಷ್ಟಿಸಬಹುದೆಂದು ಹೀಗೆ ಉದಾಹರಿಸಿದ್ದಾರೆ –
"ಅಯ್ಯ ಎಂದರೆ ಸ್ವರ್ಗ / ಎಲವೊ ಎಂದರೆ ನರಕ"
"ಸತ್ಯವ ನುಡಿಯುವುದೇ ದೇವಲೋಕ / ಮಿಥ್ಯವ ನುಡಿಯುವುದೇ ಮರ್ತ್ಯಲೋಕ"
"ಹುಸಿಯ ನುಡಿಯಲು ಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ"

"ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು"

ಮಾತು ಮುತ್ತಿನ ಹಾರದಂತೆ ಸರಳ, ಸುಂದರ, ಶುಭ್ರವಾಗಿದ್ದು, ಮಾಣಿಕ್ಯ ದೀಪ್ತಿಯಂತೆ ದಾರಿದೀಪವಾಗಿದ್ದು, ಸ್ಪಟಿಕದಂತೆ ಸುಸ್ಪಷ್ಟವಾದಾಗ ಮಾತ್ರ ಭಗವಂತನು ಮೆಚ್ಚಿ ತಲೆದೂಗುತ್ತಾನೆಂದು ಬಸವಣ್ಣನವರು ನುಡಿದಿದ್ದಾರೆ.

"ಏನು ಬಂದಿರಿ ಹದುಳಿದ್ದೀರಿ ಎಂದರೆ ನಿಮ್ಮೈಸಿರಿ ಹಾರಿಹೋಹುದೇ, ಕುಳ್ಳಿರೆಂದರೆ ನೆಲ ಕುಳಿಹೋಹುದೆ?" ಎಂಬ ಬಸವಣ್ಣನವರ ಈ ಪ್ರಶ್ನೆಗಳಲ್ಲಿ ಸಾಮಾನ್ಯ ದೈನಂದಿನ ವ್ಯವಹಾರದಲ್ಲಿಯೂ ಮಾತಿನ ನಯವಿರಬೇಕೆಂಬ ಸೂಚನೆಯಿದೆ.

'ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು' ಎಂಬುದನ್ನು ಪ್ರತಿಯೊಬ್ಬರೂ ಅರಿತು 'ಮಾತಿಗಿಂತಲೂ ಕೃತಿ ಲೇಸು' ಎಂಬಂತೆ ಈ ಕೆಳಕಂಡಂತೆ ಬಾಳಬೇಕು.
"ಆಡದೇ ಮಾಡುವವನು ರೂಢಿಯೊಳಗುತ್ತಮನು
ಆಡಿ ಮಾಡುವವನು ಮಧ್ಯಮನಧಮ ತಾ
ನಾಡಿ ಮಾಡದವನು ಸರ್ವಜ್ಞ!!"

"ನಕ್ಕು ನಗಿಸುವ ನುಡಿ ಲೇಸು" ಎಂದ ಸರ್ವಜ್ಞ
"ರಸಿಕನಾಡಿದ ಮಾತು ಶಶಿಯುದಿಸಿ ಬಂದಂತೆ
ರಸಿಕನಲ್ಲದವನ ಬರಿಮಾತು ಕಿವಿಯೊಳು ಕೂರ್ದಸಿ ಬಡಿದಂತೆ ಸರ್ವಜ್ಞ!!"
ಎಂದು ರಸಿಕನ ಮಾತಿಗೂ, ಅರಸಿಕನ ನುಡಿಗೂ ವ್ಯತ್ಯಾಸವನ್ನರುಹಿದ್ದಾನೆ ಸರ್ವಜ್ಞ.

"ಮಾತು ಬಲ್ಲಾತಂಗೆ ಯಾತವು ಸುರಿದಂತೆ
ಮಾತಾಡಲರಿಯದಾತಂಗೆ ಬರಿಯಾತ
ನೇತಾಡಿದಂತೆ ಸರ್ವಜ್ಞ!!"
ಎಂದು ಮಾತಿನಲ್ಲಿ ರಸಿಕತೆಯಿರಬೇಕು, ಕೇಳುವವರಿಗಾನಂದವನ್ನುಂಟು ಮಾಡಬೇಕು, ಇಲ್ಲವಾದರೆ ಮಾತು ಕರ್ಣಕಠೊರವೆನಿಸುತ್ತದೆ. 'ಬಾಯಿ ಬಿಟ್ಟರೆ ಬಣ್ಣಗೇಡು' ಎಂಬಂತಹ ಮಾತುಗಳು 'ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು' ಎಂಬಂತಾಗುತ್ತದೆ.

"ಮಾತಿನಾ ಮಾಲೆಯೂ ತೂತಾದ ಮಡಕೆಯೂ
ಹಾತೆಯ ಹುಲ್ಲ ಸರವೆ ಇವು ನಾಲ್ಕು
ಏತಕ್ಕೂ ಬೇಡ ಸರ್ವಜ್ಞ!!"
ಎಂದು ತನ್ನ ತ್ರಿಪದಿಯ ಮೂಲಕ ಮಾತಿನಲ್ಲಿ ಅಡಕವಿರಬೇಕು, ಹುರುಳಿರಬೇಕು, ಇಲ್ಲದಿದ್ದರೆ ಮಾತು ನಿಷ್ಪ್ರಯೋಜಕವೆಂದು ಸರ್ವಜ್ಞ ಅಭಿಮತ ವ್ಯಕ್ತಪಡಿಸಿದ್ದಾರೆ.

'ಹತ್ತು ಕಟ್ಟುವಲ್ಲಿ ಒಂದು ಮುತ್ತು ಕಟ್ಟು' ಎಂಬಂತೆ 'ಮಾತು ಬಲ್ಲವನಿಗೆ ಜಗಳವಿಲ್ಲ'. ಇದನ್ನು ಅರಿಯದವರ ಮಾತು ಹೇಗೆ ಸತ್ವ ಕಳೆದುಕೊಳ್ಳುತ್ತದೆ ಎಂದು ಕೆಳಗಿನ ತ್ರಿಪದಿಯಲ್ಲಿ ಸರ್ವಜ್ಞ ಹೀಗೆ ಹೇಳಿದ್ದಾರೆ:
"ಉದ್ದುರುಟು ಮಾತಾಡಿ ಇದ್ದುದನು ಹೋಗಾಡೆ
ಉದ್ದನ ಮರದ ತುದಿಗೇರಿ ಕೈಜಾರಿ
ಬಿದ್ದು ಸತ್ತಂತೆ ಸರ್ವಜ್ಞ!!"
ಮಾತಿನಲ್ಲಿ ವಿನಯ ವಿವೇಕಗಳಿದ್ದರೆ ಸೊಗಸು, ಇಲ್ಲದಿದ್ದರೆ ಅಪಾರ ನಷ್ಟ.

"ಕುಲವ ನಾಲಿಗೆಯರುಹಿತು" ಎಂದು ಕವಿ ರಾಘವಾಂಕ ಹರಿಶ್ಚಂದ್ರ ಕಾವ್ಯದಲ್ಲಿ ಹೇಳಿದ್ದಾನೆ. ಹರಿದಾಸರು "ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ" ಎಂದು ನಾಲಿಗೆಯನ್ನು ಜರೆದಿದ್ದಾರೆ. ಎಲುಬಿಲ್ಲದ ಒಂದು ನಾಲಿಗೆ, ಒಂದು ಅಪಶಬ್ದವನ್ನಾಡಿದರೂ ಮೂವತ್ತೆರಡು ಸದೃಢ ಹಲ್ಲುಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ತಾಯಿಯೂ ಕೂಡ ತನ್ನ ಮಗುವನ್ನು "ಮಾತಿನಲಿ ಚೂಡಾಮಣಿಯಾಗು" ಎಂದು ಹಾರೈಸುತ್ತಾಳೆಂoಬುದನ್ನು ಜನಪದ ತ್ರಿಪದಿಯಲ್ಲಿ ಕಾಣಬಹುದು.

"ಬಲ್ಲೆನೆಂಬುವ ಮಾತು ಎಲ್ಲವೂ ಹುಸಿ ಕಣೋ
ಬಲ್ಲರೆ ಬಲ್ಲೆನೆನಬೇಡ ಸುಮ್ಮನಿರ
ಬಲ್ಲವನೆ ಬಲ್ಲ ಸರ್ವಜ್ಞ"
ಎಂಬ ಸರ್ವಜ್ಞನ ಮಾತಿನಂತೆ 'ಮಾತು ಬೆಳ್ಳಿ ಮೌನ ಬಂಗಾರ' ಎಂಬುದನ್ನರಿಯಬೇಕು.

ಮೃದು, ಮಧುರ ಹಿತನುಡಿಗಳನ್ನು ಆಡಬೇಕೆಂದು ಕವಿ ಚೆನ್ನವೀರ ಕಣವಿಯವರು
"ನಾವು ಆಡುವ ಮಾತು ಹೀಗಿರಲಿ ಗೆಳೆಯ - - -
ಹಸಿರು ಹುಲ್ಲು ಮಕಮಲ್ಲಿನಲ್ಲಿ ಪಾರಿಜಾತವು ಹೂವು ಸರಿಸಿದಂತೆ"
ಎಂದು ಮಾತಿನ ರೀತಿ ನೀತಿಯನ್ನು ಸೂಕ್ಷ್ಮವಾಗಿ, ಮನೋಜ್ಞವಾಗಿ ತಿಳಿಸಿದ್ದಾರೆ.

"ಮಾತಿನಿಂ ನಗೆ ನುತಿಯು, ಮಾತಿನಿಂ ಹಗೆ ಕೊಲೆಯೂ
ಮಾತಿನಿಂ ಸರ್ವಸಂಪದವು, ಲೋಕಕೆ
ಮಾತೇ ಮಾಣಿಕ್ಯ ಸರ್ವಜ್ಞ!!"
ಎಂಬಂತೆ ಮಾತನ್ನು ಹಣದಂತೆ ಲೆಕ್ಕಾಚಾರವಾಗಿ ಖರ್ಚುಮಾಡಬೇಕು. ಅನವಶ್ಯ ಮಾತುಗಳು ದುಂದುವೆಚ್ಚದಂತೆ. ಏನೂ ಪ್ರಯೋಜನವಿಲ್ಲ. ಇನ್ನೊಮ್ಮೆ ಮಾತನಾಡುವ ಮುನ್ನ ಯೋಚಿಸಿ ಮಾತನಾಡುವುದನ್ನು ರೂಡಿಸಿಕೊಳ್ಳೋಣ. ಡಿ.ವಿ.ಜಿ. ಯವರ ಈ ಕೆಳಗಿನ ಕಗ್ಗದ ಸಾಲುಗಳನ್ನು ಎಂದೆಂದಿಗೂ ನೆನೆಯೋಣ –

"ಇಳೆಯಿಂದ ಮೊಳಕೆಯೊಗೆ ಎಂದು ತಮಟೆಗಳಿಲ್ಲ!
ಫಲಮಾಗುವಂದು ತುತ್ತೂರಿ ದನಿಯಿಲ್ಲ!!
ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ!
ಹೊಲಿ ನಿನ್ನ ತುಟಿಗಳನ್ನು ಮಂಕುತಿಮ್ಮ!!

(ಹದುಳ = ಕ್ಷೇಮ; ಕೂರ್ದಸಿ = ಹರಿತವಾದ ಕತ್ತಿ; ಯಾತ = ಏತ; ನುತಿ = ಸ್ತುತಿ, ಹೊಗಳಿಕೆ)

ಲೇಖಕರ ಕಿರುಪರಿಚಯ
ಶ್ರೀಮತಿ ರೇವತಿ ವಿ.

ಬೆಂಗಳೂರಿನ ಮೂಲದವರಾದ ಇವರು ಕನ್ನಡ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಪ್ರಸ್ತುತ ಆಚಾರ್ಯ ಪಾಠ ಶಾಲೆ ಕಾಲೇಜಿನ ಕನ್ನಡ ವಿಭಾಗದಲ್ಲಿ ಉಪನ್ಯಾಸಕಿಯಾಗಿದ್ದಾರೆ.

ಬಿಡುವಿನ ವೇಳೆಯಲ್ಲಿ ಇವರು ಸಾಹಿತ್ಯ ಕೃತಿಗಳನ್ನು ಓದುವ, ಪುಸ್ತಕಗಳನ್ನು ಓದುವ ಮತ್ತು ಸಂಗೀತ ಆಲಿಸುವ ಹವ್ಯಾಸಗಳನ್ನು ಹೊಂದಿದ್ದಾರೆ.

Blog  |  Facebook  |  Twitter

ಶುಕ್ರವಾರ, ನವೆಂಬರ್ 23, 2012

ನಾನು ಓದಿರುವ ಅತ್ಯುತ್ತಮ ಪುಸ್ತಕ - ಮನಸ್ಸು ಇಲ್ಲದ ಮಾರ್ಗ

(ಟಿ. ಎ. - 'ಟ್ರಾನ್ಸಾಕ್ಷನಲ್ ಅನಾಲಿಸಿಸ್' ಬಗ್ಗೆಯ ಪುಸ್ತಕ)

ಮನೋವಿಜ್ಞಾನ ಹಾಗೂ ವರ್ತನಾ ವಿಜ್ಞಾನದ ಬಗ್ಗೆ ಕನ್ನಡದಲ್ಲಿಯೂ ಅನೇಕ ಪುಸ್ತಕಗಳಿವೆ. ನಾನು ಓದಿರುವ, ಅವುಗಳಲ್ಲಿ ನನಗೆ ತುಂಬಾ ಉಪಯುಕ್ತವೆನಿಸಿದ ಪುಸ್ತಕ - ನವಕರ್ನಾಟಕ ಪಬ್ಲಿಕೇಷನ್ ರವರ ಡಾ. ಮೀನಗುಂಡಿ ಸುಬ್ರಮಣ್ಯರವರು ಬರೆದಿರುವ "ಮನಸ್ಸು ಇಲ್ಲದ ಮಾರ್ಗ".

ಮನೋವಿಜ್ಞಾನದ ಬಗ್ಗೆ ಅಲ್ಪಸ್ವಲ್ಪವಾದರೂ ತಿಳಿದಿರುವ ಎಲ್ಲರಿಗೂ ಗೊತ್ತಿರುವ ಒಂದು ಸಂಗತಿ – ಈ ಭೂಮಿಯ ಮೇಲಿರುವ ಪ್ರತಿಯೊಬ್ಬ ವ್ಯಕ್ತಿಯೂ ಆಗಾಗ ಒಂದಲ್ಲಾ ಒಂದು ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುತ್ತಾನೆ – ಎಂಬುದು. ನಾವೆಲ್ಲ ವಿವಿಧ ಸಂದರ್ಭಗಳಲ್ಲಿ ಅನುಭವಿಸುವ ಉದ್ವೇಗ, ಗಾಬರಿ, ಸಿಟ್ಟು, ಬೇಸರ, ದ್ವೇಷ, ಸೇಡಿನ ಭಾವ ಇತ್ಯಾದಿ ನಮಗೆ ಸಹಜವೆನಿಸುವ ನಮ್ಮ ಭಾವನೆ/ವರ್ತನೆಗಳೆಲ್ಲವೂ ತಾತ್ಕಾಲಿಕ ಮಾನಸಿಕ ಸಮಸ್ಯೆಗಳೇ. ನಮ್ಮ ಈ ಸಮಸ್ಯೆಗಳಿಗೆ ನಾವು ಬೇರೆಯವರನ್ನು ಹೊಣೆಗಾರರನ್ನಾಗಿಸಿ, ಅವರು ಸರಿಯಾಗಿ ನಡೆದುಕೊಂಡರೆ ನಾವು ಚೆನ್ನಾಗಿರುತ್ತೇವೆಂದು ಭಾವಿಸುತ್ತೇವೆ ಹಾಗೂ ವಾದಿಸುತ್ತೇವೆ.

ಒಂದು ಸರಳ ಉದಾಹರಣೆ: ನಾವೇಕೆ ಮನೆಯಿಂದ ಹೊರಹೋಗುವಾಗ ಚಪ್ಪಲಿ ಅಥವಾ ಶೂಗಳನ್ನು ಧರಿಸುತ್ತೇವೆ? ಸಾಮಾನ್ಯವಾಗಿ ಮನೆಯಲ್ಲೇಕೆ ಬಳಸುವುದಿಲ್ಲ? . . . . . ಹೊರಗೂ ಚಪ್ಪಲಿ ಹಾಕದೇ ಓಡಾಡಬೇಕೆಂಬ ಛಲದಿಂದ ನಾವು ಓಡಾಡಬಹುದಾದ ಎಲ್ಲಾ ರಸ್ತೆಗಳನ್ನೂ ಬರಿಗಾಲಲ್ಲಿ ಓಡಾಡುವಷ್ಟು/ಮನೆಯಷ್ಟು ಸ್ವಚ್ಛಗೊಳಿಸಲು ಯಾರೂ ಪ್ರಯತ್ನಿಸುವುದಿಲ್ಲ. ಅಸಾಧ್ಯವಾದ ಈ ಕೆಲಸದ ಬದಲಿಗೆ ಸರಳ ಮಾರ್ಗವಾದ ಚಪ್ಪಲಿ ಬಳಕೆ ಮಾಡುತ್ತೇವೆ. ಹೀಗೆ ಹೊರಗೆ ಕಾಲಿಡುವಾಗ ಚಪ್ಪಲಿ ಧರಿಸಿ ನಮ್ಮ ಕಾಲಿಗೆ ನೋವಾಗದಂತೆ ಹೇಗೆ ಎಚ್ಚರ ವಹಿಸಿತ್ತೇವೆಯೋ, ಹಾಗೆಯೇ ಹೊರ ಜಗತ್ತಿನೊಂದಿಗೆ ಸಂವಹನ ನಡೆಸುವಾಗ ಅದೇ ಬಗೆಯ ಸರಳ ರಕ್ಷಣಾವಿಧಾನಗಳನ್ನು ನಮ್ಮ ನಡೆ-ನುಡಿಗಳಲ್ಲಿ ಅಳವಡಿಸಿಕೊಂಡರೆ ನಮ್ಮ 'ಮನಸ್ಸಿಗೆ' ಉಂಟಾಗಬಹುದಾದ ನೋವುಗಳನ್ನು ತಡೆಯಬಹುದು ಅಥವಾ ಕಡಿಮೆ ಮಾಡಿಕೊಳ್ಳಬಹುದು ಎಂಬ ತತ್ವವೇ ಟ್ರಾನ್ಸಾಕ್ಷನಲ್ ಅನಾಲಿಸಿಸ್ ಮತ್ತು ಈ 'ಮನಸ್ಸು ಇಲ್ಲದ ಮಾರ್ಗ' ಪುಸ್ತಕದ ಸಾರ. ಆ ರಕ್ಷಣಾ ವಿಧಾನಗಳನ್ನು ಸರಳವಾಗಿ ಅಳವಡಿಸಿಕೊಳ್ಳುವ ಬಗ್ಗೆ ಇದರಲ್ಲಿ ಪ್ರಾಯೋಗಿಕವಾಗಿ ತಿಳಿಸಿಕೊಡಲಾಗಿದೆ.

ಇನ್ನೊಂದು ಉದಾಹರಣೆ: ಕೆಲವರು 'ನನಗೆ ನಿದ್ರೆ ಬರಲಿಲ್ಲ' ಎಂದು ಹೇಳುವುದನ್ನು ಕೇಳುತ್ತಿರುತ್ತೇವೆ. ಅವರಿಗೆ ಕೇಳಬಹುದಾದ ಪ್ರಶ್ನೆ 'ನಿದ್ರೆ ಎಲ್ಲಿಂದ ಬರಬೇಕು?' . . . . . ಇಲ್ಲಿ ನಿದ್ರೆ ಮಾಡಬೇಕಾದವರು ನಾವು ಹೇಗೋ ಹಾಗೆಯೇ, ನಮ್ಮೆಲ್ಲ ಭಾವನೆಗಳಿಗೆ/ವರ್ತನೆಗಳಿಗೆ ನಾವೇ ಹೊಣೆಗಾರರು ಎಂಬುದನ್ನು ಅರಿತುಕೊಳ್ಳಬೇಕು. ಅದನ್ನು ಅರಿತುಕೊಳ್ಳುವ ಮತ್ತು ನಮ್ಮ ನೆಮ್ಮದಿಯ ಜೀವನಕ್ಕೆ ಬೇಕಾದ ಆಲೋಚನಾ ಕ್ರಮಗಳನ್ನು ಹಾಗೂ ವರ್ತನೆಗಳನ್ನು ರೂಢಿಸಿಕೊಳ್ಳುವ ಕಲೆಯನ್ನು ಈ ಪುಸ್ತಕದಲ್ಲಿ ಸರಳವಾಗಿ ವಿವರಿಸಲಾಗಿದೆ.

ವಿಜ್ಞಾನದ ಪುಸ್ತಕ ಎಂದ ಕೂಡಲೇ ಅದು ತುಂಬಾ ವೈಜ್ಞಾನಿಕವಾಗಿ, ಅರ್ಥಮಾಡಿಕೊಳ್ಳಲು ಕಷ್ಟಕರವಾಗಿರಬಹುದೆಂಬ ಅನಿಸಿಕೆ ಬರುವುದು ಸಹಜ. ಆದರೆ ಸತ್ಯವೆಂದರೆ ಇದು ಅತ್ಯಂತ ಸರಳ ಭಾಷೆಯಲ್ಲಿದ್ದು, ಒಂದು ಕಾದಂಬರಿಯಂತೆ ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ. ಕೆಲವೆಡೆ ಬರುವ ತಾಂತ್ರಿಕ ಪ್ಯಾರಾಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟವೆನಿಸಿದಲ್ಲಿ ಎರಡನೆಯ ಬಾರಿ ಓದಿದರೆ ಖಂಡಿತ ಅರ್ಥವಾಗುತ್ತವೆ. ಈ ಪುಸ್ತಕ ಓದುವಾಗ ನೆನಪಿನಲ್ಲಿಡಬೇಕಾದ ಮುಖ್ಯವಾದ ಅಂಶವೆಂದರೆ, ಇದನ್ನು ಅಲ್ಲಲ್ಲಿ ಓದಲು ಪ್ರತ್ನಿಸಬಾರದು. ಮುನ್ನುಡಿಯಿಂದ ಪ್ರಾರಂಭಿಸಿ, ಮೊದಲ ಪುಟದಿಂದ ಓದುತ್ತಾ ಹೋಗಬೇಕು. ಇಲ್ಲವಾದರೆ ಗೋಜಲಾಗುವ ಅಥವಾ ತಪ್ಪಾಗಿ ಅರ್ಥ ಮಾಡಿಕೊಳ್ಳುವ ಸಾಧ್ಯತೆಯಿದೆ. ಲೇಖಕರೂ ಸಹ ಅದನ್ನೇ ಒತ್ತಿ ಹೇಳುತ್ತಾರೆ.

ನನ್ನ ಅಭಿಪ್ರಾಯದಲ್ಲಿ ಈ ಪುಸ್ತಕವನ್ನು ಪ್ರತಿಯೊಬ್ಬರೂ ತಮ್ಮ ವಿವಾಹಕ್ಕೆ ಮೊದಲು ಓದಬೇಕು. ಅಥವಾ ಕನಿಷ್ಠ ಮಗುವಾಗುವ ಮೊದಲಾದರೂ ಓದಬೇಕು. ಅಥವಾ ಕಡೇ ಪಕ್ಷ ಜೀವನದಲ್ಲಿ ಯಾವಾಗಲಾದರೂ ಒಮ್ಮೆ ಓದಲೇಬೇಕು. ಆದರೆ ಒಂದು ವಿನಂತಿ: ಪುಸ್ತಕವನ್ನು ಕೊಂಡು ಓದಿ. ಓದಿದ ನಂತರ ನಿಮಗೆ ಇಷ್ಟವಾಗಿ, ಅದನ್ನು ನಿಮ್ಮ ಆಪ್ತರೂ ಓದಬೇಕೆನಿಸಿದರೆ ದಯವಿಟ್ಟು ಕಾಣಿಕೆಯಾಗಿ ನೀಡಬೇಡಿ. ಬದಲಿಗೆ ಇಂಥದ್ದೊಂದು ಪುಸ್ತಕವಿದೆ, ಕೊಂಡು ಓದಿ ಎಂದು ಸಲಹೆ ನೀಡಿ (ನಾನೀಗ ನೀಡುತ್ತಿರುವಂತೆ....). ಹಣ ಕೊಟ್ಟು ಕೊಂಡುಕೊಂಡರೆ ಅದಕ್ಕೊಂದು ಬೆಲೆಯಿರುತ್ತದೆ. ಅಲ್ಲದೇ, ಈಗ ನಡೆಸುತ್ತಿರುವುದಕ್ಕಿಂತ ಇನ್ನೂ ಹೆಚ್ಚಿನ ನೆಮ್ಮದಿಯ ಜೀವನ ನಡೆಸಬೇಕೆನಿಸುವವರು ಅಥವಾ ಆ ಅದೃಷ್ಟವಿರುವವರು ಕೊಂಡು ಓದುತ್ತಾರೆ.....

(ಗಮನಿಸಿ: ವರ್ತನಾ ವಿಜ್ಞಾನದ ಬಗ್ಗೆ ಆಸಕ್ತಿಯಿದ್ದು ಇನ್ನೂ ಹೆಚ್ಚಿನ ಮಾಹಿತಿ/ಜ್ಞಾನ ಪಡೆಯಲಿಚ್ಛಿಸುವವರು ಟಿ. ಎ. ಕೌನ್ಸಿಲರ್ ಗಳನ್ನು/ಸೈಕೋಥಿರಪಿಸ್ಟ್ ಗಳನ್ನು ಭೇಟಿ ಮಾಡಬಹುದು ಅಥವಾ ಟಿ. ಎ. ವರ್ಕ್-ಶಾಪ್ ಗಳಲ್ಲಿ ಭಾಗವಹಿಸಬಹುದು. ಆಳವಾದ ಜ್ಞಾನಕ್ಕೆ ಟಿ. ಎ. ಕೋರ್ಸ್ ಗಳೂ ಇವೆ)

ಲೇಖಕರ ಕಿರುಪರಿಚಯ
ಡಾ. ಎ. ಎಂ. ಶಿವಕುಮಾರ್

ಪ್ರಸ್ತುತ ಕರ್ನಾಟಕ ಸರ್ಕಾರದ ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಬೆಂಗಳೂರು ಇಲ್ಲಿ ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನವರು.

ಕನ್ನಡ ಕಾದಂಬರಿಗಳನ್ನು ಓದುವ, ಹಳೆಯ ಕನ್ನಡ ಹಾಡು ಮತ್ತು ಚಲನಚಿತ್ರಗಳ ಸಿ.ಡಿ. ಸಂಗ್ರಹಿಸುವ, ಸಂಗೀತ ಕೇಳುವ ಹವ್ಯಾಸ ಹೊಂದಿರುವ ಇವರ ಕನ್ನಡ ಭಾಷಾಜ್ಞಾನ ಶ್ರೀಮಂತವಾದುದು.

Blog  |  Facebook  |  Twitter

ಗುರುವಾರ, ನವೆಂಬರ್ 22, 2012

ರಯ್ಯ… ರಯ್ಯ… ಒಂದು ವಿಚಿತ್ರ ಶನಿವಾರ

"ಮಗಾ.. ನೀವು ಈ ವೀಕೆಂಡ್ ಎಲ್ಲಾದ್ರೂ ಹೋಗೋದಾದ್ರೆ ನನ್ನನ್ನೂ ಕರಿಯೋ" ಅಂದ ನಮ್ ರಾಜೇಶ ಅಲಿಯಾಸ್ ರಾಜಣ್ಣ.... ನಮ್ದು ಕಥೆ ಗೊತ್ತಿರೋದೇ.. ಯಾವಾಗಲು ಲಾಸ್ಟ ಬಾಲ್ ನಲ್ಲೇ ಮ್ಯಾಚ್ ಡಿಸೈಡ್ ಆಗೋ ಟೈಪ್.. ಶುಕ್ರವಾರ ಸ್ವಲ್ಪ ಕೆಲಸ ಜಾಸ್ತಿ ಇತ್ತು.. ಮುಗ್ಸಿ ವಾಪಸ್ ಮನೆಗೆ ಬರೋದ್ರಲ್ಲಿ  9 ಆಯಿತು.. ಊಟ ಮಾಡಿ ಹಾಗೇ ಸುಮ್ನೆ ಗೂಬೆ ತರ ಕೂತಿದ್ದೆ..

ನಾಳೆ ಶನಿವಾರ... ಕೊನೆ ಏಳು ದಿನ ಅಷ್ಟೇ ಇರೋದು ಅಮೇರಿಕಾದಲ್ಲಿ.. ಏನಾದರೂ ವಿಚಿತ್ರ ಮಾಡ್ಬೇಕು.. ಏನು ಮಾಡೋದು?? ಸಮಯ ರಾತ್ರಿ 11 ಗಂಟೆ... 10 ದಿನಗಳಿಂದ ದಿನಾ ದಿನಾ ಬೆಳೀತಿದ್ದ ಆಸೆ... ಏನಿಕ್ಕೆ ಪೂರೈಸ್ಕೋಬಾರ್ದು? ಇದೇ ಕೊನೆ ಅವಕಾಶ.. ಸರಿ ಹಾಗಾದ್ರೆ ರೈಯ್ಯ ರೈಯ್ಯ ಕೆನಡಾ ಬಾರ್ಡರ್ ಗೆ!!! ಕೆನಡಾ ಬಾರ್ಡರ್ ಹೇಗಿರುತ್ತೆ ಅಂತ ಯವಾಗ್ಲಿಂದನೂ ಉತ್ಸಾಹ ನಂಗೆ..

10:30 ರಾತ್ರಿ ಫೋನ್ ಹಾಕ್ದೆ... ನಮ್ ರಾಜೇಶನಿಗೆ... "ಮಗಾ ನಡಿ ನಾಳೆ ಬೆಳಿಗ್ಗೆ 7 ಗಂಟೆಗೆ ಬಿಡೋಣ"... "ಸರಿ" ಅಂದ. ನಮ್ ರಾಜಣ್ಣ  ಒಬ್ಬ ರೆಡಿ ಆದ.. ಸರಿ ಇನ್ನೊಬ್ಬ.. ಹಚ್ಚಿದೆ ಫೋನ್ ನಮ್ ಪಾಟೀಲ್ ಅಲಿಯಾಸ್ ಪಿಟೀಲ್ ಗೆ..

"ಲೋ ಪಾಟೀಲ್.. ಬೆಳಿಗ್ಗೆ 7 ಗಂಟೆಗೆ ರೆಡಿ ಇರು.. ಹೋಗೋಣ.. 200 ಮೈಲಿ ದೂರ.. ರೂಂ ಇಂದ.. 4 ಗಂಟೆ ಪ್ರಯಾಣ... ತಿಂಡಿ ಊಟ ಎಲ್ಲ ದಾರಿಲೇ" ಅಂದೆ..

"ಸರಿ ಮಗಾ, ರೆಡಿ ಇರ್ತೀನಿ" ಅಂದ..

ಸರಿ ನಾಳೆ ಪ್ಲಾನ್ ರೆಡಿ ಆಯ್ತು... ಅಲಾರ್ಮ್ ಇಟ್ಟು ನಮ್ ರೇಡಿಯೋ ಗಿರ್ಮಿಟ್ ಕೇಳ್ತಾ ಹಾಗೇ ನಿದ್ದೆಗೆ ಇಳಿದೆ.. ಬೆಳಿಗ್ಗೆ 6:30.. ಲೋ ಎದ್ದೇಳೋ ಎದ್ದೇಳೋ ಅಂತ ನಮ್ ಅಲಾರ್ಮ್ ಶಬ್ದ ಮಾಡಿ ಎಬ್ಬಿಸ್ತಿತ್ತು.. ಎದ್ದು ಸುಮ್ನೆ ಹಾಗೇ ನ್ಯೂಸ್ ನೋಡ್ತಾ ಇದ್ದೆ.. 6:50 ಗೆ ರಾಜಣ್ಣ ಫೋನ್ ಹಾಕ್ತಾನೆ.. "ಗುರೂ ರೆಡೀನಾ??". "ಇಲ್ಲ ಮಗ, ಇನ್ನ ಜಸ್ಟ್ ಇವಾಗ್ ತಾನೇ ಎದ್ದೆ. ಒಂದ್ 15 ನಿಮ್ಷ ಕೊಡು.. ರೆಡಿ ಇರ್ತೀನಿ" ಅಂದೆ.. ಅಯ್ಯಯ್ಯೋ ಎಲ್ಲಾರು ರೆಡಿ ಆದ್ರಲ್ಲಪ್ಪ ಅಂದ್ಕೊಂಡು ನಾನು ಟುಯ್ಯಿ ಅಂತ ಹೋದೆ ರೆಡಿ ಆಗಕ್ಕೆ... ಫುಲ್ ರೆಡಿ 15 ನಿಮಿಷದಲ್ಲಿ ನಾನು...

IST ಅಲ್ವಾ "ಇಂಡಿಯನ್ ಸ್ಟ್ರೆಚೆಬಲ್ ಟೈಮ್" ಅದಕ್ಕೇ ಎಲ್ಲಾ ಲೇಟು... ಸರಿ ... 7:30 ಗೆ ಎಲ್ಲಾ ರೆಡಿ... ಮೂರೂ ಜನ ಕೂತ್ವಿ ಕಾರ್ ನಲ್ಲಿ ... ಅಡ್ರೆಸ್ ಮ್ಯಾಪ್ಸ್ ಎಲ್ಲಾ ರೆಡಿ... ಫುಲ್ ಟ್ಯಾಂಕ್ ಮಾಡ್ಸಿ ಗಾಡಿಗೆ ಚಲೋ ಕೆನಡಾ ಬಾರ್ಡರ್!!!

ಪ್ಲಾನ್ ಮಾಡಿದ್ದು ಎಂದೂ ಹಾಗೇ ನಡಿಯಲ್ಲ... ಇದು ಗೊತ್ತಿರೋದೇ ... ಹಾಗೇ ಆಯ್ತು. ಹೋಗೋ ದಾರಿನಲ್ಲಿ ಕಾನ್ನೋನ್ (Cannon) ಅಂತ ಒಂದು ಬೆಟ್ಟ ಇದೆ.. ಹಿಮ ತುಂಬಿರುತ್ತೆ ಅಂತ ಅನ್ನಿಸ್ತು. ಸರಿ ಒಂದು ರೌಂಡ್ ದರ್ಶನ ಮಾಡ್ಕೊಂಡು ಹೋಗೋಣ ಅಂದೆ... ಎಲ್ರೂ ಸೈ ಅಂದ್ರು...

ಹೋಗೋ ದಾರಿನಲ್ಲಿ ತಿಂಡಿ ಮಾಡಿದ್ವಿ... ತಿಂಡಿ ಅಂದ್ರೆ ಕಿತ್ತೋಗಿರೋ ಬ್ರೆಡ್ ಪೀಸ್ ಮಧ್ಯೆ ಒಂದು ಆಮ್ಲೆಟ್.. 100 ಮೈಲಿ ಪ್ರಯಾಣ ಮಾಡಿದ್ ಮೇಲೆ ಬಂತು ನಮ್ ಕಾನ್ನೋನ್ ಬೆಟ್ಟ... ಮಸ್ತ್ ಖುಷಿ ಎಲ್ಲರಿಗೂ .. ಯಾಕೆ ಹೇಳಿ??

ಅಲ್ಲಿ ಇದ್ದ ದೊಡ್ಡ ಪಾರ್ಕಿಂಗ್ ಸ್ಥಳ ಪೂರ್ತಿ ಹಿಮ. 4 ಇಂಚು ಹಿಮ ತುಂಬಿ ತುಳುಕ್ತಾ ಇತ್ತು... ಕಾರ್ ಸೈಡ್ ಗೆ ಹಾಕಿ... ಮೂವರೂ ಚಿಕ್ಕ ಮಕ್ಕಳು ಆಗ್ಬಿಟ್ವಿ... ಎದ್ದು ಬಿದ್ದು ಆಟಾಡಿದ್ವಿ... ಇದೇ ಸ್ನೋ ನಮ್ಗೊಸ್ಕರಾನೇ ಸ್ಪೆಷಲ್ ಆಗಿ ಬಂದಿರೋ ಹಾಗೆ... ಆ ಕೊನೆ ಇಂದ ಈ ಕೊನೆಗೆ ಫುಲ್ ಓಡ್ತಾ ಇದ್ವಿ. ಎಂದೂ ನೋಡಿರದ ಹಿಮದ ಫೋಟೋ ತಗೊಂಡು ಅಲ್ಲೇ ಇದ್ವಿ ಸುಮಾರು 1 ಗಂಟೆ... ಕುಷಿಯೋ ಕುಷಿ ಎಲ್ಲರಿಗೂ... ಆಟ ಎಲ್ಲಾ ಆದ್ಮೇಲೆ.. ಸರಿ ಪ್ರಯಾಣ ಮುಂದುವರಿಸೋಣ ಅಂತ ಕೂತ್ವಿ ಕಾರ್ ನಲ್ಲಿ. ಮ್ಯಾಪ್ಸ್ ಓಪನ್ ಮಾಡಿ ದಾರಿ ನೋಡ್ಕೊಂಡು... ರಯ್ಯ ರಯ್ಯ ...

ಇನ್ನ 100 ಮೈಲಿ ಇದೆ... ಹಾಗೇ ಜಾಲಿಯಾಗಿ ಮಾತಾಡ್ಕೊಂಡು ಹೋಗ್ತಾ ಇದ್ವಿ... ದಾರಿನಲ್ಲಿ ಒಂದೆರಡು ಕಡೆ ಅಲ್ಲಿ ಇಲ್ಲಿ ನಿಲ್ಸಿ ಫೋಟೋ ತಗೊಂಡು ಹೋಗ್ತಾ ಇದ್ವಿ. ಎಲ್ಲಾ ಕಡೆ ಕೆನಡಾಗೆ ದಾರಿ ಅಂತ ದೊಡ್ಡ ದೊಡ್ಡ ಬೋರ್ಡ್ ಗಳು... ಅದನ್ನೆಲ್ಲಾ ನೋಡಿ ಖುಷಿಯೋ ಖುಷಿ... ಸರಿ, ಗಾಡಿ ಎಲ್ಲೋ ಒಂದು ಕಡೆ ಪಾರ್ಕ್ ಮಾಡಿ ಫೋಟೋ ತಗೋಳಣ ಅಂದ್ಕೊಂಡ್ವಿ.. ಮುಂದೆ ಹೋಗಿ ಯಾವ್ದೋ ಜಂಕ್ಷನ್ ನಲ್ಲಿ ಕಾರ್ ನಿಲ್ಲಿಸಿದ್ವಿ... ನಮ್ ಗ್ರಹಚಾರಕ್ಕೆ ಬಾರ್ಡರ್ ನಲ್ಲಿರೋ ಕಸ್ಟಮ್ಸ್ ಆಫೀಸ್ ಮುಂದೆ ನಿಲ್ಲಿಸ್ದೆ ಗಾಡಿನ.. ಸರಿ ಸುಮ್ನೆ ಹಾಗೇ ಹೋಗಿ ಒಂದು ಬಾರಿ ನೋಡ್ಕೊಂಡು ಬರೋಣ ಅಂತ ಕಾರ್ ಇಳಿದ್ವಿ... ರೋಡ್ ನಲ್ಲಿ ನಿಂತು ಯಾವ್ ಕಡೆ ಹೋಗೋದು ಅಂತ ಯೋಚ್ನೆ ಮಾಡ್ತಾ ಇದ್ವಿ... ಈ ಗ್ಯಾಪ್ ನಲ್ಲಿ ಕಸ್ಟಮ್ಸ್ ನಲ್ಲಿರೋ ಪೊಲೀಸ್ ಆಫೀಸರ್ ತಗ್ಲಾಕೊಂಡ (ಕ್ಷಮಿಸಿ ಸಾಯಿ ಕುಮಾರ್ ಅಲ್ಲ). ಪೊಲೀಸ್ ನ ನೋಡಿ ನಂಗೆ ಸ್ವಲ್ಪ ಟೆನ್ಶನ್ ಶುರು... ಎನಿಕ್ಕೋ ಗೊತ್ತಿಲ್ಲ ಅದ್ರೂ... (ಪೊಲೀಸ್ ಆಫೀಸರ್ ನ ಡೈಲಾಗ್ ನ ಕನ್ನಡದಲ್ಲಿ ಹೇಳ್ತೀನಿ... ಓಕೆ ನಾ ನಿಮ್ಮೆಲರಿಗೂ??)

ಪೊಲೀಸ್ ನಮ್ಮನ್ನೆಲ್ಲಾ ನೋಡಿ: "ಏನ್ರಪ್ಪಾ.. ಏನ್ ಸಮಾಚಾರ? ಏನಾದ್ರೂ ಸಮಸ್ಯೆ ಇದೆಯಾ?"
"ಏನೂ ಇಲ್ಲ ಸರ್ರಾ... ಸುಮ್ನೆ ಹಾಗೇ ಕಾಪಿ ಕುಡಿಯೋಣ ಅಂತ ನೋಡ್ತಾ ಇದ್ವಿ..."
"ಒಹ್ ಹೌದಾ.. ಸರಿ ಈ ಕಡೆ ಸ್ವಲ್ಪ ಬನ್ನಿ" ಅಂತ ಸೈಡ್ ಗೆ ಕರೆದ
ಪೊಲೀಸ್: "ನೀವು ಎಲ್ಲಿಂದ ಬರ್ತಾ ಇದ್ದೀರಾ?"
"ಸರ್ರಾ ಪಕ್ಕದ ಸ್ಟೇಟ್ ಇಂದ ಬಂದಿದ್ವಿ..."
ಪೊಲೀಸ್: "ಯಾಕೆ ಬಂದಿದ್ದೀರಾ??"
"ಸರ್ರಾ ಹಾಗೇ ಸುಮ್ನೆ ವೀಕೆಂಡ್ ಗೆ ಲಾಂಗ್ ಡ್ರೈವ್ ಗೆ ಬಂದಿದ್ವಿ.."
ಪೊಲೀಸ್: "ಯು. ಎಸ್. ಸಿಟಿಜನ್ಸ್?"
"ಇಲ್ಲಾ ಗುರೂ, ನಾವೆಲ್ಲಾ ಭಾರತೀಯರು."
ಪೊಲೀಸ್: "ನಿಮ್ ಹತ್ರ ನಿಮ್ ಪಾಸ್ಪೋರ್ಟ್ ಇದ್ಯಾ?"
ನಮ್ ಹುಡುಗ್ರು: "ಹ್ಞೂಂ ಸರ್ ಇಲ್ಲೇ ಕಾರ್ ನಲ್ಲಿ ಇದೆ.. ತಗೊಂಡು ಬರೋದ?"
ಪೊಲೀಸ್: "ನೀವೆಲ್ಲಾ ಏನ್ ಮಾಡ್ಕೊಂಡು ಇದ್ದೀರಾ?"
"ನಾವು ಪಕ್ಕದ ಸ್ಟೇಟ್ ನಲ್ಲಿ ಒಂದು ಕಂಪನಿನಲ್ಲಿ ಕೆಲಸ ಮಾಡ್ತಾ ಇದ್ದೀವಿ." ನನಗೆ ಸ್ವಲ್ಪ ಟೆನ್ಶನ್ ಬೆಳಿಯೋಕೆ ಶುರು... ಮುಂಚೆ ಹೇಳಿದ್ದೆ ಅಲ್ವಾ ಏನಿಕ್ಕೋ ಗೊತ್ತಿಲ್ಲ..
ಪೊಲೀಸ್: "ನೀವು ಯಾವ್ ವೀಸಾ ನಲ್ಲಿ ಇದ್ದೀರಾ?"
"L1 ಗುರೂ..."
ಪೊಲೀಸ್: "ಸರಿ ಒಂದ್ ಕೆಲಸ ಮಾಡಿ ನಿಮ್ ಹತ್ರ ಇರೋ ಪಾಸ್ಪೋರ್ಟ್ ನ ತಗೊಂಡು ಬನ್ನಿ." ನನ್ ಹತ್ರ ಡ್ರೈವಿಂಗ್ ಲೈಸೆನ್ಸ್ ಇತ್ತು... ಈ ಗ್ಯಾಪ್ ನಲ್ಲಿ ಅದನ್ನೇ ತೋರಿಸ್ದೆ ಅವನಿಗೆ.
ಪೊಲೀಸ್: "ಗುರೂ ನೀನು ಯು. ಎಸ್.  ಸಿಟಿಜನ್ ಅಲ್ಲ ಅಂದೆ ತಾನೇ.. ಮತ್ತೆ ಲೈಸೆನ್ಸ್ ಎಲ್ಲಿಂದ  ಸಿಕ್ತು ನಿಂಗೆ?"
"ಹ್ಞೂ ಸರ್, ನಾನು ಯು. ಎಸ್. ಸಿಟಿಜನ್ ಅಲ್ಲ .. ಬಟ್ ಗಾಡಿ ಓಡಿಸ್ಬೇಕಾದ್ರೆ ಲೈಸೆನ್ಸ್ ಮಾಡ್ಸ್ಬೇಕು ಅಲ್ವಾ.. ಅದಿಕ್ಕೆ ಮಾಡ್ಸ್ಕೊಂಡೆ..." ಅಂದೆ
ಪೊಲೀಸ್: "ಸರಿ ಇಲ್ಲೇ ಇರಿ ಸ್ವಲ್ಪ ಹೊತ್ತು ಒಳಗಡೆ ಹೋಗಿ ಬರ್ತೀನಿ" ಅಂದ. ಈ ಗ್ಯಾಪ್ ನಲ್ಲಿ ನಮ್ ಹುಡುಗ್ರಿಗೆ ನಾನು ಹಿತ ಬೋಧ ಕೊಡ್ತಾ ಇದ್ದೆ.. ನೋಡ್ರೋ ನಾವೇನು ತಪ್ಪು ಮಾಡಿಲ್ಲ ಸೊ ಟೆನ್ಶನ್ ತೊಕೊಬೇಡಿ ಅಂದೆ. ಟೆನ್ಶನ್ ನೆಕ್ಸ್ಟ್ ಲೆವೆಲ್ ಗೆ ಹೋಯ್ತು.... ಎನಿಕ್ಕೆ ಹೇಳಿ...?  ನಮ್ ಹುಡುಗ್ರು ಪಿಟೀಲ್ ಮತ್ತೆ ರಾಜಣ್ಣ ಪಾಸ್ಪೋರ್ಟ್ ಗಳೇ ತಂದಿರ್ಲಿಲ್ಲ.... ಅಯ್ಯೋ ಶಿವನೇ... ಗ್ಯಾರಂಟೀ ಏನೋ ಕಾದಿದೆ ನಮಗೆ ಅಂದ್ಕೊಂಡೆ. 5 ನಿಮಿಷ ಆಯ್ತು ಪೊಲೀಸ್ ಅಣ್ಣ ಇನ್ನ ಆಚೆ ಬರ್ಲಿಲ್ಲ... ತಲೆ ಕೆಡ್ಸ್ಕೊಳ್ಳೋಕೆ  ಶುರು ಮಾಡ್ಕೊಂಡೆ ನಾನು... ಸೈಡ್ ನಲ್ಲಿ ನಮ್ ದೇವ್ರುನ ನೆನ್ಸಕೊಳ್ತಾ ಇದ್ದೆ... ಸ್ವಲ್ಪ ಹೊತ್ತು ಆದ್ಮೇಲೆ ಬಂದ ಪೊಲೀಸ್ ಅಣ್ಣ...

"ಲೋ ಮಕ್ಳಾ.. ಇಲ್ಲೆಲ್ಲಾ ಓಡಾಡ್ಬಾರ್ದು ಅಂತ ಗೊತ್ತಿಲ್ವಾ ನಿಮ್ಗೆಲ್ಲಾ... ಬಾರ್ಡರ್ ಪೊಲೀಸ್ ಓಡಾಡ್ತಾ ಇರ್ತಾರೆ.. ಹಿಡ್ಕೊಂಡ್ರೆ ಸಮಸ್ಯೆ ಆಗುತ್ತೆ" ಅಂತ ಜ್ಞಾನ ಕೊಡ್ತಾ ಇದ್ದ... ಲೋ ಮೊದ್ಲು ನನ್ ಡ್ರೈವಿಂಗ್ ಲೈಸೆನ್ಸ್ ಕೊಡಯ್ಯ ಅಂತ ನನ್ ಮನ್ಸಲ್ಲಿ ಅನ್ಕೊಳ್ತಿದ್ದೆ...

ಹಿತ ಬೋಧ ಆದ್ಮೇಲೆ ಅಮೇರಿಕಾದ ಸಾಯಿ ಕುಮಾರ ನಮ್ ಡ್ರೈವಿಂಗ್ ಲೈಸೆನ್ಸ್ ಕೊಟ್ಟ... ನನಗೆ ಇನ್ನಾ ನನ್ಮೆಲೆ ಡೌಟ್ ಜಾಸ್ತಿ... ಇನ್ನೊಮ್ಮೆ ಕೇಳ್ದೆ... ಗುರೂ ಏನೂ ಪ್ರಾಬ್ಲಮ್ ಇಲ್ಲಾ ತಾನೇ... ನಮ್ಕಡೆಯಿಂದ ಸಮಸ್ಯೆ ಏನೂ ಆಗಿಲ್ಲ ತಾನೇ ಅಂತ ಕೇಳ್ದೆ.. ಏನೂ ಇಲ್ಲ.. ಮುಂದೆ ಹೀಗೆಲ್ಲ ಮಾಡ್ಬೇಡಿ ಅಂದ... ನಿಮ್ಗೆ ಕಾಪಿ ತಾನೇ ಬೇಕಿರೋದು... ಅಲ್ಲೇ ಪಕ್ಕದಲ್ಲೇ ಇದೆ ಹೋಗಿ ಅಂದ.. ಸರಿ. ಲೈಸೆನ್ಸ್ ತಗೊಂಡು ಅಲ್ಲೇ ಪಕ್ಕದಲ್ಲಿದ್ದ ಕಾಪಿ ಶಾಪ್ ಗೆ ಹೋಗಿ ಪ್ರಕೃತಿನ ಸ್ವಲ್ಪ ಮಾತಾಡ್ಸಿ.. ಚಾಕಲೇಟ್ ತಿಂದು.. ಕಾರ್ ಎತ್ಕೊಂಡು... ಮತ್ತೆ ಇನ್ನ ಸ್ವಲ್ಪ ಫೋಟೋಸ್ ತಗೊಂಡು.. ಅಲ್ಲಿಂದ ವಾಪಸ್ ರಯ್ಯ ರಯ್ಯ...

ಕಾರ್ ನಲ್ಲಿ ಪಕ್ಕದ್ ಹಳ್ಳಿನಲ್ಲಿ ಇಳಿಯೋವರೆಗೂ ನಮ್ ಟೆನ್ಶನ್ ಕಡಿಮೆ ಆಗಿರ್ಲಿಲ್ಲ... ಈ ಪೂರ್ತಿ ಸೀನ್ ನ ವಾಪಸ್ ಮನೆಗೆ ಬರ್ಬೇಕಾದ್ರೆ ಎಷ್ಟು ಸತಿ ನೆನ್ಸ್ಕೊಂಡ್ವೋ ದೇವರಿಗೇ ಗೊತ್ತು. ಇತಿ ನಮ್ಮ ಬಾರ್ಡರ್ ನ ಕತೆ ಮುಗಿಯಿತು...

ನಿಮಗೆಲ್ಲಾ ಒಂದು ಪ್ರಶ್ನೆ... ಆ ಪೊಲೀಸ್ ಮಾಮ.. ರಾಜಣ್ಣ ಮತ್ತು ಪಿಟೀಲ್ ನ ಪಾಸ್ಪೋರ್ಟ್ ಕೇಳಿಲ್ಲ ಯಾಕೆ?? ನಿಮ್ಗೆನಾದ್ರು ಗೊತ್ತಾ?

ಲೇಖಕರ ಕಿರುಪರಿಚಯ
ಶ್ರೀ ಸುರೇಶ್ ಕುಮಾರ್ ದೇಸು

ಇವರು ಪ್ರಸ್ತುತ ಇಂಜಿನಿಯರ್ ಆಗಿ ಖಾಸಗಿ ಸಂಸ್ಥೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿನೂತನ ತಂತ್ರಜ್ಞಾನಗಳ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರುವ ಇವರು ಸದಾ ಕ್ರಿಯಾಶೀಲರಾಗಿರುತ್ತಾರೆ.

ತಮ್ಮ ಬಿಡುವಿನ ವೇಳೆಯಲ್ಲಿ ಸಂಗೀತ ಕೇಳುವುದು, ಸ್ನೇಹಿತರೊಂದಿಗೆ ಚಾರಣ ಮಾಡುವುದು, ಹಾಗೂ ರುಚಿ ರುಚಿಯಾಗಿ ಅಡುಗೆ ಮಾಡುವುದು ಇವರ ನೆಚ್ಚಿನ ಹವ್ಯಾಸಗಳು. ಕರ್ನಾಟಕ ಹಾಗೂ ಕನ್ನಡದ ಬಗ್ಗೆ ವಿಶೇಷ ಪ್ರೀತಿ-ಆಸಕ್ತಿ ಹೊಂದಿದ್ದಾರೆ.

Blog  |  Facebook  |  Twitter

ಬುಧವಾರ, ನವೆಂಬರ್ 21, 2012

ತವರಿನ ಬಳುವಳಿ

ಅಂದು ಆಸ್ಪತ್ರೆ ಕೆಲಸ ಮುಗಿಸಿಕೊಂಡು ಮನೆಗೆ ಬರುವಾಗ ಅಕಾಲಿಕ ದಿಢೀರ್ ಮಳೆಯಿಂದಾಗಿ ಮೈ ಸಂಪೂರ್ಣ ಒದ್ದೆಯಾಗಿತ್ತು. ಮನೆ ಸೇರಿದಾಗ ಸಾಯಂಕಾಲ ಏಳರ ಸಮಯ. ಪ್ರೆಶ್ ಆಗಿ ಮಂಚಕ್ಕೊರಗಿ ಕಾಫೀ ಹೀರುತ್ತಾ ಕೂತಿದ್ದೆ. ಮಡದಿ ಅಪರೂಪಕ್ಕೆ ಪ್ರೀತಿಯಿಂದ ನನ್ನ ಯೋಗಕ್ಷೇಮ ವಿಚಾರಿಸಿ 'ಪೇಟೆಗೆ ಹೋಗಾಣಾರೀ..' ಎಂದಳು. ನನ್ನ ಜೇಬಿಗೆ ಕತ್ತರಿ ಕಾದಿದೆ ಅಂದುಕೊಂಡೆ. ನಿರೀಕ್ಷೆ ಸುಳ್ಳಾಗಲಿಲ್ಲ. 'ಹರ್ಷಾದಲ್ಲಿ ದೀಪಾಪಳಿ ಹಬ್ಬಕ್ಕೆ ಆಫರ್ಗಳಿರುತ್ತವೆ, ಕುಕ್ಕರ್ ಬೇರೆ ಕೆಟ್ಟು ಹೋಗಿದೆ. ಈ ಹಳೇದನ್ನ ಕೊಟ್ಟು ಪಕ್ಕದ ಮನೆಯವರ ತರಹ ಹೊಸ ಮಾಡೆಲ್ ಕುಕ್ಕರ್ ತರೋಣ, ಮತ್ತೆ ಜೂವೆಲ್ಲರಿ ಶಾಪ್ಗೂ ಹೋಗೋದಿದೆ' ಅಂದಳು, ಆಗಲಿ ಎಂದು ತಲೆಯಾಡಿಸಿದೆ. "ಹಾಗಾದ್ರೆ ನಾನ್ ರೆಡಿ ಆಗ್ಲಾ?" ಕೇಳಿದಳು. "ಹ್ಞೂ.." ಎಂದು ಜೇಬಿಗೆ ಕೈಹಾಕಿ ಬಜೆಟ್ ಹೊಂದಿಸಿಕೊಳ್ಳುತ್ತಿದ್ದೆ, ಫೋನ್ ರಿಂಗಾಯಿತು. ರಿಸೀವ್ ಮಾಡಿದೆ.

"ನಾನು ಕಣ್ರೀ, ಗೌರಮ್ಮನ ಗಂಡ.. ಮದ್ಯಾನ್ಹ ನೂರಾನಾಲ್ಕ ಜ್ವರಾ ಅಂತಾ ಮೂರು ಇಂಜಕ್ಷನ್ ಕೊಟ್ಟಿದ್ರಲ್ಲಾ, ಅದಕ್ಕೆ ಇನ್ನೂ ಜೋರಾಗಿದೆ, ಗಡಾ ಬರ್ಬೇಕು ಕಣ್ರೀ" ಎಂದು ಬಡಬಡಿಸಿದ. "ನೀವು ಯಾರು ಗೊತ್ತಾಗಲಿಲ್ಲ? ಯಾವ ಊರು?" ಎಂದೆ. "ನಮ್ಮ ಮನೆಯವಳ ಕೈಗೇ ಕೊಡ್ತೇನೆ" ಎನ್ನುತ್ತಾ ಹೆಂಡತಿಗೆ ಫೋನ್ ವರ್ಗಾಯಿಸಿದ. "ನಾನು ಸಾರ್ ಹೊಸಳ್ಳಿ ಗೌರಮ್ಮ. ಮೈ ತಣ್ಣಗಾಗಿದೆ, ಗೊರ ಗೊರ್ ಶಬ್ದ ಬರ್ತಾ ಇದೆ, ನನಗ್ಯಾಕೊ ಗಾಬ್ರೀಯಾಗಿದೆ. ಗಡಾ ಬರ್ತಿರಾ ಸಾರ್" ಎಂದಳು. "ಸರಿಯಮ್ಮ ನಾನು ಈಗ್ಲೇ ಬರ್ತೇನೆ" ಎಂದು ಫೋನ್ ಕಟ್ ಮಾಡಿದೆ.

ಪೇಟೆಗೆ ಹೋಗಲು ರೆಡಿಯಾಗುತ್ತಿದ್ದ ಮಡದಿಯನ್ನು ಕರೆದು, "ಒಂದು ಸೀರಿಯಸ್ ಕೇಸ್ಗೆ ಹೋಗಿ ಆದಷ್ಟು ಬೇಗ ಬರ್ತೀನಿ ಕಣೆ, ಆ ನಂತರ ಪೇಟೆಗೆ ಹೋಗೋಣ. ಬರುವಾಗ ನಾರ್ಥ ಇಂಡಿಯನ್ ಹೊಟೆಲ್ಗೆ ಹೋಗಿ ಅಲ್ಲೇ ಊಟಾ ಮಾಡಿಕೊಂಡು ಬರೋಣಾ, ಆಯ್ತಾ.." ಎಂದು ರಮಿಸಲು ಪ್ರಯತ್ನಿಸಿದೆ. ಅದಕ್ಕವಳು ಸಿಟ್ಟಿನಿಂದಲೇ "ಮಧ್ಯಾನ್ಹ ಮಾಡಿದ್ದು ಏನ್ ಮಾಡ್ತೀರಿ? ಅದೆಲ್ಲಾ ಏನೂ ಬೇಡಾ, ಆದಷ್ಟು ಬೇಗ ಬನ್ನಿ" ಎಂದಳು. ಲಗುಬಗೆಯಿಂದ ಕಿಟ್ ಹಿಡಿದು ಬೈಕ್ ಏರಿ ಹೊಸಳ್ಳಿ ಕಡೆ ಹೊರಟೆ. ದಾರಿಯಲ್ಲಿ ಗೌರಮ್ಮನ ಎಮ್ಮೆಯನ್ನು ಏನಾದರೂ ಮಾಡಿ ಉಳಿಸಲೇಬೇಕು ಎನ್ನವ ಯೋಚನೆಯಲ್ಲಿ ಎಕ್ಸಲೇಟರ್ ಜಾಸ್ತಿ ಮಾಡಿದೆ.

ಸಾಮಾನ್ಯವಾಗಿ ಮುಂಗಾರು ಮಳೆ ಪ್ರಾರಂಭದಲ್ಲಿ ಜಾನುವಾರುಗಳಿಗೆ ವಾತಾವರಣದಲ್ಲಿ ಆಗುವ ವ್ಯತ್ಯಾಸಗಳು, ಕೆಸರು, ಗುಂಡಿಗಳಲ್ಲಿರುವ ಕಲುಷಿತ ನೀರು ಸೇವನೆಯಿಂದ 'ಗಳಲೆ ರೋಗ' ಎಂಬ ಭಯಂಕರ ಸಾಂಕ್ರಾಮಿಕ ರೋಗ ಕಾಣಿಸಿಕೊಂಡು ಜಾನುವಾರಗಳನ್ನು ಬಲಿ ತೆಗೆದುಕೊಳ್ಳುತ್ತದೆ. ಈ ರೋಗ ಬರದಂತೆ  ಮೂಂಜಾಗ್ರತೆಯಾಗಿ ಲಸಿಕೆಯನ್ನು ಪ್ರತೀ ವರ್ಷ ಎಪ್ರೀಲ್–ಮೇ ತಿಂಗಳಲ್ಲಿ ಹಾಕಲಾಗುತ್ತೆ. ಆದರೆ ಕೆಲವರು ಲಸಿಕೆ ಹಾಕಿಸಿದರೆ ಜ್ವರಾ ಬರುತ್ತೆ, ಹಾಲು ಕಡಿಮೆ ಆಗುತ್ತೆ ಎನ್ನುವ ಕಾರಣಗಳಿಂದ ಲಸಿಕೆ ಹಾಕಿಸಿಕೊಳ್ಳುವುದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಈ ರೋಗ ಯಾವುದೇ ಸಮಯದಲ್ಲೂ ಸಹಾ ಕಾಣಿಸಿಕೊಂಡು ರೈತರ ಹಾಗೂ ಜಾನುವಾರು ವೈದ್ಯರ ನಿದ್ದೆ ಕೆಡಿಸುತ್ತಿದೆ. ಅತಿಯಾದ ಜ್ವರ, ಧಾರಾಕಾರವಾದ  ಜೋಲ್ಲು ಸೋರಿಕೆ, ಗಂಟಲು ಬಾವು, ರೊಗ ಕಾಣಿಸಿಕೊಂಡ ಜಾನುವಾರುಗಳು ಉಸಿರಾಟ  ತೊಂದರೆಯಿಂದ ಸಾವನ್ನಪ್ಪುತ್ತವೆ. ಈ ರೊಗ ಎಳೆ ವಯಸ್ಸಿನ ಜಾನುವಾರುಗಳನ್ನು, ವಿಶೇಷವಾಗಿ ಎಮ್ಮೆ ಜಾತಿಯನ್ನು ಹೆಚ್ಚಾಗಿ ಕಾಡುತ್ತದೆ.

ಹೊಸಳ್ಳಿ ಭಾಗದ ಅಲ್ಲಲ್ಲಿ ಈ ರೋಗ ಕಾಣಿಸಿಕೊಂಡ ಮಾಹಿತಿ ಇದ್ದುದರಿಂದ ಗೌರಮ್ಮನ ಎಮ್ಮೆಗೂ ಇದೇ ಕಾಯಿಲೆ ಇರಬಹುದೆಂದು ಊಹಿಸಿ ಮಧ್ಯಾನ್ಹ ಚಿಕಿತ್ಸೆ ನೀಡಿದ್ದೆ. ಒಂದು ವೇಳೆ ರೋಗ ಉಲ್ಬಣವಾದರೆ ಬೇಗ ತಿಳಿಸಲು ಸಹಾ ಹೇಳಿದ್ದೆ. ಅಂತೆಯೆ ಪಾ..ಪ ಗೌರಮ್ಮ ಆತಂಕದಿಂದ ಫೋನ್ ಮಾಡಿದ್ದಾಳೆ. ಅದರೆ ಗಂಟಲಿನಿಂದ ಗೊರ್ ಗೊರ್ ಶಬ್ಧ ಬಂತೆಂದರೆ ಜಾನುವಾರು ಬದುಕುಳಿಯುವುದು ಸಾಧ್ಯವೇ ಇಲ್ಲ ಎಂಬುದು ನನ್ನ ಹದಿನೇಳು ವರ್ಷದ ವೃತ್ತಿ ಬದುಕಿನ ಅನುಭವ. ಸಾವು ನಿಶ್ಚಿತವೆಂದು ತಿಳಿದಿದ್ದರೂ ಕೊನೆ ಕ್ಷಣದವರೆಗೂ ಪ್ರಯತ್ನಿಸಲೇಬೇಕಲ್ಲವೇ? ಅದು ನನ್ನ ವೃತ್ತಿ ಧರ್ಮ. ಹೀಗೆ ಯೋಚನಾ ಲಹರಿಯಲ್ಲಿ ಚಲಿಸುತ್ತಿದ್ದೆ. ಗೌರಮ್ಮನ ಮನೆ ಬಂದೇ ಬಿಟ್ಟಿತು.

ಮನೆ ಮುಂದೆ ಜನ ಜಂಗುಳಿಯಂತೆ ಸೇರಿದ್ದರು. ಒಮ್ಮೆ ದಂಗಾಗಿ ನಿಂತು ಜನರ ಮಾತುಗಳನ್ನು ಆಲಿಸಿದೆ. ಕೆಲವರು ತಮ್ಮದೇ ಆದ ಅಭಿಪ್ರಾಯ, ಸಲಹೆ ಚಿಕಿತ್ಸಾ ಕ್ರಮಗಳನ್ನು ಹೇಳುತ್ತಿದ್ದರು. ಇನ್ನೂ ಕೆಲವರು ದೇವರ ಕಾಟದಿಂದ ಹೀಗಾಗಿದೆ ಎನ್ನುತ್ತಿದ್ದರು. ಜನರ ಗುಂಪಿನಿಂದ ತೂರಿಕೊಂಡು ಕೊಟ್ಟಿಗೆಯಲ್ಲಿದ್ದ ಎಮ್ಮೆಯನ್ನು ತಲುಪಿದೆ. ಗೌರಮ್ಮ ಎಮ್ಮೆಯ ಮುಂದೆಯೇ ಕುಳಿತಿದ್ದವಳು, ನನ್ನನ್ನ ಕಂಡು ಅವಸರದಿಂದ ಎದ್ದು ನಿಂತು ಕೈ ಮುಗಿದಳು. "ಎನಾದ್ರೂ ಮಾಡಿ ನನ್ನ ಎಮ್ಮೆನಾ ಬದುಕಿಸಿ ಕೊಡಿ ಡಾಕ್ಟ್ರೆ.." ಪದೇ ಪದೇ ಕೈಮುಗಿದಳು. "ಹೆದರ್ಬೇಡಮ್ಮ ಏನೂ ಆಗಲ್ಲ, ಇಂಜಕ್ಷನ್ ಕೊಡಲು ಬೇಗ ಬಿಸಿ ನೀರು ತನ್ನಿ" ಎಂದೆ.

ಎಮ್ಮೆಯನ್ನು ಕೂಲಂಕಶವಾಗಿ ಪರೀಕ್ಷಿಸಿದೆ. "ಮೈ ತಣ್ಣಗಾಗಿದೆ ಅಲ್ವಾ ಡಾಕ್ಟ್ರೇ" ಎಂದ ಗೌರಮ್ಮನ ಗಂಡನಿಗೆ ಹೌದೆಂದು ತಲೆಯಾಡಿಸಿದೆ, ಗಂಟಲ ಬಾವು ಬಂದ ಭಾಗಕ್ಕೆ ಬರೆ ಹಾಕಲಾಗಿತ್ತು. ಬರೆ ಹಾಕಿದರೆ ಬಾವು ಹೆಚ್ಚಾಗುವುದಿಲ್ಲ ಎನ್ನುವುದು ಈ ಭಾಗದ ಜನರ ನಂಬಿಕೆ. ಎಮ್ಮೆಯ ಹಣೆಯ ಮೇಲೆ ದೇವರ ಹೆಸರಿನಲ್ಲಿ ಹಚ್ಚಿದ ವಿಭೂತಿ ರಾಜಾಜಿಸುತಿತ್ತು. ನನ್ನಿಂದ ಎಮ್ಮೆಯನ್ನು ಬದುಕಿಸಲು ಸಾಧ್ಯವಿಲ್ಲದ ಪವಾಡವನ್ನು ದೇವರಾದರೂ ಮಾಡಲಿ ಎಂದುಕೊಂಡೆ.

ಚಿಕಿತ್ಸೆ ಪೂರೈಸಿ, ಗೌರಮ್ಮನತ್ತ ನೋಡಿದೆ. ದುಃಖದಿಂದ ಕಣ್ಣುಗಳು ತುಂಬಿಕೊಂಡಿರುವುದನ್ನು ಕಂಡು 'ಅತ್ತಾರೆ ಅತ್ತು ಬಿಡು ಹೊನಲು ಬರಲಿ..' ಎನ್ನುವ ದ.ರಾ.ಬೇಂದ್ರೆ ಗೀತೆಯ ಸಾಲು ಮನಸಲ್ಲಿ ಸುಳಿಯಿತು. "ಸಾ..ರ್ ಎಲ್ಲರೂ ಎಮ್ಮೆ ಬದಕಲ್ಲ ಅಂತಾರೆ, ನಮ್ಮ ಡಾಕ್ಟರ್ ಕೈಗುಣ ಚನ್ನಾಗಿದೆ. ಬದುಕೇ ಬದುಕುತ್ತೆ ಅಂತಾ ನನ್ನ ಮನಸ್ಸು ಹೇಳುತ್ತೆ. ನನ್ನೆಮ್ಮೆ ಸಾಯಲ್ಲ ಅಲ್ವಾ ಡಾಕ್ಟ್ರೇ.." ಎಂದು ಆಶೆಯಿಂದ ನನ್ನ ಉತ್ತರವನ್ನೇ ಎದುರು ನೋಡುತ್ತಿದ್ದಳು. "ಪ್ರಯತ್ನ ಮಾಡ್ತೇನಮ್ಮ ನೋಡೋಣಾ.. ಕಾಯಿಲೆ ಉಲ್ಬಣವಾಗಿದೆ, ಸಾದ್ಯವಿರುವ ಎಲ್ಲಾ ಪ್ರಯತ್ನವನ್ನೂ ಮಾಡಿದ್ದೇನೆ, ದೇವರಿಚ್ಛೆ ಹೇಗಿದೆಯೋ ಹಾಗೆ ಆಗುತ್ತೆ" ಎಂದು ನನ್ನ ಮೇಲಿದ್ದ ಭಾರವನ್ನು ದೇವರಿಗೆ ವರ್ಗಾಯಿಸಿದೆ. "ಡಾಕ್ಟ್ರೇ ಎಷ್ಟು ದುಡ್ಡು ಖರ್ಚಾದ್ರೂ ಪರವಾಗಿಲ್ಲ ಎಮ್ಮೆ ಬದುಕಬೇಕು, ಶಿವಮೊಗ್ಗಾಕ್ಕೆ ಹೋಗಿ ಯಾವುದಾದ್ರೂ ಔಷಧಿ ತರಬೇಕಾ?" ಎಂದ ಗೌರಮ್ಮನ ಗಂಡನಿಗೆ, "ಏನು ಬೇಕಾಗಿಲ್ಲ ಎಲ್ಲಾ ಔಷಧಿ ಕೊಟ್ಟಿದ್ದೇನೆ, ನಾನು ಹೇಳಿದಷ್ಟ ಮಾತ್ರ ಮಾಡಿ. ಎಮ್ಮೆಗೆ ಹಿಂಸೆಯಾಗುವ ಯಾವುದೇ ಪ್ರಯೋಗ ಮಾಡಬೇಡಿ" ಎಂದು ಎಚ್ಚರಿಸಿದೆ. "ಆಯ್ತು ಸಾರ್ ನೀವ್ ಹೇಳ್ದಂಗೆ ಮಾಡ್ತೇವೆ" ಎಂದಳು ಗೌರಮ್ಮ.

ಗ್ರಾಮ ಪಂಚಾಯತಿ ಜವಾನನನ್ನು ಕರೆಯಿಸಿ ನಾಳೆ ಬೆಳಿಗ್ಗೆ ಗ್ರಾಮದ ಎಲ್ಲಾ ಜಾನುವಾರುಗಳಿಗೆ ಗಂಟಲು ಬೇನೆ ರೋಗದ ಲಸಿಕೆ ಹಾಕುತ್ತೇವೆ, ಅದಕ್ಕೆ ಈಗಲೇ ಡಂಗುರ ಸಾರಬೇಕು ಎಂದು ತಿಳಿಸಿ ಶಿವಮೊಗ್ಗಾಕ್ಕೆ ಹೊರಟು ನಿಂತೆ. "ನಿಲ್ಲಿ ಡಾಕ್ಟ್ರೇ..." ಎನ್ನುತ್ತಾ ಕಾಸಿನ ಕಂತೆಯನ್ನು ಕೈಗಿತ್ತು "ಇನ್ನೂ ಎಷ್ಟು ಕೊಡ್ಬೇಕು ಹೇಳಿ, ಹಾಲಿನ ದುಡ್ಡು ಬಂದ ಕೂಡ್ಲೆ ಕೊಡ್ತೀನಿ. ಒಟ್ಟು ನನ್ನೆಮ್ಮೆ ಉಳಿಬೇಕು" ಎಂದಳು ಗೌರಮ್ಮ.  "ಬೇಡಮ್ಮ ಸಾಕು, ಮೊದಲು ಎಮ್ಮೆ ಹುಷಾರಾಗಲಿ" ಎನ್ನುತ್ತಾ, ಬೈಕ್ ಹತ್ತಿದೆ.

ದಾರಿಯಲ್ಲಿ ಮತ್ತದೇ ಗುಂಗು ಆವರಿಸಿತು. ಗೌರಮ್ಮನ ಕುಟುಂಬವನ್ನು ಹಲವು ದಿನಗಳಿಂದ ಹತ್ತಿರದಿಂದ ಕಂಡಿದ್ದೇನೆ. ಕುಡುಕ ಗಂಡ, ವಯಸ್ಸಾದ ಅತ್ತೆ-ಮಾವ, ಸ್ಕೂಲಿಗೆ ಹೋಗುವ ಮಕ್ಕಳು, ಕಿತ್ತು ತಿನ್ನುವ ಬಡತನ ಇದ್ದರೂ ಸ್ವಾಭಿಮಾನದಿಂದ ಹಾಲಿನ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದ ಸಾದ್ವಿ. ಗೌರಮ್ಮನಿಗೂ ಈ ಎಮ್ಮೆಗೂ ಅವಿನಾಭಾವ ಸಂಬಂಧವಿದೆ; ಅದಕ್ಕೆ ಕಾರಣವೂ ಇದೆ. ಇದು ತವರು ಮನೆಯಿಂದ ಬಳುವಳಿಯಾಗಿ ಬಂದ ತವರಿನ ಎಮ್ಮೆ. ಮದುವೆಯಾದ ಕೆಲವೇ ದಿನಗಳಲ್ಲಿ ತಾಯಿಯನ್ನು ಕಳೆದುಕೊಂಡಿದ್ದ ಗೌರಮ್ಮ, ಎಮ್ಮೆಯಲ್ಲಿಯೇ ತಾಯಿಯನ್ನು ಕಂಡಿದ್ದಳು. ಅತ್ಯಂತ ಆರೋಗ್ಯವಾಗಿಯೇ ಇದ್ದ ಎಮ್ಮೆಗೆ ಇದ್ದಕ್ಕಿದ್ದಂತೆ ಗಂಟಲು ಬೇನೆಯೆಂಬ ಭೀಕರ ರೋಗ ಕಾಣಿಸಿಕೊಂಡಿದ್ದು, ಗೌರಮ್ಮನನ್ನು ಕಂಗೆಡಿಸಿತ್ತು.

ರಾತ್ರಿ ಮನೆ ತಲುಪಿದಾಗ ಸುಮಾರು 10 ಘಂಟೆಯಾಗಿತ್ತು. ಮೂರು ಬಾರಿ ಬೆಲ್ ಮಾಡಿದ ನಂತರ ಬಾಗಿಲು ತೆರೆದ ಮಡದಿ ಮುನಿಸಿಕೊಂಡಿರುದನ್ನು ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. "ಸಾರೀ ಕಣೇ.. ನಾಳೆ ತಪ್ಸಲ್ಲ, ಗ್ಯಾರಂಟೀ ಪೇಟೆಗೆ ಹೋಗೋಣಾ, ಆಯ್ತಾ." ಎಂದೆ. "ಕೈಕಾಲು ಮುಖಾ ತೋಳಕೊಂಡು ಬನ್ನಿ, ಊಟಕ್ಕೆ ಬಡಸ್ತೀನಿ" ಎಂದಳು. "ನನಗ್ಯಾಕೋ ಹಸಿವೆ ಇಲ್ಲಾ, ನೀನು ಊಟಾ ಮಾಡು" ಎಂದು ಒಂದು ಲೋಟಾ ನೀರು ಕುಡಿದು, ದಿವಾನಾ ಮಂಚಕ್ಕೊರಗಿದೆ. ಗೌರಮ್ಮನ ಎಮ್ಮೆಯನ್ನು ಬದುಕಿಸಲು ಇನ್ನೇನಾದ್ರೂ ಮಾಡಬಹುದಿತ್ತೇ ಎಂದು ಮನಸ್ಸು ಯೋಚಿಸುತ್ತಿತ್ತು. ನಿದ್ದೆ ಆವರಿಸಿದ್ದು ಗೊತ್ತಾಗಿದ್ದು ಬೆಳಿಗ್ಗೆ ಎಚ್ಚರವಾದಾಗಲೇ.

ಬೇಗ ರೆಡಿಯಾಗಬೇಕು, ಊರಿನ ಎಲ್ಲ ಜಾನುವಾರುಗಳಿಗೆ ಚುಚ್ಚುಮದ್ದು ನೀಡುವ ವ್ಯವಸ್ಥೆ ಮಾಡಬೇಕು ಎಂದುಕೊಳ್ಳುವಷ್ಟರಲ್ಲಿ ಪೊನ್ ರಿಂಗಾಯಿತು. ಅದು ಗೌರಮ್ಮನ ಮನೆಯ ಸಂಖ್ಯೆಯೇ ಆಗಿತ್ತು. ಗೌರಮ್ಮನ ಎಮ್ಮೆಯ ಸಾವಿನ ಸುದ್ದಿಯೇ ಇರಬೇಕೆನಿಸಿ ಫೋನ್ ಎತ್ತಲು ಮನಸ್ಸಾಗಲಿಲ್ಲ. ಒಂದು ವೇಳೆ ಎಮ್ಮೆ ಸತ್ತು ಹೋದರೆ ಗೌರಮ್ಮನನ್ನು ಸಂತೈಸುವುದು ಹೇಗೆ ಎಂದು ಯೋಚಿಸುತ್ತಿರುವಂತೆ ಫೋನ್ ರಿಂಗ್ ಕಟ್ಟಾಯಿತು. 'ಛೇ, ಫೋನ್ ರಿಸೀವ್ ಮಾಡಬೇಕಿತ್ತು' ಎಂದು ಮನಸ್ಸು ತಳಮಳಿಸಿತು. ಎನೇ ಆಗಲಿ ನಾನೇ ಕಾಲ್ ಮಾಡಿದರಾಯಿತು ಎಂದುಕೊಳ್ಳುವಷ್ಟರಲ್ಲಿ ಅದೇ ಫೋನ್ ರಿಂಗಾಯಿತು. ಅಳುಕಿನಿಂದಲೇ ರಿಸೀವ್ ಮಾಡಿದೆ, "ನಾನು ಸಾ.. ಹೊಸಳ್ಳಿ ಗೌರಮ್ಮ, ಎಮ್ಮೆ ಹುಶಾರಾಗಿ ಮೆಲುಕಾಡ್ತಾ ಇದೆ" ಎಂದಳು. ನಾನು ತಬ್ಬಿಬ್ಬಾಗಿ "ಏನೂ... ಎಮ್ಮೆ ಹುಷಾರಾಗಿದೆಯಾ?" ಅನುಮಾನದಿಂದಲೇ ಕೇಳಿದೆ. ಖುಷಿಯಿಂದ "ಹೌದು ಸಾರ್ ದೇವ್ರು ನನ್ನ ಕೈ ಬಿಡಲಿಲ್ಲ. ನನ್ನ ಪಾಲಿನ ದೇವ್ರು ಬಂದಂಗ್ ಬಂದು ನನ್ನ ಎಮ್ಮೆ ಜೀವಾ ಉಳಿಸಿದ್ರಿ" ಎಂದಳು. "ಸರಿಯಮ್ಮ, ಇವತ್ತೂ ಕೂಡಾ ಅದಕ್ಕೆ ಚಿಕಿತ್ಸೆ ಕೊಡಬೇಕಾಗುತ್ತೆ, ನಾನು ಈಗ್ಲೇ ಬರ್ತೇನೆ" ಎಂದು ಫೋನ್ ಕಟ್ ಮಾಡಿದೆ. ಮನದಲ್ಲಿ ದೇವರನ್ನು ನೆನೆದು 'ಯು ಆರ್ ಗ್ರೇಟ್' ಎಂದೆ. ಮನಸ್ಸಿಗೆ ಸಮಾಧಾನದ ಅನುಭವ.

ಬೇಗ ರೆಡಿಯಾಗಿ ಹೊಸಳ್ಳಿ ಗ್ರಾಮ ತಲುಪಿದೆ. ಗ್ರಾಮಸ್ಥರೆಲ್ಲ ತಮ್ಮ ಜಾನುವಾರುಗಳಿಗೆ ಚುಚ್ಚುಮದ್ದು ಕೊಡಿಸಲು ಕರೆದೊಯ್ಯುತ್ತಿದ್ದರು. ಲಸಿಕೆ ಹಾಕುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿತ್ತು. ಗೌರಮ್ಮನ ಎಮ್ಮೆಯನ್ನು ನೋಡಲು ಅವಳ ಮನೆ ತಲುಪಿದೆ. ನನ್ನನ್ನು ಕಂಡೊಡನೆಯೇ ಕೈಮುಗಿದಳು. ಗೌರಮ್ಮನ ಮುಖ ಅರಳಿತ್ತು. ಕೊಟ್ಟಿಗೆಯಲ್ಲಿದ್ದ ಎಮ್ಮೆ ಮೆಲುಕಾಡುತ್ತಿತ್ತು. ಜಾನುವಾರುಗಳಲ್ಲಿ ಮೆಲುಕಾಡುವುದು ಆರೋಗ್ಯದ ಲಕ್ಷಣ. ಎಮ್ಮೆಯ ಮೈ ಸವರಿದೆ. ಮೆಲುಕು ನಿಲ್ಲಿಸಿದ ಎಮ್ಮೆ ನನ್ನ ಕಡೆ ನೋಡುತ್ತಾ ನಿಂತಿತು. ಎಮ್ಮೆಯ ಕಣ್ಣುಗಳು,  ತುಂಬಿ ಬಂದ ಆ ನೋಟ ನನಗೆ ಕೃತಜ್ಞತೆ ಸಲ್ಲಿಸಿದಂತಿತ್ತು. ಮೂಕ ಪ್ರಾಣಿಯ ಕಣ್ಣುಗಳಿಂದ ಹೊರಹೊಮ್ಮಿದ ಆ ಧನ್ಯತಾ ಭಾವ ಕಂಡು ಮೂಕವಿಸ್ಮಿತನಾದೆ.

ಲೇಖಕರ ಕಿರುಪರಿಚಯ
ಡಾ. ನಾಗರಾಜ ಕೆ. ಎಂ. ಹಾನಗಲ್

ಇವರು ವೃತ್ತಿಯಲ್ಲಿ ಪಶುವೈದ್ಯರು. ಪ್ರಸ್ತುತ ಪಶುವೈದ್ಯಾಧಿಕಾರಿಯಾಗಿ ಶಿವಮೊಗ್ಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ದೇಶೀಯ ಗೋತಳಿಗಳ ಸಂರಕ್ಷಣೆ, ಸಂಶೋಧನೆ ಹಾಗೂ ಸಂವರ್ಧನೆ, ಮತ್ತು ಅಸಾಂಪ್ರದಾಯಿಕ ಜಾನುವಾರು ಆಹಾರ ಮೂಲಗಳ ಮೌಲ್ಯವರ್ಧನೆ ಇವರ ಆಸಕ್ತಿಯ ವಿಷಯಗಳು.

ದೇಶದಲ್ಲಿಯೇ ಪ್ರಥಮ ಎನ್ನಬಹುದಾದ 'ಕನ್ನಡ ಪಶುವೈದ್ಯ ಸಾಹಿತ್ಯ ಪರಿಷತ್ತು' ರಚನೆಯಲ್ಲಿ ಮುಖ್ಯ ಪಾತ್ರವಹಿಸಿ ಅದರ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿಗಳಾಗಿದ್ದಾರೆ.

ಕರ್ನಾಟಕ ಪಶುವೈದ್ಯಕೀಯ ಸಂಘ ಬೆಂಗಳೂರು ನೀಡುವ 'ಶ್ರೇಷ್ಠ ಪಶುವೈದ್ಯ ಪ್ರಶಸ್ತಿ', ಕರ್ನಾಟಕ ಸ್ವದೇಶಿ ಆಂದೋಳನ ಬೆಂಗಳೂರು ಇವರಿಂದ 'ಅತ್ಯುತ್ತಮ ಯುವ ವಿಜ್ಞಾನಿ' ಹಾಗೂ ಶ್ರೀರಾಮಚಂದ್ರಾಪುರ ಮಠ ನೀಡುವ 'ಸರ್ವಧಾರಿ ಸಮ್ಮಾನ' ಪ್ರಶಸ್ತಿಗಳಿಗೆ ಇವರು ಭಾಜನರಾಗಿದ್ದಾರೆ.

Blog  |  Facebook  |  Twitter

ಮಂಗಳವಾರ, ನವೆಂಬರ್ 20, 2012

ಬದುಕ ಖುಷಿಯ ಒಳಸೆಲೆಯ ಚಿಲುಮೆಗಳು...

ಅಕ್ಷರ ಪ್ರೀತಿ...
            ಭಾವ ಧಾರೆಯ ಹಾಡು...
                        ಸ್ನೇಹ ಗಂಗೆಯ ಹರಿವು.....

ಅಲೌಕಿಕ ಆನಂದ ಅಂತ ಒಂದಿದ್ದರೆ
ಅದು
ನಮ್ಮಿಷ್ಟದ ವಿಷಯದ ಹೊತ್ತಿಗೆಯೊಂದನ್ನ ಒಂದೇ ಗುಕ್ಕಿನಲ್ಲಿ ಓದುವುದರಲ್ಲಿ...
ತಾದಾತ್ಮ್ಯದಿಂದ ಚಂದನೆಯದೊಂದು ಹಾಡು ಕೇಳುವುದರಲ್ಲಿ...
ಆತ್ಮೀಯ ಗೆಳೆಯರೊಂದಿಗಿನ ಮೌನದಲ್ಲಿ ಮಾತ್ರ ಇದೆಯೇನೋ.
ನನ್ನ ಮಟ್ಟಿಗಂತೂ ಇದು ಸತ್ಯ.
ನನ್ನಲ್ಲೂ ಒಬ್ಬ ಭಾವುಕನನ್ನು ನಾನು ಕಾಣೋದು ಈ ಸಂದರ್ಭಗಳಲ್ಲಿ ಮಾತ್ರ.
ಹಗಲ ಏಕಾಂತದಲ್ಲಿ ಒಂದು ಪುಸ್ತಕ...
ರಾತ್ರಿಯ ಕತ್ತಲ ನೀರವತೆಯಲ್ಲಿ ಒಂದಿಷ್ಟು ಭಾವಗೀತೆ...
ಆಗಾಗ ಹೃನ್ಮಿತ್ರರೊಂದಿಗೆ ಧುಮ್ಮಿಕ್ಕುವ ಮಾತು...
ದಿನಗಳೆಲ್ಲ ಕ್ಷಣಗಳಲ್ಲಿ ಕಳೆದು ಹೋದಾವು.

ಅಕ್ಷರ
ಪುಸ್ತಕ - ಅದು ನಮ್ಮಿಂದ ಯಾವುದೇ ರೀತಿಯ ನಿರೀಕ್ಷೆಗಳನ್ನೂ ಇಟ್ಟುಕೊಳ್ಳದೇ ಖುಷಿಯನ್ನು ಪಡೆದಷ್ಟೂ ಮೊಗೆಮೊಗೆದು ಕೊಡುವ, ನಮ್ಮಲ್ಲಿ ಜ್ಞಾನದಸೆಲೆ ಉಕ್ಕುವಂತೆ ಮಾಡುವ ಏಕೈಕ ಮಿತ್ರ.

ಓದಿನ ಬಳುವಳಿಯಾದ ಅರಿವಿನಿಂದ ನಮ್ಮ ಜೀವನಾನುಭವವನ್ನು ವಿಮರ್ಶಿಸಿಕೊಳ್ಳುವಂತಾದಾಗ ಸಹಜವಾಗಿ ನಮ್ಮೊಳಗೊಂದು ಪ್ರಭುದ್ಧತೆ ಮೇಳೈಸಿ ಬದುಕು ಇನ್ನಷ್ಟು ಆನಂದದಿಂದ ಕೂಡಿ ಚೆಂದವೆನಿಸುತ್ತದೆ.

ಓದು ತೀರ ನಮ್ಮ ಬದುಕಿನ ದಿಕ್ಕನ್ನೇ ಬದಲಿಸುತ್ತೋ ಇಲ್ಲವೋ ಗೊತ್ತಿಲ್ಲವಾಗಲೀ,
ಆದರೂ
ಮನಸಿನಾಳದಲ್ಲಿ ಎಲ್ಲೋ ಏನೋ ಕದಲಿದಂತಾಗಿ ಸ್ವಲ್ಪೇ ಸ್ವಲ್ಪಾದರೂ ನಮ್ಮನ್ನೇ ನಾವು ವಿಮರ್ಶಿಸಿಕೊಳ್ಳುವಂತೆ ಮಾಡುವುದಂತೂ ಸತ್ಯ.
ನಿಧಾನವಾಗಿಯಾದರೂ ಸರಿ ಆತ್ಮವಿಮರ್ಶೆ ನಮ್ಮನ್ನು ಬೌದ್ಧಿಕವಾಗಿ, ಮಾನಸಿಕವಾಗಿ ಚಿಂತನಶೀಲವಾಗಿ ಬೆಳೆಯುವಂತೆ ಮಾಡುತ್ತದೆ.
ನಿಧಾನವೇ ಆದರೂ ಬೆಳವಣಿಗೆ ಬೆಳವಣಿಗೆಯೇ ತಾನೆ...
ಕಲ್ಲು ಬೆಳೆಯುವುದು ನಿಧಾನ ಅಂತ ಅದು ವಿಕಾಸವಾಗುತ್ತಲೇ ಇಲ್ಲ ಎನ್ನಲಾಗದಲ್ಲ.
ನಿಧಾನಗತಿಯ ಪರಿವರ್ತನೆಯನ್ನು ಗುರುತಿಸುವುದು ಕಷ್ಟವಾಗಬಹುದು...
ಹಾಗಂತ ಆಗುತ್ತಿರುವ ವಿಕಾಸವನ್ನು ಅಲ್ಲಗಳೆಯಲಾಗದಲ್ಲ.
ಯಾರೋ ಬರೆದ ಯಾವುದೋ ಒಂದು ಸಾಲು
ಓದಿನಿಂದ ನಮ್ಮದೇ ಆಗಿ ನಮ್ಮಲ್ಲಿ ವಿಕಸಿತವಾಗುವುದು ಅಕ್ಷರದ ಸಾಮರ್ಥ್ಯ...

ಪುಸ್ತಕದ ಮಾತು ಬಂದಾಗ ವಾಲ್ಮೀಕಿಯ - ಪ್ರಥಮ ಪ್ರಿಯ ಸಮಾಗಮದಲ್ಲಿ ಹೆಣ್ಣು ನಾಚಿಕೆ, ಸಂಕೋಚಗಳಿಂದ, ಪ್ರಿಯಕರನ ಪ್ರೋತ್ಸಾಹದಿಂದ ಇಷ್ಟಿಷ್ಟೇ ಬೆತ್ತಲಾಗುತ್ತ ಹೋಗುತ್ತಾಳೆಂಬರ್ಥದ ಮಾತು ನೆನಪಾಗುತ್ತೆ.
ಕಾರಣ -
ಇಷ್ಟಪಟ್ಟು ತಂದಿಟ್ಟುಕೊಂಡ ಪುಸ್ತಕಗಳನ್ನು ಮತ್ತೆ ಮತ್ತೆ ಓದಿದಾಗ ಆಗುವ ಅನುಭೂತಿ.
ಈ ಪುಸ್ತಕಗಳೂ ವಾಲ್ಮೀಕಿಯ ಹೆಣ್ಣಿನಂತೆಯೇ ಅಂತನ್ನಿಸುತ್ತೆ.
ಪ್ರತೀ ಬಾರಿ ಓದಿದಾಗಲೂ ಬೇರೆ ಬೇರೆ ರೀತಿಯಲ್ಲಿ ಇಷ್ಟಿಷ್ಟಾಗಿ ಅರ್ಥವಾಗ್ತಾ ಹೋಗುತ್ತವೆ.
ಓದಿದ ಒಂದೇ ಸಾಲು ಅದು ಬದುಕಿನ ಬೇರೆ ಬೇರೆ ಮಜಲುಗಳಲ್ಲಿ ಹೊಸ ಹೊಸ ಅರ್ಥ ಮತ್ತು ಭಾವಗಳನ್ನು ಮೂಡಿಸಿ ಬೆರಗುಗೊಳಿಸುತ್ತೆ.
ನಮ್ಮ ಅನುಭವಗಳ ನೆಲೆಯಲ್ಲಿ ಓದಿನ ಹೊಳಹು ಬದಲಾಗುತ್ತ ಸಾಗುತ್ತದೆ.
ಹೊಸದಾದ ಮನೋ ಮಂಥನಕ್ಕೆ ಎಡೆಮಾಡಿ ಬದುಕನ್ನು ಇನ್ನಷ್ಟು ಪಕ್ವವಾಗಿಸುತ್ತದೆ.
ಒಮ್ಮೆ ಗೆಳತಿಯಾಗಿ, ಇನ್ನೊಮ್ಮೆ ಪ್ರಿಯತಮೆಯಾಗಿ, ಮತ್ತೊಮ್ಮೆ ಬರೀ ಹೆಣ್ಣಾಗಿ, ಹಲವೊಮ್ಮೆ ತಾಯಂತೆ ಸಲಹುವ ಅದೇ ಹೆಂಡತಿಯಂತೆ...

ಹಾಡು
ಖುಷಿಯ ಘಳಿಗೆಯಲಿ ಖುಷಿಯ ಇಮ್ಮಡಿಸಿ, ಯಾವುದೋ ನೋವಿಗೆ ಏನೋ ಸಾಂತ್ವನವಾಗಿ ಮನವ ಮೃದುವಾಗಿಸುವ ಮನದ ಗೆಳೆಯ ಹಾಡು.
ಯಾರದೋ ಗೀತೆ ಇನ್ನಾರದೋ ಕಂಠದಲಿ ಹಾಡಾಗಿ ನಲಿದು - ಕೇಳುಗನ ಕಿವಿಯ ಸೇರಿ - ಮನವನಾಲಂಗಿಸಿ ಲಾಲೈಸುವ ಆ ಪರಿ ಎಂಥ ಸೊಗಸು!

ತಲೆಯದೂಗಿಸುವ ಹಾಡು, ಸದಾ ಗುಣುಗುಣಿಸುವ ಹಾಡು, ತಕಥೈ ಕುಣಿಸುವ ಹಾಡು, ಕಣ್ಣ ಹನಿಸುವ ಹಾಡು, ನಗೆಯ ಚಿಮ್ಮಿಸುವ ಹಾಡು - ಎಷ್ಟೆಲ್ಲ ವೈವಿಧ್ಯದ ಹಾಡುಗಳು...

ಯಾವ ಹಾಡಾದರೇನು -
ಹಾಡೆಂದರೆ ಖುಷಿ, ಹಾಡೆಂದರೆ ಮಮತೆ, ಹಾಡೆಂದರೆ ಪ್ರೀತಿ, ಹಾಡೆಂದರೆ ವಿರಹ, ಹಾಡೆಂದರೆ ಏನೇನೋ ಭಾವ ಸಮ್ಮಿಲನ...

ಪುಸ್ತಕ ಮತ್ತು ಹಾಡು ಇವೆರಡಕ್ಕೆ ಕೊರತೆ ಆಗದಿದ್ರೆ ಒಂದಿಡೀ ಬದುಕನ್ನು ಒಂಟಿಯಾಗಿ ಕಳೆದುಬಿಡಬಹುದೇನೋ...
ಜೊತೆಗೆ ಸಮಾನ ಅಭಿರುಚಿಯ ಸ್ನೇಹಿತರೂ ಸೇರಿಕೊಂಡರೆ ಬದುಕೊಂದು ನಳನಳಿಸುವ ಹೂವಿನ ತೋಟವೇ ಸರಿ...

ಸ್ನೇಹ
ಎರಡು ಜೀವಗಳ ನಡುವೆ ಹಬ್ಬಿ ನಗುವ ಆತ್ಮೀಯ ಭಾವ ಸಂಬಂಧ, ಸ್ನೇಹವೆಂದರೆ.

ಗೆಳೆತನವೊಂದು ಹಬ್ಬಿ ನಿಲ್ಲುತ್ತದೆ -
ಅಂಗಳದ ಕಂಬಕ್ಕೆ ಮಲ್ಲಿಗೆಯ ಬಳ್ಳಿಯೊಂದು ತಬ್ಬಿ ಹಬ್ಬಿ ನಿಂತಂತೆ ಸೊಗಸಾಗಿ...
ಸಮಾನ ಅಭಿರುಚಿಗಳ ನೀರು ಗೊಬ್ಬರ ಸಿಕ್ಕರೆ.

ಒಂದು ಚಂದನೆಯ ಸ್ನೇಹವನ್ನು ಬದುಕಿನ ಯಾವುದೇ ಕ್ಷಣದಲ್ಲಾದರೂ ಮರೆಯೋಕೆ ಸಾಧ್ಯವಾ..??
ಇಂದು ಜೀವದ ಸ್ನೇಹಿತರಾದ ಇಬ್ಬರು ಮುಂದೆಂದೋ ಬದುಕಿನ ಅನಿರೀಕ್ಷಿತ ತಿರುವುಗಳಲ್ಲಿ ಕವಲೊಡೆದ ದಾರಿಯಲ್ಲಿ ನಡೆಯಬೇಕಾದೀತು.
ಅರಿವೇ ಇಲ್ಲದೆ ಮತ್ತೆಂದೂ ಮುಖಾಮುಖಿಯಾಗದೇ ಹೋಗುವಷ್ಟು ದೂರಾಗಬಹುದು.
ಕೊನೆಗೆ ಪರಿಸ್ಥಿತಿಯ ಒತ್ತಡದಲ್ಲಿ ಶತ್ರುಗಳೂ ಆಗಿಬಿಡಬಹುದೇನೋ.
ಆದರೂ ಆ ಶತ್ರುತ್ವದ ಆಳದಲ್ಲೂ ಮನದ ಮೂಲೆಯಲ್ಲಿ ಗೆಳೆತನದ ನರುಗಂಪು ಸುಳಿದಿರುಗದಿದ್ದೀತಾ...
ಮಿತ್ರರಾಗಿದ್ದಾಗ ಜೊತೆಯಾಗಿ ಕಳೆದ ಘಳಿಗೆಗಳ ಮರೆಯಲಾದೀತಾ..??
ಅದು ಸ್ನೇಹದ ತಾಕತ್ತು ಮತ್ತು ಶ್ರೇಷ್ಠತೆ.

ಮುಂಜಾನೆ ಮಂಜಲ್ಲದ್ದಿದ ಸೂರ್ಯಕಿರಣವನ್ನು ನೋಡುವಾಗ ಫಕ್ಕನೆ ನೆನಪಾಗಿಬಿಡುವ ಪ್ರೀತಿಯ ಗೆಳೆಯನ ಯಾವುದೋ ಖುಷಿಯ ಮಾತು ಆ ದಿನವೆಲ್ಲ ನಮ್ಮನ್ನ ಶಾಂತಿಯಿಂದ, ಸಂತೃಪ್ತಿಯಿಂದ ಕಳೆಯುವಂತೆ ಮಾಡಲಾರದೇ...
ನಮ್ಮನ್ನು ಇನ್ನಷ್ಟು ಉತ್ಸಾಹಿತರನ್ನಾಗಿಸದೇ...
ಸೋತ ಜೀವಕ್ಕೆ ಚೈತನ್ಯಧಾರೆಯೆರೆಯಲಾರದೇ...
ನಮ್ಮನ್ನು ಹೊಸ ಗೆಲುವಿನೆಡೆಗೆ ತುಡಿವಂತೆ, ಹೊಸ ಎತ್ತರಕ್ಕೆ ಏರುವಂತೆ ಪ್ರೇರೇಪಿಸಲಾರದೇ...
ಅಂಥದೊಂದು ಸ್ನೇಹಭಾವವನ್ನು, ಆ ಭಾವವನ್ನು ಕೊಡಮಾಡಿದ ಆತ್ಮಬಂಧುವಿನಂಥ ಸ್ನೇಹಿತನನ್ನು ಎಂದಿಗಾದರೂ ಮರೆಯುವುದು ಸಾಧ್ಯವಾ..??
ಮರೆತವನು ಮನುಜನೆನಿಸಿಕೊಂಡಾನಾ..??

"ಶುಭ ಹಾರೈಕೆಗಳೊಂದಿಗೆ ವಿದಾಯವನ್ನು ಕೋರುತಿರುವ ಸ್ನೇಹಿತನ ಕಣ್ಣುಗಳೊಳಕ್ಕೆ ಇಣುಕು. ಅಲ್ಲಿ ಮನದಾಳದಲ್ಲಿ ಮೂಡಿದ ವಿದಾಯದ ವೇದನೆ ಹೆಪ್ಪುಗಟ್ಟಿರುತ್ತದೆ. ಭಾವಾವೇಶೆ ಕಣ್ಣ ಹನಿಯಾಗಿ ಹೊರಜಾರಲು ಸಿದ್ಧವಾಗಿ ಕಂಗಳನ್ನು ಮಂಜಾಗಿಸಿರುತ್ತದೆ."

"ತುಂಬು ಜೀವನ್ಮುಖೀ ವ್ಯಕ್ತಿಯಲ್ಲಿ ಕೂಡ ಸ್ನೇಹಿತನ ಅಗಲುವಿಕೆ ಮನದ ತುಂಬ ಒಂದು ಶೂನ್ಯಭಾವವನ್ನು ಸೃಷ್ಟಸಿರುತ್ತದೆ. ಆ ಅಗಲುವಿಕೆ ತಾತ್ಕಾಲಿಕದ್ದಾದರೂ ಕೂಡ. ಅದು ಪಕ್ವಗೊಂಡ ಸ್ನೇಹದ, ಮನಸು ಮಾತ್ರ ಅರ್ಥೈಸಿಕೊಳ್ಳಬಲ್ಲ, ವಿವರಿಸಲಾಗದ ಅನುಭಾವದ ಭಾವ ಶೂನ್ಯತೆ."
ಅಂಥ ಒಲವಧಾರೆಯ ಗೆಳೆತನದ ಕಲ್ಪನೆಯೇ ಎಷ್ಟು ಚಂದ.

ಅಹಂ ಅನ್ನು ಮರೆತು ಬೆರೆಯಬಲ್ಲೆವಾದರೆ, ಪ್ರಜ್ಞಾವಂತಿಕೆಯನ್ನು ಹೀರಿ ಬೆಳೆಯಬಲ್ಲೆವಾದರೆ, ಚಂದವಾಗಿ ಗೆಳೆತನವೊಂದನ್ನು ನಿಭಾಯಿಸಬಲ್ಲ ತಿಳುವಳಿಕೆ ನಮಗಿದ್ದರೆ ಖಂಡಿತಾ ಗೆಳೆತನವೊಂದು ನಮ್ಮ ಬದುಕ ಬೆಳಗಿಸಬಲ್ಲದು.

ಓದು ನಮ್ಮನ್ನು ಇನ್ನಷ್ಟು ಬೆಳೆಸಲಿ...
ಅಕ್ಷರ ಪ್ರೀತಿ ಹೊಸ ಬಾಂಧವ್ಯಗಳ ಬೆಸೆಯಲಿ...
ಮನದ ಮಡಿಲಲ್ಲಿ ಹೊಸ ಹಾಡು ಹುಟ್ಟಲಿ...
ಬದುಕ ತೋಟ ಹೂವಂತ ಗೆಳೆಯರಿಂದ ನಳನಳಿಸಲಿ...

ಲೇಖಕರ ಕಿರುಪರಿಚಯ
ಶ್ರೀ ಶ್ರೀವತ್ಸ ಕಂಚೀಮನೆ

ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಕಂಚೀಮನೆ ಎಂಬ ಪುಟ್ಟ ಹಳ್ಳಿಯವರು. ಸದ್ಯ ಬೆಂಗಳೂರಿನಲ್ಲಿ ವಾಸ, ಸ್ವಂತ ಕೆಲಸ ಮಾಡಿಕೊಂಡಿದ್ದಾರೆ.

ನಾನೊಬ್ಬ ಸಾಮಾನ್ಯ ಅಕ್ಷರ ಪ್ರೀತಿಯ ಹುಡುಗನಷ್ಟೇ ಎಂದು ಹೇಳಿಕೊಳ್ಳುವ ಇವರು ಕನ್ನಡದ ಯಾವುದೇ ಬರಹಗಳನ್ನಾದರೂ ಓದುತ್ತಾರೆ. ಓದು ಇವರ ಪ್ರೀತಿಯಾದರೆ, ಬರಹ ಕಾಡುವ ಭಾವಗಳನ್ನು ಹೊರಚೆಲ್ಲುವ ಮಾಧ್ಯಮ.

Blog  |  Facebook  |  Twitter

ಸೋಮವಾರ, ನವೆಂಬರ್ 19, 2012

ರೀ.. ನಿಮ್ಮ ಮನೇಲಿ ಬೊಂಬೆ ಕೂಡ್ಸಿದ್ದೀರಾ!!?

ಬೊಂಬೆ ಹಬ್ಬ (ಚಿತ್ರ : ಶ್ರೀ ನಟೇಶ್ ಲಕ್ಷ್ಮಣ್ ರಾವ್)

ರೀ.. ನಿಮ್ಮ ಮನೇಲಿ ಬೊಂಬೆ ಕೂಡ್ಸಿದ್ದೀರಾ!!?..  ಎಂದು ಬೊಬ್ಬೆ ಹೊಡೆಯುತ್ತಾ ಸ್ನೇಹಿತರೊಡನೆ ಮನೆ ಮನೆಗೆ ತಿರುಗಾಡಿ, ಸಿಹಿ ತಿಂಡಿ ತಿನಿಸುಗಳನ್ನು ಸಂಗ್ರಹಿಸಿ ತಿನ್ನುವ ಹಾಗೊಂದು ಒಂಭತ್ತು ದಿನಗಳು, ಮನೆಯಲ್ಲಿ ಹಬ್ಬಗಳ ಸಾಲು, ಆವರಣದಲ್ಲಿ ಬೊಂಬೆಗಳ ಸಾಲು, ರಾಗಿ ಪೈರು, ಸಂಜೆಯ ವೇಳೆಗೆ ದೀಪಗಳ ಸಾಲು! ಹೌದು, ನಾನು ಬೊಂಬೆಗಳ ಹಬ್ಬದ ಬಗ್ಗೇನೇ ಬರಿತಾ ಇರೋದು. ನೀವು ದಕ್ಷಿಣಕನ್ನಡದಲ್ಲಿ ಹುಟ್ಟಿ, ಬೆಳೆದು ಹೀಗೊಂದು ನಶಿಸಿಹೋಗುತ್ತಿರುವ ಸಂಪ್ರದಾಯದ ಬಗ್ಗೆ ತಿಳಿದಿಲ್ಲವೆಂದರೆ ಬಹುಶಃ ನಿಮ್ಮ ಬಾಲ್ಯವು ಗಣಕಯಂತ್ರಕ್ಕೆ ಸೀಮಿತಗೊಂಡು ಅಂತರ್ಜಾಲ ಎಂಬ ಮಹಾ ಜಾಲದಲ್ಲಿ ಸಿಲುಕಿ ಮರೀಚಿಕೆಯ ಬೆನ್ನಟ್ಟಿ, ಗಣಕಯಂತ್ರಕ್ಕೆ ಶರಣಾಗಿ ಅಂತರ್ಜಾಲವೊಂದೇ ಮನೋರಂಜನೆಯ ಮೂಲಾಧಾರವಾಗಿರಬೇಕೆಂದು ಊಹಿಸಲು ವಿಷಾದಿಸುತ್ತೇನೆ.

ಬೊಂಬೆ ಹಬ್ಬ ಅಥವಾ ಗೊಂಬೆ ಹಬ್ಬವು, ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ದಸರಾ/ನವರಾತ್ರಿಯ ಸಮಯದಲ್ಲಿ ಆಚರಿಸುವ ಒಂದು ಹಬ್ಬ. ಈ ಬೊಂಬೆ ಹಬ್ಬವು ಪ್ರಮುಖವಾಗಿ ಬೊಂಬೆಗಳನ್ನು ದೇವರೆಂದು ಆರಾಧಿಸುವ ಹಬ್ಬವಾಗಿದ್ದು, ಹಿಂದೂ ಸಂಸ್ಕೃತಿಯನ್ನು ವರ್ಗಾಯಿಸುವ ಮತ್ತು ಬೆಳಕಿಗೆ ತರುವ ಒಂದು ಮಾಧ್ಯಮವಾಗಿದೆ. ಬಹುಶಃ ಬೊಂಬೆ ಹಬ್ಬವು ಸಂಸ್ಕೃತಿ ಹಾಗೂ ಕರಕುಶಲತೆಯ ಸಂಗಮವಾಗಿರುವ ಏಕೈಕ ಹಬ್ಬ ಎಂದರೆ ತಪ್ಪಾಗದು. ಬೊಂಬೆ ಹಬ್ಬವನ್ನು ನವರಾತ್ರಿಯ ಒಂಭತ್ತು ದಿನಗಳೂ ಆಚರಿಸುವುದು ಸಂಪ್ರದಾಯ. ವಿಧವಿಧವಾದ, ಅಲಂಕರಿಸಿದ ಬೊಂಬೆಗಳನ್ನು ಅಚ್ಚುಕಟ್ಟಾಗಿ, ಮೆಟ್ಟಿಲು ಮಣೆಗಳ ಮೇಲೆ ಜೋಡಿಸಿಟ್ಟು ಆರಾಧಿಸುವುದು ವಾಡಿಕೆ.

ಪಟ್ಟದ ಬೊಂಬೆಗಳು (ಚಿತ್ರ : ಶ್ರೀ ನಟೇಶ್ ಲಕ್ಷ್ಮಣ್ ರಾವ್)

ಬೊಂಬೆಗಳಲ್ಲಿ ಪಟ್ಟದ ಬೊಂಬೆಗಳಿಗೆ ಪ್ರಾಮುಖ್ಯತೆಯನ್ನು ನೀಡಲಾಗಿದ್ದು, ಕನಿಷ್ಠ ಪಕ್ಷ ಒಂದು ಜೊತೆಯಾದರೂ ಇರಬೇಕೆಂಬ ಸಂಪ್ರದಾಯವಿದೆ. ಹಾಗೆಂದಾಕ್ಷಣ, ಬೊಂಬೆಗಳನ್ನು ಕೂಡಿಸುವುದಕ್ಕೆ ನಿಯಮಗಳು ಹಲವು ಎಂದಲ್ಲ; ಇದು ಸಹಜವಾಗಿ, ಸುಲಭವಾಗಿ ಆಚರಿಸುವಂತಹ ಒಂದು ಹಬ್ಬ. ಮನೆಯಲ್ಲಿ ಪುಟ್ಟ ಮಕ್ಕಳು ಆಡುವ ಅಮ್ಮ ಆಟದ ಬೊಂಬೆಗಳಿಂದ ಹಿಡಿದು ಮಹಾಭಾರತದ ದೃಶ್ಯಗಳ ತನಕ ಯಾವುದೇ ರೀತಿಯ ಬೊಂಬೆಗಳನ್ನು ಪ್ರದರ್ಶಿಸಿ ಆರಾಧಿಸಬಹುದು. ವಿಷ್ಣುವಿನ ದಶಾವತಾರ, ಕೃಷ್ಣನ ಗೀತೋಪದೇಶ ಮತ್ತು ಮಹಾಭಾರತದ ಯುದ್ಧದ ದೃಶ್ಯಗಳು ಪ್ರಮುಖವಾದವು.

ಬೊಂಬೆ ಹಬ್ಬವು ನನ್ನ ಒಂದು ಅಚ್ಚು-ಮೆಚ್ಚಿನ ಹಬ್ಬವಾಗಿತ್ತು. ಹಬ್ಬಕ್ಕೆ ಒಂದು ವಾರ ಮುಂಚಿತವಾಗಿಯೇ ರಾಗಿಯ ಪೈರು ಸಿದ್ಧಪಡಿಸಿ, ಹಬ್ಬದ ಹಿಂದಿನ ದಿನ ರಾಗಿಯ ಪೈರಿನ ಉದ್ಯಾನವನವನ್ನು ನಿರ್ಮಿಸುತ್ತಿದ್ದೆವು. ಪಟ್ಟದ ಬೊಂಬೆಗಳಿಗೆ ಸೀರೆ, ಪಂಚೆಗಳನ್ನು ನಾಜೂಕಾಗಿ ಉಡಿಸುವುದು ಎಂದರೆ ನಮ್ಮ ಅಮ್ಮನಿಗೆ ಎಲ್ಲಿಲ್ಲದ ಆಸಕ್ತಿ. ತಗಡಿನ ಡಬ್ಬಗಳ ಮೇಲೆ ಮಣೆಗಳನ್ನು ಮೆಟ್ಟಿಲುಗಳಂತೆ ಜೋಡಿಸಿ, ಅದರ ಮೇಲೆ ಬಿಳಿಯ ಹೊಸವಸ್ತ್ರವನ್ನು ಹೊದಿಸಿ, ಬೊಂಬೆಗಳನ್ನು ದೃಶ್ಯಗಳನುಸಾರ ಕೂಡಿಸುವುದರೊಳಗೆ ಮುಂಜಾವು ಹರಿದಿರುತ್ತಿತ್ತು. ಮನೆಯಲ್ಲಿ ಸುಮಾರು ಹತ್ತು ಜೊತೆ ಪಟ್ಟದ ಬೊಂಬೆಗಳಿದ್ದರೂ, ನಾನು ತಿರುಪತಿಗೆ ಹೋದಾಗಲೆಲ್ಲ "ಒಂದು ಜೊತೆ ಪಟ್ಟದ ಬೊಂಬೆ ತಗೊಂಡು ಬಾರೋ.." ಎಂದು ಅಮ್ಮ ಹೇಳುತ್ತಾರೆ.

ನಾನು ಮತ್ತು ನನ್ನ ಅಕ್ಕ, ಸಂಜೆಯ ವೇಳೆಗೆ ಒಂದು ಸಣ್ಣ ಡಬ್ಬ ಹವಣಿಸಿಕೊಂಡು, ಸ್ನೇಹಿತರೊಂದಿಗೆ ಅಕ್ಕ-ಪಕ್ಕದ ಮನೆಗಳಿಗೆ ಹೋಗಿ "ರೀ.. ನಿಮ್ಮ ಮನೇಲಿ ಬೊಂಬೆ ಕೂಡ್ಸಿದ್ದೀರಾ.." ಎಂದು ಕೂಗುತ್ತಿದ್ದ ಮಜವನ್ನು ವರ್ಣಿಸಲು ಅಸಾಧ್ಯ. ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು, ಕಜ್ಜಾಯ ಹೀಗೆ ಬಗೆಬಗೆಯ ತಿಂಡಿಗಳನ್ನು ತಯಾರಿಸಿ, ಬೊಂಬೆ ನೋಡಲೆಂದು ಬಂದ ಮಕ್ಕಳಿಗೆ ಬೊಂಬೆ ಬಾಗಿಣ ಕೊಡುವುದು ಒಂದು ವಾಡಿಕೆಯಾಗಿತ್ತು. ಈ ರೀತಿ ಹಲವು ಮನೆಗಳಿಗೆ ಹೋಗಿ ಸಂಗ್ರಹಿಸಿದ ವಿಧವಿಧವಾದ ಬಾಗಿಣವನ್ನು ಒಟ್ಟಿಗೆ ಕೂತು ತಿನ್ನುತ್ತಿದ್ದೆವು.

ಈಗ್ಗೆ, ಸುಮಾರು ಒಂದು ದಶಕದಿಂದ ಈ ಹಬ್ಬಗಳು ಕಣ್ಮರೆಯಾಗುತ್ತಿವೆ. ಬೊಂಬೆಗಳ ಹಬ್ಬವೇ ಅಪರೂಪ ಎಂದರೆ, ಮಕ್ಕಳು ಬೊಂಬೆ ಬಾಗಿಣಕ್ಕೆ ಬರುವ ಮಾತು ದೂರವೇ ಉಳಿಯಿತು. ಆದರೂ, ಕೆಲವೊಂದು ಸಂಪ್ರದಾಯಿಕ ಕುಟುಂಬಗಳು ಈ ಹಬ್ಬವನ್ನು ಬಿಡದೇ ನಡೆಸಿಕೊಂಡು ಬಂದಿರುವುದು ಶ್ಲಾಘನೀಯ. ದಿನದ ಮೂರನೇ ಒಂದು ಭಾಗ ದೂರದರ್ಶನಕ್ಕೋ ಅಥವಾ ಗಣಕಯಂತ್ರಕ್ಕೋ ಮಾರುಹೋಗುತ್ತಿರುವ ಮಕ್ಕಳಿಗೆ ಈ ಹಬ್ಬಗಳ ಬಗ್ಗೆ ಅರಿವು ಮೂಡಿಸುವುದು ಅಗತ್ಯ ಎನಿಸುತ್ತದೆ. ಈ ರೀತಿಯ ವಾಡಿಕೆಗಳು, ಸಂಪ್ರದಾಯಗಳು ಎಲ್ಲಾದರೂ ಕಂಡುಬಂದಲ್ಲಿ, ಮಕ್ಕಳನ್ನು ಕರೆದೊಯ್ಯುವುದರಿಂದಲಾದರೂ ನಮ್ಮ ಮುಂದಿನ ಪೀಳಿಗೆಗೆ ಈ ಹಬ್ಬಗಳ ಬಗ್ಗೆ ಅರಿವು ಮೂಡುವುದೇನೋ! ಎಂದು ಆಶಿಸುತ್ತೇನೆ.

ನನ್ನ ಮನದಲ್ಲಿ ಮೂಡಿದ ಆಲೋಚನೆಗಳನ್ನು ಹಂಚಿಕೊಳ್ಳುವ ಅವಕಾಶ ಮಾಡಿಕೊಟ್ಟಿರುವ ಕಹಳೆ ತಂಡಕ್ಕೆ ಧನ್ಯವಾದಗಳು.

ಲೇಖಕರ ಕಿರುಪರಿಚಯ
ಶ್ರೀ ನಟೇಶ್ ಲಕ್ಷ್ಮಣ್ ರಾವ್

ಮೂಲತಃ ಬೆಂಗಳೂರಿನವರಾದ ಇವರು ಓದಿ, ಬೆಳೆದದ್ದೂ ಸಹ ಬೆಂಗಳೂರಿನಲ್ಲಿಯೇ. ವೃತ್ತಿಯಲ್ಲಿ ಇಂಜಿನಿಯರ್ ಅಗಿರುವ ಇವರು ತಮ್ಮನ್ನು ತಾವು ಒಬ್ಬ 'ಸಾಮಾನ್ಯ ಕನ್ನಡಿಗ' ಎಂದು ಗುರುತಿಸಿಕೊಳ್ಳಲು ಇಚ್ಛಿಸುತ್ತಾರೆ.

ತಮ್ಮ ಮನದಾಳದಿಂದ ಮೂಡಿಬರುವ ಭಾವನೆಗಳಿಗೆ ಪದಗಳಲ್ಲಿ ಜೀವ ತುಂಬಿ, ನಾಜೂಕಾಗಿ ಪೋಣಿಸಿ ಅತ್ಯಂತ ಸುಂದರ ಬರಹಗಳನ್ನು ರಚಿಸುವಲ್ಲಿ ಇವರು ನಿಸ್ಸೀಮರು.

Blog  |  Facebook  |  Twitter

ಭಾನುವಾರ, ನವೆಂಬರ್ 18, 2012

ಕವನಗಳ ಸಂಗ್ರಹ

ಅಮ್ಮ

ನಾ ಕಂಡ ಮೊದಲ ನೋಟ ನೀನಮ್ಮ
ನಾ ಕೇಳಿದ ಮೊದಲ ದನಿ ನಿನ್ನ ನಗುವಮ್ಮ
ನಾನಾಡಿದ ಮೊದಲ ನುಡಿ ನಿನ್ನ ಕರೆದುದಮ್ಮ
ನಾ ಪಡೆದ ಮೊದಲ ಸಿಹಿಮುತ್ತು ನಿನ್ನಿಂದಮ್ಮ
    ನಿನ್ನ ಕರುಳ ಬಳ್ಳಿ ನಾನಮ್ಮ
ಅಮ್ಮ ನಾ ನಿನ್ನ ಕಂದನಮ್ಮ
ನಾ ಕಂಡ ದೇವರು ನೀನಮ್ಮ

ನಿನ್ನ ಕಷ್ಟದಲ್ಲೂ, ನನ್ನ ಸುಖವ ಬಯಸಿ
ನಿನ್ನ ಆಸೆಗಳ ತ್ಯಜಿಸಿ, ನನ್ನ ಏಳಿಗೆಯ ಬಯಸಿ
ವಾತ್ಸಲ್ಯದ ಬೆಚ್ಚನೆಯ ಅಪ್ಪುಗೆಯ ಹೊದಿಸಿ
ಪ್ರೀತಿಯ ಸಾಗರದಲ್ಲಿ ನನ್ನ ಬೆಳೆಸಿ
    ನಿನ್ನ ತ್ಯಾಗಕ್ಕೆ, ಮಮಕಾರಕ್ಕೆ ಸರಿಸಾಟಿ ಯಾರಮ್ಮ
ಅಮ್ಮ ನಾ ನಿನ್ನ ಕಂದನಮ್ಮ
ನಾ ಕಂಡ ದೇವರು ನೀನಮ್ಮ

ನಾ ಹಾದಿತಪ್ಪದೆ ಕಾಪಾಡಿದವಳು ನೀನಮ್ಮ
ನನ್ನ ಏಳಿಗೆಯ ಸರ್ವಪಾಲು ನಿನದಮ್ಮ
ನನ್ನ ಸಾಧನೆಯ ಫಲವು ನಿನ್ನ ಕೃಪೆ ಅಮ್ಮ
ನಾ ಪ್ರತಿ ನಿಮಿಷವು ಜಪಿಸುವ ನಾಮ ನಿನದಮ್ಮ
    ನನ್ನ ಬಾಳ ಭಾಗ್ಯ ನೀನಮ್ಮ
ಅಮ್ಮ ನಾ ನಿನ್ನ ಕಂದನಮ್ಮ
ನಾ ಕಂಡ ದೇವರು ನೀನಮ್ಮ

ಜನನ ಮರಣಗಳ ನಡುವೆ ನಾ ಕಂಡ ಬೆಳಕು ನೀನಮ್ಮ
ನಿನ್ನಂತೆ ನನ್ನ ಪ್ರೀತಿಸಲು ಇನ್ಯಾರಿಗೆ ಸಾಧ್ಯವಮ್ಮ
ನನ್ನ ಮುಪ್ಪಿನಲೂ ಪೂಜಿಸುವ ದೇವರು ನೀನಮ್ಮ
ನನ್ನ ಬದುಕಿನ ಕೊನೆಯ ನುಡಿ ನಿನ್ನ ನಾಮವಮ್ಮ
        ಪ್ರತಿ ಜನುಮದಲ್ಲು ನನ್ನ ಜನನಿಯಾಗಿ ನೀ ಬಾರಮ್ಮ
ಅಮ್ಮ ನಾ ನಿನ್ನ ಕಂದನಮ್ಮ
ನಾ ಕಂಡ ದೇವರು ನೀನಮ್ಮ

- ಮುಕೃಸು
ಲೇಖಕರ ಕಿರುಪರಿಚಯ
ಶ್ರೀ ಸುಧೀಂದ್ರ ಮುತ್ಯ

ಮೂಲತಃ ಬೆಂಗಳೂರಿನವರಾದ ಇವರು ಕಳೆದ ಹತ್ತು ವರ್ಷಗಳಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಕರ್ನಾಟಕದ ಸುವರ್ಣ ಯುಗ ಮತ್ತೆ ಬರಲಿ, ಕನ್ನಡ ಭಾಷೆ ಉತ್ತುಂಗಕ್ಕೆ ಏರಲಿ, ಕನ್ನಡಿಗರು ಸ್ವಾಭಿಮಾನಿಗಳಾಗಿ ಬಾಳಲಿ ಎಂಬುದು ಇವರ ಮನದಾಳದ ಮಾತು.

Blog  |  Facebook  |  Twitter



ಕನ್ನಡವೆ೦ದರೇನು?

ಕಸ್ತೂರಿ ಕನ್ನಡವೆ೦ದರೇನೆ೦ದು ಯಾರಿಗೆ ಗೊತ್ತು?
ಅದನು ಪದಗಳಲಿ ಹಿಡಿದಿಡಲಾಗದು ಯಾವತ್ತೂ
ಕೆಲವರು ಪ್ರಯತ್ನಿಸಿದರು ವಿವರಿಸಲು
ವರ್ಣಿಸುವ ಪದಗಳಿಗಾಗಿ ತಡಕಾಡಿ ಸುಸ್ತಾದರು

ಯಾಕೆ ಗೊತ್ತೆ?
ಇಷ್ಟು ಹೇಳಿದರೂ ತಿಳಿಯದಿರೆ ಮತ್ತೇನು
ಕನ್ನಡ ಕನ್ನಡವೇ!
ಅದನ್ನು ಪದಗಳಲ್ಲಿ ಬಂಧಿಸಿಡುವ ಪದಗಳೇ ಇಲ್ಲ..

ಅಂದರೆ, ಅರ್ಥವಾಯಿತಲ್ಲ
ಕನ್ನಡವೆಂದರೇನೆಂದು?
ಸುಮ್ಮನೆ ಅದರ ಬಗ್ಗೆ ಬರೆದು ಪ್ರಯೋಜನವಿಲ್ಲ
ಏಕೆಂದರೆ, ಅದನು ಬರೆಯಲು ಬೇಕಾದ ಹಾಳೆಗಳೇ ಇಲ್ಲ
ಇದ್ದರೂ ಸಾಕಾಗುವುದಿಲ್ಲ

ಹಾಗಾದರೆ ಗೊತ್ತಾಯಿತಲ್ಲ
ಕನ್ನಡವೆಂದರೇನೆಂದು?
ಗೊತ್ತಿರಬಹುದೇನೊ ಕನ್ನಡದ ಮಹತ್ವ ಬೇರೆಯವರಿಗೆ
ವಿಷಾದವಾಗದೆ ಇರಲಾರದೇ
ಕನ್ನಡದ ಕಸುವು ಕನ್ನಡಿಗರಿಗೆ ಗೊತ್ತಾಗದಿದ್ದರೆ?

- ಸಂತೋಷ್ ಮೂಲಿಮನಿ
ಲೇಖಕರ ಕಿರುಪರಿಚಯ
ಶ್ರೀ ಸಂತೋಷ್ ಮೂಲಿಮನಿ

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಹೊಳೆಆನ್ವೇರಿ ಎಂಬ ಗ್ರಾಮದವರಾದ ಇವರು ಪ್ರಸ್ತುತ ಬೆಂಗಳೂರಿನ ಸಾಫ್ಟ್-ವೇರ್ ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಬಿಡುವಿನ ವೇಳೆಯಲ್ಲಿ ಕವಿಯಾಗುವ ಇವರು ಹವ್ಯಾಸಕ್ಕಾಗಿ ಬರೆದಿರುವ ಕೆಲವು ಕವನಗಳಿಂದ ಮುಂದೊಂದು ದಿನ ಕವನ ಸಂಕಲನವನ್ನು ಹೊರತರಬೇಕೆಂಬ ಬಯಕೆಯನ್ನು ಹೊಂದಿದ್ದಾರೆ.

Blog  |  Facebook  |  Twitter



ಕಣ್ಣಿದ್ದೂ ಕುರಡನಾ ನಾ???

ನಾ ಕಂಡೆ ಬೇಸಿಗೆಯ ಬಂದ ಮಳೆಯ
ತಂಪುಣಿಸಲೆಂದು ಸುಡುಧರೆಯ
ಬಂದಳು ಆ ಗೆಳತಿ ಪ್ರೀತಿಗಾಲಿ ಹೊತ್ತು
ತುಸು ವಿರಮಿಸಲೆಂದು ಈ ಗೆಳೆಯ

ಸಾಂತ್ವನದ ಸಿಂಚನವೋ, ಸುಖವರ್ಣ ಕುಂಚನವೋ
ನೆಮ್ಮದಿ ತಂದಿದೆ, ಅದು ಹೇಗೆಂದು ನಾಕಾಣೆ
ಖಾಲಿಯಿದ್ದ ಹೃದಯದ ಗಲ್ಲಾ ಪೆಟ್ಟಿಗೆಗೆ
ಬೋಣಿಗೆಯು ಇವಳ ನಾಕಾಣೆ

ಪ್ರೀತಿ ಅದೇ ಎಂದೇ ನಾ ತಿಳಿಯೇ
ಆದರೆ ಸ್ನೇಹವದು ನಾ ಅರಿವೆ
ಪ್ರೇಮದ ಕಾವಿಗೆಂದು, ಒಂಟಿಯಾಗಿ ತಿಳಿದು
ಉರಿಸಲಾರೆ ನಾ ಸ್ನೇಹದಾ ಅರಿವೆ

ಸ್ನೇಹ ಪ್ರೇಮಕೆ ಶಿಶು ನಾನು, ನೀ ಹೃದಯದಿ
ಕಾಳಜಿಯ ಹಾಲಿಟ್ಟು ಸಾಕು
ಮರೆಯುವೆ ನಾ ನನ್ನೆಲ್ಲ ನೋವ
ನನ್ನೊಡನೆ ನೀ ಇದ್ದರೆ ಸಾಕು

ಮೊದಲದಿನ ನಾ ನಿನ್ನ ಕಂಡು
ತೆರೆದ ಕಣ್ಣ ಬೇಗ ಮುಚ್ಚಲಿಲ್ಲ
ಅದ ಕಂಡ ನೀ, ಹುಸಿ ನಕ್ಕು
ಪಿಸುಗುಟ್ಟಿದ, ನಾ ಇಂದಿಗೂ ಮರೆತಿಲ್ಲ

ನಿಜ ಗೆಳತಿ, ನಾ ನಿನ್ನ ಮರೆಯಲಾರೆ
ಕೊಚ್ಚಿಕೊಂಡು ಹೋದರೂ ನನ್ನ ಪ್ರೇಮ ಪ್ರವಾಹ
ನೀ ತೋರುವ ಸಿಂಪತಿ, ನಿನ್ನಂದದ ಕೀರುತಿ
ಸುಡುವುದೇ ಎನ್ನ ಹೋಗುವವರೆಗೂ ಜೀವ?

ದಾರಿಯಲಿ ಕಾಳಜಿಯ ಕೊಡೆ ಹಿಡಿದು, ಗೆಳತಿಯಾದೆ ನೀ
ಮಳೆ ಬಂದೀತೆಂದು ನಾ ಮನೆ ಸೇರುವಾಗ
ಬಸ್ಸಿನಲ್ಲಿ ಮುನ್ನುಗ್ಗಿ, ಮೇಲೇರಿ ಜಾಗ ಹಿಡಿದು
ಕೊನೆಗೆ, ಬಿಟ್ಟು ಕೊಟ್ಟೆ ನಿನಗೇ, ಸ್ನೇಹ "ಸೇರು" ಆಗ

ನೀ ಮೆಚ್ಚಿದೆ ನನ್ನ ಅರೆಬೆಂದ ಬರಹಗಳ
ಆದೆನೆಂದೆ "ನಾ ನಿನ್ನ ಅಭಿಮಾನಿ"
ಎತ್ತಲೋ ಜಾರುತ್ತಿದ್ದ, ಆ ತಲೆಯ ತಿರುವಿಟ್ಟ
ಸ್ನೇಹ ದೇವತೆ ನೀ, ನಾ ನಿನಗೆ ಚಿರಋಣಿ

ಗಾಳಿಯ ಗಾನ ತೂಗುವ ನಾರಿಕೇಳದಂತೆ
ತಲೆದೂಗುವೆ ನಾ ನಿನ್ನ ಸ್ನೇಹಕೆ
ಹೃದಯದೊಳಗೆ ಲೇಖನಿಯಿಟ್ಟು ಬರೆದಿರುವೆ
ಆಗದಿರಲಿ ಎಂದಿಗೂ ಭಾಧೆ ಈ ನಮ್ಮ ಸ್ನೇಹಕೆ

- ಚಿನ್ಮಯ ಭಟ್
ಲೇಖಕರ ಕಿರುಪರಿಚಯ
ಶ್ರೀ ಚಿನ್ಮಯ ಭಟ್

ಶಿರಸಿಯ ಸಮೀಪದ ತದ್ದಲಸೆಯ ಹತ್ತಿರದ ಅಗಲಬಾವಿ ಊರಿನವರಾದ ಇವರು ಸಧ್ಯ ಚಿಕ್ಕಮಗಳೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಸಾಹಿತ್ಯದ ಕಡೆಗೆ ಕೊಂಚ ಆಸಕ್ತಿ ಇದೆ ಎನ್ನುವ ಇವರು, ಇದೇ ಆಸಕ್ತಿಯನ್ನು ಹವ್ಯಾಸವಾಗಿಸಿ ಹಲವು ಬರಹಗಳನ್ನು ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ.

Blog  |  Facebook  |  Twitter

ಶನಿವಾರ, ನವೆಂಬರ್ 17, 2012

ಕಾನೂನಿನಲ್ಲಿ ಪ್ರಾಣಿ-ಪಕ್ಷಿಗಳಿಗೆ ಎಷ್ಟಿದೆ ರಕ್ಷಣೆ?

ಪಶು, ಪ್ರಾಣಿ, ಪಕ್ಷಿಯಾದಿ ಸಮಸ್ತ ಜೀವಸಂಕುಲ ಹಾಗೂ ಸಸ್ಯ ಸಮೂಹ - ಇವುಗಳು ಮಾನವನ ಜೀವನಾಡಿ, ರೈತನ ಬೆನ್ನೆಲುಬು, ಸಂವೃದ್ಧ, ಸಶಕ್ತ, ಸ್ವತಂತ್ರ ಬದುಕಿನ ಜೀವಾಳ. ಸಮಸ್ತ ಮಾನವ ಕುಲದ ಆಧಾರ ಸ್ತಂಭ ಹಾಗೂ ಪರಿಸರ ಸಮತೋಲನ ಸಂಜೀವಿಗಳು.

"ಒಂದು ದೇಶದ ನೈತಿಕ ಅಭಿವೃದ್ಧಿಯನ್ನು ಆ ದೇಶವು ಪಶು-ಪ್ರಾಣಿಗಳ ಕಡೆಗೆ ತೋರುವ ನಡತೆಯಿಂದ ನಿರ್ಧರಿಸಬಹುದು" ಎಂದು ವ್ಯಾಖ್ಯಾನಿಸಿದಂತಹ ಮಹಾತ್ಮ ಗಾಂಧಿಯವರ ಮಾತೃಭೂಮಿಯಾದ ಭಾರತದಲ್ಲಿನ ಹಲವು ಕಾನೂನುಗಳು ಪ್ರಾಣಿ-ಪಕ್ಷಿಗಳಿಗೆ ನೀಡುತ್ತಿರುವ ರಕ್ಷಣೆಯ ಬಗೆಗಿನ ಸೂಕ್ಷ್ಮ ಪರಿಚಯ ಇಗೋ ಇಲ್ಲಿದೆ:

ಕರ್ನಾಟಕ ಪ್ರಾಣಿಬಲಿ ಪ್ರತಿಬಂಧ ಕಾಯ್ದೆ – 1959
ಯಾವುದೇ ಪಶುಪಕ್ಷಿಗಳನ್ನು ಬಲಿ ನೀಡುವುದು – "ಪ್ರಾಣಿಬಲಿ" ನೀಡುವುದು ಕಾನೂನು ರೀತ್ಯಾ ಅಕ್ಷಮ್ಯ ಹಾಗೂ ಶಿಕ್ಷಾರ್ಹ ಅಪರಾಧವಾಗಿದೆ. ಬಲಿ ನೀಡುವವರು, ನೆರವಾಗುವವರು, ಭಾಗವಹಿಸುವವರು ಹಾಗೂ ಪೌರೋಹಿತ್ಯ ನಡೆಸುವವರನ್ನು ವಾರೆಂಟ್ ಇಲ್ಲದೆ ಬಂಧಿಸುವ ಅಧಿಕಾರವನ್ನು ಪೋಲೀಸ್ ಅಧಿಕಾರಿಗಳು ಹೊಂದಿರುತ್ತಾರೆ.

ಪ್ರಾಣಿ ಕ್ರೂರತಾ ಪ್ರತಿಬಂಧ ಕಾಯ್ದೆ – 1960
ಯಾವುದೇ ಪ್ರಾಣಿಪಕ್ಷಿಗಳೆಡೆಗೆ ಕ್ರೌರ್ಯದಿಂದ ವರ್ತಿಸುವುದು - ಹಿಂಸಿಸುವುದು, ಬಂಧಿಸುವುದು, ಗಾಯಗೊಳಿಸುವುದು, ಹೊಡೆಯುವುದು, ಅಶಕ್ತ/ಅನಾರೋಗ್ಯ ಪ್ರಾಣಿಗಳಿಂದ ಕೆಲಸ ಮಾಡಿಸುವುದು ಮುಂತಾದ ಕೃತ್ಯಗಳು ಕಾನೂನು ರೀತ್ಯಾ ಅಕ್ಷಮ್ಯ ಹಾಗೂ ಶಿಕ್ಷಾರ್ಹ ಅಪರಾಧವಾಗಿದೆ.

ಕರ್ನಾಟಕ ಪ್ರಾಣಿ ರೋಗಗಳ (ನಿಯಂತ್ರಣ) ಕಾಯ್ದೆ – 1961
ರೋಗೋದ್ರೇಕಗಳನ್ನು ಮತ್ತು ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸುವ ಉದ್ದೇಶದಿಂದ ಸರ್ಕಾರವು ಪ್ರಕಟಣೆ ನೀಡುವುದರ ಮೂಲಕ ಪ್ರಾಣಿಗಳಿಗೆ ಲಸಿಕೆ ಹಾಕುವುದು, ಚಲನ-ವಲನ ನಿಯಂತ್ರಿಸುವುದು, ಸಂತೆ ಮತ್ತು ಜಾತ್ರೆಗಳಲ್ಲಿ ಮಾರಾಟ ನಿಷೇಧಿಸುವ ಅಧಿಕಾರ ಹೊಂದಿದೆ.

ಕರ್ನಾಟಕ ಗೋವಧೆ ಪ್ರತಿಬಂಧ ಮತ್ತು ಜಾನುವಾರು ಪರಿರಕ್ಷಣೆ ಅಧಿನಿಯಮ – 1964
ಈ ಕಾಯ್ದೆಯ ರೀತ್ಯಾ ಹಸುಗಳ, ಕರುಗಳ ಹಾಗೂ ಎಮ್ಮೆಗಳ ವಧೆಯನ್ನು ನಿಷೇಧಿಸಿದೆ. 

ವನ್ಯ ಜೀವಿ ಸಂರಕ್ಷಣಾ ಕಾಯ್ದೆ 1972
ವನ್ಯಜೀವಿಗಳ ಸಂರಕ್ಷಣೆಗೆ ಮೀಸಲಾದ ಈ ಕಾಯ್ದೆಯ ಶೆಡ್ಯೂಲ್ 1, 2 ಮತ್ತು 4 ರ ಅಡಿಯಲ್ಲಿ ಹಾವುಗಳನ್ನು ಸಂರಕ್ಷಿತ ವನ್ಯಜೀವಿಗಳೆಂದು ಘೋಷಿಸಲಾಗಿದೆ. ಹಾವುಗಳನ್ನು ಸ್ವಾಭಾವಿಕ ನೆಲೆಯಿಂದ ಹಿಡಿಯುವುದು, ತಮ್ಮ ಅಧೀನದಲ್ಲಿರಿಸಿಕೊಳ್ಳುವುದು, ಅವುಗಳನ್ನು ಆಟವಾಡಿಸುವುದು, ಭುಜದ ಸುತ್ತಾ ಹಾಕಿಕೊಳ್ಳುವುದು, ಮುಂಗುಸಿ-ಕಾಡುಬೆಕ್ಕುಗಳೊಂದಿಗೆ ಜಗಳವಾಡಿಸುವುದು, ಪೂಜೆಯ ಹೆಸರಿನಲ್ಲಿ ಅರಿಶಿಣ, ಕುಂಕುಮ, ಹಾಲೆರೆದು ಜೀವಹಾನಿ ಮಾಡುವುದೆಲ್ಲವೂ ಕಾನೂನು ರೀತ್ಯಾ ಶಿಕ್ಷಾರ್ಹ ಅಪರಾಧ.

ಜಾನುವಾರು ಸಾಗಾಣಿಕೆ ಅಧಿನಿಯಮ – 1978
ಈ ಅಧಿನಿಯಮವು ಜಾನುವಾರುಗಳ ಸಾಗಾಣಿಕೆ ಸಮಯದಲ್ಲಿ ಪಾಲಿಸಲೇಬೇಕಾದ ರೂಪರೇಖೆಗಳನ್ನು ವಿವರಿಸುತ್ತದೆ.
ಮುಖ್ಯಾಂಶಗಳು:
  1. ಸಾಗಾಣಿಕೆ ವಾಹನದಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇರಬೇಕು.
  2. ಪಶುಗಳನ್ನು ವಾಹನಕ್ಕೆ ಪ್ರಯಾಸರಹಿತವಾಗಿ ತುಂಬುವ-ಇಳಿಸುವ ವ್ಯವಸ್ಥೆ ಇರಬೇಕು.
  3. ಪಶುಗಳನ್ನು ತುಂಬುವ ಮೊದಲು ನೀರು ಮತ್ತು ಆಹಾರವನ್ನು ಸಮರ್ಪಕವಾಗಿ ಪೂರೈಸಿರಬೇಕು.
  4. ಪ್ರಯಾಣದ ಸಂದರ್ಭ ಸಾಕಷ್ಟು ನೀರು, ಆಹಾರದ ದಾಸ್ತಾನು ವಾಹನದಲ್ಲಿ ಇಟ್ಟಿರಬೇಕು.
  5. ಪ್ರತಿ ವ್ಯಾಗನ್ನಿಗೆ ಒಬ್ಬ ಸಹಾಯಕನಿರಬೇಕು.
  6. ಸಾಧ್ಯವಾದಷ್ಟು ಮಟ್ಟಿಗೆ ರಾತ್ರಿಯ ವೇಳೆಯಲ್ಲಿ ಸಾಗಾಟ ಮಾಡಿ ಬೆಳಗಿನ ವೇಳೆಯಲ್ಲಿ ಪ್ರಾಣಿಗಳನ್ನು ಕೆಳಗಿಳಿಸಿ ಆಹಾರ, ನೀರು, ವಿಶ್ರಾಂತಿ ಒದಗಿಸಬೇಕು.
  7. ಪ್ರಾಣಿಗಳು ಪ್ರಯಾಣಿಸುವಾಗ ನೆಗೆಯಬಹುದಾದ ಸಂಭವವಿಲ್ಲದಿದ್ದಲ್ಲಿ ಸಂಕೋಲೆಯಿಂದ ಬಂಧಿಸುವುದಾಗಲಿ, ಕಾಲುಗಳನ್ನು ಕಟ್ಟುವುದಾಗಲಿ ಮಾಡಬಾರದು.

ಭಾರತೀಯ ದಂಡ ಸಂಹಿತೆಯ ಕಲಂ – 428
10 ರೂಪಾಯಿಗಳು ಮತ್ತು ಅದಕ್ಕೂ ಹೆಚ್ಚಿನ ಬೆಲೆಯ ಯಾವುದೇ ಪ್ರಾಣಿಗಳನ್ನು ಕೊಲ್ಲುವುದು, ವಿಷ ನೀಡುವುದು, ಅನುಪಯುಕ್ತಗೊಳಿಸುವುದು, ಅಂಗವಿಕಲಗೊಳಿಸುವುದೇ ಮುಂತಾದ ಕೃತ್ಯಗಳನ್ನೆಸಗುವವರನ್ನು 2 ವರ್ಷಗಳ ಸಜಾ ಅಥವಾ ದಂಡ ಅಥವಾ ಎರಡೂ ಶಿಕ್ಷೆಗಳಿಗೆ ಗುರಿಪಡಿಸಬಹುದಾಗಿದೆ.

ಭಾರತೀಯ ದಂಡ ಸಂಹಿತಿಯ ಕಲಂ – 429
50 ರೂಪಾಯಿಗಳು ಮತ್ತು ಅದಕ್ಕೂ ಹೆಚ್ಚಿನ ಬೆಲೆಯ ಯಾವುದೇ ಪ್ರಾಣಿಗಳನ್ನು ಕೊಲ್ಲುವುದು, ವಿಷ ನೀಡುವುದು, ಅನುಪಯುಕ್ತಗೊಳಿಸುವುದು, ಅಂಗವಿಕಲಗೊಳಿಸುವುದೇ ಮುಂತಾದ ಕೃತ್ಯಗಳನ್ನೆಸಗುವವರನ್ನು 5 ವರ್ಷಗಳ ಸಜಾ ಅಥವಾ ದಂಡ ಅಥವಾ ಎರಡೂ ಶಿಕ್ಷೆಗಳಿಗೆ ಗುರಿಪಡಿಸಬಹುದಾಗಿದೆ.

(ಸೂಚನೆ: ಈ ಮೇಲಿನ ಎರಡೂ ಕಲಂಗಳಲ್ಲಿ "ಪ್ರಾಣಿಗಳು" ಎಂದರೆ ಮನುಷ್ಯನ ಹೊರತುಪಡಿಸಿ ಉಳಿದ ಎಲ್ಲಾ ಜೀವಜಂತುಗಳು ಎಂದು ಅರ್ಥೈಸಲಾಗಿದೆ)

ಮೇಲ್ಕಂಡ ಎಲ್ಲಾ ನಿಯಮಗಳೊಂದಿಗೆ ಪ್ರಾಣಿಗಳ ಮೇಲೆ ಪ್ರಯೋಗ ನಿಯಂತ್ರಣ ಮತ್ತು ಪರಿವೀಕ್ಷಣೆ ಕಾಯ್ದೆ ಹಾಗೂ ಇಂಡಿಯನ್ ಸ್ಟ್ಯಾಂಡರ್ಡ್ ಇನ್ಸ್ಟಿಟ್ಯೂಟಿನ ಮಾರ್ಗಸೂಚಿಗಳೂ ಸಹ ಚಾಲ್ತಿಯಲ್ಲಿವೆ.

ಬಾಲಂಗೋಚಿ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಕಾನೂನುಗಳು, ಸುಪ್ರೀಂಕೋರ್ಟ್, ಹೈಕೋರ್ಟ್ ಮುಂತಾದ ನ್ಯಾಯಾಲಯಗಳ ಆದೇಶಗಳಿದ್ದರೂ ಸಹ ಲಕ್ಷಾಂತರ ಮೂಕ, ಮುಗ್ಧ, ನಿರಪರಾಧಿ ಪಶು, ಪ್ರಾಣಿ, ಪಕ್ಷಿಯಾದಿ ಜೀವಸಂಕುಲದ ವಿರುದ್ದ ನಿರಂತರವಾಗಿ ನಡೆಯುತ್ತಿರುವ ಮಾನವನ ಅಮಾನುಷ ಕೃತ್ಯಗಳಿಗೆ ಅಂತ್ಯ ಎಲ್ಲಿ?.. ಎಂದು??.. ಯಾರಿಂದ???..

ಲೇಖಕರ ಕಿರುಪರಿಚಯ
ಡಾ. ಶಿವಕುಮಾರ್

ಮೈಸೂರು ಮೂಲದವರಾದ ಇವರು ಪಶುವೈದ್ಯಕೀಯ ವೃತ್ತಿಯನ್ನು ಅವಲಂಬಿಸಿದ್ದು, ಓದು ಬರಹಗಳೆಡೆಗೆ ಹೆಚ್ಚು ಆಸಕ್ತಿಯುಳ್ಳವರಾಗಿರುತ್ತಾರೆ. ವೃತ್ತಿಪರ ಲೇಖನಗಳು ಮತ್ತು ತಾಂತ್ರಿಕ ಪುಸ್ತಕಗಳ ಬೃಹತ್ ಸಂಗ್ರಹ ಇವರಲ್ಲಿದೆ.

ದಿನಪತ್ರಿಕೆಗಳಲ್ಲಿ ಜನಪ್ರಿಯ ಲೇಖನಗಳ ಮೂಲಕ ಸಾಮಾನ್ಯ ಜನರಲ್ಲಿ ಪಶು ಪ್ರಾಣಿಗಳೆಡೆ ಒಲವು ಮೂಡಿಸುವುದು ಇವರ ಅತಿಪ್ರಿಯವಾದ ಹವ್ಯಾಸ. ಅಲ್ಲದೇ, ಚುಟುಕಾದ ಅರ್ಥಗರ್ಭಿತವಾದ ಬರಹಗಳ ಮೂಲಕ ಜನರ ಗಮನ ಸೆಳೆಯುವಲ್ಲಿ ಇವರು ನಿರಂತರ ಪ್ರಯತ್ನ ನಡೆಸಿದ್ದಾರೆ.

Blog  |  Facebook  |  Twitter

ಶುಕ್ರವಾರ, ನವೆಂಬರ್ 16, 2012

ಕನ್ನಡ ನಾಡಿನ ಸ್ವಾಭಿಮಾನಿ ಕಿಡಿ - ಸಂಗೊಳ್ಳಿ ರಾಯಣ್ಣ

ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರನ್ನು ಬ್ರಿಟೀಷ್ ಸರ್ಕಾರ ಗಲ್ಲಿಗೇರಿಸಿದ್ದು 1931 ರಲ್ಲಿ; ಇದಕ್ಕೆ ಸರಿಯಾಗಿ ನೂರು ವರ್ಷಗಳ ಹಿಂದೆಯೇ ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿತ್ತು. "ಸತ್ತ ನಂತರ ಇದೇ ನಾಡಿನಲ್ಲಿ ಹುಟ್ಟಿ, ಬ್ರಿಟೀಷರ ವಿರುದ್ಧ ಹೊರಾಡುವುದು ನನ್ನ ಅಂತಿಮ ಆಸೆ.." ಎಂದು ರಾಯಣ್ಣ ಹೇಳಿಕೊಂಡಿದ್ದ. ರಾಯಣ್ಣ ಬ್ರಿಟೀಷರ ವಿರುದ್ದ ಮೊದಲು ಬಂಡೆದ್ದ ಕಿತ್ತೂರು ಹೋರಾಟಗಾರರ ಪ್ರತಿನಿಧಿ. ಸ್ವಾಭಿಮಾನದ, ನಾಡಪ್ರೇಮದ ಹೋರಾಟಕ್ಕೆ ರಾಯಣ್ಣನಿಗೆ ರಾಯಣ್ಣನೇ ಸಾಟಿ. ಆರು ಕೋಟಿ ಕನ್ನಡಿಗರು ಹೆಮ್ಮಯಿಂದ ಅಭಿಮಾನ ಪಡುವ ಆದರ್ಶ ನಾಯಕ ಸಂಗೊಳ್ಳಿ ರಾಯಣ್ಣ.

ರಾಯಣ್ಣ ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನಲ್ಲಿರುವ ಗಣೇಶವಾಡಿ ಗ್ರಾಮದಲ್ಲಿ. ಇದು ರಾಯಣ್ಣನ ತಾಯಿ ಕೆಂಚವ್ವನ ತವರೂರು. ಸಂಗೊಳ್ಳಿಯ ಓಲೇಕಾರ ದೊಡ್ಡ ಭರಮಪ್ಪ ರಾಯಣ್ಣನ ತಂದೆ, ಈತನ ತಾತ ರಾಘಪ್ಪ ವೀರಪ್ಪ ದೇಸಾಯಿ, 'ಸಾವಿರ ಒಂಟೆ ಸರದಾರ' ಎಂದೇ ಬಿರುದಾಂಕಿತರಾದವರು. ಸಹಜವಾಗಿಯೇ ರಾಯಣ್ಣನಲ್ಲೂ ಶೌರ್ಯ, ಸಾಹಸೀ ಪ್ರವೃತ್ತಿ ರಕ್ತಗತವಾಗಿಯೇ ಹರಿದು ಬಂದವು.

ಬ್ರಿಟೀಷ್ ಸಾಮ್ರಾಜ್ಯಶಾಹಿ ವಿರುದ್ಧ ದಂಗೆ ಎದ್ದಿದ ಕಿತ್ತೂರಿನಲ್ಲಿ 'ಬ್ರಿಟೀಷರೆ.. ನಾಡು ಬಿಟ್ಟು ತೊಲಗಿ' ಎಂಬ ರಣ ಘೋಷಣೆ ಅನುರಣವ ತುಂಬಿಕೊಂಡಿತ್ತು. ಚೆನ್ನಮ್ಮನ ಬೆನ್ನ ಹಿಂದೆ ಕೆಚ್ಚೆದೆಯ ಕಲಿಗಳ ಪಡೆಯೇ ಸಮರಕ್ಕೆ ಸಜ್ಜುಗೊಂಡಿತ್ತು. ಆಗಿನ್ನೂ ರಾಯಣ್ಣನಿಗೆ 29 ರ ಹರೆಯ. ಮನೆಗೊಬ್ಬನಂತೆ ಐದು ಸಹಸ್ರಕ್ಕೂ ಮಿಗಿಲಾದ ಕೆಚ್ಚೆದೆಯ ಕಲಿಗಳು ಸಮರ ಸೇನೆಯಲ್ಲಿ ಸಂಗಮಗೊಂಡು ಕತ್ತಿ ಹಿಡಿಯುತ್ತಿದ್ದರು. ಈ ವೀರಸೈನಿಕರಲ್ಲಿ ರಾಯಣ್ಣನೂ ಒಬ್ಬ. ಈತ ಯೋಧ ಮಾತ್ರ ಆಗಿರದೆ ರೈತನೂ ಆಗಿದ್ದ; ಸಂಗೊಳ್ಳಿ ಎಂಬ ಗ್ರಾಮದ ಕಾವಲುಗಾರನೂ ಹೌದು.

ಕಿತ್ತೂರು ಶ್ರೀಮಂತವಾಗಿತ್ತು. ಇಲ್ಲಿ ‍ದವಸಧಾನ್ಯ ಸೇರಿದಂತೆ ಪ್ರತಿಯೊಂದೂ ಸಮೃದ್ಧವಾಗಿದ್ದವು. ಸಹಜವಾಗಿಯೇ ಬ್ರಿಟೀಷರ ಕಣ್ಣು ಇತ್ತ ನೆಟ್ಟಿತ್ತು. ಕಪ್ಪ ಕೊಡಿರೆಂಬ ಆಜ್ಞೆಯೂ ಹೊರಡಿಸಿತ್ತು. ಪ್ರತಿಯಾಗಿ ಚೆನ್ನಮ್ಮ ಹೆಬ್ಬುಲಿಯಂತೆ ಆರ್ಭಟಿಸಿ ಸಮರದ ಎಚ್ಚರಿಕೆ ಗಂಟೆ ಬಾರಿಸಿದಳು. ಬ್ರಿಟೀಷ್ ಅಧಿಕಾರಿ ದಂಡಿನೊಂದಿಗೆ ಕಿತ್ತೊರಿನ ಮೇಲೆ ದಾಳಿಯಿಟ್ಟ ಪರಂಗಿಗಳ ದೌರ್ಜನ್ಯಕ್ಕೆ ಸೆಡ್ಡು ಹೊಡೆದು ಸಮರ ನಡೆಸಿದ ಕಿತ್ತೊರಿನ ಕಲಿ ರಾಯಣ್ಣ, ಬ್ರಿಟೀಷ್ ಅಧಿಕಾರಿಯನ್ನು ಬಲಿತೆಗೆದುಕೊಂಡು ಸಾಹಸಿಯಾಗಿ ಹೊರಹೊಮ್ಮಿದ. ವಿಜಯದ ಪತಾಕೆ ಹಾರಿಸಿದ.

ಆದರೆ ಬ್ರಿಟೀಷರು ಇಷ್ಟಕ್ಕೆ ಸುಮ್ಮನಾಗಲಿಲ್ಲ,  ಮತ್ತೊಮ್ಮೆ ದಂಡೆತ್ತಿ ಬಂದರು. ತಮ್ಮ ಕುತಂತ್ರ ನೀತಿಯಿಂದಾಗಿ, ನಾಡದ್ರೋಹಿಗಳ ಸಹಾಯದಿಂದಾಗಿ ಜಯ ಸಾಧಿಸಿ ಸೈನಿಕರನ್ನೆಲ್ಲಾ ಬಂಧಿಸಿ ಧಾರವಾಡದ ಸೆರೆಮೆನೆಗೆ ತಳ್ಳಿದರು. ಆಗ 1826 ರ  ಸಮಯ, ಕಿತ್ತೂರು ರಾಣಿ ಚೆನ್ನಮ್ಮ ಬೈಲಹೊಂಗಲದಲ್ಲಿ ಸೆರೆಯಾದಳು. ಬ್ರಿಟೀಷರು ಬಂಧಿತ ಕಿತ್ತೂರಿನ ಸೈನಿಕರನ್ನೆಲ್ಲ ಸಾರ್ವತ್ರಿಕ ಕ್ಷಮೆ ನೀಡಿ ಬಂಧಮುಕ್ತಗೊಳಿಸಿ ಎಚ್ಚರಿಕೆಯ ಸಂದೇಶವನ್ನು ನೀಡಿದ್ದರು. ಸ್ವಗ್ರಾಮಕ್ಕೆ ಮರಳಿದ ರಾಯಣ್ಣ ನಾಡಿನ ಜನರ ಮೇಲೆ ಪರಂಗಿಗಳ ದೌರ್ಜನ್ಯ ಕಂಡು ಕುಂದುಹೋಗುತ್ತಿದ್ದ. ಬಡಜನರ ಮೇಲೆ ಭೂಕಂದಾಯ ಹೇರಿ ಅಮಾನವೀಯವಾಗಿ ವಸೂಲಿ ಮಾಡುತ್ತಿದ್ದ ಬ್ರಿಟೀಷರ ದಬ್ಬಾಳಿಕೆ, ಭೂಕಬಳಿಕೆ, ಜಮೀನ್ದಾರಿಕೆಯ ಅಮಲು, ಜನತೆಯನ್ನು ಹಣಿಯಲು ರೂಪಿಸುತ್ತಿದ್ದ ಷಡ್ಯಂತ್ರಗಳು ರಾಯಣ್ಣನೊಳಗಿದ್ದ ಹೋರಾಟಗಾರ, ಕ್ರಾಂತಿಕಾರಿಯನ್ನು ಬಡಿದೆಬ್ಬಿಸಿ ಹೋರಾಟದ ಅಖಾಡಕ್ಕೆ ಇಳಿಯಲು ಪ್ರೇರೇಪಿಸಿದವು.

ಬೈಲಹೊಂಗಲದಲ್ಲಿ ಸೆರೆಯಾಗಿದ್ದ ರಾಣಿ ಚೆನ್ನಮ್ಮನನ್ನು ಸಂತನಂತೆ ವೇಷ ಮರೆಸಿಕೊಂಡು ಹೋಗಿ ಮಾತುಕತೆ ನಡೆಸಿದ ಮೇಲಂತೂ ನಾಡಿನ ದುರ್ಗತಿ, ಪರಂಗಿಗಳ ದಬ್ಬಾಳಿಕೆ ಮತ್ತು ಚೆನ್ನಮ್ಮನ ಕೆಚ್ಚುತನದ ಅರಿವಾಗಿ ರಾಯಣ್ಣನಲ್ಲಿ ಹೋರಾಡುವ ಕಿಚ್ಚು ಹತ್ತಿಕೊಂಡಿತು. ಕಿತ್ತೂರನ್ನು  ಆವರಿಸಿಕೊಂಡಿದ್ದ ಸಾಮ್ರಜ್ಯಶಾಹಿಗಳನ್ನು ಅಳಿಸಿ, ಜನಪರ ಆಡಳಿತ ಸ್ಥಾಪಿಸಲು ಪಣ ತೊಟ್ಟು ಕಂಕಣಬದ್ಧನಾದ. ರಾಣಿ ಚೆನ್ನಮನನ್ನು ಬಂಧಮುಕ್ತಗೊಳಿಸಿ ಸ್ವತಂತ್ರ ಸ್ವಾಭಿಮಾನದ ಪತಾಕೆ ಹಾರಿಸಲು ರಣ ಕಹಳೆ ಮೊಳಗಿಸಿದ. ಸರ್ಕಾರಿ ಕಛೇರಿಗೆ ಬೆಂಕಿ ಹಚ್ಚುವ ಮೂಲಕ ಹೋರಾಟದ ಮೊದಲ ಕಿಡಿ ಹಾರಿಸಿದ ರಾಯಣ್ಣನೊಂದಿಗೆ ಆಗ ನೂರೇ ನೂರು ಜನರ ಸ್ವಾಭಿಮಾನಿ ಪಡೆಯಿತ್ತು. ಬರಬರುತ್ತಾ ರಾಯಣ್ಣನ ಪಡೆ ದೊಡ್ಡದಾಗುತ್ತಾ ಹೋಯಿತು. ಬಡವರು, ನೊಂದವರು, ಸ್ವಾಭಿಮಾನಿಗಳು, ಸ್ವಾತಂತ್ರ್ಯ ಅಪೇಕ್ಷಿಗಳು ರಾಯಣ್ಣನ ಜೊತೆಗೂಡಿದರು.

ಸಾಮಾನ್ಯ ಜನರಲ್ಲೂ ರಾಯಣ್ಣ ಸ್ವಾತಂತ್ರ್ಯದ ಕಿಚ್ಚು ಹಚ್ಚಿಸಿದ, ಸ್ವಾಭಿಮಾನದ ದೀಪ ಬೆಳಗಿಸಿದ, ಶಸ್ತ್ರ ಸಜ್ಜಿತರನ್ನಾಗಿಸಿ ಹೋರಾಟದ ರಣಭೂಮಿಗೆ ಧುಮುಕಿದ ಅಪ್ಪಟ ನಾಡಪ್ರೇಮಿ ರಾಯಣ್ಣ. ಬೆಳಗಾವಿ, ಧಾರವಾಡ, ಉತ್ತರಕನ್ನಡ ಜಿಲ್ಲೆಗಳನ್ನು ಒಳಗೊಂಡಿದ್ದ ಕಿತ್ತೊರಿನ ವಿಮುಕ್ತಿಗೆ ರಾಯಣ್ಣ ದೊಡ್ಡದೊಂದು ಸಂಘರ್ಷವನ್ನೇ ನಡೆಸಿದ. ಅಷ್ಟೇ ಅಲ್ಲ, ಬಡಜನರ, ದೀನ ದಲಿತರ ಪರವಾಗಿ ನಿಂತು, ಕುಟಿಲ ನೀತಿಗಳಿಂದ ಜನತೆಯನ್ನು ಹಿಂಸಿಸುತ್ತಿದ್ದ ಬ್ರಿಟೀಷರನ್ನು ಕಾಲ ಕಾಲಕ್ಕೆ ಸದೆಬಡಿಯುತ್ತಲೇ ಬಂದ.

ಹೋರಾಟದ ಹೆಸರಿನಲ್ಲಿ ಎಂದೂ ರಾಯಣ್ಣ ಶೋಷಣೆ ಮಾಡುವುದನ್ನು ಸಹಿಸುತ್ತಿರಲಿಲ್ಲ, ಎಂದಿಗೂ ಕೊಳ್ಳೆಹೊಡೆಯಲಿಲ್ಲ. ಸರ್ಕಾರಿ ಚಾಕರಿಯನ್ನು ಧಿಕ್ಕರಿಸಿ, ಹೋರಾಟಕ್ಕೆ ಅಣಿಯಾದ. ತನ್ನಂತೆಯೇ ವೀರ ಯುವ ಪಡೆಯನ್ನು ಹುರಿಗೊಳಿಸಿದ. ಶಿಸ್ತಿನ ಚೌಕಟ್ಟು ವಿಧಿಸಿದ. ನಾನಾ ಯುದ್ಧತಂತ್ರಗಳನ್ನು ಪರಿಚಯಿಸಿದ. ನಿಜ ಅರ್ಥದಲ್ಲಿ ಓರ್ವ ಸಮರ್ಥ ಜನನಾಯಕನಾಗಿ ರಾಯಣ್ಣ ಹೊರಹೊಮ್ಮಿದ.

ಹೋರಾಟದ ಸಂಧರ್ಭದಲ್ಲೇ ರಾಣಿ ಚೆನ್ನಮ ಅಸುನೀಗಿದಳು. ಮತ್ತದೇ ಸಂತನ ವೇಷ ತೊಟ್ಟು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಸ್ವಾತಂತ್ರ್ಯ ಪ್ರಾಪ್ತಿಯ ದೀಕ್ಷೆ ತೊಟ್ಟ ರಾಯಣ್ಣ ರಾಜನಿಷ್ಠೆ ಮಾತ್ರವಲ್ಲದೆ ಪ್ರಜಾನಿಷ್ಠನಾಗಿ, ಧ್ಯೇಯನಿಷ್ಠನಾಗಿ ಕನ್ನಡ ನಾಡಿನ ಸ್ಪೂರ್ತಿಯ ಸೆಲೆಯಾಗಿದ್ದ.

ಸಹಜವಾಗಿಯೇ ಪರಂಗಿಗಳು ರಾಯಣ್ಣನನ್ನು ಸೆದೆಬಡಿಯಲು ಮುಂದಾದರು. ಇನ್ನಿಲ್ಲದ ಹರಸಾಹಸ ನಡೆಸಿದರು. ಆದರೆ ಸಾಮಾನ್ಯ ಜನರು ಯಾರೂ ಇದಕ್ಕೆ ಬಗ್ಗದೆ ರಾಯಣ್ಣನ ಬೆನ್ನ ಹಿಂದೆ ನಿಂತು ಹೋರಾಟಕ್ಕೆ ಇಂಬು ನೀಡುತ್ತಿದ್ದರು. ಇದು ರಾಯಣ್ಣನಿಗಿದ್ದ ಜನಾನುರಾಗದ ಧ್ಯೋತಕ.

ಆದರೆ, ಕಾಲ ಕಳೆದಂತೆ ದುಷ್ಟಬುದ್ಧಿಗಳು ತಮ್ಮ ಚಾಲಾಕು ತೋರಿಸತೊಡಗಿದರು. ಪರಂಗಿಗಳ ಆಮಿಷಕ್ಕೆ ಬಲಿಯಾಗಿ ನಾಡದ್ರೋಹವೆಸಗಲು ಮುಂದಾದರು. ಹೆಜ್ಜೆಗೆ ಹೆಜ್ಜೆ ಹಾಕುವುದಾಗಿ ಹೇಳಿ ಯುದ್ಧದ ಸಂದರ್ಭದಲ್ಲಿ ಪಲಾಯನಗೈದು ರಾಯಣ್ಣನ ಬಂಧನಕ್ಕೆ ಕಾರಣಕರ್ತರಾದರು. ರಾಯಣ್ಣನೊಂದಿಗೆ ಈತನ ಧೀರ ಪಡೆಯ ವೀರರೂ ಸೆರೆಸಿಕ್ಕರು.

ಕಡೆಯ ವಿಚಾರಣೆಯ ನಾಟಕ ನೆಡೆದು 1831 ರ ಜನವರಿ 26 ರಂದು ರಾಯಣ್ಣನನ್ನು ಆತನ ಆಸೆಯಂತೆಯೇ ನಂದಗಡದಲ್ಲಿ ನೇಣಿಗೇರಿಸಲಾಯಿತು. ಇವನೊಂದಿಗೆ ಅಪಾರ ಧೀರರುಗಳೂ ನೇಣಿಗೆ ಕೊರಳೊಡ್ಡಿದರು. ಆಗಸ್ಟ್ 15 ರಾಯಣ್ಣ ಹುಟ್ಟಿದ ದಿನವಾದರೆ, ಜನವರಿ 26 ರಾಯಣ್ಣ ಗಲ್ಲಿಗೇರಿದ ದಿನ. 119 ವರ್ಷಗಳ ಬಳಿಕ ಅದೇ ದಿನದಂದು ಭಾರತ ಗಣರಾಜ್ಯವಾಯಿತು, ಬ್ರಿಟೀಷರು ಭಾರತ ಬಿಟ್ಟು ತೊಲಗಿದ್ದು ಅಗಸ್ಟ್ 15; ರಾಯಣ್ಣನ ಜನ್ಮದಿನವೂ ಅದೇ. ಇದು ನಿಜಕ್ಕೂ ಕಾಕತಾಳೀಯ!

ಸಂಗೊಳ್ಳಿ ರಾಯಣ್ಣನ ಬಲಿದಾನವಾಗಿ ಸರಿಯಾಗಿ 181 ವರ್ಷಗಳೇ ಸಂದಿವೆ. ರಾಯಣ್ಣನ ಕೆಚ್ಚೆದೆಯ ಹೋರಾಟ, ಸ್ವಾಭಿಮಾನ,  ಸಂಘಟನೆ, ಆದರ್ಶ ಇವೆಲ್ಲವೂ ಇಂದಿನ ಕನ್ನಡಿಗರಿಗೆ ಅಕ್ಷರಶಃ ಸ್ಪೂರ್ತಿದಾಯಕವಾದುವು.

|| ಜೈ ಕರ್ನಾಟಕ  || ಜೈ ಭುವನೇಶ್ವರಿ ||

ಲೇಖಕರ ಕಿರುಪರಿಚಯ
ಶ್ರೀ ಸಂದೇಶ್ ತೆಕ್ಕಟ್ಟೆ

ಇವರು ಹುಟ್ಟಿದ್ದು ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ತೆಕ್ಕಟ್ಟೆ ಎಂಬಲ್ಲಿ. ಪ್ರಸ್ತುತ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಮೇಲ್ವಿಚಾರಕರಾಗಿ ವೃತ್ತಿ ನಿರ್ವಹಿಸುತ್ತಿದ್ದಾರೆ.

ಯಕ್ಷಗಾನ ನೋಡುವುದು, ಸಂಗೀತ ಕೇಳುವುದು, ಕನ್ನಡ ಲೇಖನಗಳನ್ನು ಓದುವುದು ಹಾಗೂ ಬರೆಯುವುದು ಇವರ ಹವ್ಯಾಸಗಳು. ಅಲ್ಲದೇ, ಇವರು ಕ್ರಿಕೆಟ್ ಕ್ರೀಡೆಯ ಕಟ್ಟಾ ಅಭಿಮಾನಿ ಕೂಡ.

Blog  |  Facebook  |  Twitter

ಗುರುವಾರ, ನವೆಂಬರ್ 15, 2012

ಸಾಮಾಜಿಕ ಜಾಲತಾಣಗಳಲ್ಲಿ ಸುರಕ್ಷತೆಯ ಕೋನ

ಅಮಾಂಡಾ ಟಾಡ್ ಇನ್ನೂ ಹದಿಹರೆಯಕ್ಕೆ ಕಾಲಿಡುತ್ತಿದ್ದ ಯುವತಿ. ಆದರೆ, ಫೇ‌ಸ್ ಬುಕ್‌ನಲ್ಲಿ ಆದ ಗಂಡಾಂತರಗಳಿಂದಾಗಿ ಆಕೆಯು ಆತ್ಮಹತ್ಯೆ ಮಾಡಿಕೊಂಡ ಅನಾಹುತವಾಯಿತು. ಕಾರಣವಿಷ್ಟೆ, ಪಾಶ್ಚಾತ್ಯ ಸಂಸ್ಕೃತಿಯವಳಾಗಿದ್ದ ಆಕೆ ತನ್ನ ವೈಯುಕ್ತಿಕ ವಿಚಾರಗಳಲ್ಲಿ ಬಹಳಷ್ಟನ್ನು ಈ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಳು. ಇದರಿಂದಾಗಿ, ಆಕೆಗೆ ಹಲವು ಗೆಳೆಯರ ಪರಿಚಯವೇನೋ ಆಯಿತು ಆದರೆ, ಆಕೆ ವೆಬ್‌ಕ್ಯಾಮರಾದಲ್ಲಿಯೂ ಈ ರೀತಿ ಪರಿಚಯಗೊಂಡ ಹಲವು ಗೆಳೆಯರ ನಡುವೆ ಮಾಡುತ್ತಿದ್ದ ಮಾತುಕತೆಗಳು ಅವಳಿಗೇ ಅರಿವಿಲ್ಲದೆ, ಆಕೆಯ ಬದುಕಿಗೆ ಮುಳ್ಳಾಗತೊಡಗಿದವು. ಆಕೆಯ ಕೆಲವು ಛಾಯಾಚಿತ್ರಗಳನ್ನೇ ಬಳಸಿಕೊಂಡು, ಆಕೆಯದೇ ನಕಲೀ ಖಾತೆಯೊಂದನ್ನು ಈ ಜಾಲತಾಣದಲ್ಲೇ ಒಬ್ಬಾತ ತೆಗೆದ. ಅಲ್ಲಿ ಆಕೆಯ ಬಗ್ಗೆ ಬರೆದದ್ದು ಅತೀ ಅವಹೇಳನಕಾರಿ ಬರಹಗಳು, ಜೊತೆಗೆ ಆಗಾಗ ಫೋನಿನಲ್ಲಿಯೂ ಬೆದರಿಕೆಗಳು. ಮುಗ್ಧತೆ ಹಾಗೂ ಹರೆಯ ಇವೆರಡರ ಮಿಶ್ರಣದ ಆ ಪರಿವರ್ತನೆಯ ವಯಸ್ಸಿನಲ್ಲಿದ್ದ ಆಕೆಗೆ, ತನಗೇನು ಆಗುತ್ತಿದೆ ಎನುವುದು ತಿಳಿಯುವುದಕ್ಕೆ ಮೊದಲೇ ಇದ್ದ ಎಲ್ಲ ಸ್ನೇಹಿತರೂ ಒಬ್ಬೊಬ್ಬರಾಗಿ ದೂರಾದರು. ಹೊಸ ಶಾಲೆಯಲ್ಲಿ ದಾಖಲಾದರೂ, ಅಲ್ಲಿಯೂ ಕೆಲವರು ಗುಂಪುಗಟ್ಟಿ ಬೆದರಿಕೆ ಹಾಕಿದರು, ಇನ್ನು ಹಲವರು ಹೊಡೆಯುವುದಕ್ಕೆ ಮುಂದಾದರು. ಇವೆಲ್ಲದರಿಂದ ಬಸವಳಿದ ಆಕೆ ತನ್ನ ಎಲ್ಲ ಕತೆಯನ್ನು ಒಂದು ವಿಡಿಯೋ ಮಾಡಿ, ಅಂತರ್ಜಾಲದಲ್ಲಿ ಬಿತ್ತರಿಸಿ, ತಾನು ಆತ್ಮಹತ್ಯೆ ಮಾಡಿಕೊಂಡಳು. ಈಗ ಆಕೆಯ ಹೆತ್ತಮ್ಮ, ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳುವುದಕ್ಕೆ ಸಹಾಯಕರನ್ನು ಅರಸುತ್ತಿದ್ದಾಳೆ.

ಮೇಲೆ ಕಂಡ ಘಟನೆ ತೀರಾ ವಿಶೇಷವೇನಲ್ಲ. ಪಾಶ್ಚಾತ್ಯ ಸಂಸ್ಕೃತಿಯನ್ನು ತೀವ್ರವಾಗಿ ಅನುಕರಣೆ ಮಾಡ ಹೊರಟಿರುವ ನಮ್ಮ ಯುವಪೀಳಿಗೆಯೂ ಇಂತಹ ಆಘಾತಕಾರಿ ಪರಿಸ್ಥಿತಿಗಳಿಗೆ ಒಂದಲ್ಲಾ ಒಂದು ದಿನ ಒಳಗಾಗಬಹುದು. ತಮ್ಮ ಹದಿಹರೆಯದ ಮಗಳೋ, ಮಗನೋ ಕಂಪ್ಯೂಟರನ್ನು ಉಪಯೋಗಿಸುವುದನ್ನು ಕಂಡು ಖುಷಿಪಡುವ ಪೋಷಕರು, ಇತ್ತೀಚೆಗೆ ಸರ್ವೇಸಾಮಾನ್ಯವಾದ ಸಾಮಾಜಿಕ ಜಾಲತಾಣಗಳಲ್ಲಿ ಒದಗಬಹುದಾದ ಅಸುರಕ್ಷತೆಯ ಬಗ್ಗೆ ಗಮನಹರಿಸುವುದನ್ನು ಮರೆತಿರುತ್ತಾರೆ.

ಸಾಮಾಜಿಕ ಜಾಲತಾಣಗಳು ವಿಶಿಷ್ಟ ಅಂತರ್ಜಾಲ ಸೇವೆಯಾಗಿದ್ದು, ತನ್ನ ಮಾಧ್ಯಮದ ಮೂಲಕ ಬಳಕೆದಾರರಲ್ಲಿ ಸಾಮಾಜಿಕ ಜಾಲ ಅಥವಾ ಸಂಬಂಧಗಳನ್ನು ಬೆಸೆದು, ಅವರು ತಮ್ಮ ನಿಜ ನೀವನದ ಆಗುಹೋಗುಗಳು, ಆಸಕ್ತಿಗಳು, ಚಟುವಟಿಕೆಗಳು, ವಿಶೇಷವೆನಿಸುವ ವಿಚಾರಗಳು, ಹಲವು ಹಿನ್ನೆಲೆಗಳು, ಇತ್ಯಾದಿಗಳನ್ನು ಇತರೆ ಬಳಕೆದಾರರೊಂದಿಗೆ ಜರೂರಾಗಿ ಹಂಚಿಕೊಳ್ಳಲು ಅನುವುಮಾಡಿಕೊಡುತ್ತವೆ. Facebook, Google+ ಮತ್ತು Twitter ಪ್ರಪಂಚದಾದ್ಯಂತ ಪ್ರಸಿದ್ಧಿ ಪಡೆದಿರುವ ಸಾಮಾಜಿಕ ಜಾಲತಾಣಗಳು. Orkut, LinkedIn, hi5 ಇತರೆ ಉದಾಹರಣೆಗಳು. ಭಾರತದ ಅಂತರ್ಜಾಲ ಮಾಧ್ಯಮದಲ್ಲಿ ಕಳೆದ ದಶಕದಲ್ಲಾದ ಕ್ರಾಂತಿಯೆನ್ನಬಹುದಾದ ಪ್ರಗತಿಯಿಂದಾಗಿ ಹಾಗೂ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಇಂದು ಈ ಎಲ್ಲ ಸಾಮಾಜಿಕ ತಾಣಗಳು ವಯೋಮಿತಿಯ ಎಲ್ಲೆ ಮೀರಿ ಪ್ರತಿಯೊಬ್ಬರ ಬೆರಳ ತುದಿಗಳನ್ನು ತಲುಪಿವೆ.

ಈ ಎಲ್ಲಾ ತಾಣಗಳಲ್ಲಿಯೂ ಯಾರು ಸೇರಬಹುದು, ಯಾರು ಸೇರಬಾರದು ಎಂಬುದರ ವಯೋಮಿತಿ ಇರುತ್ತದೆ ಎಂಬುವುದನ್ನೇ ಬಹಳಷ್ಟು ಮಂದಿ ತಿಳಿದಿರುವುದಿಲ್ಲ. ನಮ್ಮವರು ತಮ್ಮವರು ಎಲ್ಲರೂ ಅಲ್ಲಿ ಸಿಗುತ್ತಾರೆಂಬ ಕಾತುರದಲ್ಲಿ, ಅಪರಿಚಿತರ ಸಹವಾಸವೂ ಆಗುವುದು ಸಾಮಾನ್ಯ. ಆದರೆ, ಈ ಅಪರಿಚಿತರ ವಿವರವನ್ನು ತಿಳಿಯದೇ, ವೈಯುಕ್ತಿಕ ವಿಚಾರಗಳನ್ನೆಲ್ಲಾ ಅವರೊಡನೆ ಹಂಚಿಕೊಂಡಿದ್ದೇ ಆದಲ್ಲಿ, ತೊಂದರೆ ಕಟ್ಟಿಟ್ಟ ಬುತ್ತಿ. ಮೇಲಿನ ಘಟನೆಯಂತೆ ದುರಂತಕ್ಕೂ ಎಡೆ ಮಾಡಿಕೊಡಬಹುದು. ಇನ್ನು ವಯಸ್ಕರೂ ಈ ರೀತಿಯ ದುರಂತಕ್ಕೆ ಒಳಗಾಗುವ ಸಾಧ್ಯತೆಗಳಿವೆ. ತಮ್ಮ ಮಧುಚಂದ್ರದಲ್ಲಿ ತೆಗೆದ ಚಿತ್ರಗಳನ್ನೋ, ಮತ್ಯಾವ ಪಾರ್ಟಿಗಳಲ್ಲಿ ತೆಗೆಸಿದ ಚಿತ್ರಗಳನ್ನೋ ಈ ತಾಣಗಳಲ್ಲಿ ಹಾಕುವಾಗ, ಅದು ಯಾರರವರೆಗೆ ಮುಟ್ಟಬಲ್ಲದು ಎಂಬುದು ಕೆಲವೊಮ್ಮೆ ಊಹಿಸಲೂ ಅಸಾಧ್ಯ. ಈ ತಾಣಗಳೇನೋ ಹಂಚಿಕೆಯ ಮಿತಿಯನ್ನು ನಿಯಂತ್ರಿಸುವ ವ್ಯವಸ್ಥೆಯನ್ನು ನೀಡಿರುತ್ತವೆ. ಆದರೆ, ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ಸುಮ್ಮನೇ ಹಂಚಿಬಿಟ್ಟಲ್ಲಿ, ಆ ಅಚಾತುರ್ಯದಿಂದ ಅನಾಹುತವಾಗಲೂಬಹುದು.

ಈ ಸಾಮಾಜಿಕ ತಾಣಗಳು ಮಾನವನ ಸಹಜ ಸಮಾಜದ ಸ್ಥಾನವನ್ನು ಸಂಪೂರ್ಣವಾಗಿ ಆಕ್ರಮಿಸಲು ಸಾಧ್ಯವಿಲ್ಲ. ಇವು ಕೇವಲ ತ್ವರಿತ, ಸಾಮಾಜಿಕ ಅನುಕೂಲ ವ್ಯವಸ್ಥೆಗಳು. ನಮಗೆ ಉಚಿತವಾಗಿ, ಒಂದು ಸಾಮಾಜಿಕ ವ್ಯವಸ್ಥೆಯನ್ನು ಕಲ್ಪಿಸಿ, ಅದರಲ್ಲಿ ನಾವುಗಳು ಉಚಿತವಾಗಿ (ಯತೇಚ್ಛವಾಗಿ) ಕೊಡುವ ಸಂಗತಿಗಳನ್ನೇ ವ್ಯವಸ್ಥಿತವಾಗಿ ಅಧರಿಸಿ, ಅವುಗಳನ್ನೇ ಬಂಡವಾಳವನ್ನಾಗಿ ಪರಿವರ್ತಿಸಿಕೊಳ್ಳುವ ಈ ತಾಣಗಳ ಬಳಕೆಯಲ್ಲಿನ ಅಸುರಕ್ಷತೆಗಳ ದೃಷ್ಟಿಕೋನವನ್ನು ನಾವು ಹೊಂದುವುದು ಅತ್ಯವಶ್ಯಕ.

ಲೇಖಕರ ಕಿರುಪರಿಚಯ
ಶ್ರೀ ರವಿಶಂಕರ್ ಹರನಾಥ್

ಮೂಲತಃ ಬೆಂಗಳೂರಿನವರಾದ ಇವರು ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ತಂತ್ರಾಂಶ ಸಂಸ್ಥೆಯೊಂದರಲ್ಲಿ ಉದ್ಯೋಗ ಹೊಂದಿರುತ್ತಾರೆ. ತಂತ್ರಜ್ಞಾನದ ಬಗೆಗೆ ಕನ್ನಡ ಭಾಷೆಯಲ್ಲಿ ಲೇಖನಗಳನ್ನು ಬರೆಯುವುದರಲ್ಲಿ ಇವರು ಸಿದ್ಧಹಸ್ತರು.

ಮುಕ್ತ, ಸ್ವತಂತ್ರ ತಂತ್ರಾಂಶಗಳು, ಹಾಗೂ ಇತರೆ ತಂತ್ರಾಂಶಗಳಲ್ಲಿ ಕನ್ನಡ ಭಾಷೆಯ ಬಳಕೆಯನ್ನು ಬೆಳೆಸಬೇಕೆಂಬ ಆಸೆ ಮತ್ತು ಧ್ಯೇಯ ಹೊಂದಿರುವ ಇವರು 'ಸಂಚಯ' ಎಂಬ ಕನ್ನಡ ಮುಕ್ತ ತಂತ್ರಾಂಶಗಳ ವಿಶಿಷ್ಟ ಹಾಗೂ ವಿಶೇಷ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ.

Blog  |  Facebook  |  Twitter