ಕಹಳೆಯ ಬಗ್ಗೆ


ಸಮೃದ್ಧ ಹಾಗೂ ಶ್ರೀಮಂತ ಕನ್ನಡ ನಾಡು-ನುಡಿ-ಸಂಸ್ಕೃತಿಯ ಕೀರ್ತಿಯನ್ನು ಮಾಹಿತಿ ತಂತ್ರಜ್ಞಾನದ ಬೆನ್ನೆಲುಬಾದ ಅಂತರ್ಜಾಲದ ಮೂಲಕ ಪ್ರಪಂಚದಾದ್ಯಂತ ಪಸರಿಸುವ ಪ್ರಯತ್ನವೇ 'ಕಹಳೆ' ಕಾರ್ಯಕ್ರಮ.

ನವಂಬರ್ 2011 ರಿಂದ ಪ್ರಾರಂಭಗೊಂಡು ಪ್ರತಿ ವರ್ಷವೂ ಸಹ ನವೆಂಬರ್ ತಿಂಗಳಿನುದ್ದಕ್ಕೂ ವಿವಿಧ ಲೇಖಕರಿಂದ ಕನ್ನಡ ಭಾಷೆಯಲ್ಲಿ ರಚಿತವಾದ ವೈವಿಧ್ಯ ವಸ್ತು-ವಿಷಯದ ಬಗೆಗಿನ ಲೇಖನಗಳನ್ನು ಈ ಮಾಧ್ಯಮದಲ್ಲಿ ಬಿತ್ತರಿಸುವ ಮೂಲಕ ಕನ್ನಡ ನಾಡಹಬ್ಬವಾದ ರಾಜ್ಯೋತ್ಸವವನ್ನು ಅಂತರ್ಜಾಲದಲ್ಲಿ ಆಚರಿಸಲಾಗುವುದು.

ಅಲ್ಲದೇ, ಕಹಳೆ ಕಾರ್ಯಕ್ರಮದಲ್ಲಿ ಪ್ರಕಟಗೊಂಡ ಲೇಖನಗಳು ಕೇವಲ ಅಂತರ್ಜಾಲಕ್ಕೆ ಮಾತ್ರ ಸೀಮಿತವಾಗದೆ ಇನ್ನೂ ಅನೇಕ ಓದುಗರನ್ನು ತಲುಪಲೆಂಬ ಆಶಯದಿಂದ ಎಲ್ಲಾ ಬರೆಹಗಳನ್ನು ಕ್ರೋಢೀಕರಿಸಿದ ಪುಸ್ತಕವನ್ನೂ ಸಹ ಮುದ್ರಿಸಿ ಬಿಡುಗಡೆಗೊಳಿಸಲಾಗುವುದು. ಈ ಪುಸ್ತಕಗಳನ್ನು ಲೇಖಕರ ಮೂಲಕವೇ ಅನೇಕ ಕನ್ನಡಾಭಿಮಾನಿಗಳಿಗೆ ಉಚಿತವಾಗಿ ತಲುಪಿಸುವ ವಾಡಿಕೆ ಕಹಳೆಯದ್ದು.

ನಮ್ಮ-ನಿಮ್ಮೊಳಗೆಲ್ಲೋ ಸುಪ್ತವಾಗಿ ಅಡಗಿಕೊಂಡಿರುವ ಕನ್ನಡಾಭಿಮಾನೀ ಬರಹಗಾರನ ಪ್ರತಿಭೆಗೆ ಸೂಕ್ತ ವೇದಿಕೆಯನ್ನು ಸೃಷ್ಟಿಸಿ, ತನ್ಮೂಲಕ ಕನ್ನಡ ಭಾಷಾ ಸಾಹಿತ್ಯವನ್ನು ಅಂತರ್ಜಾಲದಲ್ಲಿ ಸಮೃದ್ಧವಾಗಿ ಲಭ್ಯವಾಗುವಂತೆ ಮಾಡುವುದೂ ಸಹ 'ಕಹಳೆ'ಯ ಮತ್ತೊಂದು ಪ್ರಮುಖ ಧ್ಯೇಯ.

ಕರ್ನಾಟಕದಲ್ಲಿ ಕನ್ನಡಿಗರನ್ನು ಕನ್ನಡಿ ಹಾಕಿ ಹುಡುಕುವ ಹಾಗಾಗಿರುವ ಈ ದಿನಗಳಲ್ಲಿ, 'ಕನ್ನಡಿಗರು ನಾವು' ಎಂದು ಎದೆತಟ್ಟಿ ಹೇಳಿಕೊಳ್ಳುವಂತಹ ಸತ್ಕಾರ್ಯಗಳು ಹೇರಳವಾಗಿ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ, 'ಕಹಳೆ'ಯದ್ದು ಒಂದು ಪುಟ್ಟ-ದಿಟ್ಟ ಹೆಜ್ಜೆ.

ಬನ್ನಿ, ಕನ್ನಡಿಗರಾದ ನಾವೆಲ್ಲರೂ ಒಟ್ಟುಗೂಡಿ, ನಮ್ಮತನವನ್ನು ನಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಪ್ರಪಂಚದಾದ್ಯಂತ ಮೆರೆಯೋಣ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲ-ಸಹಕಾರ ಅತ್ಯಗತ್ಯ.

ಕಹಳೆಗೆ ಸ್ಪೂರ್ತಿ - ಅರಿವಿನ ಅಲೆಗಳು ಮತ್ತು PHP Advent 2011.

'ಎಲ್ಲಾದರೂ ಇರು, ಎಂತಾದರೂ ಇರು; ಎಂದೆಂದಿಗೂ ನೀ ಕನ್ನಡವಾಗಿರು' - ರಾಷ್ಟ್ರಕವಿ ಕುವೆಂಪು.

=> ಕಹಳೆ ತಂಡ.