ಸೋಮವಾರ, ನವೆಂಬರ್ 11, 2019

ಮೈಸೂರು ದಸರಾ

ಚಿತ್ರ ಕೃಪೆ: ಮೈಸೂರು ಜಿಲ್ಲಾಡಳಿತ ಜಾಲತಾಣ

ಒಂದು ಕಾಲದಲ್ಲಿ ಮೈಸೂರಿನ ಅರಸರ ಮಹೋತ್ಸವವಾಗಿದ್ದ ದಸರಾ ಉತ್ಸವವನ್ನು ಇಂದು ನಾಡಹಬ್ಬವಾಗಿ ಆಚರಿಸಲಾಗುತ್ತಿದೆ. ಮೈಸೂರು ದಸರಾ ಮಹೋತ್ಸವಕ್ಕೆ ನಾಲ್ಕು ಶತಮಾನಗಳಿಗೂ ಹೆಚ್ಚಿನ ಇತಿಹಾಸವಿದೆ. ನಮ್ಮ ಭಾರತೀಯ ಸಂಸ್ಕೃತಿಯ ಚರಿತ್ರೆಯಲ್ಲೇ ಇಷ್ಟೊಂದು ಸುದೀರ್ಘ ಕಾಲ ನಡೆದು ಬಂದಿರುವ ಮತ್ತೊಂದು ಹಬ್ಬ ಕಾಣಿಸುವುದು ಬಹಳ ಅಪರೂಪ.

ಮೈಸೂರಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿಯ ಆರಾಧನೆಯೊಡನೆ ಆರಂಭವಾಗುವ ನವರಾತ್ರಿಯು ವೈಭವದ ವಿಜಯದಶಮಿ ಹಬ್ಬವಾಗಿದೆ. ಮೈಸೂರು ದಸರಾ ಮಹೋತ್ಸವಕ್ಕೆ ಅದರದೇ ಆದ ಐತಿಹಾಸಿಕ ಪರಂಪರೆ ಹಾಗೂ ಸಾಂಸ್ಕೃತಿಕ ನಂಟು ಇದೆ. ಕರ್ನಾಟಕದ ಇತಿಹಾಸದಲ್ಲಿ ಸುವರ್ಣ ಯುಗವನ್ನು ಸೃಷ್ಟಿಸಿ ವಿಜಯನಗರ ಸಾಮ್ರಾಜ್ಯ ಕಟ್ಟಿ ವೈಭವದಿಂದ ಮೆರೆದವರು ವಿಜಯನಗರದ ಅರಸರು. ಆಗ ಹಂಪೆಯಲ್ಲಿರುವ ಮಹಾನವಮಿ ದಿಬ್ಬ ಮತ್ತು ವಿಜಯ ವಿಠಲ ದೇವಾಲಯಗಳು ಈ ಮಹೋತ್ಸವದ ಕೇಂದ್ರಗಳಾಗಿದ್ದವು.

ತಮ್ಮ ಸಾಮ್ರಾಜ್ಯದ ಶಕ್ತಿ-ಸಾಮರ್ಥ್ಯ, ಸಂಪತ್ತು, ಸಮೃದ್ಧಿ, ವೈಭವ, ವೀರತ್ವ, ಧೀರತ್ವ, ಕಲೆ, ಸಾಮರ್ಥ್ಯ, ಸಂಗೀತ, ಸಂಪನ್ನತೆ ಹೀಗೆ ಸಕಲ ವಿಧಗಳಲ್ಲೂ ತಮ್ಮ ಹಿರಿಮೆ ಗರಿಮೆಗಳನ್ನು ತೋರ್ಪಡಿಸಿಕೊಳ್ಳುವ ಹಿನ್ನೆಲೆಯಲ್ಲಿ ಬಹುಮುಖ್ಯವಾಗಿ ವಿಜಯದ ದ್ಯೋತಕವಾಗಿ ವಿಜಯದಶಮಿಯ ಈ ದಸರಾ ಮಹೋತ್ಸವವನ್ನು ವಿಜಯನಗರ ಅರಸರು ಆಚರಿಸುತ್ತಿದ್ದರು.

ಈ ಉತ್ಸವವನ್ನು ವೀಕ್ಷಿಸಲು ದೇಶ-ವಿದೇಶಗಳ ಗಣ್ಯಾತಿಗಣ್ಯರು, ಪ್ರವಾಸಿಗರು ಮೈಸೂರಿಗೆ ಭೇಟಿ ನೀಡುವುದು ಸಾಮಾನ್ಯ. ವಿಜಯದಶಮಿಯ ದಸರಾ ಮಹೋತ್ಸವವನ್ನು ವಿಜಯನಗರ ಸಾಮ್ರಾಜ್ಯದ ಪತನದ ನಂತರ ಮುಂದುವರೆಸಿಕೊಂಡು ಬಂದವರು ಯದುವಂಶದ ಮೈಸೂರು ಒಡೆಯರು. ಇವರಲ್ಲಿ 9ನೇ ಆಳ್ವಿಕೆಯ ರಾಜ ಒಡೆಯರು ಅಂದು ತಮ್ಮ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದಲ್ಲಿ 1610ರಲ್ಲಿ ವಿಜಯನಗರದ ರಾಜಪರಂಪರೆಯಂತೆ ನವರಾತ್ರಿ ಉತ್ಸವದ ವಿಜಯದಶಮಿ ಮಹೋತ್ಸವವನ್ನು ಮೊದಲಿಗೆ ಆರಂಭಿಸಿದರು.

ದಸರಾ ಹಬ್ಬದ ಕಾಲಾವಧಿಯ ಎಲ್ಲಾ ಹತ್ತು ದಿನಗಳಂದೂ ಕೂಡ ಮೈಸೂರು ಅರಮನೆಯು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತದೆ. ಇದನ್ನು ಅನುಸರಿಸಿಕೊಂಡು ವಿಶೇಷವಾದ ಅರಸರ ಸಭೆ ಅಥವಾ ದರ್ಬಾರು ನಡೆಯುತ್ತದೆ. ಮುಮ್ಮಡಿ ಕೃಷ್ಣರಾಜ ಒಡೆಯರು ತಮ್ಮ ಆಳ್ವಿಕೆಯ ಅವಧಿಯಲ್ಲಿ ದಸರಾ ಹಬ್ಬದ ಸಮಯದಲ್ಲಿ ಅರಮನೆಯಲ್ಲಿ ವಿಶೇಷ ದರ್ಬಾರ್ ಹಮ್ಮಿಕೊಳ್ಳುವ ಸಂಪ್ರದಾಯವನ್ನು ಜಾರಿಗೆ ತಂದಿದ್ದರು. ಅಲ್ಲದೆ ಈ ಸಭೆಯು ಅರಸುಮನೆತನದ ಸದಸ್ಯರು, ವಿಶೇಷ ಆಹ್ವಾನಿತ ಗಣ್ಯರು, ಅಧಿಕಾರಿಗಳು ಮತ್ತು ಪ್ರಜಾವರ್ಗಗಳಿಂದ ತುಂಬಿತುಳುಕುತ್ತಿತ್ತು. ಜಂಬೂ ಸವಾರಿ ಈ ಉತ್ಸವದ ಮತ್ತೊಂದು ಪ್ರಮುಖ ಆಕರ್ಷಣೆ.

ವಿದ್ಯಾರ್ಥಿ ಕಿರುಪರಿಚಯ
ಕೀರ್ತನ, ಎಂ.

9ನೇ ತರಗತಿ
ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ,
ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ