ಸೋಮವಾರ, ನವೆಂಬರ್ 30, 2015

ಚಾಲುಕ್ಯ ಪುಲಿಕೇಶಿ

ನವಂಬರ್ 2015ರ ಮಾಹೆಯುದ್ದಕ್ಕೂ ನಡೆದ ಕಹಳೆ ಐದನೇ ಆವೃತ್ತಿಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ನಮ್ಮೊಡನೆ ಎಂದಿನಂತೆ ಸಹಕರಿಸಿದ ಲೇಖಕರು ಹಾಗೂ ಓದುಗರು ಮತ್ತು ಪ್ರತ್ಯಕ್ಷ-ಪರೋಕ್ಷವಾಗಿ ಕಾರಣಕರ್ತರಾದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ವಂದನೆಗಳು; ನೀವೆಲ್ಲರೂ ಸದಾ ಕಹಳೆಯೊಟ್ಟಿಗೆ ಇರುತ್ತೀರೆಂದು ನಂಬಿದ್ದೇವೆ.


ಚಿತ್ರ: ಇಮ್ಮಡಿ ಪುಲಿಕೇಶಿ; ಕೃಪೆ: YouTube/TubeChop

ಭಾರತದ ಉಜ್ವಲ ಇತಿಹಾಸದ ಭವ್ಯ ಕ್ಷಾತ್ರಪರಂಪರೆಗೆ ಕನ್ನಡಿಗರ ಕೊಡುಗೆ ಆಚಂದ್ರಾರ್ಕವಾಗಿ ಉಳಿಯುವಂಥದ್ದು. ಒಂದೊಂದು ಸಾಮ್ರಾಜ್ಯವೂ ಕೂಡ ಯೂರೋಪಿಗಿಂತಲೂ ನಾಲ್ಕಾರುಪಟ್ಟು ವಿಸ್ತಾರವಾದ ಭೂಪ್ರದೇಶ ಹೊಂದಿದ್ದು, ಸುಮಾರು 100-200 ವರ್ಷಗಳಷ್ಟು ದೀರ್ಘಕಾಲ ದುರ್ಭೇದ್ಯವಾಗಿ ಆಳಿದ ರಾಜಮನೆತನಗಳ ಕೊಡುಗೆಯಂತೂ ಅನ್ಯಾದೃಶ. ಅದರಲ್ಲಿ ಎದ್ದುಕಾಣುವ ರಾಜವಂಶಗಳು - ಹೊಯ್ಸಳರು, ಚಾಳುಕ್ಯರು, ಗಂಗರು, ಕದಂಬರು, ರಾಷ್ಟ್ರಕೂಟರು, ಚಂದೇಲರು, ಪರಮಾರರು, ವಿಜಯನಗರದ ಅರಸರು, ಬಲ್ಲಾಳರು, ಯಾದವರು ಇತ್ಯಾದಿ. ಈ ವಂಶಗಳನ್ನು ಮತ್ತು ಕನ್ನಡನಾಡನ್ನು  ಬೆಳಗಿ, ಕೀರ್ತಿಯ ಉತ್ತುಂಗ ಶಿಖರಕ್ಕೇರಿಸಿದವರಲ್ಲಿ ಪ್ರಮುಖರು - ವಿಷ್ಣುವರ್ಧನ, ಮೊದಲನೇ ಸೋಮೇಶ್ವರ, ಪ್ರೌಢದೇವರಾಯ, ಬುಕ್ಕರಾಯ, ಕೃಷ್ಣದೇವರಾಯ, ಆರನೇ ವಿಕ್ರಮಾದಿತ್ಯ, ಮಯೂರ ವರ್ಮ  ಹಾಗು ಇಮ್ಮಡಿ ಪುಲಿಕೇಶೀ ಮೊದಲಾದವರು. ಈ ಲೇಖನದಲ್ಲಿ ಚಾಳುಕ್ಯರ ಮತ್ತು ಅದೇ ಪರಂಪರೆಯ ಇಮ್ಮಡಿ ಪುಲಿಕೇಶಿಯ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ. ಬಾದಾಮಿ ಚಾಲುಕ್ಯರ ಮೂಲಪುರುಷ, ಉತ್ತಮ ಕ್ಷತ್ರಿಯರ ಸೃಷ್ಟಿಗಾಗಿ ಇಂದ್ರನಿಂದ ಪ್ರಾರ್ಥಿತನಾದ ಬ್ರಹ್ಮನ ಚುಲಕದಿಂದ (ಹಸ್ತ) ಅರ್ಘ್ಯ ಕೊಡುವಾಗ ಹುಟ್ಟಿಬಂದ, ಆದ್ದರಿಂದ ಅವನ ಪರಂಪರೆಯವರು ಚಾಲುಕ್ಯರೆಂದು ಹೆಸರಾದರು ಎಂಬುದಾಗಿ ಬಿಲ್ಹಣ ಕವಿ ತನ್ನ "ವಿಕ್ರಮಾಂಕದೇವ ಚರಿತಂ" ಎಂಬ ಕಾವ್ಯದಲ್ಲಿ ಹೇಳುತ್ತಾನೆ. ಕೆಲವು ಇತಿಹಾಸಕಾರರು, ಚುಲುಕಿ, ಚುಲ್ಕಿ, ಸಲುಕಿ ಎಂಬ ಕಬ್ಬಿಣದ ಹಾರೆಯಂತ: ವಸ್ತುವನ್ನು ಉಪಯೋಗಿಸುವ ಕುಲಕ್ಕೆ ಸಂಬಂಧಪಟ್ಟದ್ದು ಚಾಲುಕ್ಯ ಎಂದು ಅಭಿಪ್ರಾಯ ಪಡುತ್ತಾರೆ. ಅದೇನೇ ಇದ್ದರೂ, ಚಾಲುಕ್ಯ ಸಾಮ್ರಾಜ್ಯದ ಮೂಲಪುರುಷ ಒಂದನೇ ಪುಲಿಕೇಶೀ ಎಂದು ಗೊತ್ತಾಗುತ್ತದೆ. (ಪುಲಿಕೇಶೀ ಹೆಸರ ಬಗ್ಗೆ ಕೂಡ ಅದು ಪುಲಿಕೆಶಿಯೋ, ಪುಲಕೇಶಿಯೊ, ಪೊಲೆಕೆಶಿಯೋ ಎಂಬ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯವಿದೆ).

ಒಂದನೇ ಪುಲಿಕೇಶಿಗೆ ಕೀರ್ತಿವರ್ಮ ಮತ್ತು ಮಂಗಳೇಶ ಇಬ್ಬರು ಮಕ್ಕಳು. ಕೀರ್ತಿವರ್ಮ ಪಟ್ಟವೇರಿ ಕೆಲವೇ ಕಾಲದಲ್ಲಿ ಮೃತನಾದಾಗ, ಅವನ ಮಕ್ಕಳು ಚಿಕ್ಕವರಾದ್ದರಿಂದ ಮಂಗಳೇಶನೇ ರಾಜ್ಯವಹಿಸಿಕೊಂಡು ಚೆನ್ನಾಗಿಯೇ ನೋಡಿಕೊಳ್ಳುತ್ತಾನೆ. ಹಾಗೆಯೇ ರಾಜ್ಯದ ಗಡಿಗಳನ್ನೂ ವಿಸ್ತರಿಸಿ ಬಲಪಡಿಸುತ್ತಾನೆ. ಆದರೆ, ರಾಜ್ಯದ ಅಧಿಕಾರದಾಹದಿಂದ ಕೀರ್ತಿವರ್ಮನ ಹಿರಿಯಮಗನಿಗೆ ನ್ಯಾಯಯುತವಾಗಿ ಕೊಡಬೇಕಾದ ರಾಜ್ಯವನ್ನು ಕೊಡುವುದಿಲ್ಲ. ಆಗ ಕೀರ್ತಿವರ್ಮನ ಹಿರಿಯಮಗನೇ ಪರಾಕ್ರಮದಿಂದ ತನ್ನ ರಾಜ್ಯವನ್ನು ಹಿಂಪಡೆಯುತ್ತಾನೆ.

ಆತನೇ, ರಾಜಪರಮೇಶ್ವರ, ಪರಮ ಭಟ್ಟಾರಕ, ಉರುರಣವಿಕ್ರಮ, ದಕ್ಷಿಣಾಪಥೇಶ್ವರ, ಸತ್ಯಾಶ್ರಯ ಎಂದು ಖ್ಯಾತನಾದ "ಇಮ್ಮಡಿ ಪುಲಿಕೇಶೀ". ಅವನ ಆಡಳಿತದ ಮೊದಲ ಕೆಲವು ವರ್ಷಗಳು ಮುಳ್ಳಿನ ದಾರಿಯಾಗಿದ್ದಿತು. ಮೊದಲಿಗೆ, ಗಡಿಗಳನ್ನು ರಕ್ಷಿಸುವುದಲ್ಲದೆ, ರಾಜಪರಿವಾರದ ಒಳಜಗಳಗಳನ್ನು ಕೂಡ ಹತ್ತಿಕ್ಕಿ, ಶಾಂತಿ ನೆಲೆಗೊಳಿಸುವ ಮಹತ್ತರ ಜವಾಬ್ದಾರಿ ಹೆಗಲಮೇಲಿತ್ತು. ಆದರೆ, ಸ್ವಭಾವತಃ ಪರಾಕ್ರಮಿಯೂ, ಕುಶಾಗ್ರಮತಿಯೂ, ಸಕಲವಿದ್ಯಾ ಪಾರಂಗತನೂ ಆದ ಇಮ್ಮಡಿ ಪುಲಿಕೇಶಿಯು ತನ್ನ ಆಪ್ತ ಸಚಿವರ, ಸೇನಾಪತಿಗಳ ಸಹಾಯದಿಂದ, ಸಾಮ, ದಾನ, ಭೇದ ದಂಡಗಳೆಂಬ ಚತುರೋಪಾಯಗಳಿಂದ ಹಿತಶತ್ರುಗಳನ್ನು, ಒಳಜಗಳಗಳನ್ನು ಹತ್ತಿಕ್ಕಿ, ಗಡಿಗಳನ್ನು ಬಲಪಡಿಸುತ್ತಾನೆ. ಒಮ್ಮೆ ಒಳನಾಡಿನಲ್ಲಿ ಶಾಂತಿ ನೆಲೆಸಿದ ಮೇಲೆ ಅಪಾರ ಸೇನೆಯೊಂದಿಗೆ ದಿಗ್ವಿಜಯಕ್ಕೆ ಹೊರಡುತ್ತಾನೆ.

ಮೊದಲಿಗೆ ಸೇನೆಯನ್ನು ಎದುರಿಸಿದ ಕದಂಬರನ್ನು ಸೋಲಿಸಿ ಬನವಾಸಿಯನ್ನು ವಶಪಡಿಸಿಕೊಂಡು, ಮುಂದೆ ತಲಕಾಡಿನ ಗಂಗರು, ಮಹಾರಾಷ್ಟ್ರದ ರಾಜಮನೆತನಗಳು, ಲಾಟರು, ಗುರ್ಜರರು, ಕೊಂಕಣದ ಮೌರ್ಯರು, ಘೂರ್ಜರರು ಮೊದಲಾದ ದಕ್ಷಿಣದ ಕರ್ನಾಟಕ ಮತ್ತು ಪಶ್ಚಿಮದ ಎಲ್ಲ ರಾಜ್ಯಗಳನ್ನು ವಶಪಡಿಸಿಕೊಂಡು, ಕೋಸಲ, ಕಳಿಂಗ, ಗೋದಾವರಿ ಪ್ರಾಂತ, ಆಂಧ್ರದ ಎಲ್ಲೋರಾ, ಕಂಚಿಯ ಪಲ್ಲವ ಮಹೇಂದ್ರವರ್ಮನ ಬಹುದೊಡ್ಡ ಸೇನೆಯನ್ನು ಸೋಲಿಸಿ ಕಾವೇರಿಯವರೆಗೂ ಆಕ್ರಮಿಸಿಕೊಳ್ಳುತ್ತಾನೆ. ತರುವಾಯ ಚೋಳ, ಚೇರ ಮತ್ತು ಪಾಂಡ್ಯ ದೊರೆಗಳೊಂದಿಗೆ ಸ್ನೇಹ ಬೆಳೆಸಿ, ತನ್ನ ಸೋದರರಾದ ಕುಬ್ಜ ವಿಷ್ಣುವರ್ಧನ ಮತ್ತು ಜಯಸಿಂಹರನ್ನು ಮಾಂಡಲಿಕರನ್ನಾಗಿ ನೇಮಿಸಿ, ಕಾವೇರಿಯಿಂದ ಗೋದಾವರಿಯನ್ನು ದಾಟಿ ನರ್ಮದಾ ತೀರದವರೆಗೂ ವ್ಯಾಪಿಸಿದ ತನ್ನ ವಿಶಾಲ ಸಮ್ರಾಜ್ಯದ ಗಡಿಗಳನ್ನು ಬಲಪಡಿಸಿಕೊಳ್ಳುತ್ತಾನೆ.

ಉತ್ತರದ ಸಾಮ್ರಾಟ ಕನ್ಯಾಕುಬ್ಜದ (ಕನೂಜ್) ಶೀಲಾದಿತ್ಯ ಹರ್ಷವರ್ಧನನ ವಿರುದ್ಧದ ಗೆಲುವು ಇವನಿಗೆ ಬಹು ದೊಡ್ಡ ಕೀರ್ತಿಯನ್ನು ಕೊಟ್ಟಿತು.

ಉತ್ತರಾಪಥೇಶ್ವರ ಹರ್ಷವರ್ಧನ ತನ್ನ ಸಾಮ್ರಾಜ್ಯವನ್ನು ದಕ್ಷಿಣಕ್ಕೆ ವಿಸ್ತರಿಸುವ ಮಹತ್ವಾಕಾಂಕ್ಷೆಯೊಂದಿಗೆ ನರ್ಮಾದಾತೀರದಲ್ಲಿ 60,000 ಆನೆಗಳ ಗಜಪಡೆಯ ಬೃಹತ್ ಸೇನೆಯೊಂದಿಗೆ ಮುತ್ತಿಗೆ ಹಾಕಿದ. ಆದರೆ, ಪುಲಿಕೇಶೀ ಕೂಡ ದೊಡ್ಡ ಸೇನೆಯೊಂದಿಗೆ ಎದಿರುಗೊಂಡ. ನರ್ಮದೆಯ ಕಣಿವೆಯಲ್ಲಿ ರಕ್ತದ ಹೊಳೆಯೇ ಹರಿಯಿತು. ಕೊನೆಗೆ ಶೀಲಾದಿತ್ಯ ಹರ್ಷವರ್ಧನ ಕನ್ನಡಿಗರ ಸೇನೆಯಮುಂದೆ ಸೋಲೊಪ್ಪಿಕೊಂಡು, ಇಮ್ಮಡಿ ಪುಲಿಕೇಶಿಯೊಂದಿಗೆ ಸಂಧಾನ ಮಾಡಿಕೊಂಡ. ಹರ್ಷನ ಅದೃಷ್ಟ, ಅವನಿಗೆ ಪುಲಿಕೇಶಿಯಂಥ ಉದಾರಿಯಾದ ಎದುರಾಳಿ ಸಿಕ್ಕಿದ್ದ. ಹಾಗಾಗಿ, ತನ್ನ ಮಾನ ಪ್ರಾಣಗಳೆರಡನ್ನೂ ಉಳಿಸಿಕೊಂಡ.

ವಿಶೇಷವೆಂದರೆ, ಹರ್ಷ ರಾಜಕೀಯವಾಗಿ ಸೋತರೂ ಅವನ ಆಸ್ಥಾನ ಕವಿಸಾರ್ವಭೌಮ ಬಾಣಭಟ್ಟ ಸಾಂಸ್ಕೃತಿಕವಾಗಿ ಗೆದ್ದ. ಹೇಗೆಂದರೆ, ಬಾಣಭಟ್ಟ ಹರ್ಷವರ್ಧನನ ಬಗ್ಗೆ ಬರೆದ ಹರ್ಷಚರಿತ ಮಹಾಕಾವ್ಯದ "ನಮಶ್ಚಂದ್ರ ಶಿರಶ್ಚುಂಬಿ ಚಂದ್ರಶೇಖರ ಚಾರವೇ ಬ್ರಹ್ಮಾಂಡ ಭುವನಾರಂಭ ಮೂಲಸ್ಥಂಬಾಯ ಶಂಭವೇ" ಎಂಬ ಮಂಗಳಶ್ಲೋಕವನ್ನು, ಸ್ವತಃ ವಿದ್ವಾತ್ಕವಿಯೂ, ವಿದ್ವತ್ಪ್ರಿಯನೂ ಆಗಿದ್ದ ಪುಲಿಕೇಶಿಯು ತನ್ನ ಎಲ್ಲ ಶಾಸನಗಳ ಮಂಗಳಶ್ಲೋಕವನ್ನಾಗಿ ಬಳಸಿಕೊಂಡ. ಮುಂದಿನ ಅನೇಕ ರಾಜರೂ ಕೂಡ ಇದೇ ಶ್ಲೋಕವನ್ನು ತಮ್ಮ ಎಲ್ಲ ಶಾಸನಗಳ ಮಂಗಳಶ್ಲೋಕವನ್ನಾಗಿ ಮಾಡಿಕೊಂಡು ಬಾಣನನ್ನು ಹರ್ಷನನ್ನು ಅಜರಾಮರ ಮಾಡಿದರು. ಹೀಗೆ, ತನ್ನಿಂದ ಸೋತ ಒಬ್ಬ ಚಕ್ರವರ್ತಿಯಮೇಲೆ ಬರೆದ ಕಾವ್ಯದ ಶ್ಲೋಕವನ್ನು ಗೌರವಿಸುವ ಉದಾರಿ ಪುಲಿಕೇಶಿಗೆ ತನ್ನ ಕೊನೆಯ ಕಾಲ ಆನಂದದಾಯಕವಾಗಿರಲಿಲ್ಲ. ಒಂದುಕಡೆ ಕುಬ್ಜ ವಿಷ್ಣುವರ್ಧನನ ವಿದ್ರೋಹ, ತಲೆಯೆತ್ತಿದ ಒಳಜಗಳಗಳಿಂದ ಬಳಲಿದ್ದ ಪುಲಿಕೇಶಿಗೆ ಇನ್ನೊಂದೆಡೆ, ಹಳೆಯ ಸೋಲಿನ ಸೇಡು ತೀರಿಸಿಕೊಳ್ಳುವ ತವಕದಿಂದ ಅಪಾರ ಸೇನೆಯೊಂದಿಗೆ ಮುತ್ತಿಗೆಹಾಕಿದ ಪಲ್ಲವ ಮಹೇಂದ್ರವರ್ಮನ ಮಗ ನರಸಿಂಹವರ್ಮನನ್ನು ಎದುರಿಸುವುದು ಕಷ್ಟಸಾಧ್ಯವಾಯಿತು. ಜಯಿಸಿದ ನರಸಿಂಹವರ್ಮ ಚಾಲುಕ್ಯ ರಾಜಧಾನಿ ಬಾದಾಮಿಗೆ ಬೆಂಕಿ ಇಟ್ಟು ನಾಶಮಾಡಿದ. ಈ ಸೋಲಿನ ಆಘಾತದಿಂದ ಚೇತರಿಸಿಕೊಳ್ಳಲಾರದ ಪುಲಿಕೇಶಿ ಹಾಸಿಗೆ ಹಿಡಿದು ಹಾಗೆಯೇ ಕೊನೆಯುಸಿರೆಳೆದ.

ಹೀಗೆ, ಕ್ರಿ. ಶ. 610 ರಿಂದ 655 ರ ವರೆಗೆ, ಸುಮಾರು 45 ವರ್ಷಗಳಕಾಲ  ಕಾವೇರಿಯಿಂದ ನರ್ಮದೆಯ ವರೆಗೆ ವ್ಯಾಪಿಸಿದ್ದ ಬಹುದೊಡ್ಡ ಸಾಮ್ರಾಜ್ಯವನ್ನು ಕಳ್ಳಕಾಕರ ಭಯವಿಲ್ಲದೆ ಸುಭಿಕ್ಷವಾಗಿ ಆಳಿ, ತನ್ನ ಶೌರ್ಯ, ಪರಾಕ್ರಮ, ಔದಾರ್ಯಗಳಿಂದ ಕನ್ನಡಿಗರ ಕೀರ್ತಿ ಪತಾಕೆಯನ್ನು ದೇಶ ವಿದೇಶಗಳಲ್ಲಿ ದಿಗಂತಕ್ಕೇರಿಸಿ, ಚೀನೀ ಯಾತ್ರಿಕ ಹ್ಯೂಯೆನ್ತ್ಸಾಂಗ್ ನಿಂದ ಭಾರತದಲ್ಲೇ ಅತ್ಯಂತ ಸಮರ್ಥನಾದ ಸಾಮ್ರಾಟ ಎಂದು ಹೊಗಳಿಸಿಕೊಂಡ, ಉರುರಣವಿಕ್ರಮ, ದಕ್ಷಿಣಾಪಥೇಶ್ವರ, ಸತ್ಯಾಶ್ರಯ ಇಮ್ಮಡಿ ಪುಲಿಕೇಶಿಯು, ಕನ್ನಡ ಕ್ಷಾತ್ರಾಕಾಶದಲ್ಲಿ ಎಂದೆಂದೂ ಮಾಸದೆ ಮಿನುಗುವ ಧೃವತಾರೆಯಾಗಿ ಶೋಭಿಸುತ್ತಿದ್ದಾನೆ. ಇಂಥಾ ಸಾಮ್ರಾಟನನ್ನು ಪಡೆದ ಈ ನಾಡು, ಇಲ್ಲಿ ಹುಟ್ಟಿದ ನಮ್ಮ ಭಾಗ್ಯವೇ ಭಾಗ್ಯ.

"ಸಿರಿಗನ್ನಡಂ ಗೆಲ್ಗೆ"
"ಸಿರಿಗನ್ನಡಂ ಬಾಳ್ಗೆ"

ಲೇಖಕರ ಕಿರುಪರಿಚಯ
ಶ್ರೀ ಬಿ. ಆರ್. ಕೃಷ್ಣ

ಮಂಡ್ಯ ಮೂಲದವರಾದ ಇವರು ಪ್ರಸ್ತುತ ಭಾರತ ಅಂಚೆ ಇಲಾಖೆಯಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಂಸ್ಕೃತ ಹಾಗೂ ಕನ್ನಡ ಪುಸ್ತಕಗಳನ್ನು ಓದುವುದು ಇವರ ಹವ್ಯಾಸ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ