ಸೋಮವಾರ, ನವೆಂಬರ್ 23, 2015

ಮೊಟ್ಟೆ ಮಾಂಸಾಹಾರವಲ್ಲವೆ?

ಬಹುಶಃ ಎಲ್ಲರೂ ಆಗಾಗ 'ಮೊಟ್ಟೆ ಸಸ್ಯಾಹಾರ' ಎಂಬ ಹೇಳಿಕೆಗಳನ್ನು ಗಮನಿಸಿರುತ್ತಾರೆ. ಅದೇಕೆ ಹಾಗೆ ಹೇಳಲಾಗುತ್ತದೆ ಎಂದು ಸ್ಪಷ್ಟವಾಗಿ ಎಲ್ಲರಿಗೂ ತಿಳಿದಿರಲಿಕ್ಕಿಲ್ಲ. ಆ ಬಗ್ಗೆ ಸ್ವಲ್ಪ ಮಾಹಿತಿ ಇಲ್ಲಿದೆ:

ಎಲ್ಲರಿಗೂ ತಿಳಿದಿರುವ ವಿಷಯ: ಯಾವುದೇ ಪ್ರಾಣಿ ಅಥವಾ ಪಕ್ಷಿಗಳಲ್ಲಿ ವಂಶಾಭಿವೃದ್ಧಿ ನಡೆಯಲು ಗಂಡಿನ ವೀರ್ಯಾಣು ಮತ್ತು ಹೆಣ್ಣಿನ ಅಂಡಾಣು ಸಂಯೋಗ ಹೊಂದಬೇಕು. ಈ ಸಂಯೋಗ ಸಾಮಾನ್ಯವಾಗಿ ಹೆಣ್ಣಿನ ಜನನೇಂದ್ರಿಯ ವ್ಯೂಹದಲ್ಲಿ ನಡೆಯುತ್ತದೆ. ಪ್ರಾಯಕ್ಕೆ ಬಂದ ಗಂಡಿನಲ್ಲಿನ ವೃಷಣಗಳಲ್ಲಿ ವೀರ್ಯಾಣುಗಳು ಸದಾಕಾಲ ಅನೇಕಾನೇಕ ಸಂಖ್ಯೆಯಲ್ಲಿ ಉತ್ಪತ್ತಿಯಾಗುತ್ತಿರುತ್ತವೆ. ಹಾಗೂ ಪ್ರಾಯಕ್ಕೆ ಬಂದ ಹೆಣ್ಣಿನ ಅಂಡಾಶಯದಲ್ಲಿ ನಿರ್ದಿಷ್ಠ ಸಮಯಕ್ಕೊಮ್ಮೆ ಸಾಮಾನ್ಯವಾಗಿ ಒಂದು ಅಂಡಾಣು ಬಿಡುಗಡೆಯಾಗುತ್ತದೆ.

ಹೀಗೇ, ಹೆಣ್ಣು ಕೋಳಿಯಲ್ಲಿಯೂ ನಿರ್ದಿಷ್ಠ ಸಮಯಕ್ಕೊಮ್ಮೆ ಅಂಡಾಣು ಬಿಡುಗಡೆಯಾಗಬೇಕಲ್ಲವೆ? ಹೌದು, ಹೆಣ್ಣು ಕೋಳಿಯಲ್ಲಿ ಪ್ರತಿದಿನವೂ ಒಂದೊಂದು ಅಂಡಾಣು ಬಿಡುಗಡೆಯಾಗುತ್ತದೆ. ಕೆಲವು ದಿನಗಳು, ಇದು ದಿನವೂ ನಡೆಯುತ್ತದೆ. ನಂತರ ಕೆಲವು ದಿನಗಳ ಬಿಡುವು ಇರುತ್ತದೆ. ಮತ್ತೆ ಕೆಲವು ದಿನಗಳು ದಿನವೂ ಬಿಡುಗಡೆಯಾಗುತ್ತದೆ. ಈ ಕ್ರಿಯೆ ಹೀಗೆಯೇ ಮುಂದುವರೆಯುತ್ತಿರುತ್ತದೆ.

ಪ್ರಾಣಿಗಳಲ್ಲಿ ನಡೆಯುವಂತೆ, ಮರಿ ಸ್ವತಂತ್ರ ಜೀವನ ನಡೆಸಲು ಶಕ್ತವಾಗುವವರೆಗೆ ತಾಯಿಯ ಗರ್ಭದಲ್ಲಿ ಅದರ ಬೆಳವಣಿಗೆ, ಕೋಳಿಗಳಲ್ಲಿ ನಡೆಯುವುದಿಲ್ಲ. ಬದಲಿಗೆ ಭ್ರೂಣದ ಸುತ್ತಲೂ ಕೆಲವು ದಿನಗಳವರೆಗೆ ಅದಕ್ಕೆ ಬೇಕಾಗುವಷ್ಟು ಅಹಾರ ಶೇಖರವಾಗಿ, ಅದರ ಸುತ್ತಲೂ ರಕ್ಷಣೆಗಾಗಿ ಕವಚ ನಿರ್ಮಾಣವಾಗಿ, ಹೊರಬರುವ ವ್ಯವಸ್ಥೆ ಇದೆ. ಇದನ್ನೇ ಮೊಟ್ಟೆ ಎನ್ನತ್ತೇವೆ. ಅಂಡಾಣುಗಳ ಬಿಡುಗಡೆಯ ಮೇರೆಗೆ ಕೋಳಿಗಳು ಕೆಲವು ದಿನಗಳು, ದಿನವೂ ಮೊಟ್ಟೆ ಇಡುತ್ತವೆ ಹಾಗೂ ಕೆಲವು ದಿನಗಳ ಬಿಡುವಿನ ನಂತರ ಮತ್ತೆ ಕೆಲವು ದಿನಗಳು ಇಡುತ್ತವೆ. ಈ ಮೊಟ್ಟೆ ಹೊರಬಂದು, ಅದಕ್ಕೆ ತಾಯಿ ತನ್ನ ದೇಹದ ಕಾವು ಕೊಟ್ಟು, ಸುಮಾರು 21 ದಿನಗಳ ನಂತರ ಮೊಟ್ಟೆ ಒಡೆದು ಮರಿ ಹೊರಬರುತ್ತದೆ. ಸರಿ, ಇದು ಅಂಡಾಣುವಿನೊಂದಿಗೆ ವೀರ್ಯಾಣು ಸೇರಿ ಭ್ರೂಣವಾಗಿದ್ದರೆ ನಡೆಯುವ ಕ್ರಿಯೆ. ಒಂದು ವೇಳೆ ಅಂಡಾಣುವಿನೊಂದಿಗೆ ವೀರ್ಯಾಣು ಸೇರದಿದ್ದರೆ ಏನಾಗುತ್ತದೆ ನೋಡೋಣ.

ಇಲ್ಲೊಂದು ವಿಶೇಷತೆಯಿದೆ: ಕೋಳಿಗಳಲ್ಲಿ ಅಂಡಾಣು ಬಿಡುಗಡೆಯಾದ ನಂತರ ಅದನ್ನು ವೀರ್ಯಾಣು ಸೇರಲೀ ಬಿಡಲಿ, ಅದರ ಸುತ್ತಲೂ ಆಹಾರ ಶೇಖರವಾಗುವ ಮತ್ತು ಕವಚ ನಿರ್ಮಾಣವಾಗುವ ಕ್ರಿಯೆ ನಿಯಮಿತವಾಗಿ ನಡೆದೇ ತೀರುತ್ತದೆ. ಹಾಗಾಗಿ ಭ್ರೂಣವಿಲ್ಲದಿದ್ದರೂ ಮೊಟ್ಟೆ ತಯಾರಾಗುತ್ತದೆ. ಅಂದರೆ, ಗಂಡು ಕೋಳಿಯ ಸಂಪರ್ಕ ಇಲ್ಲದಿದ್ದರೂ ಹೆಣ್ಣು ಕೋಳಿ ಮೊಟ್ಟೆ ಇಡುತ್ತವೆ. 'ಹುಂಜದ ಸಂಪರ್ಕವಿಲ್ಲದೇ ಕೋಳಿ ಮೊಟ್ಟೆ ಇಡಲು ಸಾಧ್ಯವೇ? ಸುಳ್ಳು ಹೇಳುತ್ತಿದ್ದಾನೆ' ಎನ್ನತ್ತೀರಾ? ವಿಜ್ಞಾನದಾಣೆಗೂ ಇದು ಸತ್ಯ. ಇಂತಹ ಭ್ರೂಣವಿಲ್ಲದ ಮೊಟ್ಟೆಯಿಂದ ಮರಿಯಾಗುವ ಸಾಧ್ಯತೆ ಇಲ್ಲವೇ ಇಲ್ಲ. ಹಾಗಾಗಿಯೇ ಅವುಗಳನ್ನು ನಿರ್ಜೀವ ಮೊಟ್ಟೆಗಳು ಎನ್ನಬಹುದು.

ಹೆಚ್ಚಿನ ಸಂಖ್ಯೆಯಲ್ಲಿ, ಅಂದರೆ ಸಾವಿರಗಳಲ್ಲಿ, ಲಕ್ಷಗಳಲ್ಲಿ ಮೊಟ್ಟೆ ಉತ್ಪಾದನಾ ಕೋಳಿಗಳನ್ನು ಸಾಕುವ ಫಾರಂಗಳಲ್ಲಿ ಕೇವಲ ಹೆಣ್ಣು ಕೋಳಿಗಳನ್ನು ಮಾತ್ರ ಸಾಕುತ್ತಾರೆ. ಹುಂಜ ಅಥವಾ ಗಂಡು ಕೋಳಿಗಳನ್ನು ಇಟ್ಟಿರುವುದೇ ಇಲ್ಲ. ಆದ್ದರಿಂದ ಫಾರಂ ಕೋಳಿ ಮೊಟ್ಟೆಗಳು ಭ್ರೂಣವಿಲ್ಲದ ಮೊಟ್ಟೆಗಳು. ಅಂದರೆ ಅವುಗಳಲ್ಲಿ ಜೀವವಿಲ್ಲ. ಅಂತಹ ಮೊಟ್ಟೆಗಳನ್ನು 'ಟೇಬಲ್ ಎಗ್ಸ್' ಎನ್ನುತ್ತಾರೆ. ಆದ್ದರಿಂದಲೇ ಮೊಟ್ಟೆ ಮಾಂಸಾಹಾರವಲ್ಲ ಎನ್ನುವ ವಾದವಿರುವುದು.

ಇಲ್ಲಿ ನೆನಪಿಡಬೇಕಾದ ಇನ್ನೊಂದು ವಿಷಯವೆಂದರೆ, ಹುಂಜದ ಸಂಪರ್ಕಕ್ಕೆ ಬರಬಹುದಾದ ಕೋಳಿಗಳು, ಅಂದರೆ ಗ್ರಾಮೀಣ ಪರಿಸರದಲ್ಲಿ ಹಗಲಿನಲ್ಲಿ ಹೊರಗೆ ಬಿಟ್ಟು ಸಾಕಲಾಗುವ ಕೋಳಿಗಳು ಹುಂಜಗಳ ಸಂಪರ್ಕಕ್ಕೆ ಬಂದಿರುವ ಸಾಧ್ಯತೆಯಿದ್ದು, ಅವು ಇಡುವ ಮೊಟ್ಟೆಗಳಲ್ಲಿ ಭ್ರೂಣವಿರುವ, ಹಾಗಾಗಿ ಅವುಗಳಲ್ಲಿ ಜೀವವಿರುವ ಸಾಧ್ಯತೆಯಿದೆ. ಅಂತಹ ಮೊಟ್ಟೆಗಳನ್ನು 'ಫಲಿತ ಮೊಟ್ಟೆಗಳು (ಫರ್ಟಿಲೈಸ್ಡ್ ಎಗ್ಸ್)' ಎನ್ನುತ್ತಾರೆ. ಅಂತಹ ಮೊಟ್ಟೆಗಳಿಂದ ಮರಿ ಮಾಡಬಹುದು.
ಚಿತ್ರ ಕೃಪೆ: ಗೂಗಲ್
ಆದರೆ ಇಲ್ಲೊಂದು ಪ್ರಶ್ನೆ. ಭ್ರೂಣವಿಲ್ಲ ಅಥವಾ ಜೀವವಿಲ್ಲ ಎನ್ನುವ ಕಾರಣಕ್ಕೆ ಸಸ್ಯವರ್ಗಕ್ಕೆ ಸೇರದ, ಪ್ರಾಣಿವರ್ಗಕ್ಕೆ ಸೇರಿದ ಪಕ್ಷಿಯೊಂದರ ಮೊಟ್ಟೆಯನ್ನು ಸಸ್ಯಾಹಾರ ಎಂದು ಒಪ್ಪಬಹುದೇ?

ಈಗ ಪ್ರಶ್ನೆ, ಸಸ್ಯಾಹಾರವೆಂದರೇನು? ಮಾಂಸಾಹಾರವೆಂದರೇನು? ಎಂಬುದು. ಎಲ್ಲರಿಗೂ ತಿಳಿದಿರುವಂತೆ, ಸಸ್ಯಗಳಿಂದ ಬಂದ ಆಹಾರ ಸಸ್ಯಾಹಾರವೆನಿಸಿಕೊಳ್ಳುತ್ತದೆ ಹಾಗೂ ಪ್ರಾಣಿಗಳಿಂದ ಬಂದ ಆಹಾರ ಮಾಂಸಾಹಾರವೆನಿಸಿಕೊಳ್ಳುತ್ತದೆ. ಹಾಗಾದರೆ ಈ ವರ್ಗೀಕರಣದ ಆಧಾರದ ಮೇಲೆಯೇ ಹೇಳುವುದಾದರೆ, ಹಸುಗಳಿಂದ ಬರುವ ಹಾಲು ಮತ್ತು ಜೇನು ಹುಳುಗಳು ಉತ್ಪಾದಿಸುವ ಜೇನುತುಪ್ಪಗಳನ್ನು ಏನನ್ನಬೇಕು? ನಾವು ಇವುಗಳನ್ನು ಸಸ್ಯಾಹಾರವೆಂದು ಒಪ್ಪಿರುವ ಕಾರಣವೇನೆಂದರೆ, ಅವುಗಳನ್ನು ಪಡೆಯುವಾಗ ಪ್ರಾಣಿಹಿಂಸೆಯಾಗಲೀ, ವಧೆಯಾಗಲೀ ಆಗುವುದಿಲ್ಲ ಎಂಬುದು (ಜೇನಿನ ವಿಷಯದಲ್ಲಿ ಅದೂ ಪ್ರಶ್ನಾರ್ಹ). ಸರಿ ಹಾಗಾದರೆ, ಇದೇ ಕಾರಣದ ಮೇಲೆ ಹೇಳುವುದಾದರೆ, ಭ್ರೂಣವಿಲ್ಲದ ಮೊಟ್ಟೆಯೂ ಸಹ ಸಸ್ಯಾಹಾರವೇ ಅಲ್ಲವೇ?

ಈ ಲೇಖನ ಬರೆಯುತ್ತಿರುವ ನಾನು ಒಬ್ಬ ಪಶುವೈದ್ಯ. ನನ್ನ ಅಭಿಪ್ರಾಯದಲ್ಲಿ, ಆಹಾರಗಳನ್ನು ಕೇವಲ ಸಸ್ಯಾಹಾರ ಮತ್ತು ಮಾಂಸಾಹಾರ ಎಂದು ವರ್ಗೀಕರಣ ಮಾಡುವುದರ ಜೊತೆಗೆ, ಸಸ್ಯಜನ್ಯ ಅಥವಾ ಸಸ್ಯಮೂಲದ ಆಹಾರ ಮತ್ತು ಪ್ರಾಣಿಜನ್ಯ ಅಥವಾ ಪ್ರಾಣಿಮೂಲದ ಆಹಾರ ಎಂದು ವರ್ಗೀಕರಿಸುವುದು ಹೆಚ್ಚು ಸೂಕ್ತ. ಆಗ ಹಾಲು, ಜೇನು, ಮೊಟ್ಟೆಗಳನ್ನು ಪ್ರಾಣಿಜನ್ಯ ಅಥವಾ ಪ್ರಾಣಿ ಮೂಲದ ಸಸ್ಯಾಹಾರಗಳು ಎನ್ನಬಹುದು.

ಈ ಲೇಖನದ ಮೂಲಕ ಅಥವಾ ಈ ಹೇಳಿಕೆಗಳ ಮೂಲಕ ಯಾರ ಭಾವನೆಗಳನ್ನಾಗಲೀ ಅಥವಾ ನಂಬಿಕೆಗಳನ್ನಾಗಲೀ ನೋಯಿಸುವ ಅಥವಾ ಅವಮಾನಿಸುವ ಉದ್ದೇಶ ನನಗಿಲ್ಲ. ಕೆಲವು ವೈಜ್ಞಾನಿಕ ವಿಚಾರಗಳನ್ನು ಉಲ್ಲೇಖಿಸುತ್ತಿದ್ದೇನೆ, ಅಷ್ಟೇ. ಯಾರಾದರೂ ಇದನ್ನು ಒಪ್ಪದಿದ್ದರೆ, ಅವರ ಅಭಿಪ್ರಾಯವನ್ನು ಗೌರವಿಸುತ್ತೇನೆ.

ಗಮನಿಸಿ: ಮನುಷ್ಯರ ದೇಹಕ್ಕೆ ಅಗತ್ಯವಿರುವ ಬಹುತೇಕ ಎಲ್ಲ ಪೋಷಕಾಂಶಗಳನ್ನು ಹೊಂದಿರುವ ಮೊಟ್ಟೆ ಜಗತ್ತಿನ ಅತ್ಯುತ್ತಮ ಪೌಷ್ಠಿಕ ಆಹಾರಗಳಲ್ಲೊಂದು. ದಿನಕ್ಕೊಂದು ಮೊಟ್ಟೆಯಿಂದ ತುಂಬುವುದು ಹೊಟ್ಟೆ ಎಂಬ ಘೋಷಣಾ ವಾಕ್ಯದಲ್ಲಿ ಸತ್ಯವಿದೆ. ಆದ್ದರಿಂದ ಮೊಟ್ಟೆಯು, ಪೌಷ್ಠಿಕತೆಯ ಅಗತ್ಯವಿರುವ ಎಲ್ಲ ವ್ಯಕ್ತಿಗಳೂ ಧಾರಾಳವಾಗಿ ಸೇವಿಸಬಹುದಾದ ಅಥವಾ ಸೇವಿಸಬೇಕಾದ ಆಹಾರ ಪದಾರ್ಥ. ವಿಶೇಷವಾಗಿ ಗರ್ಭಿಣಿ ಸ್ತ್ರೀಯರಿಗೆ, ಹಾಲುಣಿಸುವ ತಾಯಂದಿರಿಗೆ, ಬೆಳೆಯುತ್ತಿರುವ ಮಕ್ಕಳಿಗೆ, ರೋಗದಿಂದ ಗುಣಮುಖರಾಗುತ್ತಿರುವ ವ್ಯಕ್ತಿಗಳಿಗೆ ಮೊಟ್ಟೆ ತುಂಬಾ ಉಪಯುಕ್ತವಾದ ಅಹಾರ ಪದಾರ್ಥ.

ಅಲ್ಲದೇ, ವೈದ್ಯಕೀಯ ಸಂಶೋಧನೆಗಳ ಪ್ರಕಾರ ರಕ್ತದೊತ್ತಡ, ಮಧುಮೇಹದಂತಹ ರೋಗಗಳನ್ನು ಹೊಂದಿರುವ ವ್ಯಕ್ತಿಗಳೂ ಸಹ ದಿನಕ್ಕೊಂದು ಮೊಟ್ಟೆಯನ್ನು ಧಾರಾಳವಾಗಿ ಸೇವಿಸಬಹುದು. ಈಗಾಗಲೇ ಹೆಚ್ಚಿನ ರಕ್ತದ ಕೊಲೆಸ್ಟ್ರಾಲ್ ಸಮಸ್ಯೆಯಿರುವ ಅಥವಾ ಹೃದಯ ಸಂಬಂಧೀ ರೋಗವುಳ್ಳ ವ್ಯಕ್ತಿಗಳು, ಸ್ವಲ್ಪ ಕೊಲೆಸ್ಟ್ರಾಲ್ ಹೆಚ್ಚಾಗಿರುವ ಮೊಟ್ಟೆಯ ಹಳದಿ ಭಾಗವನ್ನು ತೆಗೆದು ಹಾಕಿ, ಬಿಳಿ ಭಾಗವನ್ನು ಸೇವಿಸಲು ಯಾವುದೇ ತೊಂದರೆಯಿಲ್ಲ.

ಲೇಖಕರ ಕಿರುಪರಿಚಯ
ಡಾ. ಎ. ಎಂ. ಶಿವಕುಮಾರ್

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನವರಾದ ಇವರು, ಪ್ರಸ್ತುತ ಕರ್ನಾಟಕ ಸರ್ಕಾರದ ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಳೆಯ ಕನ್ನಡ ಚಲನಚಿತ್ರ ಮತ್ತು ಹಾಡುಗಳ ಸಿ.ಡಿ. ಸಂಗ್ರಹಣೆ, ಸಂಗೀತ ಕೇಳುವುದು, ಕನ್ನಡ ಕಾದಂಬರಿಗಳನ್ನು ಓದುವುದು ಇವರ ಹವ್ಯಾಸ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ