ಶುಕ್ರವಾರ, ನವೆಂಬರ್ 20, 2015

ಪ್ರಕೃತಿ ವಿಕೋಪಗಳಲ್ಲಿ ಪ್ರಾಣಿಗಳ ವರ್ತನೆ ಹಾಗೂ ರಕ್ಷಣೆ

ಆಧುನಿಕ ಯುಗದ ಮಾನವನು ತಂತ್ರಜ್ಞಾನದ ಸಹಾಯದಿಂದ ಅನೇಕ ವಿಸ್ಮಯಕಾರಿ ಸಾಧನೆಗಳನ್ನು ಮಾಡುವಲ್ಲಿ ಯಶಸ್ವಿಯಾಗಿರುವನಾದರೂ, ಪ್ರಕೃತಿಯನ್ನು ಹಾಗೂ ಪ್ರಾಕೃತಿಕ ವಿದ್ಯಮಾನಗಳನ್ನು ನಿಯಂತ್ರಿಸುವಲ್ಲಿ ಸಫಲನಾಗಿಲ್ಲ. ಬೆಂಕಿ ಆಕಸ್ಮಕ/ಅವಗಢ, ಪ್ರವಾಹ, ಸುನಾಮಿ, ಭೂಕಂಪ, ಜ್ವಾಲಾಮುಖಿ, ಹರಿಕೈನ್, ಸನ್-ಸ್ಟ್ರೋಕ್ ಗಳಂತಹ ಪ್ರಕೃತಿ ವಿಕೋಪಗಳನ್ನು ಇಲ್ಲಿ ಉದಾಹರಿಸಬಹುದು. ಇಂತಹ ಸಂದರ್ಭಗಳಲ್ಲಿ ಮನುಕುಲದೊಂದಿಗೆ ಪ್ರಾಣಿಗಳೂ ಸಹ ತೊಂದರೆಗೊಳಗಾಗುತ್ತವೆ. ಅವುಗಳೆಂದರೆ, ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು, ಮೊಲ, ದನ, ಎಮ್ಮೆ, ಕುದುರೆ, ಕುರಿ, ಮೇಕೆ, ಇತರೆ. ಅಲ್ಲದೇ ಕಾಡುಪ್ರಾಣಿಗಳಾದ ಹುಲಿ, ಸಿಂಹ, ಚಿರತೆ, ಆನೆ, ನರಿ ಹಾಗೂ ಮೃಗಾಲಯಗಳಲ್ಲಿ ಮತ್ತು ಇತರೆ ಸ್ಥಳಗಳಲ್ಲಿ ಬಂಧಿತ ಪ್ರಾಣಿಗಳೂ ಸಹ ಪ್ರಕೃತಿ ವಿಕೋಪಕ್ಕೆ ಸಿಲುಕಿಕೊಳ್ಳುವ ಸಾಧ್ಯತೆಗಳಿವೆ. ಇವುಗಳ ರಕ್ಷಣೆಯ ಬಗ್ಗೆ ಕೆಲವು ಮಾಹಿತಿಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸೋಣ.

ಪ್ರಕೃತಿ ವಿಕೋಪದ ಮುನ್ಸೂಚನೆ: ಸಾಮಾನ್ಯವಾಗಿ ಪ್ರಾಣಿಗಳು ಪ್ರಕೃತಿ ವಿಕೋಪದ ಮುನ್ಸೂಚನೆಯನ್ನು ಮಾನವರಿಗಿಂತ ಬಹುಬೇಗನೇ ಗ್ರಹಿಸುವ ಸಾಮರ್ಥ್ಯ ಹೊಂದಿವೆ. ಅತ್ಯಾಧುನಿಕ ತಂತ್ರಜ್ಞಾನಗಳ ನೆರವಿನಿಂದ ಈ ದಿನದ ಮಾನವನು ಕೆಲವು ಪ್ರಕೃತಿ ವಿಕೋಪಗಳ ಬಗ್ಗೆ ಮುನ್ಸೂಚನೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಹಿಂದನ ಕಾಲಘಟ್ಟದಲ್ಲಿ ನಮ್ಮ ಪೂರ್ವಜರು ಅವರವರ ಭೌಗೋಳಿಕ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಸಂಭವಿಸಬಹುದಾದ ಪ್ರಕೃತಿ ವಿಕೋಪಗಳ ಬಗ್ಗೆ ದೊರಕಬಹುದಾದ ಮುನ್ಸೂಚನೆಗಳನ್ನು ಪ್ರಕೃತಿಯಲ್ಲಾಗಬಹುದಾದ ಸೂಕ್ಷ್ಮ ಬದಲಾವಣೆಗಳು ಹಾಗೂ ಅನುಭವಗಳಿಂದ ಅರಿತುಕೊಳ್ಳಲು ಶಕ್ತರಾಗಿದ್ದರು. ಆದರೆ, ಪ್ರಾಣಿಗಳಿಗೆ ಪ್ರಕೃತಿ ವಿಕೋಪಗಳ ಮುನ್ಸೂಚನೆಯನ್ನು ನೈಸರ್ಗಿಕವಾಗಿಯೇ ಗ್ರಹಿಸಿಕೊಳ್ಳುವ ಶಕ್ತಿ ಇರುತ್ತದೆ. ಉದಾಹರಣೆಗೆ ಗೂಬೆಗಳು ಕೂಗುವುದು, ನಾಯಿ/ತೋಳಗಳು ಊಳಿಡುವುದು, ಗಾಬರಿಗೊಂಡು ಓಡಾಡುವುದು, ಸುರಕ್ಷಿತ ಪ್ರದೇಶಗಳನ್ನು ಅರಸಿ ಅವಿತುಕೊಳ್ಳುವುದು, ಇತ್ಯಾದಿ ವರ್ತನೆಯಲ್ಲಾಗಬಹುದಾದ ಬದಲಾವಣೆಗಳನ್ನು ನಾವು ಗಮನಿಸಬಹುದು. ಪ್ರಾಣಿಗಳ ಪಂಚೇಂದ್ರಿಯಗಳು ಬಹಳ ಚುರುಕಾಗಿರುವುದರಿಂದ ಇದು ಸಾಧ್ಯವಾಗುತ್ತದೆ.

ಸಾಧನ-ಸಲಕರಣೆಗಳು: ಸಾಕು ಪ್ರಾಣಿ, ಕ್ರೂರ ಪ್ರಾಣಿ ಹಾಗೂ ಬಂಧಿತ ಪ್ರಾಣಿಗಳನ್ನು ಪ್ರಕೃತಿ ವಿಕೋಪದಿಂದ ಕಾಪಾಡಲು ಕೆಲವಾರು ಮೂಲಭೂತ ಸಾಧನ-ಸಲಕರಣೆಗಳ ಅವಶ್ಯಕತೆ ಇರುತ್ತದೆ. ಉದಾಹರಣೆಗೆ, ಚೈನು, ಹಗ್ಗ, ಬಿದಿರು/ಪ್ಲಾಸ್ಟಿಕ್ ಬುಟ್ಟಿಗಳು, ಏಣಿ, ಬಲೆಗಳು, ಬ್ಯಾಗುಗಳು, ದೊಡ್ಡ ಕೋಲು ಅಥವಾ ದಡಿ, ಅರಿವಳಿಕೆ ಮದ್ದು, ವಾಹನ, ಇತ್ಯಾದಿ. ಇದರೊಂದಿಗೆ ವಿವಿಧ ಪ್ರಾಣಿಗಳಿಗೆ ಅವಶ್ಯವಿರುವ ಆಹಾರ, ನೀರು (ಸಾಕಷ್ಟು ಪ್ರಮಾಣದಲ್ಲಿ), ಟವೆಲ್, ಬ್ಲಾಂಕೆಟ್, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಔಷಧಗಳು, ಬಿರಟೆ ಸಹಿತ ಡಬ್ಬಗಳೂ ಸಹ ಬೇಕಾಗುತ್ತವೆ.

ಸಮನ್ವಯತೆ: ಪ್ರಕೃತಿ ವಿಕೋಪಗಳು ಸಂಭವಿಸಿದಾಗ ರಕ್ಷಣಾ ಕಾರ್ಯಗಳನ್ನು ತ್ವರಿತ ಗತಿಯಲ್ಲಿ ಕೈಗೊಳ್ಳುವ ಅಗತ್ಯವಿರುತ್ತದೆ. ಇಂತಹ ಸಮಯದಲ್ಲಿ ಬೇರೆ ಬೇರೆ ದೇಶಗಳು, ವಿವಿಧ ಹಂತದ ಸರ್ಕಾರಗಳು, ಸಂಘ-ಸಂಸ್ಥೆಗಳು, ಇಲಾಖೆಗಳು ಹಾಗೂ ಸ್ವಯಂ ಸೇವಕರ ನಡುವೆ ಸಮನ್ವಯ ಸಾಧಿಸುವ ಅವಶ್ಯಕತೆ ಇರುತ್ತದೆ. ಅಲ್ಲದೇ, ವಿಷಯ ತಜ್ಞರುಗಳ (ಪಶುವೈದ್ಯರು, ಅರಣ್ಯ, ಆರೋಗ್ಯ, ಇತರೆ) ವೃತ್ತಿಪರ ಜ್ಞಾನ/ಸೇವೆಗಳನ್ನು ರಕ್ಷಣಾ ಕಾರ್ಯಗಳಿಗಾಗಿ ಬಳಸಿಕೊಳ್ಳುವುದು ಸೂಕ್ತ.

ಮುಂಜಾಗ್ರತೆ: ಪ್ರಾಣಿಗಳ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಳ್ಳುವ ಮೊದಲು ಅಗತ್ಯ ಸಾಧನ-ಸಾಮಗ್ರಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು. ರಕ್ಷಣಾ ಕಾರ್ಯದಲ್ಲಿ ತೊಡಗಿಕೊಳ್ಳುವ ತಂಡದಲ್ಲಿ ವಿವಿಧ ಪ್ರಾಣಿಗಳ ವರ್ತನೆ ಹಾಗೂ ಅವುಗಳ ಸ್ವಭಾವಗಳ ಬಗ್ಗೆ ಅರಿವು ಹೊಂದಿರುವವರು ಅಥವಾ ವಿಷಯ ತಜ್ಞರ ಮಾರ್ಗದರ್ಶನ ಅತ್ಯಗತ್ಯ. ಅಲ್ಲದೇ, ರಕ್ಷಣಾ ಕಾರ್ಯದಲ್ಲಿ ತೊಡಗಿಕೊಳ್ಳುವವರು ದೈಹಿಕವಾಗಿ ಸಮರ್ಥ ಹಾಗೂ ಸದೃಢವಾಗಿರಬೇಕಾಗಿರುತ್ತದೆ, ಏಕೆಂದರೆ ಪ್ರಾಣಿಗಳನ್ನು ನಿಯಂತ್ರಿಸಲು ಯುಕ್ತಿಯೊಂದಿಗೆ ಶಕ್ತಿ/ಬಲದ ಅವಶ್ಯಕತೆಯೂ ಇರುವ ಸಾಧ್ಯತೆಯಿದೆ.

ಚಿತ್ರ ಕೃಪೆ: MyPetSource
ಪ್ರಾಣಿಗಳ ವರ್ತನೆ ಹಾಗೂ ರಕ್ಷಣೆ: ಅಸಹಜ ಸಂದರ್ಭಗಳಲ್ಲಿ ಪ್ರಾಣಿಗಳ ವರ್ತನೆಯನ್ನು ಊಹಿಸುವುದು ಕಷ್ಟಸಾಧ್ಯ. ಸಾಮಾನ್ಯ ಸಂದರ್ಭಗಳಲ್ಲಿನ ಪ್ರಾಣಿಗಳ ವರ್ತನೆಗೂ, ಅಸಹಜ ಸಂದರ್ಭಗಳಲ್ಲಿನ ಅವುಗಳ ವರ್ತನೆಗೂ ಬಹಳ ವ್ಯತ್ಯಾಸಗಳಿರುತ್ತದೆ. ಸ್ವಾಭಾವಿಕವಾಗಿ ಪ್ರಾಣಿಗಳು ಪ್ರಕೃತಿ ವಿಕೋಪಗಳಂತಹ ಅಸಹಜ ಸಂದರ್ಭಗಳಲ್ಲಿ ಮೂರು ವಿಧವಾಗಿ ನಡೆದುಕೊಳ್ಳಬಹುದು: ಅನಗತ್ಯ ಗಾಬರಿ (Fear), ಆಕ್ರಮಣ (Fight) ಮತ್ತು ತಪ್ಪಿಸಿಕೊಂಡು ಓಡುವುದು (Flight). ಆದ್ದರಿಂದ, ರಕ್ಷಣಾ ಕಾರ್ಯಾಚರಣೆಯ ವೇಳೆ ಪ್ರಾಣಿಗಳನ್ನು ಬಹಳ ಜಾಗರೂಕತೆಯಿಂದ ಸಮೀಪಿಸಬೇಕು. ಸಾಕು ಪ್ರಾಣಿಗಳನ್ನು ರಕ್ಷಣೆ ಮಾಡುವ ಸಮಯಗಳಲ್ಲಿ, ಅವುಗಳ ಮಾಲಿಕರು ಹೇಳಬಹುದಾದ ’ನಮ್ಮ ನಾಯಿ ಬಹಳ ಸಾಧು, ಏನೂ ಮಾಡುವುದಿಲ್ಲ, ಯಾರಿಗೂ ಕಚ್ಚುವುದಿಲ್ಲ..’ ಎಂಬಿತ್ಯಾದಿ ಮಾತುಗಳನ್ನು ನಂಬಲೇಬಾರದು. ಇಂತಹ ಪರಿಸ್ಥಿತಿಗಳಲ್ಲಿ ಸಾಕು ಪ್ರಾಣಿಗಳು ತಮ್ಮ ಮಾಲಿಕರ ಊಹೆಗೂ ಮೀರಿ, ಅಸ್ವಾಭಾವಿಕವಾಗಿ ವರ್ತಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ರಕ್ಷಣಾ ಸಿಬ್ಬಂದಿ ಪ್ರಾಣಿಗಳ ರಕ್ಷಣೆ ಮಾತ್ರವಲ್ಲ, ತಮ್ಮ ಸ್ವಯಂ ರಕ್ಷಣೆಯ ಬಗ್ಗೆಯೂ ಸಾಕಷ್ಟು ಗಮನ ವಹಿಸುವುದು ಅತೀ ಮುಖ್ಯವಾಗುತ್ತದೆ. ಬಹುತೇಕ ಸಣ್ಣ ಪ್ರಾಣಿಗಳು ಸಾಮಾನ್ಯವಾಗಿ ಬಾಯಿಯಿಂದ ಕಚ್ಚಿ ಆಕ್ರಮಣ ಮಾಡುವುದರಿಂದ, ರಕ್ಷಣೆ ನಂತರ ಸುರಕ್ಷತೆಯ ದೃಷ್ಟಿಯಿಂದ ಅವುಗಳ ಬಾಯಿಯನ್ನು ಸರಾಗವಾಗಿ ಉಸಿರಾಡಲು ಅನುವು ಮಾಡಿಕೊಟ್ಟು ಕಟ್ಟಬೇಕು. ರಗ್ಗು, ಬಲೆಯಂತಹ ಸಾಧನಗಳು ಸಣ್ಣ ಪ್ರಾಣಿಗಳನ್ನು ರಕ್ಷಿಸಲು ಉಪಯುಕ್ತವಾದರೆ, ದೊಡ್ಡ ಪ್ರಾಣಿಗಳನ್ನು ರಕ್ಷಿಸಲು ಹಗ್ಗ, ದಡಿ, ಕೋಲುಗಳ ಬಳಕೆ ಮಾಡಬಹುದು. ಹಾವುಗಳನ್ನು ರಕ್ಷಿಸಲು ಉದ್ದನೆಯ ಕೋಲು ಮತ್ತು ಚೀಲಗಳನ್ನು ಬಳಸಬಹುದು. ಕ್ರೂರ ವನ್ಯ ಜೀವಿಗಳಿಗೆ ಅರಿವಳಿಕೆ ಮದ್ದನ್ನು ಅಗತ್ಯ ಪ್ರಮಾಣದಲ್ಲಿ ಬಳಸಿ ರಕ್ಷಿಸಬಹುದು. ಪ್ರಾಣಿಗಳ ಗಮನವನ್ನು ಸೆಳೆಯಲು ಒಬ್ಬರು ಮುಂದಾದರೆ, ಮತ್ತೊಬ್ಬರು ಅವುಗಳನ್ನು ಹಿಡಿಯುವಲ್ಲಿ ಕಾರ್ಯಪ್ರವೃತ್ತರಾದರೆ ರಕ್ಷಣಾ ಕಾರ್ಯವು ಸುಲಭವಾಗುತ್ತದೆ.

ರಕ್ಷಿಸಿದ ನಂತರ ವಿವಿಧ ಜಾತಿಯ ಪ್ರಾಣಿಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಪ್ರತ್ಯೇಕವಾದ ಬಂಧನಗಳಲ್ಲಿ ಇರಿಸಬೇಕು. ರಕ್ಷಿಸಲ್ಪಟ್ಟ ಪ್ರಾಣಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಅನುಗುಣವಾಗಿ ಪ್ರಥಮ ಚಿಕಿತ್ಸೆ ನೀಡಿ, ನಂತರ ತ್ವರಿತವಾಗಿ ಅವುಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಾಣಿಕೆ ಮಾಡಬೇಕು. ಸಾಗಾಣಿಕೆ ಸಮಯವನ್ನು ಆದಷ್ಟೂ ಮಿತಗೊಳಿಸಿ, ದೂರದ ಪ್ರಯಾಣಗಳನ್ನು ಅವುಗಳ ಆರೋಗ್ಯ ಸುಧಾರಣೆ/ಸುಸ್ಥಿರತೆಯನ್ನು ಆಧರಿಸಿ ಯೋಜಿಸಬೇಕು. ಪ್ರಕೃತಿ ವಿಕೋಪದ ಸಮಯದಲ್ಲಿ ಪ್ರಾಣಿಗಳ ರಕ್ಷಣಾ ಕಾರ್ಯವು ಯಶಸ್ವಿಯಾಗಬೇಕಾದರೆ, ಅವುಗಳನ್ನು ಮನುಷ್ಯರ ಜೊತೆ ಜೊತೆಗೇ ರಕ್ಷಣೆ ಮಾಡಬೇಕಾಗುತ್ತದೆ.

ಲೇಖಕರ ಕಿರುಪರಿಚಯ
ಡಾ. ರಾಘವ

ಮೂಲತಃ ಮೈಸೂರಿನವರಾದ ಇವರು ಪ್ರಸ್ತುತ ಕರ್ನಾಟಕ ಸರ್ಕಾರದ ಪಶುಪಾಲನಾ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿಸ್ತರಣೆ ಹಾಗೂ ತರಬೇತಿ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ