ಗುರುವಾರ, ನವೆಂಬರ್ 12, 2015

ಚಂದ್ರಿ

ಅದೊಂದು ಮಲೆನಾಡ ನಟ್ಟನಡುವಿನ ಹಳ್ಳಿ. ನಾನು ಆ ಊರಿಗೆ ಪಶುವೈದ್ಯನಾಗಿ ವರ್ಗವಾಗಿ ಹೋಗಿ ಒಂದು ವಾರವಾಗಿರಬಹುದಷ್ಟೆ. ಅಂದು ಬೆಳಿಗ್ಗೆಯಿಂದ ಬಿಡುವಿಲ್ಲದ ಕೆಲಸ ಮುಗಿಸಿ ಆಸ್ಪತ್ರೆಯ ಪಕ್ಕದ ಹೊಟೇಲಿನಲ್ಲಿ ಮಧ್ಯಾಹ್ನ ಸೊಂಪಾಗಿ ಊಟ ಮಾಡಿ ಅರ್ಧ ಘಂಟೆ ವಾಡಿಕೆಯ ನಿದ್ದೆ ತೆಗೆದೆ. ನಂತರ ಅದೇ ಹೊಟೇಲಿನಲ್ಲಿ ಸ್ಟ್ರಾಂಗ್ ಕೇಟಿ ಕುಡಿದು ಅದರ ಗುಂಗು ತಲೆಗೆ ಹತ್ತುತ್ತಿದ್ದಂತೆ ಪರಮಾನಂದ ಅನುಭವಿಸುತ್ತ ಕಚೇರಿಯಲ್ಲಿ ಕಾಲು ಚಾಚಿ ನಿರಾಳವಾಗಿ ಕುಳಿತಿದ್ದೆ.
ಅಷ್ಟರಲ್ಲಿ ರೈತರೊಬ್ಬರ ಫ಼ೋನ್. ಅವರ ಜೆರ್ಸಿ ಹಸುವೊಂದಕ್ಕೆ ರಕ್ತ ಭೇದಿಯಂತೆ, ಆಹಾರ ಏನೂ ತಿನ್ನುತ್ತಿಲ್ಲ, ಒಮ್ಮೆ ಮನೆಗೆ.. ಅಲ್ಲಲ್ಲ, ಕೊಟ್ಟಿಗೆಗೆ ಬಂದು ನೋಡಬೇಕೆಂಬ ವಿನಂತಿ. ಮನೆಯ ಅಡ್ರೆಸ್ಸು ಕೇಳಿಕೊಂಡು ಹೊರಟೆ. ಬೈಕಿನಲ್ಲಿ ಹತ್ತು ನಿಮಿಷದ ಹಾದಿ. ಬಾಗಿಲಲ್ಲೇ ನಿಂತು ಸ್ವಾಗತಿಸಿದ ರೈತ ರಾಮಣ್ಣ ನನ್ನನ್ನು ಕೊಟ್ಟಿಗೆಗೆ ಕರೆದೊಯ್ದರು.

ಹಳೆಯ ಕಾಲದ ಕಟ್ಟಡ. ಯಾವುದೋ ಕಾಲದಲ್ಲಿ ನೆಲಕ್ಕೆ ಹಾಕಿದ್ದ ಕಾಂಕ್ರೀಟು ಅಲ್ಲಲ್ಲಿ ಕಿತ್ತು ಬಂದು ನಮ್ಮ ಪಿಡಬ್ಲ್ಯೂಡಿ ರಸ್ತೆಗಳನ್ನೂ ನಾಚಿಸುವಂತೆ ಹೊಂಡ ಹೊಂಡವಾದ ನೆಲ. ಆ ಹೊಂಡದಲ್ಲಿ ಸಂಗ್ರಹವಾದ ಸಗಣಿ ಮೂತ್ರ. ಒತ್ತೊತ್ತಾಗಿ ಕಟ್ಟಿಹಾಕಿದ ಮೂರು ಹಸು ಒಂದು ಎಮ್ಮೆ ಹಾಗೂ ಅದರ ಕರು.

ಕೊಟ್ಟಿಗೆಯ ಒಳಹೊಕ್ಕೊಡನೆ ರೋಗಿಯನ್ನು ಗುರುತಿಸಲು ತಡವಾಗಲಿಲ್ಲ. ಕೆಂಪಾದ ಕೆಟ್ಟ ವಾಸನೆಯ ನೀರಿನಂತೆ ನೆಲದ ಮೇಲೆ ಹರಡಿದ ಸಗಣಿ. ತಲೆ ಬಗ್ಗಿಸಿ ಮಂಕಾಗಿ ನಿಂತ ಹಸು.

ಆ ಇರುಕಲು ಜಾಗದಲ್ಲೇ ಒಂದೆಡೆ ನಿಂತು ರಾಮಣ್ಣರಿಗೆ ನಿರ್ದೇಶನ ಕೊಡತೊಡಗಿದೆ. ಬಿಸಿನೀರು, ಸೋಪನ್ನು ತರಲು ಹೇಳಿದೆ. ಹಗ್ಗವೊಂದರಿಂದ ಹಸುವನ್ನು ಅಲುಗಾಡದಂತೆ ಬಿಗಿದು ಕಟ್ಟಿಸಿದೆ. ಪರೀಕ್ಷೆ ಮತ್ತು ಚಿಕಿತ್ಸೆಗಳಿಗೆ ಅನುಕೂಲವಾಗುವಂತೆ, ರಾಡಿಯಾಗಿದ್ದ ಅದರ ಹಿಂಭಾಗವನ್ನು ತಣ್ಣೀರಿನಿಂದ ತೊಳೆಯಲು ಹೇಳುತ್ತಿರುವಷ್ಟರಲ್ಲಿ ನನ್ನನ್ನು ಹಿಂದಿನಿಂದ ಮೃದುವಾಗಿ ಯಾರೋ ತಳ್ಳಿದಂತಾಯಿತು. ಜೊತೆಗೆ ನನ್ನ ಅಂಗಿಯನ್ನು ಸ್ವಲ್ಪ ಎಳೆದ ಅನುಭವ. ಅಯಾಚಿತವಾಗಿ ಹಿಂದೆ ತಿರುಗಿ ನೋಡಿದರೆ ಅಲ್ಲಿದ್ದುದು ಒಂದು ಎಮ್ಮೆ. ರೈತರೊಂದಿಗೆ ಮಾತಾಡುವ ಭರದಲ್ಲಿ ನನ್ನ ಪೇಷೆಂಟಿನ ಪಕ್ಕದಲ್ಲಿಯೇ ಕಟ್ಟಿಹಾಕಿದ್ದ ಆ ಎಮ್ಮೆಯನ್ನು ನಾನು ಗಮನಿಸಿರಲಿಲ್ಲ. ಅದಕ್ಕೆ ಹೆಚ್ಚೂ ಕಡಿಮೆ ಒತ್ತಿಕೊಂಡೇ ಇಷ್ಟುಹೊತ್ತು ನಿಂತಿದ್ದೆ.

ಇಲ್ಲಿ ನಮ್ಮ ನಾಟಿ ಎಮ್ಮೆಗಳ ಸ್ವಭಾವದ ಬಗ್ಗೆ ಸ್ವಲ್ಪ ನಿಮಗೆ ಹೇಳಬೇಕು. ಸಾಮಾನ್ಯವಾಗಿ ಅವು ತೀರಾ ಸಂಶಯ ಸ್ವಭಾವದವು. ಹೊಸಬರನ್ನು ಸಹಿಸುವುದಿಲ್ಲ. ಭುಸುಗುಟ್ಟುತ್ತ ನಮ್ಮನ್ನು ಹೊರದಬ್ಬಲೇ ನೋಡುತ್ತವೆ. ಎಲ್ಲಿಂದ ಬಂದ ಶನಿ ಎಂಬಂತೆ ಕಣ್ಣಲ್ಲಿ ಕಣ್ಣಿಟ್ಟು ಗುರಾಯಿಸುತ್ತವೆ. ಹೊಸಬರು ಹಾಗಿರಲಿ, ಮನೆಯವರೇ ಆದರೂ ಸಹಾ ಎಲ್ಲರ ಜೊತೆಗೂ ಸಲಿಗೆ ಇಟ್ಟುಕೊಳ್ಳಲಾರವು. ಹಾಲು ಹಿಂಡುವಾಗಲೂ ಅಷ್ಟೇ. ಏನಾದರೂ ಕಿರಿಕಿರಿಯಾದರೆ ಮುಲಾಜಿಲ್ಲದೇ ಝಾಡಿಸಿ ಒದ್ದೋ ಅಥವಾ ಒಂದು ಹನಿ ಹಾಲು ಕೂಡ ಹೊರಡದಂತೆ ಸೊರವು ಬಿಡದೆಯೋ ಕಕ್ಕಾಬಿಕ್ಕಿ ಮಾಡಿಬಿಡುತ್ತವೆ. ಮನೆಯಲ್ಲಿ ಹೆಂಗಸರು ಮಾತ್ರ ಹಾಲು ಹಿಂಡಿ ರೂಢಿಯಾಗಿಬಿಟ್ಟರಂತೂ ಮುಗಿದೇಹೋಯಿತು, ಅವರನ್ನು ಬಿಟ್ಟು ಬೇರೆಯವರಿಗೆ ಹಾಲು ಕೊಡಲಾರವು. ಅಕಸ್ಮಾತ್ ಮನೆಯ ಯಜಮಾನಿತಿ ನೆಂಟರ ಮೆನೆಗೆ ಹೋಗಿ ಹಾಲು ಹಿಂಡುವ ಸಮಯಕ್ಕೆ ಹಿಂತಿರುಗದಿದ್ದರೆ ಯಜಮಾನ ಆಕೆಯ ಸೀರೆ ಸುತ್ತಿಕೊಂಡು ಎಮ್ಮೆಯ ಹಾಲು ಹಿಂಡಿಕೊಂಡು ಬರುವ ಸಂದರ್ಭಗಳೂ ಉಂಟು. ಹೀಗಾಗಿಯೇ ಮದುವೆ ಮುಂಜಿ ತಿಥಿ ಶ್ರಾದ್ಧದಂತಹ ಸಮಾರಂಭಗಳಲ್ಲಿ ಸಂಜೀಗ್ ಬೇಗ ಮನೀಗೆ ಹೋಗಿ ಮುಟ್ಗ್ಯಳಕ್ಕು ಮಾರಾಯ. ಇಲ್ದಿದ್ರೆ ಯಮ್ಮನೆ ಯಮ್ಮೆ ಹಾಲು ಕೊಡಲ್ಲೆ ಎಂಬ ಉದ್ಗಾರ ಸಾಮಾನ್ಯ. ಇದು ರೈತರ ಪಾಡಾದರೆ ಅವಕ್ಕೆ ಚಿಕಿತ್ಸೆ ನೀಡಲು ಹೋಗುವ ನಮ್ಮ ಪರಿಸ್ಥಿತಿ ಇನ್ನೂ ಕಷ್ಟ. ರೋಗ ತಪಾಸಣೆಗೂ ಮುಂದಿನ ಕಾಲುಗಳನ್ನು ಸೇರಿಸಿ ಕಟ್ಟಿಸಿಕೊಂಡು ತಲೆ ಅಲ್ಲಾಡಿಸದಂತೆ ಭದ್ರವಾಗಿ ಹಗ್ಗದಿಂದ ಬಂಧಿಸಿಕೊಂಡೇ ಹತ್ತಿರ ಹೋಗಬೇಕು. ಆದರೂ ಮುಂದಿನ ಕಾಲುಗಳಿಂದಲೇ ಬ್ಯಾಲೆನ್ಸ್ ಮಾಡಿಕೊಂಡು ಎರಡೂ ಹಿಂಗಾಲುಗಳನ್ನು ಒಮ್ಮೆಲೇ ಎತ್ತಿ ಕತ್ತೆ ಒದ್ದಂತೆ ಜಾಡಿಸಿ ಒದೆಯುವ ಕಲೆ ಇವಕ್ಕೆ ಕರಗತ. ಇವೆಲ್ಲವುಗಳಿಂದಲೂ ವಿಚಲಿತರಾಗದೇ ನಾವು ಇಂಜೆಕ್ಷನ್ ಕೊಡಲು ಮುಂದುವರಿದರೆ ಪದೇ ಪದೇ ಚರ್ರೆಂದು ಉಚ್ಚೆ ಹೊಯ್ಯಲಾರಂಭಿಸುತ್ತವೆ. ಸೂಜಿ ಹಿಡಿದು ನಾವು ಹತ್ತಿರ ಹೋದೊಡನೆ ಉಚ್ಚೆ ಹಾರಿಸಲು ಶುರು. ದೂರ ನಿಂತರೆ ಏಕ್ದಂ ಉಚ್ಚೆ ಹೊಯ್ಯುವುದನ್ನು ನಿಲ್ಲಿಸುತ್ತವೆ. ಹತ್ತಿರ ಹೋದರೆ ಪುನಃ ಶುರು. ಬೇಕೆಂದಾಗಲೆಲ್ಲ ಉಚ್ಚೆಯನ್ನು ಯಾರು ಬೇಕಾದರೂ ಹೊಯ್ಯಬಹುದು. ಆದರೆ ಹೊಯ್ಯುತ್ತಿರುವ ಉಚ್ಚೆಯನ್ನು ಬಂದ್ ಮಾಡಿ ಪುನಃ ಅದೇ ವೇಗದಲ್ಲಿ ಹಾರಿಸುವುದು ಬಹುಶಃ ನಮ್ಮ ನಾಟಿ ಎಮ್ಮೆಗಳಿಗೆ ಮಾತ್ರ ಸಿದ್ಧಿಸಿದ ಕಲೆ ಎಂಬುದು ನನ್ನ ಅಚಲವಾದ ನಂಬಿಕೆ. ನಮ್ಮಂಥವರನ್ನು ದೂರವಿರಿಸಲು ಕೆಲವು ಎಮ್ಮೆಗಳದ್ದು ಇನ್ನೂ ಉತ್ತಮ ವರಸೆಯಿದೆ. ನಾವು ಹತ್ತಿರ ಬಂದೊಡನೆ ಜೋರಾಗಿ ಉಚ್ಚೆ ಹೊಯ್ಯುತ್ತ ಅರ್ಧಚಂದ್ರಾಕೃತಿಯಲ್ಲಿ ವೇಗವಾಗಿ ಅತ್ತಿಂದಿತ್ತ ತಿರುಗುತ್ತವೆ. ಸುತ್ತ ಹತ್ತು ಅಡಿ ದೂರದಲ್ಲಿ ನಿಂತವರಿಗೆಲ್ಲ ಉಚಿತ ಮೂತ್ರ ಸಿಂಚನ. ಆದರೆ ಅವುಗಳ ಆರೋಗ್ಯದ ಜವಾಬ್ದಾರಿ ಹೊತ್ತ ನಾವು ಸುಮ್ಮನಿರುವುದಿಲ್ಲವಲ್ಲ! ಏನೇನೋ ಉಪಾಯದಿಂದ ಅಥವಾ ಕೊನೆಗೆ ಬಡಿಗೆಯ ರುಚಿ ತೋರಿಸಿಯಾದರೂ ಇಂಜೆಕ್ಶನ್ ಚುಚ್ಚುವ ಕರ್ತವ್ಯ ಮುಗಿಸಿಯೇ ಅಲ್ಲಿಂದ ಹೊರಡುತ್ತೇವೆ! ಇವುಗಳ ಮೂತ್ರ ಪ್ರೋಕ್ಷಣೆಯಲ್ಲೂ ಒಂದು ವಿಶೇಷವಿದೆ. ಅದೆಂದರೆ ಎಮ್ಮೆ ಮೂತ್ರಕ್ಕಿರುವ ಒಂದು ಪ್ರತ್ಯೇಕವಾದ ವಾಸನೆ. ಅದನ್ನು ದುರ್ವಾಸನೆಯೆಂತಲೂ ಬೇಕಾದರೆ ನೀವು ಅಂದುಕೊಳ್ಳಬಹುದು. ಇಂತಹ ಎಮ್ಮೆಗಳ ಚಿಕಿತ್ಸೆ ಮುಗಿಸಿ ಮನೆಗೆ ಹೋದರೆ ರಾತ್ರಿ ನನ್ನ ಹೆಂಡತಿಯೂ ಇವತ್ತು ಎಷ್ಟು ಎಮ್ಮೆಗೆ ಟ್ರೀಟ್ಮೆಂಟ್ ಮಾಡಿದ್ರಿ? ಎಂದು ಪ್ರಶ್ನಿಸುವಷ್ಟು ಬುದ್ಧಿವಂತಳಾಗಿದ್ದಾಳೆ. ಏನಿದ್ದರೂ ಅವಳದು ಹದಿನೈದು ವರ್ಷ ನನ್ನ ಜೊತೆ ಏಗಿದ ಅನುಭವ! ಏನಾದರೂ ಆಗಲೀ ಈ ಎಮ್ಮೆ ಹಾಲಿನದು ಒಂದು ಅದ್ಭುತ ರುಚಿ. ಅದರ ಕಾಫಿ, ಟೀ, ಮೊಸರುಗಳನ್ನು ಸವಿದವರಿಗೇ ಗೊತ್ತು ಅದರ ವಿಶೇಷತೆ. ಈ ರುಚಿಗಾಗಿಯೇ ರೈತರು ಅದು ಕೊಡುವ ಎಲ್ಲ ತಾಪತ್ರಯಗಳನ್ನೂ ಸಹಿಸುತ್ತಾರೆ ಎಂದು ಕಾಣುತ್ತದೆ. ಹೀಗಾಗಿ ಎಮ್ಮೆ ಸಾಕಿದವರ ಮನೆಗೆ ನಾನು ಚಿಕಿತ್ಸೆಗಾಗಿ ಹೋದರೆ ಎಷ್ಟೇ ಅವಸರದಲ್ಲಿದ್ದರೂ ಅಲ್ಲಿನ ಕಾಫಿ ಟೀ ಬೇಡವೆನ್ನುವುದೇ ಇಲ್ಲ!

ವಿಷಯ ಎಲ್ಲೆಲ್ಲಿಗೋ ಹೋಯಿತು. ಎಮ್ಮೆಯ ಸಾಮಾನ್ಯ ಸ್ವಭಾವಕ್ಕೆ ವಿರುದ್ಧವಾಗಿ ರಾಮಣ್ಣನವರ ಮನೆಯ ಈ ಎಮ್ಮೆ ಹೊಸಬನಾದ ನನ್ನ ಉಪಸ್ಥಿತಿಯಲ್ಲೂ ನಿರಾಳವಾಗಿ ಮೆಲುಕುಹಾಕುತ್ತ ನಿಂತಿತ್ತು. ಗುಂಡನೆಯ ಅದರ ಮಿಂಚುಗಣ್ಣುಗಳು ನನ್ನನ್ನೇ ದೃಷ್ಟಿಸುತ್ತ ಸ್ನೇಹಭಾವ ಸೂಚಿಸುತ್ತಿದ್ದಂತೆ ಅನಿಸಿತು. ಇಷ್ಟು ಶಾಂತವಾದ ಸಾಧುಸ್ವಭಾವ ಎಮ್ಮೆ ನನ್ನ ಅನುಭವದಲ್ಲಿ ಅಪರೂಪವೇ. ಆ ರೈತರೊಂದಿಗೆ ಮಾತನಾಡುತ್ತಿರುವಾಗ, ಅದು ತನ್ನ ಸ್ವಭಾವಕ್ಕೆ ಅನುಗುಣವಾಗಿ, ನಾವು ಹೊಸಬರನ್ನು ಪರಿಚಯ ಮಾಡಿಕೊಳ್ಳುವಾಗ ಹಸ್ತಲಾಘವ ಮಾಡುವಂತೆ, ತನ್ನದೇ ಆದ ರೀತಿಯಲ್ಲಿ ಆ ಎಮ್ಮೆ ನನ್ನ ಸೊಂಟವನ್ನು ಮೃದುವಾಗಿ ಒತ್ತಿ ತನ್ನೊಂದಿಗೂ ಮಾತನಾಡು ಎಂಬಂತೆ ತನ್ನ ಬಾಯಲ್ಲಿ ಷರ್ಟಿನ ತುದಿಯನ್ನು ಎಳೆದಿತ್ತು!

ಚಂದ್ರಿ
ಈಗ ನಾನು ಕೂಡ ಸಂತೋಷದಿಂದ ಅದರ ಕೊಂಬುಗಳ ನಡುವಿನ ತಲೆಯ ಭಾಗವನ್ನು ಮೃದುವಾಗಿ ಕೆರೆಯುತ್ತಾ ಎಮ್ಮೆಯನ್ನು ಸೂಕ್ಷ್ಮವಾಗಿ ಗಮನಿಸಿದೆ. ನಸುಗಪ್ಪು ಬಣ್ಣ. ಚಕ್ರಕೋಡುಗಳು. ಹಣೆಯ ಮೇಲೆ ಅರ್ಧಚಂದ್ರಾಕೃತಿಯಲ್ಲಿ ಬಿಳಿ ಬಣ್ಣ. ಅದರ ಮಧ್ಯದಲ್ಲಿ ಕುಂಕುಮವಿಟ್ಟಂತೆ ಬೊಟ್ಟು ಗಾತ್ರದ ಬಿಳಿಯ ಚುಕ್ಕೆ. ಸೊಂಪಾದ ಎಮ್ಮೆಯದು.

ನನ್ನ ಗಮನ ಎಮ್ಮೆಯತ್ತ ಹೊರಳಿದ್ದನ್ನು ಗಮನಿಸಿದ ಯಜಮಾನರು ನೋಡಿ ನಸುನಕ್ಕು, ಡಾಕ್ಟ್ರೇ, ಹ್ಯಾಗಿದೆ ಎಮ್ಮೆ? ಭಾಳಾ ಸಭ್ಯ. ಚಿಕ್ ಮಕ್ಳೂ ಸೈತ ಅದ್ರ ಹೊಟ್ಟೇ ಆಡೀಗೆ ನುಸೀಬಹ್ದು ನೋಡಿ. ಮನೇಲೇ ಹುಟ್ಟಿ ಬೆಳೆದದ್ದು. ಚಂದ್ರೀನ ಭಾಳ ಪ್ರೀತಿಂದ ಸಾಕಿದೀವಿ ಎಂದರು. ತನ್ನ ಯಜಮಾನನ ಮಾತನ್ನು ಅನುಮೋದಿಸುವಂತೆ ಅದು ತಲೆ ತುರಿಸುತ್ತಿದ್ದ ನನ್ನ ಕೈಯನ್ನು ಉದ್ದ ನಾಲಿಗೆಯಿಂದ ನೆಕ್ಕಿತು. ಸ್ಯಾಂಡ್ ಪೇಪರಿನಿಂದ ಉಜ್ಜಿದಂತಾದರೂ ಮೃದುವಾಗಿ ಒಮ್ಮೆ ಅದರ ಕೆನ್ನೆ ತಟ್ಟಿ ಹಸುವಿನ ಚಿಕಿತ್ಸೆಯತ್ತ ಗಮನ ಹರಿಸಿದೆ.

ಇದಾಗಿ ಕೇವಲ ಹದಿನೈದು ದಿನಗಳ ನಂತರ ಅದೇ ಎಮ್ಮೆ ಖಾಯಿಲೆ ಬಿತ್ತು. ದೇಹದ ದುಗ್ಧರಸ ಗ್ರಂಥಿಗಳು ಊದಿಕೊಂಡು ತೀವ್ರ ಜ್ವರ ಬರುವ ಆ ರೋಗಕ್ಕೆ ಎರಡು ಮೂರು ದಿನಗಳ ಸತತ ಚಿಕಿತ್ಸೆ ಅಗತ್ಯ. ಹಾಗಾಗಿ ಪ್ರತಿದಿನ ಹೋಗಿ ನಾನು ಇಂಜೆಕ್ಷನ್ ಮಾಡುವಾಗಲೂ ಒಂಚೂರೂ ಅಲುಗಾಡದೇ  ನಿಂತಲ್ಲೇ ನಿಂತು ಚಿಕಿತ್ಸೆ ಪಡೆದುಕೊಳ್ಳುತ್ತಿತ್ತು. ಇದೆಲ್ಲದರಿಂದ ನನಗೆ ಆ ಚಂದ್ರಿ ಎಮ್ಮೆಯ ಮೇಲೇ ತುಂಬ ಆತ್ಮೀಯತೆ ಬೆಳೆಯಿತು. ಬೇರೆ ಕೆಲಸಕ್ಕೆ ಅವರ ಮನೆಗೆ ಹೋದಾಗಲೆಲ್ಲ ಚಂದ್ರಿಯ ಕೆನ್ನೆ ಸವರಿ ತಲೆ ತುರಿಸಿ ಮಾತನಾಡಿಸಿಯೇ ಬರುತ್ತಿದ್ದೆ.

ಹೀಗೇ ಮೂರು ನಾಲ್ಕು ತಿಂಗಳು ಕಳೆದಿರಬೇಕು. ಒಂದು ದಿನ ಅಲ್ಲೇ ಪಕ್ಕದ ಹಳ್ಳಿಯ ಸೋಮಭಟ್ಟರು ಗಾಬರಿಯಿಂದ ಆಸ್ಪತ್ರೆಗೆ ಓಡೋಡುತ್ತ ಬಂದರು. ಏದುಸಿರು ಬಿಡುತ್ತ  ಅವರು ಹೇಳಿದ್ದಿಷ್ಟು. ಕೆರೆಯ ಕೆಳಗಿರುವ ಅವರ ಭತ್ತದ ಗದ್ದೆಯ ಮೇಲ್ಭಾಗದಲ್ಲಿ ದೊಡ್ಡ ಕಾಲುವೆಯೊಂದಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ನೀರು ರಭಸವಾಗಿ ಹರಿದು ಮಣ್ಣು ಕೊಚ್ಚಿಕೊಂಡು ಹೋಗಿ ದೊಡ್ಡ ಕೊರಕಲೇ ಆಗಿದೆ. ನಿನ್ನೆ ಭಟ್ಟರು ಗದ್ದೆಯ ಕಡೆ ಹೋದಾಗ ಆ ಕಾಲುವೆಯ ಬಳಿ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ ಅಲ್ಲಿ ಹೋಗಿ ನೋಡಿದರೆ ಒಂದು ಎಮ್ಮೆ ಅಲ್ಲಿ ಸಿಲುಕಿಕೊಂಡಿದೆ. ಪಾಪ ಯಾರ ಎಮ್ಮೆಯೋ, ಅಡವಿಯಲ್ಲಿ ಮೇಯುತ್ತಿರುವಾಗ ಕಾಲು ಜಾರಿಯೋ ಏನೋ ಕೊರಕಲಿಗೆ ಬಿದ್ದುಬಿಟ್ಟಿದೆ. ಮೇಲೇಳಲಾಗದೇ ಒದ್ದಾಡಿ ಒದ್ದಾಡಿ ಅದರ ಕಾಲುಗಳೆಲ್ಲ ಕೆತ್ತಿ ಹೋಗಿವೆ. ಅಲ್ಲೆಲ್ಲ ನೊಣ ಮೊಟ್ಟೆಯಿಟ್ಟು ಅರ್ಧ ಕೊಳೆತುಹೋಗಿ ಹುಳುಗಳಾಗಿ ಮಿಜಿಮಿಜಿಗುಡುತ್ತಿವೆ. ಅಲ್ಲಿ ಅದು ಬಿದ್ದು ಮೂರ್ನಾಲ್ಕು ದಿನಗಳೇ ಆಗಿರಬೇಕು. ಅತ್ತ ಸಾಯದೇ ಬದುಕಲೂ ಆಗದೇ ಪಾಪದ ಎಮ್ಮೆ ನರಕಯಾತನೆ ಅನುಭವಿಸುತ್ತಿದೆ.

ಸೋಮಭಟ್ಟರ ಜೊತೆ ಆ ಕೊರಕಲಿಗೆ ಹೋಗಿ ದುರ್ವಾಸನೆ ತಪ್ಪಿಸಲು ಕರ್ಚೀಫಿನಿಂದ ಮೂಗು ಮುಚ್ಚಿಕೊಂಡು ಅಡ್ಡಡ್ಡ ಮಲಗಿದ್ದ ಎಮ್ಮೆಯನ್ನು ಪರೀಕ್ಷಿಸಿದೆ. ಸೊಂಟದ ಎಲುಬು ಮುರಿದುಹೋಗಿದೆ. ಮೈಗೆಲ್ಲ ನಂಜು ಆವರಿಸಿದೆ. ಹುಳುಗಳಾಗಿ ಚರ್ಮ ಮಾಂಸ ಕೊಳೆಯುತ್ತಿದೆ. ಚಿಕಿತ್ಸೆಯಿಂದ ಗುಣಮಾಡಲು ಸಾಧ್ಯವೇ ಇಲ್ಲದಿರುವುದರಿಂದ ಇದಕ್ಕೆ ದಯಾಮರಣ ಕಲ್ಪಿಸುವುದೊಂದೇ ದಾರಿ ಅನಿಸಿತು. ಲಗುಬಗೆಯಿಂದ ಔಷಧವನ್ನು ಪೆಟ್ಟಿಗೆಯಿಂದ ಹೊರತೆಗೆದು ಎಮ್ಮೆಯ ರಕ್ತನಾಳದೊಳಕ್ಕೆ ವೇಗವಾಗಿ ಕಳಿಸಿದೆ. ನೋಡನೋಡುತ್ತಿದ್ದಂತೆ ಆ ನತದೃಷ್ಟ ಮೂಕ ಪ್ರಾಣಿ ಕೊಟ್ಟಕೊನೆಯ ಬಾರಿ ನಿಡಿದಾಗಿ ಉಸಿರು ತೆಗೆದು ತನ್ನೆಲ್ಲಾ ಯಾತನೆಯಿಂದ ಮುಕ್ತಿ ಪಡೆಯಿತು. ಕೈಲಿ ಹಿಡಿದ ಸಿರಿಂಜನ್ನು ಒಳಗಿಡುತ್ತ ಯಾಕೋ ಅನುಮಾನದಿಂದ ಎಮ್ಮೆಯ ಮುಖದತ್ತ ನೋಡಿದೆ. ಎದೆ ಧಸಕ್ಕೆಂದಿತು. ಅದೇ ಚಕ್ರಕೋಡು! ಹಣೆಯ ಮೇಲೆ ಅರ್ಧಚಂದ್ರಾಕೃತಿಯ ಬಿಳಿ ಬಣ್ಣ! ಮಧ್ಯದಲ್ಲಿ ಕುಂಕುಮವಿಟ್ಟಂತೆ ಬೊಟ್ಟು ಗಾತ್ರದ ಬಿಳಿಯ ಚುಕ್ಕೆ! ಮೂಗು ಮುಚ್ಚಿದ್ದ ಕರ್ಚೀಫನ್ನು ತೆಗೆದು ಕಣ್ಣೊರೆಸಿಕೊಂಡೆ.

ಲೇಖಕರ ಕಿರುಪರಿಚಯ
ಡಾ. ಗಣೇಶ ಹೆಗಡೆ ನೀಲೇಸರ

ವೃತ್ತಿಯಲ್ಲಿ ಪಶುವೈದ್ಯರು; ಉತ್ತರಕನ್ನಡದ ಶಿರಸಿಯಲ್ಲಿ ಜಿಲ್ಲಾ ಪಶುರೋಗ ತನಿಖಾ ಪ್ರಯೋಗಾಲಯದಲ್ಲಿ ಪಶು ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 'ಹೈನು ಹೊನ್ನು' ಪುಸ್ತಕದ ಸಹಲೇಖಕರಾಗಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ 2014ರ 'ಶ್ರೇಷ್ಠ  ಲೇಖಕ' ಪ್ರಶಸ್ತಿಗೆ ಭಾಜನರಾಗಿದ್ದಾರೆ.

Blog  |  Facebook  |  Twitter

1 ಕಾಮೆಂಟ್‌: