ಶನಿವಾರ, ನವೆಂಬರ್ 7, 2015

ವೃತ್ತಿ, ನಿವೃತ್ತಿ ಮತ್ತು ಪ್ರವೃತ್ತಿ

ವೈಜ್ಞಾನಿಕ ಯುಗದಲ್ಲಿ ಮನುಷ್ಯನ ಸರಾಸರಿ ಜೀವಿತ ಅವಧಿಯಲ್ಲಿ ಏರಿಕೆಯಾಗಿರುವುದು ಗಮನಿಸಬಹುದಾದ ಅಂಶ. ಈ ಜೀವಿತದ ಅವಧಿಯಲ್ಲಿ ಮನುಷ್ಯ ಒಂದಲ್ಲ ಒಂದು ರೀತಿಯ ವೃತ್ತಿಯನ್ನು ಜೀವನೋಪಾಯಕ್ಕಾಗಿ ಅವಲಂಬಿಸಿರುತ್ತಾನೆ. ಕೆಲವರು ಕೃಷಿ ಮತ್ತು ಕೃಷಿ ಆಧಾರಿತ ವೃತ್ತಿಗಳನ್ನು ಅವಲಂಬಿಸಿದರೆ ಮತ್ತೆ ಕೆಲವರು ಸರ್ಕಾರಿ/ಖಾಸಗಿ ವೃತ್ತಿ ಉದ್ಯೋಗಗಳನ್ನು ಅವಲಂಬಿಸಿರುತ್ತಾರೆ.

ಕೃಷಿ ಮತ್ತು ಕೃಷಿ ಸಂಬಂಧಿತ ವೃತ್ತಿಯನ್ನು ಅವಲಂಬಿಸಿದವರು ಜೀವಿತದ ಪೂರ್ಣ ಅವಧಿವರೆಗೂ ಇದನ್ನೇ ನಂಬಿರುತ್ತಾರೆ. ಇವರಿಗೆ ನಿವೃತ್ತಿ ಎಂಬುದಿರುವುದಿಲ್ಲ. ಹೀಗಾಗಿ ಕೃಷಿಯನ್ನೇ ಪ್ರವೃತ್ತಿಯನ್ನಾಗಿ ಮುಂದುವರೆಸುತ್ತಾರೆ.

ಸರ್ಕಾರಿ/ಖಾಸಗಿ ವೃತ್ತಿಗಳಲ್ಲಿದ್ದವರಿಗೆ ವೃತ್ತಿಯಿಂದ ನಿವೃತ್ತಿ ಹೊಂದಿದ ಮೇಲೆ ಮುಂದೇನು? ಎಂಬ ಪ್ರಶ್ನೆ ಕಾಡುತ್ತದೆ. ಈ ಪ್ರಶ್ನೆಗೆ ನಿವೃತ್ತರಾದ ಹಲವಾರು ವ್ಯಕ್ತಿಗಳು ಅವರದೇ ಆದ ಶೈಲಿಯಲ್ಲಿ ಪ್ರವೃತ್ತಿಗಳನ್ನು ರೂಪಿಸಿಕೊಂಡು ಜೀವನ ಸಾಗಿಸುತ್ತಾರೆ. ಇದರಿಂದ ಜೀವಿತದ ಕೊನೆಯ ಅವಧಿಯ ದಿನಗಳನ್ನೂ ನೆಮ್ಮದಿಯಿಂದ - ಶಾಂತಿಯಿಂದ ಕಳೆಯುತ್ತಾರೆ. ಉಳಿದವರು ವೃತ್ತಿಯಿಂದ ನಿವೃತ್ತರಾಗುವ ಹೊತ್ತಿಗೆ ಕೆಲಸಗಳ ಒತ್ತಡಗಳಿಂದ, ಕುಟುಂಬದ ಸಮಸ್ಯೆಗಳಿಂದ ಹಾಗೂ ಇನ್ನಿತರೆ ಒತ್ತಡಗಳಿಂದ ಹೈರಾಣಾಗಿರುತ್ತಾರೆ. ಇಂತಹವರು ಯಾವುದೇ ತಂಟೆ ತಕರಾರುಗಳನ್ನು ಅಂಟಿಸಿಕೊಳ್ಳದೆ ಉಳಿದ ಜೀವಿತ ಅವಧಿಯ ದಿನಗಳನ್ನು ಆರಾಮವಾಗಿ ಕಳೆಯಲು ಇಷ್ಟಪಡುತ್ತಾರೆ. ಇವರು ಡಾ. ಡಿ. ವಿ. ಜಿ. ಯವರು ಅವರ ಮಂಕುತಿಮ್ಮನ ಕಗ್ಗದಲ್ಲಿ ಹೇಳಿರುವಂತೆ "ದಿವಸದಿಂ ದಿವಸಕ್ಕೆ, ನಿಮಿಷದಿಂ ನಿಮಿಷಕ್ಕೆ, ಭವಿಷ್ಯವ ಚಿಂತಿಸದೆ ಬದುಕು ನೂಕುತಿರು, ವಿವರಗಳ ಜೋಡಿಸುವ ಯಜಮಾನ ಬೇರಿಹನು, ಸವೆಸು ನೀಂ ಜನುಮವನು - ಮಂಕುತಿಮ್ಮ" ಎಂಬಂತೆ ಇರುತ್ತಾರೆ.

ಆದರೆ ಸಾಮಾನ್ಯವಾಗಿ ವೃತ್ತಿಯಿಂದ ನಿವೃತ್ತರಾದ ಪ್ರತಿಯೊಬ್ಬ ವ್ಯಕ್ತಿಯೂ ಸದಾ ಆರೋಗ್ಯವಂತರಾಗಿ ಮತ್ತು ಚಟುವಟಿಕೆಗಳಿಂದ ಇರಲು ಒಂದಲ್ಲ ಒಂದು ರೀತಿಯ ಅಭ್ಯಾಸ/ಪ್ರವೃತ್ತಿಗಳನ್ನು ರೂಢಿಸಿಕೊಳ್ಳುತ್ತಾರೆ:
  • ದಿನಂಪ್ರತಿ ಬೆಳಗಿನ ವಿಹಾರ/ವಾಕಿಂಗ್, ಯೋಗ, ಪ್ರಾಣಾಯಾಮ, ಧ್ಯಾನ, ಇತ್ಯಾದಿ.
  • ಅವಕಾಶ ಸಿಕ್ಕಿದಾಗೆಲ್ಲಾ ಸಾಹಿತ್ಯ ಓದುವುದು, ಸಂಗೀತ ಕೇಳುವುದು, ಸತ್ಸಂಗ ಇತ್ಯಾದಿಗಳಲ್ಲಿ ಭಾಗವಹಿಸುವುದು.
  • ಪ್ರಕೃತಿಯ ಸೊಬಗನ್ನು ಸವಿಯಲು ಪುಣ್ಯಕ್ಷೇತ್ರ ಮತ್ತು ಐತಿಹಾಸಿಕ ಸ್ಥಳಗಳ ದರ್ಶನ ಪಡೆಯಲು ಪ್ರವಾಸ ಕೈಗೊಳ್ಳುವುದು.
  • ಸಮಾನ ಮನಸ್ಕ ಮತ್ತು ವಯಸ್ಸಿನವರೊಂದಿಗೆ ಸೇರಿಕೊಂಡು ಸತ್ಕಾರ್ಯಗಳ ಬಗ್ಗೆ ಚಿಂತನೆ ನಡೆಸುವುದು.
  • ಮಕ್ಕಳು - ಮೊಮ್ಮಕ್ಕಳೊಂದಿಗೆ ಸೇರಿಕೊಂಡು ಮಕ್ಕಳಾಗಿ ಕಾಲ ಕಳೆಯುವುದು.
 ಈ ದಿಸೆಯಲ್ಲಿ ನಾನು ಪಕ್ಕಾ ಬೇಸಾಯಗಾರರ ಕುಟುಂಬದಲ್ಲಿ ಹುಟ್ಟಿ ಬೆಳೆದು ಬೇಸಾಯ ಆಧಾರಿತ ಉದ್ಯೋಗ - ರೇಷ್ಮೆ ಕೃಷಿಯ ವೃತ್ತಿಯಿಂದ ನಿವೃತ್ತನಾದವನು. ಹೀಗಾಗಿ ನಾನು ಮೇಲೆ ಕಾಣಿಸಿದ ಎಲ್ಲಾ ಅನುಭವಗಳ ಜೊತೆಗೆ ಕಿಚನ್ ಗಾರ್ಡನ್ (ಕೈತೋಟ) ಬೆಳೆಸುವುದನ್ನು ಪ್ರವೃತ್ತಿಯನ್ನಾಗಿ ರೂಢಿಸಿಕೊಂಡಿರುತ್ತೇನೆ. ಇದರಿಂದಾಗಿ ನಾನು ವೃತ್ತಿಯಿಂದ ನಿವೃತ್ತಿಯಾಗಿದ್ದರೂ ಸಹ ಕಾಲ ಕಳೆಯಲು ಯಾವುದೇ ತರಹದ ಬಾಧಕವಾಗಿರುವುದಿಲ್ಲ.

ನನ್ನ ಮನೆಗೆ ಹೊಂದಿಕೊಂಡಂತೆ ಸ್ನೇಹಿತರೊಬ್ಬರ ಒಂದು 40x30 ಅಳತೆಯ ಖಾಲಿ ನಿವೇಶನವಿದೆ. ಇದನ್ನು ಅವರ ಸಹಮತಿ ಪಡೆದು ಕಳೆದ 8 ವರ್ಷಗಳಿಂದ ಮಳೆ ಆಶ್ರಯದಲ್ಲಿ ಕೈತೋಟ ಬೆಳೆಸುತ್ತಿದ್ದೇನೆ. ಈ ಜಾಗದ ಸುತ್ತಲೂ ಜೈವಿಕ ಬೇಲಿ (ರೋಜಾ ಬೇಲಿ) ನೆಡಲಾಗಿದೆ. ಪ್ರತಿ ವರ್ಷ ಮುಂಗಾರು ಮಳೆ ಬಿದ್ದಾಗ ಈ ಜಾಗವನ್ನು ಅಗತೆ ಮಾಡಿ ಕಳೆ ಆರಿಸಿ ಸ್ವಚ್ಛಮಾಡಿ ಕೊಟ್ಟಿಗೆ ಗೊಬ್ಬರ ಹಾಕಿ ಸಿದ್ಧಪಡಿಸಲಾಗುವುದು. ನಂತರ ಸಣ್ಣ ಸಣ್ಣ ಪಾತಿಗಳನ್ನಾಗಿ ವಿಂಗಡಿಸಿ, ವಿವಿಧ ರೀತಿಯ ತರಕಾರಿ ಮತ್ತು ಸೊಪ್ಪುಗಳನ್ನು ಬೆಳೆಸಲಾಗುತ್ತದೆ. ಇದರೊಂದಿಗೆ ದ್ವಿದಳ ಧಾನ್ಯಗಳು, ಹಣ್ಣಿನ ಗಿಡಗಳು, ಹೂವಿನ ಗಿಡಗಳು, ಔಷಧೀಯ ಗಿಡಗಳು, ಕಾಡುಮರಗಳು, ಇತ್ಯಾದಿಗಳನ್ನೂ ಸಹ ಬೆಳೆಸಲಾಗುತ್ತದೆ. ಮಳೆಗಾಲದಲ್ಲಿ ಮನೆಗೆ ಬೇಕಾದ ಹೆಚ್ಚು-ಕಡಿಮೆ ಎಲ್ಲಾ ತರಕಾರಿಗಳನ್ನು ಯಾವುದೇ ರಾಸಾಯನಿಕಗಳನ್ನು ಉಪಯೋಗಿಸದೇ ಬೆಳೆಸಲಾಗುತ್ತದೆ. ಇದರಲ್ಲಿ ಅರ್ಧಭಾಗಕ್ಕಿಂತ ಹೆಚ್ಚು ಅಕ್ಕಪಕ್ಕದವರಿಗೆ ನೀಡುವುದರ ಮೂಲಕ ಮತ್ತು ಸ್ನೇಹಿತರಿಗೆ ಕೊಡುವುದರ ಮೂಲಕ ಧನ್ಯತೆಯನ್ನು ಪಡೆಯುತ್ತೇನೆ.

ಕೆಂಟ್ ನೀರಿನ ಫಿಲ್ಟರ್‌ನಿಂದ ಹೊರಬರುವ ತ್ಯಾಜ್ಯ ನೀರನ್ನೂ ಸಹ 4-5 ದಿನಗಳವರೆಗೆ ಡ್ರಮ್ ಗಳಲ್ಲಿ ಸಂಗ್ರಹಿಸಿ ಬಳಸಲಾಗುವುದು. ಈ ನೀರಿನ ಠಿಊ ಹೆಚ್ಚಾಗಿರುತ್ತದೆ. ಆದರೂ ಅನಿವಾರ್ಯವಾಗಿ ಬಳಸಲೇಬೇಕಾಗುತ್ತದೆ. ಈ ನೀರನ್ನು ದೊಡ್ಡ ದೊಡ್ಡ ತರಕಾರಿ ಗಿಡಗಳ ಬುಡಗಳಿಗೆ ಪ್ಲಾಸ್ಟಿಕ್ ಖಾಲಿ ನೀರಿನ ಬಾಟಲ್‌ಗಳನ್ನು ಬಳಸಿ ಹನಿ ನೀರಾವರಿ ಮಾಡಲಾಗಿದೆ. ಕೈತೋಟದಲ್ಲಿ ಬೆಳೆದ ಸಸ್ಯ ಜನ್ಯ ತ್ಯಾಜ್ಯಗಳನ್ನು ಮತ್ತು ಮನೆಬಳಕೆ ತರಕಾರಿ ತ್ಯಾಜ್ಯಗಳನ್ನು ಬಳಸಿಕೊಂಡು ಎರೆಹುಳು ಗೊಬ್ಬರವನ್ನೂ ಸಹ ತಯಾರಿಸಲಾಗುತ್ತಿದೆ.

ನಾನು ವೃತ್ತಿಗೆ ಸೇರಿದಾಗಿನಿಂದಲೂ, ಅಂದರೆ 32 ವರ್ಷಗಳಿಂದಲೂ ವರ್ಗಾವಣೆಯಾಗಿ ಹೋದಲ್ಲೆಲ್ಲಾ ವೃತ್ತಿಯ ಜೊತೆಗೆ ಕೈತೋಟ ಬೆಳೆಸುವ ಪ್ರವೃತ್ತಿಯನ್ನು ರೂಢಿಸಿಕೊಂಡು ಬಂದಿರುತ್ತೇನೆ. ಪ್ರತಿದಿನ ಕನಿಷ್ಠ ಅರ್ಧ ಗಂಟೆಯಾದರೂ ನಾನು ಬೆಳೆಸಿದ ಗಿಡಗಳನ್ನು ನೋಡಿ, ಮಾತನಾಡಿಸಿ, ಅವುಗಳ ನೋವು-ನಲಿವು (ಅಂದರೆ ಗಿಡಗಳ ಬೇಡಿಕೆ, ನೀರು, ಗೊಬ್ಬರ, ಕೀಟಗಳ ನಿಯಂತ್ರಣ, ಕಳೆ ತೆಗೆಯುವುದು, ಇತ್ಯಾದಿ) ಕೆಲಸಗಳನ್ನು ನಿರ್ವಹಿಸಿದ ನಂತರವೇ ಮನಸ್ಸಿಗೆ ಆನಂದ-ನೆಮ್ಮದಿ.

ಈ ರೀತಿ ನಮ್ಮದೇ ಪರಿಶ್ರಮದಿಂದ ಮತ್ತು ರಾಸಾಯನಿಕಮುಕ್ತವಾದ ಕಾಯಿ-ಪಲ್ಯೆಗಳನ್ನು ಬೆಳೆಸಿ ಬಳಕೆ ಮಾಡುವುದರಿಂದ ಹೆಚ್ಚಿನ ಸಂತೋಷವಾಗುವುದಲ್ಲದೇ ಒಳ್ಳೆಯ ಆರೋಗ್ಯ ಲಭಿಸುತ್ತದೆ. ಭೂಮಿಗೆ ಬಿತ್ತಿದ ಯಾವುದೇ ಬೀಜ, ನೆಟ್ಟ ಗಿಡ ಮೋಸ ಮಾಡದೇ ಫಲ ನೀಡಿ ಧನ್ಯತೆಯನ್ನು ಮೆರೆಯುತ್ತದೆ. ನನ್ನ ಈ ಎಲ್ಲಾ ಕೆಲಸಗಳಿಗೆ ಮನೆಯಲ್ಲಿ ಅಳಿಯಂದಿರು, ಮಕ್ಕಳು, ಮೊಮ್ಮಗ ಮತ್ತು ಶ್ರೀಮತಿಯವರ ಸಂಪೂರ್ಣ ಸಹಕಾರ ಇರುವುದು ಹೆಮ್ಮೆಯ ಸಂಗತಿ. ಮುಂದೊಂದು ದಿನ ಈ ಖಾಲಿ ನಿವೇಶನದಲ್ಲಿ ಮನೆ ನಿರ್ಮಾಣ ಪ್ರಾರಂಭಿಸಿದರೆ, ಈ ಪ್ರವೃತ್ತಿಯನ್ನು ಟೆರ್ರೇಸ್‌ನಲ್ಲಿ, ಪಾಟ್‌ಗಳಲ್ಲಿ ಮುಂದುವರೆಸಲು ಚಿಂತನೆ ನಡೆಸುತ್ತಿದ್ದೇನೆ.

ಲೇಖಕರ ಕಿರುಪರಿಚಯ
ಶ್ರೀ ಪುಟ್ಟಲಿಂಗಯ್ಯ, ಎಂ. ಎಸ್.

ಗ್ರಾಮೀಣ ಬೇಸಾಯಗಾರರ ಕುಟುಂಬದಲ್ಲಿ ಜನಿಸಿ, ಸಸ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು, ರೇಷ್ಮೆ-ಕೃಷಿ ಇಲಾಖೆಯಲ್ಲಿ ಉಪನಿರ್ದೇಶಕರಾಗಿ ಸೇವೆ ಸಲ್ಲಿಸಿದ ಇವರು ನಿವೃತ್ತಿಯ ನಂತರ ತುಮಕೂರಿನಲ್ಲಿ ನೆಲೆಸಿದ್ದಾರೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ