ಶುಕ್ರವಾರ, ನವೆಂಬರ್ 6, 2015

ಸೀರೆಯ ಸುತ್ತ ಒಂದು ಸುತ್ತು

ಈಗಿನ ಜಮಾನದ ಹೆಣ್ಣಿಗೆ ಸೀರೆ ಜೊತೆ ಒಂತರದ ಲವ್-ಹೇಟ್ ರಿಲೇಷನ್. ಅತ್ತ ಬಿಡಲೂ ಬಾರ ಇತ್ತ ಉಡಲೂ "ಭಾರ"! ಎಂಬ ಹೊಯ್ದಾಟ.

"ಸೋ ಸಾರಿ ಸೀತಾರಾಂ" "ಸಾರಿ ಸ್ಟೇಟ್ ಆಫ್ ಸೀತಾರಾಂ" ಎಂಬೆಲ್ಲ ಶೀರ್ಷಿಕೆಯ ಸುದ್ದಿ ಆನ್‌ಲೈನ್ ತುಂಬ ಹರಡಿದ್ದು ಇನ್ನೂ ಹಸಿ ಹಸಿಯಾಗಿದೆ. ಅದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಇಳಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಂ "ಸಾರಿ" ವರಿ ವಿಚಾರ. ಆಸ್ಟ್ರೇಲಿಯಾದ ಖೈರ್ನ್‌ನಲ್ಲಿ ನಡೆಯಲಿದ್ದ ಜಿ-ಟ್ವೆಂಟಿ ವಿತ್ತ ಸಚಿವರ ಶೃಂಗ ಸಭೆಗೆ ಪಾಲ್ಗೊಳ್ಳಲು ಹೊರಟು ಮಾರ್ಗ ಮಧ್ಯೆ ಸಿಡ್ನಿಯಲ್ಲಿ ನಿಂತಾಗ ವಿಮಾನ ಸಂಸ್ಥೆಯ ಅಲಕ್ಷ್ಯದಿಂದ ಅವರ ಚೆಕ್‌ಇನ್ ಬ್ಯಾಗ್ ಕಳೆದು ಹೋಗಿ ಕಂಗಾಲಾಗಿದ್ದರಲ್ಲಾ? ಆ ವಿಚಾರ. ಶೃಂಗ ಸಭೆಗೆ ಧರಿಸಲು ತಂದಿದ್ದ ಅವರ ಸೀರೆಗಳೆಲ್ಲ ಅದರಲ್ಲಿದ್ದವು! ಸೀರೆಗಳ ಸಖತ್ ಕಲೆಕ್ಷನ್ ಇಟ್ಟಿರುವ, ಸದಾ ಸೀರೆಯಲ್ಲೇ ಪ್ರತಿನಿಧಿಸುವ ಸಚಿವೆ ಅಂದು ಬೆಟ್ಟದಷ್ಟು ಫಜೀತಿ ಪಟ್ಟುಬಿಟ್ಟ್ರು ಎನ್ನಿ. ಅದೂ, ಭಾರತೀಯತೆಯನ್ನು ಪ್ರತಿನಿಧಿಸುವ ಉಡುಪಿಗೆ ಹೈ ಇಂಪಾರ್ಟನ್ಸ್ ಕೊಡುವ ಮೋದಿ ಮಾಸ್ಟರ್ ಬಳಗದಲ್ಲಿದ್ದುಕೊಂಡು!

ನಮ್ಮ ದೇಶದ ಬಹುತೇಕ ಮಹಿಳೆಯರಿಗೆ ನಿತ್ಯದ ಉಡುಪಾಗಿರುವ ಸೀರೆ ತನ್ನೊಡಲಲ್ಲಿ ಇಂತಹ ಸಾವಿರ ಸಾವಿರ ಕಥೆಗಳನ್ನು ಹುದುಗಿಸಿಕೊಂಡಿದೆ. ಮಲ್ಟಿಪರ್ಪಸ್ ಸೀರೆಯ ಸೆರಗಿನ ಸಹಾಯಕ್ಕಂತೂ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು. ಬಿಸಿಲು ಮಳೆಗೆ ಕೊಡೆಯಾಗಿ, ಛಳಿಗೆ ಚಾದರವಾಗಿ, ಟೀಚರ್‌ಗೆ ಟೊಪ್ಪಿಹಾಕುವ ಶೆಲ್ಟರ್ ಆಗಿ, ಕಣ್ಣೀರೊರೆಸುವ ಕೈತುಂಡಾಗಿ, ಕೆಲವರಿಗೆ ಕಹೋನಾ ಪ್ಯಾರ್ ಹೈ ಸಿನಿಮಾದಲ್ಲಿ ತೋರಿಸುವಂತೆ ಸೆಕ್ಸಿ ಸಿಂಬಲ್ ಆಗಿ.., ಹೀಗೆ ಕಥೆ ಬಿಚ್ಚಿಡ ಹೊರಟರೆ ದ್ರೌಪದಿಯ ಸೀರೆಯೇ.. ಎಂದೂ ಮುಗಿಯದ ಧಾರಾವಾಹಿಯಾಗಬಲ್ಲದು.

ಸೀರೆ ವಿಶ್ವಕ್ಕೇ ಭಾರತ ಕೊಟ್ಟ ಕೊಡುಗೆ ಎಂದ ಮೇಲೆ ಭಾರತೀಯತೆಯೇ ಅದರ ಜೀವಾಳ ಎನ್ನಲಡ್ಡಿಯಿಲ್ಲ. ಭಾರತೀಯ ಸೀರೆಯ ಇತಿಹಾಸವೂ ಇಂಟರೆಸ್ಟಿಂಗ್. ನೀರೆಯ ಸೀರೆಗೆಂತಹ ಇತಿಹಾಸ ಎನ್ನದಿರಿ. ಮಹಿಳೆ ಮಾತ್ರವಲ್ಲ, ಎಲ್ಲರೂ ತಿಳಿದುಕೊಳ್ಳಲೇ ಬೇಕಾದ ಸಂಗತಿ ಇದು. ಅದರಲ್ಲಿ ನಮ್ಮ ಸಂಸ್ಕೃತಿ, ಪರಂಪರೆ, ಭೌಗೋಳಿಕ-ರಾಜಕೀಯ ಇತಿಹಾಸದ ಜೊತೆ ಜೊತೆಗೇ ಸೀರೆಗೆ ಭಾರತೀಯ ಛಾಪು ಮೂಡಿಸುವ ಪ್ರಯತ್ನವೂ ಕೂಡಿಕೊಂಡಿತ್ತು.

ರಾಷ್ಟ್ರಧ್ವಜ, ರಾಷ್ಟ್ರಗೀತೆ ಇತ್ಯಾದಿಗಳನ್ನು ರಾಷ್ಟ್ರವ್ಯಾಪಿ ಹಬ್ಬಿಸಿ ರಾಷ್ಟ್ರಪ್ರೇಮ ಪಸರಿಸುವ ತವಕದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲೇ ’ಭಾರತೀಯ ಮಹಿಳೆಗೆ ರಾಷ್ಟ್ರೀಯ ಸೀರೆ’ ಎಂಬ ಪರಿಕಲ್ಪನೆ ಮೂಡಿದ್ದು. ಬ್ರಹ್ಮ ಸಮಾಜದ ಮಹಿಳೆಯರೆಲ್ಲ ಇದಕ್ಕೆ ತೊಡಗಿಕೊಂಡಿದ್ದರು. ಠ್ಯಾಗೋರ್ ಕುಟುಂಬ ಸ್ವತಃ ಅಂತಹ ಪ್ರಯೋಗಕ್ಕೆ ತೆರೆದುಕೊಂಡಿತ್ತು. ಭಾರತ-ಐರೋಪ್ಯ ಜೊತೆ ಶೈಲಿಗಿಂತ ಭಾರತ-ಪಾರಸಿ ಶೈಲಿಯಂತೆ, ಉದ್ದ ತೋಳಿನ ಬ್ಲೌಸ್, ಎಡ ಭುಜಕ್ಕೆ ಪಿನ್ನು, ಕಾಲಿಗೆ ಶೂ ಧರಿಸಿ ನಿಂತುಬಿಟ್ಟಿದ್ದರು ಜ್ಞಾನದಾನಂದಿನಿ ಠ್ಯಾಗೋರ್. ಭಾರತೀಯ ನಾಗರಿಕ ಸೇವೆಯ ಮೊದಲ ಭಾರತೀಯ ಸದಸ್ಯ ಸತ್ಯೇಂದ್ಯನಾಥ ಠ್ಯಾಗೋರ್ ಪತ್ನಿ. ಇದಕ್ಕೆ "ಬ್ರಾಹ್ಮಿಕಾ ಸಾರಿ" ಎಂಬ ಹೆಸರನ್ನೂ ನೀಡಿಯಾಗಿತ್ತು.

ಆದರೆ ಬ್ರಾಹ್ಮಿಕಾ ಸಾರಿ ಯಾವತ್ತೂ ಪಾನ್ ಇಂಡಿಯಾ ರೂಪ ಕಂಡುಕೊಳ್ಳಲೇ ಇಲ್ಲ. ವಾಸ್ತವದಲ್ಲಿ ಅಗ ಎಂತಹ ಪರಿಸ್ಥಿತಿಯಿತ್ತೆಂದರೆ, ಒಂದೆರಡು ಘಟನೆಗಳನ್ನು ಉಲ್ಲೇಖಿಸಲೇಬೇಕು. ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ ತ್ರಿವಾಂಕೂರ್ ರಾಜ್ಯದಲ್ಲಿದ್ದ ಒಂದು ಬುಡಕಟ್ಟು ಪಂಗಡದಲ್ಲಿ ಮಹಿಳೆ ಮೇಲು ಕುಪ್ಪಸ ಧರಿಸುವುದೂ ನಿಷಿದ್ಧವಾಗಿತ್ತಂತೆ. ಅಲ್ಲಿ ಸೀರೆಗಾಳಿ ಬೀಸಿದಾಗ ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯಿಂದಲೇ ಮಹಿಳೆಯ ವಸ್ತ್ರಹರಿದು ಹಾಕಿದ ಎಷ್ಟೋ ಘಟನೆಗಳು ನಡೆದಿದ್ದವಂತೆ.

ತನ್ನ ಗೆಳತಿ ಕೊಟ್ಟ ಕುಪ್ಪಸವನ್ನು ಯಾರಗೂ ಕಾಣಿಸದಂತೆ ತಂದು ಮನೆಯ ಕೋಣೆಯಲ್ಲಿ ಅದನ್ನು ಧರಿಸಿ ಖುಷಿ ಪಡುತ್ತಿದ್ದ ಯುವತಿಯನ್ನು ನೋಡಿದ ಆಕೆಯ ತಾಯಿ ಹೇಗೆ ಪ್ರತಿಕ್ರಿಯಿಸಿದ್ದಳಂತೆ ಗೊತ್ತೆ?  "ಇದೆಲ್ಲ ಯಾಕೆ ನಿನಗೇ? ಈಗಿಂದೀಗಲೇ ತೆಗೆದುಹಾಕು. ನಿನ್ನನ್ನು ನೀನೇ ಏಕೆ ಅವಮಾನಿಸಿಕೊಳ್ಳುತ್ತೀಯಾ? ಮುಸ್ಲಿಂ ಮಹಿಳೆಯಂತೆ ನಿನಗೇಕೆ ಮೇಲಂಗಿ?". ಬಹು ಪ್ರಾಂತೀಯ ಬಹು ಧರ್ಮೀಯ ಹಾಗೂ ಬಹು ಜಾತಿ ಪಂಗಡದ ಭಾರತದಲ್ಲಿ ರಾಷ್ಟ್ರೀಯ ಸಾರಿ ಬಹುಮತ ಪಡೆದುಕೊಳ್ಳಲು ಸಫಲವಾಗಲೇ ಇಲ್ಲ. ಹಾಗೆಂದು ಅದು ಎಲ್ಲೋ ಕಳೆದು ಹೋಗಲೂ ಇಲ್ಲ.

ಸೀರೆ ತನ್ನ ವೈವಿಧ್ಯತೆಯನ್ನು ಸುಂದರವಾಗಿಯೇ ಕಾಪಾಡಿಕೊಂಡು ಹೆಣ್ಣಿನ ಸೌಂದರ್ಯಕ್ಕೆ ಕೊಡುಗೆ ನೀಡುತ್ತಲೇ ಇದೆ. ಇಂತಹ ಹೆಮ್ಮೆಯ ಪ್ರತೀಕವಾದ ಸೀರೆಯುಟ್ಟು ಟೀನೇಜ್ ಮೆರುಗನ್ನು ಮೆರೆಯಲು ಯಾವ ಹೆಣ್ಣೂ ಮರೆಯಲಾರಳು. ಬಹುಶಃ ಪ್ರತಿ ಸಾರಿ ಸೀರೆ ಉಟ್ಟು ಸೌಂದರ್ಯಕ್ಕೆ ಸವಾಲು ಎಸೆಯುವಾಗಲೂ ಹೆಣ್ಣು ತಾನು ಸೀರೆಯ ಸುತ್ತ ಪಟ್ಟ ಇಷ್ಟ-ಕಷ್ಟಗಳನ್ನು ನೆನಪಿಸಿಕೊಳ್ಳದೇ ಇರಲಾರಳು. ನಾನೂ ಸೀರೆಯೊಂದಿಗೆ ಸುಖ-ದುಃಖ ಹಂಚಿಕೊಳ್ಳುವ ಕೆಲ ಸಂದರ್ಭ ತಂದೊಡ್ಡಿಕೊಂಡಿದ್ದೆ.

ಮುತ್ತು-ಮಣಿಯಿಂದ ಅಲಂಕೃತಗೊಂಡಿದ್ದ ಸೀರೆಯನ್ನು ಅತ್ತಿಗೆಯ ಮದುವೆಗಾಗಿ ತುಂಬು ಮುತುವರ್ಜಿ ವಹಿಸಿ ಖರೀದಿಸಿದ್ದೆ. ಅದಕ್ಕೆ ಮ್ಯಾಚಿಂಗ್ ಎಂದು ಕಂಡ ಕಂಡ ಅಂಗಡಿ ಅಲೆದು ನನ್ನ ಭಂಡಾರ ವೃದ್ಧಿಸಲು ಸಮಯ ವಿನಿಯೋಗಿಸಿದ ದಿನಗಳವು. ಅತ್ತಿಗೆಗೆ ಹೊಸ ಜೀವನದ ಸಂಭ್ರಮವಾದರೆ ನನಗೋ ಸೀರೆಯಲ್ಲಿ ಝಗಮಗಿಸುವ ಭ್ರಮೆ. ನನ್ನ ಸಹಾಯಕ್ಕೆಂದು ಗೆಳತಿಯನ್ನೂ ಕರೆಸಿಕೊಂಡಿದ್ದೆ. ಮುದುವೆಯ ದಿನ ನನಗೂ ಮಹತ್ತರ ದಿನವಾದ್ದರಿಂದ ಬೆಳಿಗ್ಗೆ ಬೇರಾವ ಕೆಲಸದ ಜವಾಬ್ದಾರಿಯನ್ನೂ ತೆಗೆದುಕೊಂಡಿರಲಿಲ್ಲ!

ಬೆಳಗ್ಗೆಯೇ ಆರಂಭವಾಗಿತ್ತು ನನ್ನ ಸಾರಿ ಸುತ್ತಾಟ. ಒಂದನೇ ಸಲ.. ಎರಡನೇ ಸಲ, ಉಹೂಂ ಮೂರನೇ ಪ್ರಯತ್ನವೂ ಸಫಲಗೊಂಡಿರಲಿಲ್ಲ. ಒಮ್ಮೆ ನೆರಿಗೆ ನೆಟ್ಟಗಾಗದಿದ್ದರೆ ಇನ್ನೊಮ್ಮೆ ರವಿಕೆ ರಾಶಿಯಾಗುತ್ತಿತ್ತು! ನನಗೆ ಸಹಕರಿಸುತ್ತಿದ್ದ ಗೆಳತಿ ಈಗ ಪೂರ್ತಿ ಸೀರೆ ಉಡಿಸುವ ಸಾಹಸಕ್ಕೆ ತಾನೆ ಎಡೆಮಾಡಿಕೊಂಡಳು. ಉಫ್ ಆಗಲೂ ಸಮಾಧಾನವಿಲ್ಲ. ಅಮ್ಮ ಕದ ತಟ್ಟುವ ಬದಲು ಕುಟ್ಟಲು ಶುರುಮಾಡಿಕೊಂಡಳು.


ಬಾಗಿಲು ತೆಗೆದರೆ ಅಮ್ಮನಿಗೆ ಶಾಕ್. ಒಂದು ತಾಸಿನ ಮುಂಚಿನ ನನ್ನ ಅವತಾರದಲ್ಲಿ ಏನೇನೂ ಬದಲಾವಣೆ ಇರಲಿಲ್ಲ. ಮುಹೂರ್ತಕ್ಕೆ ಇನ್ನರ್ಧ ಗಂಟೆ ಮಾತ್ರ. ಅಮ್ಮ ಅವಳ ಸೆರಗನ್ನ ಸೊಂಟಕ್ಕೆ ಕಟ್ಟಿದಳಲ್ಲ! ನನ್ನ ಸೊಂಟಕ್ಕೆ ಒಂದರಮೇಲೊಂದು ಸುತ್ತು ಬೀಳಲಾರಂಭಿಸಿತ್ತು. ಒಟ್ಟೂ ಮೂರು ಸುತ್ತು. ನನ್ನ ಉಸಿರು ಬಿಗಿದಿತ್ತು. ಇಷ್ಟು ಉದ್ದದ ಸೀರೆನಾ ತರುವುದು? ಬೇಕಿತ್ತೆ ಮುತ್ತಿನ ಭಾರ? ನಿನ್ನೆಯೇ ಉಟ್ಟು ನೋಡು ಎಂದಿರಲಿಲ್ಲವೇ? ಎಂಬ ಅಮ್ಮನ  ಯಾವ ಪ್ರಶ್ನೆಗೂ ನಾ ತುಟಿ ಬಿಚ್ಚಿರಲಿಲ್ಲ. ಅತ್ತ ಕಡೆ ಅಪ್ಪ ಗಾಬರಿಗೊಂಡು ಅಮ್ಮ-ಮಗಳನ್ನು ಹುಡುಕಿಕೊಂಡು ಬಂದು ಬೈಯ್ಯಲು ಹೆಚ್ಚು ಸಮಯ ಹಿಡಿದಿರಲಿಲ್ಲ.

ಧಾರೆ ಎರೆಯುವ ಸಮಯದಲ್ಲಿ ಸೋದರತ್ತೆಯಾದ ನನ್ನಮ್ಮ ಗಡಬಡಿಸಿ ಹೋಗಿ ಹಾಜರಿ ಹಾಕಿದಳು. ಒಂದೂವರೆ ಗಂಟೆ, ಕಲ್ಯಾಣ ಮಂಟಪದ ಮೇಲಂತಸ್ತಿನ ಡ್ರೆಸ್ಸಿಂಗ್ ಕೋಣೆಯಲ್ಲಿ ಬೆವರಿಳಿಸಿಕೊಂಡಿದ್ದ ನಾನು ಮೇಕಪ್ - ಮ್ಯಾಚಿಂಗ್ ಎರಡನ್ನೂ ಬಿಟ್ಟು ಮಾಂಗಲ್ಯ ಮುಹೂರ್ತಕ್ಕೆ ಸಾಕ್ಷಿಯಾಗಿ ಮಹತ್ತರ ಸಾಧನೆಗೈದ ಬಿಗು ನಗೆ ಬೀರಿದ್ದೆ.

ಇನ್ನೊಮ್ಮೆ, ಪದವಿ ಸಮಯದ ಪರದಾಟ. ಕಾಲೇಜಿನ ಕಾರ್ಯಕ್ರಮಕ್ಕೆ ನಾನು ನನ್ನ ನಿರ್ವಹಣೆಗೆ ರಂಗು ಕೊಡಲು ಹಪಹಪಿಸುತ್ತಲೇ ಇರುತ್ತಿದ್ದೆ. ಅದೊಂದು ವರ್ಷ ಕಾಲೇಜು ದಿನದಂದೇ ನಮ್ಮ ಎಥಿನಿಕ್ ಡೇಯನ್ನೂ ಇಡಬೇಕೆ? ಡಿಸೈಡ್ ಮಾಡಿ ಬಿಟ್ಟಿದ್ದೆನಲ್ಲ. ಮುಂದಿನ ಸಲ ನಾನೇ ಸಾರಿ ಉಟ್ಟು ಕೊಳ್ಳುವ ದುಸ್ಸಾಹಕ್ಕೆ ಕೈ ಹಾಕಲಾರೆ. ನಮ್ಮ ಪಾರ್ಲರ್ ಆಂಟಿಗೆ ಪಾಲುದಾರಿಕೆಯ ಪಾತ್ರ ಕೊಡಲೇಬೇಕೆಂದು. ಅಂದುಕೊಂಡಂತೆ ಸಾರಿಧಾರಿಣಿಯಾಗಿ ಸ್ಟೇಜ್ ಹತ್ತಿದ್ದೆ. ಬಹುಶಃ ಸೆರಗಿನ ಸೆಣಸಾಟ ಜಾಸ್ತಿಯಾಯ್ತೇನೋ, ಮನಸ್ಸು ಆ ದಿನದ ನಿರೂಪಣೆಯ ನಿರ್ವಹಣೆ ಅಷ್ಟು ಸಮಾಧಾನ ಕೊಡದೇ ಸಾರೀ...ಅಂದಿತ್ತು. ಸೀರೆಯೂ ಸುಕ್ಕುಗಟ್ಟಿ ಸುಮ್ಮನಾಗಿತ್ತು.

ಅಂದೇ ನಿರ್ಧರಿಸಿದೆ. ಎಂತಹ ಸಾರಿಯನ್ನಾದರೂ ಸೂಪರ್ ಆಗಿ ಉಡಲು ಕಲಿಯಲೇಬೇಕೆಂದು. ಹತ್ತು ಬಗೆಯಲ್ಲಿ ಸೀರೆ ಸುತ್ತುವ ಕ್ಲಾಸ್ ಅಟೆಂಡ್ ಆಗಿಯಾಯ್ತು. ಅಷ್ಟು ಬಗೆಯಲ್ಲಿ ಸೀರೆಯಲ್ಲಿ ಮಿಂಚಬಲ್ಲೆ ಎಂಬ ಹೆಮ್ಮೆ ಪಟ್ಟುಕೊಂಡಾಯ್ತು. ಕಾಟನ್, ಸಿಲ್ಕ್, ಫ್ಯಾನ್ಸಿ ಸೀರೆಗಳ ಕಲೆಕ್ಶನ್ ಇಟ್ಟಿದ್ದೆಲ್ಲವೂ ಆಯ್ತು. ಈಗ ಅದನ್ನು ಧರಿಸಲು ಮಾತ್ರ ಸಮಯವೇ ಇಲ್ಲ. ಗೌರವದ, ಸಂಪ್ರದಾಯ - ಸೌಂದರ್ಯದ ಪ್ರತಿನಿಧಿಯಾಗುವ ಸೀರೆ ನನ್ನ ಜಾಯಮಾನದ ಹೆಣ್ಣಿಗೆಲ್ಲ ಅಕ್ಷರಶಃ ಅಪರೂಪದ ಆಡಂಬರವೇ ಆಗುವುದೇನೋ ಎಂದುಕೊಳ್ಳುತ್ತಿರುತ್ತೇನೆ.

ಹಾಗೆಂದು ಸುಮ್ಮನಿರಲು ಸಾಧ್ಯವೇ? ಅದಕ್ಕೆ ಸರಿಯಾಗಿ ವಾಗಾತಿ ಮಾಡಬೇಕಲ್ಲ. ಇಲ್ಲದಿದ್ದರೆ ಸೀರೆಗೆ ಸುರಿದ ದುಡ್ಡು ದಂಡವೇ. ನೆಪ್ತಲೀನ್ ಬಾಲ್ ಮಾತ್ರ ಎಂದೂ ಹಾಕಬಾರದು. ವಾತಾವರಣ ಬಿಸಿ ಆದರೆ ಅದು ಕರಗಿ ಸೀರೆಯ ಬಣ್ಣವನ್ನೂ ಕರಗಿಸುತ್ತೆ ಎಂಬ ಕಾರಣಕ್ಕೆ ಪಂಜಿ ತರದ ಬಿಳಿ ಕಾಟನ್ ಬಟ್ಟೆ ತರಿಸಿದೆ. ಸೈಜ್‌ ಗೆ ಸರಿಯಾಗಿ ಕತ್ತರಿಸಿ, ತೊಳೆದೊಣಗಿಸಿ ಲವಂಗವನ್ನು ತುದಿಗೆ ಕಟ್ಟಿ ಅದರೊಳಗೆ ಸೀರೆ ಮಡಿಚಿದೆ. ಚಂದದ ಸೀರೆಯನ್ನು ಅಂದದ ಕಪಾಟಿನ ಸುಪರ್ದಿಗೆ ಸೇರಿಸುವಾಗ ನಿಮ್ಮೊಂದಿಗೆ ಸಾರಿಸಖ್ಯ ಹೇಳಿಕೊಳ್ಳೋಣ ಎನಿಸಿತು..

ಲೇಖಕರ ಕಿರುಪರಿಚಯ
ಸಹನಾ ಬಾಳಕಲ್

'ನಾನೊಬ್ಬ ಕನ್ನಡ ಪ್ರೇಮಿ' ಎಂದು ಗುರುತಿಸಿಕೊಳ್ಳುವ ಇವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ. ಪಕ್ಷಿವೀಕ್ಷಣೆ, ಛಾಯಾಗ್ರಹಣ, ನಿರೂಪಣೆ ಇವರ ನೆಚ್ಚಿನ ಹವ್ಯಾಸಗಳು.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ