ಶುಕ್ರವಾರ, ನವೆಂಬರ್ 29, 2013

ನಂಗೂ ಸನ್ಮಾನ ಆಯ್ತು..?!!

ಕಾಲಿಂಗ್ ಬೆಲ್ ಹೊಡ್ಕೊಂಡ ಕೂಡ್ಲೇ ಮಾಮೂಲಿನಂತೆ ನಾನು "ಯಾರೂ..." ಎಂದೆನ್ನುವ ರೂಢಿಯಂತೆ ಕೇಳಿದೆ. ಅದಕ್ಕವರು ಯಾರು ಅಂತ ಹೇಳಿದರು, ಆದರೆ ನನಗೆ ಕೇಳಿಸಲಿಲ್ಲ. ಮಹಡಿಯ ಮೇಲೆ ನನಗೆ ತೋಚಿದ್ದು ಗೀಚ್ತಾ ಕುಳಿತಿದ್ದೆ. "ಮೇಲೆ ಬನ್ನಿ" ಅಂದೆ. ಬಂದವರನ್ನು ಕೂರಲು ತಿಳಿಸಿ ಏನು ಎತ್ತ ಎಂದು ವಿಚಾರಿಸಿದೆ. ಬಂದವರಿಬ್ಬರೂ ತಮ್ಮ ಪರಿಚಯ ಹೇಳಿಕೊಂಡರು. ಅವರು ಸಮಾಜ ಸೇವಾ ನಿರತರೆಂದು, ಅವರದೊಂದು ಸಂಘವಿದೆ ಎಂದೂ ತಿಳಿಸಿದರಲ್ಲದೆ ಆ ಮುಖಾಂತರ ಸಂಘದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರು ಮತ್ತು ಗಣ್ಯರನ್ನು ಸನ್ಮಾನ ಮಾಡುತ್ತಾರಂದು ತಿಳಿಸಿದರು. ಹಾಗೆಯೇ ಈ ವರ್ಷದಲ್ಲಿ ನಿಮ್ಮನ್ನೂ ಒಬ್ಬ ಗಣ್ಯ ವ್ಯಕ್ತಿಗಳಲ್ಲೊಬ್ಬರೆಂದು ಪರಿಗಣಿಸಿ ಸನ್ಮಾನಿಸಲಿದ್ದೇವೆಂದು, ಅದಕ್ಕೆ ನೀವು ಒಪ್ಪಿಕೊಳ್ಳಬೇಕೆಂದು, ನಿಮ್ಮ ಹೆಸರು ನಿಮ್ಮ ಕುಲಗೋತ್ರದ ಪರಿಚಯಪತ್ರವನ್ನೂ ಕೊಡಬೇಕೆಂದು ಕೇಳಿದರು. ಅವರ ಯಾರ ಪರಿಚಯವೂ ನನಗಿರಲಿಲ್ಲ. ಗೊತ್ತಾಗಲೂ ಇಲ್ಲ. ಅದಕ್ಕೆ "ನಾನು ಅಂಥ ದೊಡ್ಡ ಸಾಧನೆ ಮಾಡಿದವನಲ್ಲ, ಇನ್ನೂ ಅನೇಕರು ಹೆಚ್ಚಿನ ಸಾಧನೆ ಮಾಡಿದವರು ಇದ್ದಾರೆ. ಅವರನ್ನು ಹುಡುಕಿ ಅವರಿಗೆ ಸನ್ಮಾನ ಮಾಡಿದರೆ ನೀವು ಮಾಡುವ ಸನ್ಮಾನಕ್ಕೊಂದು ಅರ್ಥ ಬರುತ್ತದೆ" ಎಂದು ಉಚಿತ ಉಪದೇಶ ನೀಡಿದೆ.  ಆದರೆ ಅವರು ನನ್ನ ಮಾತನ್ನು ಕೇಳುವ ಗೋಜಿಗೆ ಹೋಗಲಿಲ್ಲ.. "ಆಯ್ತು ಆಯ್ತು, ಇನ್ವಿಟೀಷನ್ ಕಳಿಸ್ತೀವಿ, ಆ ದಿನ ಗಾಡಿ ವ್ಯವಸ್ಥೆನೂ ಮಾಡ್ತೀವಿ, ನೀವು ಆ ದಿನ ಸುಮ್ಮನೆ ಬಂದ್ಬಿಡಿ ಅಷ್ಟೇ" ಅಂತ ಹೇಳ್ಬಿಟ್ಟು ಹೊರಟೇಬಿಟ್ರು. ಅವರು ಯಾರು? ಏನು? ಇವರಿಗೆ ನನ್ನ ಹೆಸರು ಸೂಚಿಸಿದವರು ಯಾರು? ಏನು ಎತ್ತ ಅಂತ ನನ್ನ ಮನಸಿನಲ್ಲಿ ನೂರಾರು ಪ್ರಶ್ನೆಗಳು ಉಳಿದುಬಿಟ್ಟವು. ಏನಾದರೂ ಆಗಲಿ ಅಂತ ಮನಸ್ಸಿಗೆ ಹಾಕಿಕೊಳ್ಳದೇ ಸುಮ್ಮನಾಗಿಬಿಟ್ಟೆ.

ಅಷ್ಟರಲ್ಲೊಂದು ದಿನ ನನಗೊಂದು ಇನ್ವಿಟೀಷನ್ ಬಂತು. ಅದರಲ್ಲಿ ಅಂದು ಬಂದಿದ್ದವರ ಸಂಘದ ಹೆಸರು, ಸಮಾರಂಭ ನಡೆಯುವ ಸ್ಥಳ, ದಿನಾಂಕ, ಸಮಯದ ಜೊತೆಗೆ ಹತ್ತಾರು ಹೆಸರುಗಳು, ರಾಜಕೀಯ ಗಣ್ಯರ ಹೆಸರೂ ಇತ್ತು. ಜೊತೆಗೆ ಗಣ್ಯರಿಗೆ ಸನ್ಮಾನವಿದೆಯೆಂದೂ ಪ್ರಕಟಿಸಲಾಗಿತ್ತು. ಸನ್ಮಾನಿತರ ಯಾರ ಹೆಸರುಗಳನ್ನೂ ನಮೂದಿಸಿರಲಿಲ್ಲ. ಏನೋ ಎಂತೋ.. ಎಂದು ಸುಮ್ಮನಾದೆ.

ಕಲೆ: ಶ್ರೀ ಸು. ವಿ. ಮೂರ್ತಿ
ಸಮಾರಂಭದ ದಿನವೂ ಬಂತು. ನಾನೇನೋ ತಯಾರಾಗಿ ಇವರ ವಾಹನದ ನಿರೀಕ್ಷೆಯಲ್ಲಿರುವಾಗ ನನ್ನ ಮೊಬೈಲ್ ರಿಂಗಣಿಸಿತು. ಕಿವಿಗೊಟ್ಟಾಗ ಬಂದುತ್ತರ ಅವರು ಕಳಿಸಿದ ವಾಹನ ಕೈಕೊಟ್ಟಿದೆ, ನೀವೇ ಏನಾದರು ವ್ಯವಸ್ಥೆ ಮಾಡಿಕೊಂಡು ಬನ್ನಿ. ಅದಕ್ಕೆ ಕನ್ವೇಯನ್ಸ್ ಹಣ ಒಂದಿಷ್ಟು ಕೊಡುತ್ತೇವೆಂದು ಉಸುರಿತು. ಸರಿ ಹಾಗೆ ಬೆಂಗಳೂರಿನ ಯಾವುದೋ ಮೂಲೆಯಲ್ಲಿರುವ ಸಮಾರಂಭಕ್ಕೆ ಬೆಂಗಳೂರನ್ನೆಲ್ಲಾ ಸುತ್ತಿ ಬಂದಾಗ ರಿಕ್ಷಾದ ಬಿಲ್ಲು 245 ರೂ ಆಗಿತ್ತು. ಅದನ್ನು ಕೊಟ್ಟು ಸಭಾಂಗಣದ ಒಳಗೆ ಕಾಲಿಟ್ಟೆ. ಅಲ್ಲಿ ಯಾರೂ ಗುರುತಿನವರಿರಲಿಲ್ಲ. ಮಾತನಾಡಿಸುವರ್ಯಾರೂ ಇರಲಿಲ್ಲ. ಸಮಾರಂಭದ ಸಮಯ ಮೀರಿ ಒಂದೆರಡು ಗಂಟೆ ಆದ ಮೇಲೆ ವೇದಿಕೆಗೊಂದಿಷ್ಟು ಜನ ದಬದಬಾಂತ ಬಂದರು. ನಂತರ ಎಲ್ಲರೂ ತಲೆಬುಡವಿಲ್ಲದೆ ಅಲ್ಲಿರುವ ಒಬ್ಬರನ್ನೊಬ್ಬರು ಹೊಗಳಿಕೊಳ್ಳತೊಡಗಿದರು. ಆದರೆ ಸಮಾರಂಭ ಯಾಕೆ ಏನು ಎಂಬ ವಿಷಯದ ಬಗ್ಗೆ ಯಾರೂ ಮಾತಾಡಲಿಲ್ಲ. ಅಷ್ಟರಲ್ಲಿ ಮೈಕ್ ನಲ್ಲಿ ಈಗ ಗಣ್ಯರಿಗೆ ಸನ್ಮಾನವೆಂದು ಸಾರಿದರು. ಅಲ್ಲದೆ ಎಲ್ಲರನ್ನು ಕರೆದ ಕೂಡಲೇ ಎಲ್ಲರೂ ವೇದಿಕೆಗೆ ಬಂದು ಸನ್ಮಾನವನ್ನು ಸ್ವೀಕರಿಸಬೇಕೆಂದು ಘೋಷಿಸಿದರು. ಹಾಗೆಯೇ ಒಂದಾದ ಮೇಲೊಂದರಂತೆ ಹೆಸರುಗಳನ್ನೂ ಕೂಗುತ್ತಲೇ ಎಲ್ಲರೂ ವೇದಿಕೆ ಮೇಲೆ ಒಟ್ಟಿಗೆ ಬಂದಾಗ ಯಾರು ಏನು ಅಂತ ಗೊತ್ತಾಗದೆ ಗೊಂದಲ ಉಂಟಾಯಿತು. ಮುಂದಿನ ಅರ್ಧ ಗಂಟೆಯಲ್ಲೇ ಸನ್ಮಾನ ಕಾರ್ಯಕ್ರಮವನ್ನು ಮುಗಿಸಿಯೂ ಆಯ್ತು. ಅಷ್ಟರಲ್ಲಿ 4-6 ಜನ ಕಾರ್ಯಕರ್ತರು ಬಂದು ಎಲ್ಲರ ಸನ್ಮಾನದ ವಸ್ತುಗಳನ್ನೂ ಅಂದರೆ ಹಾರ, ಹಣ್ಣು, ಶಾಲು, ಸರ್ಟಿಫಿಕೇಟ್ ಕಿತ್ತುಕೊಂಡು ಒಂದು ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸಿ ಕೈಗಿತ್ತರು. ನಂತರ ಕೆಲವೇ ನಿಮಿಷಗಳಲ್ಲಿ ವೇದಿಕೆ ಖಾಲಿಯೂ ಆಯಿತು. ಆಗ ಅಲ್ಲಿ ಸಮಾರಂಭ ಆಣಿಗೊಳಿಸಿದವರ್ಯಾರೂ ಕಾಣಿಸಲಿಲ್ಲ. ಸಭಾಂಗಣವನ್ನೊಮ್ಮೆ ದಿಟ್ಟಿಸಿ ನೋಡಿ ಹೊರಕ್ಕೆ ಬಂದೆ. ಹೇಳುವುದಕ್ಕಾಗಲಿ, ಕೇಳುವುದಕ್ಕಾಗಲಿ ಯಾರೂ ಇಲ್ಲದ ಕಾರಣ ಒಂದು ರಿಕ್ಷಾವೊಂದನ್ನು ತಡೆದೆ. ಅಷ್ಟರಲ್ಲಾಗಲೇ ರಾತ್ರಿ 10:30 ಘಂಟೆ ಆಗಿದ್ದರಿಂದ ಯಾರೊಬ್ಬರೂ ಬರಲೊಪ್ಪಲಿಲ್ಲ. ಕೊನೆಗೊಬ್ಬ ರಿಕ್ಷಾದವನು ಒಂದಕ್ಕೆ ಡಬ್ಬಲ್ ಚಾರ್ಜು ಕೊಟ್ಟರೆ ಅಷ್ಟು ದೂರಕ್ಕೆ ಬರುತ್ತೇನೆಂದು ಒಪ್ಪಿದ. ಅಂತೂ ಇಂತೂ ಮನೆಗೆ ಬರುವುದು ತುಂಬಾ ಹೊತ್ತಾಗಿದ್ದರಿಂದ ಗಾಬರಿಯಾಗಿದ್ದ ಮನೆಯವಳ ಕೈನಲ್ಲಿ ಚೀಲವನ್ನಿಟ್ಟೆ. ಕುತೂಹಲದಿಂದ ನನ್ನ ಹೆಂಡ್ತಿ ಚೀಲದಲ್ಲಿದ್ದ ವಸ್ತುಗಳನ್ನು ಒಂದೊಂದಾಗಿ ಹೊರತೆಗೆದಳು. ಶಾಲನ್ನು ಬಿಡಿಸಿದಾಗ ಅದರಲ್ಲಿ ಹತ್ತಾರು ಕಣ್ಣುಗಳು ಇಡೀ ಜಗತ್ತನ್ನೇ ನೋಡುತ್ತಿತ್ತು. ಮೊಮೆಂಟೋನಲ್ಲಿ ನನ್ನ ಚಿತ್ರ ಇರಲಿಲ್ಲ, ಬದಲಿಗೆ ಸಮಾರಂಭ ಏರ್ಪಡಿಸಿದ ಮಹಾನುಭಾವರ ಭಾವಚಿತ್ರ, ಹೆಸರುಗಳು ಇದ್ದವು. ಹಣ್ಣಿನ ಬುಟ್ಟಿಯನ್ನು ಬಿಡಿಸುತ್ತಲೇ ಅದರೊಳಗಿಂದ ಪಿತಪಿತನೆಂದು ಕೊಳೆತ ಕೆಲವು ಹಣ್ಣುಗಳು ಭೂಮಿ ಪಾಲಾದವು. ಅವುಗಳನ್ನು ಕಿತ್ತು ಎಷ್ಟು ದಿವಸಗಳಾಗಿದ್ದವೋ ಏನೋ. ಇನ್ನು ಸರ್ಟಿಫಿಕೇಟ್ನಲ್ಲಿ ಅಭಿನಯ ಚಕ್ರವರ್ತಿ ಸೂ. ವಿ. ಮೂರ್ತಿಯವರಿಗೆ ಸನ್ಮಾನ ಹಾಗೂ ಪ್ರಶಸ್ತಿ ಪತ್ರವೆಂದು ಬರೆಯಲಾಗಿತ್ತು. ನಾನು ಚಿತ್ರನಟನೆಂತಲೂ ಮುದ್ರಿಸಲಾಗಿತ್ತು. ಓದಿ ನೋಡಿ ನಾನು ಮೂರ್ಛೆ ಹೋಗುವುದೊಂದೇ ಬಾಕಿ. "ನಾನೇನು ಈ ಸನ್ಮಾನ ಬಯಸಿದ್ದೆನಾ? ಕೇಳಿದ್ದೆನಾ? ಇವೆಲ್ಲ ಯಾರಿಗಾಗಿ? ನಾನು ಚಿತ್ರನಟನಾಗಿದ್ದು ಯಾವಾಗ? ಅಲ್ಲದೆ ಇದರಿಂದ ಯಾರಿಗೆ ಏನು ಲಾಭ ಆಯಿತು..?" ಎಂಬುದೆಲ್ಲವೂ ನನಗೆ ಇಂದಿಗೂ ಗೊತ್ತಾಗದ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.

ಲೇಖಕರ ಕಿರುಪರಿಚಯ
ಶ್ರೀ ಸು. ವಿ. ಮೂರ್ತಿ

ಇವರು ಹವ್ಯಾಸಿ ಕಲಾವಿದರು ಹಾಗೂ ಖ್ಯಾತ ವ್ಯಂಗ್ಯಚಿತ್ರಕಾರರು. ಮಕ್ಕಳಿಗಾಗಿ ಹಲವಾರು "ನೋಡಿ ಕಲಿ - ಮಾಡಿ ನಲಿ" ಮಾದರಿಯಲ್ಲಿ ಚಿತ್ರಗಳನ್ನು ರಚಿಸಿದ್ದಾರೆ.

ಬಸವನಗುಡಿಯ ವಿದ್ಯಾರ್ಥಿ ಭವನ ಹೋಟೆಲಿನ ಗೋಡೆಯ ಸುತ್ತಮುತ್ತಲೂ ರಾರಾಜಿಸುತ್ತಿರುವ ಕನ್ನಡದ ಕಣ್ಮಣಿಗಳ ಚಿತ್ರಪಟಗಳು ಇವರ ಪ್ರತಿಭೆ ಹಾಗೂ ಕಲಾಸೇವೆಗೆ ಸಾಕ್ಷಿ.

Blog  |  Facebook  |  Twitter

1 ಕಾಮೆಂಟ್‌: