ಭಾನುವಾರ, ನವೆಂಬರ್ 3, 2013

ಅನುಸಂಧಾನ

ಮೌನ ವಹಿಸುವ ನಿನ್ನ ಹೊಗಳಲು
ಮಾತಿಗೆ ಕೀಳರಿಮೆ ತರಿಸಿದೆ
ನಿನ್ನ ನಡೆಯ ಎತ್ತಿ ಹಿಡಿಯಲು
ಹಂಸಕೂ ಮುಜುಗರ ಪಡಿಸಿದೆ
ಕಮಲ ಕಣ್ಣಿಗೆ ಹೋಲಿಸಿರಲು
ಲೆಕ್ಕಿಸದೆ ಹೋದೆ ಅದರ ತಳಮಳ
ಸಂಪಿಗೆ ಮೂಗಿನ ಹೋಲಿಕೆಗೆ
ಪ್ರಶ್ನೆ ಎದ್ದಿತು "ಎಲ್ಲಿ ಪರಿಮಳ?"

 "ಕ್ಷಿತಿಜವೂ ಕೈ ಚಾಚು ದೂರ"
 ಹೀಗೆ ಹುಸಿ ನುಡಿಯಾಡಿದವನಿಗೆ
 ಹೆಜ್ಜೆ ಇಡಲೂ ತೋಚದಾಗಲು
 ಇದು ಭೂಮಿಯ ಶಾಪವೇ?
 ನೂರು ಕವಿತೆಯ ಹೊಗಳು ಹಾಡಿಗೆ
 ಬೇಡಿಕೆ ಇರದಂತೆ ತೋಚಿದೆ
 ನಿನ್ನ ಕಂಠವ ಜೇನು ಅನಲು
 ಕೋಗಿಲೆಗೆ ಕೋಪವೇ?

 ಸಪ್ಪೆಯಾಗಿದೆ ಸಂಜೆ ಬಾನು
 ಒಪ್ಪುವಂತಿಲ್ಲ ಅರಳು ಹೂವು
 ಬೀಸು ಗಾಳಿಗೆ ಮುಗ್ಧತೆಯ ಕೊರತೆ
 ರಾತ್ರಿ ರಮ್ಯಕೆ ಭಯದ ಕಾವು
 ಕಾಮನ ಬಿಲ್ಲಿಗೆ ಒಂದೇ ಬಣ್ಣ
 ಅದು ನೀಲ್ಗಟ್ಟಿ ಕಾಣದಾಗಿದೆ
 ಛಂದಸ್ಸು ಮರೆತವು ಅಡ್ಡಾದಿಡ್ಡಿ ಪದಗಳು
 ಮಾತ್ರೆ-ಗುಳಿಗೆ ಸಾಲದೆ

 ತೀರ ಮರಳಿನ ಮೇಲೆ ಗೀಚಲು
 ನಿರುತ್ಸಾಹಿ ಅಲೆಯ, ಅಸಾಧಾರಣ ನಡೆ
 ಅದೇಕೋ ಅಳಿಸದೇ ದೂರ ಉಳಿಯಿತು
 ಮಾತು ಬಿಟ್ಟಿದ್ದರಿಂದಲೇ ?
 ಭೋರ್ಗರೆದು ಸುರಿದ ಮಳೆಯಲಿ
 ನಾ ಮಿಂದೆ ಖುಷಿಯಲಿ, ಆದರೆ
 ಸದ್ದಿಲ್ಲದೇ ತಾ ರದ್ದಿಯೆನಿಸಿತು
 ನೀ ನೆನಪಾದ ಕೂಡಲೇ!!

 ನಿನ್ನ ನಂಟಿಗೆ ಪ್ರಕೃತಿಯನೇ
 ಗಂಟು ಬಿಗಿದು ಸ್ವಂತವಾಗಿಸೆ
 ನಿನ್ನ ಅರೆಕ್ಷಣ ಅಗಲುವಿಕೆಗೆ
 ಎಲ್ಲವೂ ನಿಸ್ವರೂಪಿಯೇ
 ರೂಢಿಯಾಗಿದೆ ಹೋಲಿಸಿ ಬರೆವುದು
 ಹೋಲಿಕೆಗೆ ಸ್ಪಂದಿಸದ ಪದಗಳ
 ನಿನ್ನ ಪರಿಚಯ ಮಾಡಿಸದೆ
 ಮುಂದುವರೆಯಲು ಸಾಧ್ಯವೇ?

  - ರತ್ನಸುತ

ಲೇಖಕರ ಕಿರುಪರಿಚಯ
ಶ್ರೀ ಭರತ್ ವೆಂಕಟಸ್ವಾಮಿ

ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು, ಮೂಲತಃ ಬೆಂಗಳೂರಿನವರು. ರೈತ ಕುಟುಂಬದಲ್ಲಿ ಬೆಳೆದು ಬಂದಿರುವ ಇವರು ಕವನಗಳನ್ನು ರಚಿಸುವುದರಲ್ಲಿ ನಿಸ್ಸೀಮರು.

ಸಾಹಿತ್ಯ ಓದುವುದು ನೆಚ್ಚಿನ ಹವ್ಯಾಸವಾಗಿದ್ದು, ಕನ್ನಡ ನಾಡು-ನುಡಿಯ ಸೇವೆಗೆ ಇವರು ಸದಾ ಸಿದ್ಧರು.

Blog  |  Facebook  |  Twitter

3 ಕಾಮೆಂಟ್‌ಗಳು:

  1. ಅಚ್ಚ ಕನ್ನಡದ ಸ್ವಚ್ಛ ಕವನ ಅಚ್ಚುಕಟ್ಟಾಗಿ ಮೂಡಿಬಂದಿದೆ...

    ಪ್ರತ್ಯುತ್ತರಅಳಿಸಿ
  2. ಅದ್ಭುತ ಸಾಲುಗಳು... ಬಹಳಷ್ಟು ವಿಷಯಗಳನ್ನು ತುಂಬ ಸರಳ ಪದಗಳಲ್ಲಿ ಬಣ್ಣಿಸಿದ್ದೀರಿ.. ಧನ್ಯವಾದಗಳು.. ನಿಮ್ಮ ಬ್ಲಾಗಿನ ಇತರ ಕವನಗಳನ್ನು ಓದಲು ಅಣಿಯಾಗಿದ್ದೇನೆ.

    ಪ್ರತ್ಯುತ್ತರಅಳಿಸಿ