ಬುಧವಾರ, ನವೆಂಬರ್ 27, 2013

ನೆರೆ ಹಾವಳಿ

ಮಳೆಗಾಲದ ಒಂದು ದಿನ. 1982ರ ಆಗಸ್ಟ್ ತಿಂಗಳು. ಮಲೆನಾಡಿನ ಮಳೆಗಾಲವೆಂದರೆ ಬಹಳ ಸುಂದರ ಹಾಗೂ ಸಂಭ್ರಮದ ಕಾಲ. ಮಲೆನಾಡಿನಲ್ಲಿ ಮಳೆಗಾಲವನ್ನು ಬಹಳ ಸಿದ್ಧತೆಗಳಿಂದ ಅದ್ಧೂರಿಯಾಗಿ ಸ್ವಾಗತಿಸುತ್ತಿದ್ದ ಕಾಲವದು. ಮಳೆಗಾಲಕ್ಕೆ ಬೇಕಾದ ಎಲ್ಲ ದಿನಸಿ ಸಾಮಾನುಗಳನ್ನು ಪೇಟೆಯಿಂದ ಒಮ್ಮೆಲೇ ಖರೀದಿಸಿ, ಸ್ವಚ್ಛಗೊಳಿಸಿ, ಒಣಗಿಸಿ, ಭದ್ರವಾಗಿ ತುಂಬಿಸಿ ಇಟ್ಟುಕೊಂಡು, ಮನೆಯ ಗೋಡೆಗಳಿಗೆ ಇಂಚಲು ತಟಿಕೆಗಳನ್ನು ಕಟ್ಟಿಕೊಂಡು, ಸೌದೆ, ಹುಲ್ಲು ಮುಂತಾದ ಎಲ್ಲಾ ವಸ್ತುಗಳನ್ನು ಕನಿಷ್ಠ ಆರು ತಿಂಗಳಿಗಾಗುವಷ್ಟಾದರೂ ಅದಕ್ಕಾಗಿ ನಿರ್ಮಿಸಿದ ಜಾಗದಲ್ಲಿ ಕೂಡಿಟ್ಟುಕೊಂಡು, ಅಂಗಳದಲ್ಲಿ ಓಡಾಡಲು ದಬ್ಬೆಗಳಿಂದ ನಿರ್ಮಿಸಿದ ಫುಟ್ ಪಾತ್ ಗಳನ್ನು ನಿರ್ಮಿಸಿಕೊಂಡು, ಒಂದೇ ಎರಡೇ; ಮಳೆಗಾಲವನ್ನು ಸ್ವಾಗತಿಸುವ ಸಿದ್ಧತೆಗಳೇ ಸಿದ್ಧತೆಗಳು. ಮೇ ತಿಂಗಳಲ್ಲಿ ಸಾಮಾನ್ಯವಾಗಿ ಯಾರೇ ಸಿಕ್ಕರೂ 'ಮಳೆಗಾಲದ ಕೆಲಸ ಆಯ್ತಾ' ಅಂತ ಕೇಳುವುದು ಸಾಮಾನ್ಯ ಪ್ರಶ್ನೆ. 'ಎಲ್ಲಿಂದ ಮಾರಾಯ್ರೆ? ಇನ್ನು ಗೊಬ್ಬರ ಹೊಡೆದಿಲ್ಲ, ತೋಟದ ಕಪ್ಪು ಕೀಸಿಲ್ಲ, ಗದ್ದೆ ಹೊಳಕೆ ಆಗಿಲ್ಲ, ಈ ಮದುವೆ ಮನೆಗಳು ಮುಗಿದ ಹೊರತು ಯಾವ ಕೆಲಸಾನು ಆಗೂದಿಲ್ಲ' ಅಂತ ತಮ್ಮ ಬೇಜವಾಬ್ದಾರಿನೆಲ್ಲಾ ಮದುವೆ ಮನೆ ಮೇಲೆ ಹಾಕುವುದು ಸಾಮಾನ್ಯ.

ಆಗಿನ್ನೂ ಕೆಲಸ ಸಿಕ್ಕ ಹೊಸತು. ನಾನು, ನನ್ನ ತಂಗಿ, ನಮ್ಮ ಶಾಲೆಯ ಇನ್ನೊಬ್ಬರು ಶಿಕ್ಷಕಿ ಒಂದೇ ಮನೆಯಲ್ಲಿ ವಾಸಿಸುತ್ತಿದ್ದೆವು. ಅನೇಕ ಆದರ್ಶಗಳನ್ನು ಹೊತ್ತು ಸುಂದರ ಕನಸುಗಳನ್ನು ಕಾಣುತ್ತಿದ್ದ ನಮಗೆ ಪ್ರಪಂಚವೇ ಸ್ವರ್ಗ. ಶಾಲೆಯೆಂದರೆ ಬಗೆಬಗೆಯ ಹೂಗಳಿರುವ ಹೂದೋಟ. ನಾನು ಮಲೆನಾಡಿನ ಕೊಪ್ಪ ತಾಲೂಕಿನವಳಾಗಿದ್ದ ಕಾರಣ ಮಳೆ, ಹೊಳೆ, ಪ್ರವಾಹ ನನಗೆ ಮಾಮೂಲು. ಆದರೆ ನನ್ನ ಗೆಳತಿ (ಸಹೋದ್ಯೋಗಿ) ದಾವಣಗೆರೆಯವರಾದ್ದರಿಂದ ಅವರಿಗೆ ಇವೆಲ್ಲ ಹೊಸ ಅನುಭವ. ನಾವು ತೀರ್ಥಹಳ್ಳಿ ತಾಲೂಕಿನ ಒಂದು ಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದು ಅಲ್ಲಿಯೇ ವಾಸಿಸುತ್ತಿದ್ದೆವು. ನಮ್ಮ ಶಾಲೆಯ ಮುಖ್ಯೋಪಾಧ್ಯಾಯರು ಅಲ್ಲಿಂದ 5 ಕಿ.ಮೀ. ದೂರದಲ್ಲಿರುವ ತೂದೂರಿನಲ್ಲಿ ವಾಸಿಸುತ್ತಿದ್ದರು. ಮಳೆ ಜಾಸ್ತಿ ಬಂದಾಗ ತೂದೂರಿನಲ್ಲಿ ತುಂಗಾನದಿ ತುಂಬಿ ರಸ್ತೆ ಮೇಲೆ ಬರುತ್ತದೆ ಎಂದು ಕೇಳಿ ನೆರೆ ಬಂದಾಗ ನಮಗೆ ಹೇಳುವಂತೆ ತಿಳಿಸಿದ್ದೆವು. ರಸ್ತೆ ಮೇಲೆ ನೀರು ಬಂದಾಗ ಹೇಗಿರುತ್ತದೆ ಎಂದು ನೋಡುವ ಆಸೆ ನಮಗೆ.

ಆ ದಿನ ಶನಿವಾರ ಶಾಲೆ ಮುಗಿಸಿ ಮನೆಗೆ ಬಂದು ಅಡಿಗೆ ಮಾಡಿ ಊಟ ಮುಗಿಸಿ ಮಲಗುವ ತರಾತುರಿಯಲ್ಲಿದ್ದೆವು. ತೂದೂರಿಂದ ಬಂದ ಪೋಸ್ಟ್ ಮ್ಯಾನ್ 'ನಿಮ್ಮ ಮೇಷ್ಟ್ರ ಮನೆಯಲ್ಲಿ ಹೇಳಿಕಳಿಸಿದ್ದಾರೆ. ನೆರೆ ಬಂದಿದೆಯಂತೆ ಬರಬೇಕಂತೆ' ಎಂದು ತಿಳಿಸಿದರು. ಸರಿ ಎಂದು ತೂದೂರಿಗೆ ಹೊರಟೆವು. ಆಗ ಅಲ್ಲಿಗೆ ಯಾವುದೇ ವಾಹನದ ವ್ಯವಸ್ಥೆ ಇರಲ್ಲಿಲ್ಲ. ನಡೆದುಕೊಂಡೇ ಹೊರಟೆವು. ತೂದೂರಿಗೆ ತಲುಪಿದಾಗ 3:30 ಇರಬಹುದು. ಅಷ್ಟೇನೂ ಜೋರಾಗಿ ಮಳೆ ಬರುತ್ತಿರಲಿಲ್ಲ. 5 ಘಂಟೆ ಹೊತ್ತಿಗೆ ಮೇಷ್ಟರ ಮನೆಯವರು ಮತ್ತು ನಾವೆಲ್ಲಾ ಹೋಗಿ ರಸ್ತೆ ಮೇಲೆ ಹೊಳೆ ನೀರು ಉಕ್ಕಿ ಹರಿಯುವುದನ್ನು ನೋಡಿ ಬಂದೆವು. ಹೊಳೆ ತುಂಬಿ ಗಂಭೀರವಾಗಿ ಸ್ವಲ್ಪ ವೇಗವಾಗಿ ಹೋಗುತ್ತಿದ್ದಂತೆ ಕಾಣುತ್ತಿತ್ತು. ರಸ್ತೆಯ ಮೇಲೆ ಒಂದು ಕಡೆ ಉಕ್ಕಿ ನೀರು ಹರಿದು ಹೋಗುತ್ತಿತ್ತು. ಶನಿವಾರ ಭಾನುವಾರ ಹಬ್ಬದ ರಜಾದಿನಗಳಲ್ಲಿ ಊರಿಗೆ ಹೋಗದಿದ್ದರೆ ನಾವು ಮೇಷ್ಟರ ಮನೆಯಲ್ಲಿ ಝಂಡಾ. ಊರಿ ಹರಟೆ ಹೊಡೆಯುತ್ತ, ಸಿನಿಮಾದ ಕಥೆ ಹೇಳುತ್ತಾ, ಸಮಯ ಕಳೆಯುತ್ತಿದ್ದೆವು. ಅದರಂತೆ ಈ ದಿನವೂ ಸಮಯ ಕಳೆಯುತ್ತಿದ್ದೆವು. 6 ಘಂಟೆ ಹೊತ್ತಿಗೆ ಮಳೆ ಜಾಸ್ತಿಯಾಗತೊಡಗಿತು. ಕೊಪ್ಪ, ಶೃಂಗೇರಿ ಕಡೆ ಬಹಳ ಮಳೆ ಅಂತೆ ಎಂದು ವರ್ತಮಾನ ಆಚೀಚೆ ಮನೆಯವರಿಂದ ಬರತೊಡಗಿದವು. 7 ಘಂಟೆ ಆಯಿತು. ಮಳೆ ಕಡಿಮೆ ಆಗಲಿಲ್ಲ. ನಮ್ಮೂರ ಮಳೆಯಂತೆ ಜೋರಾಗಿ ಬರುತ್ತಾ ಇರಲಿಲ್ಲ. ನೆರೆ ಮೇಲೆ ಹತ್ತುತ್ತಿದೆಯಂತೆ ಅಂತ ಊರಲ್ಲಿ ಜನ ಮಾತನಾಡುತ್ತಾ ಓಡಾಡುತ್ತಿದ್ದರು. 8 ಘಂಟೆ ಆಯಿತು. ಎಲ್ಲರೂ ಊಟ ಮುಗಿಸಿದೆವು. ಈಗಿನಂತೆ ಆಗ ಟಿವಿಯ ಹಾವಳಿ ಇರಲಿಲ್ಲ. ಯಾರಿಗೂ ಮಲಗುವ ಮನಸ್ಸಾಗಲಿಲ್ಲ. ಏಕೆಂದರೆ ಮಳೆ ಬರುತ್ತಲೇ ಇತ್ತು. 9 ಘಂಟೆ ಆಯಿತು, ಮನೆಯ ಎದುರು ರಸ್ತೆಯ ಮೇಲೆ ಹೆಜ್ಜೆ ಮುಳುಗುವಷ್ಟು ನೀರು ಬಂದಿತ್ತು. ಮನೆಯ ಮುಂಭಾಗದ ರಸ್ತೆಯಲ್ಲಿ ಒಂದು ಕಿಲೋಮೀಟರ್ ಕಲ್ಲು ಇತ್ತು. ಅದರ ಬುಡಕ್ಕೆ ನೀರು ಬಂದಿತ್ತು. 10 ಘಂಟೆ ಹೊತ್ತಿಗೆ ಇನ್ನೂ ಸ್ವಲ್ಪ ನೀರು ಏರಿತು. ಇನ್ನೂ ಸ್ವಲ್ಪ ನೀರು ಏರಿದರೆ ಹೊಳೆ ಮಗುಚುತ್ತದೆ. ಅಂದರೆ ಪೇಟೆಯಿಂದ ಹೊಳೆಗೆ ಹೋಗುವ ರಸ್ತೆಯಲ್ಲಿ ಹೊಳೆಯ ನೀರು ರಭಸದಿಂದ ನುಗ್ಗಿ ಊರೊಳಗೆ ಬರುತ್ತದೆ ಎಂದು ನಮ್ಮ ಮುಖ್ಯೋಪಾಧ್ಯಾಯರು ತಿಳಿಸಿದರು. ನೆರೆ ಏಳುತ್ತಿದ್ದಂತೆ ಮುಂಭಾಗದ ಗದ್ದೆ ಬಯಲಿನಲ್ಲೂ ನೀರು ಏರತೊಡಗಿತು. ತೂದೂರಿನಲ್ಲಿ ಒಂದು ಕಡೆ ಹೊಳೆ ಇನ್ನೊಂದು ಕಡೆ ಗದ್ದೆ ಬಯಲು.

ಊರಿನ ಪ್ರಾರಂಭದ ಹಳ್ಳಿಗೆ ಹೋಗುವ ರಸ್ತೆಯಲ್ಲೂ ನೀರು ಏರುತ್ತದೆ. ಊರಿನ ಕೊನೆಯಲ್ಲಿ ತೂದೂರು ಬೇಗುವಳ್ಳಿಯ ಮಧ್ಯೆಯೂ ರಸ್ತೆಯಲ್ಲಿ ನೀರು ನಿಲ್ಲುತ್ತದೆ. ನಾವು ಆಗ ದ್ವೀಪದಲ್ಲಿ ಸಿಕ್ಕಿಹಾಕಿಕೊಂಡಂತೆ ಆಗುತ್ತದೆ ಎಂದೂ ತಿಳಿಸಿದರು. ಘಂಟೆ 12 ಆದರೂ ಯಾರಿಗೂ ನಿದ್ದೆ ಬಂದಿರಲಿಲ್ಲ. ಮಳೆ ಬರುತ್ತಲೇ ಇತ್ತು. ಹೊಳೆಯ ನೀರು ಏರುತ್ತಲೇ ಇತ್ತು. ಇದೇ ಮೊದಲ ಬಾರಿಗೆ ಮಳೆ ಮತ್ತು ನೆರೆಯ ಬಗ್ಗೆ ನನಗೆ ಸ್ವಲ್ಪ ಭಯ ಉಂಟಾಯಿತು.

ನಾನು ಹುಟ್ಟಿದ ಮನೆಯಲ್ಲಿ ಹಿಂಭಾಗ ಗುಡ್ಡ, ಮುಂಭಾಗದಲ್ಲಿ ತೋಟ ಇತ್ತು. ತೋಟದ ದಂಡೆಯ ಉದ್ದಕ್ಕೂ ಬೇಲಿಸುರಿಗೆ ಎಂಬ ಮರ ಬೆಳೆಸಿರುತ್ತಿದ್ದೆವು. ಮಳೆಗಾಲದಲ್ಲಿ ಅದರ ತುಂಬಾ ಮಿಂಚು ಹುಳುಗಳು ಕುಳಿತು ಕ್ರಿಸ್ಮಸ್ ಟ್ರೀಗಿಂತ ಚೆನ್ನಾಗಿ ಅಲಂಕಾರ ಮಾಡಿರುತ್ತಿದ್ದವು. ಮಳೆ ಬಂದಾಗ ಕಿಟಕಿಯಲ್ಲಿ ಕುಳಿತು ರಾತ್ರಿಯಲ್ಲಿ ಅದರ ಸೊಬಗನ್ನು ಸವಿಯುತ್ತ ಘಂಟೆಗಟ್ಟಲೆ ಕೂತಿರುತ್ತಿದ್ದೆವು. ಜೋರಾದ ಮಳೆಯಲ್ಲಿ ಕೊಡೆ ಹಿಡಿದುಕೊಂಡು, ಹಾಡನ್ನು ಹೇಳುತ್ತಾ ಮೈಲುಗಟ್ಟಲೆ ನಡೆದು ಶಾಲೆಗೆ ಹೋಗುತ್ತಿದ್ದೆವು. ಮಳೆ ಜಾಸ್ತಿಯಾದಾಗ ವಿದ್ಯಾರ್ಥಿಗಳಿಗೆ ಹಳ್ಳ ಕಟ್ಟಿ ಮನೆಗೆ ಹೋಗಲು ತೊಂದರೆ ಆಗುತ್ತದೆ ಎಂದು ಅರ್ಧ ಘಂಟೆ ಮುಂಚೆ ಶಾಲೆ ಬಿಟ್ಟಾಗ ಕುಣಿದು ಕುಪ್ಪಳಿಸುತ್ತಾ ಚರಂಡಿಯಲ್ಲೇ ನಡೆದು ಬಟ್ಟೆ ಪೂರ್ತಿ ಒದ್ದೆ ಮಾಡಿಕೊಂಡು ಬಂದಾಗ ಮನೆಯಲ್ಲಿ ಬೈಯಿಸಿಕೊಂಡಾಗ ಕೂಡ ಮಳೆಯ ಬಗ್ಗೆ ಬೇಜಾರಾಗಲಿ, ಭಯವಾಗಲಿ ಆದದ್ದೇ ಇಲ್ಲ. ಇಂಥಾ ನನಗೆ ಈ ದಿನ ಮಳೆಯ ಇನ್ನೊಂದು ಮುಖ ಕಾಣತೊಡಗಿತು.

ಬೆಳಗಿನ ಜಾವ 4 ಘಂಟೆಗೆ ಹೊಳೆಯ ನೀರು ಮೇಲೇರಿ ಹೊಳೆ ರಸ್ತೆಯಿಂದ ಮುಖ್ಯ ರಸ್ತೆಗೆ ನುಗ್ಗತೊಡಗಿತು. ಅಕ್ಕಪಕ್ಕದ ಮನೆಯವರೆಲ್ಲಾ ಸೇರಿ ಮನೆಯಲ್ಲಿದ್ದ ಮುಖ್ಯ ವಸ್ತುಗಳನ್ನು ಅಟ್ಟದ ಮೇಲೆ ಇಟ್ಟು ಗಂಡಸರು ಮಾತ್ರ ಮನೆಯಲ್ಲಿದ್ದು ಹೆಂಗಸರು ಮಕ್ಕಳೆಲ್ಲಾ ಸಮೀಪದಲ್ಲಿ ಸ್ವಲ್ಪ ಎತ್ತರದಲ್ಲಿದ್ದ ಹೋಟೆಲಿನವರ ಮನೆಗೆ ಹೋಗಬೇಕೆಂದು ತೀರ್ಮಾನಿಸಿದರು. ಅದರಂತೆ ನಾವೆಲ್ಲಾ ಮೊಣಕಾಲೆತ್ತರದ ನೀರಿನಲ್ಲಿ ನಡೆದು ಆ ಮನೆಗೆ ಹೋದೆವು. ಹೊಳೆಯ ನೀರು ನುಗ್ಗುತ್ತಿದ್ದ ಕಾರಣ ನೀರು ಬಹಳ ರಭಸವಾಗಿತ್ತು.

ಒಂದೆಡೆ ಮಳೆ, ಇನ್ನೊಂದೆಡೆ ನೀರಿನ ಸೆಳೆತ ಜೊತೆಗೆ ಚಳಿ, ಮನಸ್ಸಿನಲ್ಲಿ ಏನೋ ಆತಂಕ, ಭಯ. ನಾವು ಹೋಗುವ ಹೊತ್ತಿಗಾಗಲೇ ಅಲ್ಲಿಗೆ ಅನೇಕರು ಮನೆ ಒಳಗೆ ನೀರು ನುಗ್ಗಿದ ಕಾರಣ ಅಲ್ಲಿಗೆ ಬಂದಿದ್ದರು. ಆ ಹೋಟೆಲಿನವರು ಎಲ್ಲರಿಗೂ ಬಿಸಿ ಬಿಸಿ ಚಹಾ, ಕಾಫಿ, ಉಪ್ಪಿಟ್ಟು, ಅವಲಕ್ಕಿಯ ವ್ಯವಸ್ಥೆಯನ್ನು ಉಚಿತವಾಗಿಯೇ ಮಾಡಿದರು. ಬೆಳಗಿನ 10 ಘಂಟೆಯವರೆಗೂ ಜನ ಅದೇ ನೆರೆ ನೀರಿನಲ್ಲಿ ಓಡಾಡುತ್ತಾ ಅವರ ಮನೆ ಕೊಟ್ಟಿಗೆ ಬಿತ್ತಂತೆ, ಇವರ ಮನೆ ದನ ತೇಲಿ ಹೋಯ್ತಂತೆ, ಇನ್ನೊಬ್ಬರ ಮನೆಯ ಹಾಸಿಗೆಗಳೇ ತೇಲಿ ಹೋಯ್ತಂತೆ ಎಂದು ಮಾತನಾಡುತ್ತಾ ಓಡಾಡುತ್ತಿದ್ದರು. ಇನ್ನೂ ನೀರು ಏರುತ್ತಾ ಹೋದಂತೆ ಮಾತು ಓಡಾಟ ಕಡಿಮೆಯಾಗುತ್ತಾ ಬಂದು ಎಲ್ಲರಿಗೂ ಆತಂಕ ಜಾಸ್ತಿಯಾಗುತ್ತಾ ಹೋಯಿತು. ನಾವಿದ್ದ ಹೋಟೆಲಿನ ಬಾಗಿಲಿಗೂ ನೀರು ಬಂತು. ಆಗ ಊರಿನ ಯುವಕರೆಲ್ಲಾ ಸ್ವಯಂ ಸೇವಕರಂತೆ ಸೇರಿ  ಎಲ್ಲರನ್ನೂ ಒಂದು ಕಿ.ಮೀ. ಅಗಲದ ಗದ್ದೆ ಬಯಲಿನ ಆಚೆಗಿನ ಊರಿಗೆ ಸಾಗಿಸುವ ತೀರ್ಮಾನ ಕೈಗೊಂಡರು. ಆದರೆ ಗದ್ದೆ ಬಯಲಿನ ತುಂಬಾ ನೀರು ನಿಂತಿದ್ದು ಅದರಲ್ಲಿ ಎಷ್ಟು ಅಡಿ ನೀರು ನಿಂತಿದೆ ಎಂದೇ ಗೊತ್ತಾಗುತ್ತಿರಲಿಲ್ಲ. ದೋಣಿಯಲ್ಲಿ ಕರೆದೊಯ್ಯೋಣವೆಂದರೆ ದೋಣಿ ದಾಟಿಸುವವನು ಹೊಳೆಯ ಆಚೆ ದಡದ ಊರವನಾದ್ದರಿಂದ ಹಿಂದಿನ ದಿನ ರಾತ್ರಿಯೇ ದೋಣಿಯನ್ನು ಆಚೆ ದಡಕ್ಕೆ ತೆಗೆದುಕೊಂಡು ಹೋಗಿದ್ದು ಈ ಕಡೆಗೆ ಬರುವಂತಿರಲ್ಲಿಲ್ಲ. ಕೊನೆಗೆ ಎದೆ ಎತ್ತರದ ನೀರಿನಲ್ಲಿ ಎಲ್ಲರೂ ಕೈಕೈ ಹಿಡಿದುಕೊಂಡು ಗುತ್ತಿ ಎಡೆ ಹಳ್ಳಿಗೆ ಹೋಗುವ ರಸ್ತೆಯಲ್ಲಿ ಗದ್ದೆ ಬಯಲಿನ ಆಚೆ ದಡಕ್ಕೆ ಹೊರಟೆವು. ಅಷ್ಟು ಎತ್ತರದ ನೀರಿನಲ್ಲಿ ರಸ್ತೆ ಯಾವುದು? ಗದ್ದೆ ಯಾವುದು? ಎಂದೇ ಗೊತ್ತಾಗುತ್ತಿರಲಿಲ್ಲ. ಬೇಲಿಯ ಗಿಡಗಳ ತಲೆ ಮಾತ್ರ ಕಾಣುತ್ತಿದ್ದರಿಂದ ರಸ್ತೆಯನ್ನು ಅಂದಾಜಿನ ಮೇಲೆ ದಾಟಿದೆವು. ಅಲ್ಲಿಂದ ಸುಬ್ಬರಾಯ ಭಟ್ಟರು ಎಂಬುವವರ ಮನೆಗೆ ಹೋದೆವು. ಅದು ಒಂದು ಅವಿಭಕ್ತ ಕುಟುಂಬ. ಅವರು ಎಲ್ಲರನ್ನೂ ತುಂಬಾ ಸಂತೋಷದಿಂದ ಸ್ವಾಗತಿಸಿದರು. ಎಲ್ಲರಿಗೂ ಸ್ನಾನಕ್ಕೆ ಬಿಸಿ ಬಿಸಿ ನೀರು, ಸೋಪು, ಪೇಸ್ಟ್ ಕೂಡ ಒದಗಿಸಿದರು. ಊರಿನ ಅರ್ಧದಷ್ಟು ಜನರು ಅವರ ಮನೆಯಲ್ಲಿ ಆಶ್ರಯ ಪಡೆದರು. ಇನ್ನುಳಿದವರು ಅಲ್ಲಿದ್ದ ಇನ್ನೂ ನಾಲ್ಕೈದು ಮನೆಗಳಲ್ಲಿ ಉಳಿದುಕೊಂಡರು. ಭಾನುವಾರ ಮತ್ತು ಸೋಮವಾರ ನಾವು ಅವರ ಮನೆಯಲ್ಲೇ ಇದ್ದೆವು. ದೊಡ್ಡ ಮದುವೆ ಮನೆಯಂತೆ ನಮ್ಮೆಲ್ಲರನ್ನೂ ಅವರು ಸತ್ಕರಿಸಿದ ರೀತಿ ಅದ್ಭುತ. ನಾವು ಅವರಿಗೆ ಎಂದೆಂದಿಗೂ ಚಿರರುಣಿಗಳು. ಅವರು ತಂಪಾಗಿ ಸಂತೋಷವಾಗಿ ಇರಲಿ ಎಂದು ನಾನು ಈಗಲೂ ಹಾರೈಸುತ್ತಿರುತ್ತೇನೆ.

 ಸೋಮವಾರ ಮಧ್ಯಾಹ್ನದ ಹೊತ್ತಿಗೆ ಮಳೆ ಸ್ವಲ್ಪ ಕಡಿಮೆಯಾಯಿತು. ನೆರೆ ನೋಡೋಣವೆಂದು ಗದ್ದೆ ಬಯಲು ದಂಡೆಗೆ ಬಂದೆವು. ಮುಂದೆ ಗದ್ದೆ ಬಯಲಿನಲ್ಲಿ ಸಮುದ್ರದಂತೆ ನೀರು ನಿಂತಿತ್ತು. ತೂದೂರಿನ ಮನೆಗಳು ಸಮುದ್ರದಲ್ಲಿ ತೇಲುತ್ತಿದ್ದಂತೆ ಕಂಡವು. ಕೆಲವು ನಾಯಿಗಳು ಮನೆಯ ಮಾಡನ್ನು ಹೇಗೋ ಹತ್ತಿ ಕುಳಿತು ಓ..... ಎಂದು ಊಳಿಡುತ್ತಿದ್ದವು. ಪಾಪ ಅವುಗಳಿಗೆ ಎರಡು ದಿನದಿಂದ ಊಟ ಇರಲಿಲ್ಲ. ಬೆಕ್ಕುಗಳು ಏನಾಗಿದ್ದವೋ? ದನಗಳನ್ನು ಶಾಲೆಯ ಹಿಂಭಾಗದ ಎತ್ತರದ ಜಾಗದಲ್ಲಿ ಕಟ್ಟಿ ಹಾಕಿದ್ದರಂತೆ. ಅವು ಹಾಗೂ ಅವುಗಳ ಕರುಗಳ ಕಥೆ ಏನಾಗಿತ್ತೋ ದೇವರಿಗೇ ಗೊತ್ತು. ಶೆಟ್ಟರ ಅಂಗಡಿಯ ಬಾಗಿಲಿನಿಂದ ಒಳನುಗ್ಗಿದ ನೀರು ಕಿಟಕಿಯ ಮೂಲಕ ಹೊರಕ್ಕೆ ಬರುತ್ತಿತ್ತು. ಮಳೆ ನಿಂತಿತ್ತು. ನೀರು ಶಾಂತ ಸಾಗರದಂತೆ ನಿಂತಿತ್ತು. ತಣ್ಣನೆಯ ಗಾಳಿ ಬೀಸುತ್ತಿತ್ತು. ಎಲ್ಲಾ ಕಡೆ ಮೌನ ಆವರಿಸಿತ್ತು. ದೂರದಲ್ಲಿ ಆಗಾಗ ಮನೆಗಳು ಮುರಿದು ಬೀಳುವ ಲಟಲಟ ಸದ್ದು ಮಾತ್ರ ಕೇಳಿಸುತ್ತಿತ್ತು. ಎಲ್ಲರೂ ತಮ್ಮ ತಮ್ಮ ಮನೆಗಳ ಬಗ್ಗೆ ಯೋಚಿಸುತ್ತಿದ್ದರು. ಮನೆಗೆ ಯಾವಾಗ ಹೋಗುತ್ತೇವೋ ಎಂದು ಚಿಂತಿಸುತ್ತಿದ್ದರು. ನಾವು ವಾಸವಾಗಿದ್ದ ಊರಿಗೆ ಹೋಗಲು ನಮಗೆ ಯಾವ ತೊಂದರೆಯೂ ಇರಲಿಲ್ಲ ಆದರೆ ನಾವು ನಮ್ಮ ಮನೆಯ ಕೀಗಳಿರುವ ಬ್ಯಾಗನ್ನು ತೂದೂರಿನಲ್ಲಿಯೇ ಬಿಟ್ಟು ಬಂದಿದ್ದೆವು. ಅಲ್ಲದೆ ಎಲ್ಲರನ್ನೂ ಬಿಟ್ಟು ಹೋಗಲು ಮನಸ್ಸೂ ಬರಲಿಲ್ಲ. ಬುಧವಾರದ ದಿನ ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೋದೆವು. ನೆರೆ ನೋಡಲು ಬಂದವರು ನೆರೆಯಲ್ಲಿಯೇ ಸಿಕ್ಕಿ ಹಾಕಿಕೊಂಡಿದ್ದೆವು.

ನಮ್ಮ ಊರಿನಲ್ಲಿ ಒಂದೊಂದು ಮಳೆಗೆ ಒಂದೊಂದು ವಿಶೇಷತೆ ಇದೆ. ಆರಿದ್ರ ಮಳೆ ಬಂದರೆ ಮುಂದಿನ ಆರೂ ದಿನ ಮಳೆ ಬರುತ್ತದೆ. ಪುನರ್ವಸು ಮತ್ತು ಪುಷ್ಯ ಮಳೆಗಳು ಅಣ್ಣ ಮತ್ತು ತಮ್ಮ. ಅಣ್ಣನಿಗಿಂತ ತಮ್ಮನ ಮಳೆ ಜೋರು. ಅಣ್ಣ ಹುಸಿಯಾದರೂ ತಮ್ಮ ಹುಸಿಯಾಗುವುದಿಲ್ಲ. ಆಶ್ಲೇಷ ಮಳೆ ಆಶ್ಲಾ ಬಶ್ಲಾ (ಜೋರಾಗಿ) ಹೊಡೆಯುತ್ತದೆ. ಮಘೆ ಮಳೆ ಬಂದಷ್ಟೂ ಸಾಲದು, ಮನೆ ಮಗ ಉಂಡಷ್ಟೂ ಸಾಲದು. ಹುಬ್ಬೆ ಮಳೆ ಬಂದಷ್ಟೂ ಒಳ್ಳೆಯದು, ಅಬ್ಬೆ (ಅಮ್ಮ) ಹಾಲು ಕುಡಿದಷ್ಟೂ ಒಳ್ಳೆಯದು. ಒತ್ತೆ ಮಳೆ ಬಂದರೆ ಬೆಳೆಗೆ ಚಿಟ್ಟೆ ಹುಳ ಹಿಡಿಯುತ್ತದೆ ಇತ್ಯಾದಿ. ಈ ನೆರೆ ಬಂದಿದ್ದು ಪುಷ್ಯದ ಮಳೆಯಲ್ಲಿ. ಅಬ್ಬಾ ಆ ನೀರು, ಆ ರಭಸ ಎಲ್ಲಿತ್ತು? ಹೇಗೆ ಬಂತು? ಇಂದಿಗೂ ಹೊಳೆಯ ದಡದಲ್ಲಿ ನಿಂತು ತಣ್ಣಗೆ ಹರಿಯುತ್ತಿರುವ ನದಿಯನ್ನು ಕಂಡಾಗ ಮನಸಿನಲ್ಲೇ ಅಂದುಕೊಳ್ಳುತ್ತೇನೆ 'ಅಬ್ಬಾ ನದಿಯೇ, ನೀನು ಕಾಣುವಷ್ಟು ಶಾಂತಳೂ ಅಲ್ಲ, ಗಂಭೀರಳೂ ಅಲ್ಲ. ನಿನ್ನ ಇನ್ನೊಂದು ಮುಖ ಬೇರೆಯೇ ಇದೆ' ಎಂದು.

ಲೇಖಕರ ಕಿರುಪರಿಚಯ
ಶ್ರೀಮತಿ ಕೆ. ಎಸ್. ನಾಗಲಕ್ಷ್ಮಿ

ತೀರ್ಥಹಳ್ಳಿಯ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರಿಗೆ ತೋಟಗಾರಿಕೆ ಸಂಬಂಧಿತ ಚಟುವಟಿಕೆ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳು.

ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು ಶಾಲೆಯಲ್ಲಿ ಎಲ್ಲರ ಅಚ್ಚುಮೆಚ್ಚಿನ ಶಿಕ್ಷಕರು.

Blog  |  Facebook  |  Twitter

1 ಕಾಮೆಂಟ್‌:

  1. ತೂದೂರು ನನ್ನ ಬಾಲ್ಯದ ನೆನಪಿನ ಒಂದು ಭಾಗ. 1982 ರ ತುಂಗೆಯ ನೆರೆಯ ರುದ್ರ ನೆನಪಿನೊಂದಿಗೆ, ಹಲವು ಮಧುರ ನೆನಪುಗಳು ಇಲ್ಲುಂಟು. ಊರಲ್ಲಿ ಒಳ್ಳೆ ಮಳೆಯಾಗಿದೆ ಎಂಬ ಸುದ್ದಿ ತಿಳಿದೊಡನೆ, ತೀರ್ಥಹಳ್ಳಿ ರಾಮಮಂಟಪ ಎಷ್ಟು ಮುಳುಗಿತು ? ಎಂಬ ಪ್ರಶ್ನೆ ಸಾಮಾನ್ಯ. ಜೊತೆಜೊತೆಗೆ ನೆರೆಯ ಅನುಭವದ ನೆನಪಿನ ಮೆರವಣಿಗೆ ! (ರಾಮ ಮಂಟಪದ ಆಧಾರದ ಮೇಲೆ ಎಷ್ಟು ಊರು ಮುಳುಗಿತು ಎಂದು ಅಂದಾಜಿಸುವುದು ನಮ್ಮೂರಿನವರ ರೂಡಿ). ಬಾಲ್ಯದ ನೆನಪನ್ನು ತಮ್ಮ ಯವ್ವನದ ನೆನಪಿನಿಂದ ಮತ್ತೊಮ್ಮೆ ಕಣ್ಮುಂದೆ ತಂದಿರಿಸಿದ ಲೇಖಕಿಗೆ ಇದೋ ಅಭಿನಂದನೆ ! - ಸುರೇಖಾ ಭೀಮಗುಳಿ, ಬೆಂಗಳೂರು

    ಪ್ರತ್ಯುತ್ತರಅಳಿಸಿ